ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಬಾಗ[೧]

ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಬಾಗ[೧]

ಮೊದಲಬಾಗ:

 "ನಿಜಕ್ಕೂ ಕೃಷ್ಣ ವಿವರಗಳು ಅಥವಾ ಕಪ್ಪು ರಂದ್ರಗಳು (Black Holes) ವಿಸ್ಮಯ ವಿಶ್ವದ ಅತಿಶಯ ವಿಸ್ಮಯ. ನಮ್ಮ ಕಲ್ಪನೆಗೆ ಸವಾಲೆಸೆಯುತ್ತವೆ. ಕೃಷ್ಣ ಅಂದರೆ ಕಪ್ಪು ಮತ್ತು ವಿವರ ಎಂದರೆ ತೂತು ಅಥವಾ ರಂದ್ರ. ಇವು ಅಂತಿಂಥ ರಂದ್ರಗಳಲ್ಲ- ಎಲ್ಲವನ್ನು ಚೂಷಿಸಿ ಶೋಷಿಸಿ ಬಿಡುವ ಅಗಾಧ ಗುರುತ್ವ ಬಲದ ಗರ್ತಗಳು- ತಣ್ಣಗೆ ಹರಿಯುವ ನದಿಯಲ್ಲಿ ಇರಬಹುದಾದ ಸುಳಿಗಳಂತೆ. ಸನಿಹಕ್ಕೆ ಬರುವ ದ್ರವ್ಯವನ್ನು ತನ್ನೆಡೆಗೆ ಸೆಳೆದು ನುಂಗಿ ನೊಣೆಯುವ, ಬೆಳಕೂ ಸೇರಿದಂತೆ ಯಾವುದನ್ನೂ ತನ್ನೊಡಲಿಂದ ಹೊರ ಹೋಗಲು ಬಿಡದ ಅಗೋಚರ ಕಾಯಗಳು ....
ಗುರುತ್ವದ ಕಾರಣದಿಂದ ಪ್ರತಿಯೊಂದು ಆಕಾಶಕಾಯಕ್ಕೂ ನಿರ್ದಿಷ್ಟ ವಿಮೋಚನ ವೇಗವಿದೆ (Escape Velocity). ಗುರುತ್ವ ಬಂಧದಿಂದ ವಸ್ತು ವಿಮೋಚನೆಗೊಂಡು ಸರ್ವ ಸ್ವತಂತ್ರವಾಗಲು ಮಾಡಲು ಅಗತ್ಯವಾದ ವೇಗವಿದು. ಭೂಮಿಯ ವಿಮೋಚನ ವೇಗ ಸೆಕೆಂಡಿಗೆ ೧೧.೨ ಕಿಮೀ. ಅಂದರೆ ಒಂದು ಕಲ್ಲನ್ನು ಈ ವೇಗದಲ್ಲಿ ನಾವು ಮೇಲಕ್ಕೆ ಎಸೆದದ್ದೇ ಆದರೆ, ಆ ಕಲ್ಲು ಭೂಮಿಯ ಗುರುತ್ವಾಲಿಂಗನದಿಂದ ಪಾರಾಗಿ ಆಕಾಶದ ಅಂತರಾಳಕ್ಕೆ ಸಾಗುತ್ತದೆ. ನಮ್ಮ ರಟ್ಟೆಗೆ ಇಂಥ ತ್ರಾಣವಿಲ್ಲ. ಅದಕ್ಕೆ ರಾಕೇಟ್ ಬೇಕಾಗುತ್ತದೆ. ಒಂದು ವೇಳೆ ನಕ್ಷತ್ರದ ವಿಮೋಚನ ವೇಗ ಬೆಳಕಿನ ವೇಗವನ್ನೂ ಮೀರಿದರೆ?  ಆಗ ಅಲ್ಲಿಂದ ಬೆಳಕೂ ಸೇರಿದ ಹಾಗೆ ಯಾವುದೇ ವಿಕಿರಣ ಹೊರಬರದು. ಅಂದರೆ ನಮಗೆ ಅಂತಹ ಆಕಾಶಕಾಯವೊಂದು ಅಗೋಚರ. ಇವುಗಳನ್ನು ಪತ್ತೆ ಹಚ್ಚಲು ವಿಶೇಷ ಉಪಕರಣಗಳ ಅಗತ್ಯವೆ ಬೀಳುತ್ತದೆ.."

 ಟೀವಿಯಲ್ಲಿ ನಡೆಯುತ್ತಿದ್ದ ಸಂದರ್ಶನವನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದ ಇಂದಿರಾ ಪಕ್ಕದಲ್ಲಿ ಸ್ವಲ್ಪ ಅಂತರದಲ್ಲಿ ಕುಳಿತು ಟಿ.ವಿ.ಯನ್ನು ವೀಕ್ಷಿಸುತ್ತಿದ್ದ ತನ್ನ ತಂದೆಯನ್ನೊಮ್ಮೆ ನೋಡಿದವಳು ಮತ್ತೆ ಟೀ,ವಿ ಪರದೆಯತ್ತ ಕಣ್ಣು ನೆಟ್ಟಳು. ಬೌತವಿಜ್ಞಾನಿ ಚಂದ್ರಶೇಖರ್ ವಿವರಿಸುತ್ತಿದ್ದ ಕಪ್ಪುರಂದ್ರದ ವಿವರಗಳನ್ನು ಸಂದರ್ಶಕ ಯಾವ ಪ್ರಶ್ನೆಯನ್ನು ಹಾಕದೆ ಆಸಕ್ತಿಯಿಂದ ಕೇಳುತ್ತಿದ್ದ. 
 "ಕಪ್ಪುರಂದ್ರಗಳು  ತಮ್ಮ ಸುತ್ತಲಿನ ಯಾವ ನಕ್ಷತ್ರಗಳನ್ನು ಗ್ರಹಗಳನ್ನು ಇರಲು ಬಿಡದು, ಇವು ತಮ್ಮ ಶಕ್ತಿಯನ್ನು ಹೆಚ್ಚಿಸುತ್ತ ಹೋದಂತೆ ಗ್ರಹಗಳನ್ನು ನಕ್ಷತ್ರಗಳನ್ನು ಸೆಳೆಯುತ್ತ ನುಂಗುತ್ತ ಹೋಗುವ ಇವು ಕಡೆಗೆ ಸಂಪೂರ್ಣ ನಕ್ಷತ್ರವ್ಯೂಹಗಳನ್ನೆ ಮುಗಿಸಬಲ್ಲವು. ಅವುಗಳನ್ನು ತಿಂದು ಹಾಕುವ ರೀತಿಯು ಅನನ್ನ್ಯ......."

 ಇಂದಿರಾ ಏಕೊ ಮತ್ತೆ ಪಕ್ಕಕ್ಕೆ ತಿರುಗಿದಳು. ಪಕ್ಕದಲ್ಲಿ ಆಸಕ್ತಿಯಿಂದ ಟಿ.ವಿ ನೋಡುತ್ತಿರುವ ತನ್ನ ತಂದೆ ರಮಣಮೂರ್ತಿಯನ್ನು ನೋಡುತ್ತಿರುವಂತೆ ಅದೇಕೊ ಅವಳಿಗೆ ತನ್ನ ತಂದೆ ಹಾಗು ಕಪ್ಪುರಂದ್ರಗಳಲ್ಲಿ ಸಾಮ್ಯತೆ ಕಂಡುಬಂದಿತು. ತನ್ನ ಅಪ್ಪನು ಅಷ್ಟೆ ಹೆಚ್ಚು ಕಡಿಮೆ ಕಪ್ಪುರಂದ್ರದಂತೆ ವರ್ತಿಸುತ್ತಾರೆ ವ್ಯವಹಾರ ಕ್ಷೇತ್ರದಲ್ಲಿ, ತನ್ನ ಸುತ್ತ ಮುತ್ತಲ ಪರಧಿಯಲ್ಲಿ ಯಾರು ಬೆಳೆಯಲು ಬಿಡುವದಿಲ್ಲ,  ಕಪ್ಪುರಂದ್ರದ ರೀತಿಯೆ ಅವರನ್ನು ನುಂಗಿ ನೊಣೆದು ಬಿಡುತ್ತಾರೆ ಅಂದುಕೊಳ್ಳುವಾಗ ಅವಳಿಗೆ ಆ ಹೋಲಿಕೆಯಿಂದ ಅವಳಿಗೆ ಅರಿವಿಲ್ಲದೆ ನಗು ಉಕ್ಕಿ ಬಂದಿತು.
  ರಮಣಮೂರ್ತಿಗಳು ಇಂದು ದೇಶದ ವ್ಯವಹಾರ ಕ್ಷೇತ್ರದಲ್ಲಿ ಅದ್ವೀತಿಯನೆಂದು ಹೆಸರು ಪಡೆದವರು. ಪ್ರಪಂಚದ ಟಾಪ್ ಟೆನ್ ಹಣವಂತರಲ್ಲಿ ಒಬ್ಬರು. ಇವರು ಕೈಹಾಕದ ಕ್ಷೇತ್ರವೆ ಇಲ್ಲವೆನ್ನಬಹುದು.ಮೊದಲಿಗೆ ಐ.ಟಿ. ತಂತ್ರಜ್ಞಾನದ ಕ್ಷೇತ್ರದಲ್ಲಿ ತಮ್ಮ ವ್ಯವಹಾರ ಪ್ರಾರಂಬಿಸಿದ ಇವರು ನಾಲ್ಕು ಐದು ವರ್ಷದಲ್ಲಿ ಆ ಕ್ಷೇತ್ರದಲ್ಲಿ ಪೂರ್ಣವಾಗಿ ವ್ಯಾಪಿಸಿಬಿಟ್ಟರು. ನಂತರ ತಮ್ಮ ವ್ಯಾಪ್ತಿಯನ್ನು ಟೆಲಿಕಾಂ , ರಿಟೈಲ್ ಮಾರ್ಕೆಟಿಂಗ್, ಪೆಟ್ರೋಲಿಯಂ, ವೈಮಾನಿಕ ರಂಗ ಹೀಗೆ ವಿಸ್ತರಿಸುತ್ತ ಹೋದವರಿಗೆ ಕೈ ಇಟ್ಟಕಡೆಯೆಲ್ಲ ಯಶಸ್ಸು ಕಾಯ್ದಿರಿಸಿದಂತೆ ಇತ್ತು. ಕೇವಲ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಭಾರತದ ವ್ಯವಹಾರ ಕ್ಷೇತ್ರವನ್ನು ಆವರಿಸಿದ ಇವರ ಜೀವನ ಹೊಸದಾಗಿ ಜೀವನ ಪ್ರಾರಂಬಿಸುವ ಯುವಕರಿಗೆ ಆದರ್ಶಪ್ರಾಯದಂತೆ ಇತ್ತು, ಇವರ ಜೀವನ ಅವರೆಲ್ಲರಿಗೆ ಒಂದು ಉದಾಹರಣೆಯಂತೆ, ಪ್ರೇರಣೆಯಂತೆ ಇತ್ತು. ಆದರೆ ಅವರ ಪರಿ ವಿಚಿತ್ರ , ಹೊರಗಿನ ಪ್ರಪಂಚದ ಕಾಸ್ಮೊಪಾಲಿಟನ್ ವಾತವರಣ ತಮ್ಮ ಮನೆಯನ್ನು ಪ್ರವೇಶಿಸಲು ಬಿಡದೆ, ತಮ್ಮ ಮನೆಯನ್ನು ಮದ್ಯಮವರ್ಗದ ಜನರ ಮನೆಗಳಲ್ಲಿನ ವಾತವರಣದಂತೆ ಕಾಪಾಡುವದರಲ್ಲಿ ಅವರಿಗೇನೊ ನೆಮ್ಮದಿ.

 ತನ್ನ ಮುಖ ನೋಡುತ್ತಲೆ ನಗುತ್ತಿದ್ದ ತಮ್ಮ ಮಗಳು ಇಂದಿರಳನ್ನು ಕಂಡ ರಮಣಮೂರ್ತಿಯವರ ಮುಖದಲ್ಲು ನಗು ಹರಡಿತು. ಅವರು ತೀರ ಅಮಾಯಕರೇನಲ್ಲ ಮಗಳ ನಗುವಿಗೆ ಕಾರಣ ಏನಿರಬಹುದೆಂದು ಉಹಿಸಿದ್ದರು. ಸಂದರ್ಭಕ್ಕೆ ತಕ್ಕಂತೆ ಯೋಚಿಸುತ್ತ ತಮ್ಮ ಮಗಳ ಮನಸಿನಲ್ಲಿ ಏನಿರಬಹುದೆಂದು ಉಹಿಸಬಲ್ಲವರಾಗಿದ್ದರು.
"ಏಕಮ್ಮ ನಗುತ್ತಿದ್ದಿಯ" ಎಂದು ಕೇಳಿದರು. 
"ಏನಿಲ್ಲ ಅಪ್ಪಾಜಿ, ಹೀಗೆ ಸುಮ್ಮನೆ ಏನೊ ನೆನೆದೆ ನಗು ಬಂತು" ಅಂದಳು,
ಅವಳು ಪಾಪ ತನ್ನ ತಂದೆಗೆ ತಾನು ಕಲ್ಪಿಸಿದ ಹೋಲಿಕೆಯನ್ನು ಹೇಗೆ ಹೇಳಬಲ್ಲಳು. ನಗುತ್ತ ಕುಳಿತಿದ್ದ ತಂದೆಯನ್ನೊಮ್ಮೆ ನೋಡುವಾಗ ಅವಳಿಗೆ ಅನ್ನಿಸಿತು ಅದೇನೊ ಇಂದು ಪ್ರಸನ್ನರಾಗಿದ್ದಾರೆ , ತನ್ನ ಮನಸಿನಲ್ಲಿ ಇರುವದನ್ನು ಹೇಳಲು ಬಹುಷ; ಇದೇ ಸಕಾಲ. ಅಂದುಕೊಳ್ಳುತ್ತ
"ಅಪ್ಪ ನಿಮ್ಮ ಹತ್ತಿರ ಒಂದು ವಿಷಯ ಹೇಳಬೇಕಾಗಿತ್ತು, ನೀವು ಕೋಪ ಮಾಡಬಾರದು."
ಎನ್ನುತ್ತ ರಾಗ ಎಳೆದಳು.
ರಮಣಮೂರ್ತಿಯವರ ಮನಸ್ಸು ಎಚ್ಚರಗೊಂಡಿತು. ಅವಳ ದ್ವನಿ, ಮುಖ , ಮುದ್ದು ಮಾತು ಎಲ್ಲ ಕೇಳುತ್ತಿರುವಂತೆ , ಅವಳು ಯಾವ ವಿಷಯ ಕೇಳಬಹುದೆಂಬ ಕಲ್ಪನೆ ಬಂದಿತು. ಅವರು ಯೋಚಿಸಿದರು. ಒಂದುವೇಳೆ ಅವಳು ತಾವು ನಿರೀಕ್ಷಿಸಿದ ವಿಷಯವನ್ನೆ ಎತ್ತಿದರೆ ಸಂದರ್ಭವನ್ನು ನಿಭಾಯಿಸುವುದು ಕಷ್ಟವಾಗುತ್ತದೆ, ಅಲ್ಲದೆ ವಿಷಯ ನನಗೆ ತಿಳಿದೆದೆ ಎಂದಾದರೆ ಅವಳಿಗೆ ದೈರ್ಯ ಬಂದುಬಿಡುತ್ತದೆ ಜೊತೆಗೆ ಬಂಡತನ. ಹೀಗಾಗಿ ಇವಳು ವಿಷಯ ಪ್ರಸ್ತಾಪ ಮಾಡಲು ಬಿಡಲೆ ಬಾರದು. ಇದನ್ನು ಹಾಗೆಯೆ ನಿಭಾಯಿಸಬೇಕು ಎಂದು ನಿರ್ದಸಿದರು.
"ಇಂದಿರಾ ನೀನು ಕೇಳುವದಿರಲಿ, ನಿನ್ನ ಬಿ.ಇ. ನಾಲ್ಕನೆ ಸೆಮಿಷ್ಟರ್ ಯಾವಾಗ ಮರೆತೆಯ, ಈ ಸಾರಿ ಹೇಗೆ ಓದುತ್ತಿರುವೆ, ಕಳೆದ ಬಾರಿ ನಿನ್ನ ಸೋಮಾರಿತನದಿಂದ ಕೇವಲ ಸೆಕೆಂಡ್ ಕ್ಲಾಸ್ ತೆಗೆದುಕೊಂಡೆ. ಟ್ಯೂಶನ್ ಕ್ಲಾಸ್ ಸರಿಯಾಗಿ ಅಟೆಂಡ್ ಮಾಡುತ್ತ ಇರುವೆಯ. ಈಗ ನೋಡು ಓದುವ ಸಮಯ ಸುಮ್ಮನೆ ಟಿ.ವಿ ಎದುರು ಕುಳಿತು ಸಮಯ ಹಾಳುಮಾಡುತ್ತಿದ್ದಿ. ಹೀಗಾದರೆ ನೀನು ಮುಂದೆ ಕಷ್ಟ ಪಡುತ್ತಿ ಅಷ್ಟೆ" ಹೀಗೆ ಏನೇನೊ ಹೇಳತೊಡಗಿದರು.
ತನ್ನ ತಂದೆ ಓದಿನ ವಿಷಯ ಎತ್ತುತ್ತಲೆ ಸಹಜವಾಗಿ ಇಂದಿರಳ ಮನ ಮುದುಡಿತು.  ಅವಳಿಗೆ ಅದೇನೊ ಅವಳ ತಂದೆ ಓದುವ ವಿಷಯ ಎತ್ತಿದರೆ ಸಾಕು ಸಪ್ಪಗಾಗಿ ಬಿಡುತ್ತಾಳೆ. ಅವಳಿಗೆ ಈ ಕಾಲೇಜು ಓದು ಇದರಲ್ಲಿ ಎಲ್ಲ ಆಸಕ್ತಿ ಇಲ್ಲ. ಬದಲಿಗೆ ಹೋಟೆಲ್ ಗಳಿಗೆ ಹೋಗುವುದು ಪಾರ್ಟಿ, ಟೂರ್ ಹೋಗುವುದು,ಕ್ರಿಕೇಟ್ ಇಂತಹ ವಿಷಯಗಳಲ್ಲಿ ಹೆಚ್ಚು ಆಸಕ್ತಿ. ಆದರೇನು ತಂದೆಯನ್ನು ಎದುರಿಸಲಾರಳು. ಅವರು ಓದಿನ ವಿಷಯ ತೆಗೆಯುವಾಗಲೆ ಅವರ ಎದುರಿನಿಂದ ಎದ್ದು ತನ್ನ ರೂಮಿಗೆ ಹೊರಟಳು.
   ಒಳಗೆ ನಕ್ಕರು ರಮಣಮೂರ್ತಿ, ಅವರಿಗೆ ಚೆನ್ನಾಗಿಯೆ ಗೊತ್ತಿತ್ತು ಓದಿನ ವಿಷಯವೆತ್ತಿದರೆ ಮಗಳು ಹೀಗೆ ಎದ್ದು ಹೋಗುವಳೆಂದು. ಅವರಿಗೆ ಬೇಕಾಗಿದ್ದು ಸಹ ಅದೆ. ಅವರಿಗೆ ತಮ್ಮ ಮಗಳು ಯಾವ ವಿಷಯವನ್ನು ತಮ್ಮ ಬಳಿ ತಿಳಿಸಲು ಪೀಠಿಕೆ ಹಾಕುತ್ತಿದ್ದಳು ಎಂದು ತಿಳಿದಿತ್ತು. ಮತ್ತು ಒಮ್ಮೆ ಅವಳು ಆ ವಿಷಯವನ್ನು ಪ್ರಸ್ತಾಪ ಮಾಡಿದಲ್ಲಿ ಅನಗತ್ಯ ಗೊಂದಲದ ಸಂದರ್ಭ ಏರ್ಪಡುವ ಸಾದ್ಯತೆ ಇತ್ತು.


 ಅವರು ಕೆಲವು ದಿನಗಳ ಹಿಂದಿನಿಂದಲೆ ತಮ್ಮ ಮಗಳ ನಡತೆ ಗಮನಿಸಿದರು. ಅವರಿಗೆ ಅದೇನೊ ವ್ಯೆತ್ಯಾಸ ಕಂಡುಬಂದಿತ್ತು. ಮೊದಲಿನಂತಲ್ಲದೆ ಸದಾ ಒಂಟಿಯಾಗಿರುತ್ತಿದ್ದಳು. ಕೈಯಲ್ಲಿ ಸದಾ ಮೊಬೈಲ್, ಮೆಸೇಜ್ ಓದುವುದು ಇಲ್ಲ ಕಳಿಸುವುದು. ಅವಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಿರುವಂತೆ ಅನ್ನಿಸಿತು. ಅವಳು ಯಾವುದೊ ಕಲ್ಪನೆಯಲ್ಲಿ ತೇಲುತ್ತಿರುವಳಂತೆ ಹಾವಭಾವ. ಎಲ್ಲವನ್ನು ನೋಡುತ್ತ ರಮಣಮೂರ್ತಿ ನಿರ್ದರಿಸಿದರು ಇವಳ ಹಿಂದೆ ಏನೊ ಕತೆಯಿದೆ. ಹಾಗೆಂದು ಅವಳನ್ನು ಕೇಳಲು ಹೋಗಲಿಲ್ಲ. ಅವರಿಗೆ ಗೊತ್ತು ಕೇಳಿದಲ್ಲಿ ಎಂದಿಗು ನಿಜ ಉತ್ತರ ಅವರಿಗೆ ಸಿಗುವದಿಲ್ಲ.

 ರಮಣಮೂರ್ತಿ ಅವರ ಸ್ವಭಾವವೆ ಅಂತಹುದು ಒಮ್ಮೆ ಅವರ ಗಮನಕ್ಕೆ ಯಾವುದಾದರು ವಿಷಯ ಬಂದಲ್ಲಿ ಅದನ್ನು ತರ್ಕಬದ್ದವಾಗಿ ಕೊನೆಗಾಣಿಸಲೆಬೇಕು. ಅವರ ಮಗಳ ಬಗ್ಗೆ ಅನುಮಾನದ ಭಾವ ಬಂದಕೂಡಲೆ ಅವರು ಸುಮ್ಮನೆ ಕೂಡಲಿಲ್ಲ. ಅಂದೆ ಆಫೀಸಿಗೆ ಹೋಗುವ ದಾರಿಯಲ್ಲಿದ್ದ. ಲೀಗಲ್ ಸಲ್ಯೂಶನ್ಸ್ ಎಂಬ ಸಂಸ್ಥೆಯ ಮುಂದೆ ಅವರ ಕಾರು ನಿಂತಿತು. ಒಳಗಿನಿಂದ ಒಬ್ಬ ವ್ಯಕ್ತಿ ಬಂದು ಕಾರಿನಲ್ಲಿ ಇವರ ಜೊತೆ ಕುಳಿತ. ದಾರಿಯಲ್ಲಿ ಯಾವ ಮಾತು ಇಲ್ಲ. ಡ್ರೈವರ್ಗೆ ಹೋಟೆಲ್ ಎಲಿಗೆಂಟ್ ಗೆ ಕಾರು ತಿರುಗಿಸಲು ಹೇಳಿದರು.


  ಲೀಗಲ್ ಸಲ್ಯೂಶನ್ ಸಂಸ್ಥೆ ಯಾವಗಲು ರಮಣಮೂರ್ತಿ ರವರಿಗೆ ಅವರ ಕಂಪನಿಗೆ ಸಂಬಂದಿಸಿದ ಎಲ್ಲ ಕಾನೂನು ವಿಷಯದಲ್ಲಿ ಸಹಾಯ ಮಾಡುತ್ತಿತ್ತು. ಲೀಗಲ್ ಸಲ್ಯೂಶನ್ ನ ಒಡೆಯ ರಾಘವೇಂದ್ರ ಇವರಿಗೆ ಆತ್ಮೀಯ, ಸ್ನೇಹಿತ ಅಷ್ಟೆ ಅಲ್ಲ ರಮಣಮೂರ್ತಿರವರಿಗೆ ಸೇರಿದ ಕಂಪನಿಗಳಿಂದ ಅಪಾರ ಹಣ ಪ್ರತಿವರ್ಷ ಪಡೆಯುವ ವ್ಯಕ್ತಿ. ರಮಣಮೂರ್ತಿ ಈ ಹಣವನ್ನು ಪುಕ್ಕಟೆಯಾಗಿ ಏನು ಕೊಡುತ್ತಿರಲಿಲ್ಲ. ಎಲ್ಲರು ತಿಳಿದಂತೆ ಲೀಗಲ್ ಸಲ್ಯೂಶನ್ ಕೇವಲ ಕಾನೂನಿನ ಸಹಾಯವಷ್ಟೆ ಅಲ್ಲ, ರಮಣಮೂರ್ತಿ ರವರಿಗೆ ಕೆಲ ಪತ್ತೆದಾರಿಕೆ ಕೆಲಸವನ್ನು ಮಾಡಿ ಕೊಡುತ್ತಿತ್ತು. ಆದರೆ ಅದು ಒಳಗಿನ ರಹಸ್ಯ. ಇವರ ಪ್ರತಿಸ್ಪರ್ದಿ ಕಂಪನಿಗಳ ಎಲ್ಲ ವಿಷಯಗಳು, ಸರ್ಕಾರಕ್ಕೆ ಸಂಬಂದಿಸಿದ, ವಿಷಯಗಳು , ಅಲ್ಲದೆ ಅವರದೆ ಕಂಪನಿಯಲ್ಲಿ ಕೆಲಸಮಾಡುವ ಕಾರ್ಮಿಕರ , ಕೆಲಸಗಾರರ ಎಲ್ಲ ವಿಷಯಗಳು ಸಹ ರಮಣಮೂರ್ತಿ ರವರಿಗೆ ಮುಟ್ಟಿಸುವ ಜವಾಬ್ದಾರಿ ರಾಘವೇಂದ್ರರವರದು.


 ರಮಣಮೂರ್ತಿ ಈಗ ತಮ್ಮ ಮಗಳ ವಿಷಯವನ್ನು ಅರಿಯಲು ಅದೇ ರಾಘವೇಂದ್ರ ರವರಿಗೆ ಸೂಚಿಸಿದರು. ಸಾಮನ್ಯವಾಗಿ ಹೆಂಡತಿ ಮಕ್ಕಳು ಇವೆಲ್ಲ ನಂಭಿಕೆಯ ವಿಷಯಗಳು, ಇವರಲ್ಲಿ ಅಪನಂಭಿಕೆ ಪಡುವುದು ತಪ್ಪು ಮತ್ತು ಹೊರಗಿನ ಮೂರನೆ ವ್ಯಕ್ತಿಯ ಸಹಾಯ ಪಡುವುದು ತಪ್ಪು ಇದು ಸಾಮನ್ಯ ಎಲ್ಲರ ನಡುವಳಿಕೆ. ಆದರೆ ರಮಣಮೂರ್ತಿ ಎಲ್ಲ ರೀತಿಯು ಪಕ್ಕ ವ್ಯವಹಾರಸ್ತರು. ಅವರಿಗೆ ಕೆಲಸವಾಗುವುದ ಅಷ್ಟೆ ಮುಖ್ಯವಾಗಿತ್ತು ಉಳಿದ ವಿಷಯಗಳು ಅಷ್ಟು ಮುಖ್ಯವೆನಿಸುತ್ತಿರಲಿಲ್ಲ.



 ಎರಡೆ ದಿನದಲ್ಲಿ ರಮಣಮೂರ್ತಿ ರವರಿಗೆ ವಿಷಯ ಪೂರ್ಣವಾಗಿ ತಿಳಿಯಿತು. ಅವರ ಮಗಳು ಇಂದಿರಾ ತನ್ನ ಕಾಲೇಜಿನಲ್ಲಿ ಓದುತ್ತಿದ್ದ ಕಲ್ಯಾಣ್ ಎಂಬ ಯುವಕನ ಜೊತೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಕಲ್ಯಾಣ್  ಇಂದಿರಾಗಿಂತ ಎರಡು ವರ್ಷ ಸೀನಿಯರ್ ವಿದ್ಯಾರ್ಥಿ. ಈಗ ಇಂದಿರಾ ಅವಳ ನಾಲ್ಕನೆ ಸೆಮಿಷ್ಟರ್ ನಲ್ಲಿದ್ದರೆ ಕಲ್ಯಾಣ್ ತನ್ನ ಓದು ಮುಗಿಸಿ ಕೆಲಸ ಹುಡುಕುವ ಹಂಚಿಕೆಯಲ್ಲಿದ್ದ. ಸಾದರಣ ವಿಧ್ಯಾರ್ಥಿಯಾಗಿದ್ದ ಕಲ್ಯಾಣ್ ತನ್ನ ಬಿ.ಇ. ಡಿಗ್ರಿಯನ್ನು,  ಕಷ್ಟ ಬಿದ್ದು ಮುಗಿಸಿದ್ದ. ಎರಡು ವರ್ಷಗಳಲ್ಲಿ ನಡೆದಿದ್ದ ಹಲವಾರು ಕ್ಯಾಂಪಸ್ ಸೆಲೆಕ್ಷನ್ ಗಳಲ್ಲಿ ಗೆಲುವು ಸಾದಿಸಿ ಒಂದು ಕೆಲಸ ಪಡೆಯಲು ಅಸಫಲನಾಗಿದ್ದ. ಆದರೆ ಅದು ಹೇಗೊ ಇಂದಿರಾ ಅವನನ್ನು ಮೆಚ್ಚಿಕೊಂಡಿದ್ದಳು. ದಿನಾ ಕಾರಿನಲ್ಲಿ ಡ್ರೈವರ್ ಜೊತೆ ಬರುವ ತಮ್ಮಮಗಳು ಇಂದಿರಾ, ಸಾದರಣ ಮದ್ಯಮವರ್ಗದ, ಸ್ವಂತ ಶಕ್ತಿಯಿಂದ ಒಂದು ಕೆಲಸ ಸಂಪಾದಿಸಲು ಶಕ್ತಿಯಿಲ್ಲದ ಯುವಕನಿಗೆ ಮನಸೋತಿದ್ದು ರಮಣಮೂರ್ತಿ ಮನಸಿಗೆ ಅಘಾತ ಉಂಟುಮಾಡಿತ್ತು.



 ಮೊದಲು ಅವರು ಮಗಳ ಜೊತೆ ಮಾತನಾಡಿ ಈ ಸಂಬಂಧ ದೂರಗೊಳಿಸಬೇಕೆಂದು ಚಿಂತಿಸಿದರು. ಆದರೆ ಮರುಕ್ಷಣ ಹೊಳೆಯಿತು ಈ ಪ್ರೀತಿ ಎಂಬುದು ವಿಚಿತ್ರ ಕಾಯಿಲೆ ಕೀಳಲು ಹೋದಷ್ಟು ಆಳಕ್ಕೆ ಬೇರು ಬಿಟ್ಟುಕೊಳ್ಳವ ಶಕ್ತಿ ಇರುವುದು. ಅವಳ ಮನಸಿಗೆ ವಿರುದ್ದವಾಗಿ ನಡೆದಷ್ಟು ಮನಸನ್ನು ಗಟ್ಟಿ ಮಾಡುತ್ತ ಸಾಗುವ ಅದರ ಪರಿ ಅರಿತ್ತಿದ್ದರು. ವಿಷಯ ತನಗೆ ತಿಳಿದಿದೆ ಎಂದು ತಿಳಿದರೆ ಸಾಕು ಇಂದಿರಾ ಮನಸ್ಸು ಹಗುರವಾಗುತ್ತೆ, ಮತ್ತೆ ಹಟ ಬೆಳೆಯುತ್ತ ಹೋಗುತ್ತೆ ಬದಲಿಗೆ , ಈಗಿರುವಂತೆ ಅವಳ ಮನಸಿನಲ್ಲಿರುವ ಅಳುಕು ಹಾಗೆ ಇರಲಿ ಎಂದು ಚಿಂತಿಸಿದರು.

 ಮುಂದಿನ ಹೆಜ್ಜೆ, ಹೇಗಾದರು ಮಾಡಿ ಕಲ್ಯಾಣ್ ನನ್ನು ಇಂದಿರಾಗೆ ಅರಿವಾಗದಂತೆ ಅವಳಿಂದ ದೂರ ಮಾಡುವುದು. ನಂತರ ಅವಳ ಮನಸನ್ನು ತಿಳಿಗೊಳಿಸುವುದು. ಹಾಗು ಕೊನೆಯದಾಗಿ ಮಗಳ ಮನಸು ಕಲ್ಯಾಣ್ ಬಗ್ಗೆ ಅಲಕ್ಷ್ಯ, ತಿರಸ್ಕಾರ ತಾಳುವಂತೆ ಮಾಡಿ, ಇವನು ತನ್ನ ಯೋಗ್ಯತೆ ತಕ್ಕವನಲ್ಲ ಎಂದು ಅವಳ ಮನಸಿಗೆ ಅರಿವಾಗುವಂತೆ ಮಾಡುವುದು. ಮತ್ತು ಕಲ್ಯಾಣ್ ನನ್ನು ಸಹ ಇಂದಿರಾ ತನಗೆ ತಕ್ಕವಳಲ್ಲ ಎನ್ನುವ ಭಾವನೆಯಿಂದ ತುಂಬುವಂತೆ ಮಾಡಿ, ಕೀಳಿರಿಮೆ ತುಂಬಿ ದೂರಾಗಿಸಿ ನಂತರ ಬೇರೆ ಹುಡುಗನನ್ನು ಹುಡುಕಿ ಅವಳ ಜೀವನ ಸುಗಮವಾಗುವಂತೆ ಮಾಡುವುದು. ಇದು ಅವರ ಮನಸಿನಲ್ಲಿ ರೂಪಗೊಂಡ ಅಲೋಚನೆಗಳು.
 
  ರಮಣಮೂರ್ತಿ ಜೀವನದ ಬಗ್ಗೆ ದೃಡ ನಿಲುವು ಹೊಂದಿರುವ ಪ್ರಾಕ್ಟಿಕಲ್ ಮನುಷ್ಯ.  ಇಂದಿರಾ ಜೀವನ ತಮ್ಮ ಕಲ್ಪನೆಯಂತಿರಲು ಏನು ಮಾಡಬಹುದೆಂದು ಅವರು ಚಿಂತಿಸಿದರು.


 ....
 ಮುಂದೆ ಓದಿ ..

ಎರಡನೆ ಬಾಗ 

ಮೂರನೆ ಬಾಗ

 =======================================================

ಸಂಪದಿಗರೆ ಹೀಗೊಂದು ಹೊಸಪ್ರಯೋಗ. ಒಂದೆ ಕತೆಯನ್ನು ಮೂರು ಜನ ಸಂಪದಿಗರು ಸೇರಿ ಬರೆದಾಗ ಹೇಗಿರಬಹುದು. ಈ ಕಲ್ಪನೆ ನನಗೆ ಕುತೂಹಲ ಮೂಡಿಸಿತು. ಕತೆಗೆ ಯಾವ ವಿಷಯ ಸರಿಯಾಗಬಹುದು, ಉಳಿದ ಇಬ್ಬರು ಬರಹಗಾರರು ಯಾರಾಗಬಹುದು ಎಂದು ಚಿಂತಿಸಿ, ಎಲ್ಲರಿಗು ಹೊಂದುವ ವಿಷಯವೆಂದರೆ 'ಪ್ರೀತಿ' ಎಂದು ಅನ್ನಿಸಿ, ಕಪ್ಪುರಂದ್ರ ಎನ್ನುವ ಈ ಕತೆಯ ಮೊದಲ ಬಾಗ ಬರೆದೆ. ಎರಡನೆ ಬಾಗವನ್ನು ಜಯಂತ್ ಮುಂದುವರೆಸುತ್ತಾರೆ ಮತ್ತು ಮೂರನೆಯ ಲೇಖಕ ಯಾರು ಎಂದು ಜಯಂತ್ ಅವರು ಕಡೆಯಲ್ಲಿ ತಿಳಿಸುತ್ತಾರೆ.

 

Rating
No votes yet

Comments