ಅಪರ ಭಟ್ಟ - ಲಲಿತ ಪ್ರಬಂಧ

ಅಪರ ಭಟ್ಟ - ಲಲಿತ ಪ್ರಬಂಧ

ಬರಹ
ಅಪ್ಪಣ್ಣ ಭಟ್ಟರನ್ನು ಜನರು ಅಪರ ಭಟ್ಟರು ಎಂದೂ ಕರೆಯುತ್ತಿದ್ದರು. ಪ್ರೀತಿಯಿಂದ ಆ ರೀತಿ ಕರೆಯುತ್ತಿದ್ದರೋ ಏನೋ, ಆದರೂ ನನ್ನ ಪ್ರಕಾರ ಅಪ್ಪಣ್ಣ ಭಟ್ಟರು ಅಪರ ಕರ್ಮದಲ್ಲೇ ಜಾಸ್ತಿ ಸಂಪಾದಿಸುತ್ತಿದ್ದರಿಂದ ಮತ್ತು ಪೂರ್ವ ಪ್ರಯೋಗದ ಬಗ್ಗೆ ಜಾಸ್ತಿ ಒಲವು ಇಟ್ಟಿರದಿದ್ದರಿಂದ ಹಾಗೆನ್ನುತ್ತಿದರು ಎಂದು ತಿಳಿದಿದ್ದೇನೆ. ಇಲ್ಲಿ ಒಂದು ಸಣ್ಣ ಸ್ಪಷ್ಟೀಕರಣ ನೀಡಬಯಸುವೆ. ಅಪರ ಕರ್ಮ ಎಂದರೆ ವ್ಯಕ್ತಿ ಸತ್ತ ಮೇಲೆ ಹನ್ನೆರಡು ದಿನಗಳು ಮಾಡುವ ಅಂತ್ಯಕ್ರಿಯೆ. ವ್ಯಕ್ತಿ ಸತ್ತ ನಂತರ ಅವನ ಶವ ಸಂಸ್ಕಾರವಾದ ಬಳಿಕ ಸಿಗುವ ಅಸ್ತಿಯನ್ನು (ಬೂದಿ, ಮೂಳೆ) ನದಿಯಲ್ಲೋ ಅಥವಾ ಸಮುದ್ರದಲ್ಲೋ ಬಿಡುವರು. ನಂತರ ಆ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗದೇ ಅಲ್ಲೇ ಓಡಾಡುತ್ತಿದೆ ಎನ್ನುವ ನಂಬಿಕೆಯಿಂದ ಆ ಆತ್ಮವನ್ನು ಒಂದು ಕಲ್ಲಿಗೆ ಆವಾಹನೆ (ಆಹ್ವಾನೆ - ಕರೆಯುವುದು) ಮಾಡುವರು. ಆ ಕಲ್ಲನ್ನು ಒಂದು ಕಡೆ ಇಟ್ಟು ಅದೇ ಸ್ಥಳದಲ್ಲಿಯೇ ಐದನೆಯ ಅಥವಾ ಆರನೆಯ ದಿನದಿಂದ ಆ ಪ್ರೇತಾತ್ಮಕ್ಕೆ ಶಾಂತಿ ದೊರಕಿಸಲು, ಮತ್ತು ದೇವ ಸ್ಥಾನಕ್ಕೆ ಕಳುಹಿಸಲು ಪ್ರಾರ್ಥಿಸುವರು. ಅದನ್ನೇ ಅಪರ ಕರ್ಮ ಎನ್ನುವರು. ಹತ್ತನೆಯ ದಿನ ನೆಂಟರುಗಳೆಲ್ಲರೂ ಆ ಕಲ್ಲಿಗೆ ನೀರು ಹಾಕುವರು. ಇದನ್ನು ಧರ್ಮೋದಕೆ ಎನ್ನುವರು. ಈ ಕ್ರಿಯೆಯಿಂದ ತಮಗೂ ಆ ಪ್ರೇತಾತ್ಮಕ್ಕೂ ಸಂಬಂಧ ಕಳೆದುಕೊಳ್ಳುವರು. ಸಮಾಜದಲ್ಲಿ ಈ ಕಾರ್ಯ ನಡೆಯಲೇ ಬೇಕೆಂಬ ಮೂಢ ನಂಬಿಕೆ ಬಂದಿರುವ ಕಾರಣಕ್ಕೋ ಏನೋ ಈ ಕ್ರಿಯೆ ಮಾಡಿಸುವ ಪುರೋಹಿತರು (ಪುರದ ಹಿತ ಬಯಸುವವರು?) ಹೆಚ್ಚಾಗಿ ಹಣ ಸುಲಿಯುವವರು. ಇನ್ನು ಪೂರ್ವ ಪ್ರಯೋಗ ಎಂದರೆ ದೇವತಾ ಕಾರ್ಯ ಮತ್ತು ನಾಮಕರಣ, ಮುಂಜಿ, ಮದುವೆ ಇತ್ಯಾದಿಗಳು. ಇದನ್ನು ಮಾಡಿಸಲು ಬಹಳಷ್ಟು ಪುರೋಹಿತರು ಸಿಗುವರು. ಅಪರ ಭಟ್ಟರ ಹತ್ತಿರ ನೀವು ಹೋಗುತ್ತಿದ್ದಂತೆಯೇ ಅವರು ನಿಮ್ಮನ್ನು ಅಳೆದು ಸುರಿದು ನಿಮ್ಮ ಮುಖ ನೋಡಿಯೇ ಯಾವ ಕೆಲಸಕ್ಕೆ ಬಂದಿದ್ದೀರಿ (ಅಪ್ಪನ ಕರ್ಮವೋ ಅಮ್ಮನ ಕರ್ಮವೋ ಇತ್ಯಾದಿ), ಎಷ್ಟು ದಿನಗಳ ಕೆಲಸ ಎಂದು ಹೇಳುವೌ. ಹಾಗೇ ನಿಮ್ಮ ಜೇಬಿನಲ್ಲಿ ಎಷ್ಟು ಹಣವಿದೆ ಎಂದು ತಿಳಿಯುವ ಶಕ್ತಿ ಇವರಿಗಿದ್ದಿತು. ಇವರ ಕಮಾಯಿ ಬಹಳ ಸಮೃದ್ಧಿಯಾಗಿದ್ದಿತು. ಆದರೆ ಅದೇಕೋ ಇವರ ಮನೆಯಲ್ಲಿ ಏಳಿಗೆಯೇ ಇರಲಿಲ್ಲ. ಇದ್ದ ಒಬ್ಬನೇ ಮಗ ಮೊದ್ದು ಮೊದ್ದಾಗಿದ್ದ. ಅವನ ಹೆಸರು ಗುಂಡ. ಅವನಿಗೆ ಹದಿನಾರು ತುಂಬಲು ಎಲ್ಲರೂ ಅವನನ್ನು ಗುಂಡಾಭಟ್ಟ ಎಂದು ಕರೆಯುತ್ತಿದ್ದರು. ಅಷ್ಟು ಹೊತ್ತಿಗೆ ಅಪರ ಭಟ್ಟರಿಗೆ ವಯಸ್ಸಾಗಿ ಶ್ರಾದ್ಧದೂಟ ಜೀರ್ಣಿಸಿಕೊಳ್ಳಲೂ ಶಕ್ತಿ ಇರಲಿಲ್ಲ. ಅವರ ಕೆಲಸಗಳನ್ನೆಲ್ಲಾ ಶಿಷ್ಯ ಸುಬ್ಬಾಭಟ್ಟರಿಗೆ ವಹಿಸಿದ್ದರು. ಸುಬ್ಬಾಭಟ್ಟರು ಗುರುಗಳಿಗೆ ಆಗಾಗ ಕಾಣಿಕೆ ಸಲ್ಲಿಸುತ್ತಿದ್ದರೂ ತಮ್ಮ ವರಮಾನ ಕಡಿಮೆ ಆಯಿತೆಂದು ಆಲೋಚಿಸಿ, ತಮ್ಮ ಮಗನನ್ನು ಈ ಕಾರ್ಯಕ್ಕೆ ತಳ್ಳಲು ನಿರ್ಧರಿಸಿದರು. (ತಂದೆ ಇರುವವರು ಅಪರ ಮತ್ತು ಶ್ರಾದ್ಧ ಕರ್ಮಗಳನ್ನು ಮಾಡಿಸಬಾರದು). ಈಗ ವಿಷಯಕ್ಕೆ ಬರುತ್ತಾ ಒಂದು ಸಣ್ಣ ಘಟನೆಯನ್ನು ನಿಮ್ಮ ಮುಂದೆ ಇಡುತ್ತಿರುವೆ. ಮೊತ್ತ ಮೊದಲಾಗಿ ಅಪರ ಭಟ್ಟರು ಗುಂಡಾಭಟ್ಟರನ್ನು ಸುಬ್ಬಾಭಟ್ಟರೊಂದಿಗೆ ಒಂದು ಶ್ರಾದ್ಧಕ್ಕೆ ಅಪ್ರೆಂಟಿಸ್ ಆಗಿ ಕಳುಹಿಸಿದರು. ಗುಂಡಾ ಬಹಳ ಖುಷಿಯಿಂದಲೇ ಹೋದ. ಮಧ್ಯಾಹ್ನ ನಾಲ್ಕಕ್ಕೆ ಸರಿಯಾಗಿ ವಾಪಸ್ಸು ಬಂದ. ಅದೇಕೋ ಅವನ ಮುಖದಲ್ಲಿ ಕಳೆಯೇ ಇರಲಿಲ್ಲ. ಅಪರ ಭಟ್ಟರು ಮತ್ತು ಅವರ ಮಗನ ನಡುವೆ ನಡೆದ ಸಂವಾದ ಹೀಗಿದೆ. ಯಾಕೋ? ಸುಬ್ಬ ಸರಿಯಾಗಿ ನಿನಗೆ ಸಂಭಾವನೆ ಕೊಡಿಸಲಿಲ್ವಾ? ಮಾಮ ಸಂಭಾವನೆ ೫ ರೂಪಾಯಿ ಕೊಡಿಸಿದ್ರು. ಅದನ್ನು ನಿಂಗೆ ಕೊಡಲ್ಲ. ಇವತ್ತು ಅಣ್ಣಾವ್ರ ಪಿಚ್ಚರ್ ನೋಡ್ತೀನಿ. ಆಂ! ಅಣ್ಣಾವ್ರ ಪಿಚ್ಚರ್ರಾ. ಕೂತ್ಕೊಂಡು ಸರಿಯಾಗಿ ಸಂಧ್ಯಾವಂದನೆ ಮಾಡೋಕ್ಕೆ ಬರೋಲ್ಲ. ಇನ್ನೂ ದುಡಿಯೋದು ಅಂದ್ರೇನೂ ಅನ್ನೋದೇ ಗೊತ್ತಿಲ್ಲ. ಪಿಚ್ಚರ್ರಂತೆ ಪಿಚ್ಚರ್. ಅದಿರ್ಲಿ ಮತ್ತ್ ಏನಾಯ್ತು, ಯಾಕೆ ಉಟ ಮಾಡ್ಲಿಲ್ಲ? ಅಡುಗೆ ಚೆನ್ನಾಗಿರ್ಲಿಲ್ವಾ? ಹಾಗೇನೂ ಇಲ್ಲ ಅದುಗೆಯೇನೋ ಚೆನ್ನಾಗಿತ್ತು, ಅನ್ಸತ್ತೆ. ಏನು ಅನ್ಸತ್ತೆ ಅಂದ್ರೆ, ಊಟ ಮಾಡಿದ್ಯೋ ಇಲ್ವೋ? ಯಾಕೋ ಪೆದ್ದ ಮುಂಡೇದೇ. ಮನೆಯಲ್ಲಿ ಮಾತ್ರ ಮೂರು ಸೇರು ಅನ್ನ ಕತ್ತರಿಸ್ತೀಯ. ಅಲ್ಲಿ ತಿನ್ನಕ್ಕೆ ನಿನಗೇನಾಗಿತ್ತು ರೋಗ. ಬಾಯಲ್ಯಾಕೋ ರುಚಿಯೇ ಇರ್ಲಿಲ್ಲ. ಹೋಗ್ಲಿ ಅದೇನಾಯ್ತೋ ಸರಿಯಾಗಿ ಹೇಳು. ನಾನೂ ಮಾಮ ಜೊತೆ ಕೂತಿದ್ನಾ. ಆಗ ಮಾಮ ತರ್ಪಣ ಬಿಡಿಸ್ತಿದ್ರು. ಹೊಟ್ಟೆ ಬಹಳ ಹಸೀತಿತ್ತು. ಅಲ್ಲೇ ಬಾಗಿಲ ಹತ್ರ ಬಾಳೆ‍ಎಲೆ ಮೇಲೆ ಅದೇನೋ ಹಸುರಾಗಿರೋದು ಇಟ್ಟಿದ್ರು. ಹಳದಿ ಲಾಡು ನೋಡಿದ್ದೆ. ಆದ್ರೆ ಇದ್ಯಾವುದಿದು ಹಸುರು ಲಾಡು, ಅಂತ ಯಾರಿಗೂ ಕಾಣದೇ ಬಾಯಿಗೆ ಹಾಕಿಕೊಂಡೆ, ಅಷ್ಟೇ ವಾಂತಿ ಬಂದಿತ್ತು. ಆದರೂ ನಿನ್ನ ಮಗನಲ್ವಾ. ವಾಂತಿ ಮಾಡ್ಕೊಂಡ್ರೆ ಎಲ್ಲರೆದುರ್ಗೆ ಅವಮಾನ ಅಂತ ಹಾಗೇ ನುಂಗಿಬಿಟ್ಟೆ. ಯಾಕೋ ಬಾಯಲ್ಲಿ ರುಚಿಯೇ ಇರ್ಲಿಲ್ಲ. ಈ ಪೆದ್ದ ಗುಂಡ ತಿಂದದ್ದು ಏನು ಗೊತ್ತೇ? ಸಗಣಿ ಉಂಡೆ.