ಇಂಟೆಲ್ ಇನ್‌ಸೈಡ್ ಇರುವ ಸ್ಮಾರ್ಟ್‌ಫೋನ್
ಇಂಟೆಲ್ ಇನ್‌ಸೈಡ್ ಇರುವ ಸ್ಮಾರ್ಟ್‌ಫೋನ್
ಇಂಟೆಲ್ ಕಂಪೆನಿ ಚಿಪ್ ತಯಾರಿಕೆಗೆ ಅನ್ವರ್ಥಕನಾಮವಾಗಿಯೇನೋ ಇದೆ.ಆದರದು ಕಂಪ್ಯೂಟರ್ ಚಿಪ್‌ಗಳ ಬಗ್ಗೆ ಮಾತ್ರಾ ಅನ್ವಯಿಸುವ ಮಾತು.ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ ಇಂಗ್ಲೆಂಡಿನ ಆರ್ಮ್ ಸಂಸ್ಕಾರಕದ ಬಗ್ಗೆ ಅದೇ ಮಾತು ಹೇಳಬೇಕಾಗುತ್ತದೆ.ಈಗ ಸ್ಮಾರ್ಟ್‌ಫೋನ್ ಮಾರುಕಟ್ಟೆಗೂ ತನ್ನ ಚಿಪ್ ಅನ್ನು ಪರಿಚಯಿಸಲು ಲಾವಾ ಕಂಪೆನಿ ಜತೆ ಸೇರಿ ಇಂಟೆಲ್ ಕ್ಸೊಲೋ900 ಎನ್ನುವ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಲಿದೆ.ಇದು ಇಪ್ಪತ್ತು ಸಾವಿರಕ್ಕೂ ಅಧಿಕ ಬೆಲೆಯ ದುಬಾರಿ ಫೋನಾಗಿದೆ.ಇದುವರೆಗೆ ಅಗ್ಗದ ಫೋನ್ ತಯಾರಿಕೆಯತ್ತಲೇ ಗಮನಹರಿಸಿದ್ದ ಲಾವಾ ಕಂಪೆನಿ,ಈಗ ದಾರಿ ಹೊರಳಿಸಿದೆ.
ಅಂದಹಾಗೆ ಇಂಟೆಲ್ ಕಂಪೆನಿಯ ಅರ್ಧಾಂಶ ಸಂಖ್ಯೆಯ ಚಿಪ್‌ಗಳು ಚೀನಾದ ಚೆಂಗುಡು ಎನ್ನುವಲ್ಲಿನ ತಯಾರಿಕಾ ಘಟಕದಲ್ಲಿ ತಯಾರಿಸಲಾಗಿರುತ್ತದೆ.ವರ್ಷದಿಂದ ವರ್ಷಕ್ಕೆ ಇಲ್ಲಿ ತಯಾರಾಗುವ ಚಿಪ್‌ಗಳ ಸಂಖ್ಯೆ ಇಮ್ಮಡಿಯಾಗುತ್ತಿದೆ.ಇದುವರೆಗೆ ಅಲ್ಲಿ ಒಂದು ಬಿಲಿಯನ್ ಚಿಪ್ ತಯಾರಿಸಿ,ಇಂಟೆಲ್ ದಾಖಲೆ ಮಾಡಿದೆ.
---------------------------------------
ಬರಲಿದೆ ಮೊಜಿಲ್ಲಾ ಸ್ಮಾರ್ಟ್‌ಫೋನ್
ಕಂಪ್ಯೂಟರ್ ಬ್ರೌಸರ್‌ಗಳ ಪೈಕಿ ಜನಪ್ರಿಯವಾಗಿರುವ ಫೈರ್‌ಫಾಕ್ಸ್ ಮೊಜಿಲ್ಲಾ ಕಂಪೆನಿಯದ್ದು.ಈಗ ಕಂಪೆನಿಯು ಸ್ಮಾರ್ಟ್‌ಫೋನಿಗೆ ಸೂಕ್ತವಾದ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ.ಇದನ್ನು ಬಳಸುವ ಮೊಬೈಲ್ ಪೋನುಗಳು ಈ ವರ್ಷಾಂತ್ಯದ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶಿಸಬಹುದು ಎಂದು ಸುದ್ದಿಯಿದೆ.ಅಂದಹಾಗೆ ಮೊಜಿಲ್ಲಾದ ಆಪರೇಟಿಂಗ್ ವ್ಯವಸ್ಥೆಯನ್ನು ಬೂಟ್ ಟು ಜ್ಯಾಕ್ಕೋ ಎಂದು ಹೆಸರಿಸಲಾಗಿದೆ.ಈ ತಂತ್ರಾಂಶ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವಾಗಿ ಲಭ್ಯವಿರುವ ಕಾರಣ,ಇದರಲ್ಲಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸುವ ಅಲೆ ಏಳುವುದು ನಿಶ್ಚಿತ.ಇಂತಹ ಅಪ್ಲಿಕೇಶನ್‌ಗಳನ್ನು ಅಳವಡಿಸಿ ಫೋನ್‌ನ ಉಪಯೋಗವನ್ನು ಹೆಚ್ಚು ಸಮರ್ಥವಾಗಿ ಮಾಡಿಕೊಳ್ಳಬಹುದು.
-------------------------------------
ಸೆಕೆಂಡಿಗಿಷ್ಟು ಎಂದು ದರ ನಿಗದಿ ಮಾಡಿ ಎಂದು ಟ್ರಾಯ್
ಮೊಬೈಲ್ ಬಳಕೆಗೆ ದರವನ್ನು ಸೆಕೆಂಡಿಗಿಂತಿಷ್ಟು ಎಂದು ನಿಗದಿ ಮಾಡಿದ ಒಂದು ಯೋಜನೆಯನ್ನಾದರೂ ಕಂಪೆನಿಗಳು ಹೊಂದಿರಬೇಕು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ನಿಗದಿ ಪಡಿಸಿದೆ.ರಿಯಾಲಿಟಿ ಶೋ ಮತ್ತಿತ್ತರ ಬಹುಮಾನ ಪಡೆಯಲು ಕಳುಹಿಸುವ ಎಸ್ಸೆಮ್ಮೆಸ್ ಅಂತಹ ಪ್ರೀಮಿಯಂ ಸೇವೆಗಳಿಗೆ ಹೆಚ್ಚಿನ ದರಕ್ಕೆ ಪ್ರಾಧಿಕಾರ ಓಕೆ ಎಂದಿದೆ.
------------------------------------------------
ಇಂಟರ್ನೆಟ್:ಸೆನ್ಸಾರ್ ಸೆನ್ಸ್‌ಲೆಸ್
ಇಂಟರ್ನೆಟ್ ಎನ್ನುವ ಸಿದ್ಧಾಂತವನ್ನು ರೂಪಿಸಿ,ಅದನ್ನು ಪ್ರಾಯೋಗಿಕ ಬಳಕೆಗೆ ತಂದ ಬರ್ನಸ್‌ಲೀ ಎನ್ನುವ ಕಂಪ್ಯೂಟರ್ ವಿಜ್ಞಾನಿಯ ಸಮೇತ ಇಡೀ ಕಂಪ್ಯೂಟರ್ ಬಳಕೆದಾರರು ಅಮೆರಿಕಾ,ಇಂಗ್ಲೆಂಡ್ ಮತ್ತು ಭಾರತ ಸರಕಾರಗಳಿಂದ ಹಿಡಿದು ಎಲ್ಲಾ ಸರಕಾರಗಳು ಇಂಟರ್ನೆಟ್ ಅನ್ನು ನಿಯಂತ್ರಣಕ್ಕೊಳಪಡಿಸುವ ಕ್ರಮದ ವಿರುದ್ಧ ಸಿಡಿದಿದ್ದಾರೆ.ಇದು ಇಂಟರ್ನೆಟ್‌ನ ಹಿಂದಿರುವ ತತ್ತ್ವ ಸಿದ್ಧಾಂತಗಳ ವಿರುದ್ಧವಾಗಿರುವ ಕ್ರಮವೆನ್ನುವುದನ್ನಿವರು ಒಕ್ಕೊರಲಿನಿಂದ ಸಾರಿದ್ದಾರೆ.ಆದರೂ ಆಡಳಿತದ ಚುಕ್ಕಾಣಿ ಹಿಡಿದವರು ಇಂಟರ್ನೆಟ್ ಅನ್ನು ನಿಯಂತ್ರಣಕ್ಕೊಳ ಪಡಿಸದಿದ್ದರೆ,ಅದರ ದುರ್ಬಳಕೆಗೆ ಅವಕಾಶ ಸಿಗುತ್ತದೆ ಎನ್ನುವ ವಾದವನ್ನು ಮುಂದಿಟ್ಟುಕೊಂಡು ಹೊಸ ಹೊಸ ಕಾನೂನುಗಳನ್ನು ತರುವ ಪ್ರವೃತ್ತಿ ತೋರಿಸುತ್ತಿದ್ದಾರೆನ್ನುವುದು ದಿನೇದಿನೇ ಸ್ಪಷ್ಟವಾಗುತ್ತಿದೆ.
----------------------------------------
ಬೇಡದ ಮಿಂಚಂಚೆ:ಭಾರತದಿಂದ ಉಗಮ
ಭಾರತದಿಂದ ಉಗಮವಾಗುವ ಒಲ್ಲದ ಮಿಂಚಂಚೆಗಳ ಸಂಖ್ಯೆ ಕಡಿಮೆಯೇನಲ್ಲವೆಂದು ಸಮೀಕ್ಷೆಯಿಂದ ತಿಳಿದು ಬಂದಿದೆ.ಇಂತಹ ಇ-ಮೇಲ್‌ಗಳ ಪೈಕಿ ಶೇಕಡಾ ಇಪ್ಪತ್ತು ಭಾಗ ಭಾರತದ ಕೊಡುಗೆಯಂತೆ.ಬಳಕೆದಾರರು ಬಯಸದ ಮಿಂಚಂಚೆ ಬರುವ ತೊಂದರೆ ಎಲ್ಲಾ ಮಿಂಚಂಚೆ ಬಳಕೆದಾರರನ್ನೂ ಕಾಡುತ್ತದೆ.ಎಲ್ಲಾ ದೇಶಗಳಲ್ಲೂ ಇಂತಹ ಇ-ಮೇಲ್ ಕಳುಹಿಸುವವರು ಇದ್ದೇ ಇರುತ್ತಾರೆ.ಇಂಡೋನೇಶ್ಯಾ,ರಶ್ಯಾ,ದಕ್ಷಿಣ ಕೊರಿಯಾದಿಂದ ಇಂಥಹ ಮಿಂಚಂಚೆಗಳು ಬರುವುದು ಹೆಚ್ಚು.ಆಪ್ರಿಕಾ ದೇಶಗಳಿಂದಲೂ ಇಂತಹವು ಬರುವುದು ನಿಮ್ಮ ಅನುಭವಕ್ಕೂ ಬಂದಿರುತ್ತದೆ.ಇದಕ್ಕೆ ಜಿಮೇಲ್,ಯಾಹೂ ಅಂತಹ ಕಂಪೆನಿಗಳು ಮದ್ದರೆಯಲು ಸರ್ವ ಪ್ರಯತ್ನ ನಡೆಸಿದರೂ,ಅವು ವಿಫಲವಾಗುವುದೇ ಅಧಿಕ.ಕಂಪ್ಯೂಟರ್ ವ್ಯವಸ್ಥೆಗಳ ಮೇಲೆ ದಾಳಿ ಮಾಡುವ ದಾಳಿಕೋರರು ಈಗೀಗ ಆಪಲ್ ಕಂಪ್ಯೂಟರಿನ ಮ್ಯಾಕ್ ವ್ಯವಸ್ಥೆಗಳಲ್ಲಿ ಹೆಚ್ಚು ಹುಳುಕು ಇರುವುದನ್ನು ಕಂಡುಕೊಂಡಿದ್ದಾರೆ.ಮೊದಲಾದರೆ ಬರೇ ವಿಂಡೋಸ್ ವ್ಯವಸ್ಥೆಗಳ ವಿರುದ್ಧವೇ ದಾಳಿಕೋರರು ಗುರಿಯಿಡುತ್ತಿದ್ದರು.ಈಗ ಜನಪ್ರಿಯವಾಗಿರುವ ಆಂಡ್ರಾಯಿಡ್ ವ್ಯವಸ್ಥೆಗಳ ಮೂಲಕ ಅಪಾಯಕಾರಿಯಾಗಬಲ್ಲ ಅಪ್ಲಿಕೇಶನ್‌ಗಳನ್ನು ಸ್ಮಾರ್ಟ್‌ಫೋನುಗಳಲ್ಲಿ ಅಳವಡಿಸಿ,ಮಾಹಿತಿ ಕದಿಯುವುದು,ಕಂಪ್ಯೂಟರ್ ವ್ಯವಸ್ಥೆಗಳನ್ನು ವಶಕ್ಕೆ ತೆಗೆದುಕೊಳ್ಳುವುದನ್ನು ಶುರು ಹಚ್ಚಿಕೊಂಡಿರುವುದನ್ನು ಸಮೀಕ್ಷೆ ಎತ್ತಿ ಹಿಡಿದಿದೆ.
-----------------------------------------------
ಎಸ್ಸೆಮ್ಮೆಸ್ ಮೂಲಕ ಗೂಗಲ್-ಪ್ಲಸ್
ಗೂಗಲ್ ಪ್ಲಸ್ ಬಳಸಲು ಇಂಟರ್ನೆಟ್ ಬಳಕೆ ಮಾಡುವುದು ಕಡ್ಡಾಯವಾಗಿತ್ತು.ಇದೀಗ ಗೂಗಲ್ ಕಂಪೆನಿ,ಗೂಗಲ್ ಪ್ಲಸ್‌ಗೆ ಹೆಚ್ಚು ಬಳಕೆದಾರರು ಬರುವಂತೆ ಮಾಡಲು ಎಸ್ಸೆಮ್ಮೆಸ್ ಬಳಕೆಯ ಮೂಲಕವೂ ಗೂಗಲ್ ಪ್ಲಸ್ ಬಳಕೆಗೆ ದಾರಿ ಮಾಡಿಕೊಟ್ಟಿದೆ.ಭಾರತದಲ್ಲಿ ಇಂಟರ್ನೆಟ್ ಬಳಕೆ ಮಾಡುವವರು ಹನ್ನೆರಡು ಕೋಟಿ ಜನರಾದರೆ,ಮೊಬೈಲ್ ಬಳಸುವ ಅರುವತ್ತು ಕೋಟಿ ಜನರಿರುವುದೇ,ಈ ಸವಲತ್ತು ಒದಗಿಸಲು ಮುಖ್ಯ ಕಾರಣವಾಗಿದೆ.ಇದಕ್ಕೆ ಅನುವಾಗಲು ಜನರು ಗೂಗಲ್ ಪ್ಲಸ್ ಅಲ್ಲಿ ನೋಂದಾಯಿಸುವಾಗ,ತಮ್ಮ ಮೊಬೈಲ್ ನಂಬರ್ ಕೊಡಬೇಕಾಗುತ್ತದೆ.ಹೀಗೆ ನಂಬರ್ ಕೊಟ್ಟವರು ಗೂಗಲ್ ಪ್ಲಸ್‌ನ ತಮ್ಮ ಸಹವರ್ತಿಗಳಿಗೆ ಎಸ್ಸೆಮ್ಮೆಸ್ ಕಳುಹಿಸಿದರೆ,ಅದು ಇಂಟರ್ನೆಟ್ ಬಳಸುವ ಗೂಗಲ್ ಪ್ಲಸ್‌ನ ಅವರ ಸಹವರ್ತಿಗಳಿಗೆ ಮತ್ತು ಮೊಬೈಲ್ ಜಾಲದಲ್ಲಿರುವ ಅವರ ಸಹವರ್ತಿಗಳಿಗೆ ತಲುಪುತ್ತದೆ.ಹೀಗಾಗಲು,ಎಸ್ಸೆಮ್ಮೆಸ್ ಅನ್ನು ಗೂಗಲ್ ಪ್ಲಸ್ ಬಳಕೆದಾರರಿಗೆ ಗೂಗಲ್ ಕೊಡುವ ಸಂಖ್ಯೆಗೆ ಎಸ್ಸೆಮ್ಮೆಸ್ ಮಾಡಬೇಕಾಗುತ್ತದೆ.
----------------------------------------------
ಗೋಡೆಯಾಚೆ ದೃಷ್ಟಿಹರಿಸಬಲ್ಲ ಸ್ಮಾರ್ಟ್‌ಫೋನ್ ಚಿಪ್
ಗೋಡೆಯಾಚೆಯೇನಿದೆ,ಪರದೆಯಾಚೆ ಏನಿದೆ ಎನ್ನುವುದನ್ನು ತೋರುವ ಸಾಮರ್ಥ್ಯ ನೀಡುವ ಚಿಪ್ ಅನ್ನು ತಯಾರಿಸಲಾಗಿದೆ.ಡಲ್ಲಾಸ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಇಂತಹ ಸಾಮರ್ಥ್ಯ ನೀಡುವ ಚಿಪ್ ಅನ್ನು ತಯಾರಿಸಲು ಸಮರ್ಥರಾಗಿದ್ದಾರೆ.ಅವರು ತಯಾರಿಸುವ ಚಿಪ್‌ನಲ್ಲಿ ರೇಡಿಯೋ ಸಂಕೇತಗಳನ್ನು ಕಳುಹಿಸುವ ಪ್ರೇಷಕವೊಂದಿದೆ. ಈ ಸಂಕೇತಗಳು ಗೋಡೆ ಅಥವಾ ಪರದೆಯಾಚೆ ಸಾಗಿ,ಅಲ್ಲಿರುವ ವಸ್ತುಗಳ ಬಿಂಬವನ್ನು ಗ್ರಹಿಸಿ,ತೆರೆಯಲ್ಲಿ ಮೂಡಿಸುತ್ತವೆ.ಎಕ್ಸ್-ರೇ ಕಿರಣಗಳು ದೇಹಭಾಗಗಳ ಮೂಲಕ ತೂರಿ ಎಕ್ಸ್-ರೇ ಚಿತ್ರ ಮೂಡಿಸುವುದನ್ನು ನೆನಪಿಸಿಕೊಳ್ಳಿ.ಅಲ್ಟ್ರಾಸೌಂಡ್ ಕಿರಣಗಳ ಮೂಲಕ ಸ್ಕ್ಯಾನ್ ಮಾಡುವುದಕ್ಕೆ ಇದನ್ನು ಹೋಲಿಸಿದರೆ ತಪ್ಪಿಲ್ಲ.ಜನರ ಖಾಸಗಿತನಕ್ಕೆ ಭಂಗ ಬರದಂತೆ ಈ ಕಿರಣಗಳು ಕೆಲವು ಇಂಚು ಮಾತ್ರಾ ಹಾದುಹೋಗುವಂತೆ ವಿನ್ಯಾಸಗೊಳಿಸಲಾಗಿದೆ.
---------------------------------------------------------------
ಇ-ಕಸದಿಂದ ಪರಿಸರ ಕೆಡುತ್ತೆ
ಇ-ಕಸವನ್ನು ರಫ್ತು ಮಾಡಿ,ಬಡದೇಶಗಳಿಗೆ ಕಳುಹಿಸಿ,ಅವುಗಳಿಂದ ಮುಕ್ತಿ ಹೊಂದುವುದು ಅಮೇರಿಕಾದಂತಹ ದೇಶಗಳು ಹಿಡಿದಿರುವ ಸುಲಭದ ಹಾದಿ.ಈಗ ಏಶ್ಯಾದ ಹಲವು ದೇಶಗಳು ತಮ್ಮ ಕಸವನ್ನು ಚೀನಾಕ್ಕೆ ಕಳುಹಿಸಿ ವಿಲೇವಾರಿ ಮಾಡುವ ಪರಿಪಾಠವೂ ಬೆಳೆದಿದೆ.ದಕ್ಷಿಣಾ ಚೀನಾದ ಗಯು ಎನ್ನುವ ಪಟ್ಟಣದಲ್ಲಿ ಇಂತಹ ಇ-ಕಸವನ್ನು ತಂದು ಸುರಿಯಲಾಗುತ್ತಿದೆ.ದೊಡ್ಡ ಕಂಪೆನಿಗಳ ಕಸಗಳು,ಅನಗತ್ಯ ಅಥವಾ ಕೆಲಸ ಮಾಡದ ಭಾಗಗಳು ಎಲ್ಲವೂ ಬೇರೆಡೆಯಿಂದ ಇಲ್ಲಿಗೆ ತಂದು ಡಂಪಿಂಗ್ ಯಾರ್ಡ್‌ಗೆ ಸುರಿಯಲಾಗುತ್ತಿದೆ.ಸತು,ಕ್ರೋಮಿಯಂ ಅಂತಹ ಭಾರಲೋಹಗಳು ಇಲ್ಲಿನ ಗಾಳಿ,ನೀರನ್ನು ಮಲಿನಗೊಳಿಸಿ,ಜನರ ಆರೋಗ್ಯಕ್ಕೆ ಬಹಳಷ್ಟು ಕೆಡುಕು ಉಂಟು ಮಾಡಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ?ಇಂತಹ ಇ-ಕಸವನ್ನು ಕಡಿಮೆ ಮಾಡಲು ಜನರು ಸಾಧನಗಳನ್ನು ದೀರ್ಘಾವಧಿ ಬಳಸುವುದನ್ನು ಅಭ್ಯಾಸ ಮಾಡಬೇಕು.ಹೊಸ ಹೊಸ ಸಾಧನಗಳನ್ನು ಖರೀದಿಸಿ,ಹಳೆಯದ್ದನ್ನು ಮೂಲೆಗೆಸೆಯುವ ಕೊಳ್ಳುಬಾಕ ಸಂಸ್ಕೃತಿಯನ್ನು ತ್ಯಜಿಸುವುದು ಕಿಸೆಗೂ,ಪರಿಸರಕ್ಕೂ ಒಳಿತು ಮಾಡುತ್ತದೆ ಎನ್ನುವುದನ್ನು ಮರೆಯಬೇಡಿ.
---------------------------------------------------------UDAYAVANI
ಅಶೋಕ್‌ಕುಮಾರ್ ಎ