ಚರ್ಚೆಗೊಳಗಾಗುತ್ತಾನೆ ಸೂರ್ಯ‌

ಚರ್ಚೆಗೊಳಗಾಗುತ್ತಾನೆ ಸೂರ್ಯ‌

ಕವನ

ಎಲ್ಲ ಬೀದಿಗಳಲ್ಲಿ ಏಕಕಾಲದಲ್ಲಿ ಓಡಾಡುವ ನಾನು

ಯಾರಿಗೂ ಕೇಳಿಸದ ತಮಟೆ.

ನೀವು ಯಾರೂ ಮುಟ್ಟುತ್ತಿಲ್ಲ..

ಆದರೂ ಬಡಿದುಕೊಳುತ್ತಿದ್ದೇನೆ.

 

ಮರವನ್ನು ವರ್ಣಿಸುವುದಿಲ್ಲ

ಬೆಂಕಿ ಕಡ್ಡಿ ಮಾಡುವುದು

ಬುಗುರಿ ಮಾಡುವುದು

ನಿಮ್ಮ ಕಾರ್ಖಾನೆಗೆ  ಬಿಟ್ಟಿದ್ದು.

 

ನದಿ ತೋರಿಸುತ್ತೇನೆ ವರ್ಣಿಸುವುದಿಲ್ಲ.

ತಿಕ ತೊಳೆಯುವುದು

ದೀಪ ತೇಲಿ ಬಿಡುವುದು

ನಿಮಗೆ ಬಿಟ್ಟಿದ್ದು.

 

ಸೌದೆ ಯಾವ ಗಿಡದ್ದು ಎಂದು

ಗುಣಗಾನ ಮಾಡಿದ ತಕ್ಷಣ

ಬಗ್ಗಿ ಒಲೆ ನೋಡದಿರು

ಅಲ್ಲಿರುವುದು ಬರೀ ಬೂದಿ.

 

ಧ್ವನಿ ಯಾವ ಹಕ್ಕಿಯದೆಂದು

ಹೊಗಳಿದ ಕೂಡಲೆ

ಹೊರಳಿ ನೋಡದಿರು.

ಅಲ್ಲಿರುವುದು ಬರೀ ಪುಕ್ಕ.

 

ಬೀಜವನ್ನು ವರ್ಣಿಸಿದ ಕೂಡಲೆ

ಹಣ್ಣಿಗಾಗಿ ತಟ್ಟೆ ನೋಡದಿರು

ಅದರಲ್ಲಿರುವುದು ಚೂಪು ಚಾಕು.

 

ಮುರಿದುಹೋಗುತ್ತದೆ ನಾಳೆ

ನನ್ನ ಕೈಮೂಳೆ.

ಅದು ಕಿತ್ತ ಹಣ್ಣಿನ ರುಚಿಗೆ ಏನೂ ಆಗುವುದಿಲ್ಲ.

 

ನಾನು ಓಡಿ ಹೋಗಿ

ಮುಟ್ಟಿ ಬಂದಿದ್ದ ಪ್ರತಿಮೆ

ಹಾಗೇ ಬೀರುತ್ತಿರುತ್ತದೆ ಮಹಿಮೆ.

ನಾಳೆ ನಾನು ಕುಂಟ.

 

ಕಾಯುವಾಗಲೂ ಸಾಯುವಾಗಲೂ

ಚರ್ಚೆಗೊಳಗಾಗುತ್ತಾನೆ ಸೂರ್ಯ.

------------------------

ಸಿ ವಿ ಶೇಷಾದ್ರಿ  

 

Comments