ಇರಿ ದೂರ

ಇರಿ ದೂರ

ಕವನ

ಮುನ್ನಡೆಯುತ್ತಿರುವಾಗ
ಕತ್ತಲೆಯ ಸೀಳಿ
ಬೆಂದವರ ಬಂಧುವಾಗಬಯಸಿ
ನೆರಳುಗಳೇ ಆವರಿಸದಿರಿ ನನ್ನ

ಬಿಸಿ ರಕ್ತದ ಬೆವರ ಹನಿಯಲಿ
ಹಸಿರಾಗ ಬಯಸಿ ನೆಲವ
ಹೂದೋಟವನ್ನರಸಿ ನಡೆಯುತ್ತಿರುವಾಗ
ನೆರಳುಗಳೇ ಆವರಿಸದಿರಿ ನನ್ನ

ಮುಳ್ಳು ಕಲ್ಲುಗಳ ದಾರಿಯಲಿ
ಬರಿಗಾಲಲ್ಲಿ ನಡೆಯುತ್ತಿರುವವರ
ಮೆಟ್ಟಾಗಿ ಬಯಸಿ ನಡೆಯಲೆತ್ನಿಸುತ್ತಿರುವಾಗ
ನೆರಳುಗಳೇ ಆವರಿಸದಿರಿ ನನ್ನ

ಬಿತ್ತಿ ಒಕ್ಕುವುದು ಸುಲಭವಲ್ಲ
ರಂಟೆ ಕುಂಠೆಯ ಜಾಡು
ಹುಡುಕುತ್ತಿರುವಾಗ
ನೆರಳುಗಳೇ ಆವರಿಸದಿರಿ ನನ್ನ


ಒಡೆದ ಕನ್ನಡಿಯ ಚೂರುಗಳು ಬಿದ್ದಿವೆ
ಚುಚ್ಚುತ್ತಿವೆ ಚೂರಾಗುತ್ತಿವೆ ರಕ್ತವ ಬಯಸುತ್ತಿವೆ
ತುಕಡಿಯಲಿ ಕಳೆದ ಬಿಂಬವ ಹುಡುಕುತ್ತಿರುವಾಗ
ನೆರಳುಗಳೇ ಆವರಿಸದಿರಿ ನನ್ನ

ಬುದ್ಧ ಪ್ರಬುದ್ಧರ ದೇವರ ಮಾಡಿ
ದೂರ ಮಾಡಿದೆವೆಲ್ಲಾ
ತತ್ವಗಳನ್ನೆಲ್ಲ ತಾತ್ಸಾರ ಮಾಡಿ
ಮೂರ್ತಿ ಗದ್ದುಗೆ ಗೋಡೆ ಪಟವಾಗಿ ಬಂಧಿಸಿಟ್ಟೆವಲ್ಲಾ

ಹುಗಿದ ಮಾನವ ಪ್ರೇಮವ ಹೊರತಗೆದು,
ಜಾತಿ ಧರ್ಮಗಳ ಲೇಪನವ ತೆಗೆದು
ಅಂತರಾತ್ಮನ ಹುಡುಕಲು ಸಾಧ್ಯವೇ? ಪ್ರಶ್ನಿಸುತ್ತಿರುವಾಗ
ನೆರಳುಗಳೇ ಆವರಿಸದಿರಿ ನನ್ನ....

ರಾಘವೇಂದ್ರ ಗುಡಿ (ರಾಗು)

Comments