ನಮ್ಮ ಊರು ಮತ್ತು ಒಂದಷ್ಟು ನೆನಪುಗಳು

ನಮ್ಮ ಊರು ಮತ್ತು ಒಂದಷ್ಟು ನೆನಪುಗಳು

 ನಮ್ಮ ಊರು ಮತ್ತು ಒಂದಷ್ಟು ನೆನಪುಗಳು  !....

ಸಂಪೂರ್ಣ ಸಾಕ್ಷರತೆಯ ನಾಡಾದ ಕೇರಳದ, ಕಾಸರಗೋಡು ಜಿಲ್ಲೆಯ ಬದಿಯಡ್ಕ ಎಂಬ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರು ಒಳದಾರಿಯಲ್ಲಿ ಹೋದರೆ ಸಿಗುವುದೇ ನಮ್ಮ ಹೆಮ್ಮೆಯ(ಯಾವುದರ ಬಗ್ಗೆ ಹೆಮ್ಮೆ ಪಡಬೇಕೆಂದು ನನಗೆ ಗೊತ್ತಿಲ್ಲ, ಆದರೂ ಪ್ರತಿಯೊಬ್ಬರಿಗೂ ತಮ್ಮ ಊರಿನ ಬಗ್ಗೆ ಒಂದು ಹೆಮ್ಮೆ ಅಥವಾ ಹುಚ್ಚು ಪ್ರೀತಿ ಅನ್ನಬಹುದೇನೋ!)ಊರು.  ನಮ್ಮ ಊರಿನ ಹೆಸರು ಪೆರಡಾಲ, ತೀರಾ  ಕುಗ್ರಾಮವಲ್ಲದಿದ್ದರೂ ಹಳ್ಳಿ ಎನ್ನಬಹುದು.  ಪಟ್ಟಣದಿಂದ(ಬದಿಯಡ್ಕ) ಕೊಂಚ ದೂರವಿರುವ ಹಸಿರು ಮರಗಿಡಗಳಿಂದ ಕಂಗೊಳಿಸುತ್ತಿದ್ದು, ಹರಿಯುತ್ತಿರುವ ವರದಾ ನದಿಯಿಂದಲಾಗಿ ವರದಾಲ ಎಂಬುದು ಕ್ರಮೇಣ ಪೆರಡಾಲವಾಯಿತು ಎನ್ನುತ್ತಾರೆ ಹಿರಿಯರು.  ತುಂಬಾ ದೊಡ್ಡ ಹೊಳೆ(ಊರ ಭಾಷೆಯಲ್ಲಿ ಹೇಳುವುದಾದರೆ ತೋಡು!) ಅಲ್ಲದಿದ್ದರೂ, ಸುಮಾರು ಫೆಬ್ರವರಿ ತಿಂಗಳವರೆಗೆ ಹರಿಯುತ್ತಿರುತ್ತದೆ. ವರ್ಷಗಳ ಹಿಂದೆ ನಾವೆಲ್ಲಾ ಈಜು ಕಲಿತದ್ದು, ಶಾಲೆಯ ರಜಾದಿನಗಳ ಮಧ್ಯಾಹ್ನಗಳಲ್ಲಿ ಹೊಳೆಯಲ್ಲಿ ಹಾರುತ್ತ ಬೀಳುತ್ತಾ ಆಟವಾಡಿದ್ದು ನಿನ್ನೆ ಮೊನ್ನೆ ಕಳೆದಂತಿದೆ!  ದೇವಸ್ಥಾನದ ಪಕ್ಕದಲ್ಲಿ ಕ್ರಿಕೆಟ್ ಆಡುತ್ತಿದ್ದ ಮೈದಾನ,  ದೇವಸ್ಠಾನದ ಜಾತ್ರೆ, ಖರೀದಿಸಿದ ಆಟಿಕೆಗಳು ನಂತರ ಗೆಳೆಯರೊಂದಿಗೆ ಅದರ ಚರ್ಚೆ, ದೀಪಾವಳಿ ದಿನ ಬಂತೆಂದರೆ ಪಟಾಕಿಗಳ ಬಗ್ಗೆ ಮತ್ತೆ ಕ್ಲಾಸಿನಲ್ಲಿ ಚರ್ಚೆ, ಮನೆಯಲ್ಲಿ ಅಕ್ಕನ ಲಂಗ ಹಾಕಿದ್ದಾಗ ಮೇಷ್ಟ್ರು ಬಂದದ್ದು, ಸಾಹಸ ಪ್ರದರ್ಶಿಸಲು ಸಂಕದಿಂದ(ಬ್ರಿಡ್ಜ್!) ಕೆಳಗೆ ಹಾರಿದ್ದು, ಮೊದಲ ಬಾರಿಗೆ ವಿಡಿಯೊಗೇಂನಲ್ಲಿ ಕಾರ್ ರೇಸಿಂಗ್ ಗೇಮ್ ನೋಡಿ ಅದ್ಭುತ ಪಟ್ಟಿದ್ದು, ಶಾಲೆಯ ಚೀಲದಲ್ಲಿ ಟೂತ್ ಬ್ರಶ್ ಹಾಕಿಕೊಂಡು ಹೋಗಿ ಗೆಳೆಯರ ಮುಂದೆ ಅವಮಾನಕ್ಕೀಡಾಗಿದ್ದು, ಗಣಿತದ ಪೀರಿಯಡಿನಲ್ಲಿ ಕನ್ನಡ ಕೋಪಿ ಬರೆದು ಪೆಟ್ಟು ತಿಂದದ್ದು ಎಲ್ಲವೂ ಇನ್ನು ಅಸ್ಪಷ್ಟ ನೆನಪುಗಳು ಮಾತ್ರ.  
 
ನಮ್ಮ ಊರಿಗೆ ರಸ್ತೆ ಇದ್ದರೂ ಬಸ್ಸಿನ ಸೌಲಭ್ಯ ಇಲ್ಲ, ಸುಮಾರು ಹದಿನೇಳು ವರ್ಷಗಳ ಮೊದಲು ಸರಿಯಾದ ರಸ್ತೆಯೂ ಇರಲಿಲ್ಲ ಅಂತ ನನ್ನ ನೆನಪು.  ಆಗ ನಾನು ಬಹುಶಃ ನಾಲ್ಕು ಅಥವಾ ಐದನೆಯ ತರಗತಿಯಲ್ಲಿದ್ದೆ. ಆಗೆಲ್ಲಾ ಬಹುತೇಕ ಎಲ್ಲರೂ ನಡೆದೇ ಹೋಗುತ್ತಿದ್ದರು.  ರಸ್ತೆಯಾದ ಹೊಸತರಲ್ಲಿ ಆಗೊಮ್ಮೆ ಈಗೊಮ್ಮೆ ಕೆಲವರು ಆಟೊರಿಕ್ಷಾದಲ್ಲಿ ಬಂದಿಳಿಯುತ್ತಿದ್ದರು.  ಅದರಲ್ಲಿ ಹೆಚ್ಚಿನ(ಎಲ್ಲರೂ ಅನ್ನಬಹುದೇನೋ!) ಜನರೂ ಬರುತ್ತಿದ್ದುದು ಊರಿನ ಪ್ರಸಿದ್ಧ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ.  ಈಗ ಬಹುಶಃ ಯಾರದರೂ ನಡೆದು ಹೋಗುತ್ತಿರುವುದು ನಮ್ಮ ಕಣ್ಣಿಗೆ ಬಿದ್ದರೆ ಪುಣ್ಯ!   ಇದರ ಮಧ್ಯೆ, ಇಂದಿಗೆ ಮೂರ್ನಾಲ್ಕು ವರ್ಷಗಳಾಗಿರಬಹುದು ಒಂದು ಬಸ್ ಸೇವೆ ಪ್ರಾರಂಭವಾಗಿತ್ತು.  ಬಸ್ಸಿನ ಹೆಸರು ಕುಟ್ಟಿಚ್ಚಾತನ್!(ದೇವಸ್ಥಾನದಲ್ಲಿನ ಮೂರು ಪ್ರಧಾನ ದೇವರುಗಳಲ್ಲಿ ಒಂದರ ಹೆಸರು ಕುಟ್ಟಿಚ್ಚಾತನ್).  ಯಾವ ಗಳಿಗೆಯಲ್ಲಿ ಬಸ್ ಪ್ರಾರಂಭ ಮಾಡಿದನೋ ಹೆಚ್ಚೆಂದರೆ ಒಂದು ವರ್ಷ ಓಡಿರಬಹುದು.  ಜನರಿಗೆ ಬಸ್ಸು ಸಾಕಯಿತೋ, ಬಸ್ಸಿನ ಯಜಮಾನನಿಗೆ ಊರು ಸಾಕಯಿತೋ ಗೊತ್ತಿಲ್ಲ!  ಅಂತೂ ಇದ್ದ ಒಂದು ಬಸ್ಸೂ ಕೂಡ ಇಲ್ಲದಾಯಿತು.  ಈಗ ಮತ್ತೆ ಆಟೋರಿಕ್ಷಾವೇ ಗತಿ!  ಪ್ರಾರಂಭದಲ್ಲಿ ಹನ್ನೆರಡು ರೂಪಾಯಿ ಇದ್ದ ಬಾಡಿಗೆ, ಈಗ ಮೂವತ್ತೈದಕ್ಕೆ ಬಂದು ನಿಂತಿದೆ.  ಮೊನ್ನೆ ಮೊನ್ನೆ ಪೆಟ್ರೋಲ್ ಬೆಲೆ ಏರಿದ ಕಾರಣ ಇನ್ನೂ ಏರುವ ಸಾಧ್ಯತೆಯೇ ಹೆಚ್ಚು.  
 
ಊರಿನಿಂದ ಸುಮಾರು ಒಂದೂವರೆ ಕಿ.ಮೀ.ನಷ್ಟು ನಡೆದರೆ ಶಾಲೆ.  ಒಂದನೆಯ ತರಗತಿಯಿಂದ ಐದರವರೆಗೆ ಗವರ್ನಮೆಂಟ್ ಶಾಲೆಯಲ್ಲಿ ನಂತರ ಹತ್ತನೆಯ ತರಗತಿಯವರೆಗೆ ನವಜೀವನ ಹೈಸ್ಕೂಲಿನಲ್ಲಿ.  ಗವರ್ನಮೆಂಟ್ ಶಾಲೆಯಲ್ಲಿ ಆಗ ಏಳನೆಯ ತರಗತಿಯವರೆಗೆ ಇತ್ತಾದರೂ(ಈಗ ಹತ್ತನೆಯ ತರಗತಿಯವರೆಗೆ ಇದೆ) ಐದನೆಯ ತರಗತಿಯ ನಂತರ ಹೆಚ್ಚಿನ ಮಕ್ಕಳೂ ಎನ್.ಎಚ್.ಎಸ್. ಗೆ ಸೇರಿಸಲ್ಪಡುತ್ತಿದ್ದರು.  ಗವರ್ನಮೆಂಟ್ ಶಾಲೆಯಲ್ಲಿ ಸರಿಯಾಗಿ ಕಲಿಸುತ್ತಿರಲಿಲ್ಲವೆಂದು ಹೆಚ್ಚಿನವರ ಅಭಿಪ್ರಾಯ.  ಗವರ್ನಮೆಂಟ್ ಶಾಲೆಯನ್ನು ನಾವೆಲ್ಲಾ ಅಂಬಿ ಶಾಲೆ ಎಂದು ಕರೆಯುತ್ತಿದ್ದೆವು, ಶಾಲೆಗೆ ಕಂಪೌಂಡ್ ಇರಲಿಲ್ಲವಾದ್ದರಿಂದ, ಮಳೆಗಾಲದಲ್ಲಿ ಶಾಲೆಯ ವರಾಂಡ ತುಂಬಾ ದೊಡ್ಡ ದೊಡ್ಡ ಗಾತ್ರದ ಸೆಗಣಿ!  
 
ನಮ್ಮ ಊರಿನ ಇನ್ನೊಂದು ವಿಶೇಷವೆಂದರೆ(?) ಕುಡುಕರು!  ಹೌದು ಸ್ವಾಮಿ, ಇಲ್ಲಿರುವಷ್ಟು ಕುಡುಕರು ಆಸುಪಾಸಿನಲ್ಲಿ ನನಗೆ ತಿಳಿದಿರುವ ಹಾಗೆ ಎಲ್ಲೂ ಇಲ್ಲ.  ಪ್ರತಿ ಒಂದೂವರೆ ಮನೆಗೆ ಒಬ್ಬ ಕುಡುಕನಾದರು ಸಿಗದಿದ್ದರೆ ಕೇಳಿ.  ಎಣ್ಣೆಯ ಪ್ರಭಾವದಲ್ಲಿ ಒಬ್ಬೊಬ್ಬನದು ಒಂದೊಂದು ಅವತಾರ!  ಕೆಲವು ಮಹಾನುಭಾವರ ಪ್ರತಿಭೆ ಹೊರಬರುವುದೇ ಸಂಜೆ ಐದು ಗಂಟೆಯ ನಂತರ.  ಮೂನಾಲ್ಕು ಇಂತಹ ತೀರ್ಥಂಕರರು ಸೇರಿದರೆಂದರೆ ಅದೊಂದು ಮಿನಿ ಸಮ್ಮೇಳನ.  ಸಂಜೆ ಕೆಲಸ ಮುಗಿದ ನಂತರ ತೀರ್ಥ ಹೊಡೆಯದಿದ್ದರೆ ಜೀವನವೇ ವ್ಯರ್ಥ ಎಂಬುದೇ ಇವರ ಆದರ್ಶ.  ಇನ್ನು ಕೆಲವರು ಇಪ್ಪತ್ತನಾಲ್ಕು ಗಂಟೆಯೂ ಅದರಲ್ಲೇ ಮುಳುಗಿರುತ್ತಾರಾಗಿರುವುದರಿಂದ "ಅದಿಲ್ಲದೆ" ಎಂಬ ಪ್ರಶ್ನೆಯೇ ಉದ್ಭವಿಸದು.  ಇಷ್ಟೆಲ್ಲಾ ಆದರೂ ಇವರಿಂದ ಯಾರಿಗೂ ಉಪಟಳವೇನಿಲ್ಲ.
 
ಸದ್ಯಕ್ಕೆ ಇಷ್ಟೇ.... 
ಶಿವ