ನಾನೂ ಮತ್ತು ಗೋಡೆ ಬರಹ !

ನಾನೂ ಮತ್ತು ಗೋಡೆ ಬರಹ !

 

ಇಲ್ಲ ಕಣ್ರೀ ! ನಾನು ಯಾವ ಗೋಡೇ ಮೇಲೂ ಬರೆಯಲು ಹೋಗಿಲ್ಲ. ಇದು Facebook ಮತ್ತು ನನ್ನ ಒಡನಾಟದ ಬಗೆಗಿನ ಮಾತುಗಳು ಅಷ್ಟೇ.

ಬಹಳ ದಿನದಿಂದ ಅಂದುಕೊಂಡಿದ್ದೆ, ನನ್ನ ತಲೆಹರಟೆ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೂ ಅಂತ ... ಹಲವು ತುಣುಕುಗಳು ಇಲ್ಲಿವೆ

------------

’ಬೇಜಾರಾಗೋಗಿದೆ ಕಣ್ಲಾ.. ಅದಕ್ಕೆ ದೇವರ ಹತ್ತಿರ ಬೇಡಿಕೊಂಡೆ... ಪಾಪಿಗಳೆಲ್ಲ ಢಮ್ ಎಂದು ಹೋಗಲಿ’ ಅಂತ ನನ್ನ ಸ್ನೇಹಿತನ ಮುಂದೆ ಹೇಳಿಕೊಂಡೆ... ಅವನೆಂದ ’ಆಮೇಲೆ ಜಗತ್ತು ಹೇಗಿರುತ್ತೆ ಅಂತ ನೋಡೋದಕ್ಕೆ ನೀನೇ ಇರಲ್ವಲ್ಲೋ’ ?

---

ಜೀವನದಲ್ಲಿ ಎಷ್ಟೋ ಬಾರಿ ನಮಗಾಗಿ ಅಲ್ಲದಿದ್ದರೂ ಬೇರೆಯವರಿಗಾಗಿ ಜೀವಿಸಬೇಕಾಗುತ್ತದೆ. ಮನೆಯಿಂದ ಹೊರಗೆ ಹೋದಾಗ ಲಕ್ಷಣವಾಗಿ ಡ್ರಸ್ ಮಾಡಿಕೊಂಡು ಹೊರಗೆ ಕಾಲಿಡಿ. ನಿಮಗೆ ಬೇಡದೇ ಇದ್ದರೂ ಪಾಪ ಪಕ್ಕದ ಮನೆ ಹುಡುಗಿಗಾಗಿ !! ಹುಡುಗಿಯ ವಾಲ್ಯೂ ಕಡಿಮೆ ಮಾಡದಿರಿ !!

---

"ಹೋದ ವಾರ ಮದುವೆ ಮನೆಯಲ್ಲಿ ಮಾಡಿದ ಊಟದ ರುಚಿ, ಇನ್ನೂ ಬಾಯಲ್ಲಿ ಹಾಗೇ ನಿಂತಿದೆ ನೋಡೋ ಮಾರಾಯ" "ಅಲ್ವೋ! ಅವತ್ತಿಂದ ಇನ್ನೂ ಹಲ್ಲು ಉಜ್ಜಿಲ್ವಾ? ಬಾಯಿ ತೊಳೆದಿಲ್ವಾ?"

---

"ರ್ರೀ ರಮ್ಯಾ, ನೀವು-ರಮಣ ತುಂಬಾ ರೊಮ್ಯಾಂಟಿಕ್ ಪೇರ್ ಕಣ್ರೀ. ಯಾವಾಗ್ಲೂ ಅವರ ಕೈ ಹಿಡಿದುಕೊಂಡೇ ವಾಕಿಂಗ್ ಹೋಗ್ತೀರಾ.." ರಮ್ಯ ಹೇಳ್ತಾರೆ "ಹಾಗೆಲ್ಲ ಏನೂ ಇಲ್ರೀ, ಕೈ ಹಿಡಿದುಕೊಳ್ದೇ ಇದ್ರೆ ಬೇರೆ ಯಾರ ಹಿಂದೇನಾದ್ರೂ ಹೋಗಿಬಿಡ್ತಾರೆ ಅದಕ್ಕೇ !"

---

"ಧರ್ಮೋ ರಕ್ಷತಿ ರಕ್ಷಿತ: " ಎಂದರೇನು?  ಧರ್ಮ ಪತ್ನಿಯನ್ನು ರಕ್ಷಿಸಿದಲ್ಲಿ (ನೋಡಿಕೊಂಡಲ್ಲಿ) ಅವಳೂ ನಿಮ್ಮನ್ನು ರಕ್ಷಿಸುತ್ತಾಳೆ !!

---

’ಮರಣೋತ್ತರ ಪ್ರಶಸ್ತಿ’ ಅಂದ್ರೇನು ಗುರುಗಳೇ? "ದೇಶಕ್ಕಾಗಿ ಹೋರಾಡಿ ಸತ್ತವರಿಗೆ ಕೊಡೋ ಪ್ರಶಸ್ತಿ, ಅಂದುಕೋ". "ಮತ್ತೆ, ದಿನ ನಿತ್ಯ ಸೀಟಿಗಾಗಿ ಹೋರಾಡಿ ಸಾಯ್ತಾನೇ ಇರೋವ್ರಿಗೆ ಯಾವ ಪ್ರಶಸ್ತಿ, ಗುರುಗಳೇ?"

---

"ಗುರುಗಳೇ, ಈ ಪತ್ರಕರ್ತರು ಕೇಳಿದ್ದನ್ನೇ ಮತ್ತೆ ಮತ್ತೆ ಒತ್ತಿ ಒತ್ತಿ ಕೇಳ್ತಾರಲ್ಲ, ಯಾಕೆ?" "ಒಂದೇ ಪ್ರಶ್ನೆ ಹತ್ತು ಸಾರಿ ಕೇಳಿದರೆ ಬೇರೆ ಬೇರೆ ಉತ್ತರ ಬರುತ್ತೇನೋ ಅಂತ. ಏನಾದ್ರೂ ಆಗ್ಲಿ, ಅವರು ಒತ್ತಿ ಒತ್ತಿ ಕೇಳೋದಕ್ಕೇ ಅವರನ್ನು Press ಅನ್ನೋದು"

---

ದಿನ ನಿತ್ಯ ಆ ಹುಡುಗಿಗಾಗಿ ಹೋಟೆಲ್, ಮಾಲ್ ಸುತ್ತುವಾಗ ಕ್ರೆಡಿಟ್ ಕಾರ್ಡ್ ಬಳಸಿದ ಅವನಿಗೆ Cash Back ಬಂತೇ ವಿನಹ, ಇವನ ಗೆಳೆಯನ ಹಿಂದೆ ಹೋದ ಆ ಹುಡುಗಿ ವಾಪಸ್ ಬರಲಿಲ್ಲ !!

---

ಈಗಿನ ಕಾಲ ಬಿಡಿ, ಯಾರು ಏನು ಬೇಕಾದರೂ ಆಗಬಹುದು! ನಮ್ ಟಿವಿ ನಿರೂಪಕ ಒಬ್ಬ ಪೌರೋಹಿತ್ಯ ವೃತ್ತಿ ಹಿಡಿದ. ಮದುವೆ ಮಾಡಿಸಲು ಹೋದ. ತಾಳಿ ಕಟ್ಟುವ ಶುಭವೇಳೆ "ಮಾಂಗಲ್ಯಂ ತಂತುನಾನೇನ ..." ಮಂತ್ರ ಮುಗಿಸಿ "ಈಗ ವರ ತಾಳಿ ಕಟ್ಟುವ ಮುನ್ನ ಒಂದು ಸಣ್ಣ ಬ್ರೇಕ್" ಅಂದ !!! 

---

"ಯಾಕೋ ಇತ್ತೀಚೆಗೆ ನಾರದ ಮಹಾಮುನಿಗಳು ಭೂಮಿಗೆ ಬರ್ತಾನೇ ಇಲ್ವಂತಲ್ಲಾ ಗುರುಗಳೇ?" "ಯಾಕಪ್ಪಾ ಬರ್ತಾರೆ ಸಿದ್ದಾ? ಅವರಿಗೆ ಬೇಕಿರೋ ವಿಷಯ ವಿದ್ಯಮಾನಗಳೆಲ್ಲ cloud computing ಅಂತ ಮೋಡಗಳಲ್ಲೇ ಸಿಗಬೇಕಾದ್ರೆ, ಭೂಮಿಗೆ ಬಂದು ಯಾಕೆ ಟೈಮ್ ವೇಸ್ಟ್ ಮಾಡ್ತಾರೆ?"

---

ಬಾರಿ ಬಾರಿಗೂ ಬರುವ ಬದುಕಿನ ಬವಣೆಯ ಬದಿಗಿಕ್ಕಲು ಬಾರ್ ಬಾರಿನ ಬಾಗಿಲ ಬಡಿಯಲೇ ಬೇಕೆ?

 

ಮೊದಲ ಬಾರಿಗೆ ಬಾರ್ ನೋಡಿದವರು "ದೇಖಾ ಹೇ ಪೆಹಲೀ ಬಾರ್" ಅಂದ್ರು ... ಬಾರ್ ಬಾಗಿಲು ಮುಚ್ಚಿದಾಗ ಹೊರಬಂದವರು "Barಎ ಬಾರೆ ಚೆಂದದ ಚೆಲುವಿನ ತಾರೆ" ಅಂದ್ರು

---

ನಮ್ ಜನ ಹೀಗೆ ಮಾಡಬಾರದಿತ್ತು ನೋಡಿ ... ನೆನ್ನೆ ನಮ್ಮ ಮಾನ್ಯ ಸಚಿವರು ಒಂದು ಭಾಷಣಕ್ಕೆ ಹೋಗಿದ್ರಂತೆ. ಅಲ್ಲಿನ ಕಾರ್ಯಕರ್ತರು ಯಥಾಪ್ರಕಾರ "ನಮ್ಮೆಲ್ಲರ ಪ್ರಿಯ ಸಚಿವರು ನಮ್ಮೊಂದಿಗೆ ಇಲ್ಲಿರುವುದು ಬಹಳ ಸಂತಸದ ವಿಚಾರ. ಸದನದಲ್ಲಿ ಬಿಡುವಿಲ್ಲದ ತಮ್ಮ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ..." ಇಷ್ಟು ಹೇಳಿದ್ದೇ ತಡ, ಜನ ನಗೋದೇನ್ರೀ? ಹೀಗೆ ಮಾಡಬಹುದಾ?

---

ಏನಾಗಿದೆ ಈಗಿನ ಐ.ಟಿ ಗಂಡ-ಹೆಂಡಿರಿಗೆ? ಒಬ್ಬರು ಸದಾ ’ಕಾಲ್’ನಲ್ಲಿದ್ದರೆ, ಇನ್ನೊಬ್ಬರಿಗೆ ’ಕೈ’ ಬಿಡುವಿಲ್ಲದ ಕೆಲಸ. ’ತಲೆ’ಯಲ್ಲಿ career ಬಗ್ಗೆ ಯೋಚನೆ ಬಿಟ್ಟರೆ ಮತ್ತೊಂದಿಲ್ಲ. ’ಹೃದಯ’ಗಳೇ ಮಾತನಾಡದೆ, ಚಿಕ್ಕ-ಪುಟ್ಟ ಸಮಸ್ಯೆಗೂ ’ಬುದ್ದಿ’ ಕೆಟ್ಟವರಂತೆ ಆಡುತ್ತ, ಸಲಹೆಗೆ ’ಕಿವಿ’ಗೊಡಗೆ ವಿಚ್ಚೇದನ ಕೋರಿ, ಒಬ್ಬರಿಗೊಬ್ಬರು ’ಬೆನ್ನು’ ತೋರುತ್ತಾರೆ ....

---

ಔಟಾಗಿಲ್ಲ ಅಂತ ಇಬ್ಬರು umpireಗಳ ಜೊತೆ ಸಾಧಿಸಬಹುದು ಆದ್ರೆ ಮೇಲೆ ಆ Third umpire ಕಣ್ಣಿಂದ ತಪ್ಪಿಸಿಕೊಳ್ಳೋಕ್ಕೆ ಆಗಲ್ಲ ಕಣ್ಲಾ ಸಿದ್ದಾ ... ಹಾಗೇ ಈ ಲೋಕದಲ್ಲಿ ಮಾಡಿರೋ ತಪ್ಪಿನಿಂದ ಎರಡು ಮನೆಗಳಲ್ಲಿ ತಪ್ಪಿಸಿಕೊಳ್ಳಬಹುದು ಆದ್ರೆ ಮೇಲಿರೊ ಮುಕ್ಕಣ್ಣ ಕಣ್ಣಿಂದ ತಪ್ಪಿಸಿಕೊಳ್ಳೋಕ್ಕೆ ಆಗಲ್ಲ ನೋಡು !

---

ಪ್ರಿಯಾ, ಈ ವ್ಯಾಲೆಂಟೈನ್ ದಿನದಿಂದಾದರೂ ವಾಲಿಯಂತೆ ಇನ್ನೊಬ್ಬರ ವ್ಯಾಲೆಂಟೈನ್’ಅನ್ನು ಕದಿಯದೆ, ನಾನಿದ್ದೂ ಇನ್ನೊಬ್ಬರ ಮೇಲೆ ವಾಲದಂತೆ, wall’ನಂತೆ ಗಟ್ಟಿಯಾಗಿ ನನ್ನೊಂದಿಗಿರು ಎಂದಳಾ ಪ್ರೇಯಸಿ :-)

 

ನಿಮಗೆ ಹಿಡಿಸಲಿಲ್ಲ ಅಂದ್ರೆ ಹೇಳೀಬಿಡಿ ... ವದನಪುಸ್ತದೋಳ್ ಎನ್ನ ಅನಿಸಿಕೆಯನ್ನು ಒಂದು ’ಅಳುಮೋರೆ’ ಹಾಕಿ ಹಂಚಿಕೊಳ್ಳುತ್ತೇನೆ. ಅದಕ್ಕೆ ಯಾರಾದರೂ ’ಲೈಕ್’ ಎಂದರೆ, "ನಿನ್ನ ದು:ಖವೇ ಎನಗೆ ಆನಂದ" ಎನ್ನುತ್ತಿದ್ದಾರೇನೋ ಅಂದುಕೊಳ್ಳುತ್ತೇನೆ !!

 

 

 

 

Comments