ವೋ ಕಾಗಜ್ ಕಿ ಕಸ್ತೀ ವೋ ಬಾರಿಶ್ ಕಾ ಪಾನೀ

ವೋ ಕಾಗಜ್ ಕಿ ಕಸ್ತೀ ವೋ ಬಾರಿಶ್ ಕಾ ಪಾನೀ

 ವೋ ಕಾಗಜ್ ಕಿ ಕಸ್ತೀ ವೋ ಬಾರಿಶ್ ಕಾ ಪಾನೀ :

                                        -ಲಕ್ಷ್ಮೀಕಾಂತ ಇಟ್ನಾಳ
     ಚಿಕ್ಕಂದಿನಲ್ಲಿ ಮಳೆಗಾಲದ ಆ ದಿನಗಳಲ್ಲಿ ಮನೆ ಮುಂದೆ ಹರಿಯುವ ಆ ಮಳೆ ನೀರಿನಲ್ಲಿ ಬಣ್ಣ ಬಣ್ಣದ ಕಾಗದದ ದೋಣಿಗಳನ್ನು ಮಾಡಿ ಬಿಡುವುದು, ಮರಳಿನಲ್ಲಿ ಗೂಡು ಕಟ್ಟುವುದು, ಸುಡುಬಿಸಿಲಿನಲ್ಲಿ ಅಂಗಳದಲ್ಲಿ ಆಡುವುದು, ಚಿಟ್ಟೆಗಳನ್ನು ಹಿಡಿಯುವುದು , ಅಜ್ಜಿಯ ಹತ್ತಿರ ರಾಜಕುಮಾರಿಯರ ಕಥೆ ಕೇಳುವುದು, ಆ ಗೋಲಿ ಅಟ, ಆ ಗೊಂಬೆಯ ಮದುವೆ, ಬಳೆಚೂರು ಸಂಗ್ರಹ , ಆ ಲಗೋರಿ, ಆ ಗಾಳಿಪಟ, ಚಿನ್ನಿ ದಾಂಡು, ಆ ಕಣ್ಣು ಮುಚ್ಚಾಲೆ, ಕೆಸರಲ್ಲಿ ತುಳಿದಾಟ ಏನೇನು ಬಾಲ್ಯದಲ್ಲಿ ಬಿಟ್ಟು ಮುಂದೆ ಬಂದಿದ್ದೇವೆ. ನಮ್ಮೆಲ್ಲ ಐಶ್ವರ್ಯ , ಕೀರ್ತಿ, ಯೌವ್ವನ ನೀಡಿದರೂ ಯಾರಾದರೂ ನಮಗೆ ಆ ದಿನಗಳನ್ನು ಮರಳಿಸಿಯಾರೆ? ಹೀಗೊಮ್ಮೆ ಜಗಜಿತ್ ಸಿಂಗ್ ಅವರ ಕಾಗಜ್ ಕಿ ಕಸ್ತೀ…….. ಕೇಳುವಾಗ ನನ್ನ ಬಾಲ್ಯವನ್ನು ನೆನೆಪಿಸಿಕೊಂಡೆ,
ಬಾಲ್ಯವೂ ಹಾಗೇನೇ, ಮರೆತಷ್ಟೂ ನೆನಪಿಗೆ ಬರುವ ‘ನ ದುನಿಯಾ ಕಾ ಗಮ್ ಥಾ, ನ ರಿಸ್ತೋಂ ಕಾ ಬಂಧನ, ವೋ ಕಾಗಜ್ ಕಿ ಕಸ್ತೀ ವೋ ಬಾರಿಶ್ ಕಾ ಪಾನಿ’ ಅ ಕಳೆದ ಬಾಲ್ಯದ ದಿನಗಳನ್ನು ಬಲು ಸುಂದರವಾಗಿ ಕಟ್ಟಿಕೊಡ್ತಾರೆ ಜಗಜಿತ್ ಸಿಂಗ್. ಬಹುಶ ಇಂತಹ ಹಾಡುಗಳಿಂದಲೂ ಮನುಷ್ಯ ಬದುಕಿನ ಅನುಭಾವ ಪಡೆÀಯಬಹುದು. ಇಂತಹ ಬದುಕಿನಲ್ಲಿ ಬೆಳೆದ ನಾವು ಕಾಲದ ಹೊಡೆತಕ್ಕೆ ಹೇಗಾಗಿದ್ದೇವೆ. ಕವಿಯ ಮಾತಿನಲ್ಲಿ, 
‘ವಕ್ತ್ ನೇ ಕಿಯಾ, ಕ್ಯಾ ಹಸೀನ್ ಸಿತಂ, 
ತುಮ್ ರಹೇ ನ ತುಮ್, ಹಮ್ ರಹೇ ನ ಹಮ್,’ 
ಗೆಳೆಯ, ಕಾಲನ ಹೊಡೆತದಲ್ಲಿ ನೀನು ನೀನಾಗಿ ಉಳಿಯಲಿಲ್ಲ, ನಾನು ನಾನಾಗಿ ಉಳಿಯಲಿಲ್ಲ’ ಎಂಥ ಆರ್ಥಗರ್ಭಿತ ಸಾಲುಗಳು.
ಬಾಲ್ಯ ಅನ್ನೋದು,
‘ಫಿರ್ ದುಬಾರಾ ಚಾಹ ಕರ ಭೀ     ಪಾ ತೋ ನಹೀ ಸಕತೇ
ಔರ್ ಉಸೇ ಚಾಹ ಕರ ಭೀ   ತೋ ಭುಲಾ ನಹೀ ಸಕತೇ
ಜಿಸೇ ಬಚಪನ್ ಕೆಹತೇ ಹೈ’
‘ಮರಳಿ ಬಾ ಅಂದರ ಬರಾಂಗಿಲ್ಲ, ಮರೀಬೇಕಂದರೂ ಮರೆಯಾಂಗಿಲ್ಲ
ಅದು ಬಾಲ್ಯ.’ 
ಅಂಥ ಬಾಲ್ಯವನ್ನು ಮಕ್ಕಳಿಂದ ನಾವು ಕಸಿದುಕೊಂಡರ ಹೆಂಗ?
ವರಕವಿ ಬೇಂದ್ರೆ ನಿಸರ್ಗಕ್ಕ ಕೇಳ್ತಾರ,
‘ವರುಷಕೊಂದು ಹೊಸತು ಜನುಮ, 
ವರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ, 
ಒಂದೇ ಒಂದು ಜನುವiದಲಿ 
ಒಂದೇ ಬಾಲ್ಯ ಒಂದೇ ಹರೆಯ 
ನಮಗದಷ್ಟೇ ಏತಕೆ’ 
   ನಿಸರ್ಗ ಮರ ಗಿಡ, ಬಳ್ಳಿಗಳಿಗೆ ಪ್ರತಿ ವರ್ಷ ವರ್ಷವೂ ಎಲೆ ಉದುರಿಸಿ, ಹೊಸ ಚಿಗುರು ನೀಡಿ, ಹೊಸ ಹೂವು ಹಣ್ಣು ಫಲಗಳನ್ನು ನೀಡುವಂತೆ ಕರುಣಿಸಿದೆ.  ಪ್ರತಿ ವರ್ಷವೂ ಅವುಗಳಿಗೆ ಹೊಸ ಬಾಲ್ಯ, ಹೊಸ ಹರೆಯ ನೀಡುತ್ತದೆ. ದೇ ಆರ್ ಬ್ಲೆಸ್ಸ್ಡ.  ಆದರೆ ಮನುಷ್ಯ ಪ್ರಾಣಿಗೆ ಮಾತ್ರ ಜನುಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯವನ್ನು ಅದೇಕೆ ನೀಡಿತೋ ಎಂದು ಪ್ರಕೃತಿಗೆ ಕೇಳ್ತಾರೆ.
 ಮನುಷ್ಯನಿಗೆ ಒಂದೇ ಸಾರಿ ಸಿಗುವ ಆ ಬಾಲ್ಯವನ್ನು ಅನುಭವಿಸಲು ನಮ್ಮ ಮಕ್ಕಳಿಗೆ ಬಿಡೋದಿಲ್ಲ ನಾವು, ಹಾರುವ ಹಕ್ಕಿಯನ್ನು ಹಾರಲು ಬಿಡಿ, ತುಂಟ ಹುಡುಗರಿಗೆ ಅಂಟು ಅಂಟಿಸಬೇಡಿ. ಮುಂದೆ ತಮ್ಮ ಬದುಕಿನ ಸಂಜೆಯಲ್ಲಿ ನೆನಪಿಗಾದರೂ ಆದೀತು, ಬಾಲ್ಯದ ಸಿಹಿನೆನಪುಗಳ ಬುತ್ತಿಯ ಬಂಡಿ.
 
   ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದರಲ್ಲಿಯೂ ಒಂದು ಆನಂದವಿದೆ. ಜೀವನ ಪ್ರೀತಿ ಇದೆ. ಹಸುವಿನ ತರಹ ಆಗಾಗ ಮೆಲುಕಿಸಿ, ಧಾವಂತದ ಬದುಕಿನಲ್ಲಿ ತಕ್ಕಮಟ್ಟಿಗಾದರೂ ಮನಕ್ಕೆ ತಂಪನೀಯಬಹುದು ಏನಂತೀರಿ?
   ಇದೆಲ್ಲ ಯಾಕೆ ಹೇಳಬೇಕಾಯ್ತು ಅಂದರ, ಇಂದು ಎದ್ದು  ಪೇಪರ್ ತಗೊಂಡ ಒಳಹೋಗಬೇಕಾದ್ರ ಮನೆ ಅಂಗಳದ ಹೊರಗೆ ಇರುವ ನೆಲ್ಲಿ ಮರಕ್ಕೆ ಒಂದು ತುಂಟ ಮರಿ ಕಲ್ಲು ಹೊಡೆದು ನೆಲ್ಲಿಕಾಯಿಗಳನ್ನು ಉದುರಿಸಿಕೊಳ್ಳುತ್ತಿದ್ದ. ಗಿಡಕ್ಕೆ ಹೊಡೆದ ಕಲ್ಲು ಕೆಳಗೆ ಬೀಳಬೇಕಾದರೆ ಅದಕ್ಕೆ ನನ್ನ ಮನೆಯ ಗ್ಲಾಸುಗಳು ಆಹಾರವಾಗುತ್ತವಲ್ಲ ಎಂದುಕೊಂಡು ಆ ತುಂಟನಿಗೆ, ‘ಹೇ’ ಅನ್ನುವಷ್ಟುರಲ್ಲಿ ನನ್ನನ್ನು ನನ್ನೊಳಗಿನ ಬಾಲ್ಯದ ತುಂಟ ತಡೆದ. ನೆಲ್ಲಿಕಾಯಿಗಳು ಅವನ ಕೈಯಲ್ಲಿ ಸಿಕ್ಕಾಗ ನೋಡಬೇಕಿತ್ತು ಅವನ ಮುಖವನ್ನು, ಆಹಾ! ಸಾಕ್ಷಾತ್ ಅರಳಿದ ಕಮಲ!

Comments