ಮಗು ಮರೆಯಿತು
ಮಗುವೊಂದು ಬದುಕಿರಲು ಏಕಾಂಗಿಯಾಗಿ
ಜಗದರಿವು ತನಗಾಗಿ ಏಕಾಂತ ಭಯವಾಗಿ
ತಾನಾರು ತನಗಾರು ಸಂಶಯಗಳ ಸೆರೆಯಾಗಿ
ತನ್ನ ತಾನೆ ಸೃಷ್ಟಿಸಿ ನಗತೊಡಗಿತು
ನಗು ನಗುತ ಮಗು ಮನದಿ
ಮಾಯೆಯೊಳಗೂಡಿ ಜಗವ ನಿರ್ಮಿಸಿ
ಮಗು ಮರೆಯಿತು
ಮೂಲವನೆ ತಾ ಮರೆತು ಸೃಷ್ಟಿಯೊಳು ತಾ ಬೆರೆತು
ಗಾಡ ನಿದ್ರೆಗೆ ಜಾರಿ ಜಗದೊಳು ಜಾಗೃತವಾಗಿ
ಕನಸಿನೊಳಗಣ ಕನಸಲ್ಲಿ ಜೀವನ ಬೆಳೆಸಿತು
ಖಗದಲ್ಲಿ ಮಿಗವಾಗಿ ಭುವಿಯೊಳು ಮೃಗವಾಗಿ
ಹಾವಾಗಿ ಹೊವಾಗಿ ಕ್ರಿಮಿ ಕೀಟವು ತಾನಾಗಿ
ಹರಿದಾಡಿ ಈಜಾಡಿ ಹಾರಾಡಿ
ಜಗವೆಲ್ಲ ಜಾಲಾಡಿ ಮಗು ಮರೆಯಿತು
ನೂರು ರೂಪಗಳ ತಾಳಿ
ಬಂಧ ಬಾಂಧವ್ಯಗಳ ಹೂಡಿ
ಕಾಮ ಪ್ರೇಮಗಳ ಬೀಜ ಬಿತ್ತಿ
ಚಿಗುರೊಡೆಯಿತು ಮರವಾಯಿತು
ಮಗು ಮರೆಯಿತು
ತನ್ನ ತಾನೇ ಸೇವಿಸಿ ಹಸಿವ ನೀಗಿಸಿ
ಕುಣಿದಾಡಿ ಕೆಲಗಳಿಗೆ
ದುಃಖಿಸಿ ಮರುಗಳಿಗೆ
ಜಗವೆಂಬ ನಾಟಕ ರಂಗದಲಿ
ಬಂದ ದಾರಿಯನೆ ತಾ ಮರೆತು
ಮಗು ಬೆರೆಯಿತು
ಮಗು ಮರೆಯಿತು
ಚಿತ್ರ ಕೃಪೆ internet
Rating
Comments
ಉ: ಮಗು ಮರೆಯಿತು:ಸಖತ್...!!
In reply to ಉ: ಮಗು ಮರೆಯಿತು:ಸಖತ್...!! by venkatb83
ಉ: ಮಗು ಮರೆಯಿತು:ಸಖತ್...!!