ಮಂಕನಿಗೆ ಹಾರ ಹಾಕಿದರು!

ಮಂಕನಿಗೆ ಹಾರ ಹಾಕಿದರು!

 

     ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ: 

     "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿದ್ದಾರಲ್ಲಾ, ಅವರಿಗೂ ಈಗ ಸಿಕ್ಕಿರುವ ಗೌರವದಿಂದ ಸಮಾಧಾನ ಆಗಿರುವುದಿಲ್ಲ. ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದೇನೆ, ಎಷ್ಟು ಹಣ, ಸಮಯ ಖರ್ಚು ಮಾಡಿದ್ದೇನೆ. ಅದಕ್ಕೆ ಹೋಲಿಸಿದರೆ ಈಗ ಸಿಕ್ಕಿರುವ ಗೌರವ ತುಂಬಾ ಕಡಿಮೆ ಆಯಿತು ಅಂತ ಕೊರಗುತ್ತಿರುತ್ತಾರೆ. ಇನ್ನೊಂದು ವಿಷಯ ಗೊತ್ತಾ? ಸಿಕ್ಕಿರುವ ಆ ಗೌರವವನ್ನು ಉಳಿಸಿಕೊಳ್ಳಲು ಅವರು ಇನ್ನು ಮುಂದೆಯೂ ಒದ್ದಾಡುತ್ತಲೇ ಇರಬೇಕು. ಒಣ ಹೆಸರು ಅನ್ನುವುದನ್ನು ಬಿಟ್ಟರೆ ಗೌರವ ಅನ್ನುವುದರಲ್ಲಿ ಏನಿದೆ?" 

     "ಏನೆಂದೆ? ಸತ್ತವರಿಗೆ ಸಿಗುವ ಗೌರವವಾ? ಒಣ ಹೆಸರು ಮಾತ್ರ ಅಂತೀಯಾ?"

     "ಅಷ್ಟಲ್ಲದೇ ಏನು? ಒಂದು ಕಥೆ ಹೇಳ್ತೀನಿ, ಕೇಳು. 'ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ. ಒಂದು ದಿನ ಅಶರೀರವಾಣಿ ಅವನಿಗೆ ಕೇಳಿಸಿತು: ಎಲೈ ರಾಜನೇ, ಯಾರು ಹೆಚ್ಚು ದಾನ ಮಾಡುತ್ತಾರೋ ಅವರು ಸ್ವರ್ಗಕ್ಕೆ ಹೋಗುತ್ತಾರೆ. ಅವರ ಹೆಸರನ್ನು ಬಂಗಾರದ ಬೆಟ್ಟದಲ್ಲಿ ಬರೆಯಲಾಗುವುದು. ಸರಿ, ರಾಜನಿಗೆ ಬಂಗಾರದ ಬೆಟ್ಟದಲ್ಲಿ ತನ್ನ ಹೆಸರು ಕಾಣುವ ಬಯಕೆ ಗರಿಗಟ್ಟಿತು. ಪ್ರತಿದಿನ ಬಡಬಗ್ಗರಿಗೆ ಊಟ ಹಾಕಿಸಿದ, ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಕಟ್ಟಿಸಿದ, ಧರ್ಮಛತ್ರಗಳನ್ನು ಕಟ್ಟಿಸಿದ. ಪ್ರವಾಸಿಗರಿಗೆ ಅನುಕೂಲವಾಗಲು ವಿಶ್ರಾಂತಿಧಾಮಗಳನ್ನು ಕಟ್ಟಿಸಿದ. ದೇವಸ್ಥಾನಗಳನ್ನು ನಿರ್ಮಿಸಿದ, ಅದು ಮಾಡಿದ, ಇದು ಮಾಡಿದ, ಏನೇನೋ ಮಾಡಿದ. ಎಲ್ಲಾ ಕಟ್ಟಡಗಳಲ್ಲೂ ರಾಜನ ಹೆಸರೋ ಹೆಸರು. ಎಲ್ಲೆಲ್ಲಿ ನೋಡಿದರೂ ರಾಜನ ದಾನ ಮಾಡಿದ ಕುರಿತು ಫಲಕಗಳೇ ಫಲಕಗಳು. ಒಂದು ದಿನ ರಾಜ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ಹೋದವನೇ ಮೊದಲು ಮಾಡಿದ ಕೆಲಸ ಎಂದರೆ ಬಂಗಾರದ ಬೆಟ್ಟ ಎಲ್ಲಿದೆ ಅಂತ ವಿಚಾರಿಸಿದ್ದು. ಬೆಟ್ಟದ ಹತ್ತಿರ ಹೋಗಿ ನೋಡಿದರೆ ಬೆಟ್ಟದ ತುಂಬೆಲ್ಲಾ ಜಾಗವೇ ಇಲ್ಲದಷ್ಟು ಹೆಸರುಗಳು ತುಂಬಿಹೋಗಿದ್ದವು. ಅಲ್ಲಿದ್ದ ಮೇಲ್ವಿಚಾರಕರನ್ನು ತನ್ನ ಹೆಸರು ಎಲ್ಲಿದೆ ಅಂತ ವಿಚಾರಿಸಿದ. ಅವನು ಒಂದು ಬರೆಯುವ ಸಾಧನ ಕೊಟ್ಟು ಹೇಗೆ ಬೇಕೋ ಹಾಗೆ ಹೆಸರನ್ನು ಬರೆದುಕೊಳ್ಳಬಹುದೆಂದು ಹೇಳಿದ. ಬರೆಯಲು ಜಾಗವೇ ಇಲ್ಲವಲ್ಲಾ ಅಂದಿದ್ದಕ್ಕೆ, ಇರುವ ಯಾವುದಾದರೂ ಹೆಸರನ್ನು ಅಳಿಸಿ ತನ್ನ ಹೆಸರು ಬರೆದುಕೊಳ್ಳಬಹುದು ಅನ್ನುವ ಉತ್ತರ ಸಿಕ್ಕಿತು'.

     "ಹಾಂ??"

     "ಆ ರಾಜನಿಗಾದರೋ ಸತ್ತ ಮೇಲೆ ತನ್ನ ಹೆಸರು ಬರೆದುಕೊಳ್ಳುವ ಅವಕಾಶವಾದರೂ ಸಿಕ್ಕಿತ್ತು. ನಿನಗೇನು ಸಿಗುತ್ತೆ? ಮಣ್ಣು. ಸತ್ತ ಮೇಲೆ ನಿನಗೇ ನೀನು ಯಾರು ಅಂತ ಗೊತ್ತಿರುತ್ತೋ ಇಲ್ಲವೋ! ಸತ್ತ ಮೇಲೆ ಗೌರವ ಸಿಗುತ್ತೆ ಅಂತ ಈಗ ಯಾಕೆ ಒದ್ದಾಡುತ್ತೀಯಾ?"

     "ಹಾಂ??"

     "ಹೌದು ಕಣೋ ಮಂಕೆ. ಆದರೆ ಒಂದು ಸಮಾಧಾನವಿದೆ. ಈಗ ಬದುಕಿದ್ದಾಗ ನಿನ್ನ ಕಾಲು ಎಳೆದವರೇ ಮುಂದೆ  ನೀನು ಸತ್ತ ಮೇಲೆ ನಿನ್ನ ಫೋಟೋಗೆ ಹಾರ ಹಾಕಿ 'ಅವರು ಎಷ್ಟು ದೊಡ್ಡ ವ್ಯಕ್ತಿ. ಆದರೆ ಅವರಿಗೆ ಬದುಕಿದ್ದಾಗ ಸಿಗಬೇಕಾದ ಗೌರವ ಸಿಗಲಿಲ್ಲ. ಅಂತಹ ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಅವರ ಸಾವಿನಿಂದ ತುಂಬಲಾರದ ನಷ್ಟ ಆಗಿದೆ' ಅಂತ ಕಣ್ಣೀರು ಹಾಕ್ತಾರೆ. ನಿನ್ನದು ಒಂದು ಒಳ್ಳೆಯ ಪೋಸ್ ಇರುವ ಫೋಟೋ ಇಲ್ಲದಿದ್ದರೆ ಈಗಲೇ ತೆಗೆಸಿಟ್ಟಿರು. ಮುಂದೆ ಉಪಯೋಗಕ್ಕೆ ಬರುತ್ತೆ."

     "ಹಾಂ??"

     "ಈ ಹೆಸರಿನ ಹಂಬಲ ಇದೆಯಲ್ಲಾ, ಅದು ಮಾಡಬಾರದ್ದು ಮಾಡಿಸುತ್ತೆ. ತನಗಿಂತಾ ಹೆಚ್ಚು ಹೆಸರು ಇನ್ನೊಬ್ಬರಿಗೆ ಬರಬಾರದು ಅಂತ ಇತರರನ್ನು ಕೀಳಾಗಿ ನೋಡುವಂತೆ ಮಾಡುತ್ತೆ. ಅಧಿಕಾರ, ಹೆಸರು ಬರಲು ಕಾರಣರಾದವರನ್ನೇ ಮುಂದೆ ಅವರಿಂದ ತನ್ನ ಅದಿಕಾರ, ಹೆಸರಿಗೆ ಕುತ್ತು ತರುತ್ತಾರೆಂದು ದ್ವೇಷಿಸುವಂತೆ ಮಾಡುತ್ತೆ. ಸ್ನೇಹಿತರು, ಬಂಧುಗಳೇ ಶತ್ರುಗಳಂತೆ ಕಾಣಿಸುವಂತೆ ಮಾಡುತ್ತೆ. ಈ ಹೆಸರು ದುಂಬಿ ಇದ್ದಂತೆ. ಅದು ಹಾಡೂ ಹೇಳುತ್ತೆ. ಚುಚ್ಚಿಯೂ ಚುಚ್ಚುತ್ತೆ."

     "ನಿಜ, ನಿಜ. ಈಗಿನ ರಾಜಕಾರಣಿಗಳನ್ನು ನೋಡಿದರೇ ಗೊತ್ತಾಗುತ್ತೆ."

     "ಬರೀ ರಾಜಕಾರಣಿಗಳೇನು, ಸಾಹಿತಿಗಳು, ಅಧಿಕಾರಿಗಳು, ವರ್ತಕರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಇಂಥವರು, ಅಂಥವರು ಎಲ್ಲರೂ ಹೀಗೆ ಮಾಡುವವರೇ. ಅವರಿಗೂ ಶಾಂತಿಯಿಲ್ಲ, ಅವರಿಂದ ಬೇರೆಯವರಿಗೂ ಶಾಂತಿಯಿಲ್ಲ."

     "ಹಂಗಂತೀಯ??" 

     "ಹಂಗನ್ನದೆ ಇನ್ನು ಹ್ಯಾಂಗನ್ನಲಿ, ಮಂಕಣ್ಣ. ಇನ್ನೊಂದು ವಿಷಯ ಗೊತ್ತಾ? ಈ ಹೆಸರು ಬಂದವರು ಇದ್ದಾರಲ್ಲಾ, ಅವರು ಮೊದಲು ಇದ್ದಂತೆ ಇರುವುದಿಲ್ಲ. ತಾವು ಎಲ್ಲರಿಗಿಂತ ಮೇಲು ಅಂದುಕೊಂಡು ಬೇರೆಯವರನ್ನು, ಬೇರೆಯವರಿರಲಿ, ತನ್ನ ಸ್ನೇಹಿತರು, ಬಂಧುಗಳನ್ನೇ ಹಗುರವಾಗಿ ಕಂಡು ಅವಮಾನ ಮಾಡುತ್ತಾರೆ. ಈ ಸ್ವಭಾವದಿಂದ ವಿನಾಕಾರಣ ಇತರರ ದ್ವೇಷ ಕಟ್ಟಿಕೊಳ್ಳುತ್ತಾರೆ."

     "ಅಯ್ಯಪ್ಪಾ, ನನಗೆ ಹಾರ ಹಾಕದಿದ್ದದ್ದೇ ಒಳ್ಳೆಯದಾಯಿತು ಬಿಡು."

     "ಈಗ ಹಾಕದಿದ್ದರೇನಂತೆ, ಮುಂದೆ ಒಂದು ದಿನ ಹಾಕುತ್ತಾರೆ, ಬಿಡು. ಈ ಹೆಸರಿನ ಹಂಬಲ ಇದೆಯಲ್ಲಾ, ಇದು ಎಂಥಾ ದೊಡ್ಡ ವ್ಯಕ್ತಿಗಳನ್ನೂ ಬಿಡುವುದಿಲ್ಲ. ಹೆಸರು, ಅಧಿಕಾರಕ್ಕಾಗಿ ಅವರು ಸ್ವಂತ ವ್ಯಕ್ತಿತ್ವವನ್ನೇ ಮರೆತುಬಿಡುತ್ತಾರೆ."

     "ಅದೇನೋ ಸರಿ, ಈಗಿನ ದೇಶದ ನಾಯಕರು ಇರೋದೇ ಹಾಗೆ. ಆದರೂ ಅವರು ನಾಯಕರು. ಏಯ್, ನೀನು ಮಾತನ್ನು ಎಲ್ಲೆಲ್ಲಿಗೋ ತಿರುಗಿಸುತ್ತಿದ್ದೀಯಾ. ಈಗಿನ ಸಂದರ್ಭದ ಬಗ್ಗೆ ಮಾತನಾಡು. ಕೊನೆಯ ಪಕ್ಷ ಬಾಯಿಮಾತಿನಲ್ಲಾದರೂ ಹಾಳು ಬಿದ್ದು ಹೋಗಲಿ ಅಂದುಕೊಂಡು ನನ್ನ ಬಗ್ಗೆ ಎರಡು ಒಳ್ಳೆಯ ಮಾತು ಹೇಳಬಹುದಿತ್ತಲ್ಲವಾ?"

      "ಹೇಳಿದ್ದರೆ ನಿನಗೆ ಏನು ಸಿಗುತ್ತಿತ್ತು? ಅವರಿಗೆ ಹೇಳಲು ಬೇಕಿಲ್ಲದಿರಬಹುದು. ನಿನ್ನನ್ನು ಹೊಗಳಿದರೆ ಅವರಿಗೆ ಬೆಲೆ ಕಡಿಮೆ ಆಗುತ್ತೆ ಅಂದುಕೊಂಡಿರಬಹುದು. ಸೇರಿರುವ ಜನ ಯಾರನ್ನು ಯಾರು ಗೌರವಿಸಿದರೂ, ಗೌರವಿಸದಿದ್ದರೂ ತಲೆ ಕೆಡಿಸಿಕೊಳ್ಳದವರು. ಹಾಗಿರುವಾಗ ನಿನಗೆ ಅವರಿಂದ ಗೌರವಿಸಿಕೊಳ್ಳಲೇಬೇಕು ಅನ್ನುವ ಹಂಬಲ ಯಾಕೆ? ಒಂದು ಮಾತು ಹೇಳ್ತೀನಿ ಕೇಳು, ಪ್ರತಿಭೆ ಅನ್ನುವುದು ದೇವರ ಕೊಡುಗೆ. ದೇವರಿಗೆ ತಲೆಬಾಗಬೇಕು. ಗೌರವ ಜನರು ಕೊಡುವುದು. ಕೊಟ್ಟರೆ  ಅವರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ನಿನಗೆ ನೀನೇ ಕೊಟ್ಟುಕೊಳ್ಳುವುದು. ಎಚ್ಚರವಿರಬೇಕು."

     ಅಷ್ಟರಲ್ಲಿ ಮರುಳ ಅವರಿದ್ದಲ್ಲಿಗೆ ಓಡೋಡುತ್ತಾ ಬಂದು ಮಂಕನನ್ನು ಉದ್ದೇಶಿಸಿ "ಓ, ನೀನು ಇಲ್ಲಿದೀಯಾ? ಎಲ್ರೂ ನಿನ್ನನ್ನು ಹುಡುಕ್ತಾ ಇದ್ದಾರೆ, ಹಾರ ಹಾಕೋಕೆ. ಬೇಗ ಬಾ" ಅಂದ. ಮೂಢನನ್ನು ಅಲ್ಲೇ ಬಿಟ್ಟು ಮಂಕ ಹಾರ ಹಾಕಿಸಿಕೊಳ್ಳೋದಕ್ಕೆ ಓಡಿದ. 

Rating
No votes yet

Comments