ಅಪ್ಪ ಎನ್ನುವ ಅದ್ಭುತ
ನನಗೆ ನನ್ನ ಅಪ್ಪ ಇಂದಿಗೂ ಒಂದು ಅರಿಲಾರದ ಅದ್ಭುತವಾಗಿಯೇ ಉಳಿದಿದ್ದಾರೆ. ಕೇವಲ ನಾಲ್ಕನೇ ತರಗತಿ ಓದಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ ವಾಚರಾಗಿ ನಂತರ ಗಾರ್ಡ್ ಆಗಿ ನಿವೃತ್ತರಾಗಿರುವ ನನ್ನ ಅಪ್ಪ ಎಂದೆಂದಿಗೂ ನನಗೆ ಆದರ್ಶವೇ. ಕಾಡುಮೇಡುಗಳಲ್ಲಿ ನನ್ನನ್ನು ಹೊತ್ತುಕೊಂಡು ಬೆಳೆಸಿದ ನನ್ನಪ್ಪನ ಹೃದಯ ನಿತ್ಯಹರಿದ್ವರ್ಣದ ಕಾಡುಗಳಂತೆ ಹಸಿರಾದದ್ದು, ಅಷ್ಟೇ ವಿಶಾಲವಾದದ್ದು. ಅರಣ್ಯ ಇಲಾಖೆಯ ವಿವಿಧ ನರ್ಸರಿಗಳಲ್ಲಿ ಲಕ್ಷಾಂತರ ಸಸಿ ಮಡಿ ಮಾಡಿ ಅವುಗಳನ್ನೆಲ್ಲಾ ಕಾಡಿನಲ್ಲಿ ನೆಟ್ಟು ಬೆಳಸಿ ಹಿರಿಯ ಅಧಿಕಾರಿಗಳಿಂದ ಶಹಭಾಸ್ಗಿರಿ ಪಡೆಯುತ್ತಿದ್ದ ನನ್ನ ಅಪ್ಪನ ವೃತ್ತಿನಿಷ್ಠೆ, ಪ್ರಾಮಾಣಿಕತೆ ನನ್ನ ನೆನಪಿನಲ್ಲಿ ಇಂದಿಗೂ ಹಸಿರಾಗಿಯೇ ಉಳಿದಿವೆ. ಕೆಲವೊಮ್ಮೆ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬಿದ್ದಾಗ ಹಗಲುರಾತ್ರಿಯೆನ್ನದೆ ತನ್ನ ಖಾಕಿ ಯೂನಿಫಾರ್ಮ್ ಧರಿಸಿ ಓಡೋಡಿ ಹೋಗಿ ಸೊಪ್ಪುಸದೆಗಳಿಂದ ಬೆಂಕಿಯನ್ನು ಆರಿಸಿ ಮೈಕೈಯನ್ನೆಲ್ಲಾ ಕಪ್ಪಗೆ ಮಾಡಿಕೊಂಡು ಬಂದು ದುಃಖದ ಮುಖವನ್ನೊತ್ತು ‘ಯಾವೋನೋ ಬೇವರ್ಸಿ ನನ್ಮಕ್ಳು ಕಾಡಿಗೆ ಬೆಂಕಿ ಹಾಕ್ಬುಟ್ಟವ್ರೆ’ ಇಂದು ಹಲುಬುತ್ತಿದ್ದುದು ಕಂಡು ಆಗಿನ ನನ್ನ ಮುಗ್ಧ ಮನಸಿನಲ್ಲಿ ಕಾಡಿಗೆ ಬೆಂಕಿ ಬಿದ್ರೆ ನಮ್ಮಪ್ಪ ಯಾಕೆ ಇಷ್ಟೊಂದು ಬೇಜಾರು ಮಾಡ್ಕೋತಾರೆ ಅನಿಸುತ್ತಿತ್ತು. ಯಾರೇ ಅಧಿಕಾರಿಗಳು ಬಂದರೂ ಅವರೆದುರಿಗೆ ದೀನನಾಗಿ ನಿಂತು ಏನೇ ಹೇಳಿದರೂ ‘ಆಯ್ತು ಸಾ, ಮಾಡ್ತೀನಿ ಸಾ’ ಎಂದು ಹೇಳುತ್ತಿದ್ದ ನನ್ನ ಅಪ್ಪನ ವಿಧೇಯತೆ ಕೆಲವೊಮ್ಮೆ ನನ್ನಪ್ಪ ಯಾಕೀಗೆ ಹೆದರಿಕೊಳ್ಳುತ್ತಾರೆ ಎಂಬ ಯೋಚನೆಯನ್ನು ನನ್ನಲ್ಲಿ ಹುಟ್ಟುಹಾಕುತ್ತಿತ್ತು.
ಬೆಳಿಗ್ಗೆ ಮುದ್ದೆ ಸಾರು ಊಟ ಮಾಡಿ ಯೂನಿಫಾರ್ಮ್ ತೊಟ್ಟು ಹೋದರೆ ಕಾಡಿನಲ್ಲಿ ಗಸ್ತು ತಿರುಗಿ ನನ್ನ ಅಪ್ಪ ಬರುತ್ತಿದ್ದುದೇ ಸೂರ್ಯ ಮುಳುಗಿದ ನಂತರ. ಹೊತ್ತುಹೊತ್ತಿಗೆ ಸರಿಯಾಗಿ ಊಟ ಮಾಡದ ಅಪ್ಪನನ್ನು ಕಂಡು ಸಂಕಟವಾಗಿ ಅಮ್ಮ ‘ಯಾಕಿಂಗೆ ಕಾಡು, ಕಾಡು ಅಂತ ಸಾಯ್ತೀಯ’ ಅಂತ ರೇಗಿದರೆ ‘ಅದೇ ಅಲ್ವೇನೆ ನಮ್ಗೆ ಅನ್ನ ಕೊಡ್ತಾ ಇರೋದು’ ಎಂದು ಹೇಳುತ್ತಿದ್ದ ನನ್ನ ಅಪ್ಪನ ಮಾತುಗಳಲ್ಲಿ ಬದುಕಿನ ಸತ್ಯ ಅಡಗಿತ್ತೆಂದು ಇಂದು ನನಗೆ ಅರಿವಾಗಿದೆ. ಆಳುಗಳನ್ನೆಲ್ಲಾ ಕರೆದುಕೊಂಡು ಹೋಗಿ ಕಾಡಿನಲ್ಲಿ ಗುಂಡಿ ತೋಡಿಸಿ ಮಳೆ ಬಿದ್ದ ಸಮಯದಲ್ಲಿ ಸಸಿ ನೆಡುಸುತ್ತಿದ್ದ ನನ್ನ ಅಪ್ಪ ಸುತ್ತಮುತ್ತಲ ಜನರಿಗೆಲ್ಲಾ ಚೆನ್ನಾಗಿ ಪರಿಚಿತರಾಗಿರುತ್ತಿದ್ದರು. ನಮ್ಮ ಮನೆಯಲ್ಲಿ ಏನೂ ಇಲ್ಲದಿದ್ದರೂ ಹಾರೆ, ಗುದ್ದಲಿ, ಪಿಕಾಸಿಗಳಂತೂ ಯಾವಾಗಲೂ ಮೂಲೆಯಲ್ಲಿ ಬಿದ್ದಿರುತಿದ್ದವು.
ನಾನು ಐದನೇ ತರಗತಿಯಲ್ಲಿದ್ದಾಗಲೇ ನನಗೆ ಸೈಕಲ್ ಕಲಿಯುವ ಹುಚ್ಚು. ಅಪ್ಪನ ಬಳಿ ನಾಲ್ಕಾಣೆ ಇಸ್ಕೊಂಡು ರಸ್ತೆ ಬಳಿಯಲ್ಲಿದ್ದ ಸೈಕಲ್ ಶಾಪಿನಲ್ಲಿ ಒಂದು ಗಂಟೆ ಬಾಡಿಗೆಗೆ ಸೈಕಲ್ ಪಡೆದು ಸ್ನೇಹಿತರೊಂದಿಗೆ ಸೇರಿ ಹೇಗೋ ಮಾಡಿ ಸೈಕಲ್ ಕಲಿತೆ. ಆಮೇಲೆ ಸೈಕಲ್ ಹೊಡೆಯುವ ಹುಚ್ಚು ಇನ್ನೂ ಹೆಚ್ಚಾಯಿತು. ಒಂದು ದಿನ ನಮ್ಮ ಪಕ್ಕದ ಮನೆಯಲ್ಲಿದ್ದ ಅಮೀರ್ ಜಾನ್ ಸಾಹೇಬರನ್ನು ಒಂದ್ ರೌಂಡ್ ಸೈಕಲ್ ಕೊಡಿ ಅಂತ ಕೇಳಿ ಸೈಕಲ್ ಇಸ್ಕೊಂಡು ಪೂರ್ತಿ ಕಾಲು ಎಟಕದಿದ್ದರೂ ಸೀಟು ಮೇಲೆ ಕುಳಿತುಕೊಂಡು ಇಳಿಜಾರು ರಸ್ತೆಯಲ್ಲಿ ಸ್ಪೀಡಾಗಿ ಹೋಗಿ ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದು ಸೈಕಲಿನ ಮುಂದಿನ ಚಕ್ರವನ್ನು ಸೊಟ್ಟಗೆ ಮಾಡಿ ತಂದು ಗೋಡೆಗೊರಗಿ ನಿಲ್ಲಿಸಿದ್ದೆ. ಹುಣುಸೆಹಣ್ಣು, ಮಾವಿನಹಣ್ಣು ವ್ಯಾಪಾರಕ್ಕಾಗಿ ಸೈಕಲಿನಲ್ಲಿ ಊರೂರು ಸುತ್ತುತ್ತಿದ್ದ ಸಾಹೇಬರಿಗೆ ಇದರಿಂದಾಗಿ ತುಂಬಾ ತೊಂದರೆಯಾಯಿತು. ವಿಷಯ ತಿಳಿದ ನಮ್ಮ ಅಪ್ಪನಿಗೆ ತೀವ್ರ ಬೇಸರವಾಗಿ ಸಾಹೇಬರ ಬಳಿ ‘ಬೇಜಾರ್ ಮಾಡ್ಕೋಬ್ಯಾಡ್ರಿ ಸಾಹೇಬರೇ’ ಎಂದು ಕ್ಷಮೆ ಕೇಳಿ ಅವರು ಬೇಡವೆಂದರೂ ಕೇಳದೆ ಸೈಕಲ್ ರಿಪೇರಿ ಮಾಡಿಸಿಕೊಂಡು ತಂದಿಟ್ಟರು. ಮೂರ್ನಾಲ್ಕು ದಿನಗಳಲ್ಲಿ ಹೇಗೋ ಮಾಡಿ ನನಗಾಗಿ ಹಳೆಯ ಸೈಕಲೊಂದನ್ನು ಖರೀದಿಸಿ ಮನೆಗೆ ತಂದದ್ದನ್ನು ಕಂಡು ನನಗೆ ಆದ ಸಂತೋಷ ಹೇಳತೀರದು.
ಪ್ರಾಮಾಣಿಕ ಜೀವನದ ವೊದಲ ಪಾಠ ನನ್ನ ಅಪ್ಪ ನನಗೆ ಕಲಿಸಿದಾಗ ನಾನು ಹೈಸ್ಕೂಲಿನ ವೊದಲ ವರ್ಷದಲ್ಲಿದ್ದೆ. ನಾನು ಬೇಸಿಗೆಯ ರಜೆಯಲ್ಲಿ ಪ್ರತಿದಿನ ನನ್ನ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜು ಹೊಡೆದು ಅಲ್ಲೇ ಪಕ್ಕದಲ್ಲಿದ್ದ ಕಬ್ಬಿನ ಗದ್ದೆಯಿಂದ ಕದ್ದು ಕಬ್ಬು ಮುರಿದುಕೊಂಡು ತಿಂದು ಮನೆಗೆ ಬರುತ್ತಿದ್ದೆ. ಹೇಗೋ ಇದನ್ನು ತಿಳಿದ ನನ್ನ ಅಪ್ಪ ಒಂದು ದಿನ ಸಾಯಂಕಾಲ ತೀವ್ರ ಸಿಟ್ಟು ಮಾಡಿಕೊಂಡು ನನ್ನನ್ನು ತರಾಟೆಗೆ ತೆಗೆದುಕೊಂಡರು. ‘ಅಂಗೆಲ್ಲಾ ಮಾಡ್ಬಾರ್ದು ಕಣೋ ಮಗಾ, ಬೇಕಾದ್ರೆ ಕೇಳಿ ಒಂದು ಕಬ್ಬು ಮುರ್ಕೊಂಡು ತಿನ್ನು, ಕೇಳಿದ್ರೆ ಕೊಡ್ದಲೆ ಇರ್ತಾರಾ’ ಎಂದು ಕಣ್ಣುಗಳಲ್ಲಿ ನೀರು ತುಂಬಿಕೊಂಡಾಗ ನಾನು ಮುಂದೆ ಯಾವತ್ತೂ ಅಂತಹ ಕೆಲಸ ಮಾಡಲಿಲ್ಲ.
ನನ್ನ ಅಪ್ಪನಿಗೆ ಮೂರ್ನಾಲ್ಕು ವರ್ಷಗಳಿಗೊಮ್ಮೆ ಬೇರೆ ಬೇರೆ ಊರುಗಳಿಗೆ ವರ್ಗವಾಗುತಿತ್ತು. ನಾವಿರುತ್ತಿದ್ದ ಬಾಡಿಗೆ ಮನೆಗಳಲ್ಲಿ ವಿದ್ಯುತ್ ದೀಪ ಇರುತ್ತಿರಲಿಲ್ಲ. ಸೀಮೆಎಣ್ಣೆಯ ದೀಪದಲ್ಲಿಯೇ ಓದಿಕೊಳ್ಳುತ್ತಿದ್ದೆವು. ನಾನು ಹತ್ತನೇ ತರಗತಿಗೆ ಬಂದಾಗ ನಮ್ಮ ಬಾಡಿಗೆ ಮನೆಯ ಮಾಲೀಕರ ಹತ್ತಿರ ಪ್ರತಿದಿನ ಹೋಗಿ ‘ಒಂದು ಲೈಟ್ ಹಾಕಿಸ್ಕೊಡಿ ಕಳಸಪ್ನೋರೆ.. ಬೇಕಾದ್ರೆ ಬಾಡಿಗೆ ಜಾಸ್ತಿ ಕೊಡ್ತೀನಿ.. ನಮ್ಮುಡ್ಗ ಎಸ್ಸೆಲ್ಸಿಗೆ ಬಂದವ್ನೆ’ ಅಂತ ಅಂಗಲಾಚಿ ಮನೆಗೆ ವಿದ್ಯುತ್ ದೀಪ ಹಾಕಿಸಿದ ನನ್ನ ಅಪ್ಪ ನನಗೆ ಬೆಳಕು ನೀಡಿದ್ದರು. ನಾನು ಹತ್ತನೇ ತರಗತಿಯಲ್ಲಿ ನನ್ನ ಶಾಲೆಗೇ ಹೆಚ್ಚು ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸಾದಾಗ ‘ನನ್ ಮಗ ಸ್ಕೂಲಿಗೇ ಫಸ್ಟ್ ಬಂದವ್ನೆ’ ಎಂದು ಎಲ್ಲರ ಬಳಿಯಲ್ಲಿ ಹೇಳಿಕೊಳ್ಳುತ್ತಿದ್ದ ಅಪ್ಪನ ಖುಷಿ ಕಂಡು ನನ್ನ ಅಪ್ಪನಿಗೆ ಸಂತೋಷವಾಗಲು ನಾನು ಏನು ಮಾಡಬೇಕೆಂದು ತಿಳಿದು ಮುಂದೆಯೂ ಚೆನ್ನಾಗಿ ಓದಿದೆ.
ನಾನು ಮೈಸೂರಿನಲ್ಲಿ ಎಂಜನೀರಿಂಗ್ ಪದವಿಯ ವೊದಲ ವರ್ಷಕ್ಕೆ ಸೇರುವಾಗ ಫೀಸು ಕಟ್ಟಲು ಮತ್ತು ಇತರ ಖರ್ಚಿಗೆ ಬೇಕಾಗಿದ್ದ ಹಣ ಹೊಂದಿಸಲು ಪರದಾಡುತ್ತಿದ್ದ ನನ್ನ ಅಪ್ಪ ಬಡ್ಡಿ ಹನುಮಯ್ಯನವರ ಬಳಿ ಗೋಗರೆದು ಒಂದೂವರೆ ಸಾವಿರ ರೂಪಾಯಿಗಳನ್ನು ಬಡ್ಡಿಗೆ ಪಡೆದು ನನಗೆ ಕೊಟ್ಟಿದ್ದರು. ಅದನ್ನು ನೆನಪಿಸಿಕೊಂಡಾಗಲೆಲ್ಲಾ ನನ್ನ ಅಪ್ಪ ಅಂದು ಸಾಲ ಮಾಡಿ ತಂದುಕೊಟ್ಟದ್ದು ಬರೀ ದುಡ್ಡಲ್ಲ ಎಂದು ಇಂದಿಗೂ ನನ್ನ ಕಣ್ಣುಗಳಲ್ಲಿ ನೀರಿಳಿಯುತ್ತದೆ.
ನನ್ನ ಮದುವೆಯ ಸಂಧರ್ಭದಲ್ಲಿ ನಡೆದ ಘಟನೆಯೊಂದು ನನ್ನ ನೆನಪಿನಾಳದಲ್ಲಿ ಕುಳಿತು ಮನಸ್ಸಿನಲ್ಲಿ ಯಾವಾಗಲೂ ಕೊರೆಯುತ್ತಿರುತ್ತದೆ. ನನ್ನ ಮದುವೆ ದಿನ ನಾನು ಮಹೂರ್ತಕ್ಕೆಂದು ತೆಳುವಾದ ಬಿಳಿ ಪಂಚೆ ಮತ್ತು ಅದರೊಳಗೆ ಹಾಕಿಕೊಳ್ಳಲು ಬಿಳಿಯ ನಿಕ್ಕರೊಂದನ್ನು ಹೊಲಿಸಿಕೊಂಡಿದ್ದೆ. ಇನ್ನೇನು ಮಹೂರ್ತಕ್ಕೆಂದು ಶರ್ಟ್ ತೊಟ್ಟು ಪಂಚೆ ಉಟ್ಟುಕೊಳ್ಳೋಣವೆಂದು ಹುಡುಕಾಡಿದರೆ ಸೂಟ್ಕೇಸಿನಲ್ಲಿ ಬಿಳಿಯ ಚಡ್ಡಿಯೇ ಕಾಣಿಸುತ್ತಿಲ್ಲ! ಜೊತೆಯಲ್ಲಿದ್ದ ನನ್ನ ಸ್ನೇಹಿತರೆಲ್ಲಾ ಅಲ್ಲಿ ಇಲ್ಲಿ ಹುಡುಕಾಡಿದರೂ ಎಲ್ಲಿಯೂ ಸಿಕ್ಕಲಿಲ್ಲ. ಧಾರೆಗೆ ಸಮಯ ಮೀರುತ್ತದೆಂದು ನಾನಿದ್ದ ರೂಮಿಗೆ ಹುಡುಕಿಕೊಂಡು ಬಂದ ನನ್ನ ಅಪ್ಪ ವಿಷಯ ತಿಳಿದು ತಾವು ಧರಿಸಿದ್ದ ಹೊಸ ಪಟಾಪಟಿ ಚಡ್ಡಿಯನ್ನೇ ಬಿಚ್ಚಿಕೊಟ್ಟು ಬರೀ ಪ್ಯಾಂಟು ಹಾಕಿಕೊಂಡಿದ್ದರು. ಅದು ನೆನಪಾದಾಗಲೆಲ್ಲಾ ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಆದರ್ಶ ಪುರುಷನಾಗಿ ನನ್ನ ಅಪ್ಪ ನನಗೆ ಕಾಣಿಸುತ್ತಾರೆ.
ಅರಣ್ಯ ಇಲಾಖೆಯಲ್ಲಿ ಸಣ್ಣ ನೌಕರನಾಗಿ ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಏನನ್ನೂ ಆಸೆಪಡದ, ಇದ್ದದರಲ್ಲಿಯೇ ಸುಖ ಕಾಣುತ್ತಿದ್ದ ನನ್ನ ಅಮ್ಮನ ಜೊತೆಗೂಡಿ ನಾವು ಮೂವರೂ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡಿ ಬದುಕಲು ಕಲಿಸಿದ ನನ್ನ ಅಪ್ಪ ನಿವೃತ್ತರಾಗಿ ಹತ್ತು ವರ್ಷ ಕಳೆದು ನಮ್ಮ ಹಳ್ಳಿಯಲ್ಲಿ ಹೊಲ-ಮನೆ ನೋಡಿಕೊಂಡು ನನ್ನ ಅಮ್ಮನ ಜೊತೆಯಲ್ಲಿ ಇಳಿವಯಸ್ಸಿನ ಗೊಂದಲಗಳನ್ನು ಹಂಚಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ನನ್ನ ಅಪ್ಪನ ಬಗ್ಗೆ ಎಷ್ಟು ಹೇಳಿದರೂ ಸಾಲದು. ಉರಿಯುತ್ತಲೇ ಬೆಳಕು ನೀಡುವ ಸೂರ್ಯನ ಪ್ರಕಾಶಮಾನತೆಯನ್ನು ಶಬ್ದಗಳಲ್ಲಿ ವರ್ಣಿಸಲಾದೀತೇ?
ಅಪ್ಪಂದಿರ ದಿನವಾದ ಇಂದು ನನ್ನ ಅಪ್ಪ ಅರೋಗ್ಯವಂತರಾಗಿ ನೆಮ್ಮದಿಯಿಂದ ನೂರು ವರುಷ ಬಾಳಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
Comments
ಉ: ಅಪ್ಪ ಎನ್ನುವ ಅದ್ಭುತ
In reply to ಉ: ಅಪ್ಪ ಎನ್ನುವ ಅದ್ಭುತ by Prakash Narasimhaiya
ಉ: ಅಪ್ಪ ಎನ್ನುವ ಅದ್ಭುತ
ಉ: ಅಪ್ಪ ಎನ್ನುವ ಅದ್ಭುತ
In reply to ಉ: ಅಪ್ಪ ಎನ್ನುವ ಅದ್ಭುತ by ಶ್ರೀನಿವಾಸ ವೀ. ಬ೦ಗೋಡಿ
ಉ: ಅಪ್ಪ ಎನ್ನುವ ಅದ್ಭುತ
ಉ: ಅಪ್ಪ ಎನ್ನುವ ಅದ್ಭುತ
In reply to ಉ: ಅಪ್ಪ ಎನ್ನುವ ಅದ್ಭುತ by kamala belagur
ಉ: ಅಪ್ಪ ಎನ್ನುವ ಅದ್ಭುತ