"ಪ್ರೀತಿ ಅನಿರ್ವಚನೀಯ ಅನುಭವ, ಅನುಬಂಧ."

Submitted by kamala belagur on Sat, 06/30/2012 - 18:14

"ಸಿಡಿಲಿಗೆ ರೌದ್ರತೆಯ ತೊರೆವಂತೆ
 ಕೋಗಿಲೆಗೆ ಕುಹೂ ದನಿಯ ಮರೆವಂತೆ
 ದರ್ಪಣಕೆ ಸುಂದರ ಬಿಂಬವ ತೋರುವಂತೆ
 ತೊಡಿಸಲಾದೀತೇ ಸಂಕಲೆಯ.
 ಹೇಳಲಾಗದ ಮಾತುಗಳ
 ಸ್ಫುರಿಸಲಾಗದ ಭಾವಗಳ ಸಂಕಲೆಯೊಳಗೆ
 ಮನುಜನೇಕೆ ಬಂಧಿ."
                   ಹೂವಿನಲ್ಲಿ ಅಡಗಿರುವ ಪರಿಮಳದಂತೆ ಪ್ರೀತಿಯು ಮಾನವನ ಎದೆಯಾಳದಲ್ಲಿ ಅರಳಿ ನಿಂತು ಜಗವೆಲ್ಲ ಸುಂದರವಾಗಿ ಕಾಣುತ್ತದೆ. ಪ್ರೀತಿಯೆಂದಾಕ್ಷಣ ಗಂಡು ಹೆಣ್ಣಿನ ನಡುವಿನ ಪ್ರೀತಿಯೆಂದೇ ಅರ್ಥೈಸಬೇಕಿಲ್ಲ.ಜಗತ್ತಿನ ಎಲ್ಲ ಜೀವಿಗಳಲ್ಲಿ ಕಾಣಬಹುದಾದ ಇದಕ್ಕೆ  ಮನುಷ್ಯನೂ ಹೊರತಾಗದ ಒಂದು ಸುಂದರ ಭಾವನೆ. ಪ್ರೀತಿಯೇ ಇಲ್ಲದವನು ಅಥವಾ ಇಲ್ಲದವಳು ಎಂದು ಯಾರನ್ನೂ ಧೂಷಿಸಲಾಗುವುದಿಲ್ಲ. ಮನಸ್ಸಿನ ಯಾವುದೊ ಮೋಲೆಯಲ್ಲಿ ಅಡಗಿರುವ ಕಹಿನೆನಪು ಅದರೆಡಗಿನ ತಿರಸ್ಕಾರಕ್ಕೆ ಕಾರಣವಾಗಿರಬಹುದು. ಇನ್ನು ಕೆಲವರಿಗೆ ವ್ಯಕ್ತಪಡಿಸಲು ಆಗದಿರಬಹುದು. ಈ ಜಗತ್ತಿನಲ್ಲಿ ಪ್ರೀತಿಯೆಂಬ ಶಬ್ಧವೇ ಇರುತ್ತಿರಲಿಲ್ಲದಿದ್ದಲ್ಲಿ  ನಮ್ಮ ಬದುಕಿಗೆ ಅರ್ಥವೇ ಇರುತ್ತಿರಲ್ಲಿಲ್ಲ.   ಪ್ರೀತಿ ಸೆಳೆತಗಳು ಮನುಷ್ಯರ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಕೊಂಡಿಗಳು. ಬಾಯಾರಿದವನಿಗೆ ಮರುಭೂಮಿಯಲ್ಲಿನ ಓಯಸಿಸ್ಗಳಂತೆ ತಂಪೆರೆದು ಜೀವಾಮೃತವನ್ನು ನೀಡುವ ಶಕ್ತಿ ಉಳ್ಳವು.
                  ಪ್ರೀತಿಯು ತಿಳಿನೀರ ಕೊಳದಂತೆ ನಿಚ್ಚಳ, ನಿರ್ಮಲ. ಮಗುವಿನ ಮುಗ್ಧ ಮೋಹಕ ನಗೆಯಂತೆ ನಿಶ್ಕಲ್ಮಷ.  ಎಲ್ಲೆಂದರಲ್ಲಿ ಯಾವಾಗೆಂದರೆ ಆವಾಗ ಬಳಸುವಂತದ್ದಲ್ಲ .  ಪ್ರೀತಿಯನ್ನು ಒಂದು ನಿರ್ಧಿಷ್ಟ ಪರಿಧಿಯೊಳಗೆ ಬಂದಿಸಿಡಲು ಆಗದು. ತನ್ನಷ್ಟಕ್ಕೆ ತಾನೇ ನಿರಂತರವಾಗಿ ಹರಿಯಬಹುದಾದ ಪ್ರೀತಿಯ ಆಳ ಅಗಲ ವಿಸ್ತಾರಗಳು ಆಸೀಮ.
                  ತಾಯಿ ತನ್ನ ಮಗುವನ್ನು ಎಷ್ಟು ಪ್ರೀತಿಸಬಲ್ಲಳು ಎಂದು ಪ್ರಶ್ನಿಸಲಾದೀತೇ? ನಂಬಿಕೆ ವಿಶ್ವಾಸಗಳು ಎಲ್ಲಿ ಬೆಳೆಯಲು ಸಾಧ್ಯವೋ ಅಲ್ಲಿ ಪ್ರೀತಿಯು ತಾನೇ ತಾನಾಗಿ ಹಿಂಬಾಲಿಸುತ್ತದೆ.ಯಾವ ಪ್ರತಿಫಲಾಪೇಕ್ಷೆಯಿಲ್ಲದೆ,ಯಾವ ಷರತ್ತುಗಳಿಗೆ ಒಳಪಡದೆ ಒಬ್ಬ ವ್ಯಕ್ತಿಯ ಕೊರತೆಯೊಂದಿಗೆ ಅವರನ್ನು ಒಪ್ಪಿಕೊಳ್ಳುವುದಿದೆಯಲ್ಲ,ಅದು ಪ್ರೀತಿಸುವ ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ದುರಂತವೆಂದರೆ  ಪ್ರೀತಿ ಶಬ್ದದ ವ್ಯಾಖ್ಯಾನ ವ್ಯಕ್ತಿವ್ಯಕ್ತಿಗಳಲ್ಲಿ ಬದಲಾಗುತ್ತಾ ಕಡೆಗೆ ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಮುಗ್ಧರ ಬದುಕಿಗೆ ಕಿಚ್ಚಿಟ್ಟು ಸಂತೋಷಿಸುವ ವರ್ಗಗಳು ಸಮಾಜದಲ್ಲಿ ಸೃಷ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಅರಿಯದ ಮುಗ್ಧರ, ಎಳೆಯ ಪೀಳಿಗೆಯನ್ನು  ಇಂತಹವರಿಂದ  ತಮ್ಮನ್ನು ತಾವು ರಕ್ಷಿಸಿಕೊಂಡು ಮುನ್ನಡೆಯುವಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ.
                     ರಾಮಕೃಷ್ಣ ಪರಮಹಂಸ, ವಿವೇಕಾನಂದ ,ಮಹಾತ್ಮ ಗಾಂಧೀಜಿ,ಮದರ್ ತೆರೇಸಾ ನಂತಹ ಅನೇಕ ಮಹನೀಯರು ತಮ್ಮನ್ನು ತಾವು ಪ್ರೀತಿಸಿಕೊಂಡುದಕ್ಕಿಂತ ಹೆಚ್ಚಾಗಿ ಜಗತ್ತನ್ನು ಪ್ರೀತಿಸಿದರು.ಜಗತ್ತೂ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿತು. ಪ್ರೀತಿಯಿಂದ ಮಾತ್ರ ಪ್ರೀತಿಯನ್ನು ಪಡೆಯಲು ಸಾಧ್ಯ ಅದು ಅಗ್ಗದ ವಸ್ತುವಲ್ಲ. ಆದರೆ ಎಂದೂ ಖಾಲಿಯಾಗದ ಅಕ್ಷಯ ಪಾತ್ರೆಯಂತೆ. ಹಂಚಿದಷ್ಟೂ ವೃದ್ದಿಸುತ್ತದೆ. ನೂರು ಮಕ್ಕಳಿದ್ದರೂ ಸಹ ತಾಯಿ ಸಮಾನವಾಗಿ ಪ್ರೀತಿ ಹಂಚಬಲ್ಲಳು."ಪ್ರೀತಿನೀಡು-ಪ್ರೀತಿಪಡೆ"  "ಪ್ರೀತಿ ಅನಿರ್ವಚನೀಯ ಅನುಭವ, ಅನುಬಂಧ."  ಅಸೀಮ ರೂಪಿ ಪ್ರೀತಿಯು ತನ್ನ ಅಂಗಳದಲ್ಲಿ ಮುಂಗಾರನ್ನು ಮೂಡಿಸುವುದಂತೂ ನಿಜ. 
ಕಮಲಬೆಲಗೂರ್.

 

Rating
No votes yet

Comments