"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೫)

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೫)

    ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೪)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.

http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%E0%B2%A4-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AE-%E0%B3%AA/31/05/2012/36890
=================================================================================================
ಶಂಕರ

    ಶಂಕರರ ದರ್ಶನ ಅಥವಾ ಸಿದ್ಧಾಂತವು ಅವರು ಭಗವದ್ಗೀತೆ, ಹತ್ತು ಸನಾತನ ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳಿಗೆ ಬರೆದಿರುವ ಭಾಷ್ಯದ ಆಧಾರದ ಮೇಲೆ ಅದ್ವೈತ ವೇದಾಂತವೆಂದು ಪ್ರಸಿದ್ಧವಾಗಿದೆ. "ಬ್ರಹ್ಮ ಸತ್ಯಮ್ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ" (ಬ್ರಹ್ಮವೊಂದೇ ಸತ್ಯ, ಈ ಜಗತ್ತು ಮಿಥ್ಯೆ ಅಥವಾ ಮಾಯೆಯಿಂದ ಹೊಮ್ಮಿದ್ದಾಗಿದೆ ಮತ್ತು ಜೀವನು ಬ್ರಹ್ಮವೇ ಆಗಿದ್ದು ಅವೆರಡಕ್ಕೂ ಭೇದವಿಲ್ಲ)  ಎನ್ನುವ ಪ್ರಸಿದ್ಧವಾದ ಶ್ಲೋಕವು ಅವರ ಸಿದ್ಧಾಂತವನ್ನು ತಿರುಳಾಗಿ ಒಂದೇ ಮಾತಿನಲ್ಲಿ ಹೇಳುತ್ತದೆ.

    ಶಂಕರರು ಬ್ರಹ್ಮನನ್ನು ಎರಡು ವಿಭಿನ್ನ ಮುಖಗಳಲ್ಲಿ ವರ್ಗೀಕರಿಸುತ್ತಾರೆ; ಪರಬ್ರಹ್ಮ ಮತ್ತು ಅಪರಬ್ರಹ್ಮ ಎಂಬುದಾಗಿ. ಅವಿದ್ಯೆ ಅಥವಾ ಅಜ್ಞಾನದಿಂದ ಉಂಟಾದ ಬ್ರಹ್ಮನನ್ನು ಮಿತಗೊಳಿಸುವ ಎಲ್ಲಾ ವಿಧವಾದ ನಾಮ ಮತ್ತು ರೂಪಗಳನ್ನು ಎಲ್ಲೆಲ್ಲಿ ಉಪನಿಷತ್ತಿನ ವಾಕ್ಯಗಳು ಅಲ್ಲಗಳೆಯುತ್ತವೆಯೋ,  ಅಲ್ಲೆಲ್ಲಾ  ಅವು ಪರಬ್ರಹ್ಮನನ್ನು ಕುರಿತಾಗಿ ಹೇಳುತ್ತವೆ. ಅದರಂತೆ ಎಲ್ಲೆಲ್ಲಿ ಈ ಉಪನಿಷತ್ ವಾಕ್ಯಗಳು ಅವನನ್ನು ಕುರಿತಾಗಿ ನಾಮ, ರೂಪ ಮೊದಲಾದ ಗುಣಗಳಿಂದ ಕೂಡಿದ್ದಾನೆಂದು ಹೇಳಿವೆಯೋ ಅವೆಲ್ಲಾ ಅಪರಬ್ರಹ್ಮನ ಕುರಿತಾಗಿ ಹೇಳಲ್ಪಟ್ಟಿರುವವು. ಈ ಅಪರಬ್ರಹ್ಮನೇ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಕನಾಗಿದ್ದಾನೆ.

    ನಿಜವಾಗಿ ಹೇಳಬೇಕೆಂದರೆ, ಬ್ರಹ್ಮನು ಈ ವಿಶ್ವವಾಗಿ ಆವಿರ್ಭಾವಗೊಳ್ಳುವುದಿಲ್ಲ. ಅವನ ಹಲವು ನಾಮ ರೂಪಗಳು ನಮಗೆ ಅವಿದ್ಯೆ ಅಥವಾ ಅಜ್ಞಾನದಿಂದಾಗಿ ತೋರುತ್ತವೆ; ಆದರೆ ವಾಸ್ತವದಲ್ಲಿ ಅದು 'ವಿವರ್ತ'; ಅಂದರೆ ತಪ್ಪು ಗ್ರಹಿಕೆ. ಯಾವ ರೀತಿ ಅಸ್ಪಷ್ಟ ಬೆಳಕಿನಲ್ಲಿ 'ಹಗ್ಗದಲ್ಲಿ ಹಾವ'ನ್ನು ಗ್ರಹಿಸುತ್ತೇವೆಯೋ ಆ ತೆರದಲ್ಲಿ ಬ್ರಹ್ಮವನ್ನು ವಿಶ್ವವಾಗಿ ಭಾವಿಸುತ್ತೇವೆ. ಇದನ್ನು ಶಂಕರರು 'ಅಧ್ಯಾಸ' ಅಥವಾ 'ಅದ್ಯಾರೋಪ' (ಒಂದರ ಮೇಲೆ ಮತ್ತೊಂದನ್ನು ಹೇರುವುದು; ಅಂದರೆ ಒಂದರ ಬದಲಾಗಿ ಮತ್ತೊಂದನ್ನು ತಪ್ಪಾಗಿ ಗ್ರಹಿಸುವುದು) ಎನ್ನುತ್ತಾರೆ.  'ವಿದ್ಯೆ' ಅಥವಾ ವಿವೇಚನೆಯ ಜ್ಞಾನದಿಂದ, 'ಅಪವಾದ' ಅಥವಾ ಹೇರಿರುವುದು ಲಯವಾಗಿ (ತಪ್ಪು ಗ್ರಹಿಕೆಯು ನಾಶವಾಗಿ), ಅಂತಿಮ ಸತ್ಯದ ಬಗ್ಗೆ ನಿಜವಾದ ಜ್ಞಾನವುಂಟಾಗುತ್ತದೆ.

    ಶಂಕರರು ಜೀವಿಗಳನ್ನು ಚೇತನರು ಅಥವಾ ಶುದ್ಧ ಜ್ಞಾನದಿಂದ ಕೂಡಿದವರು; ಆದರೆ ಅವು ಅಂತಃಕರಣ (ಮನಸ್ಸು ಅಥವಾ ಒಳಗಿನ ಕರಣ/ಉಪಕರಣ)ದಿಂದ ಆವರಿಸಲ್ಪಟ್ಟಿವೆ ಎಂದು ಭಾವಿಸುತ್ತಾರೆ.  ಜೀವಿಯು 'ನಿತ್ಯ'(ಸರ್ವಕಾಲದಲ್ಲಿಯೂ ಇರುವಂತಹವ)ನಾಗಿದ್ದರೂ, 'ಶುದ್ಧ'(ಕಶ್ಮಲ ರಹಿತ)ನಾಗಿದ್ದರೂ, 'ಬುದ್ಧ'(ಜ್ಞಾನ ಅಥವಾ ಚೈತನ್ಯವಂತ)ನಾಗಿದ್ದರೂ ಮತ್ತು 'ಮುಕ್ತ'(ಬದ್ಧ ಅಥವಾ ಬಂಧನಕ್ಕೆ ಒಳಗಾಗದವನು)ನಾಗಿದ್ದರೂ ಕೂಡ ಅಂತಃಕರಣವು ವಿಧಿಸುವ ಮಿತಿಯಿಂದಾಗಿ 'ಭೋಕ್ತ'(ಅನುಭವಿಸುವವನು) ಮತ್ತು 'ಕರ್ತ'(ಕ್ರಿಯೆಯನ್ನು ಮಾಡುವವನು)ನಾಗಿ ಕಾಣಿಸುತ್ತಾನೆ.

    "ತತ್-ತ್ವಮ್-ಅಸಿ" ಮೊದಲಾದ ಉಪನಿಷತ್ತಿನ ವಾಕ್ಯಗಳು, ಜೀವನು ಅಂತಃಕರಣದ ಪ್ರಭಾವದಿಂದ ಹೆಚ್ಚುವರಿಯಾಗಿ ಪಡೆದುಕೊಂಡ ಗುಣಗಳನ್ನು ನಾಶವಾಗಿಸಿ,  ಜೀವ ಮತ್ತು ಬ್ರಹ್ಮರ ನಿಶ್ಚಿತವಾದ ಅಭಿನ್ನತೆಯಾದ ಶುದ್ಧ ಚೈತನ್ಯ ಸ್ವರೂಪವನ್ನು ತೋರಿಸಿ ಕೊಡುತ್ತವೆ.

    ಶಂಕರರು ಉಪನಿಷತ್ತುಗಳಲ್ಲಿ ಮತ್ತು ಬ್ರಹ್ಮಸೂತ್ರಗಳಲ್ಲಿ ಪ್ರತಿಪಾದಿಸಿರುವ 'ಕ್ರಮಮುಕ್ತಿ' ಅಥವಾ ಹಂತ ಹಂತವಾಗಿ ಜೀವಿಯು ಮರಣಾನಂತರ ದೇವಯಾನದ ಮೂಲಕ ಬ್ರಹ್ಮಲೋಕಕ್ಕೆ ಸಾಗಿ ಹೋಗಿ ಮುಕ್ತಿಯನ್ನು ಗಳಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಜ್ಞಾನದ ಅರಿವುಂಟಾಗುತ್ತಿದ್ದಂತೆ ಏಕಕಾಲಕ್ಕೆ ದೊರೆಯುವ 'ಸಧ್ಯೋಮುಕ್ತಿ' ಅಥವಾ ಈಗ ಮತ್ತು ಇಲ್ಲಿಯೇ ದೊರೆಯುವ ತಕ್ಷಣದ ಮುಕ್ತಿಯ ಬಗ್ಗೆ ಒತ್ತಿ ಹೇಳುತ್ತಾರೆ. ಆ ರೀತಿಯ ಮುಕ್ತಿಯನ್ನು 'ಜೀವನ್ಮುಕ್ತಿ' ಅಂದರೆ ಜೀವಿಸಿರುವಾಗಲೇ ದೊರೆತ ಮುಕ್ತಿ ಎನ್ನುತ್ತಾರೆ.

ರಾಮಾನುಜ

    ಬ್ರಹ್ಮಸೂತ್ರಗಳಿಗೆ ರಾಮಾನುಜರು ರಚಿಸಿದ ವ್ಯಾಖ್ಯಾನ ಗ್ರಂಥವು ’ಶ್ರೀಭಾಷ್ಯ’ವೆಂದು ಕರೆಯಲ್ಪಟ್ಟಿದೆ. ಇದಲ್ಲದೆ ರಾಮಾನುಜರು ಬ್ರಹ್ಮಸೂತ್ರಗಳಿಗೆ ’ವೇದಾಂತದೀಪ’ ಮತ್ತು ”ವೇದಾಂತಸಾರ’ ಎಂಬ ಎರಡು ಕಿರು ಹೊತ್ತುಗೆಗಳನ್ನೂ ರಚಿಸಿದ್ದಾರೆ. ವೇದಾಂತದೀಪವು ನಂತರದ ಕೃತಿಯಾಗಿದ್ದು ಅದರಲ್ಲಿ ಸ್ವಲ್ಪ ಹೆಚ್ಚಿನ ವಿವರಣೆಗಳು ದೊರೆಯುತ್ತವೆ.

    ರಾಮಾನುಜರ ಶ್ರೀಭಾಷ್ಯವು ವಿಸ್ತೃತವಾದ ’ಬೋಧಾಯನಾವೃತ್ತಿ’ಯನ್ನು ಅನುಕ್ರಮವಾಗಿ ಅನುಸರಿಸಿದೆಯಲ್ಲದೆ; ಪ್ರಸ್ತುತ ಲಭ್ಯವಿಲ್ಲದ ಕೆಲವು ಹಿಂದಿನ ವೇದಾಂತಿಗಳಾದ ಬ್ರಹ್ಮನಂದಿ ಮತ್ತು ದ್ರಮಿಡಾಚಾರ್ಯ ಇವರ ಕೃತಿಗಳನ್ನೂ ಅನುಸರಿಸಿದೆಯೆಂದು ಭಾವಿಸಲಾಗಿದೆ.

    ರಾಮಾನುಜರು ಬ್ರಹ್ಮವು ಅತ್ಯುನ್ನತವಾದ ಮತ್ತು ಸ್ವತಂತ್ರವಾದ ಸತ್ಯವೆಂದು ಒಪ್ಪುತ್ತಾರೆ. ಆದರೆ ಬ್ರಹ್ಮವು ತನ್ನೊಳಗೆ 'ಚಿತ್'(ಚೇತನರೂಪರಾದ ಜೀವಿಗಳು) ಮತ್ತು 'ಅಚಿತ್'(ಅಚೇತನವಾದ ಅಥವಾ ಜಡ ಪ್ರಕೃತಿ) ಇವುಗಳನ್ನು ಒಳಗೊಂಡಿದೆ. ಇವೆರಡೂ ಕೂಡ ಸತ್ಯವಾದುವೇ ಆದರೆ ಅವು ಬ್ರಹ್ಮನ ಸಂಪೂರ್ಣ ನಿಯಂತ್ರಣದಲ್ಲಿರುತ್ತವೆ. ಬ್ರಹ್ಮವು ಅಥವಾ ರಾಮಾನುಜರಿಂದ ಕರೆಯಲ್ಪಟ್ಟಂತೆ 'ಈಶ್ವರ'ನು ಈ ಎಲ್ಲಾ ವಸ್ತುಗಳನ್ನು ಒಳಗೊಂಡು ಅವೆಲ್ಲುವುಗಳಲ್ಲಿಯೂ ಅಂತರ್ಗತನಾಗಿದ್ದರೂ ಕೂಡ ಅವುಗಳಿಗೆ ಅತೀತನಾಗಿದ್ದಾನೆ. ಆದ್ದರಿಂದ ರಾಮಾನುಜರ ಮತವನ್ನು 'ವಿಶಿಷ್ಟಾದ್ವೈತ' - ಬ್ರಹ್ಮವು ಅದ್ವೈತ ಅಥವಾ ದ್ವೈತವಲ್ಲದ್ದು (ಎರಡಲ್ಲದ್ದು) ಆದರೆ ವಿಶಿಷ್ಟವಾದ (ಪ್ರತ್ಯೇಕತೆಯಿಂದ ಕೂಡಿದ) ಚಿತ್ ಮತ್ತು ಅಚಿತ್ ಇವುಗಳಿಂದ ಕೂಡಿದ್ದು ಎಂದು ಕರೆಯಲಾಗಿದೆ. ಅದನ್ನು ಕೊಂಬೆಗಳು, ಎಲೆಗಳು ಮತ್ತು ಹಣ್ಣುಗಳಿಂದ ಕೂಡಿದ ಮರಕ್ಕೆ ಹೋಲಿಸಬಹುದು. ಮರವು ’ಒಂದೇ’ ಆದರೂ ಕೂಡ ಅದರಲ್ಲಿರುವ ಒಳಭಾಗಗಳು ಒಂದಕ್ಕಿಂತ ಒಂದು ಪ್ರತ್ಯೇಕವಾದವು; ಆದರೂ ಇವೆಲ್ಲವುಗಳನ್ನು ಹೊಂದಿದ ಮರವು ಒಂದೇ ಆಗಿರುವುದು.

    ರಾಮಾನುಜರಿಗೆ ಬ್ರಹ್ಮವು 'ಅಂತಿಮ ಪುರುಷ' ಅಥವಾ 'ಸರ್ವೇಶ್ವರ'ನು ಅಂದರೆ ಎಲ್ಲವನ್ನೂ ನಿಯಂತ್ರಿಸುವವನು. ಅವನು ಎಲ್ಲಾ ರೀತಿಯ ಕೇಡುಗಳಿಗೆ ವ್ಯತಿರೇಕವಾಗಿರುವವನು. ಅವನು ಅಸಂಖ್ಯ (ಎಣೆಯಿಲ್ಲದ) ಸುಗುಣಗಳ ಗಣಿ. ಅವನು ಸರ್ವಾಂತರಯಾಮಿ ಮತ್ತು ಸರ್ವಶಕ್ತನು. ಈ ಸೃಷ್ಟಿಯ ಉಗಮ, ನಿರ್ವಹಣೆ ಮತ್ತು ಪುನರ್ಲೀನವಾಗುವಿಕೆ ಎಲ್ಲವೂ ಅವನಿಂದಲೇ ಪ್ರಾರಂಭವಾಗುತ್ತವೆ.

    ರಾಮಾನುಜರು, ಜೀವಿ ಅಥವಾ ಆತ್ಮವು ದೇಹದಿಂದ ಪ್ರತ್ಯೇಕ ಅಸ್ತಿತ್ವವನ್ನು ಹೊಂದಿರುವ ಚೇತನಾರೂಪಿ ಎಂದು ಭಾವಿಸುತ್ತಾರೆ. ಆತ್ಮನು ಅಣುವಿನ ಪ್ರಮಾಣದಲ್ಲಿದ್ದು, ಆಕುಚನ ಮತ್ತು ಸಂಕುಚನ ಹೊಂದುವ ಜ್ಞಾನವನ್ನು ಒಳಗೊಂಡಿದ್ದಾನೆ ಮತ್ತು ಈ ಆತ್ಮನು ಮುಕ್ತವಾದ ಇಚ್ಛೆಯುಳ್ಳವನಾಗಿದ್ದಾನೆ.  ಹಾಗೂ  ಈ ಆತ್ಮಗಳ ಸಂಖ್ಯೆಯು ಅನಂತವಾಗಿರುವುದು. ಕೆಲವು ಜೀವಿಗಳು 'ನಿತ್ಯ'ವೆಂದು ಕರೆಯಲ್ಪಟ್ಟು ಯಾವಾಗಲೂ ಮುಕ್ತವಾಗಿರುತ್ತವೆ. ಈಗ ಬದ್ಧವಾಗಿರುವ ಹಲವು ಜೀವಿಗಳು ಭಕ್ತಿ ಮತ್ತು ಪ್ರಪತ್ತಿ (ಶರಣಾಗತಿ) ಹಾಗೂ ಭಗವಂತನ ಕೃಪೆಯಿಂದ ಮುಕ್ತಿಯನ್ನು ಹೊಂದಬಹುದು. ಮುಕ್ತವಾದ ಎಲ್ಲಾ ಜೀವಿಗಳು ಒಂದೇ ರೀತಿಯಾಗಿರುತ್ತವೆ.
   
    ವಿಧಿಸಿರುವ ಕರ್ಮಗಳನ್ನು ಶ್ರದ್ಧೆಯಿಂದ ಆಚರಿಸಿದಾಗ ಆಧ್ಯಾತ್ಮ ಜೀವನವು ಪ್ರಾರಂಭಗೊಂಡು ಅದು ಮನಸ್ಸನ್ನು ಶುದ್ಧಗೊಳಿಸುವುದರೆಡೆಗೆ ಸಾಗುತ್ತದೆ. ಹೀಗೆ ಪರಿಶುದ್ಧನಾದ ಜೀವಿಯು ಜ್ಞಾನವನ್ನು ಅಭ್ಯಸಿಸಲು ಮತ್ತು ತಾನು ದೇಹ-ಮನಸ್ಸುಗಳ ಸಂಕೀರ್ಣದಿಂದ ಅತೀತನಾದವನೆಂದು ಮನಗಾಣಲು ಯೋಗ್ಯತೆಯನ್ನು ಸಂಪಾದಿಸುತ್ತಾನೆ. ಆದರೆ ಅವನು 'ಭಕ್ತಿ' ಮತ್ತು 'ಪ್ರಪತ್ತಿ'ಯಿಂದ ಮಾತ್ರವೇ  'ದೇವಯಾನ'ದ ಮೂಲಕ ಅಂತಿಮವಾಗಿ ಬ್ರಹ್ಮವನ್ನು ಹೊಂದಿ ಮುಕ್ತನಾಗುತ್ತಾನೆ.

ಮಧ್ವ

    ಸಂಪೂರ್ಣ ದ್ವೈತ ನಿಷ್ಟರಾದ ಮಧ್ವರು ೩೭ ಕೃತಿಗಳನ್ನು ರಚಿಸಿದ್ದಾರೆ ಅವುಗಳನ್ನು ಒಟ್ಟಾರೆಯಾಗಿ ’ಸರ್ವಮೂಲ’ವೆನ್ನುತ್ತಾರೆ. ಬ್ರಹ್ಮಸೂತ್ರಗಳಿಗೆ ಬರೆದ ಸಂಕ್ಷಿಪ್ತ ಮತ್ತು ಬಿಗುವಿನಿಂದ ಕೂಡಿದ ’ಭಾಷ್ಯ’ ಮತ್ತು ಅದಕ್ಕೆ ಶ್ಲೋಕ ರೂಪದಲ್ಲಿ ಬರೆದ ಕಿರು ವ್ಯಾಖ್ಯಾನವಾದ ’ಅನುಭಾಷ್ಯ’, ’ನ್ಯಾಯವಿವರಣ’ ಮತ್ತು ’ಅನುವ್ಯಾಖ್ಯಾನ’ ಇವು ನಾಲ್ಕು ’ಸೂತ್ರಪ್ರಸ್ಥಾನ’ಕ್ಕೆ ಮಧ್ವರು ಬರೆದ ಕೃತಿಗಳಾಗಿವೆ. ಅವರದು ವಾಸ್ತವತೆಯಿಂದ ಕೂಡಿದ ಸಿದ್ಧಾಂತವಾಗಿದೆ. ವಿಷ್ಣು ಅಥವಾ ನಾರಾಯಣನೆಂದು ಕರೆಯಲ್ಪಡುವ ಒಂದೇ ದೈವದ (ಏಕದೇವನ) ಅಸ್ತಿತ್ವದಲ್ಲಿ ನಂಬಿಕೆಯನ್ನು ಮತ್ತು ಅವನ ಮೇಲೇ ಭಕ್ತಿಯನ್ನು ಕೇಂದ್ರೀಕರಿಸುವುದನ್ನು ಮಧ್ವರು ತಮ್ಮ ಸಿದ್ಧಾಂತದಲ್ಲಿ ಪ್ರತಿಪಾದಿಸಿದ್ದಾರೆ.
 
    ಮಧ್ವರು ಬ್ರಹ್ಮವನ್ನು ವಿಷ್ಣು ಅಥವಾ ನಾರಾಯಣನೊಂದಿಗೆ ಏಕೀಭವಿಸುತ್ತಾರೆ ಮತ್ತು ಅವನಿಗೆ ಸ್ವತಂತ್ರ ಅಭಿವ್ಯಕ್ತಿಯಿದೆ ಎಂದು ಪ್ರತಿಪಾದಿಸುತ್ತಾರೆ. ಪ್ರಕೃತಿ ಅಥವಾ ವಸ್ತು ಮತ್ತು ಜೀವ ಅಥವಾ ಆತ್ಮರು ಅಣುವಿನ ಗಾತ್ರದಲ್ಲಿದ್ದು ಅಸಂಖ್ಯಾತವಾಗಿವೆ. ಅವೆರಡೂ ವಾಸ್ತವ ಸತ್ಯಗಳಾಗಿದ್ದರೂ ಕೂಡ ಅವು ಸಂಪೂರ್ಣವಾಗಿ ವಿಷ್ಣುವಿನ (ಬ್ರಹ್ಮದ) ಆಧೀನದಲ್ಲಿವೆ. ಬ್ರಹ್ಮವು ಖಂಡಿತವಾಗಿಯೂ ಸತ್-ಚಿತ್-ಆನಂದನು (ಚೇತನ ಮತ್ತು ಸಂತೋಷದಿಂದ ಕೂಡಿದವನು). ಅವನ ಅನಂತ ವ್ಯಕ್ತಿತ್ವವು ನಮ್ಮ ಕಲ್ಪನೆಗೆ ಅತೀತವಾಗಿದ್ದರೂ ಕೂಡ, ಮಾನವರ ಮೇಲಿನ ಅನುಕಂಪದಿಂದಾಗಿ ಅವನು ವಸ್ತು ಅಥವಾ ಯಾವುದೇ ಮಿತಿಗೊಳಪಡದ ಅನೇಕ ರೂಪಗಳನ್ನು ತಾಳುವ ಶಕ್ತಿಯನ್ನು ಹೊಂದಿದ್ದಾನೆ.

    ಮಧ್ವರು ಪಂಚಭೇದಗಳ ಅಥವಾ ಐದು ನಿತ್ಯ ವ್ಯತ್ಯಾಸಗಳುಳ್ಳ ಸಿದ್ಧಾಂತವನ್ನು ನಮ್ಮ ಮುಂದಿಡುತ್ತಾರೆ. ಅವೆಂದರೆ, ಬ್ರಹ್ಮನಿಗೂ ಜೀವನಿಗೂ ಇರುವ ವ್ಯಾತ್ಯಾಸ, ಬ್ರಹ್ಮನಿಗೂ ಪ್ರಕೃತಿಗೂ ಇರುವ ವ್ಯತ್ಯಾಸ, ಜೀವರು ಮತ್ತು ಪ್ರಕೃತಿಗೂ ಇರುವ ವ್ಯತ್ಯಾಸ, ಜೀವ ಮತ್ತು ಜೀವರುಗಳ ನಡುವೆ ಇರುವ ವ್ಯತ್ಯಾಸ ಮತ್ತು ವಿವಿಧ ವಸ್ತುಗಳು ಮತ್ತು ಪ್ರಕೃತಿಯ ನಡುವೆ ಇರುವ ವ್ಯತ್ಯಾಸ.

    ಅವರು ಜೀವಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸುತ್ತಾರೆ; ಮುಕ್ತಿಯೋಗ್ಯರು, ನಿತ್ಯಸಂಸಾರಿಗರು, ಮತ್ತು ತಮೋಯೋಗ್ಯರು. ಮೊದಲನೇ ಗುಂಪು ಮುಕ್ತಿ ಅಥವಾ ಬಿಡುಗಡೆಯನ್ನು ಹೊಂದುವ ಯೋಗ್ಯತೆ ಉಳ್ಳವರು. ಎರಡನೇ ಗುಂಪು ಕೇವಲ ಐಹಿಕ ಸುಖಭೋಗಗಳಿಗೆ ದಾಸರಾಗಿದ್ದು ಅವರಿಗೆ ನೈತಿಕವಾದ ಉದ್ಧಾರ ಅಥವಾ ಆಧ್ಯಾತ್ಮಿಕ ಉನ್ನತಿಯನ್ನು ಹೊಂದಬೇಕೆನ್ನುವ ಪರಿಜ್ಞಾನವಿರುವುದಿಲ್ಲ, ಇವರು ನಿರಂತರವಾಗಿ ಜನನ ಮರಣಗಳ ಚಕ್ರದ ಸುಳಿಯಲ್ಲಿ ಸಿಲುಕಿರುತ್ತಾರೆ. ಜೀವಿಗಳ ಮೂರನೆಯ ಗುಂಪು ಕಡು ಪಾಪಿಗಳದಾಗಿದ್ದು ಅವರು ಅವನತಿ ಹೊಂದಿ ಕೆಳವರ್ಗದ ಪ್ರಾಣಿಗಳಲ್ಲಿ ಜನ್ಮ ತಾಳಿ ನರಕದಲ್ಲಿ ಕಷ್ಟವನ್ನನುಭವಿಸುತ್ತಾರೆ.

    ಜೀವನಿಗೆ ಭಕ್ತಿಯ ಮೂಲಕ ಮತ್ತು ದೈವಾನುಗ್ರಹದಿಂದ ಮುಕ್ತಿಯು ಲಭ್ಯವಾಗುತ್ತದೆ. ಅವರು ಮುಕ್ತಾವಸ್ಥೆಯಲ್ಲಿ ದುಃಖದಿಂದ ಸಂಪೂರ್ಣ ಬಿಡುಗಡೆ ಹೊಂದುವುದಲ್ಲದೆ ನಿತ್ಯಾನಂದವನ್ನೂ ಹೊಂದುತ್ತಾರೆ. ಮುಕ್ತಿ ದೊರೆತ ನಂತರವೂ ಜೀವಿಗಳಲ್ಲಿ ವ್ಯತ್ಯಾಸವು ಇದ್ದೇ ಇರುತ್ತದೆ.
=================================================================================================
ವಿ.ಸೂ.:ಇದು ಸ್ವಾಮಿ ಹರ್ಷಾನಂದ ವಿರಚಿತ "The six systems of Hindu Philosophy - A Primer"ಯಲ್ಲಿಯ Vedanta Darshanaನದ ೯೪.೬ ರಿಂದ ೧೦೦.೫ನೆಯ ಪುಟದ ಅನುವಾದದ ಭಾಗ.

==============================================================================================
 

Rating
No votes yet