ಕತೆ : ಒಂದು ಕೊಲೆಯ ಸುತ್ತ [ಬಾಗ3]

ಕತೆ : ಒಂದು ಕೊಲೆಯ ಸುತ್ತ [ಬಾಗ3]

 

 

ಮೊದಲ ಬಾಗಕ್ಕಾಗಿ ಇಲ್ಲಿ ಕ್ಲಿಕ್  ಮಾಡಿ : ಒಂದು ಕೊಲೆಯ ಸುತ್ತ [ಬಾಗ1]

ಎರಡನೆ  ಬಾಗಕ್ಕಾಗಿ  ಇಲ್ಲಿ  ಕ್ಲಿಕ್ ಮಾಡಿ: ಒಂದು ಕೊಲೆಯ ಸುತ್ತ [ಬಾಗ2]
 
 
ಮುಂದೆ ಓದಿ :
 
ಮೂರನೆ ಭಾಗ :
 
 
 
ನಾಯಕ್ ಸಂಗ್ರಹಿಸಿದ್ದ ವಿವರವನ್ನೆಲ್ಲ ಸಿ.ಸಿ.ಬಿ ಯ ಗುಂಪು ಕುಳಿತು ವಿವರವಾಗಿ ಪರಿಶೀಲಿಸಿದರು,
' ಓಕೆ , ಒಳ್ಳೆ ಗುಡ್ ಗ್ರೌಂಡ್ ವೊರ್ಕ್ ' ಅಂದರು ಸಾಹೇಬರು, ನಾಯಕ್ ಗೆ ಎಷ್ಟೋ ಸಮಾಧಾನ ಅವನು ಕೇಳಿದ
"ಸಾರ್ , ನೀವು ಒಪ್ಪಿಗೆ ಕೊಟ್ರೆ ನಾನು ನಿಮ್ಮ ಜೊತೆ ಕೇಸಲ್ಲಿ, ಇನ್ ವಾಲ್ವ್ ಆಗ್ತೀನಿ, ಮತ್ತೇನಿಲ್ಲ , ಕೆಲಸದಲ್ಲಿ ಕುತೂಹಲ ಅಷ್ಟೇ" ಎಂದ.
 ದಯಾನಂದ ನಗುತ್ತ
"ವೆರಿ ಗುಡ್ ಸ್ಪಿರಿಟ್,  ಯೂ ಆರ್ ವೆಲ್ ಕಂ, ಇವ್ರೆ,  ಕೆಲಸ ಅಂದ್ರೆ ಈ ರೀತಿ ಇರಬೇಕು ಆಸಕ್ತಿ, ನೀವು ನಮ್ಮ ಜೊತೆ ಇರಿ, ನಾನು ನಿಮ್ಮ  ರವಿಕಾಂತ ಜೊತೆ ಮಾತು ಆಡಿ ಹೇಳ್ತೀನಿ, " ಅಂದರು. 
 
 ಅವರು ಹೊರಟಂತೆ, ರಾಜರಾಮ್ ಹೇಳಿದರು , 
"ಈಗ ಹಾಗೆ ಒಮ್ಮೆ ಹೋಟೆಲ್ ಏಟ್ರಿಯ ಹತ್ತಿರ ಹೋಗಿ, ಮತ್ತೆ ಆ ವಾಚ್ ಮನ್ ಹತ್ತಿರ ಮಾತನಾಡಿ ಬರೋಣ, ಬರ್ತೀರ" ಎಂದು. 
ನಾಯಕನಿಗೆ ಆಶ್ಚರ್ಯ ! 
"ಅವನ ಹತ್ತಿರ ಮತ್ತೇನು ಸರಕಿರುವ ಹಾಗಿಲ್ಲ ಅನ್ಸುತ್ತೆ ಸಾರ್, ಎಲ್ಲ ಹೇಳಿದ್ದಾನೆ, ಆಗಲೇಳಿ ಮತ್ತೊಮ್ಮೆ ಹೋಗೋಣ ಬನ್ನಿ" ಎಂದು ಅವರ ಜೊತೆ, ಹೋಟೆಲ್ ಕಡೆ ಹೊರಟರು..
 
 ಬಾಗಿಲಲ್ಲಿ ಆದಿನ ಕಂಡ ವಾಚ್ ಮನ್ ಕಾಣಲಿಲ್ಲ, ಸೀದಾ ಹೋಟೆಲ್ ರಿಸೆಪ್ಷನ್ ಗೆ ಹೋದ ನಾಯಕ್ ವಿಚಾರಿಸಿದ, ಆದಿನ ಇದ್ದ ವಾಚ್ ಮನ್ ಬಗ್ಗೆ,  
"ಕುಳಿತಿರಿ ಸಾರ್ ಇಲ್ಲಿಗೆ ಕರೆಸುತ್ತೇನೆ, ಅವನ ಹೆಸರು, ಚೆನ್ನಪ್ಪ, ಅಂತ" 
ಎಂದು ರೆಸೆಪ್ಷನ್ ನಲ್ಲಿ ಕುಳಿತಿದ್ದಾಕೆ ತಿಳಿಸಿ, ಎಲ್ಲಿಗೋ ಪೋನ್ ಮಾಡಿ, ಚೆನ್ನಪ್ಪನನ್ನು ಕಳಿಸುವಂತೆ ತಿಳಿಸಿದಳು. ಐದು ಆರು ನಿಮಿಶವಾಗಿರಬಹುದು , ವಾಚ್ ಮನ್ ಕಾಣಿಸಿಕೊಂಡು ಇವರು ಇದ್ದಲ್ಲಿಗೆ ಬಂದು,
"ಏನ್ ಸಾರ್ ಅವತ್ತೆ ಎಲ್ಲ ಹೇಳಿದ್ನಲ್ಲ, ಇನ್ನೇನು ಸಾರ್" ಎಂದ. ರಾಜಾರಾಮ್ ಅವರು ನಿಂತು, 
"ಸರಿಯಪ್ಪ ಅವತ್ತೆ ಎಲ್ಲ ಹೇಳಿದ್ದಿ, ನಾವು ಸುಮ್ಮನೆ ಹೀಗೆ ಹೋಗ್ತಾ ಇದ್ವಿ , ನಿನ್ನ ಹತ್ತಿರ ಬಂದರೆ ಮತ್ತೇನಾದರು ವಿಷಯ ತಿಳಿಯಬಹುದಾ ಅಂತ ಬಂದ್ವಿ, ಇಲ್ಲಿ ಗಲಾಟೆ, ಹೊರಗೆ ನಿಮ್ಮ ವಾಚ್ ಮನ್ ಕ್ಯಾಬಿನ್ ಹತ್ರಾನೆ ಹೋಗೋಣ ನಡಿ ನಿಧಾನಕ್ಕೆ ಮಾತನಾಡಬಹುದು" ಎನ್ನುತ್ತ ಹೊರಟರು. ವಿದಿಯಿಲ್ಲದೆ ಎಲ್ಲರು ಅವರನ್ನು ಹಿಂಬಾಲಿಸಿದರು. 
 
ಹೊರಗೆ ಬಂದ ರಾಜಾರಾಮ್ ಮತ್ತೊಮ್ಮೆ , ಆದಿನ ನಾಯಕ್ ಕೇಳಿದ್ದ ಪ್ರಶ್ನೆಗಳನ್ನೆ ಕೇಳಿ ಕನ್ ಫರ್ಮ್ ಮಾಡಿಕೊಂಡರು, ಮತ್ತೆ 
"ನಿನಗೆ ಆದಿನ ಬಂದು ಹೇಳಿದನಲ್ಲ , ಹೊರಗೆ ಗಲಾಟೆ ಆಗ್ತಿದೆ ಅಂತ ಅವನ ಹೆಸರೇನಾದರು ಗೊತ್ತಾ" ಎಂದರು.
"ಇಲ್ಲ ಸಾರ್ ಅವನು ಯಾರೊ ಹೋಟೆಲ್ ನಲ್ಲಿ ನಡೆಯುತ್ತಿದ್ದ, ಹುಟ್ಟು ಹಬ್ಬದ ಪಾರ್ಟಿಗೆ ಬಂದವನು ಅನ್ನಿಸುತ್ತೆ ನನಗೆ ಪರಿಚಯವಿಲ್ಲ" ಎಂದ ವಾಚ್ ಮನ್
"ಹೋಗಲಿ ಅವನು ಹೇಗೆ ಬಂದಿದ್ದ, ಕಾರಿನಲ್ಲೊ , ಸ್ಕೂಟರಿನಲ್ಲೊ, ನಿನಗೆ ಅದೇನಾದರು ನೆನಪಿದೆಯಾ" ಎಂದ ರಾಜಾರಾಮ್, ನಾಯಕ್ ನೋಡುತ್ತ ನಿಂತಿದ್ದ ಏನು ನುಡಿಯದೆ.
"ಅವನು ಬಂದಿದ್ದು, ಮೋಟರ್ ಸೈಕಲ್ ಸಾರ್, ಜೊತೆಗೆ ಒಂದು ಮಗುವಿತ್ತು ಪುಟ್ಟದು" ಎಂದ ವಾಚ್ ಮನ್
"ಸರಿಯೆ ಅವನು ಬಂದಿದ್ದ ಮೋಟರ್ ಸೈಕಲ್ ನಂಬರ್, ನೆನಪಿದೆಯ, ಹೋಗಲಿ ಅವನು ಏನಾದರು ನಿಮ್ಮ ಲಾಗ್ ಬುಕ್ಕಲ್ಲಿ ಎಂಟ್ರಿ ಮಾಡಿದ್ದಾನ ?" ಕೇಳಿದ, ರಾಜಾರಾಮ್
"ಗೊತ್ತು ಸಾರ್, ಅವನು ಒಳ ಹೋಗುವಾಗ ಅವನ ಬೈಕ್ ನಂಬರ್, ಎಲ್ಲವನ್ನು ಬರೆದಿದ್ದಾನೆ, ಅದು ಈ ಹೋಟೆಲ್ ನಲ್ಲಿ ಕಂಪಲ್ಸರಿ ಅಲ್ವಾ ಸಾರ್" ಎಂದ. 
 ಅಲ್ಲಿ ಇದ್ದ ವಾಚ್ ಮನ್ ಲಾಗ್ ಬುಕ್ಕನ್ನು ಪರಿಶೀಲಿಸ್ದರು, ಪೇಜನ್ನು ಹಿಂದೆ ತಿರುಗಿಸುತ್ತ,  29..28.. 27.. 16.. 15 ನೆ ಮೇ ತಿಂಗಳಿಗೆ ಬಂದರು, 
ವಾಚ್ ಮನ್ ತನ್ನ ಬೆರಳನ್ನು ಇಟ್ಟ ಎಂಟ್ರಿಯ ಮೇಲೆ, "ಇದೇ ಸರ್ ಅವನು ಬರೆದಿರುವುದು"
ಎಲ್ಲರು ವಿವರ ಓದಿದರು, ಹೆಸರು :ಸುನಿಲ್,  ಮೋಟರ್ ಬೈಕ್ ನಂಬರ್ : KA05 EM 1515, ಮೊಬೈಲ್ ನಂಬರ್ :೯೮೩೪....೩೪  , ಉದ್ದೇಶ : ಶೀಲ ಪಾರ್ಟಿ ಹುಟ್ಟುಹಬ್ಬ
ರಾಜಾರಾಮ್ ಖುಷಿಯಾದರು, 
"ಅಂದರೆ ಇವನು ನೇರವಾಗಿ ಕೊಲೆಯನ್ನು ನೋಡಿರುವನು, ಪ್ರತ್ಯಕ್ಷದರ್ಶಿ,  ಅಂದರೆ ಐ ವಿಟ್ ನೆಸ್   .... ಮೈಗಾಡ್ "
 
ನಾಯಕ್ ಈಗ ಬೆಚ್ಚಿ ಬಿದ್ದ . ಅವನಿಗೆ ಈಗ ರೇಗಿ ಹೋಗಿತ್ತು, ಆದಿನ ತಾನು ಬಂದಾಗ ವಾಚ್ ಮನ್ ಇದನ್ನು ಹೇಳಿರಲಿಲ್ಲ
"ಏನಯ್ಯ , ನಾನು ಆ ದಿನ ಬಂದಾಗ ನೀನಿದನ್ನು ಏಕೆ ಹೇಳಲಿಲ್ಲ" ರೇಗಿದ, ಅವನ ಮೇಲೆ
"ನೀವು ಕೇಳಲಿಲ್ವಲ್ಲ ಸಾರ್, ಕೇಳಿದ್ದರೆ ನಾನು ಹೇಳಿರುತ್ತಿದ್ದೆ, ನನಗೇನು ಗೊತ್ತು, ಇವೆಲ್ಲ ಹೇಳಬೇಕು ಅಂತ" ಎಂದು ಪೆದ್ದು ಪೆದ್ದಾಗಿ ನುಡಿದ. 
ಇನ್ಸ್ ಪೆಕ್ಟರ್ ರಾಜಾರಾಮ್  ನಾಯಕನತ್ತ ತಿರುಗಿ ಕುಹಕದ ನಗೆ ನಗುತ್ತಿದ್ದ, ನಾಯಕ್ ಗೆ ಉರಿದು ಹೋಯಿತು.
 
 
ನಾಯಕ್ ಕೇಳಿದ "ಇದೆ ಬೈಕ್ ಅಂತ ಗ್ಯಾರಂಟಿನ" . 
ವಾಚ್ ಮನ್ ಹೇಳಿದ
"ನಾನು ಯಾವತ್ತು ತಪ್ಪಲ್ಲ ಸಾರ್, ಅದೇ ನನಗೆ ನೆನಪಿದೆ, ನೋಡಿ ಮೊದಲ ಅಕ್ಷರ ಮರೆತು ರೆಡ್ ಇಂಕಿನಲ್ಲಿ ಬರೆದಿದ್ದಾನೆ"  
"ಮತ್ತೆ ಅವತ್ತು ಹೆಸರು ಗೊತ್ತಿಲ್ಲ ಅಂದೆಯಲ್ಲ, ಇಲ್ಲಿ ಹೆಸರಿದೆ" ಅಂದ ನಾಯಕ್ ಕೌತುಕದಿಂದ
"ಹೌದ ಸಾರ್, ನನಗೆ ಇಂಗ್ಲೀಶ್ ಅರ್ಥವಾಗಲ್ಲ, ನಂಬರ್ ಮಾತ್ರ ಗೊತ್ತಾಗುತ್ತೆ,  ಬರಿ ತಮಿಳು ಅಷ್ಟೆ ಓದಕ್ಕೆ ಬರೋದು" ಎಂದ.
ಸರಿ ಇಬ್ಬರು  ಹೋಟೆಲ್ ನ ಆಡಳಿತಕ್ಕೆ ತಿಳಿಸಿ, ಆ ವಾಚ್ ಮನ್ ಲಾಗ್ ಬುಕ್ ಪಡೆದು , ಅದಕ್ಕೆ ಸಂಬಂದಿಸಿದ ಲೆಟರ್ ಅನ್ನು ಹೆಡ್ ಆಫೀಸ್ ನಿಂದ ಕಳಿಸುವದಾಗಿ ತಿಳಿಸಿ, ಸಿ.ಸಿ.ಬಿ ಹೆಡ್ ಕ್ವಾರ್ಟಸ್ ಸೇರಿದರು. ಹೋಟೆಲ್ ನಲ್ಲಿ ತಿಂಡಿ ಕಾಫಿ ಎಲ್ಲ ಆಗಿತ್ತು. ರಾಜಾರಾಮ್ ಮತ್ತು ನಾಯಕ್ ಜೊತೆ ಬೇರೆಯವರು ಸೇರಿದರು.
ಸುನಿಲನ ನಂಬರಿಗೆ ಕಾಲ್ ಮಾಡಿದರು ರಾಜಾರಾಮ್ , ಎಲ್ಲರ ಮನದಲ್ಲು ಉದ್ವೇಗ.  ಒಂದು... ಎರಡು...ಕ್ಷಣ
"ಹಲೋ,  ಸುನಿಲ್ ಹಿಯರ್.. " ಎಂಬ ದ್ವನಿ.
"ಹಲೋ ಸುನಿಲ್, ನಾನು ರಾಜಾರಾಮ್ ಅಂತ ಇನ್ಸ್ಪೆಕ್ಟರ್ , ಸಿ.ಸಿ.ಬಿ. ಬೆಂಗಳೂರು,  ಕೆಲವು ಇನ್ ಫರ್ಮೇಶ ಗೋಸ್ಕರ ನಿಮ್ಮನ್ನು ಕಾಂಟಾಕ್ಟ್ ಮಾಡುತ್ತಿದ್ದೇವೆ. ನೀವು ಸಿ.ಸಿ.ಬಿ. ಹೆಡ್ ಕ್ವಾರ್ಟಾರ್ಸ್ ಗೆ ಬರಲು ಸಾದ್ಯವ, ಅಥವ ನಾವೆ ಅಲ್ಲಿಗೆ ಬರಬೇಕೆಂದರು ರೆಡಿ" ಎಂದರು. ಅವರು ಎಷ್ಟೆ ವಿನಯವಾಗಿ ಮಾತನಾಡಿದರು, ಪೋಲಿಸ್ ಗತ್ತು, ಆಕಡೆಯಿರುವ ಸುನಿಲ್ ಗೆ ತಿಳಿಯುತ್ತಿತ್ತು. ಅವನು
"ಏಕೆ ಅಂತ ಕೇಳಬಹುದಾ ಸರ್, ನಾನು ಪೋಲಿಸ್ ಗೆ ತಿಳಿಸಬೇಕಾದ ವಿಷಯವೇನಿದೆ? " ಎಂದ ತುಸು ಆತಂಕ, ಮತ್ತು ಆಶ್ಚರ್ಯದಲ್ಲಿ.
"ಸುನಿಲ್ ರವರೆ ನಾವು ಮಹಾಂತೇಶ್ ಎಂಬುವರ ಕೊಲೆಯ ತನಿಖೆಯಲ್ಲಿದ್ದೇವೆ, ನಿಮಗೆ ತಿಳಿದಿದೆ, ನೀವು ಮೇ ೧೫ ರ ಸಂಜೆ ಹೋಟೆಲ್ ಏಟ್ರಿಯಾಗೆ ಪಾರ್ಟಿಗೆ ಹೋದಾಗ ಅಲ್ಲಿ ರಸ್ತೆಯ ಪಕ್ಕ ಒಂದು ಅಪಘಾತ ಕಂಡಿರಿ ಅದರ ವಿವರಣೆ ಬೇಕಿದೆ ಅಷ್ಟೆ, ನೀವು ಹೆದರಬೇಕಿಲ್ಲ,  ನಿಮಗೆ ಯಾವ ತೊಂದರೆಯು ಇಲ್ಲ " ಎಂದರು. 
ಅವನು ತುಸು ಆಶ್ಚರ್ಯದಿಂದಲೆ, 
"ಸರಿ ಸಾರ್ ಆದರೆ ನಿಮಗೆ ನನ್ನ ಮೊಬೈಲ್ ನಂಬರ್ ಹೇಗೆ ದೊರಕಿತು, ಮತ್ತು ನಾನು ಆ ದಿನ ಅಲ್ಲಿದ್ದೆ ಅಂತ ಹೇಗೆ...." ಎಂದ ಅನುಮಾನದಿಂದ.  ರಾಜಾರಾಮ್ ನಕ್ಕರು
"ನೀವೆ ಎಲ್ಲ ವಿವರವನ್ನು ಹೋಟೆಲಿನ ವಾಚ್ ಮನ್ ಲಾಗ್ ಬುಕ್ಕಿನಲ್ಲಿ ಬರೆದಿರುವಿರಲ್ಲ, ಸುನಿಲ್ , ಯಾವಾಗ ಬರುವಿರಿ, ಬೇಗ ಬಂದರೆ ನಮಗೆ ಅನುಕೂಲ" ಎಂದರು. ಸುನಿಲ್ ಗೆ ಆಶ್ಚರ್ಯ ಪೋಲಿಸರು ಹೇಗೆಲ್ಲ ಕೆಲಸ ಮಾಡ್ತಾರೆ ಅಂತ, ಈಗ ವಿದಿಯಿಲ್ಲ
"ಆಯ್ತು ಸಾರ್ ನಾನೀಗ  ಇಂಡಿಯನ್ ಎಕ್ಸ್ ಪ್ರೆಸ್ ಹತ್ತಿರದ ನಮ್ಮ ಆಫೀಸಿನಲ್ಲಿದ್ದೇನೆ, ಈಗಲೆ ಹೊರಟು, ಹತ್ತು ಹದಿನೈದು ನಿಮಿಶದಲ್ಲಿ ಅಲ್ಲಿರುತ್ತೇನೆ, ಹೇಗೆ ಬರುವುದು ತಿಳಿಸಿ" ಎಂದು ಕೇಳಿ ತಿಳಿದು , ಫೋನ್ ಡಿಸ್ಕನೆಕ್ಟ್ ಮಾಡಿದ. 
 
ರಾಜಾರಾಮ್ ಸಂತಸದಿಂದ ಇದ್ದರು, ಒಳ್ಳೆ ಬ್ರೇಕ್ ಥ್ರೂ ಸಿಕ್ಕಿತು ಎಂದು, ಎಲ್ಲರು ಮಹಾಂತೇಶನ ಕೇಸಿನ ಬಗ್ಗೆ ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸುತ್ತಿರುವಾಗಲೆ,  ತನ್ನ ಬೈಕನ್ನು ಹೊರನಿಲ್ಲಿಸಿ, ಬಾಗಿಲಲ್ಲಿದ್ದ ಪಿ.ಸಿ.ಗಳನ್ನು ಕೇಳುತ್ತ ಒಳಗೆ ಬಂದ ಸುನಿಲ್. ಅವನನ್ನು ಸ್ವಾಗತಿಸಿ, ಕೂಡಿಸಿದರು, ರಾಜಾರಾಮ್, 
"ಒಳ್ಳೆದು ಸುನಿಲ್ , ಹೇಳಿ ಕಾಫಿ ಟೀ ಏನಾದರು ತೆಗೆದುಕೊಳ್ತೀರ?" , ಸುನಿಲ್ ಗೆ ಸ್ವಲ್ಪ ರಿಲಾಕ್ಸ್ ಆಯಿತು, ಇಂತ ಟ್ರೀಟ್ ಮೆಂಟಿನಿಂದ, ಅವನ ಮಾನಸಿಕ ಒತ್ತಡ ಕಡಿಮೆ ಯಾಯ್ತು. 
"ಎಲ್ಲ ಆಗಿದೆ ಸಾರ್, ನನ್ನಿಂದ ನಿಮಗೆ ಯಾವ ಇನ್ ಫರ್ಮೇಶನ್ ಬೇಕಾಗಿದೆ ತಿಳಿಸಿ" ಎಂದ
"ಮತ್ತೇನಿಲ್ಲ, ನೀವು ವಾಚ್ ಮನ್ ಬಳಿ ಆದಿನ ಸಂಜೆ ಹೋಟೆಲ್ ಏಟ್ರಿಯ ಹತ್ತಿರದಲ್ಲಿ ಮಾಹಾಂತೇಶ್ ಮೇಲೆ ನಡೆದ ಹಲ್ಲೆ ನೋಡಿದೆ ಅಂತ ತಿಳಿಸಿರುವಿರಿ ಅದರ ಬಗ್ಗೆ ಸ್ವಲ್ಪ ವಿವರವಾಗಿ ಹೇಳಿ, ನಿಧಾನವಾಗಿ ನೆನಪಿಸಿಕೊಳ್ಳಿ , ಎಂತದೆ ಸಣ್ಣ ವಿಷಯವಾದರು ಪರವಾಗಿಲ್ಲ, ನಿಮಗೆ ನೆನಪಿರುವ ಎಲ್ಲವನ್ನು ಹೇಳಿ" ಎಂದರು ರಾಜಾರಾಮ್
"ಸರಿ ಸಾರ್ ಹೇಳ್ತೀನಿ' ಎಂದು ನುಡಿತು ಒಂದು ನಿಮಿಶ ಸುಮ್ಮನೆ ಕುಳಿತ , ಸುನಿಲ್ ಆದಿನ ನಡೆದಿದ್ದನ್ನು ನೆನಪಿಸಿಕೊಳ್ಳುತ್ತ, 
ನಂತರ ನುಡಿದ
"ಸಾರ್ ಆದಿನ ನನ್ನ ಕಲೀಗ್ ಒಬ್ಬರ ಮಗುವಿನ ಹುಟ್ಟಿದ ಹಬ್ಬದ ಪಾರ್ಟಿ ಇತ್ತು ಹೋಟೆಲ್ ಏಟ್ರಿಯಾದಲ್ಲಿ, ನಾನು ಆಫೀಸಿನಿಂದ ಮನೆಗೆ ಹೋಗಿ ನಂತರ ನನ್ನ ಮಗುವನ್ನು ಕರೆದುಕೊಂಡು ಅಲ್ಲಿಗೆ ಹೊರಟೆ, ಸಂಜೆ ಅಂದರೆ ಆಗಲೆ ಕತ್ತಲೆಯಾಗುತ್ತಿತ್ತು, ಬಹುಷಃ ಏಳು ಗಂಟೆ ಇರಬಹುದು ಸಮಯ ನೆನಪಿಲ್ಲ,  ಹೋಟೆಲ್ ಹತ್ತಿರ ಬರುತ್ತಿರುವಾಗ ಗಮನಿಸಿದೆ, ನನ್ನ ಮುಂದೆ ಹೋಗುತ್ತಿದ್ದ, ಕೆಂಪನೆಯ ಆಲ್ಟೊ ಕಾರೊಂದು, ವೇಗವಾಗಿ ಹೋಗುತ್ತ ಇದ್ದದ್ದು, ಎದುರಿನ ಕಾರಿಗೆ ಡಿಕ್ಕಿ ಹೊಡೆಯಿತು, ನಾನು ಮೊದಲು ಆಕ್ಸಿಡೆಂಟ್ ಇರಬಹುದು ಎಂದು ಗಾಭರಿ ಕುತೂಹಲದಿಂದ ಗಾಡಿ ನಿಲ್ಲಿಸಿದೆ, ಅಲ್ಲದೆ ನಾನು ಸಹ ಹಿಂದಿನಿಂದ ಅದೇ ಕೆಂಪು ಆಲ್ಟೋಗೆ ಡಿಕ್ಕಿ ಹೊಡೆಯುವ ಸಾದ್ಯತೆ ಇತ್ತು. ಮುಂದೆ ಇದ್ದಿದ್ದು ಮಾರುತಿ- ೮೦೦ ಕಾರು, ಅದರಲ್ಲಿದ್ದ ವ್ಯಕ್ತಿ ಕೆಳಗಿಳಿದು ಕಾರನ್ನು ಪರೀಶಿಲಿಸುತ್ತಿದ್ದ, ಆಗ ಹಿಂದಿನ ಆಲ್ಟೋ ಕಾರಿನಿಂದ ಮೂವರು ಅಥವ ನಾಲ್ವರು ಇಳಿದು ವೇಗವಾಗಿ ಓಡುತ್ತ ಮುಂದಿದ್ದ ಕಾರಿನತ್ತ ಹೋಗಿ ಕೆಳಗಿಳಿದು ನಿಂತಿದ್ದ ವ್ಯಕ್ತಿಗೆ ಅವರ ಕೈಲಿದ್ದ ಕೋಲು,ದೊಣ್ಣೆಯಂತದು, ಬಹುಷಃ ಕ್ರಿಕೇಟ್ ಬ್ಯಾಟಿರಬಹುದು ಅವುಗಳಿಂದ ಹೊಡೆಯುತ್ತಿದ್ದರು, ನಂತರ ಆ ವ್ಯಕ್ತಿ ಕೆಳಗೆ ಬಿದ್ದ, ನಂತರ ಅವರೆಲ್ಲ ಇತ್ತ ತಿರುಗಿದರು, ನಾನು ಆಗ ಬೈಕಿನಲ್ಲಿ ಮುಂದೆ ಹೊರಟುಬಿಟ್ಟೆ , ಬೈಕಿನಲ್ಲಿ ನನ್ನ ಮಗಳು ಬೇರೆ ಇದ್ದಳು, ಯಾಕೆ ರಿಸ್ಕ್ ಅನ್ನಿಸಿತು"
 
ರಾಜಾರಾಮ್ ಈಗ ನುಡಿದರು "ಸರಿ , ಈಗ ಆ ವ್ಯಕ್ತಿಗಳನ್ನು ಗುರುತಿಸಬಲ್ಲಿರ, ಮತ್ತೆ ಕಾರಿನ ನಂಬರ್ ಏನಾದರು ನೆನಪಿದೆಯ ಹೇಗೆ ತಿಳಿಸಿ" 
 
ಸುನಿಲ್ ನುಡಿದನು "ಸಾರ್ ಅವರೆಲ ಸುಮಾರು ಒಂದೆ ವಯಸಿನವರು ಅನ್ನಿಸಿತು, ಸರಿಸುಮಾರು ೨೫ ಅಥವ ೨೮ ಇರಬಹುದು. ಒಬ್ಬಾತ ಸ್ವಲ್ಪ ಗಡ್ಡ ಬಿಟ್ಟಿದ್ದ,   , ಹೌದು ನೋಡಿ,  ಮತ್ತೆ ವಾಹನದ ನಂಬರ್ ಕೇಳಿದಿರಿ, ಆ ದಿನ ಕೆಂಪು ಕಾರು ಮುಂದಿನ ಕಾರಿಗೆ ಗುದ್ದಿದಾಗ ಗಮನಿಸಿದೆ, 945 ಅಂತ ಕೊನೆಯಲ್ಲಿ ಇದ್ದ ನೆನಪು,  ಆದರೆ ಗಾಭರಿಯಲ್ಲಿ ಮರೆತು ಬಿಟ್ಟೆ, ಮತ್ತೆ ವಾಪಸ್ ನಾನು ಹೋಟೆಲ್ ನಿಂದ ಹೊರೆಟಾಗ ಅಲ್ಲಿ ಆ ಕಾರು ಇರಲಿಲ್ಲ, ಮತ್ತು  ಕೆಳಗೆ ಬಿದ್ದ ವ್ಯಕ್ತಿಯು ಇರಲಿಲ್ಲ, ಬರಿ ನೀವು ಅಂದರೆ ಪೋಲಿಸಿರು ಇದ್ದಿರಿ, ಮತ್ತು ಮುಂದಿದ್ದ ಬಿಳಿಯ ಮಾರುತಿ-೮೦೦ ಮಾತ್ರ ಆಲ್ಲಿ ನಿಂತಿತ್ತು,  ಹಾ ಮರೆತೆ, ಡಿಕ್ಕಿಯಾದಾಗ ಕೆಂಪು ಆಲ್ಟೋ ಕಾರಿನ ಮುಂಬಾಗ ಏಟು ಬಿದ್ದು ಒಳಗೆ ಹೋಗಿ ನೆಗ್ಗಿ ಹೋಗಿತ್ತು" 
ಮತ್ತಷ್ಟು ವಿಷಯಗಳನ್ನು ಚರ್ಚಿಸಿದರು.
 
 ರಾಜಾರಾಮ್ ನುಡಿದರು
"ವೆಲ್ ಸುನಿಲ್ ನಿಮ್ಮಿಂದ ಸಾಕಷ್ಟು ವಿಷಯ ತಿಳಿಯಿತು,  ಮತ್ತೆ ಏನಾದರು ಅನುಮಾನ ಬಂದರೆ ಮತ್ತೆ ಕೇಳುತ್ತೇವೆ , ಬಹುಷ: ನೀವು ಮುಖ್ಯ ಸಾಕ್ಷಿಯಾಗಬೇಕಾಗಬಹುದು, ನೀವೆ ಅಲ್ಲವೆ ಐ ವಿಟ್ ನೆಸ್" 
ಸುನಿಲ ಪೂರ ಗಾಭರಿಯಾದ
"ಸಾರ್ ನಾನು ಕೋರ್ಟಿಗೆಲ್ಲ ಬರಬೇಕಾ, ಬೇಡ ಸಾರ್ ನಿಮ್ಮಗೆ ಎಲ್ಲ ತಿಳಿಸಿರುವೆನಲ್ಲ,  ನನಗೆ ತೊಂದರೆ ಆಗಲ್ವ ಸಾರ್" ಎಂದು ಗೋಗೆರದ.
 
"ಸುನಿಲ್ , ನೀವು ಎಜುಕೇಟೇಡ್ ಏಕೆ ಅಷ್ಟು ಹೆದರಿಕೆ, ನಾವೇನು ನಿಮ್ಮನ್ನು ಏನುಮಾಡುವದಿಲ್ಲ, ಕೋರ್ಟ್ ಸಹ ನಿಮ್ಮ ಏನು ಮಾಡುವದಿಲ್ಲ,   ಮತ್ತೊಂದು ವಿಷಯ ನಿಮ್ಮ ಹೆಸರಾಗಲಿ ನಿಮ್ಮ ಪರಿಚಯವಾಗಲಿ ಎಲ್ಲಿಯು ಬರದಂತೆ ನಾವು ಎಚ್ಚರ ವಹಿಸುತ್ತೇವೆ ಆಯ್ತಾ. ಯಾವ ಮಾಧ್ಯಮಕ್ಕಾಗಲಿ , ಅಥವ ಪೇಪರಿಗಾಗಲಿ ನಿಮ್ಮ ವಿಷಯ ತಿಳಿಸುವದಿಲ್ಲ. ನಿಮಗೆ ಯಾವ ತೊಂದರೆಯು ಇರದಂತೆ ನೋಡಿಕೊಳ್ತೇವೆ ಆಯ್ತಾ" ಎಂದು ದೈರ್ಯ ತುಂಬಿದರು, ರಾಜಾರಾಮ್ ಅವನಲ್ಲಿ.
 
 ಸುನಿಲನ ಮನೆಯ ವಿಳಾಸ, ಆಫೀಸಿನ ವಿಳಾಸ, ಅವನ ಫೋನ್ ನಂಬರಗಳು ಎಲ್ಲವನ್ನು ಪಡೆದು ಅಗತ್ಯ ಬಿದ್ದರೆ ಮಾತ್ರ ಕಂಟ್ಯಾಕ್ಟ್ ಮಾಡುವದಾಗಿ ತಿಳಿಸಿ ಕಳಿಸಿಕೊಟ್ಟರು. 
 
ನಾಯಕ್ ಗು ಒಂದು ಸಮಾದಾನ ಎನಿಸಿತು, ಸದ್ಯ ಎಂತದೋ ಒಂದು , ಘಟನೆ ನೋಡಿರುವ ಒಬ್ಬ ಸಾಕ್ಷಿ ಸಿಕ್ಕಿದ. ಹೇಗು ಮುಂದುವರೆಯಬಹುದು ಕೇಸಿನಲ್ಲಿ ಎಂದು. 
 
 ಈಗ ಮೇಕ್ರಿ ಸರ್ಕಲ್ನಲ್ಲಿ ಇದ್ದ ಸಿ.ಸಿ. ಕ್ಯಾಮರದ ದೃಷ್ಯದ ಅನಾಲಿಸಿಸೆ ಗೆ  ಪುಣೆಗೆ ಕಳಿಸಿದ್ದರು, ಅವರನ್ನು ಕಾಂಟ್ಯಾಕ್ಟ್ ಮಾಡಿ, ಸುನಿಲ ತಿಳಿಸಿದ ಕಾರಿನ ವಿವರವನ್ನೆಲ್ಲ ಮೈಲ್ ಮಾಡುವದಾಗಿ ತಿಳಿಸಿ, 'ಸಿ.ಸಿ.ಕ್ಯಾಮರದಲ್ಲಿ ಆ ಕಾರಿನ ವಿವರವೇನಾದರು ಸಿಗುವುದೆ ಎಂದು ನೋಡಲು ತಿಳಿಸಿದರು' , ಸಿ.ಸಿ.ಬಿ ಚೀಫ್ ದಯಾನಂದ. 
 ಆಗಲೆ ರಾತ್ರಿ ತಡವಾಗಿತ್ತು, ಮರುದಿನ ಸಹಕಾರಿ ನಗರ ಸೊಸೈಟಿಯತ್ತ ಪುನಃ ಹೋಗುವುದು ಎಂಬ ತೀರ್ಮಾನಕ್ಕೆ ಎಲ್ಲರು ಬಂದರು. ನಾಯಕ್ ಈಗ ಉತ್ಸಾಹ ತಾಳಿದ್ದ, ತಾನು ಪುನ: ಮರುದಿನ ಬೆಳಗ್ಗೆ ಮುಂಚೆಯೆ ಬಂದು ಅವರನ್ನು ಕೂಡಿಕೊಳ್ಳುವದಾಗಿ ತಿಳಿಸಿದ. 
 -------------------------------------------------------------------------------------------------------------------------
 
ಮರುದಿನ ನಾಯಕ್ ತನ್ನ ACP ಗೆ ಇನ್ ಫರ್ಮ್ ಮಾಡಿ, ನೇರ ಸಿ.ಸಿ.ಬಿ. ಕೇಂದ್ರ ಕಚೇರಿಗೆ ಬೇಟಿ ನೀಡಿದ. ನಾಯಕನನ್ನು ರಾಜಾರಾಮ್ ನಗುತ್ತ ಸ್ವಾಗತಿಸಿದ. ಒಳಗೆ ಹೋಗುವಾಗಲೆ ಅವರು ಬೆಳಗಿನ ಉಪಹಾರ ಕಾಫಿ ಎಲ್ಲವನ್ನು ಅಲ್ಲಿಗೆ ತರಿಸಿದರು.  ರಾಜಾರಾಮ್  ಸಬ್ ಇನ್ಸ್ ಪೆಕ್ಟರ್ ನಾಯಕ್ ಜೊತೆ ಸಹಕಾರನಗರ ಕೋಅಪರೇಟಿವ್ ಸೊಸೈಟಿಗೆ ಹೋಗಿ ಬರೋಣವೆಂದು ನಿರ್ದರಿಸಿ, ತನ್ನ ಚೀಫ್ ACP ಗುಲೇದ್ ರವರಿಗೆ ಕಾಲ್ ಮಾಡಿದರು. ಅವರಿಗೆ ಆಶ್ಚರ್ಯ ಕಾದಿತ್ತು, ಸ್ವಲ್ಪ ಕಾಯುವಂತೆ ತಿಳಿಸಿದ ಅವರು, ಸ್ವಲ್ಪ ಹೊತ್ತಿನಲ್ಲೆ ತಾವು ಮತ್ತು ಸಿ.ಸಿ.ಬಿ ಚೀಫ್ ದಯಾನಂದ ಸಹ ಅವರ ಜೊತೆ ಬರುವದಾಗಿ ತಿಳಿಸಿದಾಗ ನಾಯಕ್ ಗೆ ಖುಷಿ ಮತ್ತು ಅಚ್ಚರಿ. 
 ಹತ್ತು ನಿಮಿಶದಲ್ಲಿಯೆ ಅವರಿಬ್ಬರು ಬಂದು ಜೊತೆ ಸೇರಿದರು.  ಎಲ್ಲರು ಹೊರಡಲು ಪೋಲಿಸ್ ಜೀಪ್ ಸಿದ್ದವಾಗಿತ್ತು. ಹೊರಗೆ ಬಂದು ಜೀಪ್ ಹತ್ತುವಾಗ ACP  ಗುಲೇದ್ ರವರು ಮತ್ತೊಂದು ಸಮದಾನದ ಸಂಗತಿ ತಿಳಿಸಿದರು. ನಿನ್ನೆ ಸುನಿಲ ಹೇಳಿದ ವಿವರಗಳು ಪುಣೆಯ ಸಿ.ಸಿ.ಕ್ಯಾಮರದ ಅನಾಲಿಸಿಸ್ ಜೊತೆ ಹೋಲಿಕೆಯಾಗುತ್ತಿದೆಯಂತೆ, ಅವರು ಸ್ವಷ್ಟವಾಗಿ ಹೇಳುತ್ತಿದ್ದಾರೆ, ಮೇ ೧೫ ರಾತ್ರಿ ಎಂಟುಗಂಟೆ ಸುಮಾರಿಗೆ ಮಹಾಂತೇಶನ ಹಿಂದೆ ಇದ್ದ ಕಾರು ಕೆಂಪು ಬಣ್ಣದ ಆಲ್ಟೊ ಮತ್ತು ಅದರ ನಂಬರ್ ಸಹ ಸುನಿಲ ತಿಳಿಸದಂತೆ ಇತ್ತು ಅದು TN23 MN 945. 
 
 ಅವರು ಮಾತನಾಡುತ್ತಿರುವಂತೆ ಜೀಪ್ ಡ್ರೈವರ್ ಹೇಳಿದ , 
'TN23 ಅಂದ್ರೆ ಅದು ವೆಲ್ಲೂರ್ ರಿಜಿಸ್ಟೇಷನ್ ಇರುತ್ತೆ ಸಾರ್, ತಮಿಳು ನಾಡಿನ ಗಾಡಿ' 
ದಯಾನಂದ, ಗುಲೇದ್ ಹಾಗು ರಾಜಾರಾಮ್ ಹಿಂದಿನ ಸೀಟಿಗೆ ಹೋಗುತ್ತ, ನಾಯಕ್ ಗೆ ಮುಂದಿನ ಸೀಟಿಗೆ ಬರುವಂತೆ ತಿಳಿಸಿದರು. ಒಮ್ಮೆ ಅವನು ಸಹಕಾರನಗರ ಸೊಸೈಟಿಗೆ ಹೋಗಿ ಬಂದವನಲ್ಲವೆ. ನಾಯಕ್ ಗಾಡಿ ಹತ್ತಿ ಮುಂದೆ ಕುಳಿತುಕೊಳ್ಳುತ್ತಿರುವಂತೆ , ಡ್ರೈವರ್ ನಾಯಕ್ ನನ್ನು ಒಮ್ಮೆ ದಿಟ್ಟಿಸಿದ. ನಾಯಕ್ ಗೆ ಎಂತದೊ ಕಸಿವಿಸಿ. ಈ ಡ್ರೈವರ್ ನನ್ನು ಮತ್ತೆಲ್ಲೊ ನೋಡಿರುವಂತಿದೆ ಎಲ್ಲಿರಬಹುದು ಎಂದು ಯೋಚಿಸುವದರಲ್ಲಿ ಜೀಪ್ ಹೊರಟಿತು. ಸರಿಯಾಗಿ ಹತ್ತು ಗಂಟೆ ಮೂವತ್ತು ನಿಮಿಶಕ್ಕೆ ಎಲ್ಲರು ಸೊಸೈಟಿ ಗೇಟ್ ಬಳಿ ಇದ್ದರು. ಎಲ್ಲರು ಕೆಳಗಿಳಿದರು. ಒಳಗೆ ಹೊರಟಂತೆ ಅದೇನೊ, ದಯಾನಂದ ಸಾಹೇಬರು , ಜೀಪಿನ ಡ್ರೈವರ್ ನನ್ನೆ ಒಂದು ಕ್ಷಣ ನೋಡಿದರು, ಅವನು ಅಷ್ಟೆ , ಅದೇನೊ ಮಾತುಗಳ ವಿನಿಮಯ ಕಣ್ಣಿನಲ್ಲೆ ಆಯಿತು.
 
    ಒಳಗೆ ಹೋಗುವಾಗಲೆ ಸಹಕಾರನಗರ ಸೊಸೈಟಿಯ ಹಿರಿಯ ಅಧಿಕಾರಿಯೆ ಬಂದು ಸ್ವಾಗತಿಸಿದರು, ಇವರು ಬರುವ ವಿಷಯ ಮೊದಲೆ ತಿಳಿಸಲಾಗಿತ್ತು ಅನ್ನಿಸುತ್ತೆ ಅಂದುಕೊಂಡ ನಾಯಕ್. ಒಳಗಿನ ಚೇಂಬರ್ ಗೆ ಹೋದರು ಎಲ್ಲರು. ನಾಲ್ವರು ಕುಳಿತಂತೆ, ಗುಲೇದ್ ಸಾಹೇಬರು ಅಲ್ಲಿಯ ಅಧಿಕಾರಿಗಳನ್ನು ಕುರಿತು  ಮಹಾಂತೇಶನ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಕೇಳಿದರು. ಎಲ್ಲವು ಅಸ್ವಷ್ಟ ಪ್ರಶ್ನೆಗಳು, ನಾಯಕ ಅಂದುಕೊಂಡ. ಇದೇನು ಹೀಗೆ ಗೊತ್ತುಗುರಿ ಇಲ್ಲದಂತೆ ಏನೇನೊ ಕೇಳುತ್ತಿರುವರು. ಆಗ ಗುಲೇದ್ ಸಾಹೇಬರು
ನಾವು ಕೆಲವು ಕೆಲಸಗಾರರ ಕೈಲಿ ಮಾತನಾಡಲು ಬಯಸಿದ್ದೇವೆ ಅವರನ್ನು ಕರೆಸಿ ಎಂದರು. 
"ಎಲ್ಲರನ್ನು ಪುನ: ಕರೆಸಲೆ" ಅವರ ಪ್ರಶ್ನೆ. ಆಗ ರಾಜಾರಾಮ್ ಜೇಬಿನಿಂದ ಒಂದು ಕಾಗದ ತೆಗೆದರು,
"ಎಲ್ಲರು ಬೇಡ, ಈ ಕಾಗದದಲ್ಲಿರುವ ಅಧಿಕಾರಿ ಮತ್ತು ಕೆಲಸಗಾರರು ಮಾತ್ರ ಸಾಕು" ಎಂದರು. 
ನಾಯಕ್ ನಿಗೆ ಆಶ್ಚರ್ಯ, ಅದರಲ್ಲಿ ಇದ್ದದ್ದು, ಕೇವಲ  ನಾಲಕ್ಕು ಹೆಸರು ಮಾತ್ರ, ಇವನಿಗೆ ಆಶ್ಚರ್ಯ ಇವರು ಯಾವ ಬೇಸಿಸ್ ಮೇಲೆ ಶಾರ್ಟ್ ಲಿಷ್ಟ್ ಮಾಡಿದ್ದಾರೆ ಎಂದು. ಮತ್ತೆ ಗಮನಿಸಿದ, ತನ್ನ ಜೊತೆ ಇದ್ದ ಮತ್ತೊಂದು ಲಿಷ್ಟ್ ಜೊತೆ ಹೋಲಿಸುತ್ತ,  ಇವರ ಸೆಲೆಕ್ಟ್ ಮಾಡಿಸುವ ಎಲ್ಲ ಕೆಲಸಗಾರರ ವಯಸ್ಸು  ೨೫ ರಿಂದ ೩೦ ರ ಒಳಗೆ ಇರುವವರು, ನಾಯಕನಿಗೆ ಹೊಳೆಯಿತು. ಪ್ರತ್ಯಕ್ಷದರ್ಶಿ ಸುನಿಲ್ ಆದಿನ ದಾಳಿಮಾಡಿದವರು ವಯಸ್ಸು ಹೆಚ್ಚು ಕಡಿಮೆ ಇದೆ ಎಂದು ತಿಳಿಸಿದ್ದ. ಅದಕ್ಕಾಗಿ ಇರಬಹುದು ಸಿ.ಸಿ.ಬಿ ನವರ ಜಾಣ್ಮೆ ಅವನಿಗೆ ಮೆಚ್ಚುಗೆಯಾಯಿತು. 
 
 ಸ್ವಲ್ಪ ಕಾಲದಲ್ಲೆ ಮೂವರು ಕೆಲಸಗಾರರು ಒಳಬಂದರು, 
 
ಒಬ್ಬೊಬ್ಬರು ಹಿನ್ನಲೆ , ಅವರು ಕೆಲಸಕ್ಕೆ ಸೇರಿದ ಪರಿಸ್ಥಿಥಿ, ಈಗ ಅವರು ಮತ್ತೆ ಎಲ್ಲಿಯಾದರು ಕೆಲಸ ಪ್ರಯತ್ನ ಪಡುತ್ತಿದ್ದಾರ,  ಅವರ ಅಲ್ಲಿನ ಕಾರ್ಯವ್ಯಾಪ್ತಿ ಏನು, ಹೀಗೆ ಹಲವಾರು ವಿಷಯ ಕೆದಕಿದರು. ಅವರು ತಮ್ಮ ವಿಷಯವನ್ನೆಲ್ಲ ವಿವರವಾಗಿ ತಿಳಿಸಿದರು. ಆದರೆ ಆ ಲಿಷ್ಟ್ ನಲ್ಲಿದ್ದ ಕಡೆಯ ಹೆಸರು ಕಿರಣ್ ವಯಸ್ಸು ೨೩ ವರ್ಷ , ಅವನು ಮಾತ್ರ ಇರಲಿಲ್ಲ. 
 
 ರಾಜಾರಾಮ್ ಪ್ರಶ್ನಿಸಿದರು, 
"ಇವರೆಲ್ಲ ಸರಿ , ಆದರೆ ಕಿರಣ್ ಎನ್ನುವ ಎಲ್ಲಿ ಒಳ ಬರಲಿಲ್ಲ ಅವನನ್ನು ಕರೆಯಿರಿ" 
ಅಲ್ಲಿಯ ಅಧಿಕಾರಿ ತಿಳಿಸಿದರು
"ಇಲ್ಲ ಸಾರ್ ಅವನು ಡ್ಯೂಟಿಗೆ ಬಂದಿಲ್ಲ, ರಜಾ ಎಂದು ತಿಳಿಸಿಲ್ಲ, ಬರಬಹುದು" ಎಂದರು. 
"ಅವನು ಈದಿನ ಬಂದಿಲ್ಲವೊ ಅಥವ ಹೇಗೆ " ಎಂದರು ರಾಜಾರಾಮ್ 
"ಸಾರ್ , ಹೇಳಬೇಕೊ ಇಲ್ಲವೊ ತಿಳಿಯುತ್ತಿಲ್ಲ, ಅವನು ಸುಮಾರು ಎಂಟು ದಿನದಿಂದ ಕೆಲಸಕ್ಕೆ ಬರುತ್ತಿಲ್ಲ, ಕಳೆದವಾರ ನಿಮ್ಮ ಸಬ್ ಇನ್ಸ್ ಪೆಕ್ಟರ್ , ಇವರು, " ಎನ್ನುತ್ತ ನಾಯಕ್ ನತ್ತ ಕೈ ತೋರಿಸಿ , ಮುಂದುವರೆದರು
"ಇವರು ಬಂದು ಹೋದರಲ್ಲ ಮರುದಿನದಿಂದ ಕಿರಣ್ ಡ್ಯೂಟಿಗೆ ಬರುತ್ತಿಲ್ಲ, ಯಾವ ಸುದ್ದಿಯು ಇಲ್ಲ" ಎಂದರು. 
"ಬರುತ್ತಿಲ್ಲ ಎಂದರೆ ಏನು, ನೀವು ಪೋನ್ ಮಾಡಿ ವಿಚಾರಿಸಲಿಲ್ಲವೆ " ಎಂದು ಪ್ರಶ್ನಿಸಿದರು ರಾಜಾರಾಮ್
"ಪ್ರಯತ್ನಿಸಿದೆವು ಸಾರ್, ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ, ಅವನು ಕಾಂಟಾಕ್ಟ್ ಗೆ ಸಿಗುತ್ತಿಲ್ಲ" ಎಂದರು ಅವರು, 
"ನಿಮ್ಮ ಸಹೋದ್ಯೋಗಿ ಅವನು ನಿಮಗೆ ತಿಳಿಯದೆ ಅವನ ಬಗ್ಗೆ " ಎನ್ನುತ್ತ ರಾಜಾರಾಮ್ ಉಳಿದ ಉದ್ಯೋಗಿಗಳನ್ನು ಪ್ರಶ್ನಿಸಿದರು. 
"ಸಾರ್, ನಾವು ಇಲ್ಲೆನೊ ಒಟ್ಟಿಗೆ ಇರುತ್ತೇವೆ , ನಿಜ ಆದರೆ ಆಫೀಸ್ ಕೆಲಸದ ನಂತರ ನಮ್ಮ ಸಂಬಂದಗಳೇನು ಇಲ್ಲ, ಆಫೀಸ್ ಸಮಯದ ನಂತರ ನಾವು ಬೆರೆಯುವುದು ಕಡಿಮೆ, ಹಾಗಾಗಿ ಕಿರಣ್ ಬಗ್ಗೆ ನಮಗೆ ಅಷ್ಟಾಗಿ ತಿಳಿಯದು, ಅಲ್ಲದೆ ನಾವು ಅವನ ಮೊಬೈಲ್ ಗೆ ಕಾಲ್ ಮಾಡುವೆವು ವಿನಃ ಅವನ ಮನೆಗೆ ಪೋನೊ ಇದೆಯೊ ಇಲ್ಲವೊ ನಮಗೆ ತಿಳಿಯದು" ಎಂದರು. 
 
ಸರಿ ಅಲ್ಲಿ ಏನು ಮಾಡುವುದು ಉಳಿದಿರಲಿಲ್ಲ, ಕಿರಣ್ ನ ವಿಳಾಸ ಹೇಗು ಇತ್ತು, ಸರಿ ನೋಡಿದರಾಯ್ತೆಂದು ಅಲ್ಲಿಂದ ಹೊರಬಂದು , ಮತ್ತೆ ಅಗತ್ಯವಿದ್ದರೆ ಸಂಪರ್ಕಿಸುವದಾಗಿ ತಿಳಿಸಿ ಹೊರಟರು, ಇವರು ಹೊರಡುವ ಸಮಯಕ್ಕೆ ಸರಿಯಾಗಿ ಡ್ರೈವರ್ ಸಿದ್ದವಾಗಿ ಜೀಪ್ ನಲ್ಲಿ ಕುಳಿತ್ತಿದ್ದ. ಎಲ್ಲರು ಮೌನವಾಗಿದ್ದರು. ಆಗ ದಯಾನಂದ ಅವರು, ಡ್ರೈವರನತ ನೋಡುತ್ತ
 
"ಎಸ್ , ಮಿ! ಚಕ್ರಪಾಣಿ ಹೇಳಿ, ಏನಾದರು ವಿಷೇಶ ತಿಳಿಯಿತಾ,  ಎನಿತಿಂಗ್ ಸ್ಪೆಷಲ್" ಎಂದರು.
 
ನಾಯಕ್ ಬೆಚ್ಚಿಬಿದ್ದ, ಅವನಿಗೆ ಒಮ್ಮೆಲೆ ಹೊಳೆಯಿತು, ತನ್ನ ನೆನಪಿಗೆ ತಲೆ ಚಚ್ಚಿಕೊಳ್ಳಬೇಕೆನಿಸಿತು,  ಡ್ರೈವರ್ ಸೀಟಿನಲ್ಲಿದ್ದವರು , ಸಿ.ಸಿ.ಬಿ. ಯಲ್ಲಿ ಕೆಲಸಮಾಡುತ್ತಿರುವ ಒಬ್ಬ ಅಡಿಶನಲ್ ACP , ಹೆಸರು ಚಕ್ರಪಾಣಿ ಹಿಂದೊಮ್ಮೆ ಅವರನ್ನು ನೋಡಿರುವೆ, ಆದರೆ ವೇಶ ಮರೆಸುವದರಲ್ಲಿ ಅವರು ಚತುರರು, ಅವನು ದಂಗಾಗಿ ಹೋದ, ತಾನು ಮೋಸಹೋದೆನಲ್ಲ ಎಂದು. ನಾಯಕನತ್ತ ಒಮ್ಮೆ ನೋಡಿದ ಚಕ್ರಪಾಣಿ ನಗುತ್ತ ನುಡಿದ
"ಹೌದು ಸಾರ್, ಕೆಲವು ಮುಖ್ಯ ವಿಷಯಗಳೆಲ್ಲ ತಿಳಿದವು, ಸೈಕಲ್ ಸ್ಟಾಂಡನಲ್ಲಿ ಹರಟೆ ಹೊಡೆಯುವರು,  ವಾಚ್ ಮನ್ ಇವರನ್ನೆಲ್ಲ ಮಾತನಾಡಿಸಿದೆ, ಸಾಕಷ್ಟು ವಿಶಯವಿದೆ, ಅಲ್ಲಿ ಯಾರ ಬಗ್ಗೆಯು ಸಂದೇಹ ಪಡುವಂತಿಲ್ಲ, ಆದರೆ ಒಬ್ಬ ಹುಡುಗನಿದ್ದಾನೆ, ಅವರ ಹೆಸರು ಕಿರಣ್ ಎಂದು, ಅವನು ಕೆಲಸಕ್ಕೆ ಸೇರಿ ನಾಲಕ್ಕು ವರ್ಷವಾಗಿದೆ, ಅವನ ತಂದೆ ಸೋಮನಾಥ ಸಹ ಇಲ್ಲೆ ಕೆಲಸ ಮಾಡುತ್ತಿದ್ದರು, ಆದರೆ ಅವರು ಕೆಲಸದಲ್ಲಿರುವಾಗಲೆ ಮರಣಹೊಂದಿದರು, ಅ ಅನುಕಂಪದ ಅಧಾರದಲ್ಲಿ ಇವನಿಗೆ ಕೆಲಸ ಸಿಕ್ಕಿದೆ, ಆದರೆ ಇವನ ನಡುವಳಿಕೆ ಅನುಮಾನಾಸ್ಪದ,  ಇವನ ವಯಸಿನ ಹಲವು ಗೆಳೆಯರಿದ್ದಾರೆ, ಅವರ ಜೊತೆ ಸೇರಿ, ಕುಡಿತ, ಜೂಜು, ಹುಡುಗಿಯರ ಶೋಕಿ ಇಂತವೆಲ್ಲ ಸಾಕಷ್ಟು ನಡೆಸಿದ್ದಾನೆ. ಮನೆಯಲ್ಲಿ ಇಬ್ಬರು ತಂಗಿಯರು, ಇವನ ತಾಯಿ,  ಇವನನ್ನು ಹುಡುಕುತ್ತಾ, ಇಲ್ಲಿಗೆ ಬಂದು ಕೆಲವು ಸಾರಿ ಕಣ್ಣೀರಿಟ್ಟಿದ್ದಾರೆ, ಅಂತಹ ಒಳ್ಳೆಯ ಸಹವಾಸವಲ್ಲ. ಮತ್ತು ಅವನ ಕೈಲಿ , ಅವನ ಸಂಬಳಕ್ಕೆ ಮೀರಿದ ಅಪಾರ ಹಣ ಓಡಾಡುತ್ತದೆ, ಅದಕ್ಕಾಗಿಯೆ ಗೆಳಯರು ಜಾಸ್ತಿ"
ಎನ್ನುತ್ತಾ ನಿಲ್ಲಿಸಿದರು, ಚಕ್ರಪಾಣಿ.  ಆಗ ದಯಾನಂದರವರು
"ಹೌದೆ,  ನೋಡಿ ಈದಿನ ಅವನು ಕೆಲಸಕ್ಕೆ ಬಂದಿಲ್ಲ, ಅಲ್ಲದೆ ಒಂದು ವಾರದಿಂದ ಬರುತ್ತಿಲ್ಲವಂತೆ" ಎಂದರು, ಅದಕ್ಕೆ ಚಕ್ರಪಾಣಿ
"ಗೊತ್ತು ಸಾರ್, ಇವರು, ನಾಯಕ್ ಬಂದು ಹೋದ ದಿನದಿಂದ ಅವನು ಹೆದರಿ ಎಲ್ಲಿಯೋ ಹೊರಟುಹೋಗಿದ್ದಾನೆ, ಮತ್ತೊಂದು ಆಸಕ್ತಿಧಾಯಕ ಸುದ್ದಿ ಇದೆ ಸಾರ್, ಇವನ ಗೆಳೆಯ ಆಟೋ ಡ್ರೈವರ್ ಅಯ್ಯಪ್ಪನಿಗಾಗಿ ಇವನು ಹೊಸದಾಗಿ ಒಂದು ಕಾರು ಪರ್ಚೇಸ್ ಮಾಡಿದ್ದಾನೆ, ಸೆಕೆಂಡ್ ಹ್ಯಾಂಡ್, ... (ಸ್ವಲ್ಪ ತಡೆದು ಹೇಳಿದರು ಚಕ್ರಪಾಣಿ) ...... ಕೆಂಪು ಆಲ್ಟೋ ಸಾರ್,  ತಮಿಳು ನಾಡಿನ ಗಾಡಿ, ಇದು ಸೊಸೈಟಿಗೆ ಎರಡು ಹೊತ್ತು ಕಾಫಿ ತರುವ ಹುಡುಗ ಕೊಟ್ಟ ಸುದ್ದಿ" 
ಎಲ್ಲರು ಬೆಚ್ಚಿ ಬಿದ್ದರು, ಹೆಚ್ಚು ಕಡಿಮೆ ಕೊಲೆಗಾರನತ್ತ ತಲುಪುವ ಗ್ಯಾರಂಟಿ ಎಲ್ಲರಿಗೆ ಆಯಿತು. 
"ಮತ್ತೆ ಆ ಕಿರಣ್ ಇರುವ ಮನೆಯತ್ತ ಹೋಗಿ ನೋಡಬಹುದಲ್ವ"    ದಯಾನಂದ ಸಾಹೇಬರು ನುಡಿದರು, 
ACP ಚಕ್ರಪಾಣಿ ನಗುತ್ತ ಹೇಳಿದರು
"ಈಗ ನಮ್ಮ ಜೀಪ್ ಹೋಗುತ್ತಿರುವುದು ಅಲ್ಲಿಗೆ ಸಾರ್, ಮಲ್ಲೇಶ್ವರದ ಕಿರಣ್ ಮನೆಯ ಕಡೆಗೆ" 
 
----------------------------------------------------------------------------------------------
 
 ಮುಂದಿನ ಭಾಗದಲ್ಲಿ : ಕೊಲೆಗಾರರ ಅಡಗು ತಾಣದತ್ತ ಪಯಣ, ಮಿರ್ಜಿಸಾಹೇಬರ ಪ್ರೆಸ್ ಮೀಟ್ 
 
ಕಡೆಯ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ : ಒಂದು ಕೊಲೆಯ ಸುತ್ತ [ಬಾಗ -4]
Rating
No votes yet

Comments