ಗೋಪಾಲ (ಕಥೆ)

ಗೋಪಾಲ (ಕಥೆ)

ಮಾಮೂಲಿನಂತೆ ಬೆಳಗ್ಗೆ ಎಂಟು ಘಂಟೆಗೆ ಗ್ಯಾರೇಜಿಗೆ ಬಂದಿದ್ದೆ. ಮೊದಲಿನಂತೆ ಹೆಚ್ಚಿನ ಕೆಲಸವೇನೂ ಇರಲಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಎಲ್ಲ ಅಂದುಕೊಂಡಂತೆ ನಡೆಯುತ್ತಿತ್ತು. ಎಲ್ಲ ನಮ್ಮ ಗೋಪಾಲಣ್ಣನ ಕೃಪೆ. ಮೂರು ವರ್ಷಗಳ ಹಿಂದೆ ಅವರ ತಂದೆಯೇ ಗ್ಯಾರೇಜ್ ನಡೆಸುತ್ತಿದ್ದರು. ಆವಾಗ ಬೆಳಿಗ್ಗೆ ಎಂಟು ಘಂಟೆಗೆ ಗ್ಯಾರೇಜಿಗೆ ಬಂದರೆ ಸಂಜೆ ಎಂಟು ಘಂಟೆಯ ತನಕ ಕತ್ತೆ ಹಾಗೆ ದುಡಿಯಬೇಕಿತ್ತು. ಕೆಲಸವೇನೋ ಚೆನ್ನಾಗೆ ತಲೆಗೆ ಹತ್ತಿತ್ತು, ಆದರೆ ಘಳಿಗೆ ಘಳಿಗೆಗೂ ಅವರ ಬಯ್ಗಳ ಕೇಳಿ ತಲೆ ಚಿಟ್ಟು ಹಿಡಿಯುತ್ತಿತ್ತು. ಮನೆ ತಲುಪುವ ತನಕ ಅವರಿಗೆ ಮನಸ್ಸೊಳಗೆ ಹಿಡಿ ಶಾಪ ಹಾಕುವುದು ಬಿಟ್ಟರೆ ಬೇರೇನೂ ಮಾಡಲಾಗುತ್ತಿರಲಿಲ್ಲ. ಈ ಗ್ಯಾರೇಜು ಬಿಟ್ಟರೆ ಬೇರೆ ಕೆಲಸ ಕೊಡುವವರು ಯಾರೂ ಇರಲಿಲ್ಲ. ಅಂತೂ ಅವರು ಮೂಲೆ ಸೇರಿ ಎಲ್ಲ ಗೋಪಾಲಣ್ಣನೆ ನೋಡಿಕೊಳ್ಳಲು ಶುರು ಮಾಡಿದ ಮೇಲೆ ಕೆಲಸ ಕೆಲಸದಂತೆಯೇ ಅನಿಸುತ್ತಿರಲಿಲ್ಲ. ಬೆಳಿಗ್ಗೆ ಸ್ವಲ್ಪ ಹೊತ್ತು ಗೋಪಾಲಣ್ಣನ ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡಿ ಗ್ಯಾರೇಜಿಗೆ ಬಂದರೆ, ಸಂಜೆ ಆರರ ಒಳಗಡೆ ಕೆಲಸ ಮುಗಿಸಿ ರೈಲ್ವೆ ಸ್ಟೇಷನ್ ಹತ್ತಿರ ಎಲ್ಲ ಸೇರಿ ಆಡಲು ಶುರು ಮಾದುತ್ತಿದ್ವಿ. ಎಲ್ಲಕ್ಕೂ ಗೋಪಾಲಣ್ಣನದೆ ಮುಂದಾಳುತನ. ಗೋಪಾಲಣ್ಣ ಏನಾದರೂ ಹೇಳಿದರೆ ಇಲ್ಲ ಎನ್ನುವ ಧೈರ್ಯ ನಮ್ಮ ಗುಂಪಿನಲ್ಲಿ ಯಾರಿಗೂ ಇರಲಿಲ್ಲ, ಯಾರಾದರೂ ಅಡ್ಡಗಾಲು ಹಾಕಿದರೂ, ಅವರನ್ನು ದಾರಿಗೆ ತರುವುದು ದೊಡ್ಡ ಕಷ್ಟದ ಕೆಲಸವೇನೂ ಆಗಿರಲಿಲ್ಲ, ನಮ್ಮ ಗೋಪಾಲಣ್ಣನಿಗೆ.


ಹೋದ ವರ್ಷ ಹೊಸ ಸರಕಾರ ಬಂದ ಮೇಲಂತೂ ಗೋಪಾಲಣ್ಣ ಆಡಿದ್ದೆ ಮಾತು. ನಮ್ಮ ಗ್ಯಾರೇಜಿನ ಹುಡುಗರಲ್ಲದೇ ಗೋಪಾಲಣ್ಣ ಇನ್ನು ಕೆಲವು ಹುಡುಗರಿಗೆ ಬೇರೆ ಬೇರೆ ಕೆಲಸ ಕೊಡಿಸಿದ್ದರು. ಅವರನ್ನೆಲ್ಲ ಸೇರಿಸಿಕೊಂಡು ಚುನಾವಣಾ ಸಮಯದಲ್ಲಿ ಸಹ ಸಾಕಷ್ಟು ಓಡಾಡಿ ನಮ್ಮ ಏರಿಯಾವೆಲ್ಲ ಅವರದೇ ಹಿಡಿತದಲ್ಲಿದೆಯೆಂಬ ನಂಬಿಕೆ ಶಾಸಕರಲ್ಲಿ ತಂದಿದ್ದರು. ಹಾಗಾಗಿ ಶಾಸಕರಿಗೆ ತುಂಬಾ ಹತ್ತಿರದವರು ಎಂದು ಎಲ್ಲರಲ್ಲೂ ಏನೋ ಒಂತರ ಹೆದರಿಕೆ ಇತ್ತು. ಆ ಸಮಯದಲ್ಲೇ ಎಲ್ಲ  ಹುಡುಗರನ್ನು ಸೇರಿಸಿ 'ಶ್ರೀ ಮಾರುತಿ ಹಿಂದೂ ಸಭಾ' ಎಂಬ ಹೊಸ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದರು. ಮಾರುತಿ ಸಂಘದ ಕಾರ್ಯವ್ಯಾಪ್ತಿಯೇನೋ ಬಲು ಸೀಮಿತವಾಗಿತ್ತು. ಪ್ರತಿ ಭಾನುವಾರ ಅವರ ವ್ಯಾಯಾಮ ಶಾಲೆಯಲ್ಲೇ ಸಭೆ ಸೇರುತ್ತಿದ್ದೆವು. ಅದು ಹೇಗೋ ಊರಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳ ವರದಿಗಳೂ ಗೋಪಾಲಣ್ಣನಿಗೆ ಎಲ್ಲರಿಗೂ ಮೊದಲೇ ತಿಳಿಯುತ್ತಿತ್ತು. ದಾರಿಯಲ್ಲಿ ಹೋಗುವ ಹೆಣ್ಣುಮಕ್ಕಳಿಗೆ ಚೇಡಿಸುವವರಿಗೆ, ಸಂಜೆ ಹೊತ್ತು ಕುಡಿದು ಜೋರಾಗಿ ರಂಪ ಮಾಡುವವರಿಗೆಲ್ಲ ಮಾರುತಿ ಸಂಘದ ಹೆದರಿಕೆ ನಿಧಾನವಾಗಿ ಹುಟ್ಟಲು ಶುರುವಾಗಿತ್ತು. ಹೆಚ್ಚಿನ ದಿನಗಳಲ್ಲಿ ನಮ್ಮ ಸಮಾಜ ಸೇವೆ ಮುಗಿದ ಮೇಲೆ ಗೋಪಾಲಣ್ಣ ಅವರದೇ ಖರ್ಚಲ್ಲಿ ಸಂಜೆ ಹೊಟ್ಟೆ ತುಂಬಾ ಕುಡಿಯಲು ವ್ಯವಸ್ಥೆ ಮಾಡಿಸುತ್ತಿದ್ದರು. ಹಾಗಾಗಿ ನಮ್ಮೆಲ್ಲರಿಗೆ 'ಸಮಾಜ ಸೇವೆಯ' ಮೇಲೆ ಸ್ವಲ್ಪ ಜಾಸ್ತಿಯೇ ಒಲವು ಶುರುವಾಗಿತ್ತು.


ಇವತ್ತು ಘಂಟೆ ಹನ್ನೊಂದಾದರೂ ಗ್ಯಾರೇಜಿನ ಹತ್ತಿರ ಗೋಪಾಲಣ್ಣನ ಸುಳಿವೇ ಇರಲಿಲ್ಲ, ಬೇರೆ ದಿನಗಳಲ್ಲಿ ಹತ್ತು ಘಂಟೆಯೊಳಗೆ ಒಮ್ಮೆಯಾದರೂ ಬಂದು ಮುಖ ತೋರಿಸಿ ಹೋಗುವವರು. ನಮ್ಮ ಪಾಡಿಗೆ ನಾವು ಕೆಲಸ ಮಾಡಿ ಕೊಂಡಿದ್ದೆವು. ಅಷ್ಟರಲ್ಲಿ ನನ್ನ ಮೊಬೈಲಿಗೆ ಕರೆ ಬಂದಿತು, ನೋಡಿದರೆ ಗೋಪಾಲಣ್ಣನದೆ. ಹಾಗೆಲ್ಲ ಕರೆ ಮಾಡುವವರಲ್ಲ ಅವರು. ಏನೋ ಅಗತ್ಯದ ಕೆಲಸವೇ ಇರಬೇಕು. 'ಕೃಷ್ಣ, ಬೇಗ ವ್ಯಾಯಾಮ ಶಾಲೆ ಹತ್ತಿರ ಬಂದು ಬಿಡು. ಹುಡುಗರ ಹತ್ತಿರ ಎಲ್ಲಿಗೆಂದು ಹೇಳೋದು ಬೇಡ. ಗ್ಯಾರೇಜ್ ಕಡೆ ಸ್ವಲ್ಪ ನೋಡಿಕೊಳ್ಳಲಿಕ್ಕೆ ಹೇಳು, ಬರುವುದು ಒಂದೆರಡು ಘಂಟೆ ಆಗಬಹುದು' ಅಂದರು. ಕೂಡಲೇ ಬೈಕ್ ಹಿಡಿದು ಹೊರಟೆ, ಹತ್ತು ನಿಮಿಷದ ದಾರಿಯಷ್ಟೇ ಗ್ಯಾರೇಜಿನಿಂದ. 


ವ್ಯಾಯಾಮ ಶಾಲೆ ಹತ್ತಿರ ಅವಾಗಲೇ ಎಲ್ಲ ಹುಡುಗರು ಸೇರಿದ್ದರು, ಹೆಚ್ಚು ಕಡಿಮೆ ಹತ್ತು ಜನರಿದ್ದರು.  'ಬಾ ಬಾ, ನಿನಗೊಸ್ಕರವೇ ಎಲ್ಲ ಕಾಯ್ತಾ ಇದ್ದೆವು' ಗೋಪಾಲಣ್ಣ ಸ್ವಲ್ಪ ಜಾಸ್ತಿಯೇ ಉತ್ಸಾಹದಿಂದಿದ್ದರು. 'ನಿಮಗೆಲ್ಲ ಈವಾಗಲೇ ಗೊತ್ತಿರಬಹುದು, ಇತ್ತೀಚಿಗೆ ನಮ್ಮ ಊರಿನಲ್ಲಿ ದನಗಳನ್ನು ಬೇರೆ ಕಡೆ ಮಾಂಸಕ್ಕಾಗಿ ಸಾಗಿಸುವುದು ಜಾಸ್ತಿಯಾಗಿದೆ.  ನಾವೆಲ್ಲಾ ಹೀಗೆ ಕೈ ಕಟ್ಟಿ ಕುಳಿತರೆ ಕೊನೆಗೆ ಹಾಲು ಕರೆಯಲಿಕ್ಕೆ ಒಂದು ದನ ಕೂಡ ಸಿಗುವುದೂ ಕಷ್ಟವಾಗುತ್ತದೆ. ಯಾರಾದರೂ ಒಬ್ಬರಿಗೆ ಈ ಹೀನ ಕೆಲಸ ಮಾಡುವಾಗ ನಾಲ್ಕು ತದುಕಿ ಬುಧ್ಧಿ ಕಲಿಸಿದರೆ, ಉಳಿದವರಿಗೆಲ್ಲ ಒಂದು ಪಾಠವಾಗುತ್ತದೆ'. ಗೋಪಾಲಣ್ಣ ಎಲ್ಲರನ್ನು ಕರೆಸಿದ್ದ ಕಾರಣ ಹೇಳುತ್ತಾ ಹೋದರು. 'ಹೌದು ಹೌದು, ಹೋದ ವಾರ ಆ ಅಬ್ದುಲ್ ಸಾಯಿಬರು ಎರಡು ಗುಡ್ಡ(ಗೂಳಿ) ಮತ್ತು ಒಂದು ದನ ಟೆಂಪೋದಲ್ಲಿ ಹಾಕಿಕೊಂಡು ಹೋಗುವುದನ್ನು ನಾನೇ ನೋಡಿದ್ದೆ. ಎಲ್ಲ ತೆಗೆದುಕೊಂಡು ಪೇಟೆಯ ಮಾಂಸಾಹಾರಿ ಹೋಟಲಿಗೆ ಮಾರುತ್ತಾರಂತೆ. ಗೋವುಗಳೆಂದರೆ ನಮ್ಮ ದೇವರೆಂಬ ಪ್ರಜ್ಞೆ ಸಹ ಇವರಿಗೆ ಇಲ್ಲ'. ನಾನು ಗೋಪಾಲಣ್ಣನಿಗೆ ಸಾಥ್ ನೀಡಲು ಹೋದೆ. ಅಬ್ದುಲ್ ಸಾಬಿಯನ್ನು ನೋಡಿದರೆ ನನಗೆ ಮೊದಲಿಂದಲೂ ಆಗುತ್ತಿರಲಿಲ್ಲ. ಪ್ರೈಮರಿ ಶಾಲೆಗೆ ಹೋಗುವಾಗ ಅವರ ಮನೆಯ ಹತ್ತಿರವೇ ಹೋಗಬೇಕಿತ್ತು. ಅವಾಗೆಲ್ಲ ಕೆಳಗಡೆ ಬಿದ್ದ ಅವರ ಮಾವಿನಮರದ ಹಣ್ಣು ಹೆಕ್ಕಿದರೂ ಕೋಲು ಹಿಡಿದುಕೊಂಡು ಬರುತ್ತಿದ್ದರು. ದೊಡ್ಡವರಾದ ಮೇಲೂ ಕೆಲವು ಬಾರಿ ಅವರೊಡನೆ ಒಂದಲ್ಲ ಒಂದು ಕಾರಣಕ್ಕೆ ಜಗಳವಾಗುತ್ತಲೇ ಇತ್ತು. ಗೋಪಾಲಣ್ಣ ದನ ಸಾಗಾಣಿಕೆ ವಿಷಯ ತೆಗೆದಾಗ ಇವರ ಕುರಿತೇ ತೆಗೆದಿರಬಹುದೆಂದು ಯೋಚಿಸಿದ್ದೆ.  ಒಮ್ಮೆ ಕೈಗೆ ಸಿಕ್ಕಿದರೆ ಚೆನ್ನಾಗಿ ತದುಕಿ ಅವರ ಮೇಲಿನ ಸಿಟ್ಟನ್ನೆಲ ತೀರಿಸಿಕೊಳ್ಳಬೇಕಿತ್ತು.


'ಹೌದು ಹೌದು, ಇಂತಹವರದ್ದೆಲ್ಲ ಒಂದು ದೊಡ್ಡ ಗುಂಪೇ ಇದೆ, ನಾನು ಕೆಲವು ದಿನಗಳಿಂದ ಅದರ ಬಗ್ಗೆಯೇ ಯೋಚಿಸುತ್ತಿದ್ದೆ. ಆದರೆ ಯಾವುದೇ ಸರಿಯಾದ ಮಾಹಿತಿ ಇರದೇ ಸುಮ್ಮನಿದ್ದೆ. ಇವತ್ತು ಕೂಡ ನಮ್ಮೂರಿಂದ ಕೆಲವು ದನಗಳನ್ನು ಹಾಡು ಹಗಲೇ ಸಾಗಿಸುತ್ತಿದ್ದರೆಂಬ ಸುದ್ದಿ ನನಗೆ ಬಂದಿದೆ. ಅದೂ ಕೂಡ ನಮ್ಮದೇ ಕೋಮಿಗೆ ಸೇರಿದ ಪಾಟಲಿ ಅನಂತ ಎಂಬುವವನು. ನನಗೆ ಗೊತ್ತಿದ್ದ ಹಾಗೆ ಮಧ್ಯಾಹ್ನ ಹನ್ನೆರಡು-ಹನ್ನೆರಡುವರೆಗೆ ಅವನ ಗಾಡಿ ಏರು ರಸ್ತೆ ಹತ್ತಿರ ಬರಬಹುದು. ಜನರ ಓಡಾಟ ಸಹ ಕಮ್ಮಿಯೇ ಇರುತ್ತದೆ. ಕೈ ಕಾಲು ಮುರಿಯುವ ಹಾಗೆ ಒಮ್ಮೆ ಬಾರಿಸಿದರೆ ಇನ್ಯಾರು ಸಹ ಮುಂದೆ ನಮ್ಮೂರಿನಲ್ಲಿ ದನ ಸಾಗಿಸೋ ಕೆಲಸ ಮಾಡುವುದಿಲ್ಲ' ಗೋಪಾಲಣ್ಣ ಎಲ್ಲ ಪ್ಲಾನ್ ಮಾಡಿಕೊಂಡೆ ಬಂದಿದ್ದರು. ನಮ್ಮ ಗುರಿ ಅಬ್ದುಲ್ ಸಾಬಿ ಅಲ್ಲ ಅಂದ ಕೂಡಲೇ ನನ್ನ ಉತ್ಸಾಹವೆಲ್ಲ ಒಮ್ಮೆಲೇ ಇಳಿಯಿತು. ಅದು ಬೇರೆ ಅನಂತಣ್ಣನನ್ನು ಒಂದೆರಡು ಬಾರಿ ನೋಡಿದ ನೆನಪು. ಅಮ್ಮನಿಗೆ ಸ್ವಲ್ಪ ಒಳ್ಳೆಯ ಪರಿಚಯವಿದ್ದವರು ಬೇರೆ. ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಹಾಗಾಯಿತು. ನಿದಾನವಾಗಿ ಹೇಳಿದೆ, 'ಅನಂತಣ್ಣನಿಗೆ ಹೊಡೆಯುವುದು ಅಷ್ಟು ಸರಿ ಕಾಣುವುದಿಲ್ಲ ನನಗೆ, ನಮ್ಮದೇ ಕೋಮಿನವರು ಬೇರೆ, ಅದು ಬೇರೆ ಜಾತಿಯಲ್ಲಿ ಬ್ರಾಹ್ಮಣರು. ಅವರಿಗೆ ಹೊಡೆಡದು ಗೊತ್ತಾದರೆ ಊರಲ್ಲಿ ಎಲ್ಲ ನಮ್ಮೆದುರು ಬೀಳಬಹುದು. ಇನ್ನು ಸ್ವಲ್ಪ ದಿನ ಬಿಟ್ಟರೆ ಅಬ್ದುಲ್ ಸಾಬಿಯೇ ದನ ತೆಗೆದುಕೊಂಡು ಹೋಗುವಾಗ ಸಿಗಬಹುದು'. ಕೆಲವರು ತಲೆಯಾಡಿಸಿದರು, ನನ್ನ ಮಾತು ಸ್ವಲ್ಪ ಸರಿಯೆನ್ನಿಸಿತಿರಬೇಕು. 'ನಾನು ಅದೆಲ್ಲ ಆಲೋಚಿಸಿಯೇ ಈ ನಿರ್ಧಾರಕ್ಕೆ ಬಂದಿರುವುದು. ನಮ್ಮ ಮುಖ್ಯ ಉದ್ದೇಶ ಈ ದನ ಸಾಗಣಿಕೆ ತಡೆಯುವುದು ಮಾತ್ರ. ಆದರೆ ಅದಕ್ಕೆ ಅಬ್ದುಲ್ ಸಾಬಿಯನ್ನು ಹೊಡೆದರೆ ಸುಮ್ಮನೆ ರಾಜಕೀಯ ಮೈಗೆ ಎಳೆದುಕೊಂಡ ಹಾಗೆ ಆಗುತ್ತೆ. ಸುಮ್ಮನೆ ಕೋಮು ಗಲಭೆ ಎಲ್ಲ ಸೃಷ್ಟಿಸಿ ಇಲ್ಲ ಸಲ್ಲದ್ದು ಮಾಡುವುದು ಬೇಡ. ಅಲ್ಲದೆ ಈ ಅನಂತ ಏನೂ ಪೂಜೆ ಮಾಡುವ ಭಟ್ಟರ ಜಾತಿ ಅಲ್ಲ, ಬ್ರಾಹ್ಮಣರಲ್ಲಿ ಯಾವುದೋ ತುಂಬಾ ಕೆಳ ಜಾತಿ. ಅದೂ ಬೇರೆ ನಮ್ಮ ಕೊಮಿನವರಾಗಿ ಪೂಜೆ ಮಾಡೋ ದನವನ್ನು ಕೊಲ್ಲುವುದು ಮಹಾ ಪಾಪ. ಕಳೆದ ವಾರ ಗದ್ದೆಯಲ್ಲಿ ಮೇಯುತ್ತಿದ್ದ ನಮ್ಮ ಮನೆಯ ಗುಡ್ಡವನ್ನು ಯಾರಿಗೂ ಗೊತ್ತಾಗದ ಹಾಗೆ ಸಾಗಿಸಲು ನೋಡುತ್ತಿದ್ದನಂತೆ. ಮತ್ತೆ ಸುದ್ದಿ ತಿಳಿದು ದಬಾಯಿಸಿದ ಮೇಲೆ ಸುಳ್ಳು ಹೇಳಿ ತಪ್ಪಿಸಿಕೊಂಡ. ಹಾಗಾಗಿ ಅವನಿಗೆ ಬುಧ್ಧಿ ಕಲಿಸುವುದೇ ಸಮ. ಅದೂ ಬೇರೆ ಈ ಸಮಯದಲ್ಲಿ ಅಲ್ಲಿ ಯಾವ ನರಪಿಳ್ಳೆಯೂ ಇರುವುದಿಲ್ಲ. ಮುಖಕ್ಕೆ ಒಂದು ಬಟ್ಟೆ ಹಾಕಿಕೊಂಡರೆ ಯಾರಿಗೂ ತಿಳಿಯುವುದಿಲ್ಲ ಇದು ನಮ್ಮ ಕೆಲಸವಂತ. ಹಾಗೊಮ್ಮೆ ತಿಳಿದರೂ ಹೆದರುವ ಅಗತ್ಯವೇನೂ ಇಲ್ಲ. ಇಲ್ಲಿನ ಸಬ್ ಇನ್ಸ್ ಪೆಕ್ಟರ್ ನನಗೆ ಒಳ್ಳೆಯ ಪರಿಚಯದವೆರೆ'. ಗೋಪಾಲಣ್ಣ ಎಲ್ಲ ಪ್ರಶ್ನೆಗಳಿಗೆ ಮೊದಲೇ ಉತ್ತರ ಸಿಧ್ಧಪಡಿಸಿಕೊಂಡ ಹಾಗಿತ್ತು. ಅವರೊಡನೆ ಮಾತನಾಡಿ ಗೆಲ್ಲುವುದು ನಮ್ಮಲ್ಲಿ ಯಾರಿಗೂ ಸಾಧ್ಯವಿರಲಿಲ್ಲ. ಮುಂದೆ ಮಾತನಾಡದೆ ಸುಮ್ಮನಾದೆ. ಯಾರಿಗಾದರೂ ಇನ್ನೇನಾದರು ಪ್ರಶ್ನೆ ಇದ್ದರೆ ಹೇಳಿ. ನಮ್ಮ ಸಂಘದಲ್ಲಿ ಏನೂ ಮಾಡುವುದಿದ್ದರೂ ನಿಮ್ಮೆಲ್ಲರ ಒಪ್ಪಿಗೆ ಪಡೆದೆ ಮಾಡುವುದು'. ಗೋಪಾಲಣ್ಣನ ಮಾತಿಗೆ ಎಲ್ಲರದೂ ಸಮ್ಮತ ಕಂಡು ಬಂದಿತು.


ಗೋಪಾಲಣ್ಣ ಒಂದು ವಾರದಿಂದ ಇದಕ್ಕಾಗಿ ಕಾಯುತ್ತಿದ್ದರನಿಸುತ್ತದೆ. ಎಲ್ಲ ಸಿಧ್ಧತೆ ಮಾಡಿಕೊಂಡೆ ನಮ್ಮನ್ನೆಲ್ಲ ಬರಹೇಳಿದ್ದರು. ಮೂಲೆಯಲ್ಲಿ ಕೆಲ ಹಾಕಿ ದಾಂಡುಗಳು ಬಿದ್ದಿದ್ದವು. ನಿನ್ನೆ ಅವನ್ನೆಲ್ಲ ನೋಡಿದ ನೆನಪು ಬರಲಿಲ್ಲ. ಮತ್ತೆ ಸ್ವಲ್ಪ ಹೊತ್ತು ಅದು ಇದು ಮಾತನಾಡಿ ಎಲ್ಲ ಹೊರಟೆವು, ಎರಡು ಮಾರುತಿ ವ್ಯಾನ್ ಗಳಲ್ಲಿ. ಎಲ್ಲರು ಒಂದೊಂದು ಹಾಕಿ ದಾಂಡು ಹಿಡಿದಿದ್ದರು. ಇಷ್ಟು ದಿನ ಬರಿ ಕೈಯಲ್ಲಿ ಹೊಡೆಯುವುದೋ, ಅಥವಾ ಬಾಯಲ್ಲಿ ಗದರಿಸುವುದೋ ಮಾಡುತ್ತಿದ್ದೆವು. ನನ್ನ ಕೈ ನಿಧಾನವಾಗಿ ನಡುಗುತ್ತಿದ್ದರೆ, ಉಳಿದವರಿಗೆ ಏನೋ ಮೇಲ್ಮಟ್ಟಕ್ಕೆ ಏರಿದ ಅನುಭವ . ಹನ್ನೆರಡು ಘಂಟೆಗೆ ಸರಿಯಾಗಿ ಏರು ರಸ್ತೆಯ ಬಳಿ ಬಂದು, ಅಲ್ಲೇ ಮರದ ಹತ್ತಿರ ಗಾಡಿ ನಿಲ್ಲಿಸಿ ರಸ್ತೆಗೆ ಕಲ್ಲು ಹಾಕಿ ಕಾಯುತ್ತ ನಿಂತೆವು. ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದ, ಬಿಸಿಲು ಜೋರಾಗಿತ್ತು. ನಮ್ಮನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ  ಕೆಳಗಡೆ ಇಳಿಜಾರಿನಲ್ಲಿ ಯಾವುದೇ ಚಿಕ್ಕ ಸಾಮಾನಿನ ಗಾಡಿ ಬಂದಂತನಿಸಿತು. ಗೋಪಾಲಣ್ಣ ಕೂಡಲೇ ಕಾರ್ಯಪ್ರವ್ವತ್ತರಾದರು. 'ಎಲ್ಲ ರೆಡಿಯಾಗಿ, ಅದು ಆ ಬೊ... ಮಗನದೇ ಗಾಡಿ' ವ್ಯಾನ್ ನಿಂದ ಇಳಿದು ರಸ್ತೆಯತ್ತ ನಡೆದರು. ಪ್ಯಾಂಟಿನಲ್ಲಿದ್ದ ದೊಡ್ಡ ಕರವಸ್ತ್ ತೆಗೆದು ಸ್ವಲ್ಪ ಮುಖ ಮರೆಯಾಗುವ ಹಾಗೆ ಕಟ್ಟಿಕೊಂಡೆ.  


ಅನಂತಣ್ಣನ ಗಾಡಿ ಏರು ಹತ್ತಿದ ಕೂಡಲೇ ನಿಂತಿತು. ಅವರೇ ಕೆಳಗಡೆ ಇಳಿದುದು ಕಾಣಿಸಿತು, ಬಹುಶ ರಸ್ತೆಯಲ್ಲಿದ್ದ ಕಲ್ಲುಗಳನ್ನು ಸರಿಸಲು ನೋಡಿದರು ಅನ್ನಿಸುತ್ತದೆ. ಇನ್ನೊಂದು ಕಡೆಯಿಂದ ಬರುತ್ತಿದ್ದ ನಮ್ಮ ಗುಂಪನ್ನು ನೋಡಲಿಲ್ಲ. ಚಾಲಕ ನಮ್ಮನ್ನು ನೋಡಿ ಗಾಬರಿ ಬಿದ್ದು ಕೂಗಿ ಕೊಳ್ಳ ತೊಡಗಿದ. ಅಷ್ಟರಲ್ಲಿ ಹುಲಿಯಂತೆ ಓಡಿ ಗೋಪಾಲಣ್ಣ ಹಿಂದಿನಿಂದ ಒಂದು ಬಲವಾದ ಏಟನ್ನು ಹಾಕಿದ್ದರು, ಅನಂತಣ್ಣನ ಬೆನ್ನಿಗೆ. ಒಂದಿಬ್ಬರು ಚಾಲಕನನ್ನು ಕೆಳಗೆಳೆದು ನಾಲ್ಕೇಟು ಬಿಗಿದು ಬಾಯಿ ಮುಚ್ಚಿ ನಿಲ್ಲಲು ಸೂಚಿಸಿದರು. ಹಿಂದಿನಿಂದ ಬಿದ್ದ ಬಲವಾದ ಪೆಟ್ಟಿಗೆ ಸಾವರಿಸಿಕೊಳ್ಳಲು ಅನಂತಣ್ಣನಿಗೆ ಆಗಲಿಲ್ಲ. ಪೆಟ್ಟಿಗಿಂತ ಹೆಚ್ಚಾಗಿ ಎಣಿಸದ  ಘಟನೆಯ ಆಘಾತವೇ ಹೆಚ್ಚಾಗಿತ್ತನಿಸುತ್ತದೆ. ಬೀಳುತ್ತಿದ್ದ ಅವರ ಶರ್ಟಿನ ಕಾಲರ್ ಹಿಡಿದು ಎಳೆಯುತ್ತಿದ್ದ ಗೋಪಾಲಣ್ಣನ ಮುಖದಲ್ಲಿ ರೋಷ ಮನೆ ಮಾಡಿತ್ತು. 'ಬೊ.. ಮಗನೆ, ದನ ಸಾಗಿಸಿ ಮಾಂಸಕ್ಕಾಗಿ ಮಾರುತ್ತೀಯ. ಅದು ಸಾಲದೇ ನಮ್ಮ ಮನೆ ಆಕಳಿಗೆ ಕೈ ಹಾಕ್ತೀಯ. ಹೋದ ವಾರ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಿಯಲ್ಲ, ಈಗ ಮಾತಾಡು ಬೊ..ಮಗನೆ'. ಮಾತನಾಡಲು ಹೊರಟ ಅನಂತಣ್ಣನಿಗೆ ಮಾತಾಡುವ ಅವಕಾಶವನ್ನೇ ಕೊಡದೆ 'ಕೃಷ್ಣ, ಗಾಡಿಯಲ್ಲಿರೋ ದನಗಳನ್ನೆಲ್ಲ ಬೇಗ ಬಿಚ್ಚಿ ಬಿಡು,  ಎಲ್ಲ ಸೇರಿ ಹಾಕಿರೋ ಬೊ.. ಮಗನಿಗೆ, ಇನ್ನು ಮೇಲೆ ಇವನು ಇಂತಹ ಹಲ್ಕಾ ಕೆಲಸಕ್ಕೆ ಕೈ ಹಾಕಬಾರದು, ಹಾಗೆ ಮಾಡಿ'. ಗೋಪಾಲಣ್ಣನ ಮಾತು ಮುಗಿಯುವ ಮುಚೆಯೇ ನಾಲ್ಕೈದು ಬಲವಾದ ಏಟು ಬಿತ್ತು, ಬೆನ್ನಿಗೆ ಹೆಗಲಿಗೆ ಎಲ್ಲ ಕಡೆ. ನೋವಿನಿಂದ ಅನಂತಣ್ಣ ಕೂಗಲು ಶುರುಮಾಡಿದರು. ನಾನು ಗಾಡಿಯ ಹಿಂದೆ ಹೋಗಿ ಕಟ್ಟಿದ ದನಗಳನ್ನು ಬಿಚ್ಚಲು ಹೋದೆ. ಒಂದನ್ನೆಲ್ಲೋ ನೋಡಿದ ನೆನಪಾಯಿತು, ನಮ್ಮ ಮನೆಯದ್ದೆ ಅನಿಸಿತು. ನಾನು ಕೊಟ್ಟಿಗೆಗೆ ಹೋಗುವುದೇ ಅಪರೂಪ, ಹಾಗಾಗಿ ನಮ್ಮ ದನದ ಪರಿಚಯವೇ ಸರಿಯಾಗಿರಲಿಲ್ಲ. ಗೋಪಾಲಣ್ಣ ಹೇಳಿದ ಹಾಗೆ ನಮ್ಮ ಮನೆಯ ದನವನ್ನೂ ಕದ್ದು ಬಂದಿರುವನೆ ಅನಿಸಿತು. ಕೈಯಲ್ಲಿದ್ದ ಹಾಕಿ ದಾಂಡು ಇದು ತನಕ ಸುಮ್ಮನಿತ್ತು. ಮೊದಲ ಬಾರಿ ಹಾಕಿ ದಾಂಡು ಕೈಯಲ್ಲಿ ಸೇರಿದ್ದ ಉಳಿದವರೆಲ್ಲ ಮನಸಾರೆ ಎತ್ತಿ ಅದರ ಆನಂದ ಪಡೆಯುತ್ತಿದ್ದರು. ಅದನ್ನು ಕೈಯಲ್ಲಿ ಹಿಡಿದಾಗಲೇ ಏನೋ ವಿಚಿತ್ರ ಅನುಭೂತಿಯಾಗಿತ್ತು. ಲೋಕದ ತಪ್ಪನ್ನೆಲ್ಲ ತಿದ್ದುವ ಸಾಮರ್ಥ್ಯ ನಮಗೆ ಮಾತ್ರ ಇದೆ ಅನ್ನುವ ಅಹಂ. ಗಾಡಿಯ ಹಿಂದುಗಡೆ ದನಗಳನ್ನು ನೋಡಿದ ಮೇಲೆ ನನಗೂ ತಡೆಯಲಾಗಲಿಲ್ಲ, ಅನಂತಣ್ಣ ನೋವಿನ  ಕೂಗು ನನ್ನ ಕಿವಿಯಿಂದ ಮರೆಯಾಯಿತು. ಆ ನೋವು ನನ್ನ ಮನಸ್ಸಿಗೆ ವಿಕೃತ ಆನಂದ ನೀಡತೊಡಗಿತು. ಹಾಕಿ ದಾಂಡು ಮೇಲೆತ್ತಿ ಬಲವಾಗಿ ಅನಂತಣ್ಣನ ಭುಜಕ್ಕೆ ಒಂದೇಟು ಹಾಕಿದೆ. ಅದಾಗಲೇ ಮೂರು ಜನರ ಹಾಕಿ ದಾಂಡು ಸಹ ಮೇಲೆ ಹೋಗಿತ್ತು. ಭುಜಕ್ಕೆ ಬಿದ್ದ ಏಟಿಗೆ ಅನಂತಣ್ಣ ಒಂದು ಬದಿಗೆ  ಕುಸಿದರು. ಉಳಿದವರು ಅದನ್ನು ನಿರೀಕ್ಷಿಸಿರಲಿಲ್ಲ ಅನಿಸುತ್ತೆ, ಸಮಯ ಮೀರಿತ್ತು. ಮೂರು ಬಲವಾದ ಏಟುಗಳು ಅವರ ತಲೆಯ ಮೇಲೆಯೇ ಬಿತ್ತು.


ರಕ್ತ ಚಿಲ್ಲನೆ ಚಿಮ್ಮಿತು, ಅನಂತಣ್ಣನ ತಲೆಯಿಂದ. ಎಲ್ಲರಿಗೂ ಒಮ್ಮೇಲೆ ಗಾಬರಿಯಾಯಿತು. ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ, ಗೋಪಾಲಣ್ಣನು ಗಾಬರಿ ಬಿದ್ದರು. ನಾಲ್ಕೇಟು ಹಾಕಿ ಹೋಗುವುದು ಮಾತ್ರ ನಮ್ಮ ಯೋಜನೆಯಾಗಿತ್ತು, ಈಗ ನೋಡಿದರೆ ಅವರ ತಲೆಯಲ್ಲಿ ರಕ್ತ ಸುರಿಯುತ್ತಿದೆ. ಅವರನ್ನು ಆಸ್ಪತ್ರೆಗೆ ಸೇರಿಸಿದರೆ ಪೋಲಿಸ್ ಕೇಸಾಗುವುದು ಗ್ಯಾರಂಟಿ. ಬೇಡದ ಉಸಾಬರಿ ಎನಿಸಿತು. ಎಲ್ಲರ ಮುಖ ಹೆದರಿಕೆಯಿಂದ ಬಿಳಿಚಾಗಿತ್ತು, ಏನು ಮಾಡುವುದೆಂದು ಯಾರಿಗೂ ತೋಚಲಿಲ್ಲ. ಗೋಪಾಲಣ್ಣನೆ ಬೇಗ ವಾಸ್ತವಕ್ಕೆ ಬಂದರು. ಚಾಲಕನನ್ನು ಕರೆದು ಬೇಗನೆ ಅನಂತಣ್ಣನನು ಆಸ್ಪತ್ರೆಗೆ ಕೊಂಡೊಯ್ಯಲು ಹೇಳಿದರು. ಯಾರ ಹತ್ತಿರವಾದರೂ ನಮ್ಮ ವಿಷಯ ಬಾಯಿ ಬಿಟ್ಟರೆ ನಿನಗೂ ಇದೆ ಗತಿ ಎಂದು ಎಚ್ಚರಿಸಿಯೇ ಕಳಿಸಿದರು. ಎಲ್ಲ ತಡ ಮಾಡದೆ ವ್ಯಾನ್ ನಲ್ಲಿ ಕುಳಿತು ವಾಪಸ್ ತೆರಳಿದೆವು.


ವಾಪಸ್ ಗ್ಯಾರೇಜಿಗೆ ಬಂದರೂ ಕೂಡ ತಲೆ ಎಲ್ಲ ಮಧ್ಯಾಹ್ನದ ಘಟನೆಯ ಮೇಲೆಯೇ ಇತ್ತು. ಉಳಿದ ಹುಡುಗರ ಹತ್ತಿರ ಏನೂ ಬಾಯಿ ಬಿಟ್ಟಿರಲಿಲ್ಲ. ಮನದಲ್ಲೆಲ್ಲ ಭಯ ಆವರಿಸಿಕೊಂಡಿತ್ತು. ಎಲ್ಲಾದರೂ ಅನಂತಣ್ಣ ಪೊಲೀಸರಲ್ಲಿ ಬಾಯಿ ಬಿಟ್ಟರೆ ಗತಿ ಏನು ಎಂದು. ಅಮ್ಮನಿಗೆ ಗೊತ್ತಾದರೆ ಮನೆಯಿಂದಲೇ ಓಡಿಸಿಯಾರು. ದೇವರೇ, ಯಾರಿಗೂ ಗೊತ್ತಾಗದಿರಲಿ ಗೊತ್ತಾಗದಿರಲಿ ಎಂದು ಮಧ್ಯಾಹ್ನವೆಲ್ಲ ಪ್ರಾರ್ಥಿಸುತ್ತ ಕುಳಿತೆ. ಸಂಜೆ ಮನೆಗೆ ಹೋಗುವ ಮುಂಚೆ ಒಮ್ಮೆ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಹೋದೆ.  


ಮನೆ ಹತ್ತಿರ ಬರುತ್ತಿದಂತೆಯೇ ಅಮ್ಮನ ಸ್ವರ ಜೋರಾಗಿ ಕೇಳಿಸುತ್ತಿತ್ತು. ಅಮ್ಮ ಅಷ್ಟು ಕೋಪದಲ್ಲಿ ಇದ್ದದ್ದನ್ನು ಮುಂಚೆ ನೋಡಿರಲಿಲ್ಲ. ಮಧ್ಯಾಹ್ನ ಬಿಡಿಸಿದ ಅದೇ ದನ ಪಕ್ಕದಲ್ಲಿದ್ದ ಮರದ ಕಟ್ಟೆಯ ಹತ್ತಿರ ಸುತ್ತುತ್ತಿತ್ತು. 'ಬೋ.. ಮಕ್ಕಳು, ಅನ್ಯಾಯವಾಗಿ ದೇವರಂತ ಮನುಷ್ಯನನ್ನು ಕೊಂದು ಹಾಕಿದರು, ತಲೆಗೆ ಬಿದ್ದ ಪೆಟ್ಟಿಗೆ ಆಸ್ಪತ್ರೆಗೆ ಹೋಗುವ ಮೊದಲೇ ಪ್ರಾಣ ಹೋಗಿತ್ತಂತೆ. ಬೆಳಿಗ್ಗೆಯಷ್ಟೇ ಅರ್ಧ ಘಂಟೆ ನನ್ನ ಹತ್ತಿರ ಸುಖ ಕಷ್ಟ ಮಾತಾಡಿದ್ದರು. ನಿಮಗೆ ಗೊತ್ತಲ್ಲ, ಈ ಗೊಡ್ಡು ದನ ಮೂರು ವರ್ಷದಿಂದ ಕರು ಹಾಕಿರಲಿಲ್ಲ, ನಾನಾದರೂ ಎಷ್ಟು ದಿನ ಅಂತ ಇದರ ಚಾಕರಿ ಮಾಡುವುದು, ಹಾಗಾಗಿ ತಗೊಂಡು ಯಾರಿಗಾದರೂ ಕೊಡಿ ಅಂತ ಅನಂತಯ್ಯನ ಹತ್ತಿರ ಹೇಳಿದ್ದೆ. ಬೇಡ ಬೇಡ ಅಂದರೂ  ಗೊಡ್ಡು ದನಕ್ಕೆ ಇನ್ನೂರು ರುಪಾಯಿ ಕೊಟ್ಟಿದ್ದರು. ಈಗ ಈ ದನ ಸಹ ವಾಪಾಸು ಬಂದಿದೆ. ಅಯ್ಯನ ಹತ್ತಿರ ಹಣವೂ ತಗೊಂಡು ದನವನ್ನು ಕೊಡದಿದ್ದರೆ ಪಾಪ ತಟ್ಟದೆ ಇರುತ್ತದ ನನಗೆ' ಪಕ್ಕದ ಮನೆಯ ಗುಬ್ಬಕ್ಕನಲ್ಲಿ ಅಮ್ಮ ಅವಳ ಗೋಳು ಹೇಳಿಕೊಳ್ಳುತ್ತಿದ್ದಳು. 'ಬೆಳಿಗ್ಗೆ ಸೌದೆಗೆ ಹೋದಾಗ ಎರಡು ಕಾರಲ್ಲಿ ಸ್ವಲ್ಪ ಜನ ಬಂದು ಏರು ರಸ್ತೆ ಹತ್ತಿರ ಕಲ್ಲು ಹಾಕುವುದು ನೋಡಿದೆ, ಗ್ಯಾರೇಜ್ ಗೋಪಾಲನ ನೋಡಿದ ಹಾಗಾಯಿತು, ನನಗೂ ಸರಿಯಾಗಿ ಕಣ್ಣು ತೋರುವುದಿಲ್ಲ' ಗುಬ್ಬಕ್ಕ ಏನೋ ಜ್ಞಾಪಿಸಿಕೊಂಡು ಹೇಳಿದಳು. ಅಮ್ಮನಿಗೆ ಕೂಡಲೇ ಏನೋ ಹೊಳೆದಂತಾಯಿತು. 'ಆ ಬೋ..ಮಗನೆ ಹೊಡೆದು ಹಾಕಿದ್ದರೂ ಇರಬಹುದು, ಇತ್ತೀಚೆಗಂತೂ ಅವನ ಕಾಲು ಭೂಮಿ ಮೇಲೆ ನಿಲ್ಲುತ್ತಾನೆ ಇಲ್ಲ. ಅನಂತಯ್ಯನೆ  ಹೇಳುತ್ತಿದ್ದರು. ಹೋದ ವಾರ ಗೋಪಾಲನ ಅಮ್ಮ ಬರಲು ಹೇಳಿದ್ದರಂತೆ, ಅವರ ಮನೆಯ ಗುಡ್ಡವನ್ನು ತೆಗೆದುಕೊಂಡು ಹೋಗಲು. ನಿಮಗೆ ಗೊತ್ತಲ್ಲ, ಉಳಿದವರ ಹಾಗೆ ಅನಂತಯ್ಯ ಹಾಗೆಲ್ಲ ಗೋವುಗಳನ್ನು ಮಾಂಸದ ಅಂಗಡಿಗೆ ಹಣಕ್ಕಾಗಿ ಮಾರುವರಲ್ಲ. ಎಲ್ಲೋ ದೂರ ತೆಗೆದುಕೊಂಡು ಹೋಗಿ ಆ ಕಡೆ ಸಾಕುವವರಿಗೆ ಕೊಡುತ್ತಾರಂತೆ. ಹಾಗಾಗಿ ಹಾಲು ಕೊಡುವ ದನಗಳಿಗೆ ಮಾತ್ರ ಅವರು ಹಣ ಕೊಡುವುದು. ಆದರೆ ಈ ಗೋಪಾಲ ಹಣ ಕೊಟ್ಟು ತಗೊಂಡು ಹೋಗು ಅಂತ ಗಲಾಟೆ ಶುರು ಮಾಡಿ ಹೊಡೆಯಲು ಹೋಗಿದ್ದನಂತೆ. ಸುಮ್ಮನೆ ಗಾಡಿ ಬಾಡಿಗೆ ಹಾಳಾದ್ದು ನೋಡಿ ಸಿಟ್ಟಲ್ಲಿ ಇವರು ಕೂಡ ಸರಿಯಾಗಿ ಮಂಗಳಾರತಿ ಮಾಡಿ ಬಂದಿದ್ದರಂತೆ. ಅದೇ ಹಟದಲ್ಲಿ ಹೊಡೆಸಿ ಕೊಂದಿರಲೂ ಬಹುದು, ಈ ಗೋಪಾಲ ಅದಕ್ಕೆಲ್ಲ ರೆಡಿಯಾದವನೇ. ನಾಯಿಯಾಗಿ ಹುಟ್ಟುತ್ತಾನೆ ಇನ್ನೊಂದು ಜನ್ಮದಲ್ಲಿ, ಬೋ..ಮಗ'.


ಅಮ್ಮನ ಕೋಪ ಇಳಿಯುತ್ತಲೇ ಇರಲಿಲ್ಲ, ನಾನು ಒಳ ಹೋಗುವುದು ನೋಡಿದರು 'ಇವನು ಸಹ ಯಾವಾಗಲೂ ಅವರೊಟ್ಟಿಗೆ ಇರುತ್ತಾನೆ, ಸಾವಿರ ಸಲ ಹೇಳುತ್ತೇನೆ, ಅವರ ಹತ್ತಿರ ಎಲ್ಲ ಸೇರಬೇಡ. ಕೆಲಸ ಬಿಟ್ಟು ಸೀದಾ ಮನೆಗೆ ಬಾ ಅಂದು. ಕೇಳಬೇಕಲ್ಲ ಮೀಸೆ ಬಂದ ಮೇಲೆ ನಮ್ಮ ಮಾತನ್ನು. ಒಂದು ದಿನ ಬೇರೆ ಯಾರೋ ಬಂದು ನಾಯಿಯ ಹಾಗೆ ಹೊಡೆದು ರಸ್ತೆ ಬದಿ ಹಾಕುತ್ತಾರೆ, ಆವಾಗ ಮಾತ್ರ ಇವಕ್ಕೆಲ್ಲ ಬುಧ್ಧಿ ಬರುವುದು. ಬ್ರಾಹ್ಮಣರ ಶಾಪ ಯಾರಿಗೂ ತಟ್ಟದೆ ಇರುವುದಿಲ್ಲ. ನೋಡುತ್ತಾ ಇರಿ, ಈ ಗೋಪಾಲ ಸಹ ನಿಮ್ಮ ಕಣ್ಣೆದುರೇ ಮಾಡಿದ್ದನ್ನೆಲಾ ಅನುಭವಿಸುತ್ತಾನ ಇಲ್ಲವ ಎಂದು. ಇವತ್ತೀಗ ದುಡ್ಡು ಕೊಟ್ಟು ಆ ಪೋಲೀಸರ ಬಾಯಿ ಮುಚ್ಚಬಹುದು, ಆ ದೇವರ ಬಾಯಿ ಹೇಗೆ ಮುಚ್ಚುತ್ತಾರೆ ನಾನೂ ನೋಡುತ್ತೇನೆ'. ಅಮ್ಮನ ಕೋಪ ನಿಲ್ಲುವ ಸೂಚನೆ ಇರಲಿಲ್ಲ. ಸುಮ್ಮನೆ ಪ್ರತಿಕ್ರಿಯಸದೆ ಒಳ ನಡೆದೇ. ಅನಂತಣ್ಣ ಸತ್ತದ್ದಕ್ಕೆ ದುಃಖವಾಯಿತೋ, ಇಲ್ಲ ನಮ್ಮ ವಿಷಯ ಹೊರಬಂದಿಲ್ಲವೆಂದು ಖುಷಿಯಾಯಿತೋ ತಿಳಿಯಲಿಲ್ಲ.

 
Rating
No votes yet

Comments