ಹಣ್ಣು ಜೀವ ಸಿಹಿಯಾಯಿತು..

ಹಣ್ಣು ಜೀವ ಸಿಹಿಯಾಯಿತು..

ಕವನ

ಅವನು ಹುಟ್ಟು ಮಾತುಗಾರ

ಅವಳು ಮೌನಿ ಸುಂದರಿ,

ಪ್ರೀತಿ ಬೆಸುಗೆಯಲ್ಲಿ ಸೇತು ಕಟ್ಟಿದರು

ತೀರ ಎರಡಾದರು ಒಂದೆ ನೆಲೆ

ಅವರ ಒಲುಮೆ ಬೆಳಗಲು

ಜಗವಿದಾಯ್ತು ಕುಲುಮೆ..

 

ಮೈಗೆ ಬಟ್ಟೆ, ಹೊಟ್ಟೆಗೂಟ

ಮನಸಿಗಾಯ್ತು ಮಾತು ಕಥೆ

ಚಳಿಗೆಲೆಗಳು ಉದುರಿ ಮತ್ತೆ

ಶ್ರಾವಣದಲಿ ತೂಗಿ ಚಿಗುರು

ಹೂ ಹೂವನು ಬಳಸಿದಂತೆ..

 

ಮದುವೆಯಾಯ್ತು, ವರುಷವಾಯ್ತು

ಜಗಕೆ ಒಂದೆ ಯೋಚನೆ,

ಇವರಿದ್ದರು ಮಕ್ಕಳಂತೆ

ತೋಳು ಬಳಸಿದಂತೆ ಬೆಚ್ಚನೆ..

 

ಸಂಜೆ ಸಿನಿಮಾ, ದುಂಡು ಮಲ್ಲೆ

ಜಾಂಗೀರು ರಾತ್ರಿಗೆ,

ವರುಷ ವರುಷವಾಯ್ತು

ಪ್ರೀತಿ ಅರಳುತ್ತಲೆ ಇದೆ ಮೆಲ್ಲಗೆ..

 

ಮೊನ್ನೆ ತಾನೆ ಸಣ್ಣ ಪಾರ್ಟಿ

ಅವರಿಬ್ಬರ ಮದುವೆಯಾಗಿ 

ಆಯ್ತು ಕಾಲ ಸಿಕ್ಸ್ಟಿ

ಎಳೆಯ ಜೀವ ಹಳೆಯ ಭಾವ

ಮೂಡಿದಂದತೆ ಸೃಷ್ಟಿ..

 

ಕೂಡಿ ಕಂಡರೊಂದು ಕನಸು

ಒಲುಮೆಗರ್ಥ ಕೊಟ್ತರು,

ಹಣ್ಣು ಜೀವ ಸಿಹಿಯಾಯಿತು

ತಣ್ಣಗಾಯ್ತು ನೆತ್ತರು..

 

ಅಸಿವೆ ಇಲ್ಲ, ಆಸೆ ಇಲ್ಲ

ಮಣ್ಣಿನೊಲಗೆ ಅವನು ಮೌನಿ

ಇವಳೊಬ್ಬಳೆ ಕೂಗುತ್ತಾಳೆ

ಬೆಸೆದೊಲುಮೆಗೆ ಚಿರರುಣಿ..

 

ಒಂದೆ ಸೆಲೆತ, ಕೊಳೆತ ನೆನಪನೆಲ್ಲ

ಮಾಡಿ ಗೊಬ್ಬರ,

ಬಸಿರಾಗದೆ ಹಸಿರಾಗಿದೆ

ಅವರು ನೆಟ್ಟ ಗಿಡ ಮರ..

 

ಶಿವಪ್ರಸಾದ ಎಸ್.ಪಿ.ಎಸ್

 

 

Comments