ಪೋಲಿಷ್ ಕವಿತೆ: ಆತ್ಮ

ಪೋಲಿಷ್ ಕವಿತೆ: ಆತ್ಮ

ಬರಹ
ನಮ್ಮೊಳಗೆ ಆತ್ಮವಿರುತ್ತದೆ-ಕೆಲವು ಬಾರಿ. ಇರಬೇಕೆಂದು ಬಯಸಿದರೂ ಯಾರ ಆತ್ಮವೂ ಸದಾ ಕಾಲವೂ ಜೊತೆಗೆ ಇರುವುದೇ ಇಲ್ಲ. ದಿನಗಳು ದಿನಗಳು ವರ್ಷಗಳು ವರ್ಷಗಳು ಆತ್ಮವಿರದೆಯೇ ಉರುಳಿಹೋಗುವವು. ಕೆಲವೊಮ್ಮೆ ಆತ್ಮ ಚೆನ್ನಾಗಿ ಸೆಟಲ್ ಆಗಿರುತ್ತದೆ- ಎಳೆತನದ ಭಯ ಉದ್ವೇಗಗಳಲ್ಲಿ ಅಯ್ಯೋ ವಯಸಾಯಿತೆ ಎಂದು ತಟ್ಟನೆ ಆಗುವ ಆಶ್ಚರ್ಯದಲ್ಲಿ. ಕುರ್ಚಿ ಮೇಜು ಸೋಫಾಗಳನ್ನು ಅತ್ತಿತ್ತ ಸರಿಸುವ ಹೆಣಭಾರದ ಲಗೇಜು ಹೊರುವ ಸಂದರ್ಭಗಳಲ್ಲಿ ಆತ್ಮ ತನ್ನ ಸಹಾಯ ಹಸ್ತ ಚಾಚುವುದೇ ಇಲ್ಲ. ಆದರೆ ಮಾಂಸ ಕೊಚ್ಚುವಾಗ ಅಥವ ಯಾವುದೋ ಫಾರಂ ತುಂಬುವಾಗ ಆತ್ಮ ತಟ್ಟನೆ ಇಣುಕಿ ಕಸಿವಿಸಿ ಮಾಡುತ್ತದೆ. ಸಾವಿರ ಮಾತುಗಳಾಡಿದರೆ ಯಾವುದೋ ಒಂದು ಮಾತಿನಲ್ಲಿ ಆತ್ಮ ಇದ್ದೀತು. ಅದೂ ಅನುಮಾನ. ಆತ್ಮಕ್ಕೆ ಮೌನವೇ ಇಷ್ಟ. ನಮ್ಮ ದೇಹ ನೋವುಂಡು ವೇದನೆಗೆ ಜಾರುತ್ತಿರುವಾಗ ಆತ್ಮ ರಜೆ ತೆಗೆದುಕೊಂಡು ಹೊರಟುಹೋಗಿರುತ್ತದೆ. ಆತ್ಮ ಶುದ್ಧ ತರಲೆ. ನಾವು ಜನಜಂಗುಳಿಯಲ್ಲಿ ಕಳೆದು ಹೋಗುವುದು ಅದಕ್ಕೆ ಇಷ್ಟವಿಲ್ಲ. ಸಂಚು ಹೂಡುವಾಗ, ನಮಗೆ ಬರಬಾರದ ಲಾಭ ಬರಲೆಂದು ಹುನ್ನಾರ ಹೂಡುವಾಗ ಕಿರಿಕ್ಕು ಮಾಡುತ್ತದೆ. ನರಳುತ್ತದೆ. ಸುಖ ಮತ್ತು ದುಃಖ ಎರಡೂ ಆತ್ಮಕ್ಕೆ ಬೇರೆ ಬೇರೆ ಅಲ್ಲವೇ ಅಲ್ಲ. ಸುಖ ದುಃಖ ಎರಡೂ ಒಂದೇ ಆದಾಗ ಮಾತ್ರ ಆತ್ಮ ನಮ್ಮದಾಗಿ ಇರುತ್ತದೆ. ನಮಗೆ ಯಾವುದೂ ಏನೂ ಸ್ಪಷ್ಟವಾಗದಿದ್ದಾಗ ಎಲ್ಲದರ ಬಗ್ಗೆ ಕುತೂಹಲ ಇದ್ದಾಗ ಆತ್ಮದ ಮಾತು ಕೇಳಬಹುದು. ಈ ಲೋಕದ ವಸ್ತುಗಳಲ್ಲಿ ಲೋಲಕದ ಗಡಿಯಾರ ಮತ್ತು ಯಾರೂ ನೋಡಿಕೊಳ್ಳದಿದ್ದರೂ ಪ್ರತಿಫಲಿಸುವ ಕರ್ತವ್ಯ ಮಾಡುತ್ತಲೇ ಇರುವ ಕನ್ನಡಿ ಇವೆರಡೂ ಆತ್ಮಕ್ಕೆ ಬಹಳ ಇಷ್ಟ. ತಾನು ಎಲ್ಲಿಂದ ಬಂದೆ ಅಥವ ಎಲ್ಲಿಗೆ ಹೊರಟಿದ್ದೇನೆ ಎಂದು ಅದು ಹೇಳುವುದೇ ಇಲ್ಲ. ಆದರೆ ನಾವು ಈ ಪ್ರಶ್ನೆಗಳನ್ನು ಕೇಳುತ್ತೇವೆಂದು ಗೊತ್ತು ಅದಕ್ಕೆ. ನಮಗೆ ಆತ್ಮ ಬೇಕು. ಸರಿ. ಆದರೆ ಯಾವುದೋ ಕಾರಣಕ್ಕೆ ಆತ್ಮಕ್ಕೆ ಕೂಡ ನಾವು ಬೇಕು. ವಿಸ್ಲೊವಾ ಝಂಬ್ರೋಸ್ಕ [ಈ ಕವಿತೆಯ ಆತ್ಮ ಚಿಂತನೆಯ ಲವಲವಿಕೆ, ಹೊಸ ನೋಟ ಇಷ್ಟವಾಯಿತೆಂದು ಹೀಗೆ ಕನ್ನಡಿಸಿದ್ದೇನೆ. ನಿಧಾನವಾಗಿ ಓದಿ ನೋಡಿ.]