ಶ್ರೀ ರಮಣ ಮಹರ್ಷಿಗಳ ಜೀವನ ಸಂದೇಶ.

ಶ್ರೀ ರಮಣ ಮಹರ್ಷಿಗಳ ಜೀವನ ಸಂದೇಶ.



 
 ಶ್ರೀ ರಮಣ ಮಹರ್ಷಿಗಳು ತಮ್ಮ ಜೀವಿತವನ್ನು ತಿರುವಣ್ಣಾಮಲೈನ ತಮ್ಮ ಆಶ್ರಮದಲ್ಲೇ ಕಳೆದರು.   ಎರಡು ಕಿ ಮಿ ಗಿಂತ ದೂರ ಹೋಗಲೇ ಇಲ್ಲ.   ಆದರೆ,  ದೇಶ ವಿದೇಶಗಳಿಂದ ಅನೇಕಾನೇಕ ಭಕ್ತರುಗಳನ್ನು ಆಕರ್ಷಿಸಿದರು.  ಜನ ಸಾಮಾನ್ಯರಿಂದ ಹಿಡಿದು   ಎಲ್ಲ  ವರ್ಗದ ಜನರು ಶ್ರೀ ರಮಣ  ಆಶ್ರಮಕ್ಕೆ ಭೇಟಿ ನೀಡಿ ಶ್ರೀ ರಮಣರ ಕೃಪೆಗೆ ಪಾತ್ರರಾಗಿರುವವರೇ! ಈ ಎಲ್ಲರೂ  ಒಂದೇ ಮಹರ್ಷಿಗಳ ದೃಷ್ಟಿಯಲ್ಲಿ.  ಇಂತಹ ಒಂದು ಆಕರ್ಷಣೆಗೆ ಮುಖ್ಯ ಕಾರಣವೆಂದರೆ,  ಮಹರ್ಷಿಗಳ ಸರಳ ಮತ್ತು ಸಹಜ ಜೀವನಮಾರ್ಗ.
                    
 ಒಮ್ಮೆ ಆಶ್ರಮದ ಭಕ್ತರಾದ ಶ್ರೀ ವಿಶ್ವನಾಥ ಸ್ವಾಮಿಯವರು ಅಡುಗೆ ಮನೆಯಲ್ಲಿ ಅಂದಿನ ಅಡುಗೆಗಾಗಿ ಬದನೇಕಾಯಿ ಹೆಚ್ಚುತ್ತಿದ್ದರು. ಈ ಸಮಯದಲ್ಲಿ ಮಹರ್ಷಿಗಳು ಅಲ್ಲೇ ಇದ್ದರು.  ಸ್ವಾಮಿಯವರು ಬದನೇಕಾಯಿ ಹೆಚ್ಚುವಾಗ ಅದರ ತೊಟ್ಟಿನ ಜೊತೆಗೆ ಸ್ವಲ್ಪ ಬದನೆಕಾಯಿಯ ಭಾಗವನ್ನು  ಬಿಟ್ಟು ಬಿಡುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮಹರ್ಷಿಗಳು, ತಿರಸ್ಕರಿಸಲ್ಪಟ್ಟ ಈ ಭಾಗಗಳನ್ನು ತೆಗೆದುಕೊಂಡು ಅದರಲ್ಲಿ ಇರುವ ಬದನೆಕಾಯಿಯ ಭಾಗವನ್ನು ತೆಗೆದು ಕೇವಲ ತೊಟ್ಟಿನ ಭಾಗವನ್ನು ಮಾತ್ರ ಕಲಗಚ್ಚಿಗೆ ಹಾಕಿದರು.  ನಂತರದಲ್ಲಿ ಸ್ವಾಮಿಯ ಕಡೆ ತಿರುಗಿ " ಒಂದು ಚಿಕ್ಕ ದೂಳಿನ ಕಣವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಶಕ್ತಿ ನಿಮ್ಮೊಳಗಿದೆ.      ಅದನ್ನು ಬಳಸಿ.      ಹೇಗೆ ಎಲ್ಲವನ್ನು ಬಳಸುವ ಶಕ್ತಿಯನ್ನು ಗಳಿಸಿಕೊಳ್ಳುತ್ತೀರೋ ಹಾಗೆ, ಅದೇ ಸಮಯದಲ್ಲಿ ಈ ಪ್ರಾಪಂಚಿಕ ಸಕಲ ಭೋಗ ಭಾಗ್ಯವನ್ನು ಧೂಳಿನಂತೆ ಎಣಿಸಿ ಎಲ್ಲವುಗಳಿಂದ ಮುಕ್ತನಾಗುವ ಶಕ್ತಿಯು ನಿಮ್ಮೊಳಗೆ ಇದೆ.   ಅದನ್ನು ಗುರುತಿಸಿ ಕೊಳ್ಳಿ." ಎಂದು ಉಪದೇಶದ ಸಾರವನ್ನು ತಿಳಿಸಿದರು.
 
 ಶ್ರೀ ರಮಣರು ಯಾವುದನ್ನು ದಂಡ ಮಾಡುತ್ತಿರಲಿಲ್ಲ. ಎಲ್ಲದರಿಂದ ಎಷ್ಟು ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವೋ ಅಷ್ಟನ್ನು  ಪಡೆಯುತ್ತಿದ್ದರು.  ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪನ್ನು ಕಾಂಡದ ತನಕ ಉಪಯೋಗಿಸಿ ಮಿಕ್ಕದ್ದು ದಂಡವಾಗುತ್ತದೆ. ಆದರೆ,  ಮಹರ್ಷಿಗಳು ಮಾತ್ರ ಕೇವಲ ಬೇರಿನ ಭಾಗವನ್ನು ಮಾತ್ರ ಬಿಸಾಕುತ್ತಿದ್ದರು. ಕಾಂಡದ ಭಾಗವನ್ನು ರುಬ್ಬಿ ಸಾಂಬಾರಿಗೆ ಸೇರಿಸಿಬಿಡುತ್ತಿದ್ದರು.  ಎಲ್ಲವನ್ನು  ಸಮರ್ಥವಾಗಿ ಹೇಗೆ ಬಳಸಬೇಕೆಂದು ಹೇಳುತ್ತಿರಲಿಲ್ಲ   ಸ್ವತಃ ತಾವೇ ಮಾಡಿ ತೋರಿಸುತ್ತಿದ್ದರು.   ಇದು ಕೇವಲ ಅಡುಗೆ ವಿಚಾರದಲ್ಲಿ ಮಾತ್ರವಲ್ಲ, ಎಲ್ಲ ವಿಚಾರದಲ್ಲೂ ಅವರು ಹೀಗೆ ಇರುತ್ತಿದ್ದರು. ಇವರಿಗೆ ಬರುತ್ತಿದ್ದ ಎಲ್ಲ ಅಂಚೆ ಕವರುಗಳನ್ನು ನೀಟಾಗಿ ತೆರೆದು ಒಂದೇ ಆಕಾರದಲ್ಲಿ ಕತ್ತರಿಸಿ ಆ ಕವರಿನ ಹಿಂಭಾಗವನ್ನು ಬರೆಯಲು ಸಾಧ್ಯವಾಗುವಂತೆ ನೀಟಾಗಿ ಬೈಂಡ್ ಮಾಡಿ ಇಡುತ್ತಿದ್ದರು. ಇದನ್ನು ತಮ್ಮ ಬರವಣಿಗೆಗೆ ಇಟ್ಟು ಕೊಳ್ಳುತ್ತಿದ್ದರು. ಈ ಯಾವ ಕೆಲಸವನ್ನು ಮಹರ್ಷಿಗಳು ಯಾರಿಗೂ ಹೇಳುತ್ತಿರಲಿಲ್ಲ. ತಾವೇ ಮಾಡುತ್ತಿದ್ದರು. ತಮ್ಮ ಬಳಿಯಲ್ಲಿಯೇ ಸೂಜಿ, ದಾರ, ಗೋಂದು, ಕಾಲಿಕೋ ಮತ್ತು ರೊಟ್ಟನ್ನು ಇಟ್ಟುಕೊಂಡಿರುತ್ತಿದ್ದರು.  ಈ ರೀತಿ ಬೈಂಡ್ ಮಾಡಿದ ಪುಸ್ತಕಗಳನ್ನು ಅವಶ್ಯಕತೆಗಳಿಗೆ ಅನುಸಾರವಾಗಿ ಸೂಕ್ತವಾಗಿ ಬಳಸುತ್ತಿದ್ದರು.ಪ್ರತಿ ಹಾಳೆಯನ್ನು ಸದುಪಯೋಗ ಮಾಡುತ್ತಿದ್ದರು.   ಮಹರ್ಷಿಗಳು ಯಾರಿಗೂ ಕೇವಲ ಉಪದೇಶ ಮಾಡುತ್ತಿರಲಿಲ್ಲ. ಅಂತಹ ಉಪದೇಶಗಳೇ  ಅವರಾಗಿರುತ್ತಿದ್ದರು.
 
ಮಾವಿನಹಣ್ಣಿನ ಕಾಲದಲ್ಲಿ ಭಗವಾನರು ಸ್ವತಃ ಎಲ್ಲ ಮಾವಿನಹಣ್ಣುಗಳನ್ನು ಹೆಚ್ಚಿ ನೆರೆದಿರುತ್ತಿದ್ದ ಭಕ್ತರಿಗೆ ಹಂಚುತ್ತಿದ್ದರು. ಪ್ರಾಂಗಣದಲ್ಲಿ ಇರುವಂತಹ ಎಲ್ಲಾ ಭಕ್ತ ಸಮೂಹಕ್ಕೆ ಹೆಚ್ಚಿದ ಹಣ್ಣಿನ ತುಂಡುಗಳು ಸರಿಯಾಗಿ ವಿತರಣೆಯಾಗಿದೆಯೇ ಎಂಬುದನ್ನು ಗಮನಿಸುತ್ತಿದ್ದರು. ಹೀಗೆ ಸರಿಯಾಗಿ ವಿತರಣೆಯಾಗಿದೆ ಎಂದು ಅರಿತಮೇಲೆ ತಾವೂ ಒಂದೆರಡು ಹೋಳುಗಳನ್ನು ತಿನ್ನುತ್ತಿದ್ದರು.  ಸರಳವಾದ ಸಹಜವಾದ ಇರುವಿಕೆಗೆ ಒಂದು ನಿದರ್ಶನ.
 
 ಒಮ್ಮೆ,  ಒಂದು ಬೆಳಗಿನ ಸತ್ಸಂಗ ಪ್ರಾರಂಭವಾಗುವ ಮುಂಚೆ ಒಂದು ಹೆಂಗಸು ಬಂದು       ಮಹರ್ಷಿಗಳನ್ನು    ಉದ್ದೇಶಿಸಿ  " ದಯಮಾಡಿ  ನನ್ನ  ಗಂಡನನ್ನು  ಕಳುಹಿಸಿ  ಕೊಡಿ .  ನನ್ನ ಸಂಸಾರ  ನಡೆಯುತ್ತಿಲ್ಲ . ನನ್ನ ಗಂಡನಿಗೆ  ಏನಾಗಿದೆಯೋ  ಗೊತ್ತಿಲ್ಲ , ಆಶ್ರಮ್ಮಕ್ಕೆ  ಬಂದುಬಿಡುತ್ತಾರೆ . ಕೆಲಸಕ್ಕೆ  ರಜೆ  ಹಾಕದೆ  ಸುಮ್ಮನೆ ಇಲ್ಲಿ   ಬಂದರೆ  ಸಂಬಳ  ಯಾರು  ಕೊಡುವವರು ?  ನನ್ನ ಸಂಸಾರ ನಡೆಯುದು  ಹೇಗೆ ? " ಎಂದು ಏರಿದ  ದ್ವನಿಯಲ್ಲಿ  ಕಿರುಚಾಡಿದಳು . ಅಲ್ಲಿ  ನೆರದಿದ್ದ  ಭಕ್ತರಿಗೆಲ್ಲ  ಆಶ್ಚರ್ಯ  ಮತ್ತು  ಗಾಬರಿ .  ಎಲ್ಲರು  ಮಹರ್ಷಿಗಳ  ಮುಖ  ನೋಡುತ್ತಿದ್ದರು . ಆದರೆ , ಮಹರ್ಷಿಗಳು ಮಾತ್ರ  ಏನೂ  ಆಗಿಯೇ ಇಲ್ಲವೇನೋ ಎನ್ನುವಂತೆ ಸುಮ್ಮನೆ ಕುಳಿತ್ತಿದ್ದರು.  ಒಂದೆರಡು ಕ್ಷಣಗಳು ಕಳೆದ ನಂತರ ಸಮಾಧಾನಚಿತ್ತದಿಂದ " ಈ ಆಶ್ರಮವು ಯಾರನ್ನು ಕರೆಯುವುದಿಲ್ಲ.  ಯಾರನ್ನು ತಡೆಯುವುದೂ  ಇಲ್ಲ. ಬರುವವರಿಗೆ  ಮತ್ತು ಹೋಗುವವರಿಗೆ ಯಾವುದೇ ನಿರ್ಭಂದವಿಲ್ಲ. ಇಲ್ಲಿ ಬರುವ ಭಕ್ತರೆಲ್ಲರೂ ಸರ್ವ ಸ್ವತಂತ್ರರು." ಎಂದು ಹೇಳಿದರು. ಇದು ಮಹರ್ಷಿಗಳ ಸ್ತಿತಪ್ರಜ್ನೆಯನ್ನು ತೋರಿಸುತ್ತದೆ.
 
1943 ರಲ್ಲಿ ಭಗವಾನರ ಭಕ್ತರೊಬ್ಬರು ತಮ್ಮ ಒಂದೂವರೆ ವರ್ಷದ ಮಗುವನ್ನು ಕರೆದುಕೊಂಡು ಮಹರ್ಷಿಗಳ ಆಶೀರ್ವಾದಕ್ಕೆ ಬಂದರು. ಅವರ ಮನಸ್ಸಿನಲ್ಲಿ ಸ್ಕಂದಾಶ್ರಮಕ್ಕೆ ಹೋಗಿ ಅಲ್ಲೂ ದರ್ಶನ ಮಾಡಬೇಕೆಂಬ ಉತ್ಕಟವಾದ ಬಯಕೆ ಇತ್ತು. ಇದನ್ನು ಮಹರ್ಷಿಗಳ ಸಮ್ಮುಖದಲ್ಲಿ ಹೇಗೆ ಹೇಳುವುದೆಂದು ತಿಳಿಯದೆ ಸುಮ್ಮನೆ ನಿಂತಿದ್ದರು. ಇಷ್ಟು ಚಿಕ್ಕ ಮಗುವನ್ನು ಕರೆದುಕೊಂಡು ಸ್ಕಂದಾಶ್ರಮದ ಪರಿಕ್ರಮಕ್ಕೆ ಹೋಗುವುದಾಗಿ ಹೇಳಿದರೆ ಮಹರ್ಷಿಗಳು ಏನು ಹೇಳುತ್ತಾರೋ?  ಎಂಬ ಆತಂಕ ಕೂಡ ಇವರ ಮನಸಿನ್ನಲ್ಲಿ ಇತ್ತು. ಮಹರ್ಷಿಗಳು ಇದನ್ನು ಸೂಕ್ಷ್ಮವಾಗಿ ಗಮನಿಸಿದರು. ಮಹರ್ಷಿಗಳು ದಂಪತಿಗಳನ್ನು ನೋಡಿ " ಸ್ಕಂದಾಶ್ರಮ ಪರಿಕ್ರಮ ಮುಗಿಸಿ ಬನ್ನಿ" ಎಂದರು.  ಈ ದಂಪತಿಗಳಿಗೆ ಬಹಳ ಆನಂದವಾಯಿತು. ಒಡನೆಯೇ ಈ ದಂಪತಿಗಳು ಸ್ಕಂದಾಶ್ರಮದ ಕಡೆಗೆ ಹೊರಟೆ ಬಿಟ್ಟರು.  200 ಮೀಟರ್ನಷ್ಟು ಹೋಗುವಷ್ಟರಲ್ಲಿ ಮಹರ್ಷಿಗಳ ಸಹಾಯಕರೊಬ್ಬರು ಓಡುತ್ತಾ ಈ ದಂಪತಿಗಳ ಕಡೆಗೆ ಬಂದರು.  ಈ ದಂಪತಿಗಳಿಗೆ ಮತ್ತೆ ಆಶ್ಚರ್ಯ ಮತ್ತು ಆತಂಕವೂ ಆಯಿತು.  " ಚಿಕ್ಕ ಮಗುವನ್ನು ಕರೆದುಕೊಂಡು ಹೋಗುತ್ತಿದ್ದಾರೆ, ದಾರಿ ಮಧ್ಯೆ ಮಗು ಅತ್ತರೆ ಏನು ಮಾಡುತ್ತಾರೆ? ಎಂದು ಹೇಳಿ ಈ ಹಣ್ಣು ಮತ್ತು ಹಾಲನ್ನು ನಿಮಗೆ ಕೊಡಲು ಭಗವಾನರು ಕಳುಹಿಸಿದ್ದಾರೆ ." ಎಂದು ಒಂದು ಚಿಕ್ಕ ಬುಟ್ಟಿಯನ್ನು ಈ ದಂಪತಿಗಳ ಕೈಯಲ್ಲಿಟ್ಟು ನಸುನಗುತ್ತ ಹೊರಟುಹೋದರು.  ಈ ದಂಪತಿಗಳ ಕಣ್ಣು ತುಂಬಿ ಬಂತು.  ಪರಿಕ್ರಮಕ್ಕೆ ಹೊರಡುವ ಆತುರದಲ್ಲಿ ಮಗುವಿನ ಬಗ್ಗೆ ಸ್ವಲ್ಪವೂ ಕಾಳಜಿ  ವಹಿಸದೆ ಇದ್ದುದನ್ನು ಮಹರ್ಷಿಗಳು, ಮಾತೃ ಹೃದಯದಿಂದ ಗಮನಿಸಿದ್ದರು. " ಇದು ನಮ್ಮ ಜೀವನದಲ್ಲಿ ಮರೆಯಲಾಗದ ಒಂದು ಅಮೃತದ ಕ್ಷಣ.   ಆ  ದಿನ ನಮಗೆ ಅತ್ಯಂತ ಪವಿತ್ರ ದಿನವಾಗಿತ್ತು.  ಆಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ.  ಆ ಕ್ಷಣಗಳನ್ನು ಈಗ ನೆನಸಿಕೊಂಡರು ನಮಗರಿವಿಲ್ಲದಂತೆ ಕಣ್ಣು ತುಂಬಿಬರುತ್ತದೆ " ಎಂದು ಈ ದಂಪತಿಗಳು ತಮ್ಮ ಅನುಭವದ ಪುಸ್ತಕದಲ್ಲಿ ಧಾಖಲಿಸಿದ್ದಾರೆ.
 
ಶ್ರೀ ರಮಣರ    ಸರಳ ಮತ್ತು ಸಹಜವಾದ  ಬದುಕನ್ನು ಗಮನಿಸಿದರೆ  ಸಾಕು, ಬೇರೆ ಯಾವ ಉಪದೇಶವು ಬೇಕಾಗಿರಲಿಲ್ಲ. ಈ ಉಪದೇಶವೇ ಅವರಾಗಿರುತ್ತಿದ್ದರು.  ಸರಳವಾಗಿ ಮತ್ತು ಸಹಜವಾಗಿ ಬದುಕಲು ಅವರ ಜೀವನದ ಪುಟಗಳನ್ನೂ ತಿರುವಿ ಹಾಕಿದರೆ ಸಾಕು ಎಲ್ಲವು ಸ್ಪಷ್ಟವಾಗಿ ಅರ್ಥವಾಗುತ್ತದೆ.
 
ಸರಳವಾಗಿ  ಸುಂದರ ಜೀವನ ನಡೆಸುವುದು ಸಾಧ್ಯ ಎನ್ನುವುದು ಈ ಪುಣ್ಯ ಭೂಮಿಯ ಹಲವಾರು ಮಹಾಮಹಿಮರ ಜೀವನದಲ್ಲಿ ಕಂಡುಬರುವ ಸತ್ಯ.  ಇಂತಹ ಮಹಾಮಹಿಮರು  ಸರಳರಲ್ಲಿ ಸರಳರಾಗಿ ಜೀವನ ಸಾಗಿಸುತ್ತ,  ತಮ್ಮ ಆದರ್ಶಗಳನ್ನು   ಸ್ವತಃ   ಪಾಲಿಸಿ ಇತರರಿಗೆ ಮಾರ್ಗದರ್ಶಿಗಳಾಗಿದ್ದರು.  ಇಂತಹವರ ನೆರಳಿನಲ್ಲಿ ಬಾಳುವೆ ನಡೆಸಿದ ಸಾಮಾನ್ಯರು ಅದೆಷ್ಟು ಪುಣ್ಯವಂತರು!
 
ಹೆಚ್ ಏನ್ ಪ್ರಕಾಶ್
 

 

Comments