ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-2

ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-2

ಮನೆಗೆ ಬಂದ ರಘು ಸ್ನಾನವನ್ನು ಮುಗಿಸಿ ಹಾಗೆಯೇ ಹಾಲ್ ನಲ್ಲಿದ್ದ ಸೋಫಾ ಮೇಲೆ ಕುಳಿತು ಯೋಚಿಸತೊಡಗಿದನು.ಅವನಿಗೆ ತಿಳಿದ ಹಾಗೆ ವಿನಯನಿಗೆ ಯಾವ ಶತ್ರುಗಳೂ ಇರಲಿಲ್ಲ.ವಿನಯನದು ತುಂಬಾ ಸ್ನೇಹಮಯವಾದಂತಹ ವ್ಯಕ್ತಿತ್ವ.ಎಲ್ಲರ ಜೊತೆ ತುಂಬಾ ಆನಂದವಾಗಿ ಕಾಲ ಕಳೆಯುತ್ತಿದ್ದನು.ಅಂತವನನ್ನು ಕೊಲೆ ಮಾಡಲು ಏನು ಕಾರಣವಿದ್ದಿರಬಹುದೆಂದು ರಘು ಯೋಚಿಸಿದನು.ರಘು ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ಹೋದಾಗ ತಮ್ಮನನ್ನು ಕಳೆದುಕೊಂಡ ದುಖದಲ್ಲಿ ಸರಿಯಾಗಿ ಕೊಲೆಯ ಬಗ್ಗೆ ವಿಚಾರಣೆ ಮಾಡಿರಲಿಲ್ಲ.ಕೊಲೆಯ ಬಗ್ಗೆ ಕಾರಣಗಳನ್ನೂ ತಿಳಿಯಲು ಹೋಗಿರಲಿಲ್ಲ.ಅಂದು ಅವನು ಪ್ರೀತಿಯ ತಮ್ಮನನ್ನು ಕಳೆದುಕೊಂಡ ನಿರ್ಭಾಗ್ಯ ಅಣ್ಣ ಆಗಿದ್ದನೇ ಹೊರತು ಒಬ್ಬ ಪೋಲಿಸ್ ಅಧಿಕಾರಿಯಾಗಿರಲಿಲ್ಲ.ಅದಕ್ಕೆ ಆತ ಸರಿಯಾದ ವಿಚಾರಣೆ ಮಾಡದೆ ಶವವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು,ಅಂತ್ಯಕ್ರಿಯೆಯನ್ನು ಮುಗಿಸಿದನು.ಆದ ಕಾರಣ ಈಗ ರಘು ಕೊಲೆಯ ಬಗ್ಗೆ ಸಂಪೂರ್ಣವಾದ ವಿವರಗಳನ್ನು ಪಡೆಯಲು ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ಹೋಗಲು ನಿರ್ಧರಿಸಿದನು.ಆದರೆ ಪಾಪ ರಘುವಿಗೆನು ಗೊತ್ತು.ಅದರಿಂದ ಏನೂ ಪ್ರಯೋಜನವಿಲ್ಲವೆಂದು.

ರಘು ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ಹೋಗಿ ಕೊಲೆಯ ವಿವರಗಳ ಬಗ್ಗೆ ಕೇಳಿದಾಗ ಅವನಿಗೆ ಸಿಕ್ಕಿದ್ದು ಕೇವಲ ನೀರಸವಾದ ಪ್ರತಿಕ್ರಿಯೆ. ಅಲ್ಲಿದ್ದ ಇನಸ್ಪೆಕ್ಟೆರ್ ಕೊಲೆಯ ಬಗ್ಗೆ ಒಂದು ಕನಿಷ್ಟವಾದ ವಿಚಾರಣೆಯನ್ನೂ ಮಾಡಿರಲಿಲ್ಲ.ಕೇವಲ ಶವದ ಪಂಚನಾಮೆಯ ರಿಪೋರ್ಟ್ ತಯಾರು ಮಾಡಿ ಅದನ್ನು ಪೋಸ್ಟ್ ಮಾರ್ಟಂ ರಿಪೋರ್ಟ್ ಜೊತೆ ಲಗತ್ತಿಸಿ ಒಂದು ಫೈಲ್ ತಯಾರು ಮಾಡಿದ್ದ ಅಷ್ಟೇ.ಇದರಿಂದ ರಘು ಕುಪಿತಗೊಂಡು ಇನ್ಸ್ಪೆಕ್ಟೆರ್ ಗೆ,

"ಏನ್ರಿ ನೀವು....ಹೀಗೆನಾ ಕೆಲಸ ಮಾಡೋದು?........ನಡೆದಿರುವದು ಒಂದು ಕೊಲೆ...ನೀವು ಇದರ ಬಗ್ಗೆ ಏನೂ ಆಸಕ್ತಿಯನ್ನೇ ತೋರಿಸಿಲ್ಲ.....ಕೊಲೆಯ ಫೈಲಿನಲ್ಲಿ ಕೇವಲ ಪಂಚನಾಮೆಯ ರಿಪೋರ್ಟ್ ಮತ್ತು ಪೋಸ್ಟ್ ಮಾರ್ಟಂ ರಿಪೋರ್ಟ್ ಇದೆ....ಡಾಕ್ಟರ ಹೇಳಿಕೆಯ ಪ್ರತಿ ಎಲ್ಲಿ ? ವಿನಯನ ಸ್ನೇಹಿತರ ವಿಚಾರಣೆ ಮಾಡಿದ್ದೀರಾ ? ಕೊಲೆ ನಡೆದ ಸ್ಥಳದ ಪರಿಶೀಲನೆ ಮಾಡಿದ್ದೀರಾ ?",ಹೀಗೆ ಪುಂಖಾನುಪುಂಖವಾಗಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದನು. ಆಗ ಆ ಇನಸ್ಪೆಕ್ಟೆರ್,
 
"ಇದನ್ನೆಲ್ಲಾ ಕೇಳೋದಿಕ್ಕೆ ನೀವು ಯಾರ್ರಿ ? ನೋಡಿ ಮಿಸ್ಟರ್...ನೀವು ಒಬ್ಬ ಪೋಲಿಸ್ ಅಧಿಕಾರಿ ಆಗಿರಬಹುದು...ಆದರೆ ನಿಮ್ಮ ದರ್ಪಾನೆಲ್ಲ ನನ್ನ ಹತ್ರ ತೋರಿಸಬೇಡಿ...ನಾನು ನನ್ನ ಸರ್ವಿಸ್ ನಲ್ಲಿ ನಿಮ್ಮಂಥವರನ್ನು ಎಷ್ಟು ಜನರನ್ನು ನೋಡಿಲ್ಲ...ನನ್ನ ಕೈಯಲ್ಲಿ ಇಷ್ಟೇ ವಿಚಾರಣೆ ಆಗೋದು...ಇದನೆಲ್ಲ ಕೇಳೋದಿಕ್ಕೆ ನನ್ನ ಮೇಲಿನ ಆಫೀಸೆರ್ ಇದಾರೆ....ನೀವ್ಯಾರೋ ಪುಟಗೋಸಿ ದಾಸಯ್ಯ ಬಂದು ಕೇಳಿದ್ರೆ ಉತ್ತರ ಹೇಳೋದಿಕ್ಕೆ ನಾನೇನು ನಿಮ್ಮ ಕೈಯಲ್ಲಿರೋ ಆಳಾ?" ಎಂದು ಕೂಗಿದ.
 
ಇದರಿಂದ ರಘುವಿಗೆ ತುಂಬಾ ಅವಮಾನವಾಯಿತು.ತಾನೂ ಒಬ್ಬ ಪೋಲಿಸ್ ಅಧಿಕಾರಿಯಾಗಿದ್ದರೂ ಯಾರ ಬಳಿಯೂ ಇಷ್ಟು ಕಠಿಣವಾಗಿ ನಡೆದುಕೊಂಡಿಲ್ಲ.ಆದರೆ ಈ ಇನಸ್ಪೆಕ್ಟೆರ್ ತನ್ನ ಡಿಪಾರ್ಟ್ಮೆಂಟ್ ನ ಸಹೋದ್ಯೋಗಿಗೆ ಇಂಥಹ ಮಾತನ್ನು ಆಡುತ್ತಿರುವನಲ್ಲ.ಇನ್ನು ಒಬ್ಬ ಜನಸಾಮಾನ್ಯನ ಜೊತೆ ಇವನ ವರ್ತನೆ ಹೇಗಿರುತ್ತದೆ ?,ಎಂದು ರವಿಗೆ ದಿಗಿಲಾಯಿತು. ಮತ್ತು ರಘು ತನ್ನ ಕೊಲೆಯ ಬಗ್ಗೆ ವಿಚಾರಿಸಲು ಬಂದಿದ್ದನಷ್ಟೇ.ಆದರೆ ಈ ಇನ್ಸಸ್ಪೆಕ್ಟೆರ್ ಏನೋ ತನ್ನ ಮಾನ ಹೋದಂತೆ ವರ್ತಿಸಿ ಈ ರೀತಿ ಮಾತನಾಡಿದ್ದನ್ನು ನೋಡಿ ರಘುವಿಗೆ ಈ ಪೋಲಿಸ್ ಸ್ಟೇಷನ್ ನಿಂದ ಒಂದು ಸಣ್ಣ ಸಹಾಯವೂ ಸಿಗದು ಎನ್ನಿಸಿತು.ಆದರೂ ಇನ್ನು ಒಂದು ಪ್ರಯತ್ನ ಮಾಡುವದೆಂದು ನಿರ್ಧರಿಸಿ,ಆ ಇನಸ್ಪೆಕ್ಟೆರ್ ಗೆ, 
 
"ಇಲ್ನೋಡಿ ಮಿಸ್ಟರ್....ನಾನು ನಿಮಗೆ ಏನೂ ಕೇಳಬಾರದ್ದನ್ನು ಕೇಳಲಿಲ್ಲ...ಕೊಲೆಯಾಗಿರುವದು ನನ್ನ ತಮ್ಮ...ನಾನು ಅವನ ಅಣ್ಣನಾಗಿ ಕೊಲೆಯ ಬಗ್ಗೆ ಕೇಳಲು ಬಂದೆನು ಹೊರತು.....ಒಬ್ಬ ಪೋಲಿಸ್ ಅಧಿಕಾರಿಯಾಗಿ ನಿಮ್ಮ ವಿಚಾರಣೆ ಮಾಡಲು ಬಂದಿಲ್ಲ.....ಇಲ್ಲಿ ಬಂದು ನೋಡಿದರೆ,ನೀವು ಒಂದು ಕನಿಷ್ಠ ವಿಚಾರಣೆಯನ್ನು ಕೂಡ ಮಾಡಿಲ್ಲ....ಇದು ನಿಮ್ಮ ಕರ್ತವ್ಯ ಭ್ರಷ್ಟತನ ತೋರಿಸುತ್ತದೆ.....ನನ್ನ ಜೊತೆಯೇ ಹೀಗೆ ಮಾತನಾಡುವ ನೀವು....ಇನ್ನು ಜನ ಸಾಮಾನ್ಯರ ಜೊತೆ ಹೇಗೆ ಮಾತನಾಡಬಹುದು ಎಂದು ನನಗೆ ದಿಗಿಲಾಗುತ್ತದೆ....ನೀವು ಹೀಗೆ ಸರಿಯಾಗಿ ಸಹಕರಿಸದಿದ್ದರೆ ನನ್ನು ನನ್ನ ಪೋಲಿಸ್ ಪವರ್ ಬಳಸಿ ವಿಷಯ ತಿಳಿದುಕೊಳ್ಳಬೇಕಾಗುತ್ತದೆ ಎಚ್ಚರಿಕೆ!!",ಎಂದು ಹೇಳಿದನು. ಆಗ ಆ ಇನಸ್ಪೆಕ್ಟೆರ್,
 
"ಏನು ನೀವು ನನಗೆ ಧಮಕಿ ಕೊಡ್ತಿದಿರ? ಹೋಗ್ರಿ ಇದಕ್ಕೆಲ್ಲ ಅಂಜೋದಿಲ್ಲ ನಾನು.....ಅದೇ ಹೇಳಿದೆನಲ್ಲ ನಾನು ನನ್ನ ಸರ್ವಿಸ್ ನಲ್ಲಿ ನಿಮ್ಮಂಥವರನ್ನು ಎಷ್ಟೋ ಜನರನ್ನು ನೋಡಿದ್ದೀನಿ....ನಿಮ್ಮ ಕೈಯಲ್ಲಿ ಅದೇನು ಮಾಡೋಕಾಗತ್ತೋ ಮಾಡ್ಕೋ ಹೋಗ್ರಿ....ಬಂದು ಬಿಟ್ರು ದೊಡ್ಡದಾಗಿ ಇಲ್ಲಿ ಕಿಸಿಯೋಕೆ...ಹೋಗ್ರಿ ಅದ್ಯಾವ ಪವರ್ ಬಳಸ್ತಿರೋ ಬಳಸ್ರಿ...ನಾನು ಒಂದು ಕೈ ನೋಡೇ ಬಿಡ್ತೀನಿ....ನಮಗೇನು ಮಾಡೋದಿಕ್ಕೆ ಬೇರ ಕೆಲಸ ಇಲ್ವಾ...ಎಲ್ಲ ಬಿಟ್ಟು ನಿಮ್ಮ ತಮ್ಮನ ಕೇಸಿನ ಹಿಂದೆ ಅಲೆದಾಡೋಕ್ಕೆ ಆಗೋಲ್ಲ....ನಿಮ್ಮತಮ್ಮ ಸತ್ತೋನು ಸತ್ತ.....ಈಗ ಸುಮ್ಮನೆ ಅವನ ಶ್ರಾದ್ಧ ಮಾಡಿ...ಸುಮ್ಮನಿರಿ ಹೋಗಿ...",ಎಂದೆಲ್ಲ ಬಾಯಿಗೆ ಬಂದದ್ದನ್ನು ಒದರತೊಡಗಿದನು.
 
ಇದನ್ನು ಕೇಳಿ ರಘುವಿಗೆ ತುಂಬಾ ಭಯಂಕರವಾದ ಸಿಟ್ಟು ಬಂತು. ಆದರೆ ಅವನು ಏನೂ ಮಾಡುವ  ಸ್ತಿತಿಯಲ್ಲಿರಲಿಲ್ಲ.ಒಂದು ಕ್ಷಣ ಎದಿರು ಕುಳಿತಿರುವ ಅಧಿಕಾರಿಯ ಎದೆಯನ್ನು ಬಗೆಯುವಷ್ಟು ಕೋಪ ಬಂದರೂ ತುಂಬಾ ಸಂಯಮದಿಂದ ಬಂದ ಕೋಪವನ್ನು ನುಂಗಿಕೊಂಡನು.ಅವನಿಗೆ ಅಂತ್ಯಂತ ಸ್ಪಷ್ಟವಾಗಿ ಈ ಅಧಿಕಾರಿಯು ಯಾರಿಂದಲೋ ಲಂಚ ಪಡೆದು ಈ ರೀತಿ ಆಡುತ್ತಿದ್ದಾನೆ ಎಂದು ತಿಳಿಯತೊಡಗಿತು.ಅವನಿಗೆ ತನ್ನ ಡಿಪಾರ್ಟ್ಮೆಂಟಿನ ಬಗ್ಗೆ ತುಂಬಾ ಅಸಹ್ಯವಾಗತೊಡಗಿತು.ಇನ್ನು ಆ ಸ್ಟೇಷನ್ ನಲ್ಲಿ ಒಂದು ಕ್ಷಣವೂ ಇರಬಾರದೆಂದು ನಿರ್ಧರಿಸಿ ಸೀದಾ ಅಲ್ಲಿಂದ ಎದ್ದು ಆ ಇನಸ್ಪೆಕ್ಟೆರನ ಮುಖ ಕೂಡ ನೋಡದೆ ಎದ್ದು ಮನೆಗೆ ಬಂದನು.ಸ್ಟೇಷನ್ ನಲ್ಲಿರುವ ಎಲ್ಲ ಪೇದೆಗಳೂ ಈ ಒಂದು ದಾರುಣ ದೃಶ್ಯಕ್ಕೆ ಸಾಕ್ಷಿಯಾಗಿದ್ದರು.ಆದರೆ ಅವರು ತಾನೇ ಏನು ಮಾಡಿಯಾರು ?
 
ಹಾಗೆಯೇ ರಘು ಮನೆಗೆ ಬಂದು ಯೋಚಿಸತೊಡಗಿದನು.ಪೋಲಿಸ್ ಸ್ಟೇಷನ್ ನಲ್ಲಿ ಅಂತಹ ಮಾತುಗಳನ್ನು ಕೇಳಿ ಅವನ ಮನಸ್ಸು ತುಂಬಾ ಘಾಸಿಗೊಂಡಿತ್ತು.ಅವನ ತಮ್ಮನ ಕೊಲೆಯ ಬಗ್ಗೆ ಅತಿ ಸಣ್ಣದಾದ ಸುಳುಹು ದೊರೆಯುವ ಒಂದು ಮಾರ್ಗವೂ ಇಲ್ಲದಗಿತ್ತು.ಅವನಿಗೆ ಅದಾಗಲೇ,ಈ ಕೇಸು ಮುಂದುವರೆಯುವದಿಲ್ಲ,ಇನ್ನು ಸ್ವಲ್ಪ ದಿನ ಈ ಫೈಲ್ ಅನ್ನು ಜೀವಂತವಾಗಿ ಇಟ್ಟು,ಆಮೇಲೆ ಯಾವುದೂ ಸಾಕ್ಷಿ ಸಿಗಲಿಲ್ಲ ಎಂದು ಇದರ ಕಥೆಯನ್ನು ಮುಗಿಸುತ್ತಾರೆ ಎಂದು ಅತ್ಯಂತ ಸ್ಪಷ್ಟವಾಗಿ ಅನ್ನಿಸತೊಡಗಿತು.ಎಷ್ಟೋ ಕೊಲೆಯ ಕೇಸುಗಳು ಹೀಗೆಯೇ ಮುಚ್ಚಿಹೊಗಿಲ್ಲವೇ...ಅಧಿಕಾರಿಗಳು ಹಣದ ಆಸೆಗೋ ಅಥವಾ ಇನ್ನ್ಯಾವುದೋ ಕಾರಣಗಳಿಂದಲೋ ಕೊಲೆಯ ಕೇಸುಗಳನ್ನು ಮುಚ್ಚುವದು ಅತಿ ಸಾಮನ್ಯವಾದ ಸಂಗತಿ.ಆದರೆ ಅದು ತನ್ನ ಜೀವನದಲ್ಲಿಯೇ ಆಗುತ್ತದೆ ಎಂದು ರಘು ಭಾವಿಸಿರಲಿಲ್ಲ.ಅದಕ್ಕೆ ಆತ ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ವರ್ಗ ಮಾಡಿಸಿಕೊಂಡು ಈ ಕೇಸಿನ ವಿಚಾರಣೆ ನಡೆಸಲು ನಿರ್ಧರಿಸಿದನು.ಆದರೆ ಅದೂ ಕೂಡ ಅಷ್ಟು ಸರಳವಾಗಿರಲಿಲ್ಲ!!!!!
*********************************************************************************************************************************
ಅಧ್ಯಾಯ-2-ಮುಗಿಯಿತು.
ಅಧ್ಯಾಯ-3-ಮುಂದಿನ ವಾರ 
 
ಮೊದಲೆನೆಯ ಅಧ್ಯಾಯಕ್ಕೆ ಲಿಂಕ್:

 http://www.sampada.net/%E0%B2%B5%E0%B3%8D%E0%B2%AF%E0%B3%82%E0%B2%B9%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF-1