ಸಾವು

ಸಾವು

ಬರಹ

(ನಮ್ಮ ಹೊಳೆನರಸೀಪುರ ಮಂಜುನಾಥ್ ಅವರು ತೋಡಿಕೊಂಡ `ಸಾವುಗಳ ಕಥೆಯ 2 ಭಾಗ'ಗಳನ್ನೂ ಓದಿ ನೆನಪಾಗಿ, 1997 ರಲ್ಲಿ ನಾನು ಬರೆದಿದ್ದ ಈ ಕವನವನ್ನು ಅವರ ತಾಯಿ ಹಾಗೂ ಗೆಳೆಯ-ಗೆಳತಿಯರ ಆತ್ಮಕ್ಕೆ ಶಾಂತಿ ಕೋರುತ್ತಾ ಸಮರ್ಪಿಸುತ್ತಿದ್ದೇನೆ-ಲೇಖಕ)


ಸಾವು

(ಇದು ನಾನು 1997 ಮಾರ್ಚ್ ನಲ್ಲಿ ಬರೆದ ಅಪ್ರಕಟಿತ ಕವನ)


ಹುಟ್ಟೆಂಬ ಗೆಳೆಯನಾ ಮುಂದೆ ಓಡಲು ಬಿಟ್ಟು
ಹಿಂದೆಯೇ ನೆರಳಾಗಿ ಬೀಸು ಹೆಜ್ಜೆಯನಿಟ್ಟು
ನಿಲ್ಲದೇ ಸಾಗುತಿಹ ನಿಃಶಬ್ದ ಸಾವೇ
ಎಲ್ಲಯ್ಯ ನಿನ್ನ ನಿಲ್ದಾಣ!?


ಗರ್ಭ ಗುಡಿಯಲಿ ಜ್ಯೋತಿ ಅವ್ಯಕ್ತ ಬೆಳಗಿ
ತಾಮಸದಿ ಗೆಳೆಯನಾ ಹಿಂದೆಯೇ ಅಡಗಿ
`ರಕ್ತ ಸಂಬಂಧಿ'ಯ ಬೆನ್ನ ಹಿಂದೆಯೇ ಹೊರ ಬಂದು
ಎಲ್ಲಯ್ಯ ಕಾಯುತಿರುವೆ.....!?


ಯಾವ ಸೀಮೆಯೋ ನಿಂದು; ಎಲ್ಲಿ ಹೊಂಚುವೆ ಕುಂತು?
ಎನಿತು ಬೀಸುವೆ ನೀನು ನಿನ್ನ ಬಲೆಯಾ
ಜಗವ ಸುತ್ತುವ ನಿನಗೆ ಬಿಡುವೆ ಇಲ್ಲವೇ ಕಡೆಗೆ
ಎಲ್ಲಯ್ಯ ನಿನ್ನ ವಾಸ!?


ಜೀವಿಗಳ ನೆರಳಾಗಿ ಮುಂಜಾನೆ ಮೈಚಾಚಿ;
ನಡು ನೆತ್ತಿ ಮಧ್ಯಾಹ್ನ ಕಾಲ ಬುಡಕೇ ಬಂದು
ಮುಸ್ಸಂಜೆ ಬೆಳಕಿಗೆ ದಿಕ್ಕು ಬದಲಿಸಿ ತಿರುಗಿ
ಎಲ್ಲಯ್ಯ ಲೀನವಾದೆ....!?


ಹಸಿದಾಗ ಮಾತ್ರವೇ ಎಲ್ಲಿಯೋ ಬಂದೆರಗಿ
ಸಿದ್ಧ `ಮಿಕ'ವನ್ನಷ್ಟೆ ಬೇಟೆಯಾಡುತಲಿದ್ದೆ
ಈಗೀಗ ಹೊಂಚುತಿಹೆ ಮನೆ ಹಿತ್ತಲಲ್ಲೇ
ಏನಯ್ಯ ನಿನ್ನ ಲೀಲೆ...!


ನಿನ್ನ ಸೆಳೆಯಲು ಇಲ್ಲಿ ಹಲವಾರು ವಾಸನೆ
ಪಂಚ ಭೂತಗಳಲ್ಲಿ ದೇಹದಣುವಣುವಲ್ಲಿ
ತುಂಬಿ ತುಳುಕಾಡುತಿದೆ ಕೊಡ ಚೆಲ್ಲುವಷ್ಟು
ಇಲ್ಲಯ್ಯ ನಿನ್ನ ತಪ್ಪು


ತಳಿರು ತೋರಣಗಳಿಲ್ಲ; ಸ್ವಾಗತಿಸುವವರಾರಿಲ್ಲ
ಅನಿವಾರ್ಯದಾ `ಅತಿಥಿ'; ಮಾಡುವೆ ನಮ್ಮ `ತಿಥಿ'
`ಗೆಳೆಯ'ನಾ ತಿಂದುಂಡು `ಬಾಳ' ಎಲೆ ಎಸೆಯಲು
ಎಲ್ಲಿದೆಯೋ ನಿನ್ನ ತಿಪ್ಪೆ.....!?