ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ... (ಭಾಗ ೧)

ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ... (ಭಾಗ ೧)

  

ಆಗ ತಾನೇ ರಾತ್ರಿಯ ಊಟ ಮುಗಿಸಿ, ಸ್ವಲ್ಪ ಟಿ. ವಿ. ನೋಡಿ ಬೆಡ್ ರೂಮಿಗೆ ಹೋಗ್ತಾ ಇದ್ದೆ. ಇದ್ದಕ್ಕಿದ್ದಂತೆ ನನ್ನ ಮೊಬೈಲ್ ರಿಂಗ್ ಆಯ್ತು. ಯಾರಪ್ಪ ಈ ಸಮಯದಲ್ಲಿ ನನಗೆ ಫೋನ್ ಮಾಡಿದ್ದು ಅಂತ ರಿಸೀವ್ ಮಾಡಿದೆ. "ಮಿಸ್ಟರ್ ಮಧುಕರ್ ಹತ್ರ ಮಾತಾಡಬಹುದಾ?" ಅಂತ ಯಾವುದೋ ಗಂಡಸಿನ ದನಿ ಕೇಳಿಸಿತು. ಅದಕ್ಕೆ "ಹೌದು, ನಾನೇ ಮಧುಕರ್. ತಾವು ಯಾರು? ಏನಾಗಬೇಕಿತ್ತು?" ಅಂತ ಕೇಳಿದೆ. ಅದಕ್ಕೆ ಆ ಗಂಡಸು "ನಾನು ಇನ್‌ಸ್ಪೆಕ್ಟರ್ ಜಯಂತ್ ಅಂತ. ಇಲ್ಲಿ ನೋಡಿ, ನೀವು ತಕ್ಷಣನೆ ರಾಜಾಜಿನಗರ ಪೋಲೀಸ್ ಠಾಣೆಗೆ ಬರಬೇಕು. ಇಲ್ಲಿ ಯಾರೋ ಪುಟ್ಟಣ್ಣ ಎಂಬ ವ್ಯಕ್ತಿಯನ್ನು ನಾವು ಅರೆಸ್ಟ್ ಮಾಡಿದೀವಿ. ಅವನೆ ನಿಮ್ಮ ನಂಬರ್ ಕೊಟ್ಟಿದ್ದು. ಆ ವಿವರವನ್ನು ನೀವು ಠಾಣೆಗೆ ಬಂದ ಮೇಲೆ ಹೇಳ್ತಿವಿ. ನೀವು ಬೇಗ ಬನ್ನಿ" ಅಂತ ಹೇಳಿ ಆ ಕಡೆಯಿಂದ ಫೋನ್ ಇಟ್ಟ ಶಬ್ದ ಕೇಳಿಸಿತು. ಇದೇನಪ್ಪ ಗ್ರಹಚಾರ. ಈ ಪುಟ್ಟಣ್ಣ ಯಾರು? ನನಗೆ ಇವನಿಗೆ ಏನು ಸಂಬಂಧ? ಅವನ್ಯಾಕೆ ನನ್ನ ನಂಬರ್ ಕೊಟ್ಟ? ಅಂತ ಯೋಚನೆ ಮಾಡುವಷ್ಟರಲ್ಲಿ ನನ್ನ ಹೆಂಡತಿ ಎದ್ದು "ಯಾರದು ಫೋನ್? ನೀವು ಯಾಕೆ ಇಷ್ಟು ಗಾಬರಿಯಾಗಿದ್ದೀರ?" ಅಂತ ವ್ಯಾಕುಲತೆಯಿಂದ ಕೇಳಿದಳು. "ಏನು ಇಲ್ಲ ನಮ್ಮ ಸೀನಿಯರ್ ಮ್ಯಾನೇಜರ್ ರಿಂದ ಫೋನ್ ಬಂದಿತ್ತು, ಅದೇನೋ ಅರ್ಜೆಂಟ್ ಕೆಲಸ ಅಂತೆ, ಬೇಗ ಬಾ ಅಂತ ಹೇಳಿದ್ರು. ನಾನು ಹೀಗೆ ಹೋಗಿ ಹಾಗೆ ಬಂದೆ, ನೀನು ಮಲಗಿಕೋ" ಅಂತ ಹೇಳಿ ಕಾರ್ ಕೀ ತಗೊಂಡು ಹೊರಗೆ ಬಿದ್ದೆ.
 
ನನ್ನ ಎರಡನೆಯ ಹೆಂಡತಿಯಾದ ಮಾರುತಿ ೮೦೦ ಆ ದಿನ ಪೂರ್ತಿ ಓಡಾಡಿ, ಆಗ ತಾನೇ ವಿಶ್ರಾಂತಿ ತೆಗೆದುಕೊಳ್ಳುತ್ತಾ ಇತ್ತು. ಈಗ ಪುನಃ ಅವಳಿಗೆ ತೊಂದರೆ ಕೊಡಲು ಮನಸ್ಸು ಬರಲಿಲ್ಲ. ಕೈ ಗಡಿಯಾರ ನೋಡಿಕೊಂಡೆ, ಘಂಟೆ ೧೧.೧೫ ಆಗಿತ್ತು. ಇಷ್ಟೊತ್ತಿನಲ್ಲಿ ವಿಜಯನಗರದಿಂದ ರಾಜಾಜಿನಗರಕ್ಕೆ ಬಿ.ಎಮ್.ಟಿ.ಸಿ. ಬಸ್ ಸಿಗೋದು ಕಷ್ಟ ಅಸಾಧ್ಯ ಎಂದು ತಿಳಿದು, ಅನ್ಯ ಮಾರ್ಗ ಕಾಣಲಾರದೇ ನನ್ನ ಎರಡನೆಯ ಹೆಂಡತಿಯನ್ನು ಎಬ್ಬಿಸಿಕೊಂಡು ಹೊರಟೆ. ಅವಳೇನೂ ತಕರಾರು ಮಾಡಲಿಲ್ಲ. ನನಗೆ ಹ್ಯಾಗೆ ಅವಳು ಎರಡನೆಯ ಹೆಂಡತಿಯೊ, ಹಾಗೆ ನಾನು ಕೂಡ ಅವಳಿಗೆ ಎರಡನೆಯ ಗಂಡ ಅಥವಾ ಯಜಮಾನ. ಎರಡು ವರ್ಷದ ಹಿಂದೆ ಅವಳ ಮೊದಲನೆಯ ಯಜಮಾನ ಹಣಕಾಸಿನ ಅಭಾವದ ಕಾರಣ ಅವಳನ್ನು ಒಬ್ಬ ದಲ್ಲಾಳಿಗೆ ಮಾರಿ ಹೋಗಿದ್ದ. ನಾನು ಆವಾಗ ಕಾರ್ ಗಾಗಿ ಹುಡುಕಾಡುತ್ತಾ ಇದ್ದೇ. ಆಗ ನಾನು ಎಲ್ ಬೋರ್ಡ್. ಯಾರೋ ಹೇಳಿದ್ರು, ನೀವು ಕಾರ್ ಡ್ರೈವಿಂಗ್ ಕಲಿಬೇಕು ಅಂತ ಇದ್ರೆ, ಬೆಟರ್ ಯೂ ಸ್ಟಾರ್ಟ್ ವಿತ್ ಸೆಕೆಂಡ್ ಹ್ಯಾಂಡ್ ಮಾರುತಿ ೮೦೦. ರಫ್ ಅಂಡ್ ಟಫ್ ಬಳಕೆಗೆ ಅದೇ ಒಳ್ಳೇದು. ನನಗೆ ಅವರ ಸಲಹೆ ಸೂಕ್ತವೆನಿಸಿ ಈ ಕಾರ್ ತೆಗೆದುಕೊಂಡೆ. ತೆಗೆದುಕೊಂಡ ಹೊಸದರಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಬರ್ತಾ ಬರ್ತಾ ಅದಕ್ಕೆ ಕೆಲವೊಮ್ಮೆ ಕೆಮ್ಮು ನೆಗಡಿಗಳಾಗಿ, ಶರೀರದ ಕೆಲವು ಭಾಗಗಳು ಕೈ ಕೊಡ್ತಾ ಇದ್ದವು.
 
ಡ್ರೈವ್ ಮಾಡುತ್ತಿರುವಾಗ ತಲೆಯಲ್ಲಿ ಏನೇನೋ ವಿಚಾರಗಳು ಮೂಡುತ್ತಿದ್ದವು. ಪೋಲೀಸ್ ಎಂದರೆ ನನಗೇನೂ ಭಯ ಇರಲಿಲ್ಲ. ತಪ್ಪು ಮಾಡಿದರೆ ತಾನೇ ಭಯ ಪಡಕೋಬೇಕು. ಇಲ್ಲಿಯವರೆಗೆ ನಾನು ಪೋಲೀಸ್ ಠಾಣೆಗೆ ಹೋಗಿದ್ದು ೨ ಸಲ. ಒಮ್ಮೆ ಕಳೆದು ಹೋದ ಮೊಬೈಲ್ ಬಗ್ಗೆ ಕಂಪ್ಲೇಂಟ್ ಕೊಡಲು, ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಿದ ಪಾಸ್ ಪೋರ್ಟ್ ತೆಗೆದುಕೊಳ್ಳಲು. ಆದರೆ ಅದಕ್ಕೂ ಇದಕ್ಕೂ ತುಂಬಾ ವ್ಯತ್ಯಾಸವಿತ್ತು. ಆವಾಗ ನಾನಾಗಿಯೇ ಠಾಣೆಗೆ ಹೋಗಿದ್ದೆ ಹಾಗೂ ನಾನು ಹೋಗಲು ಒಂದು ನಿರ್ಧಿಷ್ಟವಾದ ಕಾರಣವಿತ್ತು. ಆದರೆ ಈಗ ಅವರು ನನ್ನನ್ನು ಕರೆಸಿಕೊಳ್ಳುತ್ತಿದ್ದಾರೆ, ಏನೂ ಕಾರಣ ಹೇಳದೇ. ಈ ಪುಟ್ಟಣ್ಣ ಯಾರು ಅಂತ ಎಷ್ಟು ತಡಕಾಡಿದರೂ ಗೊತ್ತಾಗಲಿಲ್ಲ. ನನ್ನ ಸಂಬಂಧಿಕರಲ್ಲಾಗಲಿ, ಮಿತ್ರ ವೃಂದದಲ್ಲಾಗಲಿ ಅಥವಾ ಸಿಬ್ಬಂದಿ ವರ್ಗದವರಲ್ಲಾಗಲಿ ಈ ಹೆಸರಿನವರು ಯಾರು ಇರಲಿಲ್ಲ. ಸರಿ ಠಾಣೆಗೆ ಹೋಗಿ ಅವನ ಬಗ್ಗೆ ವಿಚಾರಿಸಿದರೆ ಆಯ್ತು ಅಂತ ಸುಮ್ಮನೇ ಡ್ರೈವ್ ಮಾಡ್ತಾ ರಾಜಾಜಿನಗರ ಪೋಲೀಸ್ ಠಾಣೆ ಮುಟ್ಟಿದಾಗ ಘಂಟೆ ೧೧.೩೦ ಆಗಿತ್ತು.
 
ಇನ್‌ಸ್ಪೆಕ್ಟರ್ ಜಯಂತ್ ನನ್ನನ್ನು ಒಳಗೆ ಕರೆದು "ಅಲ್ಲಿ ಲಾಕಪ್ ನಲ್ಲಿ ನಿಂತಿರುವ ವ್ಯಕ್ತಿ ನಿಮಗೆ ಗೊತ್ತೇ?" ಅಂತ ಸವಾಲು ಹಾಕಿದರು. ನಿಂತಿರುವ! ಎಲ್ಲಿ? ಆತ ಓಲಾಡುತ್ತಿದ್ದ. ಇವನಿಗೆ ಏನು ಆಗಿದೆ ಅಂತ ಕೇಳಿದೆ. ಅದಕ್ಕೆ ಅವರು "ಕಂಠ ಪೂರ್ತಿ ಕುಡಿದು, ನವರಂಗ ಥಿಯೇಟರ್ ಹತ್ರ 'ವಾಸಂತಿ, ವಾಸಂತಿ' ಅಂತ ಕೂಗಾಡತಾ ಹೋಗೋ ಬರೋರಿಗೆ ತೊಂದರೆ ಕೊಡ್ತಾ ಇದ್ದ. ಅದಕ್ಕೆ ಒಂದೆರಡು ಧರ್ಮದ ಏಟು ಕೊಟ್ಟು, ಎತ್ತಿ ಹಾಕಿಕೊಂಡು ಬಂದ್ವಿ." "ನೀನು ಯಾರು ಅಂತ ಕೇಳಿದ್ರೆ 'ನಾನು ಪುಟ್ಟಣ್ಣ, ನನ್ನ ಹೆಸರು ಇಡೀ ಕರ್ನಾಟಕಕ್ಕೆ ಗೊತ್ತು ನಿನಗ ಗೊತ್ತಿಲ್ವಾ' ಅಂತ ನನಗೆ ಎದುರುತ್ತರ ಕೊಡ್ತಾನೆ, ಬಡ್ಡಿ ಮಗ" ಎಂದು ಸಿಟ್ಟಿನಿಂದ ಹೇಳಿದರು. ಮದಿರೆ ಅವನನ್ನು ಪೂರ್ತಿಯಾಗಿ ತನ್ನ ವಶದಲ್ಲಿ ತೆಗೆದುಕೊಂಡು ಬಿಟ್ಟಿದ್ದಳು. ದೂರದಿಂದ ಅವನು ಯಾರು ಅಂತ ಸ್ಪಷ್ಟವಾಗಿ ಗೊತ್ತಾಗಲಿಲ್ಲ.  ಸ್ವಲ್ಪ ಹತ್ತಿರ ಹೋಗಿ ನೋಡಿದೆ. ಮುಖದ ಮೇಲೆ ಗಡ್ಡ ಮೀಸೆ ಹುಲುಸಾಗಿ ಬೆಳೆದಿತ್ತು. ನನ್ನನ್ನು ನೋಡಿ ಏನೇನೋ ಹೇಳಲು ಶುರು ಮಾಡಿದ. ಆಗ ನನಗೆ ಗೊತ್ತಾಯಿತು ಇವನು ನನ್ನ ಊರಿನ ಚಡ್ಡಿ ಗೆಳೆಯ 'ಈರಪ್ಪ'. "ಲೇ, ಈರಪ್ಪ. ಏನಲೇ ಇದು ನಿನ್ನ ಅವಸ್ಥೆ" ಅಂತ ಕೇಳಿದೆ. ಅವನು ನಕ್ಕು ಸುಮ್ಮನಾದ.
 
ಅವನನ್ನು ಕೊನೆಯ ಸಲ ಭೇಟಿ ಮಾಡಿದ್ದು ಊರಲ್ಲಿ, ೪ ವರ್ಷಗಳ ಹಿಂದೆ. ಯಾವುದೋ ಒಂದು ವಿಷಯದಲ್ಲಿ ಇಬ್ಬರಿಗೂ ಭಿನ್ನಾಭಿಪ್ರಾಯ ಮೂಡಿ, ಅವನು ನನ್ನ ಜೊತೆ ಮಾತು ಬಿಟ್ಟಿದ್ದ. ಆವಾಗಿನಿಂದ ಇಲ್ಲಿಯವರೆಗೆ ನಮ್ಮಿಬ್ಬರ ಸಂಪರ್ಕ ಆಗಿರಲೇ ಇಲ್ಲ. ಆದರೆ ಈ ಅವಸ್ಥೆಯಲ್ಲಿ ಅವನನ್ನು ನಾನು ಭೇಟಿಯಾಗುತ್ತೇನೆ ಅಂತ ಎಣಿಸಿರಲಿಲ್ಲ. ನೋಡೋಕೆ ಸ್ಥಿತಿವಂತನಾಗೇ ಕಾಣತಾ ಇದ್ದ. ಕೈಯಲ್ಲಿ ಟೈಟನ್ ವಾಚ್, ಬೆರಳುಗಳಲ್ಲಿ ಬಂಗಾರದ ೩ ಉಂಗುರಗಳು, ಕೊರಳಲ್ಲಿ ಚೈನ್. ಆದರೆ ಸದ್ಯದ ಅವಸ್ಥೆ ಅವನ ಸ್ಥಿತಿವಂತಿಕೆಯನ್ನು ಮರೆ ಮಾಚಿತ್ತು. ಕಷ್ಟದಲ್ಲಿದ್ದವರಿಗೆ ಸಹಾನುಭೂತಿ ತೋರಿಸಬೇಕಾದದ್ದು ಮಾನವ ಧರ್ಮ. ನಾನು ಆಯ್ತು ಅಂತ ಇನ್‌ಸ್ಪೆಕ್ಟರ್ ಹತ್ರ "ಸರ್, ಅವನು ನನ್ನ ಬಾಲ್ಯ ಸ್ನೇಹಿತ. ಅವನು ಎಂದೂ ಈ ರೀತಿ ಮಾಡುವವನಲ್ಲ, ಏನೋ ಆಕಸ್ಮಿಕವಾಗಿ ಅವನಿಂದ ತಪ್ಪು ನಡೆದು ಹೋಗಿದೆ. ದಯವಿಟ್ಟು ಅವನನ್ನು ಕ್ಷಮಿಸಿ ಬಿಟ್ಟುಬಿಡಿ" ಅಂತ ನಾನೇ ಅವನಿಗೆ ಕ್ಯಾರಕ್ಟರ್ ಸರ್ಟಿಫಿಕೇಟ್ ಕೊಟ್ಟು ವಿನಂತಿ ಮಾಡಿಕೊಂಡೆ. ಅವರು ಅಲ್ಲೇ ಹತ್ತಿರ ಇದ್ದ ಕಾನ್ಸ್ಟೆಬಲ್ ಕಿವಿಯಲ್ಲಿ ಏನೋ ಹೇಳಿ ಹೊರಟುಹೋದರು. ಆ ಕಾನ್ಸ್ಟೆಬಲ್ ನನ್ನ ಹತ್ತಿರ ಬಂದು ಹಲ್ಲುಗಿಸಿಯುತ್ತಾ ಪಕ್ಕದಲ್ಲಿ ಇದ್ದ ಟೇಬಲ್ ಮೇಲೆ ತನ್ನ ಬಲಗೈನ ಐದೂ ಬೆರಳುಗಳನ್ನು ಆಡಿಸುತ್ತಾ ನಿಂತ. ನನಗೆ ಅರ್ಥವಾಯ್ತು. ಪೋಲೀಸ್ ರ ಈ ಸಂಜ್ಞಾ ಭಾಷೆಯ ಬಗ್ಗೆ ನಾನು ಈ ಮುಂಚೆಯೇ ಪಾಸ್ ಪೋರ್ಟ್ ಪಡೆಯಲು ಹೋದಾಗ ಅವಗತನಾಗಿದ್ದೆ. ಆಗ ನನಗೆ ಈ ಸಂಜ್ಞಾ ಭಾಷೆ ಅರ್ಥವಾಗದೆ ೩ ಸಲ ಠಾಣೆಯ ಚಕ್ಕರ್ ಹಾಕಿದ್ದೆ. ಕೊನೆಗೆ ಅವನಿಗೆ ತಲೆ ಕೆಟ್ಟು "ಮಿಸ್ಟರ್, ಓದೀದೀನಿ ಅಂತೀರಾ, ಅಷ್ಟು ಗೊತ್ತಾಗಲ್ವಾ ಮಾಮೂಲೂ ಕೊಡಲಾರದೇ ಇಲ್ಲಿ ಯಾವ ಕೆಲಸವೂ ನಡೆಯೋಲ್ಲ" ಅಂತ ಹೇಳಿ ನನ್ನಿಂದ ಹಣ ವಸೂಲು ಮಾಡಿದ್ದರು.
 
ಈಗ ಇವರಿಗೆ ಸಲ್ಲಬೇಕಾದ ಮಾಮೂಲು ಕೊಟ್ಟು, ಅವನ ಮನೆಯ ವಿಳಾಸ ನನಗೆ ಗೊತ್ತಿಲ್ಲದಿದ್ದ ಮತ್ತು ಅವನು ಹೇಳುವ ಸ್ಥಿತಿಯಲ್ಲಿ ಇಲ್ಲದುದರ ಕಾರಣ ಅವನನ್ನು ನನ್ನ ಕಾರ್ ನಲ್ಲಿ ಹಾಕಿಕೊಂಡು ನನ್ನ ಮನೆಗೆ ಕರೆದುಕೊಂಡು ಬಂದೆ. ಅವನು ದಾರಿಯುದ್ದಕ್ಕೂ ವಾಸಂತಿಯ ಜಪ ಮಾಡ್ತಾ ಇದ್ದ. ಇದು ಯಾವುದೋ ಲವ್ ಫೇಲ್ಯೂರ್ ಕೇಸ್ ಅಥವಾ ಕಟ್ಟಿಕೊಂಡ ಹೆಂಡತಿ ಬಿಟ್ಟು ಹೋಗಿರಬಹುದು ಅಂತ ಊಹೆ ಮಾಡಿದೆ. ನನ್ನದು ಸಿಂಗಲ್ ಬೆಡ್ ರೂಮ್ ಮನೆ ಆದುದರಿಂದ ಅವನನ್ನು ಹಾಲ್ ನಲ್ಲಿ ಇದ್ದ ಸೋಫಾದ ಮೇಲೆ ಮಲಗಿಸಿ, ನಾನು ಮಲಗಲು ಹೋದೆ. ನನ್ನ ಹೆಂಡತಿ "ಯಾರದು?" ಅಂತ ಕೇಳಿದಾಗ "ನಾಳೆ ಹೇಳುತ್ತೇನೆ, ಈಗ ಮಲಗು" ಅಂತ ಹೇಳಿ ಮಲಗುವಷ್ಟರಲ್ಲಿ ಶುಕ್ರವಾರ ಕಳೆದು ಶನಿವಾರ ಆರಂಭ ಆಗ್ತಾ ಇತ್ತು.

Comments