ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
ಬರೆಯುವ ಮುಂಚೆ ಕೆಲವು ಪದಗಳನ್ನು ರಾತ್ರಿಯಿಡೀ ನೆನೆಹಾಕಿಟ್ಟು ಮರುದಿನ ನುಣ್ಣಗೆ ರುಬ್ಬಿ ತಯಾರು ಮಾಡಿಡಬೇಕಾಗುತ್ತದೆ. ಇನ್ನು ಕೆಲವು ಪದಗಳನ್ನು, ಬೇಕೆಂದಾದರೆ ಒಂದು ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಬಹುದು. ಇಲ್ಲ ಕೆಲವೊಮ್ಮೆ ಹಾಗೆಯೇ ಉಪಯೋಗಿಸಬಹುದು. ಮೊಳಕೆ ಬರಿಸಿದರೆ ಪೌಷ್ಟಿಕವಾಗಿದ್ದು ಆರೋಗ್ಯಕ್ಕೆ ಒಳ್ಳೆಯದು ಎನ್ನುವವರಿದ್ದಾರೆ. ಆದರೆ ಅದು ಹಾಗೇ ಆಗಬೇಕೆಂದೇನೂ ಇಲ್ಲ. ಮೊಳಕೆಯೊಡೆದ ಪದದ ರುಚಿ ನಿಮಗೆ ಹಿಡಿಸದಿದ್ದರೆ ಹಾಗೇ ಉಪಯೋಗಿಸಲೂ ಬಹುದು. ಪೌಷ್ಟಿಕದಷ್ಟೇ ರುಚಿಯೂ ಮುಖ್ಯವಲ್ಲವೆ?
ಇನ್ನು ಕೆಲವು ಪದಗಳು ಚೆನ್ನಾಗಿ ಬಲಿತಿದ್ದರೆ ಒಳ್ಳೆಯದು. ಜಗಿದಾಗ ಬಾಯಿಗೆ ಸಿಕ್ಕುವಂತಿರಬೇಕು. ಅಂಥ ಪದಗಳನ್ನು ಚೆನ್ನಾಗಿ ಬೇಯಿಸಬೇಕಾಗಬಹುದು. ಕೆಲವೊಮ್ಮೆ ಉಪ್ಪುಖಾರ ಚೆನ್ನಾಗಿ ಹಾಕಿ ಬಲಿತ ಪದಗಳನ್ನು ಬೇಯಿಸಿದರೆ ಗಮ್ಮತ್ತಾಗಿರುತ್ತದೆ. ಇನ್ನು ಕೆಲವು ಪದಗಳು ಎಳೆಯದಾಗಿದ್ದರೆ ತುಂಬಾ ರುಚಿ. ಅವುಗಳನ್ನು ಬೇಯಿಸಲೇಬೇಕಾಗಿಲ್ಲ. ಬಿಸಿನೀರಿನಲ್ಲಿ ಒಂದಷ್ಟು ಹೊತ್ತು ಮುಳಿಗಿಸಿಟ್ಟು ತೆಗೆದು ಬಿಡಬಹುದು. ಆಗ ಆ ಪದಗಳ ಒಳಗಿನ ಪರಿಮಳ ಇನ್ನೂ ಚೆನ್ನಾಗಿ ಮೂಗಿಗೆ ಅಡರುತ್ತದೆ. ಎಳೆಯ ಪದಗಳನ್ನು ಹಾಗೆ ಉಪಯೋಗಿಸುವಾಗ ಹೆಚ್ಚು ಉಪ್ಪುಖಾರಹುಳಿ ಬೇಡ, ಅದು ಪದದ ನಿಜ ಸೊಗಡನ್ನು ಮುಚ್ಚಿಬಿಡುತ್ತದೆ ಎಂಬ ಅಪವಾದವೂ ಇದೆ.
ಇನ್ನು ಪದಗಳನ್ನು ಹೆಚ್ಚುವಾಗ ಉದ್ದಕ್ಕೂ ಹೆಚ್ಚಬಹುದು, ಅಡ್ಡಕ್ಕೂ ಹೆಚ್ಚಬಹುದು. ಅದು ಅಲಂಕಾರಿಕ ಅಷ್ಟೆ ಅಂತ ಹೇಳುವವರು ಇದ್ದಾರೆ. ಆದರೆ, ಅದು ಪದದ ಮೂಲ ಸ್ವರೂಪದ ಮೇಲೆ ಅವಲಂಬಿತ ಅಂತ ನನಗನಿಸುವುದು. ಉದ್ದುದ್ದ ಪದವಾದರೆ, ಅಡ್ಡಕ್ಕೆ ಹೆಚ್ಚಿ, ದಪ್ಪ ದಪ್ಪ ಪದವಾದರೆ ಉದ್ದಕ್ಕೆ ಹೆಚ್ಚಬಹುದು. ಯಾರಿಗಾದರೂ ಸಿಟ್ಟು ಬರುವ ಮೊದಲೇ ಹೇಳಿಬಿಡುತ್ತೇನೆ, ದಪ್ಪ ಪದಗಳನ್ನು ಅಡ್ಡಕ್ಕೆ ಹೆಚ್ಚುವವರು ಇರುವಂತೆ, ಉದ್ದಕ್ಕಿರುವ ಪದಗಳನ್ನು ಉದ್ದಕ್ಕೆ ಹೆಚ್ಚುವವರೂ ಇದ್ದಾರೆ. ಒಟ್ಟಾರೆ ರುಚಿಯ ಮೇಲೆ ನಿಮ್ಮ ಗಮನವಿದ್ದು, ಯಾವುದು ಹೆಚ್ಚು ರುಚಿ ಕೊಡುತ್ತದೆ, ಯಾವುದರಿಂದ ಹೆಚ್ಚು ಜಗಿಯುವವರಿಗೆ ಸಂತೋಷಕೊಡುತ್ತದೆ ಎಂಬುದಷ್ಟೇ ಮುಖ್ಯ. ಹಾಗೇ ಪದಗಳನ್ನು ಜಜ್ಜಿ ಗುದ್ದಿ ಉಪಯೋಗಿಸುವುದೂ ಕೆಲವೊಮ್ಮೆ ತುಂಬ ಅನಿವಾರ್ಯ. ಅದನ್ನೂ ಗಮನದಲ್ಲಿಟ್ಟುಕೊಳ್ಳಬೇಕು.
ಪೇಟೆಯಿಂದ ತಂದು ತುಂಬಾ ದಿನವಾಗಿದ್ದರೆ ಪದಗಳು ಎಲ್ಲಾದರೂ ಒಳಗೆ ಕೊಳೆತಿದೆಯೋ ನೋಡಿ ಉಪಯೋಗಿಸುವುದು ಆರೋಗ್ಯಕ್ಕೆ ಕ್ಷೇಮಕರ. ಕೆಲವೊಮ್ಮೆ ಪದಗಳು ಮೇಲೆ ಚೆನ್ನಾಗಿಯೇ ಇರವಂತೆ ಗೋಚರಿಸಿದರೂ ಒಳಗೆ ಕೊಳೆತುಬಿಟ್ಟಿರುತ್ತದೆ. ಅಂಥ ಪದಗಳನ್ನು ಉಪಯೋಗಿಸಿಬಿಟ್ಟರೆ, ನಂತರ ಅಡ್ಡವಾಸನೆ ಬಂದು ಬಹಳ ಕಷ್ಟವೂ ಆಗುತ್ತದೆ.
ಇನ್ನು ಪದಗಳ ಬಣ್ಣಗಳ ಬಗ್ಗೆಯೂ ಸ್ವಲ್ಪ ಎಚ್ಚರಿಕೆ ಇರುವುದು ಒಳ್ಳೆಯದು. ಯಾಕೆಂದರೆ ಒಂದು ಪದಕ್ಕೆ ಇರುವ ಬಣ್ಣ ಎಷ್ಟೇ ಬೇಕೆಂದರೂ ಇನ್ನೊಂದು ಪದಕ್ಕೆ ಬರುವುದಿಲ್ಲ. ಅಥವಾ ಬರಲಿ ಎಂದು ಎಷ್ಟು ಕಷ್ಟಪಟ್ಟರೂ ಅದು ವ್ಯರ್ಥ. ಆಯಾ ಪದಗಳ ಬಣ್ಣಗಳು ಆಯಾ ಪದಗಳಿಗೇ ಹೆಚ್ಚು ಸೂಕ್ತ. ಆದರೆ ನೋಡಿ, ಕೆಲವರು ಒಂದು ಪದಕ್ಕೆ ಮತ್ತೊಂದು ಪದದ ಬಣ್ಣವನ್ನು ಬರುವಂತೆ ಕುದಿಸಿಯೋ, ಸುಟ್ಟೋ ಉಪಯೋಗಿಸುವುದೂ ಇದೆ. ಆದರೆ, ಅದಕ್ಕೆ ತುಂಬಾ ಧೈರ್ಯಬೇಕು. ಆಮೇಲೆ ಬರುವ ಆರೋಪಗಳನ್ನು ತಡೆದುಕೊಳ್ಳುವ ಎದೆಗಾರಿಕೆ ಬೇಕು. ಎದೆಗಾರಿಕೆಯಿದ್ದರೆ, ಹಾಗೆ ಬಣ್ಣಬದಲಾಯಿಸಿ ಪದಗಳನ್ನು ಉಪಯೋಗಿಸಬಹುದು.
ತುಂಬಾ ಹಸಿವಾದಾಗ ಪದಗಳು ಹೇಗಿದ್ದರೂ ಪರವಾಗಿಲ್ಲ ಎಂಬ ಒಂದು ವಾದವೂ ಇದೆ. ಅದರಲ್ಲಿ ತಿರುಳಿಲ್ಲ ಅನ್ನುವ ಹಾಗಿಲ್ಲ. ಆದರೆ ಪದಗಳು ಬರೇ ಹಸಿವಿಗೆ ಮಾತ್ರ ಎಂದು ತಿಳಿದುಬಿಟ್ಟರೆ ತಪ್ಪಾಗಿ ಬಿಡುತ್ತದೆ. ಪದಗಳು ಬೇರೆ ಬೇರೆ ರೀತಿಯಲ್ಲಿ ನಮಗೆ ಬೇಕಾಗುತ್ತದೆ. ಬರೇ ಹಸಿವೆ ಹಿಂಗಿಸುವುದಕ್ಕಷ್ಟೇ ಅಲ್ಲ.
ಪದಗಳ ಬಗ್ಗೆಗಿನ ಈ ಕಿರುಟಿಪ್ಪಣಿಯಿಂದ ಓದಿದವರಿಗೆ ಸ್ವಲ್ಪವಾದರೂ ಅನುಕೂಲವಾಗಬಹುದು ಎಂಬುದು ನನ್ನ ಎಣಿಕೆ.
Comments
Re: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
In reply to Re: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ by ASHOKKUMAR
Re: ಪದಗಳನ್ನು ಒಣಗಿಸಿ ಬಳಸಬಹುದಾ?
ಉ: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
In reply to ಉ: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ by kannadakanda
ಉ: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ