ನಲ್ಮೆಯ ನಮನ

ನಲ್ಮೆಯ ನಮನ

ಬರಹ

ಸುಂದರ ಪಾರ್ಕು, ಸುತ್ತೆಲ್ಲ ಮರಗಳು

ಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ.

ಜನಜಾತ್ರೆ, ಇಷ್ಟೊಂದು ಜನ ಇಲ್ಯಾಕೆ ಮೈಯೆಲ್ಲ ಕಿವಿಯಾಗಿ ಕೂತಿದ್ದಾರೆ ಕೇಳೋಣ ಅಂತ ಸುತ್ತ ಬಾಗಿ ನಿಂತ ಮರಗಳು,ನೀರಿಲ್ಲದೆ ಪರದಾಡುವ ಬೆಂಗಳೂರಲ್ಲೂ ನೆಲ ಕಾಣದಷ್ಟು ಹಸಿರಾಗಿ ಮಿರುಗುವ ಹುಲ್ಲು ಹಾಸು, ಅಲ್ಲಲ್ಲಿ ನಗುವ ಹೂಗಳ ಬಿಂಕದಿಂದ ಬಾಗಿರುವ ಗಿಡದ ಗುಚ್ಛಗಳು.. ಸಂಜೆ ಗೂಡಿಗೆ ವಾಪಸಾದ ಹಲ ಕೆಲವು ಹಕ್ಕಿ ಸಂಸಾರದ ಕಲರವ.. ನಿಮಗಿಷ್ಟವಾಗುವ ವಾತಾವರಣ..
ನೀವಿದ್ದಿದ್ರೆ ಇನ್ನೊಂದು ಹಾಡು ಹುಟ್ಟುತ್ತಿತ್ತೇನೋ.. ಇರಲಿ ಬಿಡಿ - ಏನಾದರೇನೀಗ ನೀವು ತೆರೆದ ಬಾಗಿಲಿನಿಂದ ಹೋಗಿ ತುಂಬ ದಿನಗಳಾಗಿವೆ.. ನನಗ್ಗೊತ್ತು ನೀವಲ್ಲಿ ತಾರೆಗಳ ಮೀಟದೆ, ಚಂದಿರನ ದಾಟದೆ ಕೂತಿದ್ದೀರಿ, ಗೃಹಲಕ್ಷ್ಮಿ ಇಲ್ಲೆ ಉಳಿದಿದ್ದಾಳಲ್ಲ, ಜೊತೆಗಾನದ ತಂಪು ಉಲಿಯಲ್ಲವೆ ಅದು.. ಅಲ್ಲಿ ಶಾನುಭೋಗರು ಸಿಕ್ಕಿದರೆ ಈಗ ನೀವು ಕೇಳುವಂತಿಲ್ಲ, ನನ್ನ ಒಬ್ಬಳೆ ಹೆಂಡತಿಯಾದ ನಿಮ್ಮೊಬ್ಬಳೇ ಮಗಳನ್ನ ಬೇಗ ಇಲ್ಲಿ ಕಳಿಸಿ ಎಂದು.. ಧರೆಯ ಸುಖದಲ್ಲಿ ನಿಮ್ಮಾಕೆ ನಿಮ್ಮ ಮರೆತಿಲ್ಲ, ಹಗಲಿರುಳ ನಡುವಿನ ವ್ಯತ್ಯಾಸ ಮರೆತು ಕಾಣುವಳು ನಿಮ್ಮದೇ ಕನಸು. ಆಗೀಗ ಎಚ್ಚರಿಸುತ್ತದೆ ಮೊಮ್ಮಕ್ಕಳ ಗೆಜ್ಜೆ ಗೊಲಸು.. ನಿಮ್ಮ ಕವಿತೆಯನುಲಿವ ಹಾಡು ಹಕ್ಕಿಗಳ ಗಾನದಿಂದ ಸಿಂಗರಿಸುತಿಹಳು ಮನದ ವೃಂದಾವನ, ದಿನ ಬಿಟ್ಟು ದಿನ ರೇಡಿಯೋಲೂ ಬರುತ್ತದೆ, ಮಲ್ಲಿಗೆಯ ವಿವಿಧ ತನನ...
ನಿಮ್ಮ ಇತ್ತೀಚಿನ ಭಾವಚಿತ್ರ ನಗುತ್ತಿದೆ ವೇದಿಕೆಯಲ್ಲಿ, ಹೋದ ವರುಷದಲಿ ಅಸ್ತಂಗತನಾದ ರಾಜಕುಮಾರನ ತುಂಬು ನಗೆ ನಿಮ್ಮ ಸಿರಿಮಲ್ಲಿಗೆಯ ಪಕ್ಕದಲ್ಲಿ.

ತುಂಬ ಸಂತಸ ನನಗೆ ನಿಮ್ಮನ್ನ ಕಂಡು, ನಿಮ್ಮನ್ನ ಓದಿ, ನಿಮ್ಮನ್ನ ಕೇಳಿ.. ನೀವು ಬರೆದ ಕವಿತೆಗಳ ತುಂಬ ನಲಿವಿನ ಮೆಲ್ನಗೆ, ವಿನೋದದ ಅಂಚು, ದಾಂಪತ್ಯದೆಳೆ, ಪಟ್ಟ ಸಾವಿರ ನೋವುಗಳ ಒಂದೆರಡು ಮೆಲ್ದನಿಯೂ ಎಲ್ಲ ಚಿತ್ರಗಳಾಚೆ ಕಾಣುವ ಇನ್ನೊಂದು ಸಿರಿಮಲ್ಲಿಗೆಯ ಹಿಂದೆ ಅಡಗಿ, ಕವಿತೆಯ ತುಂಬ ಬದುಕಿನದೇ ಹೂರಣ..

ತುಂಬ ಮೆಚ್ಚಿಗೆ ನನಗೆ ನೀವೆಂದರೆ, ನೀವಲ್ಲವೇ "ನನ್ನ ಜೊತೆಯಲ್ಲಿ ಪಯಣಿಸಿದವರ ಮುಂದಿನ ನಿಲ್ದಾಣ ಎಲ್ಲೆಂದು ಕೇಳದವರು, ಜಾತಕಗಳೊಪ್ಪಿದರೆ ಮದುವೆಯೇ! ಎಂದು ಅಚ್ಚರಿಯಲಿ ಬರೆದವರು, ನಗುತಳುತ ಬಾಳಹಾದಿಯ ಕಳೆದು ಬಯಲು-ಚೆಂಡುಗಳೆರಡನ್ನೂ ಮನದನ್ನೆಯದಾಗಿಸಿ ಜಗುಲಿಯಲಿ ಕೂತು ವಿಧವಿಧದ ಮಲ್ಲಿಗೆಗಳ ದಂಡೆ ನೇಯ್ದವರು. ನಿಮ್ಮನುಭವ ತೆಳುವೆಂದವರ ಟೀಕೆಗೆ ನೀವು ನಕ್ಕಿರಿ, ನನಗೂ ನಗು.. ಅವರು ಹಿಡಿದು ನೋಡಿದ್ದರೆ ತಿಳಿಯುತ್ತಿತ್ತು ಮಲ್ಲಿಗೆಯ ದಂಡೆ ಎಷ್ಟು ಒತ್ತಾಗಿದೆಯೆಂದು.. ಸಂಪಿಗೆಯ ಮೆಚ್ಚುವಗೆ ಮಲ್ಲಿಗೆಯ ಪರಿಮಳ ತೆಳುವೇ ಸರಿ.. ನಿಮ್ಮ ಮಲ್ಲಿಗೆಗಳೇ ಗುನುಗುತ್ತವೆ ಹೀಗೆಂದು.

ತುಂಬ ಅಚ್ಚರಿ ನನಗೆ ನೀವು ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳನ್ನ ಮಲ್ಲಿಗೆಗೆ ಸಿಂಪಡಿಸಿದ ರೀತಿಗೆ, ನೋವ ಕ್ಷಣಗಳನೆಲ್ಲ ಗೆದ್ದು ನಗುವ ಬದುಕಿನ ಪ್ರೀತಿಗೆ. ನಿಮ್ಮ ರೀತಿಗೆ ನಿಮ್ಮ ಪ್ರೀತಿಗೆ ಕಣ್ಣ ಹನಿಗಳೆ ಕಾಣಿಕೆ. ನಿಮ್ಮ ರೀತಿಗೆ ನಿಮ್ಮ ಪ್ರೀತಿಗೆ ನಿಮ್ಮ ಸಾಲ್ಗಳೆ ಹೋಲಿಕೆ..

ಅಲ್ಲಿ ವೇದಿಕೆಯಲ್ಲಿ ತುಂಬ ಹಿರಿಯರು ಕನ್ನಡದ ಗಣ್ಯರು, ಪ್ರತಿಷ್ಠಿತರು ನಿಮ್ಮ ಕವಿತೆಗಳ ವಾಚಿಸುತಿದ್ದಾರೆ. ಒಬ್ಬೊಬ್ಬರದೂ ಒಂದು ನೋಟ.. ಈಗ ಕಲ್ಪಿಸಿಕೊಂಡೆ ನಿಮ್ಮ ಹಾಡನ್ನ ನಿಮಗೇ ಯಾರೋ ತಮ್ಮದೆಂಬಂತೆ ಹಾಡಿದರೆ ಹೇಗೆನಿಸುತ್ತದೆಂದು.. ಎಲ್ಲ ದನಿಗಳಿಗೊಂದು ಕವಿತೆ, ಎಲ್ಲರೊಳಗೊಂದು ಹಣತೆ, ಯಾರ ಹೊಟ್ಟೆಯ ಪಾಡಿಗೋ, ಇನ್ಯಾರ ಮನದ ಆಹ್ಲಾದಕ್ಕೋ ಸಿರಿಮಲ್ಲಿಗೆ ನೇಯ್ದ ನಿಮಗೆನ್ನ ತುಂಬು ಹೃದಯದ ನಮನ.

ತಲೆಬಾಗುತ್ತೇನೆ ನಮ್ರಳಾಗಿ :

ಕವನ ನೇಯುವುದು ದೊಡ್ಡದಲ್ಲ. ಕವಿತೆ ಬರೆಯುವ ಮಧ್ಯೆ ನೀವು ನೆಮ್ಮದಿಯರಸಿ ರೆಕಾರ್ಡ್ ಬರೆಯುವ ಗುಮಾಸ್ತರಾಗಲಿಲ್ಲವಲ್ಲ ಅದಕ್ಕೆ, ಎಲ್ಲ ಗೌಜುಗಳ ನಡುವೆ ಮನದ ಮೌನದಿ - ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ ಎಂದು ಬರೆದಿರಲ್ಲ ಅದಕ್ಕೆ, ದೇವನೊಡನೆ ಗೆಳೆತನ ಬೆಳಸಿ, ಅವನು ಕೊಟ್ಟ ಜಗದಿ ನಿಮ್ಮಷ್ಟಕ್ಕೆ ನೀವೆ ಹಾಡಿಕೊಂಡು ಒಲವಿನ ರೂಪಕವಾದಿರಲ್ಲ ಅದಕ್ಕೆ.

ಶರತ್ ಶಾರದೆಯ ನವರಾತ್ರಿಗಳಿಗೂ ಹಚ್ಚಿ ವರ್ಷವಿಡೀ ಬರುವ ಅಮಾವಾಸ್ಯೆಯ ಕಾರ್ಗತ್ತಲುಗಳಿಗೂ ಹಚ್ಚಲಾಗಬಹುದಾದಷ್ಟು ಹಣತೆಗಳ ತೇಲಿ ಬಿಟ್ಟಿದ್ದೀರಿ ನಮ್ಮ ಭಾವದ ಸರಸ್ಸಿನಲ್ಲಿ.. ಒಂದೊಂದು ಹಣತೆಗೂ ಒಂದು ದೊಡ್ಡ ಮಲ್ಲಿಗೆಯ ಮುಗುಳು.. ಅತ್ತಿತ್ತ ಹೊರಳದೆ ಮಲಗಿದೆ ಮಗು.. ನಿಮ್ಮ ಹಾಡ ಸವಿಯುವ ಹಂಬಲು.

ನೀಲಿಯ ಗಗನದ ಉಪಮೆಯಲ್ಲಿ ಸಾಮರಸ್ಯದ ಪಾಠ ಹೇಳಿದ್ದೀರಿ, ಮಾವೊಂದೆ ಚಿಗುರಲಿಲ್ಲ ಚಿಗುರುತ್ತಿದೆ ಬೇವು, ನಲಿವೊಂದೆ ಹರಸಲಿಲ್ಲ ಜೊತೆಯಲಿತ್ತು ನೋವು ಎಂದು ಎಚ್ಚರಿಸಿದ್ದೀರಿ.. ಮಾಂದಳಿರಿನ ಚೆಂದುಟಿಯಲಿ, ಬಿರಿದಾ ಹೂವ ಮೇಲೆ, ಮೂವತ್ತು ವರುಷದ ಹಿಂದೆ, ಎಂದೋ ಕೇಳಿದ ಒಂದು ಹಾಡನು ಮನದ ವೀಣೆಗೆ ಕಲಿಸಿದ್ದೀರಿ.. ಮನೆಯಿಂದ ಮನೆಗೆ, ಗಡಿಯಾರದಂಗಡಿಯ ಮುಂದೆ, ಸಂಬಳದ ದಿನದಂದು, ತುಂಗಭದ್ರೆಯ ಆನಂದವನ್ನು ಹಂಚಿದ್ದೀರಿ. ಮೀನಳ ಕಣ್ಣೀರೊರೆಸಿದ್ದೀರಿ.. ವಿಳಾಸವರಿಯದೆ ಬಂದವರಿಗೆ ಇಹದ ಪರಿಮಳದ ಹಾದಿಯ ಕೈಮರದ ನೆರಳಲ್ಲಿ ಸಂಜೆ ಹಾಡು ಹಾಡಿದ್ದೀರಿ. ನಿಮಗೆ ಉಂಗುರವಿಡಲೋ, ಶಿಲಾಲತೆಯ ಶಾಲೋ? ನವಪಲ್ಲವದಲಿ ಐರಾವತದ ಮೆರವಣಿಗೆಯೋ? ಇರುವಂತಿಗೆಯ ಮಾಲೆಯೋ? ನವಿಲಗರಿಯ ಚಾಮರವೋ? ಅದೆಲ್ಲ ಯಾಕೆ.. ಮನದ ಮೂಲೆಯಲ್ಲೊಂದು ದುಂಡುಮಲ್ಲಿಗೆ ನೆಟ್ಟು ನೀರೆರೆಯೆಂದಿರಾ, ನೀವು ಹಲವರುಷಗಳ ಹಿಂದೆ ಬಳೆಗಾರನ ಗಂಟಲ್ಲಿ ನೀಡಿದ ಮಲ್ಲಿಗೆಯ ಕೊನರು ಬದುಕಿನ ಎಲ್ಲ ತಿರುವುಗಳಲ್ಲೂ ಹಬ್ಬಿ ಹೂ ಬಿರಿದಿದೆ. ಎಲ್ಲ ಚಿತ್ರಗಳ ನಡುವೆ ಗೊಂದಲಗೊಂಡಾಗ ಅದರಾಚೆಗಿನ ಚಿತ್ರದ ಹೊಳವು ಪರಿಮಳವಾಗಿ ಹಬ್ಬಿದೆ.

ಬಿಳಿದಿಂಬಿನಂಚಿಗೆ ಗೆರೆ ಕೊರೆದ ಕಾಡಿಗೆಯ, ದೀಪದುರಿಯ ಕಣ್ಗಳ ಒಡತಿಯ ಕನ್ನಡಕ ಮಬ್ಬಾಗಿದೆ, ನಗಲಾಗದೆ ಮೆಲ್ನಗೆಯ ನಟನೆ, ಅವಳ ಹಸಿರ ಕನಸಿನಲ್ಲಿ ಮಲ್ಲಿಗೆಯದೆ ಪರಿಮಳ, ಇಹದ ನಿಜದಲ್ಲಿ ನೀವಿಲ್ಲದ ದಾರಿ ಸವೆಸಿ ಮನದೊಳೇನೋ ತಳಮಳ, ಕಾಲು ಜೊತೆಯಾಗುವುದಿಲ್ಲ ಬೇಕಾದ ನಡಿಗೆಗೆ, ನಿಲ್ಲಲು ಹಟ ಹೂಡುತ್ತದೆ ಸುಸ್ತಾಗಿದೆ ನಡುವಿಗೆ. ಹೊರಗಿನ ಜಂಜಾಟ ಹೊರಕ್ಕಿರಲಿ, ಮನದ ತುಂಬ ಮಲ್ಲಿಗೆ, ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು, ಒಣಗಬಾರದು ಒಲವ ಚಿಲುಮೆ, ಮನದ ಮಬ್ಬಿನಲಿ ನೀವೆ ಹಚ್ಚಿಟ್ಟ ದೀಪವಿದೆ, ಒಳಗಣ್ಣು ಎಲ್ಲ ಚಿತ್ರಗಳಾಚೆಗೆ ತೆರೆದಿದೆ.

ನೊಂದನೋವುಗಳೆಲ್ಲ ಹಾಡಾಗಲಿಲ್ಲ.. ಎಲ್ಲ ಗಾಯನದಲ್ಲು ಸಿರಿಮಲ್ಲಿಗೆ. ಗಂಭೀರ ಕವಿತೆಗಳಿಗೆ ಪಕ್ಕದ ಕುರ್ಚಿಯಲ್ಲಿ ಕುಳಿತ ಮಕ್ಕಳು ಆಚೀಚೆ ನೋಡುತಿಹವು, ಅವರಿಗೂ ಬೇಕು ನಿಮ್ಮ ನವಿಲೂರ ಕನಸೆ.. ಕವಿಗೋಷ್ಠಿಯಲಿ ವಿಮರ್ಶೆಗೆ ಸರಕಾಗಿ ಬಂದರೂ ಗೊತ್ತಿದೆ ನನಗೆ ಅವರು ಮೆಚ್ಚುವ ವಸ್ತು ಅಲ್ಲಿಲ್ಲ..

ಕಾಳಿಂಗರಾಯರ ಅಂತಿಂಥ ಹುಡುಗಿ, ಅನಂತಸ್ವಾಮಿಯವರ ಲಾಲಿ ಹಾಡು, ಅತ್ರಿಯ ಶಾನುಭೋಗರ ಮಗಳು - ಅಲ್ಲಿ ನಿಮ್ಮ ದಿನವ ತುಂಬಿರಬಹುದು.. ನನಗೆ ಗೊತ್ತಿದೆ, ಅಲ್ಲಿ ನಿಮ್ಮ ಕೆದರಿದ ಕೂದಲ ಸರಿಮಾಡಲು ಯಾರಿಗೂ ಆಗುವುದಿಲ್ಲ, ಅದು ವೆಂಕಮ್ಮನದೇ ಆಸ್ತಿ, ಇಲ್ಲಿ ಮನೆಯಲಿ, ಇಳಿಸಂಜೆಯ ನಳಿನಾಕ್ಷಿ ಕೊನೆಯ ಪಯಣಕ್ಕಾಗಿ ಮಂಚದ ಕೆಳಗೆ ಮುಚ್ಚಿಟ್ಟ ಪೆಟ್ಟಿಗೆಯಲಿಲ್ಲ ಬೇಸಿರಿ,ಬೆಂಡೋಲೆ, ಅಲ್ಲಿ ಮೊದಲ ಸೀರೆಯ ಸೆರಗಿನಲ್ಲಿ ಸುತ್ತಿ ಮಲಗಿದೆ ಪುಟ್ಟ ಬಾಚಣಿಗೆ.

ತುಂಬು ಗೌರವ ನಿಮಗೆ, ತುಂಬು ನಮನ, ನಿಮ್ಮ ನೋಡಿ ಬೆರಗುವಡೆದ ಕಣ್ಗಳಲಿ ತುಂಬು ಹನಿ,, ಇಲ್ಲ.. ನಿಮ್ಮೆಡೆಗಿನ ಒಲವ ಬಿಂದಿಗೆ ತುಂಬಿಲ್ಲ.. ತುಂಬಿದರೆ ಒಲವಲ್ಲ.. ಹನಿತುಂಬಿದ ಕಣ್ಣಲ್ಲಿ ಎಲ್ಲದರಾಚೆಗಿನ ಚಿತ್ರ, ಇಹದ ಪರಿಮಳದ ಹಾದಿ.