ನಿಗೂಢ (ಕಥೆ)

ನಿಗೂಢ (ಕಥೆ)

                                       

 
     ' ನಂದಿಗೊಪ್ಪ ' ದಟ್ಟ ಕಾನನದ ಮಧ್ಯೆ ಹರಿಯುತ್ತಿರುವ ನಂದಿ ಹೊಳೆಯ ಎಡ ದಂಡೆಯ ಮೇಲೆ ಸುಮಾರು  ಅರ್ಧ ಮೈಲು ದೂರದಲ್ಲಿ ದಟ್ಟಡವಿಗೆ ತಾಗಿ ಕೊಂಡಿರುವ ಸುಮಾರು ಇಪ್ಪತ್ತೈದು ಮೂವತ್ತು ಮನೆಗಳು ಅಲ್ಲಲ್ಲಿ ಚೆದುರಿಕೊಂಡಂತಿರುವ  ವಿರಳ ಜನ ಸಾಂದ್ರತೆಯ ಒಂದು ಸಣ್ಣ ಕುಗ್ರಾಮ . ಅದು ಕುಣಬಿಯರು ಮರಾಠಿಗರು ಬೆಸ್ತರು ಮತ್ತು ಕೆಲವೆ ಕೆಲವು ಜೈನ ಸಮುದಾಯದ ಮನೆಗಳಿರುವಂತಹ ಊರು. ಆ ಗ್ರಾಮದಲ್ಲಿ ಜೈನ ಸಮು ದಾಯದ ಪಟೇಲ ಧರ್ಮಯ್ಯ ಪ್ರತಿಷ್ಟಿತ ವ್ಯಕ್ತಿ ಎಂದು ಪ್ರಸಿದ್ಧರು,  
 
     ' ನಂದಿಗೊಪ್ಪ ' ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು ಅರವತ್ತು ಎಕರೆ ಅಡಕೆ, ಇಪ್ಪತ್ತೈದು ಎಕರೆ ಬಾಳೆ, ಕಾಳು ಮೆಣಸು ಮತ್ತು ಏಲಕ್ಕಿ ತೋಟವಿದ್ದು ಸುಮಾರು ಐವತ್ತು ಎಕರೆಯಷ್ಟು ತರಿ ಜಮೀನು ಪಟೇಲ ಧರ್ಮಯ್ಯನವರು ಹೊಂದಿದ್ದು, ಅವರು ಅಲ್ಲಿಯ ಆಸುಪಾಸಿನಲ್ಲಿ ಸಿರಿವಂತರೆಂದು ಹೆಸರು ಪಡೆದವರು. ಉಳಿದ ಏಳೆಂಟು ಜೈನ ಸಮು ದಾಯ ದವರು ಸಣ್ಣ ಹಿಡುವಳಿಗಳನ್ನು ಹೊಂದಿರುವ ಮಧ್ಯಮ ವರ್ಗದವರಾಗಿದ್ದು ಉಳಿದಂತೆ ಇನ್ನುಳಿದ ಸಮುದಾಯ ದವರೆಲ್ಲ ಬಡತನ ಮತ್ತು ಬಡತನದ ರೇಖೆಗಿಂತ ಕೆಳಗಿರುವವರೆ.
 
     ಧರ್ಮಯ್ಯನವರು ತಮ್ಮ ಹೆಸರಿಗೆ ತಕ್ಕಂತೆ ಧರ್ಮನಿಷ್ಟರಾಗಿ ಬದುಕುತ್ತಿರುವ ನೀತಿವಂತರು. ಅವರ ಜಮೀನು ಮತ್ತು ತೋಟದ ಕೆಲಸಕ್ಕೆ ಆ ಊರ ಜನರಲ್ಲದೆ ಬೇರೆಡೆಗಳಿಂದ ಕೂಲಿಯಾಳುಗಳನ್ನು ಕರೆ ತರುತ್ತಿದ್ದು, ಅವರಿಗೆ ಧರ್ಮಯ್ಯನವರು ತಮ್ಮ ಮನೆಯ ಸನಿಹದ ಬ್ಯಾಣದಲ್ಲಿ ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದರು. ಒಮ್ಮೆ ಕೂಲಿ ಕೆಲಸ ಕ್ಕೆಂದು ಬಂದವರು ಮರಳಿ ಹೋದವರು ಯಾರೂ ಇಲ್ಲ. ಅವರ ಬದುಕು ಸರಳ ಬದುಕು. ಹಳ್ಳಿಗರು ಏನಾದರೂ ದೈನಂದಿನ ಬದುಕಿಗೆ ಸಾಮಾನು ಸರಂಜಾಮು ತರಲು ಮತ್ತು ಸಂತೆಗೆಂದು ಬರಬೇಕೆಂದರೆ ಸುಮಾರು ಹದಿನೈದು ಮೈಲು ದೂರದಲ್ಲಿರುವ 'ಜೋಕಟ್ಟೆ' ಗ್ರಾಮಕ್ಕೆ ಬರಬೇಕು. ಹೀಗಾಗಿ ನಂದಿಗೊಪ್ಪದ ಜನ ಯಾವುದೆ ಆಡಂಬರವಿಲ್ಲದೆ ಈಗಲೂ ಸರಳ ಜೀವನ ನಡೆಸುವಂತಹ ಸರಳರು. ನಾಗರಿಕತೆಯ ಪಿಡುಗು ಅವರನ್ನು ಇನ್ನೂ ತಟ್ಟಿಲ್ಲ. ಇಲ್ಲಿಯ ವರೆಗೂ ನಂದಿಗೊಪ್ಪದಲ್ಲಿ ಯಾವುದೆ ಬಗೆಹರಿಸ ಲಾರದಂತಹ ಸಮಸ್ಯೆಗಳು ತಲೆದೋರಿಲ್ಲ. ಸಣ್ಣಪುಟ್ಟ ಭಿನ್ನಾಭಿ ಪ್ರಾಯಗಳು ಬಂದರೂ ಅವುಗಳೆಲ್ಲ ಪಟೇಲ ಧರ್ಮಯ್ಯನವರ ಮಧ್ಯಸ್ಥಿಕೆಯಲ್ಲಿ ಪರಿಹರಿಸಲ್ಪಡುತ್ತಿದ್ದವು.
 
     ಆದರೆ ಈಗ ಕೆಲವು ದಿನಗಳ ಲಾಗಾಯ್ತಿನಿಂದ ನಂದಿಗೊಪ್ಪ ಗ್ರಾಮ ಒಂದು ತರಹದ ಆತಂಕ ಮತ್ತು ವಿಷಾದ ಭಾವದಲ್ಲಿದೆ. ನಂದಿಗೊಪ್ಪ ಗ್ರಾಮದ ದನಗಾಯಿ ಕೊರಗ ಈಗ್ಗೆ ಹಲ ದಿನಗಳಿಂದ ಕಾಣುತ್ತಿಲ್ಲ ಸುಮರು ಹದಿನೈದು ದಿನಗಳ ಹಿಂದೆ ಮಾಮೂಲಿನಂತೆ ದನಗಳನ್ನು ಮೇಯಿಸಿಕೊಂಡು ಬರಲು ನಂದಿಹೊಳೆಯ ದಂಡೆಯ ಹುಲ್ಲು ಗಾವಲು ಕಡೆಗೆ ಹೋದವನು ಮರಳಿ ಊರಿಗೆ ಬರಲೆ ಇಲ್ಲ. ದನಗಳು ಮಾತ್ರ ಬಂದವು, ಕೊರಗ ಏನಾದ ? ಎನ್ನುವುದು ಇವತ್ತಿಗೂ ' ನಿಗೂಢ '. ಹೀಗಾಗಿ ಕೊರಗನ ನಿಗೂಢ ಕಣ್ಮರೆ ನಂದಿಗೊಪ್ಪದ ಜನರಿಗೆಲ್ಲ ಒಂದು ಒಗಟಾಗಿ ಕಾಡ ತೊಡಗಿದೆ. 
 
                                                                      *
 
     ಕೊರಗ ಸುಮಾರು ಎಪ್ಪತ್ತೈದು ಎಂಭತ್ತು ವರ್ಷ ಪ್ರಾಯದ ವಿಧುರ. ಈತ ಎಲ್ಲಿಂದ ಬಂದ, ಏಕೆ ಬಂದ ? ಎನ್ನುವುದು ಯಾರಿಗೂ ಗೊತ್ತಿಲ್ಲ. ಈಗ್ಗೆ ಸುಮಾರು ಎಫ್ಫತ್ತು ವರ್ಷಗಳ ಹಿಂದೆ ಈಗಿನ ಪಟೇಲ ಧರ್ಮಯ್ಯನವರ ತಂದೆ ಪಟೇಲ ಚಂದಯ್ಯನವರು ಶ್ರಾವಣ ಮಾಸದ ಕೊನೆಯ ಸೋಮವಾರದಂದು ಜೋಕಟ್ಟೆಯ ಸಂತೆಗೆ ಹೋದವರು ವಾಪಾಸು ಎತ್ತಿನಗಾಡಿಯಲ್ಲಿ ನಂದಿಗೊಪ್ಪಕ್ಕೆ ಮರಳಿ ಬರುತ್ತಿರುವಾಗ ಮೂರುಕೈ ಸರ್ಕಲ್ ಹತ್ತಿರ ಸುಮಾರು ಐದು ವರ್ಷ ಪ್ರಾಯದ ಮುಗ್ಧತೆಯೆ ಮೈವೆತ್ತಂತಿದ್ದ ಒಬ್ಬ ಹುಡುಗ ಅಳುತ್ತ ನಿಂತಿದ್ದ. ಆತನ ಸುತ್ತ ಅನೇಕ ಜನರು ನೆರೆದಿದ್ದು ಅವರನ್ನು ಕಂಡು ಆ ಹುಡುಗ ದಿಗ್ಭ್ರಮೆ ಗೊಂಡಿದ್ದ. ನೆರೆದ ಜನ ಜಂಗುಳಿಯೆಡೆಗೆ ಸಾಗಿದ ಚಂದ್ರಯ್ಯ ಆ ಹುಡುಗನನ್ನು ನೋಡಿದರು. ಆತನ ಪರಿಚಯ ಅವರಿಗೆ ಆಗಲಿಲ್ಲ. ಅವರಿಗೆ ನಂದಿಗೊಪ್ಪ ಹಾಗೂ ಸುತ್ತ ಮುತ್ತಲಿನ ಸಣ್ಣವರು ದೊಡ್ಡವರು ಎನ್ನದೆ ಪರಿಸರದ ಎಲ್ಲರ ಪರಿಚಯ ಅವರಿಗಿತ್ತು. ಜನರನ್ನು ಹಿಂದೆ ಸರಿಸಿ ಅಳುತ್ತಿದ್ದ ಆ ಹುಡುಗನನ್ನು ಸಮಾಧಾನ ಪಡಿಸಿ 
 
     ' ಏನು ಮಗು ಏನು ನಿನ್ನ ಹೆಸರು, ಅಪ್ಪ ಅಮ್ಮ ಎಲ್ಲಿ, ನಿನ್ನ ಊರು ಯಾವುದು ' ಎಂದು ಬಗೆ ಬಗೆಯಾಗಿ ವಿಚಾರಿಸಿದರು. ಆತನ ಹೆಸರು ಕೊರಗ ಎನ್ನುವುದನ್ನು ಬಿಟ್ಟರೆ ಆತನ ತಂದೆ ತಾಯಿ ಮತ್ತು ಊರು ಕೇರಿ ಯಾವವು ಎನ್ನುವ ವಿಷಯ ಮಾತ್ರ ತಿಳಿಯಲಿಲ್ಲ. 
 
     ಹುಡುಗ ಕೊರಗನ ಸ್ಥಿತಿ ಕಂಡು ಮರುಕಗೊಂಡ ಚಂದ್ರಯ್ಯ ಆತನಿಗೆ ತಿಂಡಿ ಕೊಟ್ಟು ಸಮಾಧಾನ ಪಡಿಸಿ ತಮ್ಮ ಜೊತೆಗೆ ಎತ್ತಿನಗಾಡಿಯಲ್ಲಿ ಕೂಡ್ರಿಸಿಕೊಂಡು ಆತನನ್ನು ನಂದಿಗೊಪ್ಪಕ್ಕೆ ಕರೆ ತಂದರು. ಚಂದ್ರಯ್ಯ ಕೊರಗನನ್ನು ಅವರ ನಂಬಿಕಸ್ತ ಆಳು ತಿಮ್ಮ ಪೂಜಾರಿಯ ವಶಕ್ಕೆ ಕೊಟ್ಟರು. ಮಕ್ಕಳಿಲ್ಲದ ತಿಮ್ಮ ಮತ್ತು ಆತನ ಹೆಂಡತಿ ಪಾರ್ವತಿ ಕೊರಗನನ್ನು ತಮ್ಮ ಸ್ವಂತ ಮಗನಂತೆ ನೋಡಿ ಕೊಂಡರು. ಕೊರಗನೂ ಸಹ ಅವರ ನಂಬಿಕೆಗೆ ಚ್ಯುತಿ ಬರದಂತೆ ಅವರ ಸ್ವಂತ ಮಗನಂತೆಯೆ ನಡೆದುಕೊಂಡ. ವಯಸ್ಸಿಗೆ ಬಂದ ಕೊರಗನಿಗೆ ಚಂದ್ರಯ್ಯನವರ ಇನ್ನೊಬ್ಬ ಆಳುಮಗ ಗೋವಿಂದನ ಮಗಳು ಗೌರಿಯನ್ನು ಕೊಟ್ಟು ಮದುವೆ ಮಾಡಿದರು. ಮನೆ ತುಂಬಿದ ಗೌರಿ ಯನ್ನು ತಿಮ್ಮ ಪಾರ್ವತಿಯರು ತಮ್ಮ ಸ್ವಂತ ಮಗಳಂತೆ ನೋಡಿ ಕೊಂಡರು. ಕೊರಗ ಸಂತೋಷ ಮತ್ತು ಸಂಭ್ರಮದಲ್ಲಿ ತೇಲಾಡಿದ. ಇನ್ನೇನು ತನಗೆ ಸ್ವರ್ಗ ಮೂರೇ ಗೇಣು ಎಂದು ಹರುಷ ಪಟ್ಟಿದ್ದ. ಆದರೆ ಆ ಸಂತೋಷ ಬಹಳ ದಿನ ಉಳಿಯಲಿಲ್ಲ. 
 
     ಮದುವೆಯಾಗಿ ಹತ್ತು ವರ್ಷ ಕಳೆದರೂ ಗೌರಿಗೆ ಮಕ್ಕಳಾಗಲಿಲ್ಲ. ಅತ್ತೆ ಪಾರ್ವತಿ ಸೊಸೆ ಗೌರಿಗೆ ಮಕ್ಕಳಾಗ ಲೆಂದು ಹರಕೆ ಕೇಳಿಕೊಳ್ಳದ ದೇವರಿಲ್ಲ. ಧರ್ಮಸ್ಥಳದ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ, ಸಿಗಂದೂರೇಶ್ವರಿ, ಪಂಜುರ್ಲಿ ಜುಟ್ಟಿಗ ಮತ್ತು ಕಲ್ಕುಟಿಗ ಮುಂತಾದ ಎಲ್ಲ ದೇವರುಗಳಿಗೆ ಮತ್ತು ದೇವಿಯರಿಗೆ ಹರಕೆ ಹೊತ್ತಳು. ಅಂತೂ ಹರಕೆಯ ಫಲವೋ ಅಥವಾ ಗೌರಿಯ ಅದೃಷ್ಟವೊ ಬಹಳ ನಿರೀಕ್ಷೆಯ ನಂತರ ಗೌರಿ ಗರ್ಭಿಣಿಯಾದಳು. ತಿಮ್ಮ ಪಾರ್ವತಿಯರ ಸಂತಸಕ್ಕೆ ಪಾರವಿರಲಿಲ್ಲ. ಆದರೆ ಕೊರಗನನ್ನು ಬೆನ್ನು ಹತ್ತಿದ ವಿಧಿ ಆತನನ್ನು ಬಿಡಲೆ ಇಲ್ಲ. ಆತನು ಸಂತೋಷದಿಂದ ಇರುವುದು ಅದಕ್ಕೆ ಹಿಡಿಸಲಿಲ್ಲವೋ ಏನೋ ಎಳ್ಳಮವಾಸ್ಯೆಯ ರಾತ್ರಿ ಹೆರಿಗೆ ಕಷ್ಟವಾಗಿ ಗೌರಿ ಮೃತ ಗಂಡು ಮಗುವಿಗೆ ಜನ್ಮ ನೀಡಿ ಕಣ್ಮುಚ್ಚಿದಳು. ತಿಮ್ಮ ಪಾರ್ವತಿಯರು ಈ ತೀವ್ರ ಆಘಾತದಿಂದ ತತ್ತರಿಸಿ ಹೋದರು. ಇನ್ನೂ ಆಘಾತಕ್ಕೊಳಗಾದವ ಕೊರಗ. ಮಂಕನಂತಾದ ಆತ ಜನಗಳೊಂದಿಗೆ ಮಾತುಕತೆಗಳನ್ನು ಕನಿಷ್ಟ ಮಟ್ಟಕ್ಕಿಳಿಸಿದ. .ದನ ಕಾಯುವ ಕಾಯಕವನ್ನು ಯಾಂತ್ರಿಕವಾಗಿ ಮುಂದುವರೆಸಿಕೊಂಡು ಹೋದ. 
 
     ಆತ ಅಂದಿನಿಂದ ಇಂದಿನ ವರೆಗೂ ಕರೆದವರ ಮನೆಗೆ ಹೋಗಿ ಉಂಡು ಊರ ಹೊರಗಿನ ಪಾಳುಬಿದ್ದ  ಸಂದೀಶ್ವರ ದೇವಸ್ಥಾನದ ಹೊರ ಜಗುಲಿಯಲ್ಲಿ ವಾಸ್ತವ್ಯ ಮಾಡಿದ. ಎಲ್ಲರೊಂದಿಗ ಇದ್ದು ಎಲ್ಲದಕ್ಕೂ ಆತೀತನಾಗಿ ಜೀವನ ಸಾಗಿಸಿದ. ಪಟೇಲ ಚಂದ್ರಯ್ಯ ಕೊರಗನಿಗೆ ಮತ್ತೊಂದು ಮದುವೆ ಮಾಡಿಸಲು ಇನ್ನಿಲ್ಲದ ಪ್ರಯತ್ನ ಪಟ್ಟರು. ಆದರೆ ಕೊರಗ ' ನನ್ನ ಹಣೆಬರಹದಲ್ಲಿ ಹೆಂಡತಿ ಮಕ್ಕಳ ಯೋಗ ಬರೆದಿಲ್ಲ ' ಎಂದು ಚಂದ್ರಯ್ಯನವರ ಕೋರಿಕೆಯನ್ನು ನಿರಾಕರಿಸಿ ಬಿಟ್ಟ. ಕಾಲ ಕಳೆದಂತೆ ಪಟೇಲ ಚಂದ್ರಯ್ಯ ಕಾಲ ವಶವಾದರು. ಕೊರಗನ ಜೀವನದಲ್ಲಿ ಒಂದರ ಮೇಲೊಂದು ಹೊಡೆತಗಳು. ಮೊದಲನೆಯದು ಆತನ ಹೆಂಡತಿ ಮಗುವಿನ ಸಾವು, ನಂತರ ಅಲ್ಪಾವಧಿ ಯಲ್ಲಿಯೆ ತನ್ನ ಸಾಕು ತಂದೆ ತಾಯಿಗಳ ಸಾವು ಆತನನ್ನು ಕಂಗೆಡುವಂತೆ ಮಾಡಿತು. ಇವೆಲ್ಲ ಆಘಾತಗಳಿಂದ ಕಂಗೆಟ್ಟ ಆತ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಅಂತರ್ಮುಖಿಯಾದ. ಒಂದು ರೀತಿಯಲ್ಲಿ ಯೋಗಿ ಯಂತೆ ಬದುಕಿದನೆಂದೆ ಹೇಳಬೇಕು. ಕರೆದವರಲ್ಲಿ ಹೋಗಿ ಉಂಡ, ಜೀವನ ಕಳೆದ. ಅವನು ಬೆಸ್ತರು ಮರಾಠಿಯರು, ಕುಣಬಿಯರು  ಮತ್ತು ಜೈನರು ಎಂಬ ಬೇಧ ಭಾವವೆಣಿಸಲಿಲ್ಲ. ಅವರುಗಳೂ ಸಹ ಅಷ್ಟೆ ಕೊರಗನನ್ನು ಪರಕೀಯ ನಂತೆ ಕಾಣಲಿಲ್ಲ. ಅವನು ಎಲ್ಲರಿಗೂ ಗೌರವ ಕೊಟ್ಟ, ಅವರೂ ಗೌರವಿಸಿದರು. ಕೊರಗ ಊರ ಜನರ ದನ ಕಾಯ್ದದ್ದಕ್ಕೆ ಪ್ರತಿಫಲ ಕೇಳಲಿಲ್ಲ, ಯಾರೋ ಕೊಟ್ಟ ಬಟ್ಟೆಯನ್ನು ಉಟ್ಟ, ಕರೆದಲ್ಲಿಗೆ ಹೋಗಿ ಉಂಡ, ವೃದ್ಧಾಪ್ಯ ದಂಚಿಗೆ ಸರಿದ. 
 
                                                                             *
 
     ಕೊರಗನ ಕಣ್ಮರೆಯಿಂದ ವ್ಯಾಕುಲಗೊಂಡ ನಂದಿಗೊಪ್ಪದ ಜನ ಆತನಿಗಾಗಿ ಹುಡುಕದ ಜಾಗವಿಲ್ಲ. ನಂದಿ ಗೊಪ್ಪದ ಪಕ್ಕದ ಕಾಡು, ನಂದಿ ಹೊಳೆ ಮತ್ತು ಊರಿನ ಆಸುಪಾಸು, ಎಲ್ಲಿ ಹುಡುಕಿದರೂ ಕೊರಗನ ಸುಳಿವಿಲ್ಲ. ಕಾಡು ಪ್ರಾಣಿಗಳಿಗೆ ಆಹಾರ ವಾಗಿರುವನೆ ಎಂದು ಊಹಿಸಿದರೆ ಎಲ್ಲಿಯೂ ಆತನ ಕಳೆಬರದ ಅವಶೇಷ ಗಳಿಲ್ಲ. ನೀರಿನಲ್ಲಿ ಮುಳುಗಿರುವನೆ ಎಂದರೆ ಎಷ್ಟು ದಿನಗಳಾದರೂ ಆತನ ದೇಹ ನಂದಿಹೊಳೆಯಲ್ಲಿ ಪತ್ತೆಯಾಗಲಿಲ್ಲ. ಬೇರೆ ಎಲ್ಲಿಯೂ ಆತನಿಗೆ ನೆಂಟರಿಷ್ಟರಿಲ್ಲ. ನಂದಿಕೊಪ್ಪ ಅಲ್ಲಿಯ ಜನ ಮತ್ತು ಪರಸರವೆ ಆತನ ಸರ್ವಸ್ವ. ಜೀವನ ದಲ್ಲಿ ಬೇಸರಗೊಂಡು ಊರು ಬಿಟ್ಟು ಹೋದನೆ, ಹೋಗಬಹುದಾದರೂ ಎಲ್ಲಿಗೆ ? ಪಟೇಲ ಚಂದ್ರಯ್ಯನವರ ಜೊತೆ ನಂದಿಕೊಪ್ಪಕ್ಕೆ ಬಂದವನು ಜೀವನ ಪೂರ್ತ ಕಳೆದರೂ ಊರ ಗಡಿದಾಟಿ ಆಚೆ ಹೋದವನಲ್ಲ, ಹಾಗಾದರೆ ಕೊರಗ ಹೋದನೆಲ್ಲ್ಲಿ? 
 
     ದಟ್ಟ ಕಾಡಿನ ಪಕ್ಕ ಹರಿಯುತ್ತಿರುವ ನಂದಿಹೊಳೆ ಹಾಗೂ ಬೆಟ್ಟ ದ ತಪ್ಪಲಿನಲ್ಲಿ ಸರಿ ಸುಮಾರು ಮೂರು ಮೈಲಿ ವ್ಯಾಪ್ತಿಯಲ್ಲಿ ಹೊಳೆ ನೀರಿನ ಸರೋವರವನ್ನು ನಿರ್ಮಿಸಿದ್ದು ಮಳೆಯಿರಲಿ ಬೇಸಿಗೆಯಿರಲಿ ನೀರಿನ ಪಾತಳಿಯಲ್ಲಿ ಹೆಚ್ಚು ಕಡಿಮೆಯಿರುವದಿಲ್ಲ, ಒಂದೇ ಪಾತಳಿಯಲ್ಲಿ ನೀರು ನಿಂತಿರುತ್ತೆ. ಅದಕ್ಕೆ ಹೊಂದಿಕೊಂಡಂತೆ ಹುಲ್ಲುಗಾವಲು ಸಣ್ಣಪುಟ್ಟ ನಡುಗಡ್ಡೆಗಳಿದ್ದು ಅಲ್ಲಿಯ ಹುಲ್ಲುಗಾವಲುಗಳೆ ಕೊರಗನು ದನಗಳನ್ನು ಮೇಯಿಸುವ ತಾಣಗಳು. ಇತ್ತೀಚೆಗೆ ಕೊರಗನ ಕಣ್ಣು ಮತ್ತು ಕಿವಿಗಳು ಮಂದವಾಗಿದ್ದವು. ಆತನ ಚಪ್ಪಲಿಗಳು ಒಂದು ದೊಡ್ಡ ಹೊನ್ನೆಮರದ ಬುಡದಲ್ಲಿ ಕಂಡು ಬಂದಿದ್ದು, ಗ್ರಾಮಸ್ಥರೆಲ್ಲ ಕೊರಗನಿಗಾಗಿ ಹುಡುಕಿದರೂ ಆತನ ಪತ್ತೆಯಾಗಲಿಲ್ಲ. ಕೆಲವರು ಕೊರಗನನ್ನು ಯಾವುದೋ ಹೆಬ್ಬಾವು ನುಂಗಿರಬಹುದು ಎನ್ನುವ ಅಭಿಪ್ರಾಯಕ್ಕೆ ಬಂದರು. ಆದರೆ ಹೆಬ್ಬಾವುಗಳು ಸಣ್ಣ ಮಕ್ಕಳನ್ನು ಬಹುಶಃ ನುಂಗಬಹುದೆ ವಿನಃ ದೊಡ್ಡವರನ್ನಲ್ಲ. ಅನಕೊಂಡ ದಂತಹ ಬೃಹತ್ ಉರಗಗಳ ಸಂತತಿ ಆಫ್ರಿಕದ ದಟ್ಟ ಕಾಡುಗಳಲ್ಲಿ ಇರಬಹುದೆ ಹೊರತು ದಕ್ಷಿಣ ಭಾರತದ ಸಹ್ಯಾದ್ರಿ ಕಾನುಗಳಲ್ಲಲ್ಲ. ಹೀಗಾಗಿ ದಿನಗಳೆದಂತೆ ಕೊರಗನ ಹುಡುಕಾಟ ನಿರರ್ಥಕವೆಂಬ ತೀರ್ಮಾನಕ್ಕೆ ನಂದಿಕೊಪ್ಪದ ಜನ ಬಂದರು. ಕಾಲ ಎಲ್ಲವನ್ನು ಮರೆಸುತ್ತದೆ ನಿಜ, ಆದರೆ ನಿಗೂಢ ನೆಲೆಯಿಂದ ಕೊರಗ ಕಮಲ ಪತ್ರದ ಮೇಲಿನ ನೀರ ಹನಿಯಂತೆ ಬದುಕಿ ನಿಗೂಢವಾಗಿ ಕಣ್ಮರೆ ಯಾದ. ಕೊನೆಗೆ ನಂದಿಗೊಪ್ಪದವರ ಪಾಲಿಗೆ ಒಂದು ಯಕ್ಷಪ್ರಶ್ನೆಯಾಗಿಯೇ ಉಳಿದ.
 
                                                                                                                                 
 
                                                                                   ***. 
 
 
                  
 
Rating
Average: 1 (1 vote)

Comments