ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!
ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!
ಕಳೆದ ಭಾನುವಾರ, ಬೆಂಗಳೂರಿನ ಯವನಿಕಾ ಸಭಾಭವನದಲ್ಲಿ, ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವಿತ್ತು. ಸಭಿಕನಾಗಿ, ನಾನೂ ಆ ಸಮಾರಂಭದಲ್ಲಿ ಉಪಸ್ಥಿತನಿದ್ದೆ. ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರನ್ನು ತೀರ ಹತ್ತಿರದಿಂದ ಅರಿತಿದ್ದ ನನಗೆ ಅವರ ಮೇಲಿದ್ದ ಅಭಿಮಾನ, ಹೆಚ್ಚಿನ ನಿರೀಕ್ಷೆಗಳೊಂದಿಗೆ ಅಲ್ಲಿಗೆ ಕರೆದೊಯ್ದಿತ್ತು. ಆದರೆ, ಅಲ್ಲಿಂದ ಸಭೆ ಮುಗಿಯುವ ಮೊದಲೇ ಹೊರ ನಡೆದು ಬಂದ ನನ್ನ ಮನದಲ್ಲಿ, ನಿರಾಸೆ ಹಾಗೂ ಬೇಸರ ಮೂಡಿತ್ತು.
ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರನ್ನು ನೆನೆಸಿಕೊಂಡರೆ, ಅವರ ಜೊತೆ ಜೊತೆಗೇ ನೆನಪಾಗುವುದು ಎರಡು ವಿಷಯಗಳು. ಮೊದಲನೆಯದಾಗಿ ಪ್ರಜಾವಾಣಿ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗುತ್ತಿದ್ದ ಅವರ ಅಂಕಣ “ಸದನ ಸಮೀಕ್ಷೆ” ಹಾಗೂ ೧೯೮೦ರ ದಶಕದ ಮಧ್ಯಕಾಲದಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ, ಓದುಗರ ಒಡೆತನದ, “ಮುಂಗಾರು” ದಿನ ಪತ್ರಿಕೆ. ಶಾಸನ ಸಭೆಗಳು ನಡೆಯುವ ದಿನಗಳಲ್ಲಿ, ದಿನವಿಡೀ ಸದನದ ಪತ್ರಕರ್ತರ ಗ್ಯಾಲರಿಯಲ್ಲಿ ಕೂತು, ಅಲ್ಲಿನ ಆಗುಹೋಗುಗಳನ್ನು ಮೂಕ ಪ್ರೇಕ್ಷಕಕನಾಗಿ ವೀಕ್ಷಿಸಿ, ಸಾಯಂಕಾಲದ ನಂತರ ಪ್ರಜಾವಾಣಿಯ ಕಛೇರಿಗೆ ಮರಳಿ, ಅಂದಿನ ವರದಿಯನ್ನು ಬರೆದು ಒಪ್ಪಿಸಿ ಬರುವಾಗ ಕೆಲವೊಮ್ಮೆ ಮಧ್ಯರಾತ್ರಿ ಕಳೆದಿರುತ್ತಿತ್ತೇನೋ. ಸದನ ಸಮೀಕ್ಷೆಯಲ್ಲಿ ವಡ್ಡರ್ಸೆಯವರು, ರಾಜಕೀಯ ನಾಯಕರನ್ನು ಹೆಸರಿಸಲು ಬಳಸುತ್ತಿದ್ದ ಸಂಕ್ಷಿಪ್ತ ಪದಗಳು ಓದುಗರನ್ನು ಆಕರ್ಷಿಸುತ್ತಿದ್ದವು. ವಸ್ತುನಿಷ್ಠವಾದ ಹಾಗೂ ನಿಷ್ಟುರವಾದ ನೇರ ನುಡಿಯ ಸಮೀಕ್ಷೆ ಪ್ರಕಟವಾಗುತ್ತಿದ್ದ ಆ ದಿನಗಳಲ್ಲಿ, ವಡ್ಡರ್ಸೆಯವರು ಅಧಿಕಾರಾರೂಢ ಪಕ್ಷದ ಸದಸ್ಯರ ಹಾಗೂ ಮಂತ್ರಿಗಳ ಕೆಂಗಣ್ಣಿಗ ಗುರಿಯಾಗಿದ್ದರು. ಹಾಗಾಗಿ, ಅವರ ಮನೆಯಲ್ಲಿ ಹಲವಾರು ದಿನ ಪೊಲೀಸ್ ಬಂದೋಬಸ್ತು ಕೂಡ ಇತ್ತು. ಇಂದು ಅಂತಹ ನೇರ ನುಡಿಯ ಪತ್ರಕರ್ತರು ಎಷ್ಟಿದ್ದಾರೆ? ಎಲ್ಲಿದ್ದಾರೆ?
ಇನ್ನು ಮುಂಗಾರು ಪತ್ರಿಕೆಯ ಯಶೋಗಾಥೆಯನ್ನು ಅಥವಾ ದುರಂತವನ್ನು, ವಡ್ಡರ್ಸೆಯವರೊಂದಿಗೆ ಮುಂಗಾರು ಪತ್ರಿಕೆಯಲ್ಲಿ ದುಡಿದಿದ್ದ, ಪತ್ರಕರ್ತ ಚಿದಂಬರ ಬೈಕಂಪಾಡಿಯವರು ಬರೆದಿರುವ ಹೊತ್ತಗೆಯಲ್ಲಿ ವಿವರವಾಗಿ ಓದಬಹುದು.
ಅಂದು “ವರಶೆ” ಪ್ರತಿಷ್ಠಾನದ ಉದ್ಘಾಟನೆಯ ಔಪಚಾರಿಕ ಸಮಾರಂಭ ಐದು ನಿಮಿಷಗಳಲ್ಲಿ ಮುಗಿದು ಹೋಗಿತ್ತು. ಆ ನಂತರದ ಮತ್ತಷ್ಟೇ ನಿಮಿಷಗಳಲ್ಲಿ, ವಡ್ಡರ್ಸೆಯವರ ನೆನಪೂ ಅಲ್ಲಿಂದ ಮರೆಯಾಗಿ ಹೋಗಿತ್ತು. ಮುಂದೆ ಅಲ್ಲಿ ನಡೆದದ್ದು “ಹಿಂದುಳಿದ ವರ್ಗಗಳ ಸಮಸ್ಯೆಗಳು ಹಾಗೂ ಪರಿಹಾರಗಳು” ಎನ್ನುವ ವಿಷಯದ ಮೇಲಿನ ಭಾಷಣ ಹಾಗೂ ಸಂವಾದ.
ಮೊದಲು ಮಾತನಾಡಿದ, ಆಂಧ್ರಪ್ರದೇಶದಿಂದ ಬಂದಿದ್ದ, ಈ ದೇಶದ ಪ್ರಸಿದ್ಧ ದಲಿತ ಸಾಹಿತಿ ಹಾಗೂ ಬುದ್ಧಿಜೀವಿ ಎಂದು ಗುರುತಿಸಿಕೊಂಡಿರುವ, ಶ್ರೀ ಕಾಂಚ ಇಲಯ್ಯ ಅವರು, ತಮ್ಮ ಭಾಷಣದುದ್ದಕ್ಕೂ, ನನ್ನಂತಹ ತೆರೆದ ಮನಸ್ಸಿನ ಸಭಿಕರಿಗೆ ಅತೀವ ನಿರಾಸೆ ಉಂಟು ಮಾಡಿದರು. ಹಿಂದುಳಿದ ವರ್ಗಗಳ ಯಾವತ್ತೂ ಸಮಸ್ಯೆಗಳಿಗೆ, ಅವರನ್ನೆಲ್ಲಾ ಶತಮಾನಗಳಿಂದಲೂ ಹಿಂದೂ ಧರ್ಮ ವ್ಯವಸ್ಥೆಯಲ್ಲಿ, ಬ್ರಾಹ್ಮಣರ ಕಾಲುಬುಡದಲ್ಲಿ ಇಟ್ಟಿರುವುದೊಂದೇ ಕಾರಣವಾಗಿದೆ ಎನ್ನುವ ವೇದವಾಕ್ಯದೊಂದಿಗೆ ಆರಂಭಿಸಿ, ತಮ್ಮ ಭಾಷಣದುದ್ದಕ್ಕೂ ಬ್ರಾಹ್ಮಣ ಜಾತಿಯನ್ನೇ ವಿರೋಧಿಸುತ್ತಾ ಸುದೀರ್ಘವಾಗಿ ಮಾತನಾಡಿದರು. ಇದು ಅಲ್ಲಿದ್ದ ನನ್ನಂತಹ ಸಭಿಕರಿಗಷ್ಟೇ ಅಲ್ಲದೆ ವೇದಿಕೆಯಲ್ಲಿ ಅಂದು ಸಭಾಧ್ಯಕ್ಷರಾಗಿ ಆಸೀನರಾಗಿದ್ದ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಸುದರ್ಶನ್ ಅವರಿಗೂ ಕಿರಿಕಿರಿ ಉಂಟುಮಾಡಿತ್ತು. ಅವರ ಭಾಷಣ ಮುಗಿಯುವ ಹೊತ್ತಿಗಾಗಲೇ, ದುರ್ಬಲ ಮನಸ್ಸಿನ ಕೆಲವು ಸಭಿಕರ ಮನಗಳೊಳಗೆ, ಒಂದು ರೀತಿಯ ಬ್ರಾಹ್ಮಣ ವಿರೋಧಿಭಾವ ಚಿಗುರೊಡೆಯಲು ಕಾಲಕೂಡಿಬಂದಿತ್ತು. ಬುದ್ಧಿಜೀವಿ ಅನಿಸಿಕೊಂಡಿರುವ ಕಾಂಚ ಇಲಯ್ಯನವರು ತಮ್ಮ ಉದ್ದೇಶ ಏನು ಅನ್ನುವುದನ್ನು ಸಭಿಕರಿಗೆ ಮನದಟ್ಟುಮಾಡುವಲ್ಲಿ ವಿಫಲರಾಗುತ್ತಲೇ ಸಾಗಿದ್ದರು. ಹಿಂದುಳಿದ ವರ್ಗಗಳ ಮುಂದಿನ ನಡೆ ಬ್ರಾಹ್ಮಣರ ವಿರುದ್ಧ ಯುದ್ಧವನ್ನೇ ಸಾರುವುದು ಎನ್ನುವ ತಮ್ಮ ನಿಲುವನ್ನು ಅವರು ಅಂದು ಘಂಟಾಘೋಷವಾಗಿ ಸಾರಿ ಬಿಟ್ಟಿದ್ದರು. ರಾಮ ಮನೋಹರ್ ಲೋಹಿಯಾರನ್ನು ಬಾಯಿ ತುಂಬಾ ಜರೆದರು. ಅವರ ಕಹಿನುಡಿಗಳಿಗೆ ತುತ್ತಾಗದ ಮೆಲ್ವರ್ಗದ ನಾಯಕರುಗಳೇ ಉಳಿದಿರಲಿಲ್ಲ. ಎಲ್ಲರೂ ತಪ್ಪು. ಯಾರೂ ಸರಿಯಿಲ್ಲ. ಹಿಂದುಳಿದ ವರ್ಗಗಳ ನಾಯಕರೆನಿಸ್ಕೊಂಡ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮಾ ಫುಲೆ ಹಾಗೂ ತಾನು ಮಾತ್ರ ಸರಿ ಎನ್ನುವ ಅವರ ವಾದ ನನಗಂತೂ ಅಪ್ರಬುದ್ಧ ಅನಿಸಿತ್ತು. ಬ್ರಾಹ್ಮಣರು ಅರ್ಚಕರಾಗಿರುವ ದೇವಸ್ಥಾನಗಳಲ್ಲಿ, ತನ್ನಂತಹ ಹಿಂದುಳಿದ ವರ್ಗಗಳ ಜನರಿಗೆ ಅರ್ಚಕ ಹುದ್ದೆ ನೀಡಿ ಎಂದು ಬೇಡಿಕೆ ಇಟ್ಟ ಅವರ ಬಗ್ಗೆ ಹೇಸಿಗೆ ಆಗಿತ್ತು.ದೇವರ ಮತ್ತು ಮಾನವರ ನಡುವೆ ಮಧ್ಯವರ್ತಿಗಳಾಗಿರುವ ಪುರೋಹಿತಶಾಹಿ ವರ್ಗ ಎಲ್ಲಾ ಮತ ಧರ್ಮಗಳಲ್ಲೂ ಇದೆ. ಅದಕ್ಕೂ ಬ್ರಾಹ್ಮಣ ಜಾತಿಗೂ ಸಂಬಂಧ ಕಲ್ಪಿಸಿ ಜಾತಿ ನಿಂದನೆ ಮಾಡುತ್ತಾ ಸಾಗಿದರೆ ಏನಾದೀತು, ಹೇಳಿ. ಹಿಂದುಳಿದ ವರ್ಗದ ಜನಗಳ ಮನಸ್ಸು ಕಲುಷಿತಗೊಂಡಾವು, ಅಷ್ಟೇ. ಸಮಸ್ಯೆಯನ್ನು ಉದೇಶಿಸಿ ಪರಿಹಾರ ಮಾರ್ಗ ಹುಡುಕಬೇಕೇ ಹೊರತು, ವ್ಯಕ್ತಿಗಳನ್ನು ಜಾತಿಗಳನ್ನು ಉದ್ದೇಶಿಸಿಕೊಂಡು ಹುಡುಕಿದರೆ, ಪರಿಹಾರವೊಂದು ಮರೀಚಿಕೆ ಆದೀತು..
ಅವರ ಭಾಷಣ ಮುಗಿದ ಕೂಡಲೇ ಎದ್ದು ಹೊರನಡೆಯಬೇಕೆಂಬ ಇಚ್ಛೆ ಇದ್ದಿತ್ತಾದರೂ, ಮುಂಗಾರು ಪತ್ರಿಕೆಯಲ್ಲಿ ಶೆಟ್ಟರ ಸಹೋದ್ಯೋಗಿಗಳಾಗಿದ್ದ ದಿನೇಶ್ ಅಮೀನ್ ಮಟ್ಟು ಹಾಗೂ ಇಂದೂಧರ ಹೊನ್ನಾಪುರ ಅವರಿಂದ ಶೆಟ್ಟರ ಬಗ್ಗೆ ಬರಬಹುದಾದ ಮಾತುಗಳ ನಿರೀಕ್ಷೆ ಇತ್ತು ನನಗೆ. ಹಾಗಾಗಿ ಕೂತು ಬಿಟ್ಟೆ. ದಿನೇಶ ಅಮೀನ್ ನನ್ನ ನಿರೀಕ್ಷೆಯಂತೆ ಶೆಟ್ಟರ ಬಗ್ಗೆ ಮನ ಮುಟ್ಟುವಂತೆ ಮಾತನಾಡಿ, ತನ್ನ ಇಂದಿನ ಸ್ಥಿತಿಗತಿಗೆ ಕಾರಣೀಭೂತರಾದ ಶೆಟ್ಟರನ್ನು ನೆನೆದು ಶ್ರದ್ಧಾಂಜಲಿ ಅರ್ಪಿಸಿದರು. ತಮ್ಮ ಮಾತನ್ನು ಮುಂದುವರಿಸುತ್ತಾ, ಕಾಂಚ ಇಲಯ್ಯನವರು ಹುಟ್ಟುಹಾಕಿದ್ದ ಕ್ರಾಂತಿಯ ವಾತಾವರಣವನ್ನು ಸಾಕಷ್ಟು ಶಾಂತಗೊಳಿಸುವಲ್ಲಿ ಸಫಲರಾದರು. ಮಧ್ಯವರ್ತಿಗಳು ಬೇಡವಾದರೆ, ಬ್ರಾಹ್ಮಣರು ಅರ್ಚಕರಾಗಿರುವ ದೇವಸ್ಥಾನಗಳನ್ನು ಬಹಿಷ್ಕರಿಸಿ, ಅವರ ದೇವಸ್ಥಾನಗಳಲ್ಲಿ ಅರ್ಚಕ ಹುದ್ದೆ ನೀಡಿ ಎಂಬ ಬೇಡಿಕೆ ಇಡುವ ಅಗತ್ಯ ಏನಿದೆ ಎಂದು ಕೇಳುತ್ತಾ, ಕಾಂಚ ಇಲಯ್ಯನವರ ಮಾತುಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಅಲ್ಲಿಗೆ ನಮ್ಮೀರ್ವರಿಗೂ ಸ್ವಲ್ಪ ಸಮಾಧಾನ ಆಯ್ತು. ಅಷ್ಟು ಸಾಕು ಎಂದು ಅಲ್ಲಿಂದ ಎದ್ದು ಬಂದೆವು.
ದಿನೇಶ್ ಅಮೀನರ ಮಾತುಗಳು ನನಗೆ ಸಮಾಧಾನ ನೀಡಲು ನನ್ನದೇ ಆದ ಕಾರಣಗಳಿವೆ. ಅದೇನೆಂದರೆ ಜೀವನದಲ್ಲಿ ನಾನು ತಾಳಿರುವ ನಿಲುವು ಹಾಗೂ ಪಾಲಿಸಿಕೊಂಡು ಬಂದಿರುವ ನನ್ನದೇ ಆದ ತತ್ವವೂ ಅದೇ ಆಗಿದೆ. ನನಗೆ ಒಪ್ಪಿಗೆ ಇಲ್ಲವಾದರೆ, ದೂರ ಇದ್ದು ಬಿಡೋದು ಅಷ್ಟೇ. ಮೂರ್ತಿ ಪೂಜೆ, ಇನ್ನಿತರ ಯಾವುದೇ ಪೂಜೆಯನ್ನು ಒಪ್ಪದ ನಾನು ದೇವಸ್ಥಾನಗಳಿಗೆ ದೇವರನ್ನು ಅರಸುತ್ತಾ ಭೇಟಿ ನೀಡಿ ವರ್ಷಗಳು ಬಹುಷಃ ನಲತ್ತರ ಮೇಲಾಗಿವೆ. ದೇವರ ಮತ್ತು ನನ್ನ ನಡುವೆ ಯಾವುದೇ ಮಧ್ಯವರ್ತಿಗಳನ್ನು ನಾನು ಒಪ್ಪುವುದಿಲ್ಲ. ಮಂತ್ರ, ಪೂಜೆ, ಹವನ ಹೋಮಗಳಿಗೆ ನನ್ನ ಮನ ಒಪ್ಪುವುದಿಲ್ಲ. ಪ್ರಾಥಮಿಕ ಶಾಲಾದಿನಗಳಲ್ಲಿ ಓದಿದ್ದ, ಮಾತಾಪಿತರುಗಳೇ ಈ ಭೂಮಿಯ ಮೇಲಿನ ದೇವರುಗಳು, ದೇವರು ಸರ್ವಂತರ್ಯಾಮಿ ಮತ್ತು ಪರೋಪಕಾರ ಹಾಗೂ ಧರ್ಮ ಬದ್ಧವಾಗಿ ನಾವು ನಿರ್ವಹಿಸುವ ಕರ್ತವ್ಯಗಳೇ ಆ ದೇವರಿಗೆ ಸಲ್ಲಿಸುವ ಪೂಜೆಯಾಗಿದೆ, ಎನ್ನುವ ಮಾತುಗಳನ್ನು, ಪೂರ್ತಿಯಾಗಿ ನಂಬಿ ಅದರಂತೆಯೇ ಬಾಳಿಕೊಂಡು ಬಂದವನು ನಾನು. ಕಷ್ಟ ಬಂದಾಗ ದೇವರನ್ನು ನಾನು ದೂಷಿಸುವುದಿಲ್ಲ. ನನ್ನ ಕಷ್ಟ ಸುಖಗಳಿಗೆ ನನ್ನ ಕರ್ಮವೇ ಕಾರಣ ಎಂದು ದೃಢವಾಗಿ ನಂಬಿರುವವನು ನಾನು.
ಈ ಪ್ರತಿಷ್ಠಾನದ ಬಗ್ಗೆ ಕೆಲವು ಒಳ್ಳೆಯ ಅಂಶಗಳಿವೆ. ಈ ಪ್ರತಿಷ್ಠಾನ ಸಾರ್ವಜನಿಕರಿಂದ ಅಥವಾ ಸರಕಾರ ಅಥವಾ ಖಾಸಗಿ ಸಂಸ್ಥೆಗಳಿಂದ ಯಾವುದೇ ದೇಣಿಗೆಯನ್ನು ಸ್ವೀಕರಿಸುವುದಿಲ್ಲ. ಬದಲಾಗಿ, ವಡ್ಡರ್ಸೆಯವರ ಕೃತಿಗಳನ್ನು ಮುದ್ರಿಸಿ ಮಾರಾಟ ಮಾಡುವುದರಿಂದ ಗಳಿಸುವ ಧನ ಹಾಗೂ ಅವರ ಮೂರು ಗಂಡು ಮಕ್ಕಳು ತಮ್ಮ ನ್ಯಾಯಸಮ್ಮತವಾದ ಆದಾಯದಿಂದ ನೀಡುವ ದೇಣಿಗೆಯನ್ನು ಮಾತ್ರ ಸ್ವೀಕರಿಸಿ ನಡೆಸಲ್ಪಡುವ ಉತ್ತಮ ಉದ್ದೇಶವನ್ನು ಹೊಂದಿದೆ. ವಡ್ಡರ್ಸೆಯವರ ಮೂರು ಗಂಡು ಮಕ್ಕಳೂ ಸದ್ಯ ಹೊರದೇಶಗಳಲ್ಲಿ ಉನ್ನತ ವ್ಯಾಸಂಗ ಹಾಗೂ ನೌಕರಿಯಲ್ಲಿದ್ದಾರೆ. ಅವರಲ್ಲಾರೂ ಈ ಪ್ರತಿಷ್ಠಾನದ ಸದಸ್ಯರಾಗಿ ಇರುವುದಿಲ್ಲ. ವಡ್ಡರ್ಸೆಯವರೊಂದಿಗೆ ಗುರುತಿಸಿ ಕೊಂಡಿದ್ದ, ಡಾ ಪುಟ್ಟಸ್ವಾಮಿ, ದಿನೇಶ ಅಮೀನರಂತಹ ಹಲವು ಪ್ರತಿಷ್ಠಿತ ವ್ಯಕ್ತಿಗಳಷ್ಟೇ ಅಲ್ಲಿ ಇರುತ್ತಾರೆ.
ಆದರೆ, ಪ್ರತಿಷ್ಠಾನ ಕೇವಲ ಬ್ರಾಹ್ಮಣ ವಿರೋಧಿ ನಿಲುವಿಗೇ ಅಂಟಿಕೊಂಡು ಬಿಟ್ಟರೆ, ಬರಿಯ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೇ ಜೋತುಹಾಕಿಕೊಂಡು ಬಿಟ್ಟರೆ, ಮುಂದಿನ ದಿನಗಳಲ್ಲಿ, ಒಂದು ರೀತಿಯ ಸಾಮಾಜಿಕ ಧ್ರುವೀಕರಣಕ್ಕೆ ಹಾಗೂ ಯುವಜನತೆಯ ಮಾನಸಿಕ ಗೊಂದಲಕ್ಕೆ ಕಾರಣವಾದೀತೇ ಎನ್ನುವ ಅನುಮಾನ ಇದ್ದೇ ಇದೆ. ಆ ದಿಟ್ಟ, ನೇರ ನುಡಿಯ ವಡ್ಡರ್ಸೆ ರಘುರಾಮ ಶೆಟ್ಟರ ನೆನಪು ಕೇವಲ ಕೆಲವು ಸಮಾಜ ವಿರೋಧಿ ವ್ಯಕ್ತಿಗಳ ಕೈಗೊಂಬೆಯಾಗಿ ಉಳಿದುಬಿಡಬಹುದೇನೋ ಎನ್ನುವ ಭಯ ನನಗೆ. ಅದರಿಂದಾಗಿ ಅಂದು ಒಂದು ರೀತಿಯ ನಿರಾಸೆ ಹಾಗೂ ಬೇಸರವಾಗಿತ್ತು. ಸಾಂಪ್ರದಾಯಿಕವಾಗಿ ಪ್ರೌಢಶಾಲಾ ಶಿಕ್ಷಣವನ್ನಷ್ಟೇ ಪಡೆದಿದ್ದ, ವಡ್ಡರ್ಸೆಯವರು ಕನ್ನಡ ಹಾಗೂ ಆಂಗ್ಲ ಭಾಷೆಗಳೆರಡರ ಮೇಲೂ ಹಿಡಿತ ಸಾಧಿಸಿ, ಆಂಗ್ಲದ ಡೆಕ್ಕನ್ ಹೆರಾಲ್ಡ್ ಹಾಗೂ ಕನ್ನಡದ ಪ್ರಜಾವಾಣಿ ಪತ್ರಿಕೆಗಳೆರಡರಲ್ಲೂ ದುಡಿದು ಪ್ರಸಿದ್ಧರಾಗಿದ್ದು ಅವರ ಕರ್ತವ್ಯ ನಿಷ್ಠೆ ಹಾಗೂ ಸಾಧನಾ ಮನೋಭಾವವನ್ನು ಬಿಂಬಿಸುತ್ತದೆ. ಅಂತಹ ವಡ್ದರ್ಸೆಯವರನ್ನು ಓರ್ವ ಧೀಮಂತ ಪತ್ರಕರ್ತನಾಗಿ ಗುರುತಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿ ಉಳಿಸಬೇಕಾದ ಆವಶ್ಯಕತೆ ಇದೆ. ಅದು ಬಿಟ್ಟು, ಹಿಂದುಳಿದ ಮತ್ತು ದಲಿತ ವರ್ಗಗಳ ಸಮಸ್ಯೆಗಳಿಗಷ್ಟೇ ಪ್ರತಿಷ್ಠಾನದ ಉದ್ದೇಶಗಳನ್ನು ಸೀಮಿತಗೊಳಿಸಿ, ವಡ್ಡರ್ಸೆ ಯವರನ್ನು ಓರ್ವ ಬ್ರಾಹ್ಮಣ ವಿರೋಧೀ ಖಳನಾಯಕನನ್ನಾಗಿ ಬಿಂಬಿಸಿ ಶಾಶ್ವತವಾಗಿ ಉಳಿಸಿಬಿಟ್ಟರೆ, ಅದಕ್ಕಿಂತ ದೊಡ್ಡ ದುರಂತ ಅಥವಾ ವಿಶ್ವಾಸಘಾತಕ ಕೆಲಸ ಇನ್ನೊಂದಿರದು!
ವೈಕುಂಠವಾಸಿಯಾಗಿರುವ ವಡ್ಡರ್ಸೆಯವರ ಆತ್ಮವೇ ಪ್ರತಿಷ್ಠಾನದ ಮುಂದಾಳುಗಳಿಗೆ ಮಾರ್ಗದರ್ಶನ ನೀಡುತ್ತಾ ಮುಂದುವರೆಸಲಿ ಎನ್ನುವುದಷ್ಟೇ ಈಗ ಈ ಮನದ ಆಶಯ!
*******
ಇದು ದಿನಾಂಕ ೧೭ ಮೇ ೨೦೧೨ ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ!
Comments
ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!
In reply to ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! by nanjunda
ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!
ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!
In reply to ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! by ಗಣೇಶ
ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!
In reply to ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! by kavinagaraj
ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!
In reply to ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! by ಗಣೇಶ
ಉ: ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!