ಬಸವಣ್ಣನವರ ಬಗ್ಗೆ ಒಂದೆರಡು ಮಾತು

Submitted by makara on Sat, 04/28/2012 - 14:28

      ವಸಂತ್ ಅವರು ಮಹಾತ್ಮ ಬಸವೇಶ್ವರರ ಕುರಿತಾಗಿ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಪಾರ್ಥಸಾರಥಿಗಳು ಬಸವೇಶ್ವರರ ಕುರಿತಾಗಿ ಅವರು ಈ ಮೊದಲೇ ಬರೆದ ಲೇಖನದ ಕೊಂಡಿಯನ್ನು ಕೊಟ್ಟಿದ್ದಾರೆ. ಅದನ್ನು ಹಿಡಿದು ಹೊರಟವನಿಗೆ ಬಸವೇಶ್ವರರ ಬಗ್ಗೆ ಅನಾವಶ್ಯಕವಾಗಿ ಚರ್ಚೆಯನ್ನು ಮಾಡಿ ತನ್ಮೂಲಕ ಅವರ ಬೋಧನೆಯ ತಿರುಳನ್ನು ಗ್ರಹಿಸುವ ಪ್ರಯತ್ನ ಮಾಡದೇ ಕೇವಲ ಅವರು ಸಮಾಜ ಸುಧಾರಕರೇ ಅಲ್ಲವೇ ಅಥವಾ ಆತ್ಮಜ್ಞಾನಿಗಳೆ ಇತ್ಯಾದಿಗಳ ಬಗ್ಗೆಯೇ ಹೆಚ್ಚಿನ ಚರ್ಚೆ ಸಾಗಿರುವುದು ನೋಡಿ ಖೇದವೆನಿಸಿತು. ಆದರೆ ಬಸವೇಶ್ವರರ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ತಿಳಿಯಹೇಳುವ ಕೆಳಗಿನ ಪ್ರಸಂಗವನ್ನು ಕೊಡುವುದು ಉಚಿತವೆನಿಸಿತು. ಹಾಗಾಗಿ ಅದನ್ನು ಇಲ್ಲಿ ಪ್ರಸ್ತಾವಿಸಿದ್ದೇನೆ.

    ಬಿಜ್ಜಳನ ರಾಜ್ಯದಲ್ಲಿ ಒಮ್ಮೆ ಬರಗಾಲವೇರ್ಪಡುತ್ತದೆ. ಅದರ ನಿವಾರಣೋಪಾಯವನ್ನು ಚರ್ಚಿಸಲು ಬಿಜ್ಜಳನ ಆಸ್ಥಾನದಲ್ಲಿ ಒಡ್ಡೋಲಗ ನಡೆಯುತ್ತಿರುತ್ತದೆ. ಆಗ ಅರಮನೆಯ ಛಾವಣಿಯಿಂದ ಒಂದು ತಾಳೆಗರಿಯ ಓಲೆಯೊಂದು ಸಭಾಸದರ ಮುಂದೆ ಬಂದು ಬೀಳುತ್ತದೆ. ಅದನ್ನು ಕೈಗೆತ್ತಿಕೊಂಡು ಸಭಾಸದನೊಬ್ಬ ಬಿಜ್ಜಳನಿಗೆ ಕೊಟ್ಟಾಗ ಅದರಲ್ಲಿರುವ ಮಾಹಿತಿಯನ್ನು  ಅರ್ಥಮಾಡಿಕೊಳ್ಳಲಾಗದ ರಾಜನು ತನ್ನ ಆಸ್ಥಾನದಲ್ಲಿರುವ ಪಂಡಿತರಿಗೆ ಅದನ್ನು ಓದಿ ಅರ್ಥವನ್ನು ತಿಳಿಸುವಂತೆ ಕೇಳುತ್ತಾನೆ. ಆದರೆ ಅವನ ಆಸ್ಥಾನದಲ್ಲಿರುವ ಪಂಡಿತರು ಅದನ್ನು ಓದಲಾಗದೆ ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಆಗ ರಾಜನು ಬಸವೇಶ್ವರರ ಕಡೆ ನೋಡುತ್ತಾನೆ. ಬಸವಣ್ಣನವರು ಆ ತಾಳೆಗರಿಯನ್ನು ನೋಡಿ, ಇದು ನಾನು ಗುರುಕುಲದಲ್ಲಿದ್ದಾಗ ಕಲಿತ ಮೋಡಿ ಅಕ್ಷರದಲ್ಲಿದೆ ಇದನ್ನು ನಾನು ಸುಲಭವಾಗಿ ಓದಬಲ್ಲೆ ಎಂದು ಹೇಳುತ್ತಾರೆ. ಮೊದಲು ಅದನ್ನು ಓದಿದಾಗ ಅಲ್ಲಿರುವ ಬಿಜ್ಜಳನ ಆಸ್ಥಾನ ಪಂಡಿತರಾರಿಗೂ ಅದರ ಅರ್ಥ ವೇದ್ಯವಾಗುವುದಿಲ್ಲ. ರಾಜನಾದ ಬಿಜ್ಜಳನ್ನು ಅದರ ಅರ್ಥವನ್ನು ಬಿಡಿಸಿ ಹೇಳುವಂತೆ ಪುನಃ ಬಸವಣ್ಣನವರಿಗೆ ತಿಳಿಸುತ್ತಾರೆ. ಆಗ ಬಸವಣ್ಣನವರು ಆ ತಾಳೆಗರಿಯ ಒಕ್ಕಣೆಯ ಪ್ರಕಾರ ಅರಸನ ಸಿಂಹಾಸನದ ಕೆಳಗೆ ಅಪಾರ ನಿಧಿಯೆಂದು ತಿಳಿಸುತ್ತಾರೆ, ಮತ್ತು ಅದರ ಪ್ರಕಾರ ಬಿಜ್ಜಳ ರಾಜನ ಸಿಂಹಾಸನದ ಕೆಳಗೆ ಅಗೆಸಿ ನೋಡಿದಾಗ ಅದರಲ್ಲಿ ಅಪಾರವಾದ ನಿಧಿಯಿರುವುದು ಕಂಡುಬರುತ್ತದೆ. ಹೀಗೆ ಬಸವೇಶ್ವರರು ಕಗ್ಗಂಟಾಗಿದ್ದ ಓಲೆಯ ಒಕ್ಕಣೆಯನ್ನು ಬಿಡಿಸಿ ಹೇಳಿ ಅದರಿಂದ ದೊರೆತ ನಿಧಿಯಿಂದ ಬಿಜ್ಜಳನ ರಾಜ್ಯದಲ್ಲಿ ನೆಲೆದೋರಿದ್ದ ಬರವನ್ನು ನೀಗಿಸುತ್ತಾರೆ.

    ಇದು ಮೇಲ್ನೋಟಕ್ಕೆ ಒಂದು ಸಾಧಾರಣ ಘಟನೆಯೆಂದು ತೋರಿದರೂ ಕೂಡ ಇದರ ಅಂತರಾರ್ಥ ಬೇರೆಯೇ ಇದೆ ಎನಿಸುತ್ತದೆ. ಅದನ್ನು ಈ ರೀತಿಯಾಗಿ ಅರ್ಥೈಸಬಹುದು. ಅದೇನೆಂದರೆ ಬಿಜ್ಜಳನ ರಾಜ್ಯದಲ್ಲಿ ಆಧ್ಯಾತ್ಮಿಕ ಬರಗಾಲ ಬಿದ್ದಿರುತ್ತದೆ. ಮತ್ತು ಅದನ್ನು ನೀಗಿಸಬೇಕಾದ ಆಧ್ಯಾತ್ಮಿಕ ನಿಧಿಯು ರಾಜರ ಸಿಂಹಾಸನದ ಕೆಳಗೆ ಹೂತುಹೋಗಿರುತ್ತದೆ. ಮತ್ತು ಆ ನಿಧಿಯ ರಹಸ್ಯವು ಸರಿಯಾಗಿ ಪಂಡಿತರಿಗೇ ಅರ್ಥವಾಗದ ಭಾಷೆಯಲ್ಲಿ ಅಂದರೆ ಆಧ್ಯಾತ್ಮದ ವಿಚಾರಗಳು ಬಹಳಷ್ಟು ಜನರು ಅರಿಯದ ಸಂಸ್ಕೃತದಲ್ಲಿದ್ದವು; ಒಂದು ವೇಳೆ ಅದನ್ನು ಓದಿದರೂ ಅದರ ಸರಿಯಾದ ಅರ್ಥವನ್ನು ಎಲ್ಲರೂ ತಿಳಿಯಲಾಗುತ್ತಿರಲಿಲ್ಲ. ಅರಸೊತ್ತಿಗೆಯ ಸಿಂಹಾಸನದ ಕೆಳಗೆ ಆ ನಿಧಿ ಹೂತುಹೋಗಿತ್ತು ಎಂದರೆ ಅವರು ಪಾಲಿಸುತ್ತಿದ್ದ ವ್ಯವಸ್ಥೆಯಲ್ಲಿ ನಿಜವಾದ ಆಧ್ಯಾತ್ಮಿಕ ವಿಚಾರಗಳು ಹೊರಗೆ ಹೂತು ಹೋಗಿ ನಮಗೆ ಅವಶ್ಯವಿದ್ದ ಆಧ್ಯಾತ್ಮಿಕದ ಆಪದ್ಧನವು ಸಿಗದಂತೆ ನಿಗೂಢವಾಗಿತ್ತು ಎನ್ನಬಹುದು. ಇಲ್ಲಿ ತಾಳೆಗರಿಯು ವೇದವನ್ನು ಸೂಚಿಸಿದರೆ ಮೋಡಿ ಅಕ್ಷರವು ಸಂಸ್ಕೃತವನ್ನು ಸೂಚಿಸುತ್ತದೆ. ಬಸವೇಶ್ವರರು ಆಡಾಳಿತರೂಢ ವ್ಯವಸ್ಥೆಯ ಕೆಳಗೆ ಸುಪ್ತವಾಗಿದ್ದ ವೇದಗಳ ಅಮೂಲ್ಯ ನಿಧಿ ಅಥವಾ ಆಧ್ಯಾತ್ಮಿಕ ಸಂಪತ್ತಿನ ರಹಸ್ಯವನ್ನು ಬಿಡಿಸಿ ಹೇಳಿ ಅದು ಜನ ಸಾಮಾನ್ಯರಿಗೆ ತಲುಪುವಂತೆ ಮಾಡಿದರೆಂದು ಹೇಳಬಹುದು.

    (ಇದರ ಬಗ್ಗೆ ಹೆಚ್ಚಿನ ವಿವರಣೆಯನ್ನು ಹಿರಿಯರಾದ ಕವಿ ನಾಗರಾಜರು ಇಲ್ಲವೇ ಪಾರ್ಥಸಾರಥಿಗಳು ಕೊಡಬಹುದೆಂದು ಆಶಿಸುತ್ತೇನೆ. ನನ್ನ ಬರವಣಿಗೆ ಈ ವಿಷಯವನ್ನು ಪ್ರಸ್ತುತಪಡಿಸುವಲ್ಲಿ ಬಾಲಿಶವಾಗಿದೆ; ಆದ್ದರಿಂದ ಬಲ್ಲವರು ಇದರ ಸಾರವನ್ನಷ್ಟೇ ಗ್ರಹಿಸಿ ಅದನ್ನು ಬರೆದ ಶೈಲಿಯನ್ನಲ್ಲ)

    ಅಲ್ಲಮ ಪ್ರಭುವಿನ ಅಧ್ಯಕ್ಷತೆಯಲ್ಲಿ ರೂಪುಗೊಂಡ ಅನುಭವ ಮಂಟಪದ ಮೂಲಕ ಬಸವಣ್ಣನವರು ಎಲ್ಲಾ ಜಾತಿಗಳಲ್ಲಿದ್ದ ರತ್ನಗಳನ್ನು ಹೆಕ್ಕಿ ಎಲ್ಲಾ ಕುಲಗಳನ್ನು ಬ್ರಾಹ್ಮಣತ್ವಕ್ಕೆ ಏರಿಸಲು ಪ್ರಯತ್ನಿಸಿದರು. ಪ್ರತಿಯೊಂದು ಕುಲದಲ್ಲಿಯೂ ಉನ್ನತವಾದ ವ್ಯಕ್ತಿಗಳಿರುತ್ತಾರೆ ಎಂದು ತೋರಿಸಿಕೊಟ್ಟರು. ಇದಕ್ಕೆ ಉದಾಹರಣೆಯಾಗಿ ಕ್ಷತ್ರಿಯಳಾಗಿದ್ದ ಅಕ್ಕ ಮಹಾದೇವಿ, ಡೋಹರ ಕಕ್ಕಯ್ಯ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬ್ರಾಹ್ಮಣರ ಮಧುವರಸ, ಜೇಡರ ದಾಸಿಮಯ್ಯ ಇವರನ್ನು ಹೆಸರಿಸಬಹುದು.  Dignity of labour ಅನ್ನು ಎತ್ತಿಹಿಡಿದು ಅವರು "ಕಾಯಕವೇ ಕೈಲಾಸ"ವೆಂದೂ ಮತ್ತು ಶರಣರಿಗೆ ಯಾವ ಕುಲವೂ ಇಲ್ಲವೆಂದು ಸಾರಿದ್ದು. ಮತ್ತು ಆಗ ಆಚರಣೆಯಲ್ಲಿದ್ದ ಅನೇಕ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದವರು ಬಸವಣ್ಣನವರು. ಅದಕ್ಕಾಗಿ ನಮ್ಮವರು ಬೆಸಗೊಂಡರೆ ಅದೇ ಶುಭ ಮುಹೂರ್ತವೆನ್ನಿರಯ್ಯ, ಎಮ್ಮವರು ಒಂದುಗೂಡಿದರೆ ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯ ಎಂದರು. (ನಾನು ವೈಯ್ಯಕ್ತಿಕವಾಗಿ ಜ್ಯೋತಿಶ್ಯವನ್ನು ನಂಬಿದರೂ ಕೂಡ ಪ್ರತಿಯೊಂದಕ್ಕೂ ಅದನ್ನೇ ನಂಬಿಕೊಂಡು ಕೂರುವವನಲ್ಲ; ಈ ದೃಷ್ಟಿಯಿಂದ ಇಲ್ಲಿ ಬಸವಣ್ಣನವರು ಜ್ಯೋತಿಷ್ಯದ ಬಗ್ಗೆ ಹೇಳಿದ್ದನ್ನು ಒಪ್ಪುತ್ತೇನೆ. ಏಕೆಂದರೆ ಜ್ಯೋತಿಷ್ಯ ವಿಜ್ಞಾನಕ್ಕೂ ಎಲ್ಲಾ ವಿಜ್ಞಾನಗಳಿಗಿರುವಂತೆ ಇತಿ-ಮಿತಿಗಳಿರುತ್ತವೆ. ಅದನ್ನು ಇಲ್ಲಿ ಚರ್ಚಿಸಲು ಬಯಸುವುದಿಲ್ಲ ಏಕೆಂದರೆ ಅದು ವಿಷಯವನ್ನು ಮುಖ್ಯವಾಹಿನಿಯಿಂದ ಬೇರೆಡೆಗೆ ಸೆಳೆಯುವ ಅಪಾಯವಿರುವುದರಿಂದ.)  ಸಮಾಜ ಸುಧಾರಣೆಯ ಅಂಗವಾಗಿ ಅವರು ಎಲ್ಲಾ ಜಾತಿಯ ಜನಗಳನ್ನೂ ಛೇಡಿಸಿದ್ದಾರೆ ಆದರೂ ಅವರು ಮಾನವರೆಲ್ಲಾ ಒಂದೇ ಎಂದು ಬಿಂಬಿಸಿದವರು. ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ವೇದವನೋದಿ ಹಾರವನಾದ ಎನ್ನುವ ಅವರ ವಚನ ಇದಕ್ಕೆ ಸಾಕ್ಷಿ. ಅವರು ವೇದಗಳನ್ನು ಹಳಿಯಲಿಲ್ಲ ಅದರ ಬಗ್ಗೆ ಇದ್ದ ತಪ್ಪು ತಿಳುವಳಿಕೆಗಳನ್ನು ಮತ್ತು ಅದರ ನಿಜವಾದ ತತ್ವಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ಬರೆಯುವ ಮೂಲಕ ಬೆಳಕಿಗೆ ತಂದುದಲ್ಲದೆ ಆಚರಣೆಗೂ ತಂದರು. ಯೋಗ ಶಾಸ್ತ್ರದಲ್ಲಿ ಯಮ, ನಿಯಮ, ಆಸನ, ಹೀಗೆ ಎಂಟು ಮೆಟ್ಟಿಲುಗಳಿಂದ ಕೂಡಿದ ಶಿಕ್ಷಣವಿದೆ. ಅದನ್ನು ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮದೇವನೊಲಿಯುವ ಪರಿ ಎಂದಿದ್ದಾರೆ. ಆದ್ದರಿಂದ ಬಸವಣ್ಣನವರು ವೈದಿಕ ಧರ್ಮವಿರೋಧಿಗಳಾಗಿರಲಿಲ್ಲ ಅವರು ವ್ಯವಸ್ಥೆಯಲ್ಲಿದ್ದ ಹುಳುಕುಗಳನ್ನು ಸರಿಪಡಿಸಲು ಪ್ರಯತ್ನಿಸಿದವರು. ಅವರೆಲ್ಲೂ ವೇದಗಳನ್ನು ಸುಳ್ಳೆಂದು ಸಾರಲಿಲ್ಲ ಅಥವಾ ಸನಾತನ ಧರ್ಮವನ್ನು ಖಂಡಿಸಲಿಲ್ಲ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎನ್ನುವುದರ ಮೂಲಕ ಇದ್ದವರು ಬೇಕಾದರೆ ಗುಡಿಗಳನ್ನು ಕಟ್ಟಿಕೊಳ್ಳಲಿ; ಎಲ್ಲರೂ ಅದನ್ನು ಮಾಡಬೇಕಿಲ್ಲ; ಎಲ್ಲದಕ್ಕಿಂತ ಹೆಚ್ಚಾಗಿ ಭಗವಂತನ ಭಕ್ತಿ ಮುಖ್ಯವೆಂದರಷ್ಟೇ ಹೊರತು ದೇವಸ್ಥಾನ ಕಟ್ಟಿಸುವುದರ ವಿರುದ್ಧ ಮಾತನಾಡಲಿಲ್ಲ.

    ಪಾರ್ಥಸಾರಥಿಯವರ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಪ್ರಮುಖವಾದದ್ದು ಬಸವಣ್ಣನವರನ್ನು ಸಮಾಜ ಸುಧಾರಕರೆಂದು ಗುರುತಿಸಿ ಅವರನ್ನು ಅವಮಾನಗೊಳಿಸುತ್ತಿದ್ದೀರ ಎನ್ನುವುದೇ ಆಗಿದೆ. ನಿಜ ಅವರು ಹೇಳುವುದರಲ್ಲೂ ಸತ್ಯಾಂಶವಿದೆ ಇಲ್ಲವೆಂದಲ್ಲ ಆದರೆ ಅವರು ಅದನ್ನು ಹೇಳಹೊರಟ ರೀತಿ ಸರಿಯಿಲ್ಲ. ಏಕೆಂದರೆ ಬಸವಣ್ಣನವರ ಸಮಾಜ ಸುಧಾರಣೆಯನ್ನು ಎಲ್ಲರೂ ಅಗತ್ಯಕ್ಕಿಂತ ಹೆಚ್ಚು ಒತ್ತುಕೊಟ್ಟು ಗುರುತಿಸಿದರೇ ವಿನಹ ಅವರ ತತ್ವ ಸಿದ್ಧಾಂತವಾದ "ಶಕ್ತಿ ವಿಶಿಷ್ಟಾದ್ವೈತ"ಕ್ಕೆ ಸರಿಯಾದ ಮನ್ನಣೆ ದೊರೆಯಲಿಲ್ಲ. ಇದನ್ನೇ ಅವಮಾನಗೊಳಿಸುತ್ತಿದ್ದೀರ ಎನ್ನುವ ಬದಲು  ಬುದ್ಧ, ಮಹಾವೀರ, ರಾಮಾನುಜರ ತತ್ವಗಳಿಗೆ ಸಿಕ್ಕಂತಹ ಆಧ್ಯಾತ್ಮಿಕ ಮನ್ನಣೆ  ಬಸವಣ್ಣನವರ ಆಧ್ಯಾತ್ಮಿಕ ಚಿಂತನೆಗೆ ದೊರೆಯಲಿಲ್ಲ ಎನ್ನುವುದು ಹೆಚ್ಚು ಸೂಕ್ತವಾದೀತು. ಏಕೆಂದರೆ ಈ ಮೂವರೂ ಕೂಡ ಸಮಾಜ ಸುಧಾರಣೆಯನ್ನು ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಜೊತೆ ಜೊತೆಯಾಗಿ ಕೈಗೊಂಡವರೆ. ಆದ್ದರಿಂದ ಪಾರ್ಥಸಾರಥಿಗಳು ಬಸವಣ್ಣನವರ ಸಮಗ್ರ ವ್ಯಕ್ತಿತ್ವವನ್ನು ಸರೆಹಿಡಿಯುವಲ್ಲಿ ಯಶಸ್ವಿಯಾಗಿಲ್ಲವೆನ್ನೋಣ ಅಥವಾ ಅವರು ಬಸವಣ್ಣನವರ ವ್ಯಕ್ತಿತ್ವವನ್ನು ಸಮಾಜ ಸುಧಾರಣೆಗಷ್ಟೇ ಸೀಮಿತಗೊಳಿಸಿದ್ದಾರೆಂದುಕೊಳ್ಳೋಣ; ಆದರೆ ಅವರು ಖಂಡಿತವಾಗಿ ಬಸವಣ್ಣನವರನ್ನು ಅವಮಾನಗೊಳಿಸಿಲ್ಲ ಆದರೆ ತಮ್ಮ ಶಕ್ಯಾನುಸಾರ ಆ ಮೇರು ವ್ಯಕ್ತಿತ್ವವನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ ಎನ್ನಬಹುದು.
=============================================================================================================================
ವಸಂತ್ ಅವರ ಲೇಖನಕ್ಕೆ ಕೊಂಡಿ:
http://sampada.net/blog/%E0%B2%95%E0%B2%BE%E0%B2%AF%E0%B2%95-%E0%B2%AF%E0%B3%8B%E0%B2%97%E0%B2%BF-%E0%B2%B6%E0%B3%8D%E0%B2%B0%E0%B3%80-%E0%B2%AC%E0%B2%B8%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%9C%E0%B2%AF%E0%B2%82%E0%B2%A4%E0%B2%BF%E0%B2%AF-%E0%B2%B6%E0%B3%81%E0%B2%AD%E0%B2%BE%E0%B2%B6%E0%B2%AF%E0%B2%97%E0%B2%B3%E0%B3%81/24/04/2012/36492#comment-164701

ಪಾರ್ಥಸಾರಥಿಯವರ ಲೇಖನಕ್ಕೆ ಕೊಂಡಿ:
http://sampada.net/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6-%E0%B2%AE%E0%B2%B9%E0%B2%BE%E0%B2%9A%E0%B3%87%E0%B2%A4%E0%B2%A8-%E0%B2%AD%E0%B2%95%E0%B3%8D%E0%B2%A4%E0%B2%BF-%E0%B2%AD%E0%B2%82%E0%B2%A1%E0%B2%BE%E0%B2%B0%E0%B2%BF-%E0%B2%AC%E0%B2%B8%E0%B2%B5%E0%B2%A3%E0%B3%8D%E0%B2%A3%E0%B2%A8%E0%B2%B5%E0%B2%B0%E0%B3%81

Rating
No votes yet

Comments