ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೩
ಒಬ್ಬನೇ ಮಗು ಸಾಕು, ಅವನೇ ಇರುವ ೨೦ ಎಕರೆ ತೋಟವನ್ನ ನೋಡಿಕೊಂಡು ಹೋದರಾಯಿತು ಎಂದುಕೊಂಡಿದ್ದರು, ತಮ್ಮ ಸ್ವಪ್ರಯತ್ನದಿಂದ ಕಡಿಮೆ ಇದ್ದ ಭೂಮಿಯಲ್ಲೇ ಚೆನ್ನಾಗಿ ದುಡಿದು ಸ್ವಲ್ಪ ಸ್ವಲ್ಪ ಖರೀದಿಸಿ ಚೆನ್ನಾಗಿ ತೋಟ ಮಾಡಿ ವ್ಯವಹಾರ ಮಾಡಿಕೊಂಡು ಹೋಗುತ್ತಿದ್ದರು ಆ ದಂಪತಿಗಳು, ಊರಲ್ಲಿದ್ದ ಎಲ್ಲರಿಗೂ ಇವರ ಸಂಪದ್ಭರಿತವಾದ ತೋಟದ ಮೇಲೆಯೇ ಕಣ್ಣು, ಸ್ವಲ್ಪ ವರ್ಷಗಳು ಉರುಳಿದವು, ಒಂದು ಹೆಣ್ಣು ಮಗುವಾಗಲಿ ಎಂದು ದಂಪತಿಗೆ ಬಯಕೆಯಾಯಿತು, ಆದರೆ ಆಗಿದ್ದು ಮತ್ತೊಂದು ಗಂಡು, ಪವನ್ ಮೊದಲನೆಯವನು, ಜೀವನ್ ಎರಡನೆಯವನು, ಇಬ್ಬರಿಗೂ ಒಂದು ಡಿಗ್ರಿ ಮಾಡಿಸಿ ತೋಟ ಹಂಚಿ ಅವರು ಅದನ್ನು ನೋಡಿಕೊಳ್ಳಲಿ ಎಂದು ಆಶಿಸಿದ್ದರು, ಅದರಂತೆ ಇಬ್ಬರೂ ಚೆನ್ನಾಗೇ ಓದಿದರು, ಅಣ್ಣ ತಮ್ಮ ಇಬ್ಬರೂ ಅನ್ಯೋನ್ಯವಾಗಿದ್ದರು, ಎಸ್ ಎಸ್ ಎಲ್ ಸಿ ಆದ ಬಳಿಕ ಊರಲ್ಲೇ ಇದ್ದು ಓದಿದರೆ ಮಕ್ಕಳು ಹಾಳಾಗಬಹುದೆಂದು ಪವನ್ ನನ್ನು ದೂರದ ಒಂದು ಹಾಸ್ಟೆಲ್ಗೆ ಸೇರಿಸಿದರು, ಪವನ್ ಚೆನ್ನಾಗಿ ಓದಿ ಇಂಜಿನಿಯರಿಂಗ್ ಸೇರಿಕೊಂಡ, ತಮ್ಮನೂ ಸಹ ಅಣ್ಣನ ಹಾದಿಯನ್ನೇ ಹಿಡಿದನು, ಮೊದಮೊದಲು ಅಪ್ಪ ಅಮ್ಮನಿಗೆ ಏನೂ ಅನ್ನಿಸುತ್ತಿರಲಿಲ್ಲ, ಆದರೆ ಎರಡನೆಯ ಮಗನೂ ಹೊರಗಡೆ ಓದಲು ಹೋದಾಗ ಏನೋ ಒಂಥರಾ ಸಂಕಟವಾಗಲಾರಂಭಿಸಿತು, ಜೀವನ್ಗೆ ಮೆಡಿಕಲ್ ಮಾಡಬೇಕೆಂಬ ಆಸೆಯಿದ್ದುದರಿಂದ ಅದಕ್ಕೆ ಸೇರಿದನು, ಇತ್ತ ಅಣ್ಣ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಒಂದು ಕಂಪನಿಗೆ ಸೇರಿಕೊಂಡನು, ಊರಿನಲ್ಲಿ ಅಪ್ಪ ಅಮ್ಮ ಇಬ್ಬರೇ ತೋಟ ನೋಡಿಕೊಂಡು ಹೋಗುತ್ತಿದ್ದರು, ಪವನ್ ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದನು, ಸ್ವಲ್ಪ ವರ್ಷ ಕೆಲಸ ಮಾಡಿ ಊರಿಗೆ ಬಾ ಅಂದಾಗ ಅವನಿಗೂ ಅದೇ ಆಸೆಯಿದ್ದುದರಿಂದ ಆಗಲಿ ಎಂದಿದ್ದ, ಇತ್ತ ತಮ್ಮ ಮೆಡಿಕಲ್ ಮುಗಿಸಿ ಎಂ ಡಿಗೆ ವಿದೇಶಕ್ಕೆ ಹಾರಿದ್ದ, ಆಗಾಗ ಎಲ್ಲರಿಗೂ ಫೋನ್ ಮಾಡಿ ಮಾತಾಡುತ್ತಿದ್ದ, ದೊಡ್ಡ ಮಗನಿಗೆ ಮದುವೆ ಮಾಡಲು ಹೆಣ್ಣನ್ನು ಹುಡುಕತೊಡಗಿದರು, ಮನೆಗೆ ತಿರುಗಿಬಂದಾಗ ಮನೆಯನ್ನು ಚೆನ್ನಾಗಿ ನೋಡಿಕೊಂಡು ಹೋಗುವಂತಹ ಸೊಸೆಯನ್ನು ತರಬೇಕೆಂಬ ಆಸೆಯಿತ್ತು, ಅವನೂ ಆ ರೀತಿಯವಳೇ ಇರಲಿ ಎಂದು ಆಶಿಸಿದ್ದ, ಇಲ್ಲೇ ಇರುವ ತಮ್ಮ ದೂರದ ಸಂಬಂಧಿಕರಲ್ಲೇ ಬಿ ಎ ಮಾಡಿದ್ದ ಒಂದು ಹುಡುಗಿಯನ್ನು ತೋರಿಸಿದರು, ಇವನೂ ಒಪ್ಪಿದ, ಮದುವೆಯಲ್ಲಿ ಒಬ್ಬರು 'ಅಲ್ಲ ಗೌಡ್ರೆ, ಇಬ್ರೂ ಪೇಟೆಗೆ ಹೋದ್ರು, ನಿಮ್ಗೆ ನೋಡಿದ್ರೆ ವಯಸ್ಸಾಯ್ತು, ತೋಟ ಯಾರು ನೋಡ್ಕೋತಾರೆ? ಆಗಲ್ಲ ಅಂದ್ರೆ ನೋಡಿ, ಸ್ವಲ್ಪ ಮಾರಿಬಿಡಿ' ಅಂದಾಗ 'ಇಲ್ಲ, ಅವ್ರು ಸ್ವಲ್ಪ ವರ್ಷ ಪೇಟೇಲಿ ಇದ್ದು ವಾಪಸ್ ಬರ್ತಾರೆ' ಅಂದಿದ್ದರು, ಆದರೆ ಇಬ್ಬರಿಗೂ ಈ ನಡುವೆ ಅನುಮಾನ ಕಾಡಲಾರಂಭಿಸಿತು, ಅಕಸ್ಮಾತ್ ಇಬ್ಬರೂ ಬರದಿದ್ದರೆ? ವಿದೇಶಕ್ಕೆ ಹೋದವನ ಬಗ್ಗೆಯಂತೂ ಇವರಿಗೆ ವಾಪಸ್ ಊರಿಗೆ ಬರುತ್ತಾನೆ ಎನ್ನುವ ನಂಬಿಕೆ ಎಳ್ಳಷ್ಟೂ ಇರಲಿಲ್ಲ, ದೊಡ್ಡವನೇ ಗಟ್ಟಿ ಎಂದಂದುಕೊಂಡರು, ನವದಂಪತಿಗಳು ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದರು, ತವರುಮನೆಯಲ್ಲಿ ಆರಾಮಾಗಿದ್ದ ಇವಳಿಗೆ ಸಣ್ಣ ಬಾಡಿಗೆ ಮನೆಯಲ್ಲಿ ಇರುವುದು ಸಹ್ಯವಾಗಲಿಲ್ಲ, ಗಂಡನಿಗೆ ಹೇಳಿ ಒಂದು ಮನೆಯೋ ಅಪಾರ್ಟ್ಮೆಂಟ್ ನೋಡಲು ಹೇಳಿದಳು, ಇವನಿಗೆ ಊರಿಗೆ ಹೋಗುವ ವಿಚಾರ ಇದ್ದುದರಿಂದ ಬೇಡ ಎಂದನು, ಆದರೆ ಇವಳು ತವರು ಮನೆಗೆ ಹೋಗುತ್ತೇನೆ ತಿರುಗಿ ಬರುವುದಿಲ್ಲವೆಂದು ಹೊರಟು ನಿಂತಾಗ ಒಲ್ಲದ ಮನಸ್ಸಿನಿಂದ ಒಪ್ಪಿದನು, ಒಂದು ಅಪಾರ್ಟ್ಮೆಂಟ್ ಹುಡುಕಿ ಅಪ್ಪನನ್ನು ಸ್ವಲ್ಪ ದುಡ್ಡು ಕೇಳಿದನು, ಮಗ ಮತ್ತು ಸೊಸೆ ಸುಖವಾಗಿರಲಿ ಎಂದು ಹಿಂದೆ ಮುಂದೆ ನೋಡದೆ ಅಪ್ಪಸ್ವಲ್ಪ ಹಣವನ್ನು ಕೊಟ್ಟನು, ಇವನು ಉಳಿದದ್ದನ್ನು ಸಾಲ ಮಾಡಿದನು, ಇತ್ತ ಇನ್ನೊಬ್ಬ ಮಗನಿಗೆ ಒಂದು ಹುಡುಗಿ ನೋಡಲು ಅಪ್ಪ ಅಮ್ಮ ನಿರ್ಧಾರ ಮಾಡಿದರು, ಅವನು ಹುಡುಗಿ ಮೆಡಿಕಲ್ ಮಾಡಿರಬೇಕು ಎಂದನು, ಅದರಂತೆ ಬೆಂಗಳೂರಿನಲ್ಲೇ ವಾಸವಾಗಿದ್ದ ಒಂದು ಕುಟುಂಬದ ಹುಡುಗಿಯನ್ನ ತೋರಿಸಿದರು, ಇವನೂ ಒಪ್ಪಿದ, ಮದುವೆಯಾಯಿತು, ಇಬ್ಬರೂ ವಿದೇಶಕ್ಕೆ ಹೋದರು, ಅಮ್ಮನಿಗೆ ಏನೋ ಒಂಟಿ ಭಾವ ಕಾಡಲಾರಂಭಿಸಿತು, ಅದೇ ಕೊರಗಿನಲ್ಲಿ ಹಾಸಿಗೆ ಹಿಡಿದಳು, ದೊಡ್ಡ ಮಗನನ್ನ ಕರೆಸಿ ಊರಿಗೆ ತಿರುಗಿ ಬರುವ ವಿಚಾರದ ಬಗ್ಗೆ ಸ್ವಲ್ಪ ಯೋಚಿಸು ಎಂದರು, ಅದನ್ನೇ ಅವನು ತನ್ನ ಹೆಂಡತಿಗೆ ಹೇಳಿದ, ಬಣ್ಣದ ಬದುಕು ಕಂಡಿದ್ದ ಅವಳು ಕೇಳುವ ಸ್ತಿತಿಯಲ್ಲಿರಲಿಲ್ಲ, ಆ ಹಾಳು ಕೊಂಪೆಯಲ್ಲಿ ಯಾರು ಬಿದ್ದು ಸಾಯುತ್ತಾರೆ ಬೇಕಿದ್ದರೆ ಅವರನ್ನೇ ಬರಹೇಳಿ ಇಲ್ಲಿಗೆ ಎಂದಳು, ಅವನಿಗೂ ಯಾಕೋ ಇದು ಸರಿಯೆನ್ನಿಸಿ ಅಪ್ಪ ಅಮ್ಮನಿಗೆ ಹೇಳಿದನು, ಸ್ವಲ್ಪ ಸಮಯ ಹೋಗಿ ಬಂದರೆ ಎಲ್ಲಾ ಸರಿಯಾಗಬಹುದೇನೋ ಎಂದರಿತು ಅವರು ಹೊರಟರು, ಸೊಸೆಯು ಬಾಯಿಮಾತಿಗೆ ಬರಹೇಳಿ ಅಂದಿದ್ದಳೆ ವಿನಹ ಅವರು ಬರುವವರೆನ್ನುವ ನಿರೀಕ್ಷೆಯಿರಲಿಲ್ಲ, ಒಂದೆರಡು ದಿನ ಚೆನ್ನಾಗಿ ನೋಡಿಕೊಂಡು ಆಮೇಲೆ ಉದಾಸೀನ ತಾಳಲು ಶುರುಮಾಡಿದಳು, ಸ್ವಲ್ಪ ದಿನ ಮಗನ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದ ಇವರು ಆಮೇಲೆ ಊರಿನ ಕಡೆಗೆ ಹೊರಟು ನಿಂತರು, ಊರಿಗೆ ತಿರುಗಿ ಬರುವಂತೆ ಅವನಿಗೆ ಹೇಳಿದರು, ಅವನ ಮೌನವೇ ಅವರ ಪ್ರಶ್ನೆಗೆ ಉತ್ತರವಾಗಿತ್ತು, ತಾನೊಂದು ಬಗೆದರೆ ದೈವವೊಂದು....ಅಂದುಕೊಂಡು, ಬಸ್ಸಿನಲ್ಲಿ ಊರಿಗೆ ಹಿಂದಿರುವಾಗ ಇರುವ ಆಸ್ತಿಯನ್ನೆಲ್ಲಾ ಅಣ್ಣ ತಮ್ಮಂದಿರಿಗೆ ಮಾರಬೇಕೆಂಬ ನಿರ್ಧಾರ , ಅವರಾದರೂ ನೋಡಿಕೊಂಡರೆ ತಲತಲಾಂತರದಿಂದ ಒಕ್ಕಲುತನವನ್ನೇ ಮಾಡಿಕೊಂಡು ಬಂದಿದ್ದ ಹಿರಿಯರ ಆತ್ಮಕ್ಕೆ ಶಾಂತಿಯಾದರೂ ಸಿಗುತ್ತದೆ ಅನ್ನುವ ಸಮಾಧಾನ, ಬಂದ ದುಡ್ಡನ್ನು ಇಬ್ಬರೂ ಮಕ್ಕಳಿಗೆ ಕೊಟ್ಟು ತಮಗೊಂದಿಷ್ಟನ್ನು ಇಟ್ಟುಕೊಳ್ಳುವ ನಿಶ್ಚಯ, ಊರಿಗೆ ಬಂದು ಮನೆಯ ಬಳಿ ಬರುತ್ತಿದ್ದಂತೆ ಅಲ್ಲಿ ಏನೋ ಗೌಜು, ನೋಡಿದರೆ ಕಿರಿಯ ಮಗ, ಕುಟುಂಬ ಸಮೇತ ಊರಿಗೆ ಬಂದು ಇಲ್ಲೇ ಆಸ್ತಿಯನ್ನು ನೋಡಿಕೊಂಡು ವೈದ್ಯಕೀಯ ಸೇವೆ ಮಾಡುವ ಅದಮ್ಯ ಬಯಕೆ, ಅಮ್ಮನಿಗೋ ಕಳೆದುಹೋದ ಭಾವಗಳೆಲ್ಲಾ ಮರಳಿಬಂದ ಅನುಭವ.
Rating
Comments
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೩
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೩
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೩
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೩