ಹೀಗೊಂದು ಹರಿಕಥೆ (ಭಾಗ 2)

ಹೀಗೊಂದು ಹರಿಕಥೆ (ಭಾಗ 2)

ಹೀಗೊಂದು ಹರಿಕಥೆ ಭಾಗ - 1 (http://sampada.net/blog/%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B2%B0%E0%B2%BF%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-1/26/04/2012/36511)

" ಹಿಂದಿನ ವಾರ ನಾನು ಹೊಸದಾಗಿ 'ಜಿಮ್' ಸೇರಿದೆ ತಾನೇ? ಅಲ್ಲಿ ನಾನು ಮಾತ್ರ ಹೊಸಬ. ಉಳಿದವರೆಲ್ಲ ಈಗಾಗಲೇ ಆರೆಂಟು ತಿಂಗಳು ಬೆವರು ಹರಿಸಿ, ಚೆನ್ನಾಗಿ ಬೆಳ್ದಿದಾರೆ. ಇಷ್ಟು ದಿನ ನೀವು ನನ್ನ ಹೊಟ್ಟೆ ಮೇಲೆ 'ಕಾಮೆಂಟ್' ಹೊಡೆದು 'ಜಿಮ್' ಸೇರೋ ಹಾಗಿ ಮಾಡಿದ್ರಿ. ಇಗ ಅವರೆಲ್ಲ ಸೇರಿ ಮತ್ತೆ ನನ್ನ ರೆಗಿಸ್ತಾರೆ " ಎಂದುಲಿದ ಕೆಂಪ.

'ಸ್ವಾತಿ' ಹೋಗ್ತಾಳಲ್ಲ ಅದೇ ಜಿಮ್ ತಾನೇ ನೀನೂ ಸೇರಿರೋದು? ಎಂದು ನಾನು ಕೇಳಿದೆ.
ಅವಮಾನದಿಂದ ಕೆಂಪಾದ ತನ್ನ ಮುಖಾರವಿಂದವನ್ನು ,ಹೌದೆಂಬಂತೆ ಅಲ್ಲಾಡಿಸಿದ ಕೆಂಪ.

"ಓಹೋ ಇದ ಸಮಾಚಾರ? ಆಕೆ ಒಮ್ಮೆ ಕಿಸಕ್ ಅಂತ ನಕ್ಕಿದ್ದಕ್ಕೆ  ಇಷ್ಟೊಂದ್ "ಫೀಲ್" ಆಗಾಕ್ ಹತ್ತಿಯಲ್ಲೋ. ನಾವ್ ಎಷ್ಟ್ ಹೇಳಿದರೂ ತಲೆ ಕೆಡಿಸಿಕೊಳ್ಳದೆ ಕುಳ್ತಿದ್ದೆ, ಗುಂಡು ಕಲ್ಲಿನ ಥರ" ಎಂದು ಉರಿವ ಬೆಂಕಿಗೆ ತುಪ್ಪ ಸುರಿದ ಆನಂದು.

"ನೋಡ್ರಪ್ಪ ಹೊಟ್ಟೆ ಎನ್ನುವುದು ಗೌರವದ ಸಂಕೇತ. ದೊಡ್ಡಸ್ತಿಕೆಯ ಸಂಕೇತ. ಅಲ್ಪ ಸ್ವಲ್ಪ ಹೊಟ್ಟೆ ಇದ್ದು , ಬಿಳಿ ಬಟ್ಟೆ ಹಾಕ್ಕೊಂಡು ಓಡಾಡಿದ್ರೆ, ಜನ "ರಾಜಕಾರಣಿ" ಅಂತ ಗುರ್ತಿಸ್ತಾರೆ. ಗೌರವ ಜಾಸ್ತಿ. ಅಲ್ದೆ  ಪೋಲಿಸ್ ಕೆಲಸಕ್ ಏನಾದರೂ ಸೇರ್ಕೊಂಡ್ರೆ ಹೊಟ್ಟೆ ಇಲ್ದಿದ್ದ್ರೆ ಒದ್ದು ಹೊರಗಡೆ ಹಾಕ್ತಾರೆ ಅಂತ ಕಾಣ್ಸುತ್ತೆ. ದೊಡ್ಡ ಹೊಟ್ಟೆ, ಉದ್ದ ಮೀಸೆ ಇರೋ ಪೋಲಿಸ್ ಆದ್ರೆ, ಬಿಟ್ಟಿ ಸೆಲ್ಯೂಟ್ , ಜೊತೆ ಫ್ರೀ ಆಗಿ ಟೀ, ಕಾಫಿ ಎಲ್ಲ ಸಿಗುತ್ತೆ. ಪೋಲಿಸ್ ಆಗಿ ನರಪೇತಲನಥರ ಇದ್ರೆ "ಲಂಚ" ಹೋಗ್ಲಿ  "ಫ್ರೀ ಲಂಚ್" ಕೂಡ ಸಿಗಲ್ಲ ಗೊತ್ತೇನು?. ನೀ ಪೋಲಿಸ್ ಆಗ್ಲಿಕ್ ಲಾಯಕ್ ಇದ್ದಿ ಕೆಂಪಾ ಬಿಡು" ಎಂದು ಅವನ ಬೆಂಗಾವಲಿಗೆ ನಿಂತ ಹರಿ.

"ಅಷ್ಟೂ  ಅಲ್ದೆ ಹೊಟ್ಟೆ ಮಹತ್ವಾನ ನೀ ಏನೂಂತ ತಿಳ್ಡಿದಿ? ಈಗಿನ ಕಾಲ ಬಿಟ್ಟು, ಪುರಾಣ, ರಾಮಾಯಣ , ಮಹಾಭಾರತದ ಕಲ ನೋಡಿದರೂ ಹೊಟ್ಟೆ ಎಷ್ಟು ಮುಖ್ಯ ಪಾತ್ರ ವಹಿಸಿತೂ ಅಂತ ಗೊತ್ತಾಗುತ್ತೆ. ಮಹಭಾರತದಲ್ಲಿ ಬಲಶಾಲಿ ಅಂದ್ರೆ ಯಾರಪ್ಪಾ?  ಭೀಮ ತಾನೇ? ಅವನಿಗೇನು ಕಡಮೆ ಹೊಟ್ಟೆ ಇತ್ತ? ಒಂದೆತ್ತಿನಗಾಡಿ ಪೂರ್ಣ ಆಹಾರ ಒಬ್ಬನೇ ತಿನ್ದವ್ನಲ್ಲವ ಅವನು? ಶಕ್ತಿ ಸಾಮರ್ಥ್ಯದ ಪ್ರತೀಕ ಈ ಹೊಟ್ಟೆ!!"

"ಪುರಾಣ ಎಲ್ಲ ಮರೆತು ನಮ್ಮ ಕಲಿಯುಗಕ್ಕೆ ಬಂದರೂ,ಹೊಟ್ಟೆ ಯಾ ಮಹತ್ವ ಮಾತ್ರ ಕಡಿಮೆ ಆಗಿಲ್ಲ. ನಮ್ಮ "ಸ್ಯಾಂಡಲ್ ವುಡ್" ಹೀರೋಗಳನ್ನ ನೋಡು, ಎಷ್ಟು ದೊಡ್ಡ ಹೊಟ್ಟೆ ಇಟ್ಟಿರ್ತಾರೆ. ಆದರೆ ಒಂದೇ ಏಟಿಗೆ ೪-೪ ಜನರನ್ನ ಹೊಡೆದು ಉರುಳಿಸ್ತಾರೆ. (ರೀಲೋ ರಿಯಲ್ಲೋ ಎನ್ನುವುದು ಮುಖ್ಯ ಅಲ್ಲ!!) ತುಂಬಾ ದೊಡ್ಡ ಅಲ್ಲ ಅಂದ್ರೂ, ಸ್ವಲ್ಪವಾದರೂ ಹೊಟ್ಟೆ ಇರಬೇಕು. ಅದು ಗಂಡಸರ ಜಾತಿಯ ಒಂದು "ಐಡೆಂಟಿಟಿ " ಇದ್ದ ಹಾಗೆ ತಿಳಿತಾ?. "ಮೇಲ್"ಗಳ ಹೊಟ್ಟೆಗಿಂತ "ಫಿಮೆಲ್ "ಗಳ ಹೊಟ್ಟೆ ಇನ್ನೂ ಮೇಲು!!. ಅಮ್ಮ ಒಂಬತ್ತು ತಿಂಗಳು ನಿನ್ನನ್ನ ಆ ಗುಡಾಣದಂತ: ಹೊಟ್ಟೆಯಲ್ಲಿ ಇಟ್ಕೊಂಡು ಜೋಪಾನ ಮಾಡದಿದ್ದರೆ ನೀನು ಭೂಮಿ ಮೇಲೆ  ಇವತ್ತು ಇರ್ತಿರ್ಲಿಲ್ಲ !!. ಅದಕ್ಕೆ ಇರಬೇಕು ದಾಸರಂತ ದಾಸರೇ "ಎಲ್ಲಾರು ಮಾಡುವುದು ಹೊಟ್ಟೆಗಾಗಿ "ಅಂತಾ ಹೇಳಿದ್ದು. ಅದರಪಾಡಿಗೆ ಅಡಿರುತ್ತೆ ಬಿಡು, ಪಾಪ ಹೊಟ್ಟೆ " ಎಂದು ಹರಿ ಕೆಂಪನನ್ನು ಸಮಾಧಾನಪಡಿಸಲು ಯತ್ನಿಸಿದ!!.

"ಅಂದ್ರೆ ಈ ಹೊಟ್ಟೆ ಹೊತ್ಕೊಂಡೆ ಬದ್ಕು ಅಂತೀರೇನು?. ಇಲ್ಲಾ ಅದೆಲ್ಲ ಆಗಲ್ಲ. ಹೊಟ್ಟೆ ಕಡಮೆ ಮಾಡಬೇಕು ಅಂತಾನೆ ರಾತ್ರಿ ಊಟ ಬಿಟ್ಟಿದೀನಿ!! ನಾನ್-ವೆಜ್ ಕೂಡ ತಿಂತಿಲ್ಲ, ೬ ತಿಂಗಳಾಯ್ತು. ಎಷ್ಟ್ ಕಷ್ಟ ಪಡ್ತಿದೀನಿ ಗೊತ್ತ? ಹೊಟ್ಟೆ ಕರ್ಗಿಸ್ಲೆ  ಬೇಕು ಅಂತ ನಿರ್ಧಾರ ಮಾಡಿ ಜಿಮ್ ಸೇರ್ಕೊಂಡಿರೋದು" ಪುಂಖಾನು ಪುಂಖವಾಗಿ ತನ್ನೆಲ್ಲ ಶಕ್ತಿ ಪ್ರಯೋಗಿಸಿ ದುಃಖವನ್ನು ಹೊರಗೆಡವಿದ ಕೆಂಪ.

"ನಾನ್ವೆಜ್ ಬಿಟ್ಟಿದೀನಿ ಅಂದ್ಯಲ್ಲ. ಬೆಳಿಗ್ಗೆ ತಿಂಡಿ ತಿನ್ನೋಣ ಅಂತ ಕರ್ದಾಗ ಬರ್ಲಿಲ್ಲ ನೀನು! ಮೊಟ್ಟೆ ಬೇಯ್ಸಿ ಉಪ್ಪು ಖಾರ ಹಾಕ್ಕೊಂಡು ತಿಂತಿದ್ದೆ!! ಮೊಟ್ಟೆ ಏನು ಗಿಡದಿಂದ ಬರ್ತಿದ್ಯೆನ್ರಪ್ಪ?. ಯಾರದ್ರೂ ನೋಡಿದ್ರ?. ನಮೂರ್ನಲ್ಲೆಲ್ಲ ಕೋಳಿ ಮೊಟ್ಟೆ ಇಡುತ್ತೆ. ಈ ಬೆಂಗಳೂರು "ಐಟಿ-ಬೀಟಿ" ಸಿಟಿ ಅಂತ ಮೊಟ್ಟೆ ಏನು ಮರದಿಂದ ಬರೋಹಾಗೆ ಮಾಡಿದರೇನು ನಮ್ಮ "ಬಿಟಿ" ವಿಜ್ಞಾನಿಗಳು ?. ನೀ ಮೊಟ್ಟೆ ತಿಂದರೆ ನನಗೇನೂ ಹೊಟ್ಟೆ ಕಿಚ್ಚಿಲ್ಲ . ಆದರೂ ಅನುಮಾನ ಶಮನಕ್ಕಾಗಿ ಕೇಳಿದೆ " ನಾನೆಂದೆ.

ನಾ ತಿನ್ನೋ ಮೊಟ್ಟೆ ವೆಜ್ ಕಣ್ರಪ್ಪ. "ಫಾರಂ ಕೋಳಿ " ಮೊಟ್ಟೆಯಲ್ಲಿ ಮರಿ ಆಗಲಿಕ್ಕೆ ಬೇಕಾದ ಗುಣ ಇಲ್ಲವಂತೆ. ಮತ್ತೇನೇನೋ ಕಾರಣ ನೀಡಿ ಅಮೇರಿಕ ವಿಜ್ಞಾನಿಗಳೇ ಮೊಟ್ಟೆ ವೆಜ್ ಅಂತ ತೋರಿಸಿದ್ದಾರೆ ಎಂದ ಕೆಂಪ. ನಮಗೆ ಗೊತ್ತಿರೋ ಹಾಗೆ ಪ್ರಾಣಿಜನ್ಯ ಆಹಾರವನ್ನು "ನಾನ್ ವೆಜ್ " ಅಂತ ಕರಿತೀವಿ ತಾನೆ? ಎಂದು ಕೇಳಿದೆ.

ಪ್ರಾಣಿಯಿಂದ ಬರೋದೆಲ್ಲ ನಾನ್-ವೆಜ್ ಅನ್ನೋ ಹಾಗಿದ್ರೆ ಹಾಲು ಮೊಸರು ಎಲ್ಲ  ನಾನ್-ವೆಜ್ ಆಗಬೇಕಲ್ಲ. ಅದನ್ನ ಯಾಕೆ ವೆಜ್ ಅಂತ ಕರಿತಾರೆ? ಎಲ್ಲಿಂದ ಬಂದ್ರಿ ಸಾರ್ ತಾವು? ಕೆಂಪು ಬಸ್ ಹತ್ಕೊಂಡು, ಬಾ ಅಂದ ತಕ್ಷಣ ಬಂದ್ಬಿಡೋದ? ಸ್ವಲ್ಪ "ಜನರಲ್ ನಾಲೆಜ್ " "ಇಂಪ್ರೂವ್" ಮಾಡ್ಕೋ ಹೋಗು ಎಂಬ ಫ್ರೀ ಸಲಹೆ ತೇಲಿಬಂತು. ಹೊಡೆಯುವವನ ಕೈಲಿ ಕೋಲು ಕೊಟ್ಟು ಹೊಡೆಸಿಕೊ೦ಡ೦ತಾಯ್ತು ನನ್ನ ಪರಿಸ್ಥಿತಿ ಎಂದು ಗೊಣಗುತ್ತ ಸುಮ್ಮನೆ ಕುಳಿತೆ.

ಅಷ್ಟರಲ್ಲೇ ಅಪದ್ಭಾನ್ಧವನಂತೆ ಮಧ್ಯ ಪ್ರವೇಶಿಸಿದ ಸಂತ್ಯಾ , ಏನ್ರಪ್ಪಾ ನಿಮ್ಮ ಕಿತ್ತಾಟ. ಅವಾಗಿಂದ ನೋಡ್ತಿದೀನಿ. ಕೋಳಿ ಅಂತೆ, ಮೊಟ್ಟೆ ಅಂತೆ, ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲೇನು ಎಂದು ನಯವಾಗಿ ಗದರಿದ. ಅನುಮಾನ ಇಟ್ಕೊಂಡ್ ಬದುಕಬಾರದು ಅಂತ ತಿಳಿದವರು ಹೇಳ್ತಾರೆ. ಅದ್ಕೆ "ಜಸ್ಟ್ ಡೌಟ್ ಕ್ಲೀಯರಿಂಗ್ " ಎಂದು ನನ್ನನ್ನು ಸಮರ್ಥಿಸಿಕೊಳ್ಳಲು  ಯತ್ನಿಸಿದೆ.

"ಅನುಮಾನದ ಮನೆ ಹಾಳಾಗ್ಲಿ. ಈ ಕೆಟ್ ಅನುಮಾನ ಹುಟ್ಟಿ ದ್ರಿಂದಲೇ , ಸೀತಾ ಮಾತೆ "ಅಗ್ನಿ ಪರೀಕ್ಷೆ" ನಡೆದದ್ದು. ನೋಡು ತಮ್ಮಾ, ಈ ಜಗತ್ನಾಗೆ ಅದು ಬೇರೆ ಇದು ಬೇರೆ, ಅದು ಒಳ್ಳೇದು, ಇದು ಕೆಟ್ಟದ್ದು  ಅಂತೆಲ್ಲ ವಿಂಗಡಣೆ ಮಾಡಿದವರು ಯಾರು?. ನಾವೇ ತಾನೇ? ಹಾಂಗೆ ಈ ವೆಜ್ ನಾನ್-ವೆಜ್ ಕತೀನು ಐತಿ. ಅದು ವೆಜ್ , ಇದು ನಂ ವೆಜ್ ಅಂತ ವಿಂಗಡಣೆ ಮಾಡ್ಕೊಂದವ್ರು ಯಾರು ? ನಮ್ಮವರೇ ಅಲ್ವಾ?. ಹೀಂಗ ವಿಂಗಡಣೆ ಮಾಡ್ಕೊಂಡ್ ನಾವು ಎಷ್ಟ್ ಶಾಣ್ಯಾ ಅದೀವಿ ಅಂದ್ರ, ಅದೇ ಗುಂಪುಗಳನ್ನ ನಮಗೆ ಬೇಕಾದಾಗ ಬದ್ಲಾಯ್ಸೋ ಅವಕಾಶನೂ ಇಟ್ಕೊಂಡಿದೀವಿ. ಜಗತ್ತಲ್ಲಿ ಸ್ವಲ್ಪ ಓದಿ ಬುದ್ದಿವಂತರು ಅಂತ ಅನಿಸಿಕೊಂಡವರು, ತಮಗೆ ಮಾಡಲಿಕ್ ಕೆಸಲ ಇಲ್ದಿದ್ದಗ್ ಇಂತದ್ದನ್ನೇ ಮಾಡೋದು. ವಾದ ವಿವಾದ ಮಾಡಲಿಕ್ ಒಂದು "ಸಬ್ಜೆಕ್ಟ್ " ಬೇಕಲ್ಲವ ಅವ್ರಿಗೆ?. ಇನ್ನು ಉತ್ತರ ಭಾರತದ ಕಡೆ ಹೋಗಿ, ಗಂಗಾ ತೀರದ ಬ್ರಾಹ್ಮಣರನ್ನ ಕೇಳಿ, ಅವ್ರು ಮೀನನ್ನು ಸಸ್ಯಾಹಾರ ಅಂತಾನೆ ಭಾವಿಸ್ತಾರೆ. ಹೋಟೆಲ್ಗ್ ಹೋಗಿ "ವೆಜ್ "  ಊಟ ಕೊಡಪ್ಪ ಅಂದ್ರೆ ತಟ್ಟೆ ತುದಿಯಲ್ಲಿ ಮೀನು ಗ್ಯಾರಂಟೀ ಅಂತೆ ಗೊತ್ತೇನು?" . ನಮಗೆ ಬೇಕಾದ ಹಾಗೆ ರೂಲ್ಸ್ ಮಾಡ್ಕೊಂಡು, ಅದನ್ನೇ ಶಾಸ್ತ್ರ ಪುರಾಣ ಅಂತ ನಾಟ್ಕ ಮಾಡ್ತೀವಿ. ನೀನೇನು ತಲಿ ಕೆಡ್ಸ್ಕೊಬೇಡ. ಅಲ್ಲೋ ಕೆಂಪಾ, ನಾನ್-ವೆಜ್ ತಿಂದರೆ ಹೊತ್ತಿ ಬರುತ್ತೆ ಅಂತ ಯಾರು ಹೇಳಿದ್ರಪ್ಪ ನಿಂಗೆ?. ತಿಂದ್ಕೊಂಡು ಮೈ ಬಗ್ಸಿ ದುಡಿದರೆ ಹೊತ್ತಿ ಅಲ್ಲ ಏನೂ ಬರಂಗಿಲ್ಲ. ಬಕಾಸುರನಾಂಗ ತಿಂದ್ಕೊಂಡು ಕೆಲಸ ಮಾಡಂಗಿಲ್ಲ ಅಂದ್ರ ಏನ್ ತಿಂದರೂ ಹೊತ್ತಿ ಬೆಳಿತೈತಿ ತಮ್ಮಾ ." ಎಂದು ವೇದಾಂತಿಯಂತೆ ಸುದೀರ್ಘ ಭಾಷಣ ಬಿಗಿದ ಸಂತ್ಯಾ .
 
"ಹೊಟ್ಟೆ ಅಂದರೆ ಏನಂತ ತಿಳಿದಿದ್ದಿಯ. ಅಲ್ನೋಡು ನಮ್ಮ ಕ್ರಿಕೆಟ್ ಟೀಮು. ಹೊಟ್ಟೆ ಇಲ್ದಿರೋದು ಯಾರಿದ್ದಾರೆ ಹೇಳು?. ಎಲ್ಲರ ಮೂಗಿಗೂ ಒಂದೊಂದು ಚಿಕ್ಕ ಸೊಂಡಿಲ ಹಚ್ಚಿ ಬಿಟ್ಟರೆ ಮುಗಿತು, ಚೌತಿ ಹಬ್ಬದ ಗಣೇಶನಂತೆ ಕಾಣಿಸ್ತಾರೆ ಎಲ್ಲರು. ಗ್ರೌನ್ದಲ್ಲಿ ಬಾಲ್ ಹಿಡಿರೊ ಓಡ್ರೋ ಅಂದ್ರೆ ಬೆಳಿಗ್ಗೆ ಎದ್ದು ' ಜಾಗಿಂಗ್ '  ಹೊಗೊರ್ತರ ಓಡ್ತಾರೆ. ಅಷ್ಟಕ್ಕೇ ಅವ್ರಿಗೆ ಕೋತಿ ಕೋತಿ ಪಗಾರ್ ಬೇರೆ ಸಿಗತ್ತೆ. ಇರಲಿಬಿಡು ಹೊಟ್ಟೆ , ' ಐಪಿಎಲ್ ' ಟೀಮಿಗಾದ್ರೂ ಪ್ರಯತ್ನ ಮಾಡ್ತಿಯಂತೆ" ಎಂದು ಅಶೋಕ ಪಟಪಟನೆ ಸಾಸಿವೆಯಂತೆ ಸಿಡಿದ.

ಅಷ್ಟರಲ್ಲಾಗಲೇ ಆಷ್ಟ್ರೇಲಿಯಾ ತಂಡದ 'ಡೇವಿಡ್ ವಾರ್ನರ್ ' ಒಂದು ಭರ್ಜರಿಯಾದ ಬೌಂಡರಿ ಹೊಡೆದಿದ್ದ. ಬಾಲ್ ತನ್ನ ಪಕ್ಕದಲ್ಲೇ ಹಾಡು ಹೋದರೂ ಅದನ್ನು ಹಿಡಿಯಲಾಗದೆ, ಕ್ಷೇತ್ರರಕ್ಷಕನೊಬ್ಬ ತಿನುಕಾಡಿದ್ದ(ಹೆಸರು ಬೇಡ !!).

"ಥೂ ನನ್ಮಗನ ಹೊಟ್ಟೆ ನೋಡು. ಎಮ್ಮೆಥರ ಬೆಳೆದಿದ್ದಾನೆ. ಸ್ವಲ್ಪ ಬಗ್ಗಿ ಬಾಲ್ ಕೂಡ ಹಿಡಿತಿಲ್ಲ" ಎಂದು ಕೆಂಪ ತನ್ನ ಹೊಟ್ಟೆಯ ಗಾತ್ರದ ಪರಿಯನ್ನು ಮರೆತು ಉಗಿದ. ಅವನ ಹೊಟ್ಟೆಯನ್ನು ನೋಡಿ (ಮುಖವನ್ನು ನೋಡಲಾರದೆ ?) ನಗು ತಡೆಯಲಾರದೆ, ನಾವು ಎದ್ದು ಒಳನಡೆದವು.       

 

Picture link: ((http://www.google.co.in/imgres?q=stomach&start=155&um=1&hl=kn&safe=active&biw=1024&bih=545&tbm=isch&tbnid=UUOM2uQReOJAaM:&imgrefurl=http://www.steadyhealth.com/articles/Gastric__Stomach__Cancer_Risks_Factors__Symptoms_and_Treatment_a928.html&docid=48DWHsoe_HwCvM&imgurl=http://www.steadyhealth.com/109076/Image/fat_man_stomach.jpg&w=424&h=283&ei=_BKaT5WnBobkrAei-9m4Dg&zoom=1&iact=hc&vpx=710&vpy=7&dur=5298&hovh=183&hovw=275&tx=126&ty=119&sig=101912392513211980170&page=13&tbnh=127&tbnw=190&ndsp=15&ved=1t:429,r:9,s:155,i:180))

 

Rating
No votes yet

Comments