ಅಪ್ಪ ( ಕಥೆ)
ಲಕ್ಷ್ಮೀಕಾಂತ ಇಟ್ನಾಳ, ಧಾರವಾಡ
ಬಸಪ್ಪ್ಪ ಬಲು ಪರಿಶ್ರಮ ಜೀವಿ, ಸಂಜೀತನ ಹೊಲದಾಗ ದುಡದು, ಮೂರು ಸಂಜೀಕಡೆ ತನ್ನ ಸಂಸಾರದಾಗ ಒಂದಾಗಿದ್ದ ಎತ್ತು ‘ಶಿವನಿ’ ಜೊತೆ ಹೊಲದಿಂದ ಮನೀಗಿ ಬಂದು ಅದನ್ನ ಗ್ವಾದ್ಲ್ಯಾಗ ಕಟ್ಟಿ ಅದಕ್ಕ ಮೇವು ಹಾಕಿ, ನೀರು ಕುಡಿಸಿ ಅದರ ಮೈಮ್ಯಾಲೆ ಕೈಯಾಡಿಸಿ, ಕೊರಳ ಹತ್ತಿರ ತಿಕ್ಕಿ ಅದಕ್ಕ ತನ್ನ ಪ್ರೀತಿ ತೋರಸಾವ. ‘ಶಿವನಿ’ಗೆ ಈ ವರ್ಷರ ಒಂದು ಜೊತೆಗಾರನ್ನ ತರೂನು ಅನಕೊಂಡ್ರೂ, ಏನಾರೆ ಖರ್ಚು ಬಂದು ಆ ಆಸೆ ಹಂಗ ಮುಂದ ಹೋಗತಿತ್ತು. ಬಸಪ್ಪ ಅದನ್ನ ತನ್ನ ಮಕ್ಕಳಗಿಂತ ಹೆಚ್ಚು ಪ್ರೀತಿ ಮಾಡುವವ. ಒಂದ ದಿನವೂ ಕೂಡ ಅದಕ್ಕ ಮೇವು ಹಾಕುವುದಾಗಲಿ, ಅದರ ಮೈ ತೊಳೆಯುವುದಾಗಲಿ, ನೀರು ಕುಡಿಸುವುದಾಗಲಿ ತಪ್ಪತಿದ್ದಿಲ್ಲ. ಎಲ್ಲೆರ ಹೋಗುದು ಇತ್ತಂದ್ರ ಹೆಂಡತಿ ಗಂಗವ್ವಗ ಎಲ್ಲ ಕೆಲಸ ವಹಿಸಿ ಹೋಗುವವ. ಆಕಿನೂ ಎಂಥ ಹೆಣಮಗಳರೀ ‘ಗಣಮಗ’ ಇದ್ದಾಂಗ.
ಅವನ ದಾರೀನ ನೋಡತಿದ್ದ ಇಬ್ಬರೂ ಮಕ್ಕಳು, ಮನಿಗೆ ಬಂದ ಕೂಡಲೇ ಅವನ ಕಾಲಾಗನ ಅದು ಇದು ಅಂತ ಅವನ ಜೊತೆಗನ ತಮ್ಮ ಬೇಡಿಕೆಯೊಂದಿಗೆ ಒಬ್ಬರಿಗೊಬ್ಬರು ಚಾಡಾ ಹೇಳೂದು, ಜಗಳ ಮಾಡಿದ್ದ ತಮ್ಮ ತಮ್ಮ ವರಾತ ಹೇಳೂದು, ತನ್ನ ತಪ್ಪ ಇನ್ನೊಬ್ಬರ ಮ್ಯಾಲೆ ಹೇಳಿ, ಸಾಚಾ ಅನ್ನಿಸಿಕೊಳ್ಳುವುದು ವಯೋ ಸಹಜ ಆದರೂ ಬಸಪ್ಪ ಅವರಿಗೆ. ಹಂಗೆಲ್ಲ ಮಾಡಬಾರದು, ಹೇಳಬಾರದು ಅಂತಾ ತನಗೆ ತಿಳಿದಂತ ಅವರಿಗೆ ಪ್ರೀತಿಲೆ ತಿಳಿಹೇಳತಿದ್ದ. ಅಪ್ಪನÀ ತೊಡಿ ಮ್ಯಾಲೆ ನಾ ಕೂಡತೀನಿ, ನೀ ಕೂಡತೀನ ಅಂತ ಅಣ್ಣ ತಂಗಿ ಜಗಳ ಶುರು. ಯಾರ ಕುಂತರೂ ಇನ್ನೊಬ್ಬರಿಗೂ ಅದೇ ಜಗಬೇಕಲ್ಲಾ. ಮಕ್ಕಳ ಜೊತೆ ಕರಗಿಬಿಡತಿದ್ದ ಬಸಪ್ಪ ಮಕ್ಕಳಿಗೆ ಕಥೆಗಳನ್ನ ಆಗಲಿ, ಸುಶ್ರಾವ್ಯವಾಗಿ ಸಣ್ಣಗಿನ ಧ್ವನಿಯೊಳಗ ದೊಡ್ಡಾಟದ ಪದಗಳನ್ನ ಆಗಲಿ, ತಾ ನೋಡಿದ, ಆಡಿದ ನಾಟಕದ ಹಾಡನ್ನಾಗಲಿ, ಹೇಳುವವ. ಎಲ್ಲಕ್ಕಿಂತ ಹೆಚ್ಚಾಗಿ ಅಕ್ಕರೆಯ ಮಾತಾಡುವವ. ಎಂದೂ ಮಕ್ಕಳ ಮ್ಯಾಲ ಕೈ ಮಾಡದವ. ಹಿಂಗಾಗಿ ಅಪ್ಪ ಅಂದರ ಮಕ್ಕಳಿಗೆ ಅಷ್ಟು ಪ್ರಾಣ. ಮನ್ಯಾಗ ಹುಡುಗರ ಜಗಳ, ವೊಂಡಾಟ ನೋಡಿ ಬಸಪ್ಪ್ಪ ಏನು ಅನ್ನದೇ ಇದ್ರೂ, ಅವ್ವ ಗಂಗವ್ವ ಮಾತ್ರ ಹುಡುಗರಿಗೆಲ್ಲ ಗದರಿಸಿ, ಸುಮ್ಮನಿರಸತಿದ್ಲು. ಪಾಠ ಓದಕೊಳ್ಳಲಿಕ್ಕೆ ಹಚ್ಚತಿದ್ದಳು. ಆದರ ಮೂರು ತಾಸು ರಾತ್ತಿ ಅಗುತ್ತಲೇ , ಇಬ್ಬರೂ ಮಕ್ಕಳು ಊಟ ಮಾಡೂದು ಮಾತ್ರ ಎಲ್ಲ ಬಸಪ್ಪ್ಪನ ಕೈತುತ್ತಿನಲ್ಲೇ. ಒವ್ಮೊಮ್ಮೆ ಬಿಳಿಜೋಳದ ಬಿಸಿ ಬಿಸಿ ರೊಟ್ಟಿ ಸ್ವಲ್ಪ ದಪ್ಪವಾಗಿ ಗಂಗವ್ವನ ಹತ್ರ ಮಾಡಿಸಿ, ಅದನ್ನ ಖಾರಾ ಕುಟ್ಟು ಕಲ್ಲ ಮಾಲೆ ಸ್ವಲ್ಪ ಖಾರಾ ಹಾಕಿ ಜಜ್ಜಿ, ಅದರ ಮ್ಯಾಲೆ ಒಂದಿಷ್ಟು ಗುರೆಳ್ಳ ಚಟ್ನಿ, ಸ್ವಲ್ಪ ಕೆಂಪು ಚಟ್ನಿ, ಎರಡು ಬ್ಯಾಳಿ ಬೆಳ್ಳುಳ್ಳಿ, ಸ್ವಲ್ಪ ಕುಸುಬಿ ಎಣ್ಣೆ ಇಲ್ಲ ತುಪ್ಪ ಹಾಕಿ ಜಜ್ಜಿ ರೊಟ್ಟಿ ಉಂಡಿ ಮಾಡಿ ಮಕ್ಕಳಿಗೆ ತಿನ್ನಿಸುವವ. ಅದೆಲ್ಲ ಎಂಥ ರುಚಿ ಅಂತೀರಿ! ಮಕ್ಕಳು ಬಿಸಿಬಿಸಿ ರೊಟ್ಟಿ ಉಂಡಿ ತಿಂದು ಹೊಟ್ಟಿ ತುಂಬಿದ ಮ್ಯಾಲೂ, ಒತ್ತಾಯ ಮಾಡಿ ಇನ್ನೊಂದ ಸ್ವಲ್ಪ ಕಡೀ, ಉಳಿದದ್ದು ನಾನರ, ಆಕೆರ ತಿಂತೀವಿ ಅಂತಾ ಮಕ್ಕಳಿಗೆ ಪ್ರೀತಿಯಿಂದ ತಿನಿಸಾವ. ಇನ್ನೂ ಒವ್ಮೊಮ್ಮೆ ಬಿಸಿ ರೊಟ್ಟಿ ಮ್ಯಾಲೆ ಹೆರತಿದ್ದ ತುಪ್ಪ ಸವರಿ, ಅದರ ಮ್ಯಾಲೆ ಹದವಾಗಿ ಕೆಂಪು ಚಟ್ನಿ ಖಾರ ಹಚ್ಚಿ, ಗಂಗವ್ವ ಮಾಡಿದ ಚೌಳಿಕಾಯಿ ಪಲ್ಯನೋ, ತರಕಾರೀನೋ, ಬದನೀಕಾಯಿ ಪಲ್ಯನೋ ಅದರ ಮ್ಯಾಲೆ ಉದ್ದಕ್ಕೂ ಹರಡಿ, ಆ ರೊಟ್ಟಿಯನ್ನು ಸುರುಳಿಹೋಳಗಿ ತರಹ ಸುತ್ತಿ ಮಕ್ಕಳಿಗೆ ತಿನ್ನಲಿಕ್ಕೆ ಕೊಡುವವ. ಆಗಾಗ ಲಿಂಬೆ ರಸ ಹಿಂಡಿದ ಬಿಸಿ ಬಿಸಿ ಅನ್ನದಲ್ಲಿ ಗಮ ಗಮ ಅನ್ನುವ ತುಪ್ಪ ಹಾಕಿ ಹದ ಮಾಡಿದ ಆ ಅನ್ನವನ್ನು ಮುಟಿಗೆಯಲ್ಲಿ ಉಂಡಿ ಮಾಡಿ ಪಾಳೆ ಪ್ರಕಾರ ಮಕ್ಕಳಿಗೆ ತಿನ್ನಿಸುವುದು ಈಗಲೂ ಕಣ್ಣಿಗೆ ಕಟ್ಟಿದಂಗ ಕಣ್ಮುಂದೆ ಆಗಾಗ ನೆನಪಾಗಿ ಕಾಡತಿರ್ತದ ಅಂತ ಬಸಪ್ಪನ ಗೆಳೆಯ ಫಕೀರಪ್ಪ, ಬಸಪ್ಪನ ಮಾತು ಬಂದಾಗ ಹೇಳ್ತಿದ್ದ.
ಬಸಪ್ಪನ ವಯಸ್ಮ್ಸ, ಆತು, ಹೆಚ್ಚು ಕಡಿಮೆ ನಲವತ್ತೈದು ಇರಬಹುದು ಏನೋಪಾ. ಇಷ್ಟ ಅಂತ ಯಾಕ ನಿಖರವಾಗಿ ಹೇಳಲಿಕ್ಕೆ ಸಾಧ್ಯ ಆಗೂದಿಲ್ಲ ಅಂದ್ರ ಆವಾಗ ಹುಟ್ಟಿದ ತಾರೀಖು ಎಲ್ಲಿನೂ ಹೆಸರು ದಾಖಲಾ ಮಾಡುಸೂದು ಅಷ್ಟು ಜನಮಾನಸದಾಗ ಇನ್ನ ಬಂದಿದ್ದಿಲ್ಲ. ಏನಿದ್ದರೂ ಒಂದು ದೊಡ್ಡ ಸಂಗತೀ ಜೊತೆ ತಮ್ಮ ಹುಟ್ಟಿದ ಅವಧಿ ಹೋಲಿಸಿ ಹೇಳತಿದ್ದರು. ಹೆಂಗಂದರ, ಈ ದ್ಯಾಮವ್ವನ (ಗ್ರಾಮದೇವಿ) ಜಾತ್ರೆ ಅಂತ ಏನ್ ಹಳ್ಳಿಗೋಳದಾಗ ನಡೀತಾವು, ಅವು ಪ್ರತಿ ವರ್ಷಾನೂ ಆಗಂಗಿಲ್ಲರಿ. ಊರ ಹೊರಗೆ ಒಮ್ಮೆ ದ್ಯಾಮವ್ವನ ಕುಂಡರಿಸಿ ಜಾತ್ರೆ ಮಾಡಿದ್ರ ಇನ್ನೊಮ್ಮೆ ಆ ಊರಿನ ಆಕಿ ಗುಡ್ಯಾಗನ$$ ಕುಳ್ಳಿರಿಸಿ ಜಾತ್ರೆ ಮಾಡೊ ಸಂಪ್ರದಾಯ ನಮ್ಮ ಊರು ಗ್ರಾಮಗಳಲ್ಲಿ ನಡೀತಿರ್ತಾವ. ಒಂದೊಂದು ಕಡೆಗೆ ಒಂದೊಂದು ತರಹದ ಪಧ್ಧತಿ. ಒಟ್ಟಾರೆ, ಇಂತಹ ಜಾತ್ರೆಗಳು ಒಮ್ಮೆ ನಡೆದ್ರ ಮುಂದಿನ ಜಾತ್ರೆ ನಡೀಯೋದು 15 -20 ವರ್ಷಗಳ ನಂತರ. ಇಂತಹ ಜಾತ್ರೆಗೆ ತಮ್ಮ ವಯಸ್ಸು ತಳಕು ಹಾಕಿ ಆ ಒಳಗಿನ ಜಾತ್ರ್ಯಾಗ,ಇಲ್ಲಾ ಹೊರಗಿನ ಜಾತ್ರ್ಯಾಗ ನನಗೆ ಇಂತಿಷ್ಟು ವರ್ಷ ಆಗಿತ್ತ ನೋಡ್ರಿ. ಇಲ್ಲ ಅಂದರ ದೊಡ್ಡ ದೊಡ್ಡ ಮಂದಿ ಸತ್ತಿದ್ದನ್ನು ಹೋಲಿಸಿ, ‘ನೆಹರೂ ಸತ್ತಾಗೋ, ಶಾಸ್ತ್ರೀ ಸತ್ತಾಗೋ, ಇಷ್ಟ ಇದ್ನಿ ನೋಡ್ರಿ’ ಅನ್ಮ್ನವ್ಯದು ತೀರ ಸಾಮಾನ್ಯ. ಹೀಂಗ ಸದ್ದಮುದ್ದ ಬದುಕು ನಡೀತಿತ್ತ ಆಗೆಲ್ಲ ಹಳ್ಯಾಗ ಅಂತಿದ್ದ ಫಕೀರಪ್ಪ.
ಮಳೆ ಮ್ಯಾಲೆ ಅವಲಂಬನೆ ಹೊಂದಿದ ಭೂಮಿ ಸೀಮಿ ಆಗೆಲ್ಲ. ತನ್ನ ತುಂಡು ಭೂಮ್ಯಾಗ ರೆಂಟಿ ಹೊಡೀವಾಗ, ಉತ್ತು ಬಿತ್ತುವಾಗ ತಾನೊಂದು ಕಡೆ ನೊಗಕ್ಕ ಹೆಗಲ ಕೊಟ್ಟರ, ಇನ್ನೊಂದು ಕಡೆ ಶಿವನಿ. ಹಿಂದ ಹೆಂಡತಿ ಗಂಗವ್ವ ಬೀಜ ಬಿತ್ತುವಾಕಿ. ಗಂಗವ್ವ ಗಂಡಾಳ ಮಾಡೂ ಎಲ್ಲ ಕೆಲಸ ಹೌದು ಅನ್ನುವಂಗ ಮಾಡೂವಾಕಿ. ಸಂತೀದಿನ ಸೂರ್ಯೋದಯಕ್ಕೆ ಮುಂಚೆ ಎದ್ದು, ಬಸಪ್ಪ ಗಂಗವ್ವನ್ನ ಕರಕೊಂಡು ಹೊಲಕ್ಕೆ ಹೋಗುದು. ಅದಕ್ಕೂ ವೊದಲು ಬಸಪ್ಪ್ಪನ ಸಲುವಾಗಿ, ಗಂಗವ್ವ ಬೆಳ್ಳಿ ಚುಕ್ಕಿ ಮೂಡೋದಕ್ಕಿಂತ ವೊದಲು ಎದ್ದು ಒಲಿ ಹೊತ್ತಿಸಿ, ರೊಟ್ಟಿ, ಪುಂಡಿಪಲ್ಯನೋ ಮತ್ತಿನ್ನೇನೋ, ಚಟ್ನಿ ಬುತ್ತಿ ಗಂಟು ತಗೊಂಡು ಗಂಡನ ಸಂಗಡ ಹೋಗುವಾಕಿ. ಕಾಲಮಾನಕ್ಕ ತಕ್ಕಂಗ ಹೊಲದಾಗ ಬೆಳೆದ ಬದನೀಕಾಯಿಗಳನ್ನೋ, ಟೊಮ್ಯಾಟೋಗಳನ್ನೋ, ಬೆಂಡೆ, ಹೀರಿ, ಸೌತೆ, ಬಟಾಟೆ (ಆಲೂಗೆಡ್ಡೆ) ಮುಂತಾದ ತಾವು ಬೆಳೆದ ತರಕಾರಿಗಳನ್ನು, ಗಂಗವ್ವನ ಸಂಗಡ ಬಿಡಿಸಿಕೊಂಡು, ನಂತರ ಹೆಂಡತೀನ ಉಳಿದ ಹೊಲದಾಗಿನ ಕಳೆ ಕಸಕ್ಕಂತ ಬಿಟ್ಟು, ತಾನು ತಾಜಾ ಇರುವ ಆ ಬದನೀಕಾಯಿ, ತರಕಾರೀ ತುಂಬಿದ ಬುಟ್ಟಿ ಹೊಲದಿಂದ ತಲೀ ಮ್ಯಾಲೆ ಹೊತ್ತು, ಗಂಗವ್ವ ಕಟ್ಟಿದ ಬುತ್ತಿ ಬಗಲಾಗ ಹಾಕ್ಕೊಂಡು, ಹಳ್ಳದ ದಂಡೀ ರಸ್ತೆಗುಂಟ ಮೂರು ಹರದಾರಿ ದೂರದ ಪ್ಯಾಟೀ ಸಂತೀಗೆ ಹೋಗುವುದು ಅವನ ವಾರದ ದಿನಚರಿ. ತನ್ನ ತರಕಾರಿ ಮಾರಿಕೊಂಡು ಬಂದ ದುಡ್ಡಿನ್ಯಾಗ ವಾರದ ಬದುಕು ನಡೀಬೇಕು, ಆ ವಾರ ಅವರೆಲ್ಲ ಮನೆ ಮಂದಿ ಏನ್ ಉಣಬೇಕು, ಏನ್ ತಿನ್ನಬೇಕು ಅನ್ನೂದನ್ನು ನಿಷ್ಕರ್ಷೆ ಮಾಡೂದು ಆ ಸಂತೀನ ಏನ್ರೀ. ಸಂತಿಯೊಳಗ ಬಸಪ್ಪ ತನ್ನ ಮನೀಗೆ ಬೇಕಾಗೋ ಕಿರಾಣಿ ಆಗಲಿ, ತನ್ನ ಹೊಲದಾಗ ಬೆಳೆಯದೇ ಇದ್ದ ಕಾಳುಕಡಿ ಆಗಲಿ, ಹುಡುಗರಿಗೆ, ಗಂಗವ್ವನಿಗೆ ಬೇಕಾಗೋ ಬಟ್ಟೆ ಬರೆ ಆಗಲಿ ಏನೇನು ಬೇಕೋ ಅದನೆಲ್ಲಾ ಸಂತೀ ಮಾಡಿಕೊಂಡು ಮನೆಗೆ ಬರೂದನ್ನ$$ ಮನೀ ಹುಡುಗರೆಲ್ಲ ದಾರಿ ಕಾಯ್ತಿದ್ದವು. ಮನ್ಯಾನ ಹುಡುಗರಿಗೆಲ್ಲ ಬಸಪ್ಪ್ಪನ ತಲೆಮ್ಯಾಲೆ ಹಾಗೂ ಕೈಯಾಗಿನ ಚೀಲದ ಜೊತೆ, ಧೋತರದ ಚುಂಗನ್ಯಾಗ ಒಂದು ಸಣ್ಣ ಗಂಟ ಇರತಿತ್ತ, ಅವರ ದೃಷ್ಠಿಗಳು ಅದನ್ನೇ ಹುಡುಕುತಿದ್ದು. ಆ ಗಂಟನ್ಯಾಗ ಹುಡುಗರ ಜಾಯದಾದನ ಇರತಿತ್ತ. ಸಂತ್ಯಾಗ ಸಿಗೂ ಬೆಂಡು-ಬೆತ್ತಾಸು, ಕರದಂಟು, ಸಂತೀಯೊಳಗಿನ ಅಣ್ಣಪ್ಪನ ಚಹಾದ ಅಂಗಡ್ಯಾಗಿನ ಗುಂಡನ್ನ ಉಳ್ಳಾ ಗಡ್ಡಿ ಗೋಲಭಜಿ ಇರುವ ಆ ಗಂಟು ಹುಡುಗರ ಕೈಗೆ ಸಿಕ್ಕಿತಂದ್ರ ಎಂತÀಹ ಸಂಭ್ರಮ ಅಂತೀರಿ, ಅದನ್ನ ಒಯ್ದು ಹುಡುಗರೆಲ್ಲ ಒಯ್ದು ಅವ್ವನ ಕೈಗೆ ಕೊಡತಿದ್ದು. ಗಂಗವ್ವ ಎಲ್ಲಾರನೂ ಸುತ್ತಲೂ ಕುಂಡರಿಸಿ, ಆ ಸಿಹಿಯ ಜೊತೆ ಒಂದೊಂದು , ಇಲ್ಲಾ ಒಂದೂವರೆ ಭಜಿ ಹಂಚತಿದ್ಲು. ಭಜಿ ಅಲ್ರೀ ಅವು, ಮಕ್ಕಳ ಮ್ಯಾಲೆ ಮತ್ತ ಗಂಗವ್ವನ ಮ್ಯಾಲೆ ಹುಡಿಗಟ್ಟಿದ ಪ್ರೀತೀನ ಭಜಿ ರೂಪದಾಗ ಕೊಡತಿದ್ದ ಬಸಪ್ಪ. ಭಜಿ ತಿಂದ ಹತ್ತ ಮಿನಿಟ್ನ್ಯಾಗ ಪಕ್ಕದ ಮನೀ ಅಷ್ಟ ಅಲ್ಲಾ, ಇಡೀ ಓಣಿ ತುಂಬಾ ಹುಡುಗರಿಗೆ ್ಪಅವರು ಭಜಿ, ಕರದಂಟು ತಿಂದ ಸುದ್ದಿ ಗೊತ್ತಾಗಿ, ಎಲ್ಲಾರ ಮನ್ಯಾಗ ಹುಡುಗರ ರಂಪ ಶುರು, “ ಎವ್ವ, ನಮಗೂ ಕರದಂಟು, ಭಜಿ ಬೇಕೀಗ!” ಬಸಪ್ಪನ ಮಗಳು ಆಗಲೇ ಎಲ್ಲಾ ಕಡೀ ಬ್ಯಾಟಾ ಹಚ್ಚಿ ಬಂದಿರತಿದ್ಲ. ಪಾಪ ಆವರ ಮನ್ಯಾಗ ಎಲ್ಲಿಂದ ತರಬೇಕು ಭಜಿ,.
ಒಂದ ದಿನ ಬಸಪ್ಪನ ಪ್ರೀತಿಯ ಮಗಳು ಸಾಲಿಯಿಂದ ಬಂದು ಜ್ವರ ಬಂದು ಹಾಸಿಗೆ ಹಿಡದಾಕಿ, ಪ್ಯಾಟಿ ಡಾಕ್ಟರಗೆ ತೋರಿಸಿದರೂ ಜ್ವರ ಕಡಿಮೆ ಆಗೂ ಲಕ್ಷಣಗಳೇ ಕಾಣಲಿಲ್ಲ. ಡಾಕ್ಟರು ಟೈಫಾಯ್ಡ್ ಅಂದ್ರು. ಅವರೂ ಮಾಡೂ ಪ್ರಯತ್ನ ಮಾಡಿದರು. ಆದರೆ ದೇವರ ಇಚ್ಛೆ ಬೇರೇನೊ ಇತ್ತು.. ಹುಡುಗಿ ತೀರಿಕೊಂಡಳು. ಬಸಪ್ಪ ಮಾತ್ರ ಭಾಳ ತ್ರಾಸ ಮಾಡಕೊಂಡ. ಒಂದೆಡೆ ಹೆಂಡತಿನ್ನ ಸಮಾಧಾನ ಮಾಡಬೇಕು. ಮತ್ತ್ತ ಇನ್ನೊಂದುಕಡೆ ತನ್ನ ನೋವು ನುಂಗಿಕೋಬೇಕು. ಉಳದ ಒಬ್ಬ ಮಗನನ್ಮ್ನ ಇನ್ನೂ ಭಾಳ ಕಾಳಜಿಯಿಂದ ಬೆಳೆಸಿದ ಬಸಪ್ಪ. ಸಾಲಿ ಕಲತು ದೊಡ್ಡ ಮನಸ್ಯಾ ಆಗಲಿ ಅಂತ ದಿನಾನೂ ದೇವರಿಗೆ ಬೇಡಿಕೊಳ್ಳಾವ.
ಹೀಂಗ ದಿನಾ ಕಳೆಯುವುದರೊಳಗೆ ಹಳ್ಯಾನ ಮಕ್ಕಳೆಲ್ಲ ಸಾಲಿ ಕಲಿತು, ಹಳ್ಳಿಗೋಳದಾಗ ಅವರಿಗೆ ತಕ್ಕಂತ ಕೆಲಸ ಸಿಗದೇ ಇರುವುದರಿಂದ, ಸಮೀಪದ ಪಟ್ಟಣಗಳಿಗೆ ಕೆಲಸ ಹುಡುಕಿಕೊಂಡು ಸಣ್ಣದೇ ಆಗಲಿ, ಕಷ್ಟದ್ದ ಅಗಲಿ ಒಂದಿಲ್ಲೊಂದು ಉದ್ಯೋಗವನ್ನು ಊರಿನ ಹುಡುಗರು ಮಾಡ್ತಾ ಪಟ್ಟಣದಾಗ ಜೀವನ ಕಂಡುಕೊಳ್ಳುತಿದ್ದರು.. ಈ ಹಳ್ಳ್ಯಾಗಿನ ಹೊಲ-ಮನೆಯ ಬದುಕನ್ನು ಈಗಿನ ಹುಡುಗರು, ಅದರಾಗ ಸಾಲಿ ಕಲಿತವರು ಅಷ್ಟು ಇಷ್ಟ ಪಡ್ತಿದ್ದಿಲ್ಲ. ಪಟ್ಟಣದ ಆಡಂಬರದ ಸೆಳೆತ ಇದಕ್ಕೆಲ್ಲ ಕಾರಣ ಆಗಿತ್ತಂತ ಕಾಣ್ಸತ್ತದ.
ಬಸಪ್ಪನ ಮಗನೂ ಸಾಲಿ, ಕಾಲೇಜು ಅಂತಾ ಕಲೀದು ಮುಗಿದ ಮ್ಯಾಲೆ , ಆಗಿನ ಕಾಲದ ಹುಡುಗರ ಹಂಗ, ತಾನೂ ಪಟ್ಟಣಕ್ಕ ಹೋಗಿ ಒಂದ ಇದ್ದುದರಾಗ ಛಲೋ ಕೆಲಸ ಹುಡುಕ್ಕೊಂಡು ಅಲ್ಲೇ ಒಂದು ಸೂರು ಅಂತಾ ಮಾಡಿಕೊಂಡು ಇರಲಿಕ್ಕೆ ಹತ್ತಿಬಿಟ್ಟಿರ್ತಾನ. ಸ್ವಲ್ಪ ದಿನಾ ಆಗೂದ್ರೊಳಗ ಪಟ್ಟಣದ ಬದುಕಿನ್ಯಾಗ ಕಳಕೊಂಡು ಬಿಡ್ತಾನ.
ಮಗನದು ಪಟ್ಟಣದಾಗ ಒಂದ ಛಲೋ ಉದ್ಯೋಗ ಅಂತ ಆದ ಕೂಡಲೇ, ಬಸಪ್ಪನ ಹೆಂಡತಿಯ ಒತ್ತಾಸೆಯಿಂದ, ಬಸಪ್ಪ ಅಲ್ಲಿ ಇಲ್ಲಿ ಹುಡುಕಿ, ಒಳ್ಳೇ ಮನೆತನದ ಕನ್ಯೆಯೊಂದಿಗೆ ಮಗನ ಮದುವೆ ಮಾಡತಾನ. ತಮ್ಮ ಹಿರಿಯರು ಬಾಳಿ ಬದುಕಿದ ಮನೆ ಹೊಲದ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದ ಬಸಪ್ಪ, ಮಗ ಕರೆದರೂ ಮಗನ ಹತ್ತಿರ ಹೋಗಿ ಇರಲಿಕ್ಕೆ ಇಷ್ಟ ಪಡದ, ಅಲ್ಲೇ ಹಳ್ಳ್ಯಾಗ ಹ್ಯಾಂಗೋ ಬದುಕು ಸಾಗಿಸತಿದ್ದ. ಆಗಲೇ ಸಾಕಷ್ಟು ವಯಸ್ಸು ಆಗಿ ಹಣ್ಣಾಗಿದ್ದ ಬಸಪ್ಪ್ಪ, ಮಗ ಪಟ್ಟಣದಾಗ ಮನೆ ಮಾಡಿದರೂ, ಹೋಗಿದ್ದಿಲ್ಲ. ಹಿಂಗಾಗಿ ಮಗನ$$ ಅವಾಗ ಈವಾಗ ಬಂದು ಬಸಪ್ಪನ್ನ ನೋಡಿಕೊಂಡು ಹೋಗತಿದ್ದÀ.
ಈ ನಡುವೆ ಬಸಪ್ಪನ ಬಡತನದ ಬದುಕಿನ ನಿಜವಾದ ಆಸ್ತಿಯಾಗಿ ಇದ್ದ ಗಂಗವ್ವ ಕಾಯಿಲೆ ಬಂದು ನಾಲ್ಕ ದಿನ ಹಾಸಿಗೆ ಹಿಡಿದಂಗ ಮಾಡಿ, ದೇವರ ಪಾದ ಸೇರಿಬಿಟ್ತಾಳ. ಅದೇನೋ ಲೋ ಬಿಪಿ ಅಂದಂಗಾತು ಡಾಕ್ಟರು. ಮಗ ಸೊಸೆ ಆಗ ನಾಲ್ಕು ದಿನ ಅಂತ ಬಂದು ಹೋಗಿದ್ದು ಬಿಟ್ಟರೆ ಉಳಿದ ಸಮಯದಲ್ಲಿ ಬಂದದ್ದ ಕಡಿಮೆ. ಈಗೀಗಂತೂ ಬಸಪ್ಪ ತೀರ ಏಕಾಂಗಿಯಾಗಿ ಬಿಟ್ಟಿದ್ದ. ಹೆಂಡತಿ ಗಂಗವ್ವನ ಮರೆಯೂದು ಭಾಳ ಕಷ್ಟ ಆಗಿಬಿಟ್ಟಿತ್ತು ಅವನಿಗೆ, ಮರೆತಷ್ಟು ನೆನಪಾಗೋ ಜೀವ ಅದು. ತನಗಂತ ಎಂದೂ ಏನೂ ಕೇಳದನ, ಗಂಡನ ಬೇಕು ಬೇಡಗಳನ್ನು ಪೂರೈಸುವುದರಲ್ಲೇ ಜೀವ ಸವೆಸಿದ ಹಿರಿ ಜೀವ ಅದು. ಕಣ್ಣು ಮುಚ್ಚುವತನಕ ಸೇವೆಯನ್ನು ತಾದಾತ್ಮ್ಯದಿಂದ ಮಾಡಿದವಳು, ತನಗಂತ ಎಂದೂ ತಲೆ ಕೆಡಿಸಿಕೊಂಡವಳಲ್ಲ. ತನಗ ಏನು ಬೇಕು ಅಂತ ಕೇಳಿಕೊಳ್ಳುದು ಕೂಡ ಆಕೀಗೆ ಗೊತ್ತಾಗದಷ್ಟು ಮುಗ್ಧತೆಯನ್ನು ಬಸಪ್ಪ ಅವಳಲ್ಲಿ ಕಂಡುಕೊಂಡಿದ್ದ, ಮನೆಯ ವ್ಯವಹಾರವನ್ನು ನೋಡಿಕೊಂಡರೂ, ಹೊರಗಿನ ಯಾವದೇ ವಿಷಯದ ಬಗ್ಗೆ ಅಕ್ಕ ಪಕ್ಕದವರ ಜೊತೆ ಮಾತು ಬಂದರೆ, “ಏನಿದ್ದರೂ, ನಮ್ಮ ಹಿರ್ಯಾಗ ಗೊತ್ತವಾ” ಅನ್ನುವಾಕಿ, ಬಸಪ್ಪನೂ ಪ್ಯಾಟೀಗೆ ಹೋದಾಗ ಮರೀಲಾರದ ಮಕ್ಕಳ ಬೇಡಿಕೆಗಳೊಂದಿಗೆ, ಗಂಗವ್ವಗ ಏನೇನು ಬೇಕು ಅಂತಾ ಎಲ್ಲಾ ತಾನ್ ಲೆಖ್ಖ ಹಾಕಿ ತಗೊಂಡು ಹೋಗುವಂವ. ಗಂಡ ಏನು ಒಯ್ದರೂ ಅವಳಿಗೆ ಎಲ್ಲವೂ ಮಾನ್ಯ. ಗಂಡ ತಂದಾನ ಅಂತಾ ಆಜೂ ಬಾಜೂ ತೋರಿಸಿ ಸಂಭ್ರಮ ಪಡುವವಳು, ಈಗ ಅವಳಿಲ್ಲದ ರಾತ್ರಿಗಳಲ್ಲಿ, ಎಷ್ಟೋ ಸರ್ತಿ ಅವಳ ನೆನಪಿನ್ಯಾಗ ಬೆಳಗಿನವರೆಗೂ ಬಸಪ್ಪ ಕುಂತಲ್ಲೇ ಕಲ್ಲಾಗಿ ಕೂತಿರಿದಿದ್ದ. ಅವನ ಪ್ರತಿಯೊಂದು ಗಳಿಗೆಯೊಳಗೂ, ಉಸಿರಿನೊಳಗೂ ಒಳಸುಳಿಯಾಗಿ ಇದ್ದಾಕಿ ಈಗ ಇಲ್ಲಾ ಅಂದರ ಮುದಿ ಜೀವಕ್ಕ ಹ್ಯಂಗ ಆಗಿರಬೇಕು! ಅಗದೀ ಜೊತೆಗೆ ಇರಬೇಕಾದ ಸಮಯದೊಳಗ ಆಕೀ ಇಲ್ಲಾ ಅನ್ನೂದು ನುಂಗಲಾರದ ತುತ್ತಾಗಿತ್ತು ಅವನಿಗೆ. ಬರಬರುತ್ತ ಊರಮುಂದಿನ ಆಲದ ಮರದ ಕಟ್ಟೆಮ್ಯಾಲನ ಹೆಚ್ಚಿನ ಸಮಯ ಕಳೆಯೋದು ರೂಢಿಮಾಡಿಕೊಂ ಡಿದ್ದ. ವೊನ್ನೆ ಅಂದ್ರ ಹೋದ ವಾರ ಹೊಲದ ಲಾವಣಿ ರೊಕ್ಕ, ಹೊಲ ಲಾವಣಿಗೆ ಅಂತ ಕೊಟ್ಟ ಹೊಲದವರಿಂದ, ಇಸಿದುಕೊಂಡು ಹೋಗಲಿಕ್ಕೆ ಮಗ, ತನ್ನ ಮUನೊಂದಿಗೆ, ಅಂದ್ರ ಬಸಪ್ಪಜ್ಜನ ವೊಮ್ಮಗನೊಂದಿಗೆ, ಊರಿಗೆ ಬಂದಿದ್ದ. ಮಗ ಬಂದಿದ್ದಕ್ಕಿಂತ ವೊಮ್ಮಗನ್ನ ಹಳ್ಳಿ ಕಡೆ ಕರಕೊಂಡ ಬಂದಿದ್ದಕ್ಕ ಬಸಪ್ಪಜ್ಜ ಭಾಳ ಖುಶಿ ಪಟ್ಟಿದ್ದ.
ವೊಮ್ಮಗನ ಜೊತೆಗೆ ಆಟ ಆಡೂವಾಗ, ವೊಮ್ಮಗ ಅಜ್ಜಗ ಹೇಳ್ತಾ ಇದ್ದ, ‘ ಅಜ್ಜ, ಅಲ್ಲೆ ದೂರ ಸೋಲೋಮನ್ನ ಐಲ್ಯಾಂಡ’ ಅಂತ ದೇಶ ಅದ ಅಂತ. ಅಲ್ಲಿನ ಮೂಲನಿವಾಸಿಗಳು, ಯಾವ ಮರವನ್ನಾದರೂ ಕೆಡುವುದು ಇತ್ತು ಅಂದ್ರ , ಒಂದು ಗುಂಪು ಕೂಡಿ, ಕೆಡುವ ಬೇಕು ಅನ್ನೋ ಮರದ ಹತ್ತಿರ ಹೋಗಿ, ಅದರ ಸುತ್ತಲೂ ನಿಂತು ಚನ್ನಾಗಿ ಬೈಯ್ತಾರ ಅಂತ, ಮತ್ತ ಮರಳಿ ತಮ್ಮ ಮನೆಗಳ ಕಡೆಗೆ ಬಂದು ಬಿಡ್ತಾರ ಅಂತ. ಮತ್ತ ಸ್ವಲ್ಪ ದಿನಗಳು ಆದ ಮ್ಯಾಲೆ, ಆ ಮರ ಒಣಗಿ , ಒಂದು ದಿನ ತಾನ್$$ ತಾನಾಗಿ ಬಿದ್ದುಹೋಗ್ತದಂತ. ಅಂದರ ಮರಗಳಿಗೂ ಮನಸ್ಸು , ಹೃದಯ ಅದಾವು ಅಂದಂಗ ಆತು ಹೌದಲ್ಲ್ಲೋ “ಅಂತ ಹೇಳಿ , ಇದು ನಿನಗೆ ಗೊತ್ತಿತ್ತ ಅಜ್ಜ ಅಂತಲೂ ಕೇಳಿದ್ದ. ಇಂಥವೆಲ್ಲ ನಮ್ಮಂಥ ಹಳ್ಳಿಯವರಿಗೆ ಹೆಂಗ ಗೊತ್ತಾಗ್ಬೇಕು ಹೇಳು ಅಂತ ಅಕ್ಕರೆಯಿಂದ ವೊಮ್ಮಗನ ತಲೆ ಪ್ರೀತಿಯಿಂದ ಸವರಿ ಅಜ್ಜ ಹೇಳಿದ್ದ, “ಆದರೆ ನಮ್ಮ ಹಳ್ಳ್ಯಾಗೂ ನಮ್ಮ ನಮ್ಮ ಹೊಲಗೋಳು ಅಂದ್ರ ನಮಗೆ ದೇವರು ಇದ್ದಂಗ, ಅಲ್ಲೇ ನಮ್ಮ ಮನೆತನದ ಹಿರ್ಯಾರು, ಅಪ್ಪ , ಅವ್ವ ಎಲ್ಲಾ ಬದುಕು ಮಾಡಿ ಸತ್ತೋದ್ರು. ಇಂದಿಗೂ ಆ ಹೊಲಕ್ಕ ಹೋದ್ರ ಅವರೆಲ್ಲ ಅಲ್ಲೇ ಎಲ್ಲೊ ನಮ್ಮ ಮಗ್ಗಲದಾಗ ಅದಾರ ಅಂತ ಸಾಕಷ್ಟು ಸಲ ನನಗೆ ಅನ್ನಿಸಿದ್ದು ಸುಳ್ಳಲ್ಲ ಮತ್ತ” ಅಂದಿದ್ದ ಬಸಪ್ಪಜ್ಜ ವೊಮ್ಮಗನಿಗೆ.
ಮಗನಿಗೆ ತನ್ನ ಮೇಲೆ ಇತ್ತಿತ್ತಲಾಗಿ, ಪ್ರೀತಿಯಾಗಲಿ, ಕಾಳಜಿಯಾಗಲಿ ಕಡಿಮೆ ಆಗುತ್ತಿರುವುದನ್ನು ಬಸಪ್ಪಜ್ಜನ ಮನಸ್ಸು ಅರಿತು, ಅನುಭವಿಸಿ, ಮನಸ್ಸಿನಲ್ಲೇ ಬಹಳ ಬೇಜಾರು ಪಟ್ಟುಕೊಂಡಿತ್ತು. ಹಾಗಂತ ಯಾರ ಮುಂದೆಯೂ ಅಂದವ ಅಲ್ಲ, ಇಲ್ಲ ಆಡಿಕೊಂಡವ ಅಲ್ಲ. ಆದರೂ ಮಗನ ಮ್ಯಾಲಿನ ಪ್ರೀತಿ ಎಲ್ಲಿಗೆ ಹೋಗ್ಬೇಕು, ವೊನ್ನೆ ಊರಿಗೆ ಮಗ ಬಂದಾಗ , ಅಂದು ಬಸಪ್ಪ ಹೊರಗ ನೀರ ಕಾಸು ಒಲೀ ಮ್ಯಾಲೆ ತತ್ತಿ ಆಮ್ಲೆಟ್ ಮಾಡಿಸಿ, ಮಗನಿಗೆ ಕೊಡಿಸಿದ್ದ, ಅಂದು ವೊಮ್ಮಗ ತÀನಗೂ ಬೇಕು ಅಂತ ಹಠ ಮಾಡಿದ್ರೂ ಮಗ ಅವಂಗ ತಿನ್ನಾಕ ಕೊಡಲಿಲ್ಲ. ‘ಅದೂ ತಿಂತಿತ್ತ, ಕೊಡಬೇಕಿಲ್ಲೋ ಸ್ವಲ್ಪ’ ಅಂತ ಬಸಪ್ಪ ಅಂದ್ರ “ಬ್ಯಾಡ ಎಪ್ಪಾ, ನಾಳೆ ಎಲ್ಲಾ ಬಿಟ್ಟು ಇದನ್ನ$$ ಮಾಡಕತ್ತ ಅಂದ್ರ ಹೆಂಗ. ಮುಂದ ತನಗ ತಿಳುವಳಿಕೆ ಬಂದಾಗ , ತನಗ ತಿಳದಂಗ ಮಾಡವಲ್ಲಾಕ, ಆವಾಗ ಬ್ಯಾಡ ಅನ್ನೋರು ನಾವ್ಯಾರು” ಅಂದಿದ್ದ. ಮಗನ್ನ ತತ್ವಕ್ಕ ತುಸು ಮೆಚ್ಚಿಗೇನೂ ಆಗಿತ್ತು ಬಸಪ್ಪಜ್ಜನಿಗೆ.
ಸ್ವಲ್ಪ ದಿನಗಳು ಕಳೆದ ಮೇಲೆ, ಒಂದ ದಿನ ಊರ ಮುಂದಿನ ಕಟ್ಟೆ ಮ್ಯಾಲ ಸಂಜೀ ಮುಂದ , ನಾಲ್ಕ ಮಂದಿ ಅದೂ ಇದೂ ಅಂತ ಮಾತಾಡ್ತಾ ಕುಳಿತಾಗ, ಬಸಪ್ಪಜ್ಜನೂ ಅದ ಬಂದು ಕೂತಿದ್ದ. ಅದೂ ಇದೂ ಸುದ್ದಿ , ಕಟ್ಟೆ ಮ್ಯಾಲೆ ಏನಾರೆ ನಡದ ಇರ್ತಾವ. ಈಗೀಗಂತೂ ಬಹುತೇಕ ಆ ಹಳ್ಳಿ ಊರಾಗ ಎಲ್ಲರ ಮನ್ಯಾಗ , ಅಪ್ಪ ಅವ್ವನ್ನ ಊರಾಗ ಬಿಟ್ಟು ಮಕ್ಕಳು, ದೂರದ ಪಟ್ಟಣಗೋಳದಾಗ ಇರೂದು ವಾಡಿಕೇನ ಆಗೇದ, “ಏನೋ ಬಸಪ್ಪ” ಅಂತ ಹಿಂದಿನಿಂದ ಬಂದ ಧ್ವನಿಕಡೆ ಬಸಪ್ಪ ತಿರುಗಿ ನೋಡಿದಾಗ, ಹಿಂದಿನ ಓಣಿ ಫಕೀರಪ್ಪ ಕಟ್ಟೀ ಕಡೆಗೆ ಬಂದು ಬಸಪ್ಪನಿಗೆ ಹೇಳಿದ, ‘ಅಲ್ಲೋ ಬಸಪ್ಪ, ಮಗ ಹೊಲ ಮಾರತೀನಿ ಅಂತಾನಂತಲ್ಲೋ, ಅಲ್ಲಾ ನೀ ಬದುಕು ಮಾಡಿದ್ದ ಹೊಲಾನಪಾ ಅದು. ಏಕಾಎಕಿ ಮಾರಿದ್ರ ಹೆಂಗ. ಹೋದ ವಾರದಾಗ ಭೆಟ್ಟಿ ಆಗಿದ್ದ ನಿನ್ನ ಮಗ, ನಾನೂ ಸುದ್ದಿ ಕೇಳಿದ್ದೆ. ಅದಕ್ಕ ನನಗೂ ಸುಮ್ಮನಿರುವುದು ಆಗಲಿಲ್ಲ ಏನಪಾ.’
“ಅಲ್ಲ ನಿಮ್ಮ ಅಪ್ಪ, ನಿಮ್ಮ ಮನೆತನದ ಹಿರ್ಯಾರೆಲ್ಲ ಬೆವರು ಸುರಿಸಿ ಬದಕ ಮಾಡಿದ್ದು. ಅತ್ತದ್ದು , ನಕ್ಕದ್ದು ಎಲ್ಲಾ ಅದ ಹೊಲದಾಗನ ಏನಪಾ. ಅದನ್ನು ಮಾರಲಿಕ್ಕೆ ತೆಗದೀ ಅಂತಲ್ಲೋ ತಮ್ಮಾ , ಯಾಕೋ ಸುದ್ದಿ ಕೇಳ್ಯನ ಬ್ಯಾಸರ ಆತು ನೋಡಪಾ” ಅಂತ ಅಂವಗ ಹೇಳಿಬಿಟ್ಟೆ ಏನಪಾ. ಅದಕ್ಕ ಅವನೇನಂದ ಅಂತ ಅಲ್ಲೇ ಇದ್ದ ಮರೆಪ್ಪಜ್ಜ ಅಂದಾಗ ಹೂಂ ‘ ಅದನ್ಯಾಕ ಮಾರತೀಯೋ ಅಂದ್ರ’
“ ಹಂಗಲ್ಲೋ, ಇಲ್ಲಿ ಕೇಳ್ ಕಾಕಾ, ಒಂದ ಎಕರೇಕ್ಕ ರೇಟ್ ಈಗ ಹತ್ತರಿಂದ ಹನ್ನೆರಡು ಲಕ್ಷ ಆಗ್ಯಾವೋ ಕಾಕಾ. ಹೊಲದಿಂದನೂ ಅಂಥ ಉತ್ಪನ್ನನೂ ಏನೂ ಇಲ್ಲ. ಮತ್ತ ನಾನೂ ಅಲ್ಲೆ ಪಟ್ಟಣದಾಗ ಇರೂವವ. ಅಪ್ಪಗ ವಯಸ್ಸಾತು. ಇನ್ನ ಹೊಲ ಬೀಳ ಬಿಡೂದಕ್ಕಿಂತ, ಅದನ್ನ ಮಾರಿ ಪ್ಯಾಟಿ ಊರಾಗ ಏನಾರ ಬಿಜಿನೆಸ್ ಶುರುಮಾಡ್ಬೇಕೂಂತ ಮಾಡೀನೋ ಕಾಕಾ’. ಅಂದ . “ನೀ ಏನರೆ ಅನ್ನಪಾ, ಅವರಿರ್ತ ಹೀಂಗೆಲ್ಲ ಮಾಡೂದು, ನನಗಂತೂ ಸರಿ ಅನಿಸವಲ್ದು ಅಂತ ಮಾರೀ ಮುಂದ ಹೇಳೀನೇನಪಾ“ ಅಂತ ಆ ಬಸಪ್ಪಜ್ಜನ ಮಗನಿಗೆ ಅಂದಿದ್ದನ್ನು ಅವರ ಮುಂದ ಹೇಳಿದ ಫಕೀರಪ್ಪ. ಅದುವರೆಗೆ ಸುಮ್ಮನಿದ್ದ ಬಸಪ್ಪಜ್ಜ ಸ್ವಲ್ಪ ತಡದು ಹೇಳಿದ , “ಅಂವನ ಅವ್ವಂತೂ ಮ್ಯಾಲೆ ಮಾರಿ ಮಾಡಿ ಬಿಟ್ಳೂ, ಇನ್ನ ಉಳಿದಾಂವ ನಾನೊಬ್ಬ ಅಪ್ಪ ಮಾತ್ರ., ನನ್ನೂ ಮಾರಿಬಿಡು ಅಂತ ಹೇಳ್ಬೇಕಿಲ್ಲೋ ಅಂವಗ” ಅಂದಿದ್ದು ಯಾರಿಗೆ ಎದೀಗೆ ಹತ್ತಾಕಿಲ್ಲ!, ಎಲ್ಲಾದ್ರಾಗೂ ವ್ಯಾಪಾರಿ ಬುದ್ಧೀ ತೋರಿಸಿದ್ರ ಹೆಂಗ, ಭಾವನೆಗಳಿಗೆ ಕಿಮ್ಮತ್ತ ಇಲ್ಲನ ಹಂಗಾದರ ಅನ್ನೋ ಸಣ್ಣ ವಿಚಾರ ಕೂಡ ತಿಳಿಯಂಗಿಲ್ಲೇನು ಈಗಿನ ಹುಡುಗರಿಗೆ ಅಂತೀನಿ, ಅಂತ ಇನ್ನೊಬ್ಬರು ಹೇಳತಿದ್ದುದು ಬಸಪ್ಪನ ಕಿವಿಗೆ ಬಿತ್ತು. ಕಟ್ಟಿ ಮ್ಯಾಲೆ ಕುಂತ ಹಿರ್ಯಾರಿಗೆ ಮತ್ತ ಅವರಿಗಿಂತ ಹಿರಿದಾದ ಆ ಕಟ್ಟೆಗೂ, ಆ ಕಟ್ಟೆಯ ಮೇಲಿನ ವಿಶಾಲ ಆಲದ ಮರಕ್ಕೂ ಇನ್ನೂ ಏನೇನು ಕೇಳಿಸಿಕೊಳ್ಳಬೇಕೇನೋ ಶಿವನೇ ಅಂತ ಅನ್ನಿಸಿಬಿಟ್ಟಿತ್ತು.
ಸಾಕಷ್ಟು ಚೌಕಾಸಿ ಮಾಡಿ, ಮಗ ಒಂದ ದಿನ ಹೊಲ ಮಾರಿಯೇ ಬಿಟ್ಟ. ಅಪ್ಪ ಒಲ್ಲೆ ಅಂದರೂ ಹಠ ಮಾಡಿ ಅವನನ್ನು ತನ್ನೊಡನೇ ಪಟ್ಟಣದ ಮನೆಗೆ ಕರಕೊಂಡ ಪಟ್ಟಣಕ್ಕ ಹೋದ. ಹೋಗು ಮುಂದ ಮನೆಯಲ್ಲಿರುವ ಕಿಮ್ಮತ್ತಿನ ಸಾಮಾನೆಲ್ಲ ತನ್ನ ಮನೀಗಿ ಸಾಗಿಸಿದ, ಹೊಲ ಮಾರಿದ ಹಣ, ತನ್ನಲ್ಲಿರೋ ಉಳಿತಾಯದ ಹಣ ಹಾಕಿ ಒಂದ ಕಂಪನಿ ತಗದು, ಅದರ ಮಾಲಿಕ ಅನಿಸಿಕೊಂಡ. ಕೆಲಸದಾಗ ಅದೆಷ್ಟು ಮುಳುಗಿಬಿಟ್ಟ ಅಂದ್ರ ಅಪ್ಪನ ಆರೋಗ್ಯ ದಿನದಿಂದ ದಿನಕ್ಕೆ ಬಹಳ ಹದಗೆಡತಾ ಬಂದು, ಒಂದು ದಿನ ಸೊಸೆ ಅವರನ್ನು ನೋಡಿಕೊಳ್ಳುವುದು ಆಗಂಗಿಲ್ಲ ಅಂದ್ಲು. ವಯಸ್ಸು ಆವರಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಎರಡು ತುತ್ತಿನ ಊಟಕ್ಕಾದರೂ ಮಗನನ್ನು ಅವಲಂಬಿತನಾಗಿದ್ದ ಅಪ್ಪ. ಬ್ಯೂಸಿಯಾಗಿದ್ದ ಮಗ ಅನಿವಾರ್ಯವಾಗಿ , ಯಾರೋ ಗೆಳೆಯರು ಸೂಚಿಸಿದಂತೆ, ಒಂದು ದಿನ, ಅಪ್ಪನ್ನ ಒಪ್ಪಿಸಿ, ವೃದ್ಧಾಶ್ರಮದಾಗ ಒಯ್ದು ಅಪ್ಪನ್ನ ಸೇರಿಸಿಬಿಟ್ಟ. ವಯೋ ಸಹಜ ಕಾಯಿಲೆ ಕಷಾಯ ಬಂದಾಗ ಆಗಲಿ, ಅಪ್ಪನನ್ನು ನೋಡಬೇಕೆಂಬ ಕರ್ತವ್ಯದಿಂದ ಆಗಲಿ, ಮಗ ತನ್ನ ಕಂಪನಿ ಗದ್ದ¯ದಾಗ ಅಪ್ಪನ್ನ ನೋಡಾಕ ಬಂದಿದ್ದ ಕಡಿಮೆ. ಒಂದು ದಿನ ಬಹಳ ಉಸಿರಾಟದ ತೊಂದರೆಯಾಗಿ ಯಾಕೋ ಬಹಳ ನೆನಸಾ ಕತ್ಯಾನಂತ ಮಗಗ ವೃದ್ಧಾಶ್ರಮದವರು ಫೋನ್ ಮಾಡಿ ತಿಳಿಸಿದ್ರೂ, ಮಗ ಮೀಟಿಂಗಿನ್ಯಾಗ ಇರುವುದಾಗಿ ತಿಳಿಸಿ, ಆಸ್ಪತ್ರೆಗೆ ತೋರಿಸಲು ತಿಳಿಸಿದ. ಚಿಕಿತ್ಸೆ ಫಲಕಾರಿಯಾಗದೇ ಕೊನೆಗೂ ಬಸಪ್ಪ ತೀರಿಕೊಂಡ. ವೃದ್ಧಾಶ್ರಮದವರು ಮಗನಿಗೆ ಸುದ್ದಿ ಮುಟ್ಟಿಸಿದರು. ಬ್ಯೂಸಿ ಇರೋದ್ರಿಂದ ಅಪ್ಪನ ಶವವನ್ನ ತನ್ನ ಮನೆಗೆ ತೆಗೆದುಕೊಂಡು ಬರಲು ತಿಳಿಸಿದÀ. ಇನ್ನಷ್ಟ ಲೇಟ್ ಮಾಡಿದ್ರ ಅಲ್ಲೇ ಹುಗಿದು ಹಾಕಲಿಕ್ಕೋ , ಇಲ್ಲಾ ಸುಡೋದುಕ್ಕೋ ಹೇಳಿಗೀಳ್ಯಾನಂತ ಕೂಡಲೇ ಅವನ ಮನೆಗೆ ಅನಿವಾರ್ಯವಾಗಿ ಶವ ತೆಗೆದುಕೊಂಡು ಹೋಗಿ ಕೊಟ್ಟು ಬರತಾರ ಆ ವೃದ್ಧಾಶ್ರಮದವರು.
ತಿಥಿ ದಿವಸ ಊರಿಂದ ಮಾತಾಡಿಸಲಿಕ್ಕೆ ಬಂದವರಲ್ಲಿ ಫಕೀರಪ್ಪನೂ ಇದ್ದ. ಸಾಂತ್ವನ ಹೇಳಲಿಕ್ಕೆ ಬಂದವಗ, ತಾನು ಸತ್ತವರ ಮನೀಗೆ ಬಂದೀನೋ ಅಥವಾ ಮತ್ತೆಲ್ಲ್ಯಾರ ಬಂದೀನೋ ಅನ್ನೋದೇ ಅರ್ಥವಾಗದಷ್ಟು ಅದ್ದೂರಿ ಸ್ಥಿತಿ ಅಲ್ಲೆಲ್ಲ. ಆಳೆತ್ತರದ ಬಸಪ್ಪನ ಫೋಟೋ, ಅದು ಮುಚುವಷ್ಟು ಹೂ ಹಾರಗಳು!. ಆದರೆ ಯಾರ ಮುಖದ ಮೇಲೂ ನೋವಿನ ಗೆರೆಗಳೇ ಇಲ್ಲ. ಬಸಪ್ಪನ ಮಗ ಎದುರು ಸಿಕ್ಕಿದಾಗ, ಸಾಂತ್ವನದ ಎರಡು ಮಾತು ಹೇಳಲೇಬೇಕು ಅಂತ ಅನ್ನಿಸಿದ್ರೂ, ಕುಂತ ಮಾತಾಡಾಕ ಅಲ್ಲಿ ಯಾರಿಗೂ ಪುರುಸೊತ್ತ ಇದ್ದಿಲ್ಲ. ಬಸಪ್ಪನ ವೊಮ್ಮಗ ಮಾತ್ರ ಅಜ್ಜನ್ನ ಫೋಟೋ ಕಡೇಗನ ಅಜ್ಜನ್ನ ತದೇಕವಾಗಿ ನೋಡ್ತಾ ಒಂದೆಡೆ ನಿಂತಿದ್ದ. ಫಕೀರಪ್ಪ ಆ ವೊಮ್ಮಗನ ಕಡಿಗೇನ ಹೋಗಿ, ಅವನ್ನ ತಲೆ ಸವರಿ, ತನ್ನ ಪ್ರೀತಿ ವ್ಯಕ್ತ ಪಡಿಸಿ, ನಿನಗೊಂದು ಮಾತು ಹೇಳ್ತೀನಿ ವೊಮ್ಮಗನ, ನಿಮ್ಮ ಅಜ್ಜ ಭಾಳ ಛಲೋ ಮನಸ್ಯಾ, ಒಟ್ಟ ಭೂಮ್ಯಾಗ ಭಾಳ ದುಡದ, ನಿಮ್ಮ ಅಪ್ಪನ ಸಲುವಾಗಿ ಅಂತೂ, ಜೀವ ಗಂಧ ತೀಡಿದಂಗ ತೀಡಿದೇನಪಾ. ಮಗ ಮಗ ಅಂತ ಬಡಕೋತಿದ್ದ. ಯಾರ ಮುಂದನೂ ಏನೂ ಹೇಳಕೊಳ್ಳುವವ ಅಲ್ಲ. ಭಾಳ ನೋವು ನುಂಗಿದ ಏನಪಾ. ಅಂತಹ ಸಜ್ಜನ ಮನಸ್ಯಾ ಸಿಗೂದು ಇಂದಿನ ಕಾಲದಾಗ ಭಾಳ ಕಷ್ಟ ಏನಪಾ. ಹಾಂ, ಅಂದಹಾಂಗ ನಿಮ್ಮ ಅಜ್ಜ ದಿನಾ ಸಂಜೀಮುಂದ ಊರ ಚಾವಡಿ ಹತ್ತಿರ ಆಲದ ಮರದ ಕಟ್ಟೀಮ್ಯಾಲೆ ಕೂಡತಿದ್ದ ಏನಪಾ, ವಿಚಿತ್ರ ಅಂದರ ಅಂವ ತೀರಿಕೊಂಡ ದಿನಾನÀ$$ ಆ ಕಟ್ಟೆ ಮ್ಯಾಲ ಇದ್ದ ದೆವ್ವದಂಥ ಆಲದ ಮರ ಉರುಳಿ ಬೀಳಬೇಕಾ? . ಗಾಳಿ ಇಲ್ಲಾ, ಮಳೀ ಇಲ್ಲಾ, ಎಲ್ಲಾರಿಗೂ ಒಂಥರಾ ಅಶ್ಚರ್ಯನ ಏನಪಾ ಹಳ್ಯಾಗ. ಆದರೂ ಈಗಿನ ಹುಡುಗರು, ದಾರಿಗೆ ಅಡ್ಡ ಇದ್ದ ಮರ ಬಿದ್ದದ್ದು ಒಂದರೀತಿ ಛಲೋನ ಆತು ಬಿಡು ಅಂದಿದ್ದು ಮಾತ್ರ ಯಾಕೋ ಮನಸಿಗೆ ಸರಿ ಅನಿಸಲಿಲ್ಲ ಏನಪಾ“ ಅಂತ ಅದೇ ಸಾಂತ್ವನದ ಮಾತು ಅಂತ ಹೇಳಿಬಿಟ್ಟ. ಬೇರೆಯವರಿಗೆ ಸಾಂತ್ವನದ ಮಾತು ಹೇಳುವುದು ಒತ್ತಟ್ಟಿಗಿರಲಿ, ಈ ಮಾತು ಹೇಳಿದ್ದರಿಂದ ಫಕೀರಪ್ಪನ ಮನಸ್ಸಿಗೇ ಹೆಚ್ಚು ಸಮಾಧಾನ, ಸಾಂತ್ವನ ಆದಂಗ ಆಗಿತ್ತು. ಸಖೇದಾಶ್ಚರ್ಯದಿಂದ, ಏನೋ ನೆನಪಾಗಿ, ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು, ಅಜ್ಜನ ಫೋಟೋದತ್ತಲೇ ದಿಟ್ಟಿಸಿ ನೋಡುತ್ತ ವೊಮ್ಮಗು ನಿಂತು ಬಿಟ್ಟಿತು.. . . .
Comments
ಉ: ಅಪ್ಪ ( ಕಥೆ)
In reply to ಉ: ಅಪ್ಪ ( ಕಥೆ) by maheshbakali
ಉ: ಅಪ್ಪ ( ಕಥೆ)
ಉ: ಅಪ್ಪ ( ಕಥೆ)
In reply to ಉ: ಅಪ್ಪ ( ಕಥೆ) by H A Patil
ಉ: ಅಪ್ಪ ( ಕಥೆ)