ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ 4
ಇಂದು ಯಾಕೋ ಮನಸ್ಸು ಮತ್ತೆ ಕಾಡಿ ಬೆಟ್ಟದ ಬಳಿ ಎಳೆದುಕೊಂಡು ಬಂದಿತು. ಒಂದೊಂದೇ ಮೆಟ್ಟಿಲನ್ನು ಏರುತ್ತ ಮೃದುಲಳ ಜೊತೆ ಕಳೆದ ಪ್ರತಿಯೊಂದು ನೆನಪುಗಳು ಕಾಡಲು ಆರಂಭಿಸಿತು.
ಬೆಟ್ಟದ ಮೇಲೆ ಹೋದಾಗ ತಂಪಾದ ಗಾಳಿ ಬೀಸುತ್ತಿತ್ತು. ಅಲ್ಲೇ ಇದ್ದ ಹೊಂಗೆ ಮರದ ಕೆಳಗೆ ಸುಮ್ಮನೆ ಸ್ವಲ್ಪ ಹೊತ್ತು ಮಲಗೋಣ ಎಂದು ಮಲಗಿದರೆ ಸ್ವಲ್ಪ ಹೊತ್ತಿನಲ್ಲೇ ಗಾಢವಾದ ನಿದ್ದೆ ಆವರಿಸಿಬಿಟ್ಟಿತ್ತು.
ಮತ್ತೆ ಮೊಬೈಲ್ ರಿಂಗಾದಾಗ ಎಚ್ಚರವಾಯಿತು.
ಮೃದುಲ ಕರೆ ಮಾಡಿದ್ದಳು, ಹಲೋ ಪ್ರೊಫೆಸರ್ ಹುಚ್ಚೂರಾಯರೇ ಎಲ್ಲಿದ್ದೀರಾ? ಮನೇಲಿ ಕೇಳಿದರೆ ಅಮ್ಮ ಗೊತ್ತಿಲ್ಲ ಅಂದರು ಎಲ್ಲಿದ್ದೀರಾ ಸರ್ ಎಂದಳು.ಅವಳ ಮಾತಿನಲ್ಲಿ ನನ್ನ ಮೇಲಿನ ಕೋಪ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಾ ಮೃದುಲ ನಾನು ಇಲ್ಲೇ ಮೈಸೂರಿಗೆ ಬಂದಿದ್ದೇನೆ ಸ್ವಲ್ಪ ಕೆಲಸ ಇತ್ತು. ರಾತ್ರಿ ಬರುತ್ತೇನೆ ಎಂದೆ.
ಅದಕ್ಕವಳು ಹೌದಾ ಸರ್ ನಾನು ಮೈಸೂರಲ್ಲೇ ಇದ್ದೀನಿ ಸ್ವಲ್ಪ ಹಿಂದೆ ತಿರುಗುತ್ತೀರಾ ಎಂದಳು.
ಹಿಂದಿರುಗಿ ನೋಡಿದರೆ ಅಲ್ಲೇ ನಿಂತಿದ್ದಾಳೆ.
ಇದೇನಾ ಸರ್ ಮೈಸೂರು? ಯಾವಾಗಿಂದ ಸುಳ್ಳು ಹೇಳುವುದನ್ನು ಕಲಿತಿದ್ದೀರ? ನನಗೆ ಗೊತ್ತಿತ್ತು ನೀನು ಖಂಡಿತ ಇಲ್ಲೇ ಇರ್ತೀಯ ಅಂತ ಅದಕ್ಕೆ ಇಲ್ಲಿಗೆ ಬಂದೆ. ಚೇತೂ ನಾನೂ ನೋಡ್ತಾನೆ ಇದ್ದೀನಿ ಮಡಿಕೇರಿ ಇಂದ ಬಂದಾಗಿನಿಂದ ಯಾಕೋ ಒಂದು ರೀತಿ ಆಡ್ತಾ ಇದ್ದೀಯ. ಪ್ಲೀಸ್ ಚೇತೂ ಏನಾಯ್ತು ಅಂತ ಹೇಳು...ಯಾಕೆ ನನ್ನ ಅವಾಯ್ಡ್ ಮಾಡ್ತಾ ಇದ್ದೀಯ? ಏನು ಪ್ರಾಬ್ಲಮ್ ಅಂತಾದರೂ ಹೇಳು. ನನ್ನಿ೦ದ ಏನಾದರೂ ತಪ್ಪು ಆಗಿದ್ರೆ ಹೇಳು ಖಂಡಿತ ತಿದ್ದಿಕೊಳ್ಳುತ್ತೇನೆ ಆದರೆ ಈ ರೀತಿ ವಿಚಿತ್ರವಾಗಿ ಆಡಬೇಡ.
ಹಾಗೇನೂ ಇಲ್ಲ ಮೃದುಲ ಯಾಕೋ ಮನಸು ಸರಿಯಾಗಿಲ್ಲ, ಸರಿ ಆದ ಮೇಲೆ ನಾನೇ ಸರಿ ಹೋಗುತ್ತೇನೆ. ಅಲ್ಲೀವರೆಗೂ ದಯವಿಟ್ಟು ನನ್ನನು ಏನೂ ಕೇಳಬೇಡ. ಅದು ಸರಿ ಏನೋ ಒಂದು ಮುಖ್ಯವಾದ ವಿಷಯ ಹೇಳಬೇಕು ಎಂದೆಯಲ್ಲ ಏನದು?
ಅಷ್ಟರಲ್ಲಿ ಗುಡಿಯ ಪೂಜಾರಿ ಬಂದು ಓಹೋ ಏನಪ್ಪಾ ಚೇತನ್, ಏನಮ್ಮ ಮೃದುಲ ಬಹಳ ದಿನದ ನಂತರ ಬಂದಿದ್ದೀರಿ. ಚೆನ್ನಾಗಿ ಇದ್ದೀರಾ? ತಗೋಳಿ ಪ್ರಸಾದ ಎಂದು ಕೈಯಲ್ಲಿ ಬಿಸಿ ಬಿಸಿ ಪುಳಿಯೋಗರೆ ಇಟ್ಟು ಒಳ್ಳೆಯದಾಗಲಿ ಎಂದು ಹರಸಿ ಕೆಳಗಿಳಿದು ಹೊರಟರು.
ಚೇತೂ...ಅದೂ ಅದೂ ಹೇಗೆ ಹೇಳುವುದು ಅಂತಾನೆ ಗೊತ್ತಾಗುತ್ತಿಲ್ಲ ಕಣೋ....ಚೇತೂ ನನಗೆ ಒಬ್ಬ ಹುಡುಗನ ಮೇಲೆ ಪ್ರೀತಿ ಉಂಟಾಗಿದೆ ಕಣೋ. ನೀನೆ ಅದಕ್ಕೆ ಸಹಾಯ ಮಾಡಬೇಕು ಕಣೋ. ನನಗೆ ಆ ಹುಡುಗನ ಬಳಿ ಹೇಳಲು ಧೈರ್ಯ ಸಾಲುತ್ತಿಲ್ಲ. ಪ್ಲೀಸ್ ಕಣೋ ನೀನೆ ಏನಾದರೂ ಹೆಲ್ಪ್ ಮಾಡೋ ಚೇತೂ...
ಅವಳ ಮಾತು ಕೇಳಿ ಎದೆಯಲ್ಲಿ ಯಾರೋ ಅವಲಕ್ಕಿ ಕುಟ್ಟುವಂತೆ ಆಯಿತು. ಮನಸೆಲ್ಲಾ ಭಾರವಾಗಿ ಕಣ್ಣಲ್ಲಿ ನೀರು ತುಂಬಿಕೊಳ್ಳಲು ಶುರುವಾಯಿತು. ಅವಳಿಂದ ಕಣ್ಣೀರನ್ನು ಮರೆಮಾಚಲು ಅವಳಿಗೆ ಬೆನ್ನು ತಿರುಗಿಸಿ ಯಾರು ಆ ಹುಡುಗ ಎಂದು ಕೇಳಿದ್ದಕ್ಕೆ. ಅವನೂ ನಮ್ಮ ಕಂಪನಿ ಯಲ್ಲೇ ಕೆಲಸ ಮಾಡುವುದು. ಅವನಿಗೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವನಿಲ್ಲದೆ ನನ್ನ ಕೈಲಿ ಇರಲು ಆಗುವುದಿಲ್ಲ ಚೇತೂ. ಪ್ಲೀಸ್ ಕಣೋ ಚೇತೂ ನೀನೆ ಸಹಾಯ ಮಾಡಬೇಕು ಕಣೋ ಎಂದಳು.
ಸರಿ ಆಯ್ತು ನಾನು ಆಲೋಚಿಸಿ ನಿನಗೆ ತಿಳಿಸುತ್ತೇನೆ. ಈಗ ಹೊರಡು ಎಂದೆ. ನೀನು ಬರಲ್ವೇನೋ ಎಂದಳು, ನೀನು ಹೋಗು ನಾನು ಆಮೇಲೆ ಬರ್ತೀನಿ ಎಂದೆ.
ಪ್ಲೀಸ್ ಚೇತೂ ನೀನೆ ಏನಾದರೂ ಮಾಡಬೇಕು ಎಂದು ಹೊರಟಳು.
ಅವಳು ಅಲ್ಲಿಂದ ಹೊರಟು ಹೋದ ಮೇಲೆ ಸುಮಾರು ಹೊತ್ತು ಕಣ್ಣಿನಲ್ಲಿದ್ದ ಇದ್ದ ಧೂಳನ್ನೆಲ್ಲ ಆಚೆ ಬಿಟ್ಟು ನಂತರ ಮನೆಗೆ ಬಂದು ಅಮ್ಮನ ಬಲವಂತಕ್ಕೆ ಎರಡು ತುತ್ತು ಊಟ ಮಾಡಿ ಏನೂ ಮಾತಾಡದೆ ಸುಮ್ಮನೆ ಹೋಗಿ ಮಲಗಿಕೊಂಡು ಛೆ ಎಂಥಹ ಕೆಲಸ ಆಗಿ ಹೋಯ್ತು ನಾನು ಇಷ್ಟ ಪಡುತ್ತಿರುವ ಹುಡುಗಿಯ ಪ್ರೀತಿಯನ್ನು ಸಫಲಗೊಳಿಸಲು ನಾನೇ ಸಹಾಯ ಮಾಡಬೇಕೆ...
ಛೆ ಇಂಥಹ ದೃಶ್ಯಗಳು ಬರೀ ಸಿನೆಮಾಗಳಲ್ಲಿ, ಧಾರಾವಾಹಿಗಳಲ್ಲಿ ಮಾತ್ರ ಸಾಧ್ಯ ಎಂದುಕೊಂಡಿದ್ದೆ...ನನ್ನ ಬಾಳಿನಲ್ಲೇ ಈ ರೀತಿ ಆಗುತ್ತದೆಂದು ಕನಸಿನಲ್ಲೂ ಎಣಿಸಿರಲಿಲ್ಲ ಎಂದು ರಾತ್ರಿ ಪೂರ್ತಿ ನಿದ್ದೆ ಮಾಡದೆ ಸುಮ್ಮನೆ ಇಲ್ಲ ಸಲ್ಲದ ಯೋಚನೆಗಳನ್ನು ಮಾಡುತ್ತಾ ಮಲಗಿದ್ದೆ.
ಅಮ್ಮ ಮುಂಚೆಯೇ ಹೇಳಿದ್ದರು ನಾಳೆ ಅಮಾವಾಸ್ಯೆ, ಮುನಿಯಪ್ಪ ಬರುವುದಿಲ್ಲವಂತೆ ಅವನ ಮನೆಯಲ್ಲಿ ಏನೋ ಪೂಜೆ ಇದೆಯಂತೆ ಆದ್ದರಿಂದ ನೀನು ಹೊಲಕ್ಕೆ ಹೋಗಿ ಮಧ್ಯಾಹ್ನದ ತನಕ ಇದ್ದು ಬಾ, ಮಧ್ಯಾಹ್ನದ ಮೇಲೆ ಮುನಿಯಪ್ಪ ಬರ್ತಾನೆ ಎಂದು ಹೇಳಿದ್ದರು.
ಅದೇ ರೀತಿ ಬೆಳಿಗ್ಗೆ ಎದ್ದು ತಿಂಡಿ ತಿಂದು ಹೊಲಕ್ಕೆ ಹೋಗಿ ಒಂದು ಮರದ ಕೆಳಗೆ ಕೂತು ಮೃದುಲ ಹೇಳಿದ್ದನ್ನು ನೆನಪಿಸಿಕೊಂಡು ದುಃಖ ಒತ್ತರಿಸಿಕೊಂಡು ಬಂತು. ಮುಂಚೆಯೇ ನನಗೆ ಈ ಆಲೋಚನೆ ಬಂದಿದ್ದರೆ ಎಷ್ಟು ಚೆನಾಗಿತ್ತು. ಹೇಗಿದ್ದರೂ ಅವರ ಅಪ್ಪ ಅಮ್ಮನಿಗೆ, ನನ್ನ ಅಮ್ಮನಿಗೂ ಅವರೆಂದರೆ ಇಷ್ಟ ಇತ್ತು. ಯಾರಿಂದಲೂ ಮದುವೆಗೆ ತೊಂದರೆ ಆಗುತ್ತಿರಲಿಲ್ಲ.
ಈಗ ಅವಳು ಬೇರೆ ಒಬ್ಬನನ್ನು ಇಷ್ಟ ಪಟ್ಟಿದ್ದಾಳೆ ಅದೂ ಅಲ್ಲದೆ ಅದಕ್ಕೆ ನನ್ನ ಸಹಾಯವನ್ನೇ ಕೇಳುತ್ತಿದ್ದಾಳೆ. ಈ ಸಮಯದಲ್ಲಿ ನನ್ನ ಪ್ರೇಮ ನಿವೇದನೆ ಮಾಡಿದರೆ ಅದು ಸ್ವಾರ್ಥ ಅನಿಸುತ್ತದೆ. ಅದು ಬಿಟ್ಟು ಅವಳಿಗೆ ಸಹಾಯ ಮಾಡಿ ಅವಳ ಪ್ರೇಮ ಯಶಸ್ವಿ ಆಗುವ ಹಾಗೆ ಮಾಡುತ್ತೇನೆ ಎಂದು ನಿರ್ಧಾರ ಮಾಡಿದೆ.
ಮಧ್ಯಾಹ್ನದ ವೇಳೆಗೆ ಮುನಿಯಪ್ಪ ಬಂದ ಮೇಲೆ ಅವನನ್ನು ಬಿಟ್ಟು ನಾನು ಮನೆಗೆ ಹೋಗಿ ಊಟ ಮಾಡಿ ಸ್ವಲ್ಪ ಹೊತ್ತು ಮಲಗಿದ್ದು ನಂತರ ಸಂಜೆಯ ವೇಳೆಗೆ ಅಮ್ಮ ನಾನು ಆಚೆ ಹೋಗಿ ಬರುತ್ತೇನೆ ಎಂದು ಸೀದಾ ಬೆಟ್ಟಕ್ಕೆ ಬಂದೆ..
Comments
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ 4
In reply to ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ 4 by dattatraya
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ 4
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ):ಕಲ್ಪನೆ ಮಧುರ- ವಾಸ್ತವ ಕಠೋರ....