ಹೀಗೊಂದು ಐ. ಟಿ. ಇಂಟರ್ವ್ಯೂ...

ಹೀಗೊಂದು ಐ. ಟಿ. ಇಂಟರ್ವ್ಯೂ...



 

               "ಇಲ್ಲಿ ನೋಡಿ, ನಿಮ್ಮ ಗೆಳೆಯ ಪೂರ್ತಿಯಾಗಿ ಗುಣಮುಖರಾಗಲು ಇನ್ನೂ ೪ ರಿಂದ ೫ ದಿನಗಳು ಬೇಕು. ಅಲ್ಲಿಯವರೆಗೆ ಅವನಿಗೆ ಸಂಪೂರ್ಣ ಬೆಡ್ ರೆಸ್ಟ್ ಬೇಕು, ಎಲ್ಲೂ ಎದ್ದು ಓಡಾಡುವ ಹಾಗಿಲ್ಲ. ಹಾಗಾಗಿ ಅವನು ಆಸ್ಪತ್ರೆಯಲ್ಲಿಯೇ ಇರುವುದು ಸೂಕ್ತ" ಎಂದು ವೈದ್ಯರು ಹೇಳುವಾಗ ನನ್ನ ಇತರ ಗೆಳೆಯರ ಮುಖದ ಮೇಲೆ ಚಿಂತೆಯ ಗೆರೆಗಳು ಮೂಡುತ್ತಿದ್ದವು. ಆದರೆ ನಾನು ಮನಸ್ಸಿನಲ್ಲಿಯೇ ವೈದ್ಯರಿಗೆ ಧನ್ಯವಾದಗಳನ್ನು ಹೇಳ್ತಾ ಇದ್ದೇ. ಅವರೆಲ್ಲ ಹೊರಟುಹೋದಾಗ, ನಾನು ವೈದ್ಯರನ್ನು ಖುದ್ದಾಗಿ ಭೇಟಿಯಾಗಿ ನನ್ನ ಧನ್ಯವಾದಗಳನ್ನು ತಿಳಿಸಲು ಕೈ ಮುಂದೆ ಮಾಡುವಷ್ಟರಲ್ಲಿ ತಲೆಯ ಮೇಲೆ ಯಾರೋ ಬಲವಾಗಿ ಹೊಡೆದ ಹಾಗಾಯಿತು. "ಯಾವನ್ ಲೇ ಅವನು" ಅಂತ ಎದ್ದು ಕೂತೆ. ಆಗಲೇ ಗೊತ್ತಾಗಿದ್ದು ನಾನು ಕಂಡದ್ದು ಕನಸು ಅಂತ. ಪಕ್ಕದಲ್ಲಿ ನೋಡಿದೆ, "Computer Networks by Andrew S. Tanenbaum" ಎಂಬ ದೊಡ್ಡ ಪುಸ್ತಕ ನನ್ನ ತಲೆಯ ಮೇಲೆ ಬಾಂಬ್ ಬಿದ್ದ ಹಾಗೆ ಬಿದ್ದು ಪಕ್ಕಕ್ಕೆ ಉರುಳಿತ್ತು. ಇದು ಹೇಗೆ ಆಯ್ತು ಅನ್ನೋದನ್ನು ಅರ್ಥ ಮಾಡಿಕೊಳ್ಳಲು ನನಗೆ ಹೆಚ್ಚು ಹೊತ್ತಾಗಲಿಲ್ಲ. ನಾನು ವೈದ್ಯರಿಗೆ ಧನ್ಯವಾದ ಅಂತ ಹೇಳಲು ಕೈ ಚಾಚಿದ್ದು, ಅದು ನಾನು ಮಲಗುವ ಜಾಗದ ಹತ್ತಿರ ಇದ್ದ ಮೇಜಿನ ಮೇಲೆ ಆಗಲೋ ಈಗಲೋ ಬೀಳುವಂತೆ ಇಟ್ಟಿದ್ದ ಪುಸ್ತಕಕ್ಕೆ ತಾಗಿ ನನ್ನ ತಲೆಯ ಮೇಲೆ ಬಿದ್ದದ್ದು. ನನಗೆ ಸಿಟ್ಟು ಬಂತು, "ಥುತ್, ಇದು ಬರಿ ಕನಸು. ನಾನು ನಿಜ ಅಂತ ಮಾಡಿದ್ದೆ" ಅಂತ ಮೇಜಿನ ಮೇಲೆ ಇದ್ದ ನನ್ನ ಕೈಗಡಿಯಾರ ನೋಡಿಕೊಂಡೆ, ಆಗ ಇನ್ನೂ ಮುಂಜಾನೆ ೩.೪೫ ಆಗಿತ್ತು. "ಛೇ! ಈ ಕನಸು ಇನ್ನೊಂದು ೧೫ ನಿಮಿಷದ ನಂತರ ಬೀಳಬಾರದಗಿತ್ತಾ" ಅಂದುಕೊಂಡೆ. ಮುಂಜಾನೆ ೪ ಘಂಟೆಯ ಮೇಲೆ ಬೀಳುವ ಕನಸುಗಳು ನಿಜ ಆಗ್ತಾವೆ ಅಂತ ಕೇಳಿದ್ದೆ. "ಭಗವಂತ, ಈ ಕನಸನ್ನು ನಿಜ ಮಾಡಪ್ಪ" ಅಂತ ಹೇಳಿ ಮಲಗೋಕೆ ಹೋದೆ. ಆದರೆ ನಿದ್ರೆ ಬರಲಿಲ್ಲ. ಸರಿ ಇನ್ನೇನು ಮಾಡುವುದು ಅಂತ ಕಳೆದ ಹೋದ ಘಟನೆಗಳ ಬಗ್ಗೆ ಹಾಗೆ ಮೆಲುಕು ಹಾಕ್ತಾ ಕುಳಿತೆ.

                                                        ***************************************

               ಬೆಂಗಳೂರಿಗೆ ಬಂದು ಆಗಲೇ ೮ ತಿಂಗಳ ಮೇಲಾಗಿತ್ತು. ಇನ್ನೂ ನಾನು ನಿರುದ್ಯೋಗಿ ಆಗಿದ್ದೆ. ಊರಲ್ಲಿ ಅಪ್ಪನ ಸಣ್ಣ ದಿನಸಿ ವ್ಯಾಪಾರ ಸ್ವಲ್ಪ ಮಂದ ಗತಿಯಲ್ಲಿ ನಡೀತಾ ಇತ್ತು. ಆದ್ರೂ ಅವರು ಕಷ್ಟಪಟ್ಟು ತಿಂಗಳು ತಿಂಗಳು ನನಗೆ ಹಣ ಕಳಿಸುತ್ತಿದ್ದರು. ಹಿಂದಿನ ತಿಂಗಳು ಅವರೇ ಖುದ್ದಾಗಿ ನನಗೆ ಹಣ ಕೊಡಲು ಬಂದಾಗ, ಮುಂಚೆ ಅವರ ಬಲಗೈ ಬೆರಳಿನಲ್ಲಿ ಇರುತ್ತಿದ್ದ ಬಂಗಾರದ ಉಂಗುರ ಆಗ ಇಲ್ಲದ್ದನ್ನು ನಾನು ಗಮನಿಸಿದೆ. ನಾನು ಸ್ವಲ್ಪ ಒತ್ತಾಯ ಮಾಡಿ ಕೇಳಿದಾಗ, ಅವರು ಅದನ್ನು ಮಾರಿ ಅದರಿಂದ ಬಂದ ಹಣವನ್ನು ನನಗೆ ಕೊಡಲು ತಂದಿದ್ದರೆಂದು ತಿಳಿಯಿತು. ಅದನ್ನು ಕೇಳಿ ನನ್ನ ಕಣ್ಣಲ್ಲಿ ನೀರು ಬಂತು. ಅದಕ್ಕೆ ಅವರು "ಮಗು, ಎದೆಗುಂದಬೇಡ ಪ್ರಯತ್ನ ಪಡು ಖಂಡಿತ ಯಶಸ್ಸು ಸಿಗುತ್ತೆ, ಹಣದ ಬಗ್ಗೆ ಯೋಚನೆ ಮಾಡಬೇಡ" ಎಂದು ಹೇಳಿ ಹೊರಟುಹೋದರು.

                                                        ***************************************

               ನಾನು ನನ್ನ ಮೊದಲನೆ ವರ್ಷದ ಇಂಜಿನಿಯರಿಂಗ್ ಮುಗಿಸಿದಾಗ ಎಲ್ಲರೂ "ನೀನು ಖಂಡಿತವಾಗಿಯೂ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಆಯ್ಕೆ ಆಗ್‌ತೀಯಾ" ಅಂತ ಹೇಳ್ತಾ ಇದ್ರು. ಆದರೆ ರಿಸೆಶನ್ ಎಂಬ ಸುನಾಮಿ ನಮ್ಮ ಇಂಜಿನಿಯರಿಂಗ್ ಮುಗಿಯುವ ಸಮಯದಲ್ಲೇ ಬರುತ್ತೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಪರಿಣಾಮ ಆ ವರ್ಷ ಯಾವುದೇ ಐ.ಟಿ. ಕಂಪನಿಗಳು ಕ್ಯಾಂಪಸ್ ಇಂಟರ್‌ವ್ಯೂಗೆ ಬರಲೇ ಇಲ್ಲ. ಬೇರೆ ದಾರಿಯಿಲ್ಲದೇ ಉದ್ಯೋಗ ಹುಡುಕುವದಕ್ಕಾಗಿ ಉದ್ಯಾನ ನಗರಿ (ಆಗ ಉದ್ಯಾನ ನಗರಿ ಆಗಿತ್ತು) ಎಂದೆ ಪ್ರಸಿದ್ಧವಾಗಿದ್ದ ಬೆಂಗಳೂರಿಗೆ ಬರಲೇಬೇಕಾಯಿತು. ಆಗ ಇಂಟರ್‌ವ್ಯೂ ಕಾಲ್ ಬರ್ತಾ ಇದ್ದುದೇ ಕಡಿಮೆ, ತಿಂಗಳಿಗೆ ಒಂದೋ-ಎರಡೋ ಕಾಲ್ಸ್  ಬಂದರೆ ಅಪರೂಪ. ಫ್ರೆಶರ್ ಆಗಿದ್ದರಿಂದ ಶೆಡ್ಯೂಲ್ಡ್ ಇಂಟರ್‌ವ್ಯೂಸ್ ಸಿಗೋದು ಅಸಾಧ್ಯ. ಇದ್ದಿದ್ದು ವಾಕ್-ಇನ್ ಇಂಟರ್‌ವ್ಯೂಸ್ ಮಾತ್ರ. ವಾಕ್-ಇನ್ ಇಂಟರ್‌ವ್ಯೂ ಅನ್ನೋದು ಒಂದು ತರಹ ಗುಂಪಿನಲ್ಲಿ ಗೋವಿಂದ ಅನ್ನೋ ಹಾಗೆ. ನಿಮ್ಮ ಅದೃಷ್ಟ+ ತಯಾರಿ + ಮಾತುಗಾರಿಕೆ + ಆತ್ಮವಿಶ್ವಾಸ ಇವೆಲ್ಲ ಚೆನ್ನಾಗಿತ್ತು ಅಂದ್ರೆ ನೀವು ಆಯ್ಕೆ ಆದಿರಿ ಅಂತ ಅರ್ಥ. ಇಲ್ಲ ಅಂದ್ರೆ ಖಾಲಿ ಕೈಲಿ ಮನೆಗೆ ಬರೋದು. ನಾನು ವಾಕ್-ಇನ್ ಹೋಗ್ತಾ ಇದ್ದಾಗ ಈ ನಾಲ್ಕರಲ್ಲಿ ಯಾವುದಾದರೂ ಒಂದು ಕೈ ಕೊಡ್ತಾ ಇತ್ತು.

               ನಾನು ಹಾಗೂ ನನ್ನ ೪ ಫ್ರೆಂಡ್ಸ್ ಸೇರಿ ಒಂದು ರೂಮನ್ನ ಬಾಡಿಗೆ ತಗೊಂಡಿದ್ದೆವು. ರೂಮಿಗೆ ಬಂದಾಗ ಮೊದಲು ಎಲ್ರೂ ನಿರುದ್ಯೋಗಿಗಳಾಗಿದ್ದರು. ಬರ್ತಾ ಬರ್ತಾ ಎಲ್ರಿಗೂ ಐ. ಟಿ. ಕೆಲಸ ಸಿಕ್ತು, ನಾನು ಹಾಗೂ ನನ್ನ ಇನ್ನೊಬ್ಬ ಮಿತ್ರನನ್ನು ಬಿಟ್ಟು. ಇಲ್ಲಿ ನಾನು ನನ್ನ ಈ ಮಿತ್ರನ ಬಗ್ಗೆ ಸ್ವಲ್ಪ ಹೇಳಲೇಬೇಕು. ನಮ್ಮಿಬ್ಬರದು ಒಂದೇ ಕಾಲೇಜ್, ಒಂದೇ ಬ್ರ್ಯಾಂಚ್ ಮತ್ತು ಕಾಲೇಜಿನಲ್ಲಿ ಪ್ರಾಜೆಕ್ಟ್ ಮೇಟ್ಸ್. ನಮ್ಮಿಬ್ಬರ ಊರುಗಳು ಕೂಡಾ ಹತ್ತಿರ ಹತ್ತಿರಾನೇ. ನಾನು ಮಾಮೂಲಿನ ಹಾಗೆ ಒಬ್ಬನೇ ಇಂಟರ್‌ವ್ಯೂಗೆ ಹೋಗ್ತಾ ಇದ್ದೆ. ನನ್ನ ಮಿತ್ರನು ಅಷ್ಟೆ, ಅವನು ಒಬ್ಬನೇ ಇಂಟರ್‌ವ್ಯೂಗೆ ಹೋಗ್ತಾ ಇದ್ದ. ಹಾಗಂತ ನಾವಿಬ್ಬರೇನು ಮಾತು ಬಿಟ್ಟಿರಲಿಲ್ಲ. ಆದರೆ ನಮ್ಮಿಬ್ಬರ ನಡುವೆ ಯಾರು ಮೊದಲು ಐ. ಟಿ. ಕೆಲಸ ಗಿಟ್ಟಿಸುತ್ತಾರೋ ಎಂಬುದರ ಬಗ್ಗೆ ಒಳಗೊಳಗೆ ಸ್ಪರ್ಧೆ ಏರ್ಪಟ್ಟಿತ್ತು. ಸಹಜ ಅಲ್ವಾ, ಇಬ್ಬರು ಫ್ರೆಂಡ್ಸ್ ಎಷ್ಟೇ ಕ್ಲೋಸ್ ಆದರೂ ಒಂದಿಲ್ಲ ಒಂದು ವಿಷಯದಲ್ಲಿ ಅಂತಃ ಸ್ಪರ್ಧೆ ಇದ್ದೇ ಇರುತ್ತೆ. ನಮ್ಮದು ಅಷ್ಟೇ ಆರೋಗ್ಯಾಯುತವಾದ ಅಂತಃ ಸ್ಪರ್ಧೆ. ಹೀಗೆ ಒಂದೆರಡು ತಿಂಗಳುಗಳು ಉರುಳಿದ ಮೇಲೆ, ಒಂದು ದಿನ ಇಬ್ಬರಿಗೂ ಒಂದು ಟೀ ಅಂಗಡಿಯ ಮುಂದೆ ಟೀ ಕುಡಿತಾ ನಿಂತಿದ್ದಾಗ ಅಲ್ಲೇ ಪಕ್ಕದಲ್ಲಿ ನೆಲದ ಮೇಲೆ ಒಂದು ಇರುವೆಯ ಗುಂಪನ್ನು ನೋಡಿ ಜ್ಞಾನೋದಯವಾಯಿತು. ಅವೆಲ್ಲಾ ಒಂದುಗೂಡಿ ಒಂದು ಸಕ್ಕರೆ ಕಣವನ್ನು ಹೊತ್ತುಕೊಂಡು ಹೋಗುತ್ತಾ ಇದ್ದವು. ನಾನು ಅವನಿಗೆ ಹೇಳಿದೆ "ಒಗ್ಗಟ್ಟಿನಲ್ಲಿ ಬಲ ಇದೆ ಅನ್ನೋದು ಇದಕ್ಕೆ". ಅವನು "ಹೂಂ" ಅಂತ ತಲೆ ಆಡಿಸಿದ. ಅಲ್ಲೇ ನಿರ್ಧಾರ ಕಮ್  ಒಪ್ಪಂದ ಮಾಡಿದೀವಿ, ಇನ್ಮುಂದೆ ನನಗೆ ಯಾವುದಾದರು ವಾಕ್-ಇನ್ ಕಾಲ್ ಬಂದರೆ ನಾನು ಅವನಿಗೆ ತಿಳಿಸಬೇಕು ಮತ್ತು ಅವನಿಗೆ ಕಾಲ್ ಬಂದರೆ ಅವನು ನನಗೆ ಹೇಳಬೇಕು ಹಾಗೂ ಇಬ್ಬರೂ ಸೇರಿಕೊಂಡು ವಾಕ್-ಇನ್ ಗೆ ಹೋಗಬೇಕು. ಇದಕ್ಕೆ ನಾವು ಇಟ್ಟ ಹೆಸರು ವಿನ್ - Win (Walk-in) - ಒಪ್ಪಂದ. ಈ ಹೆಸರು ಇಡಲು ಇನ್ನೊಂದು ಕಾರಣ ಅಂದರೆ ಮಿಸ್ಟರ್ ಶಿವ್ ಖೇರಾ (ಫೇಮಸ್ ಮೊಟಿವೇಶನಲ್ ಸ್ಪೀಕರ್) ಅವರ ‘You Can Win’ ಎಂಬ ಪುಸ್ತಕ. ಏಕೆಂದರೆ ಇಂಟರ್‌ವ್ಯೂನಲ್ಲಿ ಫೇಲ್ ಆಗಿ ಜೋಲು ಮುಖ ಹಾಕಿಕೊಂಡು ಮನೆಗೆ ಬಂದಾಗ, ಆ ಪುಸ್ತಕದ 4-5 ಪುಟಗಳನ್ನು ಓದಿದರೆ ಏನೋ ಒಂದು ತರಹ ಸ್ಫೂರ್ತಿ ಬಂದ ಹಾಗೆ ಆಗುತ್ತಾ ಇತ್ತು. ಈ ವಿನ್ ಒಪ್ಪಂದದ ಪ್ರಕಾರ ಪರಸ್ಪರ ಸಹಕಾರ ಮನೋಭಾವದಿಂದ ಮುಂದಿನ ಐದಾರು ಇಂಟರ್‌ವ್ಯೂಸ್ ಅಟೆಂಡ್ ಮಾಡಿದ್ವಿ, ಆದರೆ ಎಲ್ಲೂ ವಿನ್ ನಮ್ಮ ಹತ್ತಿರ ಸುಳಿದಾಡಲೇ ಇಲ್ಲ. ಪರಿಣಾಮ ನಾನು ಶಿವ್ ಖೇರಾಗೆ ಬೈ ಹೇಳಿ ಸ್ವಾಮಿ ವಿವೇಕಾನಂದ ಅವರ ಮೊಟಿವೇಶನಲ್ ಪುಸ್ತಕಕ್ಕೆ ಸ್ವಿಚ್ ಆದೆ, ಆದರೆ ನನ್ನ ಮಿತ್ರ ಶಿವ್ ಖೇರಾನ ಕೈ ಬಿಡಲಿಲ್ಲ. ಇಷ್ಟೆಲ್ಲಾ ಮಾಡಿದರೂ ಇಬ್ಬರಲ್ಲೂ ಒಬ್ಬರು ಆಯ್ಕೆ ಆಗಲಿಲ್ಲ. ಒಬ್ಬರಿಗೊಬ್ಬರು ಶಾಪ ಹಾಕ್ತಾ ಇದ್ರೆ(ಆಫ್ ಕೋರ್ಸ್ ಮನಸ್ಸಲ್ಲಿ) ಯಾರು ತಾನೇ ಆಯ್ಕೆ ಆಗ್ತಾರೆ ಹೇಳಿ? ನಾನು ಒಂದು ರೌಂಡ್ ಮುಂದೆ ಹೋದರೆ ಅವನು ಶಾಪ ಹಾಕೋನು ಮತ್ತು ಅವನು ಮುಂದೆ ಹೋದರೆ ನಾನು ಶಾಪ ಹಾಕೋನು. ಹೀಗೆ ಒಬ್ಬರ ಕಾಲನ್ನ ಇನ್ನೊಬ್ಬರು ಎಳಿತಾ ಇದ್ವಿ. ನಾವಿಬ್ಬರೂ ಯಾವುದೋ ಪುರಾತನ ಕಾಲದಲ್ಲಿ ತುಂಬಾ ಪವರ್‌ಫುಲ್ ಋಷಿ-ಮುನಿಗಳಾಗಿದ್ದಿವಿ ಅಂತ ಕಾಣುತ್ತೆ. ಏಕೆಂದರೆ ಒಬ್ಬರಿಗೊಬ್ಬರು ಹಾಕ್ತಾ ಇದ್ದ ಶಾಪ ಎಂದೂ ಹುಸಿಯಾಗುತ್ತಿರಲಿಲ್ಲ.

               ಒಂಭತ್ತನೇ ತಿಂಗಳು ಶುರು ಆಗಿತ್ತು, ನನಗೆ ಪ್ರಸವ ವೇದನೆ ಆರಂಭ ಆಗ್ತಾ ಇತ್ತು. ಅಪ್ಪ ತನ್ನ ಉಂಗುರ ಮಾರಿ ತಂದು ಕೊಟ್ಟಿದ್ದ ಹಣವೂ ಖಾಲಿ ಆಗುತ್ತಾ ಬಂದಿತ್ತು. ಅಪ್ಪನಿಗೆ ಈ ತಿಂಗಳು ಹಣ ಕೇಳೋಕ್ಕೆ  ನನಗೆ ಮನಸ್ಸಾಗಲಿಲ್ಲ. ನನ್ನ ವಿಚಾರ ರೂಮಿನ ನನ್ನ ಇತರ ಗೆಳೆಯರಿಗೆ ಗೊತ್ತಿತ್ತು, ಅದಕ್ಕೆ ಅವರೇ ನನಗೆ ಹಣಕಾಸಿನ ಸಹಾಯ ಮಾಡತಿವಿ ಅಂತ ಹೇಳಿದ್ರು. ನಾನು ಅಪ್ಪನಿಗೆ ಈ ವಿಷಯ ತಿಳಿಸಿದಾಗ ಅವರು "ಆಯ್ತು" ಅಂದರು., ಈ ತಿಂಗಳು ಒಳಗಾಗಿ ಐ. ಟಿ. ಕೆಲಸ ಸಿಗದೆ ಹೋದರೆ ನಾನು ಊರಿಗೆ ಹೋಗಿ ಅಪ್ಪನ ದಿನಸಿ ವ್ಯಾಪಾರ ನೋಡಕೊಬೇಕು ಅಂತ ನಾನು ಮನಸ್ಸಿನಲಿ ನಿರ್ಧಾರ ಮಾಡಿದ್ದೆ. ಹಣಕಾಸಿನ ವಿಚಾರದಲ್ಲಿ ನನ್ನ ಮಿತ್ರ ನನಗಿಂತ ತುಂಬಾ ಉತ್ತಮ ಮಟ್ಟದವನು ಅಂತಾನೆ ಹೇಳಬೇಕು. ಊರಲ್ಲಿ ಅವನದು ಸ್ವಲ್ಪ ಪಿತ್ರಾರ್ಜಿತವಾದ ಆಸ್ತಿ ಇತ್ತು. ಒಬ್ಬನೇ ಮಗ, ಒಂದು ವೇಳೆ ಬೆಂಗಳೂರಿನಲ್ಲಿ ಕೆಲಸ ಸಿಗದೆ ಹೋದರೂ, ಊರಿನಲ್ಲಿ ಇರುವ ಜಮೀನಿನಲ್ಲಿ ಮೈ ಬಗ್ಗಿಸಿ ದುಡಿದರೆ ಲಕ್ಷಾಂತರ ರೂಪಾಯಿ ಗಳಿಸಬಹುದು ಅಂತ ಅವನೆ ಹೇಳ್ತಾ ಇದ್ದ. ಆದರೆ ಅದು ಕೇವಲ ಮಾತಿನಲ್ಲಿ. ಅವನಿಗೆ ಅದರಲ್ಲಿ ಸ್ವಲ್ಪ ಉತ್ಸಾಹ ಬರಲಿ ಎಂದು, ನಾವು ಅವನಿಗೆ ಅಣ್ಣಾವ್ರ "ಬಂಗಾರದ ಮನುಷ್ಯ" ಚಿತ್ರವನ್ನ ೩ ಬಾರಿ ತೋರಿಸಿದಿವಿ, ಆದರೆ ಏನು ಪ್ರಯೋಜನವಾಗಲಿಲ್ಲ. ಅವನಿಗೆ ಅದರಲ್ಲಿಯ "ಆಗದು ಎಂದು, ಕೈ ಕಟ್ಟಿ ಕುಳಿತರೆ" ಎಂಬ ಗೀತೆ ತುಂಬಾ ಇಷ್ಟವಾಗಿ, "ಐ ಕ್ಯಾನ್ ವಿನ್ ಅಂಡ್ ಐ ವಿಲ್ ವಿನ್" ಅಂತ, 'You Can Win' ಓದಲಿಕ್ಕೆ ಶುರು ಮಾಡ್ತಾ ಇದ್ದ. ನನಗೆ ಯಾವುದೇ ಪಿತ್ರಾರ್ಜಿತವಾದ ಆಸ್ತಿ ಇರಲಿಲ್ಲ, ಇದ್ದುದು ಕೇವಲ ನನ್ನ ಸ್ವಯಾರ್ಜಿತ ಆಸ್ತಿಯಾದ ಈ ಇಂಜಿನಿಯರಿಂಗ್ ಡಿಗ್ರೀ ಸರ್ಟಿಫಿಕೇಟ್ ಮಾತ್ರ.

                ಹೀಗೆ ಒಂದು ವಾರ ಕಳೆಯಿತು, ಒಂದು ದಿನ (ಅಂದು ಸೋಮವಾರ) ನಾನು ಎಂದಿನಂತೆ ಮುಂಜಾನೆ ೧೧ ಕ್ಕೆ ಈ-ಮೇಲ್ ಚೆಕ್ ಮಾಡೋಕೆ ಹೋದೆ. ಯಾರೋ ಒಬ್ಬರು ಮೇಲ್ ಮಾಡಿದ್ರು, ಮೇಲ್ ತೆಗೆದು ನೋಡಿದಾಗ ಗೊತ್ತಾಯ್ತು ಅವರು ನಮ್ಮ ಊರಿನವರು.  ಅವರು M.B.A. ಮಾಡಿಕೊಂಡು, ಬೆಂಗಳೂರಿನ ಒಂದು ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ರು.  ಅವರನ್ನ ನಾನು ಬೆಂಗಳೂರಿಗೆ ಮೊದಲನೆ ಸಲ ಬಂದಾಗ ಭೇಟಿ ಆಗಿದ್ದೆ, ಎಲ್ಲಿಯಾದರೂ ಓಪನಿಂಗ್ಸ್ ಇದ್ರೆ ತಿಳಿಸಿ ಅಂತ ಮನವಿ ಮಾಡಿಕೊಂಡಿದ್ದೆ. ಮೇಲ್ ನ ಪೂರ್ತಿ ಓದಿದ ಮೇಲೆ ಮುಖದಲ್ಲಿ ಒಂದು ತರಹದ ಮಂದಹಾಸ ಮೂಡಿತು, ಮನಸ್ಸಿನ ಯಾವುದೋ ಒಂದು ಭಾಗದಲ್ಲಿ ಒಂದು ಸಣ್ಣ ಆಸೆಯ ಚಿಲುಮೆ ಉಕ್ಕಿತು.  ಇದೇ ಬುಧುವಾರ ೧೨ ನೇ ತಾರೀಖಿನಂದು ನನ್ನ ಪರಿಚಯದ ಒಂದು ಕಂಪನಿಯಲ್ಲಿ ಶೆಡ್ಯೂಲ್ಡ್ ಇಂಟರ್‌ವ್ಯೂ ಇದೆ, ನಾನು ನಿನ್ನ ಹೆಸರನ್ನು ರೆಫರ್ ಮಾಡಿದೀನಿ ತಪ್ಪದೇ ಹೋಗಿ ಅಟೆಂಡ್ ಮಾಡು ಅಂತ ಅವರು ಮೇಲ್ ಮಾಡಿದ್ರು. ಶೆಡ್ಯೂಲ್ಡ್ ಇಂಟರ್‌ವ್ಯೂ! ನನಗೆ ನಂಬಿಕೆಯೇ ಬರಲಿಲ್ಲ, ಅದನ್ನು ಖಚಿತ ಪಡಿಸಿಕೊಳ್ಳುವದಕ್ಕೋಸ್ಕರ ನಾನು ಆಗಲೇ ಅವರಿಗೆ ಕರೆ ಮಾಡಿದೆ. ಅದಕ್ಕೆ ಅವರು "ಹೌದು, ಇದು ಶೆಡ್ಯೂಲ್ಡ್ ಇಂಟರ್‌ವ್ಯೂ. ಅಲ್ಲಿ ಕುಮಾರ್ ಅಂತ ನನ್ನ ಪರಿಚಯದವರು ಇದಾರೆ ಅವರನ್ನು ಭೇಟಿ ಆಗು. ಬಹುಶಃ ನಿನಗೆ ಸಹಾಯ ಆದ್ರೂ ಆಗಬಹುದು" ಅಂತ ಹೇಳಿ ಕರೆಯನ್ನು ಮುಕ್ತಾಯಗೊಳಿಸಿದರು. ಆಗ ನನಗಾದ ಆನಂದಕ್ಕೆ ಪಾರವೇ ಇಲ್ಲ, ಇಂಟರ್‌ವ್ಯೂನಲ್ಲಿ ಆಯ್ಕೆ ಆದಷ್ಟೇ ಖುಷಿ ಆಗಿತ್ತು. ಅದೇ ಖುಷಿಯಿಂದ ರೂಮಿಗೆ ಬಂದೆ. ನನ್ನ ಮಿತ್ರ ಕೈಯ್ಯಲ್ಲಿ 'You Can Win' ಪುಸ್ತಕ ಹಿಡಿದುಕೊಂಡು ಜೋರಾಗಿ ಏನೋ ಓದುತ್ತಾ ಕುಳಿತಿದ್ದ.  ನಾನು ಅವನಿಗೆ ನನ್ನ ಮುಖದ ಭಾವನೆಯನ್ನು ವ್ಯಕ್ತಪಡಿಸದೆ ಎಂದಿನಂತೆ ನನ್ನ ಪಾಡಿಗೆ ನಾನು ಇಂಟರ್‌ವ್ಯೂಗೆ ಓದುತ್ತಾ ಕುಳಿತೆ. ಇಂಟರ್‌ವ್ಯೂಗೆ ಕೇವಲ ೨ ದಿನಗಳು ಮಾತ್ರ ಬಾಕಿ ಇದ್ದವು. ಇತರರಿಗೆ ಕೆಲಸ ಸಿಕ್ಕಿದುದರಿಂದ ಅವರು ಮುಂಜಾನೆ ಒಂಭತ್ತರ ಒಳಗಾಗಿ ರೂಮ್ ಬಿಡ್ತಾ ಇದ್ದರು, ಬರೋದು ರಾತ್ರಿ ೭ ಅಥವಾ ೮ ಘಂಟೆಗೆ. ಅಲ್ಲಿಯವರೆಗೆ ರೂಮಿನಲ್ಲಿ ನಾವಿಬ್ಬರೇ ಇರ್ತಾ ಇದ್ದೀವಿ. ಓದುವುದಕ್ಕೆ ಯಾವುದೇ ರೀತಿಯ ಕಷ್ಟ ಇರಲಿಲ್ಲ.

               ಆ ದಿನ ಸಾಯಂಕಾಲ ಇಬ್ಬರೂ ಟೀ ಕುಡಿಯಲಿಕ್ಕೆ ಹೋದಾಗ ಅವನು ಈ ತಿಂಗಳು ಕೆಲಸ ಸಿಗದೆ ಹೋದರೆ ಊರಿಗೆ ಹೋಗಿ ಜಮೀನು ನೋಡಿಕೊಂತಿನಿ ಅಂತ ಹೇಳಿದ. ಅವನ ವಿಚಾರ ತಿಳಿದಿದ್ದ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಾರದೇ "ಹೂಂ" ಅಂದೆ. ಟೀ ಕುಡಿತಾ ಇರಬೇಕಾದರೆ ನಾವಿಬ್ಬರು ಮಾಡಿದ ವಿನ್ ಒಪ್ಪಂದ ನೆನಪಿಗೆ ಬಂತು. ನನಗೆ ಬಂದಿರುವ ಶೆಡ್ಯೂಲ್ಡ್ ಇಂಟರ್‌ವ್ಯೂ ವಿಚಾರ ಇವನಿಗೆ ಹೇಳಿ ಸುಮ್ಮನೇ ಇರುವೆ ಬಿಟ್ಟುಕೊಳ್ಳೋದು ತಪ್ಪು ಅಂತ ಮನಸ್ಸು ಹೇಳಿತು. ಆದರೆ ಒಳಗಿನ ಮನಸ್ಸು 'ನೀನು ಹೇಳದೇ ಹೋದರೆ ಮಿತ್ರನಿಗೆ ದ್ರೋಹ ಬಗೆದ ಹಾಗೆ ಆಗುತ್ತೆ' ಅಂತ ಹೇಳ್ತಾ ಇತ್ತು. ಅಂದು ರಾತ್ರಿ ಮಲಗುವಾಗ ಈ ವಿಚಾರ ಇವನಿಗೆ ಹೇಳಬೇಕೋ ಬೇಡವೋ ಎಂಬ ತುಮುಲದಲ್ಲಿ ನನ್ನ ಮನಸ್ಸು ಹೊಯ್ದಾಡುತ್ತಿತ್ತು. ಮುಂದಿನ ದಿನ ಅಂದರೆ ಮಂಗಳವಾರ  ಮುಂಜಾನೆ  ೭ ಘಂಟೆಗೆ ಎದ್ದು, ಒಬ್ಬನೇ ಟೀ ಕುಡಿಯಲು ಹೋದೆ. ಆಗ ನನ್ನ ಮಿತ್ರ ಎಂದಿನಂತೆ ನನಗಿಂತಲೂ ಮುಂಚೆ ಎದ್ದು ಜಾಗಿಂಗ್ ಹೋಗಿದ್ದ. ಈ ಮಾನಸಿಕ ದ್ವಂದ್ವದಿಂದ ಹೇಗಪ್ಪ ಹೊರಗೆ ಬರೋದು ಎಂದು ಯೋಚಿಸುತ್ತಿರುವಾಗ, ನನ್ನ ಬುದ್ಧಿ ಕ್ರಿಮಿನಲ್ ಲಾಯರ್ ಹಾಗೆ ಕೆಲಸ ಮಾಡಿ ತೀರ್ಪು ಕೂಡ ಕೊಟ್ಟುಬಿಟ್ಟಿತು. ಅದು ಹೇಳಿತು, "ನೋಡು ನೀನು ಮಾಡಿಕೊಂಡಿರೋ ವಿನ್ ಒಪ್ಪಂದ ಅನ್ವಯ ಆಗೋದು ಕೇವಲ ವಾಕ್-ಇನ್ ಗೆ ಮಾತ್ರ, ಶೆಡ್ಯೂಲ್ಡ್ ಇಂಟರ್‌ವ್ಯೂಗೂ ಮತ್ತು ಇದಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ, ನೀನು ನಿರಾತಂಕವಾಗಿ ನಿನ್ನ ಪಾಡಿಗೆ ನೀನು ಹೋಗಿ ಇಂಟರ್‌ವ್ಯೂ ಅಟೆಂಡ್ ಮಾಡು". ಇದನ್ನು ಕೇಳಿ ನನ್ನ ಮನಸ್ಸು ನಿರಾಳವಾಯಿತು. ನಾನು ಪೂರ್ತಿ ಉತ್ಸಾಹದಿಂದ ಆ ದಿನ ನಾಳಿನ ಇಂಟರ್‌ವ್ಯೂಗೆ ತಯಾರೀ ನಡೆಸಿದೆ.

               ಅಂದುಕೊಂಡಂತೆ ಇಂಟರ್‌ವ್ಯೂ ದಿನ ಬಂತು. ಇಂಟರ್‌ವ್ಯೂ ಶೆಡ್ಯೂಲ್ ಆಗಿದ್ದು ಬುಧುವಾರ ಮುಂಜಾನೆ ೯ ಘಂಟೆಗೆ. ಅರ್ಧ ಘಂಟೆಯಾದ್ರೂ ಮುಂಚೆ ನಾನು ಅಲ್ಲಿ ಇರಬೇಕು ಅಂತ ಆ ದಿನ ಮುಂಜಾನೆ ಬೇಗ ಎದ್ದು ಸಿದ್ಧನಾಗ್ತಾ ಇದ್ದೇ. ಯಾವಾಗಲೂ ನನಗಿಂತ ಮುಂಚೆ ಎದ್ದು ಜಾಗಿಂಗ್ ಗೆ ಹೋಗ್ತಾ ಇದ್ದ ನನ್ನ ಮಿತ್ರ ಅಂದು ಇನ್ನೂ ಆದ್ರೂ ಎದ್ದಿರಲಿಲ್ಲ.  ಒಳ್ಳೆಯದೇ ಆಯ್ತು ಎಂದು ನಾನು ಸ್ನಾನಕ್ಕೆ ಹೋಗಿ ಹೊರಗೆ ಬರಬೇಕಾದ್ರೆ ನೋಡ್ತೀನಿ ನನ್ನ ಮಿತ್ರ ಎದ್ದು ಕೂತಿದ್ದ. ಅವನಿಗೆ ಸ್ವಲ್ಪ ಅನುಮಾನ ಬಂದಿತ್ತು, ಅದನ್ನ ತೋರಿಸಲಾರದೇ "ನಾನು ಇವತ್ತು ಜಾಗಿಂಗ್ ಗೆ ಹೋಗಲ್ಲ, ನಿದ್ದೆ ಬರ್ತಾ ಇದೆ ಮಲಕೊತ್ತಿನಿ" ಅಂದ. ನನ್ನ ಎದೆ ಢಸಕ್ಕ ಅಂತು, ಆದ್ರೂ ಅದನ್ನ ವ್ಯಕ್ತ ಪಡಿಸದೆ ನನ್ನ ಪಾಡಿಗೆ ನಾನು ಬಟ್ಟೆ ಹಾಕಿಕೊಂಡು, ದೇವರಿಗೆ ಕೈ ಮುಗಿದು ಫೈಲ್ ತಗೊಂಡು ಹೋಗಬೇಕು ಅನ್ನುವ ಹೊತ್ತಿಗೆ. ಅವನು ಪೂರ್ತಿ ಎದ್ದು "ಎಲ್ಲಿಗೆ ಹೋಗ್ತಾ ಇದ್ದೀಯಾ ಫೈಲ್ ಕೈಯ್ಯಲ್ಲಿ ತಗೊಂಡು" ಅಂತ ಕೇಳಿಯೇ ಬಿಟ್ಟ. ಮುಂಜಾನೆ ಒಳ್ಳೆಯ ಕೆಲಸಕ್ಕೆ ಹೋಗಬೇಕಾದ್ರೆ ಎಲ್ಲಿಗೆ ಹೋಗ್ತಾ ಇದೀಯ ಅಂತ ಕೇಳಬಾರ್ದು, ಕೇಳಿದರೆ ಹೋದ ಕೆಲಸ ಆಗೋದಿಲ್ಲ ಅಂತ ನಾನು ಹಿರಿಯರಿಂದ ಕೇಳಿದ್ದೆ. ಅವನ ಆ ಪ್ರಶ್ನೆ ಕೇಳಿ ನನಗೆ ಸಿಟ್ಟು ಬಂತು. "ಸಾಯಲಿಕ್ಕೆ ಹೋಗ್ತಾ ಇದೀನಿ ಬರ್ತೀಯಾ" ಅಂದೇ. ಅವನು ಅದಕ್ಕೆ ನಕ್ಕು "ನನಗೂ ಹೇಳಿದ್ರೆ ನಾನೂ ಬರ್ತಾ ಇದ್ದೇ, ನೀನು ಒಬ್ಬನೇ ಹೋಗೋದು ಸರಿನಾ? ನಿನಗೆ ಗೊತ್ತಲ್ಲ ನನ್ನ ಪರಿಸ್ಥಿತಿ" ಅಂತ ಕೇಳಿಯೇ ಬಿಟ್ಟ. ನಮ್ಮಿಬ್ಬರ ವಿನ್ ಒಪ್ಪಂದದ ಬಗ್ಗೆ ವಾದ ಮಾಡಿ, ಅವನಿಗೆ ತಿಳಿಸಿ ಹೇಳೋಕೆ ನನ್ನ ಹತ್ತಿರ ಸಮಯ ಇದ್ದಿರಲಿಲ್ಲ. ಅದಕ್ಕೆ ಸರಳವಾಗಿ "ಇಲ್ಲಿ ನೋಡು, ನಾನು ಈಗ ಹೋಗ್ತಾ ಇರೋದು ಶೆಡ್ಯೂಲ್ಡ್ ಇಂಟರ್‌ವ್ಯೂಗೆ. ನನ್ನ ಪರಿಚಯಸ್ಥರೊಬ್ಬರು ನನಗೆ ಈ ಕಂಪನಿಯಲ್ಲಿ ರೆಫರ್ ಮಾಡಿದಾರೆ, ಹಾಗೆಲ್ಲಾ ನಿನ್ನನ್ನ ಕರೆದುಕೊಂಡು ಹೋಗಲು ಆಗುವುದಿಲ್ಲ" ಅಂತ ಹೇಳಿದೆ. ಅದಕ್ಕೆ ಅವನು "ಒಂದು ವೇಳೆ ಪೊಸಿಶನ್ಸ್ ಜಾಸ್ತಿ ಇದ್ರೆ ನನಗೂ ಅವಕಾಶ ಸಿಗಬಹುದು, ದಯವಿಟ್ಟು ಕರ್ಕೊಂಡು ಹೋಗು" ಅಂತ ದುಂಬಾಲು ಬಿದ್ದ. ನನಗೆ ಅರ್ಥ ಆಯ್ತು, ಶನಿ ಹೆಗಲಿಗೆ ಏರಿದ ಮೇಲೆ ಏನು ಮಾಡಿದರೂ ತಪ್ಪಿಸಿಕೊಳ್ಳೋಕೆ ಆಗಲ್ಲ ಅಂತ. ನನಗೆ ಎಷ್ಟು  ಪೊಸಿಶನ್ ಗಳಿಗೆ ಇಂಟರ್‌ವ್ಯೂ ನಡೀತಾ ಇದೆ ಎಂಬುದು ಗೊತ್ತಿರಲಿಲ್ಲ. ಬಹುಶಃ ೩ ರಿಂದ ೪ ಜನರನ್ನಾದರೂ ಆಯ್ಕೆ ಮಾಡ್ತಾರೆ ಅಂತ ಊಹಿಸಿ ನಾನು "ಆಯ್ತು, ಬೇಗ ತಯಾರ ಆಗು" ಅಂದೆ. ಅದಕ್ಕೆ ಅವನು ಜಿಂಕೆಯಂತೆ ಹಾಸಿಗೆಯಿಂದ ಜಿಗಿದು ೫ ನಿಮಿಷದಲ್ಲಿ ತಯಾರಾದ.

                ಇಬ್ಬರು ಕೂಡಿಕೊಂಡು ಆ ಕಂಪನಿ ಹತ್ತಿರ ಬಂದಾಗ ೮.೨೫ ಆಗಿತ್ತು. ನಮಗಿಂತ ಮೊದಲೇ ಅಲ್ಲಿ ಇನ್ನಿಬ್ಬರು ಬಂದು ಕೂತಿದ್ರು. ನಾನು ಕುಮಾರ್ ಅವರನ್ನು ಒಬ್ಬನೇ ಭೇಟಿ ಆಗಿ ವಿಚಾರಿಸಿದಾಗ ತಿಳಿಯಿತು ಪೊಸಿಶನ್ಸ್ ಇದ್ದುದು ಮೂರು, ಅದರಲ್ಲಿ ಅವರಿಗೆ ಬೇಕಾದದ್ದು ಇಬ್ಬರು ಡೆವೆಲಪರ್ಸ್ ಮತ್ತು ಒಬ್ಬ ಟೆಸ್ಟರ್. ಅಂತೂ ನನ್ನ ಊಹೆ ಸರಿ ಆಗಿತ್ತು. ಆಗ ನಾನು ನನ್ನ ಮಿತ್ರನನ್ನು ಕರೆದುಕೊಂಡು ಬಂದಿದುರಲ್ಲಿ ತಪ್ಪೇನಿಲ್ಲ ಅಂತ ಅನ್ನಿಸ್ತು. ಅಲ್ಲಿ ಕುಳಿತವರ ಬಗ್ಗೆ ಕೇಳಿದಾಗ ಅವರು ಬೇರೆಯವರ ರೆಫರಲ್ಸ್ ಇರಬಹುದು ಅಂತ ಅಂದರು. ಹಾಗೆನೆ ನನ್ನ ಮಿತ್ರನು ಕೂಡ ಬೇರೆಯವರ ರೆಫರಲ್ ಇರಬಹುದು ಅಂತ ಅಂದುಕೊಂಡರು. ಅವರಿಗೇನು ಗೊತ್ತು ಅವನು ಇನ್ನೂ ಆಯ್ಕೆ ಆಗದೆ ಇರುವ ನನ್ನ ರೆಫರಲ್ ಅಂತ.  ಅಲ್ಲಿ ಕೂತವರನ್ನು ಕೇಳಿದಾಗ, ಅವರನ್ನ ಟೆಸ್ಟರ್ ಪೊಸಿಶನ್ ಗೆ ಕರೆದಿದ್ದಾರೆ ಅಂತ ತಿಳಿಯಿತು. ಅಂದರೆ ಉಳಿದ ಎರಡು ಡೆವೆಲಪರ್ ಪೊಸಿಶನ್ ಗೆ ನಾನು ಹಾಗೂ ನನ್ನ ಮಿತ್ರನ ಆಯ್ಕೆ ಖಂಡಿತ ಅಂತ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾ ಕೂತೆ. ಮೊದಲು ಅಲ್ಲಿ ಕೂತಿದ್ದ ಇಬ್ಬರನ್ನು ಒಬ್ಬೊಬ್ಬರಾಗಿ ಒಳಗೆ ಕರೆಯಲಾಯಿತು. ಅವರಾದ ಮೇಲೆ ನಾನು ಹಾಗೂ ನಂತರ ನನ್ನ ಮಿತ್ರನ ಇಂಟರ್‌ವ್ಯೂ ಮುಗಿಯಿತು. ನನ್ನ ಇಂಟರ್‌ವ್ಯೂ ಚೆನ್ನಾಗಿಯೇ ಆಗಿತ್ತು. ನನ್ನ ಮಿತ್ರನ ಕೇಳಿದೆ "ನಿನ್ನ ಇಂಟರ್‌ವ್ಯೂ ಹೇಗಾಯ್ತು?" ಅವನು ಅದಕ್ಕೆ "ಪರವಾಗಿಲ್ಲ, ಚೆನ್ನಾಗಾಯ್ತು" ಅಂದ. ಫಲಿತಾಂಶವನ್ನು ನಾವು ನಿಮಗೆ ಈ-ಮೈಲ್ ಮೂಲಕ ತಿಳಿಸುತ್ತೇವೆ ಅಂತ ಹೇಳಿ ನಮ್ಮನ್ನು ಕಳಿಸಿದರು.

               ಇಂಟರ್‌ವ್ಯೂ ಮುಗಿದು ೨ ದಿನಗಳು ಕಳೆದಿದ್ದವು ಇನ್ನೂ ಆದರೂ ಮೈಲ್ ಬಂದಿರಲಿಲ್ಲ. ಕೂತುಹಲ ತಾಳಲಾರದೇ ನಾನೇ ಕುಮಾರ್ ಅವರಿಗೆ ಫೋನ್ ಮಾಡಿ ಕೇಳಿದೆ, ಅದಕ್ಕೆ ಅವರು "ಕ್ಷಮಿಸಿ, ಪೊಸಿಶನ್ಸ್ ಇದ್ದದ್ದು ಕೇವಲ ಎರಡು. ಒಂದು ಡೆವೆಲಪರ್ ಗೆ ಹಾಗೂ ಇನ್ನೊಂದು ಟೆಸ್ಟರ್ ಗೆ. ಟೆಸ್ಟರ್ ಪೊಸಿಶನ್ ಗೆ ನಿನ್ನೆನೆ ಒಬ್ಬರಿಗೆ ಆಫರ್ ಮಾಡಲಾಯಿತು" ಇದನ್ನು ಕೇಳಿ ನನ್ನ ಕೈ ನಡಗುತ್ತಾ ಇತ್ತು, "ಆದರೆ, ಡೆವೆಲಪರ್ ಪೊಸಿಶನ್ ಗೆ ನೀವು ಮತ್ತು ಆವತ್ತೂ ನಿಮ್ಮ ಪಕ್ಕದಲ್ಲಿ ಕೂತಿದ್ದ ಇನ್ನೊಬ್ಬರ ಮಧ್ಯ ಸ್ಪರ್ಧೆ ಇದೆ, ಬಹುಶಃ ನೀವಿಬ್ಬರೂ ಇನ್ನೊಮ್ಮೆ ೨ನೇ ಹಂತದ ಇಂಟರ್‌ವ್ಯೂಗೆ ಬರಬೇಕಾಗಬಹುದು. ಇವತ್ತು ಸಾಯಂಕಾಲದ ಒಳಗಾಗಿ ನಿಮಗೆ ಮೈಲ್ ಬರುತ್ತೆ. ಆಲ್ ದ ಬೆಸ್ಟ್" ಅಂತ ಹೇಳಿ ಮುಗಿಸಿದರು. ಇದನ್ನು ಕೇಳಿ ನಾನು ಒಂದೆರಡು ನಿಮಿಷ ಸ್ಥಂಭಿಭೂತನಾಗಿ ನಿಂತುಬಿಟ್ಟೆ. ತಲೆಯನ್ನು ಚಚ್ಚಿಕೊಳ್ಳುವ ಹಾಗೆ ಆಗಿತ್ತು. ಏನೋ ಉಪಕಾರ ಮಾಡಲು ಹೋಗಿ, ನನಗೆ ಸಿಗುತ್ತಿದ್ದ ಕೆಲಸಕ್ಕೆ ನಾನೇ ಕುತ್ತನ್ನು ತಂದುಕೊಂಡ ಹಾಗಾಗಿತ್ತು. ಇದನ್ನು ನನ್ನ ಮಿತ್ರನಿಗೆ ಹೇಳಲಾಗಿ, ಅವನು ಏನೂ ಮಾತನಾಡಲಾರದೇ ಸುಮ್ಮನೇ ಹೊರಟು ಹೋದ. ಆ ದಿನ ಸಾಯಂಕಾಲ ಇಬ್ಬರಿಗೂ ೨ನೇ ಹಂತದ ಇಂಟರ್‌ವ್ಯೂಗೆ ೨೦ನೇ ತಾರೀಖಿನಂದು ಬರಬೇಕು ಅಂತ ಮೈಲ್ ಬಂದಿತ್ತು. ನನಗೆ ಅಳುವ ಹಾಗೆ ಆಗಿತ್ತು. ನನ್ನ ಮುಂದೆ ಇದ್ದುದು ಕೇವಲ ಎರಡು ಮಾರ್ಗಗಳು. ಮೊದಲನೆಯದು, ೨ನೇ ಹಂತದ ಇಂಟರ್‌ವ್ಯೂನಲ್ಲಿ ನಾನು ಅವನಿಗಿಂತ ಚೆನ್ನಾಗಿ ಮಾಡಿ ಕೆಲಸ ತಗೊಳ್ಳೋದು. ಇದು ಅತಿ ನೈತಿಕವಾದ ಆದ್ರೆ ಆಯ್ಕೆ ಆಗುತ್ತೇನೆ ಎಂಬುದರ ಖಚಿತತೆ ಇಲ್ಲದೇ ಇರುವ ಮಾರ್ಗ. ಎರಡನೆಯದು, ಅವನನ್ನು ಸ್ಪರ್ಧೆಯಿಂದ ಹೊರಗೆ ಉಳಿಯುವಂತೆ ಮಾಡುವುದು. ಇದು ಅನೈತಿಕವಾದ ಆದರೆ ಖಚಿತತೆ ಇರುವ ಮಾರ್ಗ. ಮೊದಲನೆ ಮಾರ್ಗದಂತೆ ನಡೆಯಲು ನಾನು ಸಿದ್ಧನಿದ್ದೆ. ಆದರೂ ಒಮ್ಮೆ ಯಾಕೆ ಅವನನ್ನು ಕೇಳಿ ಸ್ಪರ್ಧೆಯಿಂದ ಹೊರಗೆ ಉಳಿಯುವಂತೆ ವಿನಂತಿ ಮಾಡಿಕೊಂಡರೆ ಅವನು ಹೂಂ ಅಂದರು ಅನ್ನಬಹುದು ಅಂತ ಲೆಕ್ಕ ಹಾಕಿ, ನನ್ನ ಇತರ ಗೆಳೆಯರ ಮೂಲಕ ಅವನಿಗೆ ಹೇಳಿಸಿದೆ. ಅದಕ್ಕೆ ಅವನು "ನನ್ನ ಪರಿಸ್ಥಿತಿ ನಿಮಗೆ ಗೊತ್ತಲ್ಲ, ಆದರೂ ನಾನು ಇಂಟರ್‌ವ್ಯೂನಲ್ಲಿ ಅವನಷ್ಟು ಚೆನ್ನಾಗಿ ಮಾಡೋಲ್ಲ" ಅಂತ ಕಡ್ಡಿನ ಎರಡು ತುಂಡು ಮಾಡೋ ಹಾಗೆ ಹೇಳಿದ. ಅಂದರೆ ಅವನು ೨ನೇ ಹಂತದ ಇಂಟರ್‌ವ್ಯೂಗೆ ಹೋಗೋದು ಖಚಿತ ಎಂದಾಯಿತು.

               ಈಗ ನನ್ನ ಹತ್ತಿರ ಉಳಿದದ್ದು ಒಂದೇ, ಅವನಿಗೆ ಶಾಪ ಹಾಕೋದು. ಆ ದಿನ ರಾತ್ರಿ ಪೂರ್ತಿ ಶಾಪ ಹಾಕಿದೆ. ನಾನು ಹಾಕಿದ ಶಾಪ ಅಷ್ಟು ಬೇಗನೆ ಕೆಲಸ ಮಾಡುತ್ತೆ ಅಂತ ನನಗೆ ಅನಿಸಿರಲಿಲ್ಲ. ಮುಂದಿನ ದಿನ ಸಂಜೆ ವೇಳೆಗೆ ನನ್ನ ಮಿತ್ರ ವಿಪರೀತ ಜ್ವರ ಹಾಗೂ ತಲೆನೋವು ಅಂತ ಗೋಗರೆಯಲು ಹತ್ತಿದ. ಆಗ ಮನೆಯಲ್ಲಿ ಇದ್ದುದು ನಾನೊಬ್ಬನೇ. ಇದೇನಪ್ಪ ಗ್ರಹಚಾರ ಅಂತ ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅವರು ರಕ್ತ ಪರೀಕ್ಷೆ ಮಾಡಿ, ನೈಟ್ ಡ್ಯೂಟೀ ಡಾಕ್ಟರ್ ಇನ್ನೂ ಬಂದಿಲ್ಲ ಅವರು ಬಂದ ಮೇಲೆ ರಿಸಲ್ಟ್ ಹೇಳ್ತಿವಿ, ಅವರು ಬರೋವರೆಗೆ ಇವರಿಗೆ ಬೆಡ್ ರೆಸ್ಟ್ ಬೇಕು ಅಂತ ಅವನನ್ನ ಅಡ್ಮಿಟ್ ಮಾಡಿಕೊಂಡುಬಿಟ್ಟರು. ನನಗೆ ಏನೂ ತಿಳಿಯಲಿಲ್ಲ. ಆಮೇಲೆ ರೂಮಿಗೆ ಬಂದು ಇತರ ಗೆಳೆಯರಿಗೆ ಹೇಳಿದೆ. ಎಲ್ಲರೂ ರಾತ್ರಿ ಊಟ ಮುಗಿಸಿಕೊಂಡು ಆಸ್ಪತ್ರೆಗೆ ಹೋದ್ವಿ. ಆಗ ನೈಟ್ ಡ್ಯೂಟೀ ಡಾಕ್ಟರ್ ಬಂದಿದ್ರು. ನಮ್ಮನ್ನು ಒಳಗೆ ಕರೆದು "ನೋಡಿ, ನಿಮ್ಮ ಗೆಳೆಯನಿಗೆ ವೈರಲ್ ಫೀವರ್. ಅವನಿಗೆ ಇಂತಿಷ್ಟೇ ದಿನ ಬೆಡ್ ರೆಸ್ಟ್ ಬೇಕು ಅಂತ ಹೇಳೋಕೆ ಆಗಲ್ಲ. ಅದೆಲ್ಲ ಅವನ ಶರೀರ ಯಾವ ರೀತಿ ರಿಯಾಕ್ಟ್ ಮಾಡುತ್ತೆ ಅನ್ನೋದನ್ನು ಅವಲಂಬಿಸುತ್ತೆ. ಸದ್ಯಕ್ಕೆ ಅವನಿಗೆ ೩ ದಿನ ಬೆಡ್ ರೆಸ್ಟ್ ಬೇಕು. ನಿಮ್ಮನ್ನ ನೋಡಿದರೆ ರೂಮ್ಮೇಟ್ಸ್ ಕಂಡ ಹಾಗೆ ಕಾಣತೀರಾ. ನಿಮಗೆ ಅವನನ್ನು ಚೆನ್ನಾಗಿ ನೋಡಿಕೊಳ್ಳೋಕೆ ಆಗುತ್ತೋ ಇಲ್ಲೊ. ಅವನು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಬೆಡ್ ರೆಸ್ಟ್ ತಗೋತಾ ಇರ್ಲಿ. ನೀವು ಆಗಾಗ ಬಂದು ನೋಡಿಕೊಂಡು ಹೋಗ್ತಾ ಇರಿ" ಅಂತ ಹೇಳಿ ಮುಗಿಸಿದರು. ನನಗೆ ಒಂದು ಕಡೆ ಸಂತೋಷ ಮತ್ತು ಇನ್ನೊಂದು ಕಡೆ ದುಃಖ ಎರಡೂ ಆಗ್ತಾ ಇತ್ತು. ಸಂತೋಷ ಯಾಕೆ ಅಂದರೆ ನನ್ನ ಶಾಪ ಫಲಿಸಿತಲ್ಲ ಅಂತ. ದುಃಖ ಯಾಕೆ ಅಂದರೆ ಅವನಿಗೆ ಕೇವಲ ೩ ದಿನ ಮಾತ್ರ ಬೆಡ್ ರೆಸ್ಟ್ ಹೇಳಿದ್ದಾರಲ್ಲ ಅಂತ. ೨ನೇ ಹಂತದ ಇಂಟರ್‌ವ್ಯೂಗೆ ಇನ್ನೂ ೫ ದಿನ ಬಾಕಿ ಇತ್ತು. ಒಂದು ೫ -೭ ದಿನ ಬೆಡ್ ರೆಸ್ಟ್ ಹೇಳಿದ್ರೆ ಅವನಿಗೆ ಇಂಟರ್‌ವ್ಯೂ ಅಟೆಂಡ್ ಮಾಡಲು ಆಗ್ತಾ ಇರಲಿಲ್ಲ ಅಂತ ಮನಸ್ಸು ಲೆಕ್ಕ ಹಾಕ್ತಾ ಇತ್ತು. ವೈದ್ಯರನ್ನು  ಭೇಟಿ ಮಾಡಿ ಅವನನ್ನು ಒಂದು ವಾರದ ವರೆಗೆ ಇಲ್ಲೇ ಇಟ್ಟುಕೊಳ್ಳಿ ಅಂತ ಕೇಳಬೇಕು ಅಂತ ಅನ್ನಿಸ್ತಾ ಇತ್ತು. ಕೊನೆಗೆ ಅವರು ಹೇಳಿದ ಒಂದು ಮಾತಿನ("ಅವನಿಗೆ ಇಂತಿಷ್ಟೇ ದಿನ ಬೆಡ್ ರೆಸ್ಟ್ ಬೇಕು ಅಂತ ಹೇಳೋಕೆ ಆಗಲ್ಲ. ಅದೆಲ್ಲ ಅವನ ಶರೀರ ಯಾವ ರೀತಿ ರಿಯಾಕ್ಟ್ ಮಾಡುತ್ತೆ ಅನ್ನೋದನ್ನು ಅವಲಂಬಿಸುತ್ತೆ. ಸದ್ಯಕ್ಕೆ ಅವನಿಗೆ ೩ ದಿನ ಬೆಡ್ ರೆಸ್ಟ್ ಬೇಕು") ಮೇಲೆ ನನಗೆ ಏನೋ ದೂರದ ಆಸೆ ಉಂಟಾಗಿ ಸುಮ್ಮನೇ ಆದೇ.

               ಅವನು ಅಡ್ಮಿಟ್ ಆಗಿ ಆಗಲೇ ೩ ದಿನ ಆಗಿತ್ತು. ನಾನು ನಾಲ್ಕನೆಯ ದಿನ ವೈದ್ಯರು ಏನು ಹೇಳ್ತಾರೆ ಅಂತ ಕಾಯ್ತಾ ಇದ್ದೆ. ನಾಲ್ಕನೆಯ ದಿನ ಮುಂಜಾನೆ ನಾನು ಎಲ್ಲರಿಗಿಂತ ಬೇಗ ಎದ್ದು, ಹತ್ತಿರದ ಗಣೇಶನ ದೇವಸ್ಥಾನಕ್ಕೆ ಹೋದೆ. "ದೇವರೇ ಇವತ್ತು ಮುಂಜಾನೆ ನಾನು ಕಂಡ ಕನಸು, ನನಸು ಆದರೆ ನಾನು ನಿನಗೆ ನನ್ನ ಮೊದಲ ಸಂಬಳದ ಅರ್ಧ ಭಾಗವನ್ನು ನಿನ್ನ ಹುಂಡಿಗೆ ಹಾಕ್ತೀನಿ" ಅಂತ ದೇವರಿಗೆ ಆಸೆ ತೋರಿಸಿದೆ. ಆಮೇಲೆ ಎಲ್ಲರೂ ಆಸ್ಪತ್ರೆಗೆ ಹೋದ್ವಿ. ವೈದ್ಯರು ನಮ್ಮನ್ನು ಕರೆದು "ಪರವಾಗಿಲ್ಲ, ನಿಮ್ಮ ಗೆಳೆಯ ತುಂಬಾ ಬೇಗನೆ ಗುಣಮುಖ ಆಗ್ತಾ ಇದಾನೆ. ನೀವು ಅವನನ್ನು ಇವತ್ತು ಸಂಜೆ ಕರೆದುಕೊಂಡು ಹೋಗಬಹುದು. ನಾನು ಕೆಲವು ಮಾತ್ರೆಗಳನ್ನು ಬರೆದು ಕೊಡ್ತೀನಿ, ಇವನ್ನು ನಿಯಮಿತವಾಗಿ ಅವನಿಗೆ ತೆಗೆದುಕೊಳ್ಳಲು ಹೇಳಿ" ಅಂತ ತಮ್ಮ ಡೈಲಾಗ್ ಹೇಳಿ ಹೋದರು. ನನ್ನ ಆಸೆಗೆ ತಣ್ಣೀರು ಎರಚಿದಂತಾಗಿತ್ತು. ಗಣೇಶ ನನ್ನ ಮೇಲೆ ಮುನಿಸಿಕೊಂಡಿದ್ದ. ೨ನೆಯ ಹಂತದ ಇಂಟರ್‌ವ್ಯೂಗೆ ಕೇವಲ ಎರಡು ದಿನ ಬಾಕಿ ಇತ್ತು. ಅಂದು ಸಂಜೆ ಅವನು ಮನೆಗೆ ಬಂದ. ಆಸ್ಪತ್ರೆ ಬಿಲ್ಲನ್ನು ನನ್ನ ಇತರ ಗೆಳೆಯರು ಕಟ್ಟಿದ್ದರು. ಅವನ ಸ್ಥಿತಿ ನೋಡಿ ನನ್ನ ಮನಸ್ಸು ಕರಗಿತು. ಭೀಮನ ಹಾಗೆ ಇದ್ದವನು ಈಗ ಕೃಶವಾಗಿ ಹೋಗಿದ್ದ. ನಾನು ಇಷ್ಟೊಂದು ಶಾಪ ಹಾಕಬಾರದಾಗಿತ್ತು ಅಂತ ಅನ್ನಸ್ತು. "ಆದದ್ದು ಆಯ್ತು, ಈಗ ನಮಗೆ ಇರೋದು ಕೇವಲ ಒಂದೂವರೆ ದಿನ ಮಾತ್ರ. ಇಬ್ಬರೂ ಕೂಡಿ ಇಂಟರ್‌ವ್ಯೂ ಅಟೆಂಡ್ ಮಾಡೋಣ, ಅಂತಿಮ ಫಲಿತಾಂಶ ಆ ದೇವರು ಬಗೆದ ಹಾಗೆ ಆಗಲಿ" ಅಂತ ಅವನಿಗೆ ಧೈರ್ಯ ಹೇಳಿದೆ. ಅವನು ಹೆಚ್ಚು ಮಾತನಾಡದೆ "ಹೂಂ" ಅಂದ. ಮಾರನೆ ದಿನ ಇಬ್ಬರೂ ಕೂತು ತಯಾರಿ ನಡೆಸಿದೆವು.

               ಅಂತೂ ನಮ್ಮಿಬ್ಬರ ಅದೃಷ್ಟ ಪರೀಕ್ಷೆಯ ದಿನ ಬಂದೇ ಬಿಟ್ಟಿತು. ಇಬ್ಬರೂ ಸಿದ್ಧರಾಗಿ ಇಂಟರ್‌ವ್ಯೂಗೆ ಹೋದೆವು. ಇಬ್ಬರಿಗೂ ಗೊತ್ತಿತ್ತು ನಮ್ಮಿಬ್ಬರಲ್ಲಿ ಒಬ್ಬರ ವಿಕೆಟ್ ಉರುಳುವದು ಖಂಡಿತ ಅಂತ. ಆದರೆ ಹಿಟ್ ವಿಕೆಟ್ ಆಗಿ ಔಟ್ ಆಗುವುದಕ್ಕಿಂತ, ವೀರಾವೇಶದಿಂದ ಅವರು ಹಾಕುವ ಬೌನ್ಸರ್ ಮತ್ತು ಗೂಗ್ಲಿಗೆ ಉತ್ತರ ಕೊಟ್ಟು ನಮ್ಮ ಕೈಲಾದ ಸ್ಕೋರ್ ಮಾಡಿ ಬರೋಣ, ಆಯ್ಕೆ ಅವರಿಗೆ ಬಿಟ್ಟಿದ್ದು ಅಂತ ರಿಸೆಪ್ಶನ್ ಜಾಗದಲ್ಲಿ ಮಾತಾಡಿಕೊಂಡೆವು. ಮೊದಲಿಗೆ ಅವರು ನನ್ನ ಮಿತ್ರನನ್ನು ಇಂಟರ್‌ವ್ಯೂಗೆ ಒಳಗೆ ಕರೆದರು. ೧೫ ನಿಮಿಷಗಳಾದ ಮೇಲೆ ಅವನು ಹೊರಗೆ ಬಂದ. ಅವನ ಮುಖದಲ್ಲಿ ಗೆಲುವಿನ ನಗು ಕಾಣತಾ ಇತ್ತು. ನನ್ನ ವಿಧಿ ಸರಿ ಇಲ್ಲ ಅಂತ ನಾನು ಅನ್ಯಮನಸ್ಕನಾಗಿ ಕುಳಿತುಕೊಂಡೆ. ಅವನು ನನ್ನ ಹತ್ತಿರ ಬಂದು ನನ್ನ ಕಿವಿಯಲ್ಲಿ ಏನೋ ಪಿಸುಗುಟ್ಟಿದ. ಅದು ನನಗೆ ಅರ್ಥ ಆಗಲಿಲ್ಲ, ಸುಮ್ಮನೇ ಕೂತುಕೊಂಡಿದ್ದೆ. ಆಮೇಲೆ ಅವರು ನನ್ನನ್ನು ಒಳಗೆ ಕರೆದರು. ನಾನು ಸೋಲನ್ನು ಒಪ್ಪಿಕೊಂಡ ಬ್ಯಾಟ್ಸ್ಮನ್ ಹಾಗೆ ಒಳಗೆ ಹೋದೆ. ಏನೋ ೪ ಸರಳವಾದ ಪ್ರಶ್ನೆಗಳನ್ನು ಕೇಳಿದರು, ಎಲ್ಲದಕ್ಕೂ ಸರಿಯಾಗಿ ಉತ್ತರ ಕೊಟ್ಟು ಹೊರಗೆ ಬಂದೆ. ನನ್ನ ಮಿತ್ರ ನನ್ನ ಮುಖಚಹರೆಯನ್ನು ಗಮನಿಸುತ್ತಿದ್ದ. ಆದರೂ ನಾನು ಏನೂ ಮಾತನಾಡದೇ ಅವನ ಪಕ್ಕದಲ್ಲಿ ಹೋಗಿ ಸುಮ್ಮನೇ ಕುಳಿತೆ. ಅವರು ಯಾಕೆ ನನಗೆ ಇಷ್ಟು ಸುಲಭವಾದ ಪ್ರಶ್ನೆಗಳನ್ನು ಕೇಳಿದರು ಎಂಬುದು ನನಗೆ ಹೊಳೆಯಲಿಲ್ಲ.

               ಬಹುಶಃ ಕೇವಲ ಔಚಿತ್ಯಕ್ಕಾಗಿ ನನ್ನನ್ನ್ ಒಳಗೆ ಕರೆದು ಸರಳವಾದ ಪ್ರಶ್ನೆಗಳನ್ನ ಕೇಳಿ ನನಗೆ ಗೇಟ್ ಪಾಸ್   ಕೊಡಬಹುದು ಅಂತ ಲೆಕ್ಕ ಹಾಕಿದೆ. ನನ್ನ ಮಿತ್ರ ಮತ್ತೆ ನನ್ನ ಕಿವಿಯಲ್ಲಿ "ಅಲ್ಲಿ ಇರುವ ಒಬ್ಬರನ್ನು ನಾನು ಎಲ್ಲೋ ನೋಡಿದ್ದೀನಿ" ಅಂತ ಪಿಸುಗುಟ್ಟಿದ. ನಾನು ಏನೂ ಮಾತನಾಡಲಿಲ್ಲ. ೧೦ ನಿಮಿಷವಾದ ಬಳಿಕ ಅವರು ನಮ್ಮಿಬ್ಬರನ್ನೂ ಒಳಗೆ ಕರೆದರು. ನನಗೆ ಇದು ಅರ್ಥವಾಗಲಿಲ್ಲ. ಒಳಗೆ ಕರೆದು ಒಂದು ಡಿಸ್ಕಶನ್ ರೂಮಿನಲ್ಲಿ ಕೂರಲು ಹೇಳಿ ಹೋದರು. ಬಹುಶಃ ಇದು ರ್‍ಯಾಪಿಡ್ ಫೈಯರ್ ರೌಂಡ್ ಇರಬೇಕು, ಯಾರು ಮೊದಲು ಅವರು ಕೇಳುವ ಪ್ರಶ್ನೆಗೆ ಉತ್ತರ ಹೇಳುತ್ತಾರೋ ಅವರಿಗೆ ಕೆಲಸ ಸಿಗಬಹುದು ಅಂತ ನನ್ನ ಮನಸ್ಸು ಊಹಿಸಿತು. ೫ ನಿಮಿಷಗಳಾದ ಮೇಲೆ, ಯಾರೋ ಒಬ್ಬರು ಒಳಗೆ ಬಂದು ನಮ್ಮ ಮುಂದೆ ಕೂತು ಮುಗುಳ್ನಗೆ ಕೊಟ್ಟರು. ನಾವು ಮುಗುಳ್ನಗೆ ಬೀರಿದೆವು. ಅವರ ಕೈಯ್ಯಲ್ಲಿ ಏನೋ ಕಾಗದ  ಇದ್ದುವು. ಪ್ರಶ್ನೆ ಪತ್ರಿಕೆಗಳು ಇರಬಹುದು ಅಂತ ಅಂದುಕೊಂಡೆ. ಅವರು "ಗೊತ್ತಾಯ್ತಾ ನಾನು ಯಾರು ಅಂತ" ಎಂದು ಪ್ರಶ್ನೆ ಹಾಕಿದರು. ನಾನು ಅವರನ್ನು ಎಲ್ಲೋ ನೋಡಿದ ನೆನಪು ಆದರೆ ಯಾರು ಅಂತ ಗೊತ್ತಾಗಲಿಲ್ಲ. ಆದರೆ ನನ್ನ ಮಿತ್ರ ಅವರನ್ನು ಗುರುತಿಸಿ "ನಾನು ನಿಮ್ಮನ್ನ ನಮ್ಮ  ಕಾಲೇಜಿನಲ್ಲಿ ನೋಡಿದ್ದೇನೆ" ಅಂತ ಉಸುರಿಬಿಟ್ಟ. ಅದಕ್ಕೆ ಅವರು "ಯೂ ಆರ್  ಕರೆಕ್ಟ್" ಅಂತ ಹೇಳಿ ಪುನಃ ಮುಗುಳ್ನಗೆ ಕೊಟ್ಟರು. ನನಗೆ ಈಗ ಅಳುವ ಹಾಗೆ ಆಗಿತ್ತು. ಯಾಕೆ ಅಂದರೆ ಈ ರ್‍ಯಾಪಿಡ್ ಫೈಯರ್ ರೌಂಡಿನಲ್ಲೂ ಕೂಡ ನನ್ನ ಮಿತ್ರನೇ ಗೆದ್ದುಬಿಟ್ಟಿದ್ದ. ನಮ್ಮ ಪ್ರಶ್ನಾರ್ಥಕ ಮುಖಗಳನ್ನು ಗಮನಿಸಿದ ಅವರು, ತಾವಾಗಿಯೇ ಮುಂದುವರೆದು "ನನ್ನ ಹೆಸರು ಹರೀಶ್ ಅಂತ, ನಾನು ನಿಮ್ಮ ಕಾಲೇಜಿನ ತುಂಬಾ ಹಳೆಯ ವಿದ್ಯಾರ್ಥಿ. ನಿಮ್ಮ ಸೀನಿಯರ್, ಅಂದರೆ ನಿಮ್ಮ ಬ್ರ್ಯಾಂಚ್ ನಲ್ಲೇ ನಾನು ಓದಿದ್ದು. ನಾನು ಆವಾಗ ಆವಾಗ ಕಾಲೇಜಿಗೆ ಹೋಗ್ತಾ ಇರ್ತೀನಿ. ನಾನು ಅಲ್ಲಿಯ ಪ್ಲೇಸ್‌ಮೆಂಟ್ ಡಿಪಾರ್ಟ್‌ಮೆಂಟ್ ಗೆ  ನನ್ನ ಕೈಲಾದ ಸಹಾಯ ಮಾಡತೀನಿ. ಈಗ ನಾನು ಈ ಕಂಪನಿಯಲ್ಲಿ ಡೆಲಿವರೀ ಹೆಡ್ ಆಗಿ ಕೆಲಸ ಮಾಡ್ತಾ ಇದೀನಿ. ನಿಮ್ಮಿಬ್ಬರನ್ನು ಭೇಟಿಯಾಗಿದ್ದು ಒಳ್ಳೆಯದಾಯ್ತು. ನನ್ನಿಂದ ನನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಾಯ ಆಗೋದಾದ್ರೆ ಅದಕ್ಕಿಂತ ದೊಡ್ಡ ಭಾಗ್ಯ ಬೇರೆ ಏನೂ ಇಲ್ಲ. ವೆಲ್‌ಕಮ್ ಆನ್ ಬೋರ್ಡ್" ಅಂತ ಹೇಳಿ ನಮಗೆ ತಮ್ಮ ಕೈಯ್ಯಲ್ಲಿದ್ದ ಪೇಪರ್ ಗಳನ್ನು ಕೊಟ್ಟು ಹೊರಟು ಹೋದರು.

               ಪೇಪರ್ ಗಳನ್ನು ಕಣ್ಣು ಎವೆಯಿಕ್ಕದೆ ಒಂದು ಅಕ್ಷರಾನೂ ಬಿಡದ ಹಾಗೆ ಓದಿದೆವು. ನಮ್ಮ ಕಣ್ಣುಗಳನ್ನು ನಮಗೆ ನಂಬಲಿಕ್ಕೆ ಆಗಲಿಲ್ಲ. ನಾನು ಯಾವುದನ್ನು ಪ್ರಶ್ನೆ ಪತ್ರಿಕೆಗಳು ಅಂತ ತಿಳಿದುಕೊಂಡಿದ್ದೆನೋ ಅವು ಆಫರ್ ಲೆಟರ್ ಗಳಾಗಿದ್ದವು. ಸ್ವಲ್ಪ ಸಮಯದ ನಂತರ ಒಂದು ಲೇಡೀ ಬಂತು. "ನಿಮ್ಮ ಕೈಲಿ ಇರೋದು ಆಫರ್ ಲೆಟರ್ ನ  ನಕಲು ಪ್ರತಿಗಳು, ನಿಮಗೆ ಈ ಆಫರ್ ಇಷ್ಟ ಆಗಿದ್ರೆ, ನಿಮ್ಮ ಹಸ್ತಾಕ್ಷರ ಹಾಕಿ ನಿಮ್ಮ ಸಮ್ಮತಿಯನ್ನು ಕೊಡಬಹುದು. ಆಮೇಲೆ ನಾನು ನಿಮಗೆ ಒರಿಜಿನಲ್ ಆಫರ್ ಲೆಟರ್ ಕೊಡ್ತೀನಿ" ಎಂದು ಹೇಳಿ ನಮ್ಮ ಸಮ್ಮತಿಗಾಗಿ ಕಾಯುತ್ತಾ ಕುಳಿತುಕೊಂಡಿತು. ಇಷ್ಟ ಆಗಿದ್ರೆ! ಹೊಟ್ಟೆ ಹಸಿದವನಿಗೆ ಏನೂ ಕೊಟ್ಟರೂ ತಿನ್ನಲು ರೆಡೀ ಇರ್ತಾನೆ, ಅದು ಹಸಿವಿನ ಮಹಿಮೆ. ನಮ್ಮದು ಹಾಗೆ ನಾವು ಕೆಲಸ ಎಂಬ ಹಸಿವಿನಿಂದ ೯ ತಿಂಗಳು ಬಳಲುತ್ತ ಇದ್ದೆವು. ಈಗ ಅದು ತಾನಾಗಿಯೇ ಒಲಿದು ಬಂದಿತ್ತು. ಕಣ್ಣು ಮುಚ್ಚಿ ಇಬ್ಬರು ಆ ನಕಲು ಪ್ರತಿಗಳಿಗೆ ಹಸ್ತಾಕ್ಷರ ಹಾಕಿ ಕೊಟ್ಟೆವು. ಆ ಲೇಡೀ ಅದಕ್ಕೆ ಕಿಸಕ್ಕನೆ ನಕ್ಕು, ತನ್ನ ಕೈಲಿದ್ದ ಒರಿಜಿನಲ್ ಆಫರ್  ಲೆಟರ್ ಗಳನ್ನು ಕೊಟ್ಟು "ವೆಲ್‌ಕಮ್ ಟು ಎಮ್.ಎ.ಬಿ. ಇನ್ಫೊಟೆಕ್, ಮುಂದಿನ ತಿಂಗಳು ಒಂದನೇ ತಾರೀಖಿನಿಂದು ನೀವು ಬಂದು ಕಂಪನಿ ಸೇರಬಹುದು"  ಅಂತ ಹೇಳಿ ಕೈ ಕುಲುಕಿ ಹೊರಟು ಹೋಯಿತು. ನಮ್ಮಿಬ್ಬರ ಕಣ್ಣಲ್ಲಿ ಆನಂದಭಾಷ್ಪ ಬರುವ ಸಮಯ ಆಗಿತ್ತು. ವಿನ್ ಒಪ್ಪಂದ ಹೇಗೋ ಇಬ್ಬರಿಗೂ ಗುಪ್ತವಾಗಿ ಸಹಾಯ ಮಾಡಿ ಕಣ್ಮರೆಯಾಗಿತ್ತು.

 

 

 

 

Comments