ಬ್ರಿಗೇಡ್ ರೋಡಿನಲ್ಲಿ ಕಂಡವಳು

ಬ್ರಿಗೇಡ್ ರೋಡಿನಲ್ಲಿ ಕಂಡವಳು

ಕವನ
ಡೆನಿಮ್ ಜೀನ್ಸು ಒರಟಾಗಿ ಕಟ್ಟಿದ ಕೂದಲು ತುರುಬದಲ್ಲೊಂದು ಹೆಚ್ ಬಿ ಪೆನ್ಸಿಲ್ಲು ಮುಂಗೈಗೆ ಬಂತು ಹೇರ್ ಬ್ಯಾಂಡು ಎಲ್ಲಾ ಅದಲು ಬದಲು ಕಂಚಿಕದಲು. ಆದರೂ ನಂಬಿಕೆಯಿದೆ: ಜೀನ್ಸು ಇಷ್ಟು ಬೇಗ ಕಳೆದುಹೋಗುವ ಛಾನ್ಸೇ ಇಲ್ಲ. - ಕಾಫಿಡೇನಲ್ಲಿ ವೀಕೆಂಡಿನ ಕಲರವ ಟೀಶರ್ಟ್ ಬರಹ ತಿವಿದು ಹೇಳುತ್ತಿದೆ: ‘who cares?’ ಕಪ್ಪಿನಲ್ಲಿ ಹೃದಯ ಚಿತ್ತಾರದ ಬಿಂಬ ಸ್ವಾದ ಮಾತ್ರ ವಗರು ವಗರು ಈಗ ಬಂತು ಇದೋ ಬಂತು ಸಿಹಿ ಅನ್ನುವದರೊಳಗಾಗಿ ಕಾಫಿ ಮುಗಿದಿತ್ತು. ಅಷ್ಟಾದರೂ ನಂಬಿಕೆಯಿದೆ: ಜೀನ್ಸು ಇಷ್ಟು ಬೇಗ ಕಳೆದುಹೋಗುವ ಛಾನ್ಸೇ ಇಲ್ಲ. - ಎದೆಯನ್ನು ಸುತ್ತುವರೆದ ಎಲುಬಿನ ಹಂದರ ಮತ್ತು ತಾವರೆ ಎಲೆಯ ಮೇಲಣ ಬಿಂದು- ಎರಡರದ್ದೂ ಒಂದೇ ಅಚಲ ನಿರ್ಧಾರ: ಅಂಟು,ಅಂಟದಿರು. ಇನ್ನಾದರೂ ನಂಬಿಕೆಯಿದೆ: ಜೀನ್ಸು ಇಷ್ಟು ಬೇಗ ಕಳೆದುಹೋಗುವ ಛಾನ್ಸೇ ಇಲ್ಲ. - ದ್ರೌಪದಿಯಾಗುವ ತವಕವಿತ್ತು ಸ್ವಯಂವರದಲ್ಲಿ ಮಾತ್ರ ಶಬರಿಯಾಗೇ ಉಳಿದಳು ಇತ್ತ ಜಾನಕಿಯಾಗದೆ ಅತ್ತ ಮೇನಕೆಯಾಗದೆ ಬರೀ ಅಹಲ್ಯೆಯ ಕಲ್ಲಾದಳು. ಇಲ್ಲೀಗ ರಾಮನಿಲ್ಲ ಶಾಪಮುಕ್ತಿಯ ಸ್ಪರ್ಶವಿಲ್ಲ. ಇಷ್ಟಾದರೂ ಪ್ರತಿಸಂಜೆ ಆಕೆಯ ಕೋಣೆಯಿಂದ ತಂಬೂರಿ ಮೀಟಿದ ನಾದ ತೇಲಿಬರುತ್ತದೆ: "ಚಿಂತೆಯಾತಕೋ ಬಯಲ ಭ್ರಾಂತಿಯಾತಕೋ.." - ಎಷ್ಟಾದರೂ ಅಜ್ಜಿಯಿಂದ ಹರಿದು ಬಂದ ಜೀನ್ಸು- ಹಾಗೆಲ್ಲ ಕಳೆದುಹೋಗುವ ಛಾನ್ಸೇ ಇಲ್ಲ! --

Comments