ಕಾಂತಾವರ ಕನ್ನಡ ಸಂಘ ಏನು ಮಾಡುತ್ತಿದೆ?
“ಕಾಂತಾವರಕ್ಕೆ ಬೆಳಗ್ಗೆ ಬಂದಾಗಿನಿಂದ ಎಷ್ಟೊಂದು ಹೊಟ್ಟೆಕಿಚ್ಚು ಆಯಿತೆಂದರೆ ….. ಇಲ್ಲಿನ ಕನ್ನಡ ಸಂಘ ಮತ್ತು ಡಾ. ನಾ. ಮೊಗಸಾಲೆಯವರ ಕೆಲಸ ನೋಡಿ, ಇವೆರಡನ್ನೂ ಬೆಂಗಳೂರಿಗೆ ಹೈಜಾಕ್ ಮಾಡುವ ಹಾಗಿದ್ದರೆ ಚೆನ್ನಾಗಿತ್ತು ಅನಿಸಿತು.
ಬೆಂಗಳೂರು ಪೂರ್ತಿ ನಾಶ ಆಗಿದೆ – ಇನ್ನು ನಾಶವಾಗಲು ಅಲ್ಲಿ ಏನೂ ಉಳಿದಿಲ್ಲ ಎಂಬಷ್ಟು. ಆದರೆ ದಕ್ಷಿಣ ಕನ್ನಡ ಜಿಲ್ಲೆ ಈಗಲೂ ಒಂದಷ್ಟು ಹಸಿರನ್ನು, ಸಂಸ್ಕೃತಿಯನ್ನು ಉಳಿಸಿಕೊಂಡಿದೆ ….. ಅಲ್ಲಿ (ಬೆಂಗಳೂರಿನಲ್ಲಿ) ಬದುಕಲಿಕ್ಕಾಗದು ಅಂತಾದಾಗ, ಇಲ್ಲಿಗೆ ಓಡಿ ಬಂದರೆ ನೀವು ನಮಗೆ ಆಶ್ರಯ ಕೊಡಬಹುದು.
ಬೆಂಗಳೂರಿನಲ್ಲಿ ಜನರ ಸಾಂಸ್ಕೃತಿಕ ಬದುಕಿಗೆ ಏನಾಗುತ್ತಿದೆ ಅನ್ನೋದು ಅರ್ಥವಾಗಬೇಕಾದರೆ ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಗೋರರ ಕೊನೆಯ ಉಪನ್ಯಾಸ “ಕಲ್ಚರಲ್ ಕ್ರೈಸಿಸ್” ಓದಬೇಕು.
ಅಲ್ಲಿ ನಾವೆಲ್ಲ ಗಡಿಬಿಡಿಯಲ್ಲಿ ಗದ್ದಲದಲ್ಲಿ ಸತ್ತು ಹೋಗುತ್ತಾ ಇದ್ದೇವೆ. ಏಕಾಂತವನ್ನು ಕಳೆದುಕೊಳ್ಳುತ್ತಾ ಇದ್ದೇವೆ. ನನ್ನ ಯೌವನದಲ್ಲೊಮ್ಮೆ ಬೆಂಗಳೂರಿನಲ್ಲಿ ಗೋಪಾಲಕೃಷ್ಣ ಅಡಿಗರು ಕತ್ತಲೆಯ ಬಗ್ಗೆ ಒಂದೂವರೆ ಗಂಟೆ ಮಾತಾಡಿದ್ದನ್ನು ಕೇಳಿದ್ದೆ. ನಾವು ಕತ್ತಲೆಯನ್ನು, ಏಕಾಂತವನ್ನು ಪ್ರೀತಿಸಬೇಕು. ಆಗ ಮಾತ್ರ ಬದುಕನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.
ಡಾ. ನಾ. ಮೊಗಸಾಲೆ ಇವತ್ತು ಗಾಂಧಿಯನ್ ಆಗಿದ್ದಾರೆ. ಮುಂದಾಳುತನ ವಹಿಸಿಕೊಂಡು, ಎಲ್ಲರನ್ನೂ ಸೇರಿಸಿಕೊಂಡು ಈ ಸಣ್ಣ ಹಳ್ಳಿಯಲ್ಲಿ ದೊಡ್ಡ ಕೆಲಸ ಮಾಡುತ್ತಿದ್ದಾರೆ.
ಬದುಕಿನಲ್ಲಿ ಸಂತೋಷ ಸಿಗಬೇಕಾದರೆ ಏನು ಮಾಡಬೇಕು? ಬೆಳಗ್ಗೆ ಎದ್ದು ನಮ್ಮ ಕನ್ನಡಿಯ ಧೂಳನ್ನು ಒರಸಬೇಕು. ಅಂತಹ ಕೆಲಸ ಮಾಡುತ್ತಾ ಬೆಳೆಯಬೇಕು. ಕಾಂತಾವರದಲ್ಲಿ ಆಗುತ್ತಿರುವ ಕನ್ನಡದ ಕೆಲಸಕ್ಕೆ ನಮ್ಮ ಕೊಡುಗೆ ಸಲ್ಲಿಸೋಣ.”
ಇದು , ೧೧ ಜೂನ್ ೨೦೧೨ರಂದು ಕಾರ್ಕಳ ಹತ್ತಿರದ ಹಳ್ಳಿ ಕಾಂತಾವರದಲ್ಲಿ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ “ಕನ್ನಡ ಭವನ”ದಲ್ಲಿ ಶೂದ್ರ ಪತ್ರಿಕೆಯ ಸಂಪಾದಕರಾದ ಶೂದ್ರ ಶ್ರೀನಿವಾಸ್ ನೀಡಿದ ಉಪನ್ಯಾಸದ ಮಾತುಗಳ ಭಾವ.
ಸಂದರ್ಭ: ಕಾಂತಾವರ ಕನ್ನಡ ಸಂಘದ “ನಾಡಿಗೆ ನಮಸ್ಕಾರ” ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ೭ನೇ ಕಂತಿನ ೧೫ ಪುಸ್ತಕಗಳ ಬಿಡುಗಡೆ ಸಮಾರಂಭ. ನಿವೃತ್ತ ನ್ಯಾಯಾಧೀಶ ಮುಂಗಿಲ ಕೃಷ್ಣ ಭಟ್ ಅವರ ಅಧ್ಯಕ್ಷತೆ. ಮೂಡಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷರಾದ ಸಿ.ಕೆ. ಪಡಿವಾಳರ ಉಪಸ್ಥಿತಿ.
ಅಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪುಂಡಲೀಕ ಹಾಲಂಬಿಯವರಿಂದ ಬಿಡುಗಡೆಯಾದ ೧೫ ಪುಸ್ತಕಗಳು: ರಾಷ್ಟ್ರಕವಿ ಎಂ. ಗೋವಿಂದ ಪೈ, ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾದ್ಯಾಯ, ತ್ಯಾಗಜೀವಿ ಕಾರ್ನಾಡು ಸದಾಶಿವ ರಾವ್, ನವೋದಯ ಕೋಗಿಲೆ ಕಡೆಂಗೋಡ್ಲು ಶಂಕರ ಭಟ್ಟ, ಸವಿಗನ್ನಡದ ಗಾರುಡಿಗ ಕೊಳಂಬೆ ಪುಟ್ಟಣ್ಣ ಗೌಡ, ನಿಘಂಟುತಜ್ನ ಪ್ರೊ. ಮುಂಗ್ಲಿಮನೆ ಮರಿಯಪ್ಪ ಭಟ್ಟ, ಐಕ್ಯಗಾನದ ನಾಡೋಜ ಕಯ್ಯಾರ ಕಿಂಜ್ನಣ್ಣ ರೈ, ನವ್ಯ ಕಾವ್ಯದ ಪ್ರವರ್ತಕ ಮುಗೇರಿ ಗೋಪಾಲಕೃಷ್ಣ ಅಡಿಗ, ದೇಶಭಕ್ತ ಎನ್.ಎಸ್. ಕಿಲ್ಲೆ, “ಶಿಂಗಣ್ಣಾ” ಖ್ಯಾತಿಯ ಕೆ. ರಾಮಕೃಷ್ಣ, ಸಾಹಿತ್ಯೋಪಾಸಕ ಬೈಕಾಡಿ ವೆಂಕಟಕೃಷ್ಣ ರಾವ್, ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ, ಸಮಾಜಮುಖಿ ಚಿಂತಕ ಡಾ. ಏರ್ಯ ಲಕ್ಷೀನಾರಾಯಣ ಆಳ್ವ, ಯಕ್ಷಕಿನ್ನರ ಐರೋಡಿ ಗೋವಿಂದಪ್ಪ, ಕಲಾಕೋವಿದ ಮೋಹನ ಸೋನ.
ಈ ಗ್ರಂಥಮಾಲೆಯಲ್ಲಿ ಈಗಾಗಲೇ ೭೫ ಪುಸ್ತಕಗಳು ಅನಾವರಣಗೊಂಡಿವೆ. ಇದೆಲ್ಲ ಶುರುವಾದದ್ದು ೨೦೦೭ರಲ್ಲಿ. ಹಳ್ಳಿಯ ಹೆಸರನ್ನೇ ಇಟ್ಟುಕೊಂಡು ಹುಟ್ಟಿದ ಕಾಂತಾವರ ಕನ್ನಡ ಸಂಘಕ್ಕೆ ಆಗ ಮೂವತ್ತರ ಹರೆಯ. ಕನ್ನಡ ನಾಡಿಗೂ ಆಗ ಸುವರ್ಣ ಸಂಭ್ರಮದ ಸಂದರ್ಭ. ಇವೆರಡರ ನೆನಪನ್ನು ಗಟ್ಟಿಗೊಳಿಸಲಿಕ್ಕಾಗಿ ಶುರುವಾದದ್ದು ಈ ಗ್ರಂಥಮಾಲೆ.
ಆಗ ಇದ್ದ ಉದ್ದೇಶ ನಾಡಿಗೆ ಹಾಗೂ ನುಡಿಗೆ ಗಣನೀಯ ಸೇವೆ ಸಲ್ಲಿಸಿದ ಮೂವತ್ತು ಮಹನೀಯರ ಬದುಕು ಹಾಗೂ ಕೊಡುಗೆಗಳನ್ನು ಪರಿಚಯಿಸುವ ಪರಿಚಯಿಸುವ ಪುಟ್ಟ ಪುಸ್ತಕಗಳ ಪ್ರಕಟಣೆ. ಈಗ ೭೫ ಅನನ್ಯ ವ್ಯಕ್ತಿಗಳ ಬಗ್ಗೆ ಹೊತ್ತಗೆಗಳನ್ನು ನಾಡಿಗೆ ಸಮರ್ಪಿಸಿದ ನಂತರವೂ ಅಂತಹ ವ್ಯಕ್ತಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಅದಕ್ಕಾಗಿ “ನಾವು ಒಟ್ಟು ನೂರರಷ್ಟಾದರೂ ಕೃತಿಗಳನ್ನು ಈ ಮಾಲೆಯಲ್ಲಿ ಹೊರ ತರಬೇಕೆಂದು ಈಗ ಸಂಕಲ್ಪಿಸಿದ್ದೇವೆ” ಎಂದು ಪುಸ್ತಕಗಳ ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ ಗ್ರಂಥಮಾಲೆಯ ಪ್ರಧಾನ ಸಂಪಾದಕರೂ ಸಂಘದ ಕಾರ್ಯಾಧ್ಯಕ್ಷರೂ ಆದ ಡಾ. ನಾ. ಮೊಗಸಾಲೆ.
ಒಂದು ಪುಸ್ತಕ ಪ್ರಕಟಿಸುವುದೇ ಈಗಿನ ಕಾಲದಲ್ಲಿ ಸಾಹಸ. ಹಾಗಿರುವಾಗ, ನಾಡು-ನುಡಿಗೆ ಬದುಕು ಮುಡಿಪಾಗಿಟ್ಟ ನೂರು ಜನರನ್ನು ಗುರುತಿಸಿ, ಬೇರೆಬೇರೆ ಲೇಖಕರಿಂದ ಅವರ ಜೀವನಸಾಧನೆ ದಾಖಲಿಸುವ ಪುಸ್ತಕ ಬರೆಯಿಸಿ, ಪ್ರಕಟಿಸಿ, ಬಿಡುಗಡೆ ಸಮಾರಂಭ ಏರ್ಪಡಿಸುವ ಕಾಯಕ ಮಹಾನ್ ಸಾಹಸ. ಈ ಸಾಹಸ ೨೦೦೭ರಿಂದಲೂ ಕಾಂತಾವರದಲ್ಲಿ ಮುನ್ನಡೆಯುತ್ತಿರುವುದೇ ಕನ್ನಡದ ವಿಸ್ಮಯ.
ಜೊತೆಗೆ, ೨೦೦೮ರಿಂದ ಕಾಂತಾವರದಲ್ಲಿ ಪ್ರತಿ ತಿಂಗಳೂ “ನುಡಿ ನಮನ” ಎಂಬ ಸಾಹಿತ್ಯ ಸಂಸ್ಕೃತಿ ಸಂವರ್ಧನ ಉಪನ್ಯಾಸ ಕಾರ್ಯಕ್ರಮ. ಪ್ರತಿ ವರುಷದ ಎಲ್ಲ ಉಪನ್ಯಾಸಗಳೂ “ನುಡಿಹಾರ” ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟವಾಗುತ್ತಿವೆ. ಅದಲ್ಲದೆ, ಈ ವರುಷದಿಂದ, ಪ್ರತಿ ತಿಂಗಳೂ ಅಲ್ಲಮಪ್ರಭು ಪೀಠದ ಆಶ್ರಯದಲ್ಲಿ “ಅನುಭವದ ನಡೆ ಅನುಭಾವದ ನುಡಿ” ಸರಣಿಯಲ್ಲಿ ಉಪನ್ಯಾಸ ಕಾರ್ಯಕ್ರಮ. ಕನ್ನಡಕ್ಕಾಗಿ ಸಾರ್ಥಕ ಕೆಲಸ ಹೇಗೆ ಮಾಡಬಹುದೆಂಬುದನ್ನು ಕಾಣಬೇಕೆಂದಾದರೆ ಕಾಂತಾವರಕ್ಕೆ ಬನ್ನಿ. (ಡಾ. ನಾ. ಮೊಗಸಾಲೆಯವರ ಸಂಚಾರಿವಾಣಿ ೯೯೦೦೭೦೧೬೬೬)