ಅಮರ ಮಧುರ ಪ್ರೇಮ...ಭಾಗ 5

Submitted by Jayanth Ramachar on Thu, 06/28/2012 - 15:16

ಎರಡು ವಾರದ ನಂತರ ಮತ್ತೆ ಕಾಲೇಜಿಗೆ ಬಂದವರಲ್ಲಿ ಹಲವರಿಗೆ ಅಬ್ಬಾ ಅಂತೂ ಕಾಲೇಜ್ ಶುರುವಾಯಿತಲ್ಲ ಎಂಬ ಭಾವನೆ ಇದ್ದರೆ ಮತ್ತೆ ಕೆಲವರಲ್ಲಿ ಥೂ ಎರಡು ವಾರ ಎಷ್ಟು ಬೇಗ ಕಳೆದು ಹೋಯ್ತು ಎಂಬ ಬೇಸರದಲ್ಲಿ ಇದ್ದರು. ಅದರಲ್ಲಿ ಅಮರ್ ಮೊದಲನೇ ಭಾವನೆಯವನಾದರೆ ಪ್ರೇಮ ಮತ್ತು ಮಧುರ ಎರಡನೇ ಭಾವನೆಯವರು. ಅಮರನಿಗೆ ಎರಡು ವಾರದಿಂದ ಮಧುರಳನ್ನು ನೋಡದೆ ತಲೆ ಕೆಟ್ಟು ಹೋದಂತಾಗಿತ್ತು. ಎಂದೂ ಯಾವ ಹುಡುಗಿಯನ್ನೂ ಇಷ್ಟು ಹಚ್ಚಿಕೊಳ್ಳದ ಅಮರ್ ಮಧುರಳನ್ನು ಅಷ್ಟು ಹಚ್ಚಿಕೊಂಡಿದ್ದು ಅವನಿಗೆ ನಂಬಲು ಆಗಿರಲಿಲ್ಲ.


ಮೊದಲ ದಿನ ಮೊದಲರ್ಧದ ತರಗತಿಗಳು ಮುಗಿದು ಅಮರ್ ಕ್ಯಾಂಟೀನ್ ನಲ್ಲಿ ಕುಳಿತು ಟೀ ಹೀರುತ್ತಿದ್ದ. ಹಿಂದಿಂದ ಯಾರೋ ಅಮರ್ ಎಂದು ಕರೆದಂತಾಯಿತು. ತಿರುಗಿ ನೋಡಿ ಹಾಯ್ ಪ್ರೇಮ, ಎಲ್ಲೇ ಅವತ್ತು ಫೋನ್ ಮಾಡಿದ್ದು ಆಮೇಲೆ ಫೋನ್ ಮಾಡೇ ಇಲ್ಲ ಕೋಪ ಬಂತಾ. ಐ ಆಮ್ ವೆರಿ ಸಾರಿ. ಅವತ್ತು ನಾನು ಹಾಗೆಲ್ಲ ಮಾತಾಡಬಾರದಿತ್ತು ನಿನ್ನ ಮನಸ್ಸು ನೋಯಿಸಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸು.


ಅಮರ್ ನಾನು ಪ್ರೇಮ ಅಲ್ಲ ಮಧುರ. ನಿಮ್ಮ ಬಳಿ ಸ್ವಲ್ಪ ಮಾತಾಡಬೇಕಿತ್ತು. 


ಮೊಟ್ಟ ಮೊದಲ ಬಾರಿಗೆ ಮಧುರ ತನ್ನನ್ನು ಹುಡುಕಿಕೊಂಡು ಬಂದು ಮಾತಾಡಿಸಿದ್ದು ಅಮರನಿಗೆ ಆಗಸವೇ ಕೈಗೆ ಸಿಕ್ಕಂತಾಗಿತ್ತು. ಒಳಗೊಳಗೇ ಸಂತೋಷದಿಂದ ಹುಚ್ಚೆದ್ದು ಕುಣಿಯುತ್ತಿದ್ದ. ಅಂತೂ ಇಂತೂ ಒಂದು ವರ್ಷದ ನಂತರ ಮಾತಾಡಿಸಲು ಬಂದಳಲ್ಲ.


ಅಮರ್...ಅಮರ್...ಓಹ್ ಸಾರಿ ಮಧುರ, ನಾನು ಏನೋ ಯೋಚನೆ ಮಾಡುತ್ತಿದ್ದೆ. ಹೇಗಿದ್ದೀರ? ಹೇಗಿತ್ತು ಎರಡು ವಾರದ ರಜೆ? ಅಪರೂಪಕ್ಕೆ ನನ್ನನ್ನು ಹುಡುಕಿಕೊಂಡು ಬಂದಿದ್ದೀರಾ ಹೇಳಿ ಏನು ತಗೋತೀರ ಕಾಫಿ, ಟೀ ಕೂಲ್ ಡ್ರಿಂಕ್ಸ್, ಸ್ನಾಕ್ಸ್?


ನೋ ಥ್ಯಾಂಕ್ಸ್ ಅಮರ್, ನಾನು ನಿಮ್ಮ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಅದಕ್ಕೋಸ್ಕರ ಬಂದೆ ಅಷ್ಟೇ. ನೋಡಿ ನಿಮಗೆ ಗೊತ್ತಿಲ್ಲದ ವಿಷಯ ಏನಲ್ಲ, ಪ್ರೇಮ ನಿಮ್ಮನ್ನು ತುಂಬಾ ಇಷ್ಟ ಪಡುತ್ತಿದ್ದಾಳೆ, ಅವಳ ಸ್ವಭಾವ ನಿಮಗೆ ಗೊತ್ತೇ ಇದೆ. ಏನನ್ನಾದರೂ ಇಷ್ಟ ಪಟ್ಟರೆ ಅವಳಿಗೆ ಅದು ದಕ್ಕಲೇ ಬೇಕು. ಇಲ್ಲವಾದರೆ ಅವಳು ಎಂಥಹ ಅನಾಹುತ ಮಾಡಿಕೊಳ್ಳಲು ಹೇಸುವುದಿಲ್ಲ. ಅದೇನೋ ಗೊತ್ತಿಲ್ಲ ನಿಮ್ಮನ್ನು ಬಹಳ ಹಚ್ಚಿಕೊಂಡು ಬಿಟ್ಟಿದ್ದಾಳೆ. ನೀವಿಲ್ಲದಿದ್ದರೆ ಬದುಕುವುದಿಲ್ಲ ಎಂದು ಹುಚ್ಚು ಹುಚ್ಚಾಗಿ ಮಾತಾಡುತ್ತಾಳೆ. 


ನಿಮ್ಮ ಮನಸಿನಲ್ಲಿ ಏನಿದೆಯೋ ಅದು ನನಗೆ ಗೊತ್ತಿಲ್ಲ. ಅವಳು ಕಾಲೇಜ್ ನಲ್ಲಿರಲಿ, ಊರಿನಲ್ಲಿರಲಿ ಸದಾ ನಿಮ್ಮ ಧ್ಯಾನದಲ್ಲೇ ಮುಳುಗಿರುತ್ತಾಳೆ, ಇತ್ತೀಚಿಗೆ ಓದಿನ ಬಗ್ಗೆಯೂ ಅವಳ ಆಸಕ್ತಿ ಕಡಿಮೆ ಆಗಿಬಿಟ್ಟಿದೆ. ನೀವು ಸಿಗದಿದ್ದರೆ ಅವಳು ಏನಾಗಿ ಬಿಡುತ್ತಾಳೋ ಎಂದು ಭಯ ಆಗುತ್ತಿದೆ. ನನಗೆ ಇಂಥಹ ವಿಷಯಗಳು ಮಾತಾಡಲು ಮುಜುಗರ ಆಗುತ್ತದೆ. ಆದರೆ ಪ್ರೇಮನ ಸಲುವಾಗಿ ಮಾತಾಡಲು ಬಂದಿದ್ದೇನೆ. ಮೊನ್ನೆ ಊರಿಗೆ ಹೋಗಿದ್ದಾಗ ಎರಡು ದಿನ ಚೆನ್ನಾಗೆ ಇದ್ದಳು. ನಂತರ ನಿಮ್ಮಿಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ, ಅಂದಿನಿಂದ ಏನೋ ಕಳೆದುಕೊಂಡ ಹಾಗೆ ವರ್ತಿಸುತ್ತಿದ್ದಾಳೆ. ಮುಖದಲ್ಲಿ ನಗು ಇದ್ದರೂ ಆ ನಗುವಿನಲ್ಲಿ ಪರಿಪೂರ್ಣತೆ ಇಲ್ಲ. ಏನಾಯಿತು ಅಮರ್?


ಮಧು ಸಾರಿ ಮಧುರ ನೋಡಿ ನಿಮಗೊಂದು ವಿಷ್ಯ ಹೇಳಬೇಕು. ಹೇಗೆ ಹೇಳಬೇಕೋ ಅರ್ಥ ಆಗುತ್ತಿಲ್ಲ. ನಿಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ ಇಡೀ ಕಾಲೇಜಿನಲ್ಲಿ ಸುಮಾರು ಜನ ಹುಡುಗಿಯರು ನನ್ನ ಪ್ರೀತಿ ಬಯಸಿ ಬಂದರು ಅವರೆಲ್ಲ ನಿಜವಾಗಿಯೂ ನನ್ನ ಪ್ರೀತಿ ಬಯಸಿ ಬಂದರೋ ಅಥವಾ ನನ್ನ ಹಿಂದಿರುವ ಆಸ್ತಿ ಬಯಸಿ ಬಂದರೋ ಗೊತ್ತಿಲ್ಲ. ಆದರೆ ಇದುವರೆಗೂ ಯಾವ ಹುಡುಗಿಯಲ್ಲೂ ನನಗೆ ನಿಜವಾದ ಪ್ರೀತಿ ಕಾಣಲಿಲ್ಲ. ಹಾಗಾಗಿ ಅವರೆಲ್ಲರನ್ನೂ ತಿರಸ್ಕರಿಸಿದೆ.


ಆದರೆ ಮೊಟ್ಟ ಮೊದಲ ಬಾರಿಗೆ ನಿಮ್ಮನ್ನು ನೋಡಿದಾಗ ನನಗೆ ನಿಮ್ಮ ಮೇಲೆ ಪ್ರೀತಿ ಮೂಡಿತು. 


ಅಮರ್ ನಾನು ಪ್ರೇಮ ಇಬ್ಬರೂ ನೋಡಲು ಒಂದೇ ರೀತಿ ಇರುವಾಗ ಅದು ಹೇಗೆ ಪ್ರೇಮ ಮೇಲೆ ಮೂಡದ ಪ್ರೀತಿ ನನ್ನ ಮೇಲೆ ಮೂಡಿತು?


ಮಧುರ ನೀವು ಹೇಳಿದ್ದು ನಿಜ ನೀವಿಬ್ಬರೂ ನೋಡಲು ಒಂದೇ ರೀತಿ ಇರಬಹುದು ಆದರೆ ನಿಮ್ಮಿಬ್ಬರ ಗುಣ ಒಂದೇ ಅಲ್ಲವಲ್ಲ. ನನ್ನ ಮಾತಿನ ಅರ್ಥ ಪ್ರೇಮ ಕೆಟ್ಟವಳು ಎಂದಲ್ಲ. ಅವಳೂ ಒಳ್ಳೆ ಹುಡುಗಿ ಆದರೆ ಅದೇನೋ ಗೊತ್ತಿಲ್ಲ ನಿಮ್ಮ ಸೌಮ್ಯ ಸ್ವಭಾವ, ನೀವಾಯಿತು ನಿಮ್ಮ ಓದಾಯಿತು ಎಂದು ಇರುವ ಗುಣ, ಯಾರೊಂದಿಗೂ ಹೆಚ್ಚು ಬೇರೆಯದಿರುವ ಗುಣ ನನಗೆ ವಿಶೇಷವಾಗಿ ಕಂಡಿತು. ಅದೇ ನನಗೆ ನಿಮ್ಮ ಮೇಲೆ ಪ್ರೀತಿ ಮೂಡಲು ಕಾರಣವಾಯಿತು. ಅಮರ್..ಒಂದು ವೇಳೆ ಪ್ರೇಮ ಕೂಡ ನನ್ನ ಗುಣಗಳನ್ನು ಅಳವಡಿಸಿಕೊಂಡರೆ ಅವಳನ್ನು ಇಷ್ಟ ಪಡುತ್ತೀರ? 


ಮಧುರ ಪ್ರೀತಿ ಎನ್ನುವುದು ಬೊಂಬೆ ಆಟವಲ್ಲ ಇಷ್ಟ ಬಂದ ಹಾಗೆ ಬದಲಾಯಿಸಿಕೊಳ್ಳಲು, ನನಗೆ ಇಷ್ಟವಾಗಿರುವುದು ನೀವು, ನಿಮ್ಮನ್ನು ಬಿಟ್ಟು ಇನ್ಯಾರ ಮೇಲೂ ನನಗೆ ಪ್ರೀತಿ ಮೂಡುವುದಿಲ್ಲ. ನಿಮಗೆ ಇಷ್ಟ ಇದ್ದರೆ ತಿಳಿಸಿ, ಇಲ್ಲವಾದರೆ ಜೀವನ ಪೂರ್ತಿ ಹೀಗೆ ಇದ್ದು ಬಿಡುತ್ತೇನೆ ಹೊರತು ಇನ್ಯಾರನ್ನೂ ಮಾಡುವೆ ಆಗುವುದಿಲ್ಲ.


ಅಮರ್ ನೀವೇನಂದಿದ್ದು ನಿಮಗೆ ಇಷ್ಟವಾಗಿದ್ದು ನನ್ನ ಗುಣ ತಾನೇ, ಪ್ರೇಮ ಕೂಡ ನನ್ನ ಗುಣ ಅಳವಡಿಸಿಕೊಂಡರೆ ಅವಳನ್ನು ಯಾಕೆ ನೀವು ಇಷ್ಟ ಪಡುವುದಿಲ್ಲ...


ಮಧುರ, ಪ್ರೇಮ ನಿಮ್ಮ ಗುಣಗಳನ್ನು ಅಳವಡಿಸಿಕೊಂಡರೂ ಅವಳು ಪ್ರೇಮ ಆಗೇ ಇರುತ್ತಾಳೆ ಹೊರತು ಮಧುರ ಆಗುವುದಿಲ್ಲ...ಮನುಷ್ಯನಿಗೆ ಗುಣ ತಾನಾಗೆ ಬರಬೇಕು, ಯಾವುದಕ್ಕೋ ಅಥವಾ ಯಾರಿಗೋಸ್ಕರಾನೋ ಬದಲಾಯಿಸಿಕೊಂಡರೆ ಅದು ನಕಲಿ ಆಗುತ್ತದೆ. ನನಗೆ ಅಂಥಹ ನಕಲಿ ಪ್ರೀತಿ ಬೇಡ...


ನೋಡಿ ಮಧುರ ಅದೆಲ್ಲ ಬೇಡ...ಐ ಲವ್ ಯೂ...ನಾನು ನಿಮಗೋಸ್ಕರ ಎಷ್ಟು ದಿವಸ ಬೇಕಾದರೂ ಕಾಯುತ್ತೇನೆ.. ನಿಧಾನವಾಗಿ ಯೋಚನೆ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ನಾನಿನ್ನು ಹೊರಡುತ್ತೇನೆ...

Rating
No votes yet

Comments