ಕೋಪ-ತಾಪ
ನಿನ್ನನಿಂದು ದ್ವೇಷಿಸಲಾರೆ,
ನಿನ್ನನಿಂದು ಸೈರಿಸಲಾರೆ.
ನಿನ್ನನಿಂದು ತಾಳಲಾರೆ,
ನಿನ್ನನಿಂದು ಅಗಲಿರಲಾರೆ.
ಕಟುವಾದ ಮಾತುಗಳು ,
ನಿನ್ನ ಕಡೆಗಣ್ಣ ನೋಟಗಳು;
ತುಟಿಯಂಚಿನಲ್ಲಿ ಕೆಟ್ಟ ಕಡುಮುನಿಸನು ತರದೇ?
ನಾನಿಂದು ತಾಳದಾದೆ,
ಕೋಪಿಸುತ್ತ ಇದ್ದಿರದಾದೆ;
ಜೇನಿನೊಳದ್ದಿದ ಆ ಕೆಂದುಟಿ ಮತ್ತೆ ಎನ್ನ ಕೋಪವ ಕರಗಿಸದೇ?
ಕಾರಣವ ತಿಳಿಯದಾದೆ,
ನಿನ್ನ ಪೂರ್ತಿ ಅರಿಯದಾದೆ;
ಮುಚ್ಚಿಟ್ಟ ಭಾವನೆ ಮೊಗದಲಿ ಮಡುವನು ಕಟ್ಟಿಸದೇ?
ನೀನೇಕೆ ಮೌನವಾದೆ,
ಮಾತೊಂದ ನುಡಿಯದಾದೆ;
ಎದೆಯೊಳಗಿನ ಮಾತುಗಳನ್ನು ಬಿಚ್ಚಿಡದೆ ಉಳಿದೆ?
ಹೇಳಿಬಿಡು ಕಾರಣವನ್ನು,
ಕಟ್ಟೆಯೊಡೆದು ಹರಿಯಲಿ ಮಾತು;
ನೀನೊರಲಿದ ಅಣಿಮುತ್ತುಗಳೆನಗೆ ಮುಗುಳ್ನಗೆಯನ್ನು ತರವೇ?
ಯುದ್ಧವೀಗ ಏತಕೆ ಬೇಕು,
ಮೃದುಲ ಸ್ಪರ್ಶವೊಂದೇ ಸಾಕು;
ಎಷ್ಟಾದರೂ ಆಗಲಿ ಕೊನೆಗೆ ಹನಿ ಪ್ರೇಮವ ಚಿಮ್ಮಿಸದೇ?
ನಿನ್ನನಿಂದು ದ್ವೇಷಿಸಲಾರೆ,
ನಿನ್ನನಿಂದು ಸೈರಿಸಲಾರೆ.
ನಿನ್ನನಿಂದು ತಾಳಲಾರೆ,
ನಿನ್ನನಿಂದು ಅಗಲಿರಲಾರೆ.
Rating