ಕವನ
ಮಾರುದ್ದದ ಮನೆ
ನಾಲ್ಕಡಿಯ ಪಡಸಾಲೆ
ಹತ್ತಾರೂ ಬಯಕೆಗಳು
ಬತ್ತದೇ ಉಳಿದ
ನೆನಪುಗಳು
ಮುಳ್ಳೊದ್ದ ತಾರೀಸು
ಮುರಿದು ಬಿದ್ದ ಮುಟ್ಟುಗಳು
ಆಸ್ತಿತ್ವವಿಲ್ಲದೇ ಸೋತು
ಬಿರುಕು ಬಿಟ್ಟ ಗೋಡೆಗಳು
ಇದಕೆಲ್ಲ ಯಾರು ಕಾರಣ?
ನೂರೆಂಟು ಪ್ರಶ್ನೆಗಳು
ಮುರಿದ ಮನಸ್ಸಿನಲ್ಲಿ
ಬಲವಂತದ ಯೋಚನೆಗಳು
ನಾನೇ
ಉರಿಸಿಟ್ಟ ಪುಟ್ಟದೀಪ
ಆ ಸಣ್ಣ ಕಿಂಡಿಯೊಳಗಿದೆ
ನೋಡಿ!
ಇನ್ನೂ ಉರಿಯುತ್ತಿದೆ
ಕಾರಣ ಕೇಳಿ
ತಿಳಿದುಕೊಳ್ಳಿ
ಗುಡಿಸುವ ಪೊರಕೆ
ನನ್ನ ಕೈಗೆಟುಕಲಿಲ್ಲ
ಸಾರಿಸುದ ನೆಲ
ನನ್ನ ಗೌರವಿಸಲಿಲ್ಲ
ಜಡ್ಡುಗಟ್ಟಿದ ಜೇಡರ ಬಲೆಗಳಿಗೆ
ಸುಮ್ಮನಿರಿ ಎಂದು
ಯಾರೂ ಹೇಳಲಿಲ್ಲ
ಮನೆಯ ಮುಂದಿನ
ಗಿಡದಲ್ಲಿ
ದಾಸವಾಳ ನಗಲಿಲ್ಲ
ಸಂಪಿಗೆ ಮರದಲ್ಲಿನ ಕೋಗಿಲೆ
ಒಮ್ಮೆಯೂ
ಕೂಗಿ ಮಾತಾಡಿಸಲಿಲ್ಲ
ನೈದಿಲೆ ನಲಿಯಲಿಲ್ಲ
ನವಿಲು ಸಾಟ್ಯವಾಡಲಿಲ್ಲ
ನಕ್ಷತ್ರ ಹೊಳೆಯಲಿಲ್ಲ
ಚಂದ್ರ ಬೆಳಕಾಗಿಲ್ಲ
ಕನಸ್ಸುಗಳು ಕಥೆ ಹೇಳಲಿಲ್ಲ
ಆಸೆಗಳು ಅಳಿಸಲಿಲ್ಲ
ಏಕೆಂದು ನನ್ನ
ಯಾರೂ ಕೇಳದಿರಿ!
ಆ ಕಿಂಡಿಯೊಳಗಿನ ದೀಪ
ಇನ್ನೂ ಉರಿಯುತ್ತಿದೆ
ಹೋಗಿ ಪ್ರಶ್ನಿಸಿಕೊಳ್ಳಿ
ಕಾರಣ ತಿಳಿದುಕೊಳ್ಳಿ
ನಾ ಮಾತ್ರ ಆ ಮನೆಗೆ
ಮತ್ತೆಂದು ಹೋಗಲಾರೆ.
Comments
ಉ: ಮತ್ತೆ ಹೋಗಲಾರೆ
In reply to ಉ: ಮತ್ತೆ ಹೋಗಲಾರೆ by venkatb83
ಉ: ಮತ್ತೆ ಹೋಗಲಾರೆ