ವಿಸ್ಮಯ ಚಿಂತನ ಮಿಲನ ಹಾಗೂ 'ಕ್ರಿಕೆಟ್ ಯುಗಪುರುಷ: ಸಚಿನ್ ತೆಂಡೂಲ್ಕರ್' ಕೃತಿ ಲೋಕಾರ್ಪಣೆ

ವಿಸ್ಮಯ ಚಿಂತನ ಮಿಲನ ಹಾಗೂ 'ಕ್ರಿಕೆಟ್ ಯುಗಪುರುಷ: ಸಚಿನ್ ತೆಂಡೂಲ್ಕರ್' ಕೃತಿ ಲೋಕಾರ್ಪಣೆ

ಪ್ರಿಯ ಸಂಪದಿಗರೆಲ್ಲರಿಗೂ ನಮಸ್ಕಾರ. ಆರು ತಿಂಗಳ ನಂತರ ನಾನು ಸಂಪದಕ್ಕೆ ಮರಳಿದ್ದೇನೆ. ಕನ್ನಡದಲ್ಲಿ ನಾನು ಮೊದಲನೇ ಬಾರಿಗೆ ಸ್ವತಂತ್ರವಾಗಿ ಬರೆದಿರುವ ಹೊತ್ತಗೆಯೊಂದಿಗೆ. ಆ ಹೊತ್ತಗೆಯೇ 'ಕ್ರಿಕೆಟ್ ಯುಗಪುರುಷ:ಸಚಿನ್ ತೆಂಡೂಲ್ಕರ್'. ಕರ್ನಾಟಕದ ಸಕ್ರಿಯ ಪ್ರಕಾಶಕ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನ ಈ ಹೊತ್ತಗೆಯನ್ನು ಹೊರತಂದಿದ್ದು, ಇದೇ ತಿಂಗಳ 24ರಂದು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಜೆ 5 ಗಂಟೆಗೆ ಈ ಹೊತ್ತಗೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. 

ಇದಕ್ಕೂ ಮೊದಲು ನಾನು ಪಿಯರ್ಸನ್ ಪ್ರಕಟಿಸಿರುವ ಲಾಂಗ್ ಮನ್-ಸಿಐಐಎಲ್ ಇಂಗ್ಲಿಶ್-ಇಂಗ್ಲಿಶ್-ಕನ್ನಡ ನಿಘಂಟುವಿಗೆ ಸಹಾಯಕ ಸಂಪಾದಕನಾಗಿ ಕೆಲಸ ಮಾಡಿದ್ದೆ. ಆನಂತರ, ವಿಸ್ಮಯ ಪ್ರಕಾಶನದವರೇ ನನ್ನಿಂದ ಸಾಮಾಜಿಕ ಕಾರ್ಯಕರ್ತ, ಬರೆಹಗಾರ, ಪ್ರಾಧ್ಯಾಪಕ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟನ್ನು ಹುಟ್ಟಿಹಾಕದ ಡಾ. ಆರ್. ಬಾಲಸುಬ್ರಮಣ್ಯಮ್ ರವರು ಇಂಗ್ಲಿಶ್ ನಲ್ಲಿ ಹಲವಾರು ದಿನಪತ್ರಿಕೆಗಳಿಗೆಂದು ಬರೆದಿದ್ದ ಬರೆಹಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿದ್ದರು. ಈ ಹೊತ್ತಗೆಯನ್ನು ಕರ್ನಾಟಕದ ಮಾಜಿ ಲೋಕಾಯುಕ್ತರಾದ ಸಂತೋಶ್ ಹೆಗ್ಡೆಯವರು ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಲೋಕಾರ್ಪಣೆ ಮಾಡಿದ್ದರು. ಮೂರನೆಯದಾಗಿ, ವಿಸ್ಮಯ ಪ್ರಕಾಶನ ಮೂರು ತಿಂಗಳಿಗೊಮ್ಮೆ ಹೊರತರುವ ಸಾಹಿತ್ಯಕ ನಿಯತಕಾಲಿಕೆಯಾದ 'ಅರುಹು ಕುರುಹು' 2012ರ ವಿಶೇಶ ಸಂಚಿಕೆ 'ಬುಡಕಟ್ಟು ಸಂಸ್ಕೃತಿ' ಯಲ್ಲಿ ಡಾ. ಚಂದನ್ ಕುಮಾರ್ ಶರ್ಮರ ಇಂಗ್ಲಿಶ್ ಲೇಖನದ ಕನ್ನಡಾನುವಾದ 'ಚರ್ಚಾಸ್ಪದ ಕುಲದ ಕತೆ: ಮೌಖಿಕ ಸಂಕಧನ ಹಾಗೂ ಬೊಡೊ ಅಸ್ಮಿತೆ ರಚನೆ' ಪ್ರಕಟವಾಗಿತ್ತು. ಅದಾದ ನಂತರ, ವಿಸ್ಮಯ ಪ್ರಕಾಶನ ಹಮ್ಮಿಕೊಂಡಿರುವ 'ನಿಮ್ಮ ಓದಿಗೆ ನಮ್ಮ ಪುಸ್ತಕ'ದ ನೂರು ಪುಸ್ತಕಗಳ ಮಾಲಿಕೆಯಲ್ಲಿ 16ನೆಯ ಪುಸ್ತಕವಾಗಿ 'ಕ್ರಿಕೆಟ್ ಯುಗಪುರುಷ:ಸಚಿನ್ ತೆಂಡೂಲ್ಕರ್' ಪ್ರಕಟವಾಗುತ್ತಿದೆ.  ಈ ಹೊತ್ತಗೆಯ ಲೋಕಾರ್ಪಣೆ ಕಾರ್ಯಕ್ರಮದ ವಿವರಗಳನ್ನು ಈ ಬರೆಹದೊಂದಿಗಿರುವ ಕರೆಯೋಲೆಯಲ್ಲಿ ಕಾಣಬಹುದು. ಸಹೃದಯಿ ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಿ  ಕಾರ್ಯಕ್ರಮವನ್ನು  ಯಶಸ್ವಿಗೊಳಿಸಬೇಕಾಗಿ ವಿನಂತಿ.