ಸಮಸ್ಯಾ ಪೂರಣ: ಗುಳು ಗುಗ್ಗುಳು ಗುಗ್ಗುಳೂ
ಕವಿತೆಯಲ್ಲಿ ಸಮಸ್ಯಾಪೂರಣದ ಬಗ್ಗೆ ನೀವು ಕೇಳೇ ಇರಬಹುದು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಇದರ ಬಗ್ಗೆ ಬರೆದಿದ್ದೆ ಕೂಡ. ಪದ್ಯದ ಒಂದು ಸಾಲನ್ನು ಕೊಟ್ಟು ಉಳಿದ ಸಾಲುಗಳನ್ನು ತುಂಬಿಸುವುದು ಇದರ ಉದ್ದೇಶ. ಈಚೀಚೆಗೆ ಪದ್ಯಪಾನ ದಲ್ಲಿ ಬರುವ ಈ ರೀತಿ ಪಾದಪೂರಣದ ಸಮಸ್ಯೆಗಳನ್ನ ಓದುತ್ತಿರುತ್ತೇನೆ. ಬಹಳ ಆಸಕ್ತಿ ಹುಟ್ಟಿಸುವಂತಿರುತ್ತವೆ. ಆದರೆ ಇಂತಹದ್ದನ್ನು ಬಿಡಿಸುವುದಕ್ಕಿನ್ನಷ್ಟು ಕೈ ಪಳಗಬೇಕು, ಬಿಡಿ.
ಕಂತಿ ಹಂಪನದೆಂದು ಪ್ರಸಿದ್ಧವಾದ, ಕಾಳಿದಾಸನದ್ದೆಂದು ಹೇಳಲಾದ ಈ ರೀತಿಯ ಹಲವು ಸಮಸ್ಯೆಗಳಿವೆ. ಅದರಲ್ಲೊಂದು "ಗುಳು ಗುಗ್ಗುಳು ಗುಗ್ಗುಳೂ" ಅನ್ನುವುದು. ಕಾಳಿದಾಸನದೆಂದೇ ಹೇಳಲಾಗುವ ಠಾಠಂಠಠಂ .., "ಕ ಖ ಗ ಘ.." ಇದರ ಜಾತಿಯದ್ದೇ ಈ ಸಮಸ್ಯೆ ಅಂದರೆ ತಪ್ಪಿಲ್ಲ. ಅಂದರೆ, ಅರ್ಥವಿಲ್ಲದ ಒಂದು ಸಾಲನ್ನು ತೆಗೆದುಕೊಂಡು ಪದ್ಯ ಪೂರ್ತಿ ಮಾಡುವಂತಹದ್ದು,
ಈ ಪ್ರಶ್ನೆ ಭೋಜ ಕೇಳಿದನಂತೆ. ಆಸ್ಥಾನ ಪಂಡಿತರಿಗೂ ರಾಜ ಕೊಟ್ಟ ಸಮಸ್ಯೆ ಬಿಡಿಸಿದರೆ ಮಾನ ಬಹುಮಾನಗಳು ಸಿಗುವ ಆಸೆ ಇದ್ದೇ ಇರಬಹುದು. ಆದರೆ ಇಂತಹ ಅರ್ಥವಿಲ್ಲದ ಸಾಲಿಗೆ ಪದ್ಯ ಹೊಸೆಯಬಲ್ಲವನು ಕಾಳಿದಾಸನಂತಹವನೇ ಅಲ್ಲವೆ? ಅವನು ಮಾಡಿದ ಪದ್ಯ ಪೂರಣ ಹೀಗಿತ್ತಂತೆ:
ಸಂಸ್ಕೃತ ಮೂಲ (ಭೋಜ ಪ್ರಬಂಧದಿಂದ):
ಜಂಬೂ ಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ
ಕಪಿ ಕಂಪಿತ ಶಾಖಾಭ್ಯಾಂ
ಗುಳುಗುಗ್ಗುಳು ಗುಗ್ಗುಳೂ ||
ಹಾಗಂದರೆ ತಿಳಿಗನ್ನಡದಲ್ಲಿ:
ಅಲುಗಾಡಿಸಿ ಕಪಿ ರೆಂಬೆಗಳ
ಕಳಿತಿಹ ನೇರಳೆ ಹಣ್ಣುಗಳು
ಕೊಳದಲಿ ಬೀಳುತ ಸಪ್ಪಳವು
ಗುಳುಗುಳು ಗುಗ್ಗುಳು ಗುಗ್ಗುಳೂ
ನೇರಳೆ ಹಣ್ಣುಗಳು ನೀರೊಳಗೆ ಬೀಳುತ ಗುಳುಗುಳು ಗುಗ್ಗುಳು ಸದ್ದನ್ನು ಮಾಡುವುದರಲ್ಲೇನಚ್ಚರಿ? ಅಲ್ಲವೆ?
ಇಂತಹ ಸಮಸ್ಯೆಗಳಲ್ಲಿ ಇರುವ ಚಮತ್ಕಾರವೆಂದರೆ ಇವು ದೇಶಕಾಲಾತೀತ! ಉದಾಹರಣೆಗೆ ಇದೇ ಸಮಸ್ಯೆಗೆ ಶತಾವಧಾನಿ ರಾ.ಗಣೇಶ್ ಅವರು ಹೊಸೆದ ಇನ್ನೊಂದು ಉತ್ತರವೂ ಕೂಡ ಹೀಗೇ ಚೆನ್ನಾಗಿದೆ:
ಬೆಂಗಳೂರು ಪುರೇ ನಿತ್ಯಂ
ಜಲಾಭಾವಾಬಿ* ಬಾಧಿತೇ
ರವಃ ಕದಾಪಿ ನಾಲೇಸ್ಯಾತ್
ಗುಳುಗುಗ್ಗುಳು ಗುಗ್ಗುಳೂ ||
*- ಇದು ನಾನು ಎಲ್ಲೋ ಕೇಳಿದ್ದು. ಬರೆದಿರುವುದರಲ್ಲಿ ಸ್ವಲ್ಪ ತಪ್ಪಿದ್ದರೂ ಇದ್ದೀತು ಎನ್ನಿಸುತ್ತಿದೆ.
ಹಾಗೆಂದರೆ,
ಬೆಂಗಳೂರಿನಲಿ ಪ್ರತಿದಿನವೂ
ನೀರಿಗಿಹುದಂತೆ ಬಲುಕೊರತೆ
ನಳದಲಿ ತಡೆಯಿರದೆಲೆ ಸದ್ದು
ಗುಳುಗುಳು ಗುಗ್ಗುಳು ಗುಗ್ಗುಳೂ!
ನಿಜವೇ ಅಲ್ವೇ?
-ಹಂಸಾನಂದಿ
ಕೊ: ಇವುಗಳೆಲ್ಲ ಕಾಳಿದಾಸನದೆಂದು ಪ್ರಸಿದ್ಧವಾಗಿದ್ದರೂ, ಇದನ್ನು ಖಂಡಿತವಾಗಿ ಹೀಗೇ ಎಂದು ಹೇಳುವುದು ಕಷ್ಟವೇ ಸರಿ
ಕೊ.ಕೊ: ನನ್ನ ಅನುವಾದಗಳು ಛಂದಸ್ಸನ್ನೇನೂ ಪೂರ್ತಿ ಪಾಲಿಸುತ್ತಿಲ್ಲ - ಅದೇ ರೀತಿ ಮೂಲದ "ಗುಳು ಗುಗ್ಗುಳು ಗುಗ್ಗುಳೂ" ಕನ್ನಡದಲ್ಲಿ "ಗುಳುಗುಳು ಗುಗ್ಗುಳು ಗುಗ್ಗುಳೂ" ಆಗಿದೆ.
Comments
ಉ: ಸಮಸ್ಯಾ ಪೂರಣ: ಗುಳು ಗುಗ್ಗುಳು ಗುಗ್ಗುಳೂ