ಅಮರ ಮಧುರ ಪ್ರೇಮ...ಭಾಗ 4

ಅಮರ ಮಧುರ ಪ್ರೇಮ...ಭಾಗ 4

ಕಾಫಿ ಡೇ ನಲ್ಲಿ ಮಧುರ ಬಂದಿಲ್ಲ ಎಂದಾಕ್ಷಣ ಅಮರನ ಮುಖದಲ್ಲಾದ ಬದಲಾವಣೆ ಮತ್ತು ಕಾಫಿ ಆದ ತಕ್ಷಣ ಅಲ್ಲಿಂದ ಹೊರಟು ಬಂದಿದ್ದಕ್ಕೆ ಪ್ರೇಮಳ ಮನಸ್ಸು ಬೇರೇನೋ ಯೋಚಿಸುತ್ತಿತ್ತು. ಯಾಕೋ ಇತ್ತೀಚಿಗೆ ಅಮರನು ಮಧುರಳ ಬಗ್ಗೆ ಹೆಚ್ಚುಆಸಕ್ತಿ ತೋರುವಂತೆ ಅನಿಸುತ್ತಿದೆ. ಅದೂ ಕೂಡ ಕಾಲೇಜ್ ಫೆಸ್ಟ್ ದಿನ ಹೋಟೆಲ್ ಗೆ ಹೋಗಿ ಬಂದಾಗಿನಿಂದ ಪ್ರತಿ ಬಾರಿ ನಾವಿಬ್ಬರೂ ಭೇಟಿ ಆದಾಗಲೂ ನನಗಿಂತ ಜಾಸ್ತಿ ಮಧುರಳ ಬಗ್ಗೆಯೇ ಮಾತಾಡುತ್ತಿರುತ್ತಾನೆ. ಇಂದು ಕೂಡ ಕಾಫಿ ಡೇ ಗೆ ಮಧುರಳನ್ನು ಕರೆದುಕೊಂಡು ಬಾ ಎಂದ. ಅಲ್ಲಿ ನೋಡಿದರೆ ಮಧುರ ಬಂದಿಲ್ಲ ಎಂದಾಕ್ಷಣ ಅವನ ಮುಖದಲ್ಲಿ ಬೇಸರದ ಛಾಯೆ ಮೂಡಿದ್ದು ಇದೆಲ್ಲ ನೋಡಿದರೆ ಅಮರನು ಮಧುರಳಿಗೆ ಮನ ಸೋತಿದ್ದಾನ?...ಛೆ ಛೆ ಹಾಗೆ ಆಗಲು ಸಾಧ್ಯವಿಲ್ಲ. ಅವನು ಎಂದೆಂದಿಗೂ ನನ್ನವನೇ ...


ಪ್ರೇಮ...ಪ್ರೇಮ.. ಏನು ಯೋಚನೆ ಮಾಡ್ತಾ ಇದ್ದೀಯ...ಅವಾಗಿಂದ ಕರೀತಾ ಇದ್ದೀನಿ....ಏನಿಲ್ಲ ಅಮರ್ ಹಾಗೆ ಸುಮ್ಮನೆ ಏನೋ ಯೋಚನೆ ಮಾಡುತ್ತಿದ್ದೆ.....ಸರಿ ಅಮರ್ ಎರಡು ವಾರದ ನಂತರ ಭೇಟಿ ಮಾಡುತ್ತೇನೆ ಬೈ...ಸರಿ ಪ್ರೇಮ ಬೈ ...


ಪೀಜೀಯಿಂದ ಹೊರಟ ಅಮರ್ ಗೆ ಕಾಫಿ ಡೇ ನಲ್ಲಿ ಪ್ರೇಮ ಹೇಳಿದ ಮಾತು ನೆನಪಿಗೆ ಬಂದು...ಎರಡು ವಾರ ನಿನ್ನನ್ನು ನೋಡದೆ ಬೇಸರ ಆಗುತ್ತದೆ ಎಂದು ಪ್ರೇಮ ಯಾಕೆ ಅಂದಳು. ಇತ್ತೀಚಿಗೆ ಅವಳ ನಡುವಳಿಕೆ ನೋಡುತ್ತಿದ್ದರೆ ಅವಳು ನನ್ನನ್ನು ಇಷ್ಟ ಪಡುತ್ತಿದ್ದಾಳ? ನಾನು ಅವಳಿಗೆ ಹತ್ತಿರವಾಗಿ ಇರುವುದನ್ನು ತಪ್ಪ್ಪಾಗಿ ಅರ್ಥ ಮಾಡಿಕೊಂಡಿದ್ದಾಳ? ಇಲ್ಲ ಹಾಗಾಗಬಾರದು ಏಕೆಂದರೆ ನಾನು ಇಷ್ಟ ಪಡುತ್ತಿರುವುದು ಮಧುರಳನ್ನು. ರಜೆ ಮುಗಿದು ಮಧುರ ಕಾಲೇಜಿಗೆ ಬಂದ ಕೂಡಲೇ ಅವಳಿಗೆ ನನ್ನ ಮನಸಿನ ವಿಷಯವನ್ನು ತಿಳಿಸಿ ಬಿಡಬೇಕು.


ಬಹಳ ದಿನಗಳ ನಂತರ ಮನೆಗೆ ಬಂದಿದ್ದರಿಂದ ಅಪ್ಪ ಅಮ್ಮ ಇಬ್ಬರೂ ಮಕ್ಕಳಿಗೆ ಅಪಾರವಾದ ಆರೈಕೆ ಮಾಡುತ್ತಿದ್ದರು. ಏನೇನು ತಿನ್ನಬೇಕು ಎನಿಸುತ್ತದೋ ಅದೆಲ್ಲವನ್ನೂ ಮಾಡಿಸಿ ಉಣಬಡಿಸುತ್ತಿದ್ದರು. ಮಧುರ ಅಂತೂ ಎಲ್ಲವನ್ನೂ ಮರೆತು ಅಪ್ಪ ಅಮ್ಮನ ಜೊತೆ ಸಂತಸದಿಂದಿದ್ದರೆ ಪ್ರೇಮ ಮಾತ್ರ ಅಮರನ ಧ್ಯಾನದಲ್ಲಿ ಮುಳುಗಿರುತ್ತಿದ್ದಳು. ಊರಿಗೆ ಬಂದು ಎರಡು ದಿನದ ನಂತರ ಅಮರನಿಗೆ ಕರೆಮಾಡಲು ಪ್ರಯತ್ನಿಸಿದಳು. ಅಮರ್ ಪ್ರೇಮ ನಂಬರ್ ನೋಡಿದ ತಕ್ಷಣ ಫೋನ್ ಎತ್ತುತ್ತಿರಲಿಲ್ಲ. ಎರಡು ಮೂರು ಬಾರಿ ಪ್ರಯತ್ನಿಸಿದರೂ ಅವನು ಫೋನ್ ಎತ್ತಲಿಲ್ಲ. ನಂತರ ಒಂದು ಮೆಸೇಜ್ ಕಳಿಸಿ ಸುಮ್ಮನಾದಳು.   


ಮರುದಿನ ಅವನಿಂದ ಯಾವುದೇ ಕರೆ ಬರದಿದ್ದಾಗ ಮತ್ತೆ ಪ್ರೇಮ ಕರೆ ಮಾಡಿದಳು. ಈ ಬಾರಿ ಅಮರ್ ಫೋನ್ ಎತ್ತಿ ಹಲೋ ಪ್ರೇಮ ಹೇಗಿದ್ದೀಯ ಎಂದು ಮಾಮೂಲಾಗಿ ಕೇಳಿದ. ಅಮರ್. ಎರಡು ದಿನದಿಂದ ನಿನ್ನ ಜೊತೆ ಮಾತಾಡದೆ ನಾನೆಷ್ಟು ಒದ್ದಾಡುತ್ತಿದ್ದೇನೆ ನೀನು ಯಾಕೆ ಫೋನ್ ಎತ್ತಲಿಲ್ಲ ಎಂದು ಅಳಲು ಶುರು ಮಾಡಿದಳು.


ಅಮರನಿಗೆ ಕಸಿವಿಸಿಯಾಗಿ ಪ್ರೇಮ ನಿನ್ನ ಮನಸಿನಲ್ಲಿ ನನ್ನ ಬಗ್ಗೆ ಏನು ಭಾವನೆ ಇದೆಯೋ ಗೊತ್ತಿಲ್ಲ ಆದರೆ ನನಗೆ ಮಾತ್ರ ನೀನು ಬೇರೆಲ್ಲರಂತೆ ಒಬ್ಬಳು ಒಳ್ಳೆ ಸ್ನೇಹಿತೆ ಅಷ್ಟೇ. ನಾನು ಮಾತಾಡದಿದ್ದರೆ ನೀನು ಯಾಕೆ ಅಳಬೇಕು. ನೋಡು ಪ್ರೇಮ ನನಗೆ ಇದೆಲ್ಲ ಸರಿ ಹೋಗಲ್ಲ. ದಯವಿಟ್ಟು ನಿನ್ನ ಮನಸಿನಲ್ಲಿ ನನ್ನ ಬಗ್ಗೆ ಪ್ರೀತಿ ಎಂಬ ಭಾವನೆ ಇದ್ದಾರೆ ದಯವಿಟ್ಟು ಅದನ್ನು ತೆಗೆದು ಹಾಕಿ ಬಿಡು. ಇದ್ದರೆ ಒಳ್ಳೆ ಸ್ನೇಹಿತೆಯಂತೆ ಇದ್ದುಬಿಡು ಇಲ್ಲವಾದರೆ ಇಲ್ಲಿಗೆ ಮುಗಿಸಿಬಿಡು ಎಂದು ಫೋನ್ ಇಟ್ಟು ಬಿಟ್ಟ. 


ಪ್ರೇಮ ಮತ್ತೆ ಕರೆ ಮಾಡಿ ಅಮರ್ ಪ್ಲೀಸ್ ಹೀಗೆಲ್ಲ ಮಾತಾಡಬೇಡ ನನಗೆ ನಿನ್ನನ್ನು ಕಂಡರೆ ತುಂಬಾ ಇಷ್ಟ ಐ ಲವ್ ಯೂ ಸೊ ಮಚ್ ನೀನು ಇಲ್ಲದಿದ್ದರೆ ನನ್ನ ಕೈಲಿ ಬದುಕಲು ಆಗುವುದಿಲ್ಲ ಅಮರ್. ಹೇ ಪ್ರೇಮ ನಿನಗೇನೂ ಹುಚ್ಚ? ಯಾಕೆ ಏನೇನೋ ಮಾತಾಡ್ತಿ?


ಅಮರ್, ನಿನಗೆ ನನ್ನ ಮೇಲೆ ಪ್ರೀತಿ ಇಲ್ಲದಿದ್ದ ಮೇಲೆ ಯಾರೊಡನೆಯೂ ಇರದಷ್ಟು ಹತ್ತಿರವಾಗಿ ನನ್ನ ಜೊತೆ ಯಾಕೆ ಇದ್ದೆ? ಪ್ರತಿದಿನ ಯಾಕೆ ನನ್ನನ್ನು ಡ್ರಾಪ್ ಮಾಡುತ್ತಿದ್ದೆ? ನಾನು ಫೋನ್ ಮಾಡದಿದ್ದರೂ ನೀನೆ ಫೋನ್ ಮಾಡಿ ಪದೇ ಪದೇ ಯಾಕೆ ಹೋಟೆಲ್ ಗೆ, ಕಾಫಿ ಡೇ ಗೆ ಕರೆದೊಯ್ಯುತ್ತಿದ್ದೆ ಎಂದು ಬಿಕ್ಕಲು ಶುರು ಮಾಡಿದಳು. ಅಮರ್ ಜೋರಾಗಿ ನಗುತ್ತ, ಪ್ರೇಮ ಇದೆಲ್ಲ ಮಾಡಿಬಿಟ್ಟರೆ ನನಗೆ ನಿನ್ನ ಮೇಲೆ ಪ್ರೀತಿ ಇದೆ ಎಂದು ಅರ್ಥಾನ? ನಿನಗೆ ಇದು ನಗು ತರಿಸುವುದಿಲ್ಲವ? ಪ್ರೇಮ ನಿನಗೆ ಇನ್ನೂ ಒಂದು ವಿಷಯ ಹೇಳಬೇಕು. ನಾನು ಮಧುರಳನ್ನು ಇಷ್ಟ ಪಡುತ್ತಿದ್ದೇನೆ. ಅದಕ್ಕೆ ನಿನ್ನನ್ನೇ ಸಹಾಯ ಕೇಳೋಣ ಎಂದುಕೊಂಡಿದ್ದೆ ಆದರೆ ನಿನ್ನ ಮನಸಿನಲ್ಲಿ ಈ ರೀತಿಯ ಭಾವನೆ ಇದೆ ಎಂದು ನನಗೆ ಗೊತ್ತಿರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡು ಪ್ರೇಮ. ನಾನು ಯಾವತ್ತೂ ನಿನಗೆ ಒಳ್ಳೆಯ ಸ್ನೇಹಿತನಾಗಿ ಇರಬಯಸುತ್ತೇನೆ. ನನಗಿಂತ ಒಳ್ಳೆಯ ಹುಡುಗ ಸಿಗುತ್ತಾನೆ ನಿನಗೆ ಪ್ಲೀಸ್ ನನ್ನನ್ನು ಅರ್ಥ ಮಾಡಿಕೊ ಎಂದು ಫೋನ್ ಇಟ್ಟ.


ಪ್ರೇಮಳಿಗೆ ಬರಸಿಡಿಲೊಂದು ಎರಗಿದಂತಾಯಿತು. ತಾನು ಊಹೆ ಮಾಡಿದ್ದೆ ನಿಜ ಆಯಿತು. ಅವನು ನನ್ನನ್ನು ಬಳಸಿ ಮಧುರಳನ್ನು ಪ್ರೀತಿಸಲು ಪ್ರಯತ್ನಿಸುತ್ತಿದ್ದ ಅಷ್ಟೇ. ನನ್ನನ್ನು ಮಧ್ಯವರ್ತಿಯಾಗಿ ಬಳಸಳಷ್ಟೇ ಇಷ್ಟು ದಿನ ನನ್ನ ಜೊತೆ ಸಲುಗೆಯಿಂದ ಇದ್ದ ಇದನ್ನು ಅರ್ಥ ಮಾಡಿಕೊಳ್ಳದ ನಾನೇ ಪೆದ್ದು ಎಂದು ದುಃಖದಿಂದ ನಕ್ಕು ಅಳು ಒತ್ತರಿಸಿಕೊಂಡು ಬಂದು ತನ್ನ ಪಾಡಿಗೆ ರೂಮಿಗೆ ಬಂದು ಮನಬಿಚ್ಚಿ ಅತ್ತಳು. 


ಆಚೆ ಇಂದ ಮಧುರ ಬಂದು ಬಾಗಿಲು ತಟ್ಟಿದಾಗ ಕಣ್ಣನ್ನು ಒರೆಸಿಕೊಂಡು ಮುಖ ತೊಳೆದುಕೊಂಡು ಆಚೆ ಬಂದು ಏನು ಮಧು ಎಂದು ಏನೂ ನಡೆದೇ ಇಲ್ಲದಂತೆ ಕೇಳಿದಳು. ಇಷ್ಟು ಹೊತ್ತು ಏನೇ ಮಾಡ್ತಾ ಇದ್ದೆ ರೂಮಿನಲ್ಲಿ? ಅವಾಗಿಂದ ಬಾಗಿಲು ಹಾಕಿಕೊಂಡು ಇದ್ದೆ? ಅಮರ್ ಜೊತೆ ಮಾತಾಡ್ತಾ ಇದ್ದೀಯ? ನಾನು ನಿನಗೆ ಹೇಳಿದ್ನಲ್ಲ ಕಾಲೇಜ್ ಮುಗಿಯುವ ತನಕ ಇದೆಲ್ಲ ಬಿಟ್ಟು ಬಿಡು ಎಂದು. ಊರಿಗೆ ಬಂದರೂ ನಿನಗೆ ಅದೇ ಧ್ಯಾನನ? ಆಯ್ತು ಬಿಡಮ್ಮ ಕಾಲೇಜ್ ಮುಗಿಯುವ ತನಕ ಅವನ ಜೊತೆ ಮಾತೆ ಆಡಲ್ಲ ಆಯ್ತಾ?


ಮಾತಾಡಬೇಡ ಎಂದು ನಾನು ಹೇಳಿಲ್ಲ ಈ ಪ್ರೀತಿ ಪ್ರೇಮ ಎಲ್ಲ ಬೇಡ ಎಂದಷ್ಟೇ ನಾನು ಹೇಳಿದ್ದು


ಮಾತಾಡಿದರೆ ತಾನೇ ಇದೆಲ್ಲ ಯೋಚನೆಗಳು ನನ್ನ ತಲೆಗೆ ಬರುವುದು ಅದಕ್ಕೆ ಮಾತೆ ಆಡುವುದಿಲ್ಲ. ಆಮೇಲೆ ನೀನು ಹೇಗೆ ಹೇಳ್ತೀಯೋ ಹಾಗೆ ಮಾಡ್ತೀನಿ ಸರೀನಾ...


ವೆರಿ ಗುಡ್ ಪ್ರೇಮ...ಇಷ್ಟು ಸುಲಭವಾಗಿ ನನ್ನ ಮಾತು ಕೇಳ್ತೀಯ ಅಂತ ಗೊತ್ತಿರಲಿಲ್ಲ. ಥ್ಯಾಂಕ್ಸ್ ನನ್ನ ಮಾತು ಕೇಳಿದ್ದಕ್ಕೆ ಬಾ ಊಟ ಮಾಡೋಣ ಎಂದು ಇಬ್ಬರೂ ಊಟದ ಹಾಲಿಗೆ ಬಂದರು.ನಂತರದ ದಿನಗಳಲ್ಲಿ ಪ್ರೇಮ ಅಮರನಿಗೆ ಯಾವುದೇ ಫೋನ್ ಮಾಡದೆ ಆರಾಮಾಗಿ ಇದ್ದಳು. ಕುಟುಂಬ ಸಮೇತ ದೇವಸ್ಥಾನಗಳಿಗೆ ಭೇಟಿ ಕೊಟ್ಟು, ಸಂಬಂಧಿಕರ ಮನೆಗಳಿಗೆ ಹೋಗಿ ರಜೆಯ ಮಜವನ್ನು ಅನುಭವಿಸಿದರು. ಎರಡು ವಾರ ಎರಡು ದಿನಗಳಂತೆ ಕಳೆದು ಹೋಗಿ ಮತ್ತೆ ಕಾಲೇಜ್ ಗೆ ಹೊರಡಲು ಬೆಂಗಳೂರಿಗೆ ವಾಪಸ್ ಬಂದರು

Rating
No votes yet

Comments