ಸ್ವ ಸ್ವರೂಪದ ಅರಿವು
ಸ್ವ ಸ್ವರೂಪದ ಅರಿವು
ಶ್ರೀಮದ್ಭಾಗವತದ ಒಂದು ಶ್ಲೋಕದಲ್ಲಿ ಹೇಳಿರುವ ಭಾವಾರ್ಥ ಈ ರೀತಿ ಇದೆ. " ಈ ಜಗತ್ತಿನಲ್ಲಿ ಎರಡು ರೀತಿಯ ಜನರಿಗೆ ಮಾತ್ರ ಯಾವಾಗಲು ಸುಖವುಂಟು. ಒಬ್ಬ ಪರಮ ಮುಢ, ಮತ್ತೊಬ್ಬ ತನ್ನನ್ನು ತಾನೇ ಮೀರಿದವನು ಅಂದರೆ, ತನ್ನ ಮತಿಯನ್ನು ಮೀರಿ ಪರಮಹಂಸ ಸ್ಥಿತಿಯನ್ನು ಮುಟ್ಟಿದವನು. ಇವೆರೆಡರ ಮಧ್ಯದಲ್ಲಿ ಇರುವ ಎಲ್ಲ ಬಗೆಯ ಜನರೂ ಬಗೆ ಬಗೆಯ ಹೊಯ್ದಾಟವನ್ನು, ದುಃಖವನ್ನು ಅನುಭವಿಸುತ್ತಲೇ ಇರುತ್ತಾರೆ."
ಉತ್ಕ್ರುಷ್ಟನು ಪರಮಸುಖಿ. ಉನ್ಮಾದದ ಸ್ಥಿತಿಯಲ್ಲಿ ಭಗವಂತನ ಚಿಂತನೆಮಾಡುತ್ತಾ, ಭಗವಂತನಲ್ಲಿ ಒಂದಾಗಿ ಆನಂದಾನುಭೂತಿಯಲ್ಲಿ ವಿಹರಿಸುತ್ತಾನೆ. ಈತ ಪ್ರಪಂಚರಹಿತನಾಗಿ, ಅಂಟಿಕೊಂಡಿದ್ದರು ಅಂಟದಂತೆ, ಇದ್ದರು ಇರದಂತೆ ಪ್ರತಿಕ್ಷಣವನ್ನು ಪರಮಾನಂದದಲ್ಲಿ ಅನುಭವಿಸುತ್ತಾನೆ. ಈತನಿಗೆ ಯಾವ ಬೇಕು ಬೇಡಗಳು, ಸುಖ ದುಃಖಗಳು ಏನೂ ಪ್ರಭಾವ ಬೀರಲಾರವು.ಬಂದದ್ದೆಲ್ಲ ಆತನ ದಿವ್ಯ ಪ್ರಸಾದವಾಗುತ್ತದೆ, ಹೀಗಾಗಿ ಈತ ನಿತ್ಯಾನಂದ . ಇನ್ನು ನಿಕ್ರುಷ್ಟನೆನ್ನುವ ವ್ಯಕ್ತಿಗೆ ತನ್ನ ಬಗ್ಗೆ ಏನೂ ಅರಿವಿಲ್ಲ, ಈ ಜಗತ್ತಿನಲ್ಲಿ ಹೇಗೆ ಆಯಿತೋ ಹಾಗೆ ಬದುಕುವುದು, ಏನೇನು ಬಂತೋ ಅದನ್ನು ಪೂರ್ವಾಗ್ರಹವಿಲ್ಲದೆ ಯಥಾವತ್ತಾಗಿ ಸ್ವೀಕರಿಸಿ ಅನುಭವಿಸಿಬಿಡುತ್ತಾರೆ. ಅಂದಿಗೆ ಆದರೆ ಆಯಿತು, ನಿನ್ನೆ ಮತ್ತು ನಾಳೆಯ ಚಿಂತೆಯ ಗೋಜಿಗೆ ಹೋಗದೆ ಎಲ್ಲಾದರೆ ಅಲ್ಲಿ, ಹೇಗಾದರೆ ಹಾಗೆ ಬದುಕಿ ಬಿಡುತ್ತಾರೆ. ಸುಖ ದುಃಖಗಳ ಗೊಡವೆಗೆ ಹೋಗದೆ ನಗುವಾಗ ನಕ್ಕು ಅಳುವಾಗ ಅತ್ತು ಸುಮ್ಮನಾಗಿಬಿಡುತ್ತಾರೆ.
ಇವರಿಬ್ಬರ ಮಧ್ಯದಲ್ಲಿರುವ ಮಂದಿಯೇ ಶ್ರೀಸಾಮಾನ್ಯರು, ಅರ್ಥಾತ್ ನಮ್ಮಂತಹವರು. ಹೌದು, ನಮ್ಮ ಸ್ಥಿತಿ ಉತ್ಕ್ರುಷ್ಟವೂ ಅಲ್ಲ, ನಿಕ್ರಿಷ್ಟವೂ ಅಲ್ಲ ಮಧ್ಯೆ ಇರುವ ಒಂದು ರೀತಿಯ ಅತಂತ್ರ ಸ್ಥಿತಿ, ತ್ರಿಶಂಕು. ಅತ್ತಲೂ ಹೋಗಲಾರದೆ ಇತ್ತಲೂ ಇರಲಾರದೆ ಪರಿತಪಿಸುತ್ತಾ ಹೆಣಗಾಡುವವರು. ಅಲ್ಪ ಸುಖದ ಬೆನ್ನು ಹತ್ತಿ ಬೆಟ್ಟದಷ್ಟು ಕಷ್ಟ ತಂದುಕೊಳ್ಳುವವರು. ಶ್ರೀ ರಾಮಕೃಷ್ಣರು ಒಂದು ಉದಾಹರಣೆ ಕೊಡುತ್ತಾರೆ " ಹಲಸಿನ ಹಣ್ಣಿನ ಸುವಾಸನೆಗೆ ಮಾರುಹೋಗಿ ಅಂಟಿನ ಮೇಲೆ ಕೂತ ನೊಣದ ಹಾಗೆ." ಎಂತಹ ದುಃಸ್ತಿತಿ? ಹಲಸಿನ ಹಣ್ಣಿನ ರುಚಿಯು ಸಿಗಲಿಲ್ಲ, ಮೇಲೆದ್ದು ಬರಲೂ ಸಾಧ್ಯವಿಲ್ಲ. ಕೇವಲ ಸುವಾಸನೆಯ ಮೋಹಕ್ಕೆ ಬಿದ್ದು ಜೀವ ಕಳೆದುಕೊಂಡ ನೂಣದಂತೆ ಜೀವನ. ವಿವೇಕವಿಲ್ಲದೇ ಇಂದ್ರೀಯ ಸುಖದ ಆಸೆಗೆ ಹೋದಲ್ಲಿ ಈ ರೀತಿಯ ದುರಂತಕ್ಕೆ ಈಡಾಗಬೇಕಾಗುತ್ತದೆ. ಇಂದ್ರೀಯ ಅಲ್ಪಸುಖದಲ್ಲಿ ತೃಪ್ತರಾಗಿಬಿಡಬಹುದೆಂದು ಭ್ರಮಿಸುತ್ತೇವೆ . ಆದರೆ, ಅಲ್ಪ ಸುಖದ ಹಿಂದೆ ಇರಬಹುದಾದ ಬೆಟ್ಟದಷ್ಟು ಕಷ್ಟ ಇರುವ ವಿಚಾರ ಮನಸ್ಸಿಗೆ ಬರುವುದೇ ಇಲ್ಲ. ವೇದಾಂತ ಇಂತಹ ಅಲ್ಪ ವಿಚಾರಮತಿಗಳಿಗೆ " ನಿಂತಲ್ಲೇ ನಿಲ್ಲುವ ಜೀವಿಗಳು " ಎನ್ನುತ್ತದೆ, ವಿವೇಕವನ್ನು ಪಡೆಯಲಿಚ್ಚಿಸುವ ಮಂದಿಗೆ ಸಂಸಾರಿಗಳು ಎನ್ನುತ್ತದೆ.
ಶ್ರೀ ರಾಮಕೃಷ್ಣರು ಇಂತಹ ಸಂಸಾರಿಗಳಿಗೆ ಒಂದು ಮಾತು ಹೇಳುತ್ತಾರೆ " ಸಂಸಾರ ಎಂದರೆ ಪ್ರಪಂಚ ಮತ್ತು ಪ್ರಾಪಂಚಿಕತೆ. ನಮ್ಮಲ್ಲಿ ಪ್ರತಿಯೊಬ್ಬರೂ ಈ ಸಂಸಾರದಲ್ಲಿ ನಾಮ ರೂಪ ಜಗತ್ತಿನಲ್ಲಿ ಇದ್ದೇವೆ. ಮನುಷ್ಯನಾಗಿ ಅವತರಿಸಿದಾಗ ಭಗವಂತನೂ ಸಹ ಈ ಸಂಸಾರದಲ್ಲಿ ಇರುತ್ತಾನೆ. ಆದರೆ........ ಸಂಸಾರಿಗಳು ಯಾವಾಗಲು ಒಂದು ವಿಚಾರವನ್ನು ಮರೆಯಬಾರದು. ನಾವು ಸಂಸಾರದಲ್ಲಿ ಇರಬೇಕು, ಸಂಸಾರ ಮಾತ್ರ ನಮ್ಮೊಳಗೇ ಇರಬಾರದು. ದೋಣಿ ನೀರಿನಲ್ಲಿ ಇರಬೇಕು, ಆದರೆ ದೋಣಿಯೊಳಗೆ ನೀರಿರಬಾರದು. ಈ ಮಾತನ್ನು ಚನ್ನಾಗಿ ನೆನಪಿಟ್ಟುಕೊಳ್ಳಿ, ಸಂಸಾರದಲ್ಲಿದ್ದ ಮಾತ್ರಕ್ಕೆ ಮನುಷ್ಯ ಸಂಸಾರಿಯಾಗುವುದಿಲ್ಲ. ಸಂಸಾರ ಅಥವಾ ಪ್ರಾಪಂಚಿಕತೆಯು ನಮ್ಮನ್ನು ಹೊಕ್ಕಾಗ ಮಾತ್ರ , ಈ ನಾಮ ರೂಪಗಳ ಜಗತ್ತೇ ಸಮಸ್ತವೂ ಎಂದು ಭಾವಿಸಿದಾಗ ನಾವು, ನೀವು ಕೊಳೆತು ನಾರುತ್ತೇವೆ. ಬೆಳೆಯಲು, ಪ್ರಗತಿ ಹೊಂದಲು ಸ್ವಲ್ಪವೂ ಇಚ್ಚಿಸುವುದಿಲ್ಲ. ಇದೇ ಮಾನವ ಜೀವನದಲ್ಲಿ ಇರುವ ಅಪಾಯ. ಎಷ್ಟೇ ಕಷ್ಟವಾದರೂ ಸಹಾ ಇಂತಹ ನಾಮ ರೂಪಗಳ ವಿಚಾರವನ್ನು ದೂರ ಮಾಡಲೇಬೇಕು. ಅಧ್ಯಾತ್ಮಿಕ ಶ್ರದ್ದೆ ಮತ್ತು ಎಚ್ಚರಗಳೇ ನಮ್ಮ ರಕ್ಷಾ ಕವಚ, ಈ ಕವಚ ಹೊಂದಲು ಸಾಧನೆ ಮಾಡಬೇಕು. " ಈ ನಾಮ ರೂಪಗಳ ವಿಚಾರವನ್ನು ದೂರ ಮಾಡಬೇಕಾದರೆ ವಿವೇಕ ಅಥವಾ ಅರಿವು ಬೇಕು.
ಪ್ರಕೃತಿ ನಮಗೆ ಈ ಅರಿವನ್ನು ದಾನವಾಗಿ ಕೊಡುವುದಿಲ್ಲ. ಅದು ಬೇರೆಲ್ಲಿಂದಲೋ ಬರಬೇಕಾಗಿಲ್ಲ . ಅದು ನಮ್ಮೊಳಗೇ ಇತ್ತು ಇದೆ , ಮತ್ತು ಇರುತ್ತದೆ. ಇದನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ. ಇದಕ್ಕೆ ಒಂದು ದೃಷ್ಟಾಂತ ಏನೆಂದರೆ, "ರಾಜಸ್ವವನ್ನು ಮರೆತ ರಾಜಕುಮಾರ ತನಗೇನೂ ಗತಿ ಇಲ್ಲವೆಂದು ಭಿಕ್ಷೆ ಬೇಡಿದಂತೆ. ಆದರೆ, ತನ್ನ ನಿಜ ಸ್ಥಿತಿ ಅರಿತಮೇಲೆ ಭಿಕ್ಷೆಯ ಮಾತೆಲ್ಲಿ ? " ಇದನ್ನೇ ವೇದಾಂತ 'ಅರಿವು' ಎನ್ನುತ್ತದೆ. ಈ ಅರಿವು, ಅಧ್ಯಾತ್ಮ ದೃಷ್ಟಿಯಿಂದ ನಮ್ಮ ಒಳಗಣ್ಣನ್ನು ತೆರೆದು ನೋಡಲು ಸಹಾಯಮಾಡುತ್ತದೆ. ಆಗ ಒಳಗೆ ನಿರಂತರವಾಗಿರುವ ಪೂರ್ಣತೆಯನ್ನು ಕಾಣಲು ಸಾಧ್ಯವಾಗುತ್ತದೆ. ಇದೆ ನಮ್ಮಸಹಜ ಸ್ವಭಾವ. ಇದನ್ನೇ ಶ್ರೀ ರಮಣರು ' ಸ್ವ ಸ್ವರೂಪ ' ಎನ್ನುತ್ತಿದ್ದರು. ಆಗ ನಮ್ಮ ಗಮನ ಉನ್ನತವಾದ , ಪರಿಪೂರ್ಣವಾದ ಮತ್ತು ಅನಂತ ಸುಖದ ಕಡೆಗೆ ಮುಖ ಮಾಡುತ್ತದೆ.
ಇದು ಏಕಾತ್ಮವಾದ ಪರಿಪೂರ್ಣ ಆತ್ಮಜ್ಞಾನ. ಈ ಅರಿವು " ನಾವು ಬಾಳುವುದು, ಚಲಿಸುವುದು, ನಮ್ಮ ಅಸ್ತಿತ್ವವನ್ನು ಹೊಂದಿರುವುದು ಭಗವಂತನಿಗಾಗಿ ಮಾತ್ರ " ಎಂಬ ಮಾರ್ಗವನ್ನು ತೋರುತ್ತದೆ. ಈ ಅರಿವನ್ನು ಪಡೆಯಬೇಕಾದರೆ ನಮ್ಮ ನಿಜ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮರೆತಿರುವುದನ್ನು ಜ್ಞಾಪಿಸಿಕೊಳ್ಳಬೇಕಾಗಿದೆ. ಜಗತ್ತಿನ ಗೊಜಲಿನಲ್ಲಿ ದಾರಿ ತಪ್ಪಿರುವ ನಾವು ನಮ್ಮ ' ಸ್ವ ಸ್ವರೂಪ ' ದ ದಿವ್ಯ ರಾಜಮಾರ್ಗವನ್ನು ಕಂಡು ಕೊಳ್ಳಬೇಕಾಗಿದೆ. ಉಪನಿಷತ್ತು ಹೇಳುತ್ತದೆ . " ಬದ್ಧ ಜೀವಿಗಳಿಗೆ ಮೋಕ್ಷದ ಮಾರ್ಗ ಸದಾ ಕಾಲ ತೆರದೆ ಇರುತ್ತದೆ. ಅದಕ್ಕಾಗಿ ಸಾಧನೆ ಬೇಕಾಗಿದೆ. ಈ ಮಾರ್ಗವನ್ನು ತಿಳಿದು ಹೊರಡಬೇಕಾಗಿದೆ." ಇದನ್ನು ಬೈಬಲಿನಲ್ಲೂ ಕೂಡ ಹೇಳಲಾಗಿದೆ. " ಕೇಳು, ನಿನಗದು ದೊರೆಯುತ್ತದೆ. ಹುಡುಕು ನಿನಗದು ಸಿಗುತ್ತದೆ. ಬಾಗಿಲು ತಟ್ಟು ತೆಗದೇ ತೆಗೆಯುತ್ತದೆ. ಏಕೆಂದರೆ, ಕೇಳುವ ಪ್ರತಿಯೊಬ್ಬನಿಗೂ ದೊರೆಯುತ್ತದೆ. ಹುಡುಕುವ ಪ್ರತಿಯೊಬ್ಬನಿಗೂ ಸಿಗುತ್ತದೆ. ಬಾಗಿಲು ತಟ್ಟುವ ಪ್ರತಿಯೊಬ್ಬನಿಗೂ ಅದು ತೆರೆದುಕೊಳ್ಳುತ್ತದೆ. " ನಾವು ಕೇಳುವ, ಹುಡುಕುವ ಮತ್ತು ಬಾಗಿಲನ್ನು ತೆರೆಯುವ ಪ್ರಯತ್ನ ಮಾಡಬೇಕಾಗಿದೆ. ನಿತ್ಯ ಜೀವನದಲ್ಲಿ ಅನುಷ್ಠಾನ ಬೇಕಾಗಿದೆ.ಛಲಬಿಡದ ತ್ರಿವಿಕ್ರಮನಾಗಬೇಕಾಗಿದೆ.
ಇಲ್ಲಿ ಶ್ರೀ ಶಂಕರರ ಶ್ಲೋಕ ಅತ್ಯಂತ ಅಗತ್ಯ ಎನಿಸುತ್ತದೆ. " ಮೂಢ ಜಹೀಹಿ ಧನಾಗಮ........ವಿನೋದಯ ಚಿತ್ತಂ "
" ಮೂಢ, ಧನದ ವಿಷಯದಲ್ಲಿ ದುರಾಸೆಯನ್ನು ಬಿಟ್ಟುಬಿಡು. ನಿನ್ನ ಮನಸನ್ನು ನಿಜವಾದದ್ದು, ಒಳ್ಳೆಯದು ಇವುಗಳಲ್ಲಿ ಇಡು. ನಿರ್ಲಿಪ್ತತೆಯನ್ನು ಸಾಧಿಸಿಕೊ. ಪ್ರಾಮಾಣಿಕವಾದ ಪರಿಶ್ರಮದಿಂದ ಏನನ್ನು ಪಡೆಯುತ್ತಿಯೋ ಅದರಿಂದ ಚಿತ್ತ ಮತ್ತು ಹೃದಯಗಳಲ್ಲಿ ಆನಂದವನ್ನು ಅನುಭವಿಸುವುದನ್ನು ಕಲಿ."
ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. "ಧನ ಕೆಟ್ಟದ್ದೇ? ಇಲ್ಲ... ನಾವು ಭಿಕ್ಷುಕರಾಗಬೇಕೆ?" ಶಂಕರರು ತುಂಬಾ ಸುಂದರವಾಗಿ ಹೇಳುತ್ತಾರೆ. " ನಿಮ್ಮ ಮನಸನ್ನು ಧರ್ಮದಲ್ಲಿ ನೆಲೆಸುವಂತೆ ಮಾಡಿ. ರಾಗರಹಿತೆಯನ್ನು ಬೆಳೆಸಿಕೊಳ್ಳಿ. ಯಾವುದು ನಿಮ್ಮದಲ್ಲವೋ, ಯಾವುದನ್ನು ನೀವು ಸಂಪಾದಿಸಿಲ್ಲವೋ, ಅದರಿಂದ ನಿಮ್ಮ ಮನಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳಿ. ನಿಮ್ಮದೇ ಪ್ರಾಮಾಣಿಕ ಪರಿಶ್ರಮದಿಂದ ದೊರೆತ ಫಲದಿಂದ ಬದುಕನ್ನು ಉತ್ಸಾಹದಿಂದ ಭೋಗಿಸಿ. ದುರಾಸೆಯನ್ನು ದೂರಮಾಡಿ. ಏಕೆಂದರೆ, ದುರಾಸೆಯು ಎಲ್ಲವನ್ನು ಸ್ವಪ್ರಯೋಜನಕ್ಕೆ ಬಳಸುವಂತೆ ಮಾಡುತ್ತದೆ. ಪರಿಣಾಮದಲ್ಲಿ ಅದು ಹಾಗೆ ಬಳಸಿಕೊಳ್ಳುವವನನ್ನೂ, ಬಳಸಿಕೊಳ್ಳುವುದಕ್ಕೆ ಕಾರಣರಾದವರನ್ನು ನಾಶಗೊಳಿಸುತ್ತದೆ. ಅಧ್ಯಾತ್ಮಿಕ ಸ್ವಭಾವವನ್ನು, ನೈತಿಕ ಸ್ವಭಾವವನ್ನು ಬೆಳೆಸಿಕೊಳ್ಳುವುದೇ ನಿಜವಾದ ಜೀವನದ ಗುರಿಯಷ್ಟೇ. ಅದನ್ನು ಸಾಧಿಸಿಕೊಳ್ಳಬೇಕಾದರೆ ಯಾವುದೇ ರೂಪದಲ್ಲೂ ಇನ್ನೊಬ್ಬರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದನ್ನು ಬಿಡಬೇಕು. ಪರಸ್ಪರ ವಿರೋಧ ತತ್ವಗಳಾದ ಇತಿ ನೇತಿಗಳ ಸೂತ್ರದಿಂದಲೇ ಬದುಕಿನ ನಿಜವಾದ ಆನಂದ ಸಾಧಿತವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ನಾವು ಅಹಂಭಾವವನ್ನೂ ಅದು ಕಟ್ಟುವ ಬೆಲೆಯನ್ನು ತ್ಯಜಿಸಿ ಬ್ರಹ್ಮದ ಸಾರ್ವತ್ರಿಕ ಮೌಲ್ಯಗಳನ್ನು ಒಪ್ಪಿಕೊಂಡು ಸಂಪತ್ತನ್ನು ಅರ್ಪಣೆಯ ಮನೋಭಾವದಿಂದ ನೋಡಿ. ಜಗತ್ತು ಆನಂದಮಯವಾದ ಬ್ರಹ್ಮವಲ್ಲದೆ ಬೇರೇನೂ ಅಲ್ಲ. ನಾವಿರುವುದು ಅದನ್ನು ಅನುಭವಿಸುವುದಕ್ಕೆ. ನಮ್ಮ ಕಣ್ಣುಗಳು ತ್ಯಾಗದಿಂದ ಶುದ್ದಿಗೊಂಡಾಗಲೇ ಜಗತ್ತು ಅದರ ನಿಜ ಸ್ವರೂಪದಲ್ಲಿ, ಬ್ರಹ್ಮಾನಂದದ ಅನಂತ ತರಂಗಗಳಾಗಿ ನಮಗೆ ಕಾಣುವುದು. ಅದೇ ಬದುಕಿನ ಆನಂದ. ಅದೇ ವಿಕಾಸ. ಅದೇ ಬೆಳವಣಿಗೆ. ಅದೇ ಮಾನವನಿಗೆ ಸಾಕ್ಷಾತ್ಕಾರ. ವಿಕಾಸದ ಪರಮಗುರಿಯಾದ ಪೂರ್ಣತಾ ಸಿದ್ದಿಯು ಅದೇ. ಅದೇ ಧನ್ಯತೆ."
ಹೆಚ್ ಏನ್ ಪ್ರಕಾಶ್