ಮಳೆಯ ಹನಿಯ ಕಥೆ ..
ಅದೆಷ್ಟೋ ದಿನಗಳ ಪ್ರಯಾಸಕರ ಪ್ರಯಾಣವನ್ನ ಅರಬ್ಬೀ ಸಮುದ್ರದ ಮೇಲೆ ಮುಗಿಸಿ, ‘ಇನ್ನೂ ಮುಂದೆ ಹೋಗಲು ನಮ್ಮಿಂದ ಸಾಧ್ಯವಿಲ್ಲ, ನಮ್ಮ ಜೀವನವೇ ಇಷ್ಟು, ಕೆಲವೊಮ್ಮೆ ಜೋರಾಗಿ ಬೀಸುವ ಗಾಳಿ ಇದ್ದಷ್ಟು ಹೊತ್ತು ಮಾತ್ರ ಸ್ವಲ್ಪ ನೆಮ್ಮದಿ, ಇಲ್ಲದಿದ್ದರೆ ಆ ನಡು ಸಮುದ್ರದ ಮಧ್ಯದಲ್ಲಿ, ಆ ಸೂರ್ಯನ ಕಡು ಬಿಸಿಲಿನಲ್ಲಿ, ನಿಧಾನವಾಗಿ ಬೀಸುವ ಆ ಬಿಸಿ ಗಾಳಿಯಲ್ಲಿ, ತೆವಳುತ್ತಾ ಸಾಗುವ ಹಿಂಸೆ ಯಾರಿಗೂ ಬರಬಾರದಪ್ಪ’ ಎಂದು ಕಡು ಬೇಸಿಗೆಯನ್ನ ಶಪಿಸುತ್ತ, ಸಮುದ್ರವನ್ನೇನೋ ಹಾಗೋ ಹೀಗೋ ದಾಟಿದೆವು, ಆದರೆ ನಮ್ಮ ಜೊತೆ ಸಮುದ್ರದ ದಾರಿಯುದ್ದಕ್ಕೂ ಸಂಗ್ರಹಿಸಿ ತಂದಿರುವ ಈ ಸರಕನ್ನು ಇಲ್ಲಿಂದ ಇನ್ನೂ ಮುಂದೆ ಕೊಂಡೊಯ್ದು ಈ ಭೂ ಪ್ರದೇಶದ ದಾರಿಯುದ್ದಕ್ಕೂ ಹಂಚುತ್ತಾ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಕ್ರಮಿಸಬೇಕೆನ್ನುವ ಕರ್ತವ್ಯದ ನೆನಪಾಗಿ, ಹತ್ತಿರವೇ ಇದ್ದ ಬೆಟ್ಟಗಳಲ್ಲಿ ಸ್ವಲ್ಪ ದಿನ ವಿಶ್ರಾಂತಿ ಪಡೆದು ಪ್ರಯಾಣ ಮುಂದುವರಿಸಲು ನಿರ್ಧರಿಸಿದವು.
“ಇನ್ನೂ ಮಲಗಿಕೊಂಡೇ ಇದ್ದಿರಲ್ರಿ, ಎದ್ದೇಳ್ರಿ” ಎಂದು ಸೋಮನ ಹೆಂಡತಿ ಕಿರುಚಿಕೊಂಡಾಗಲೇ ಅವನಿಗೆ ಎಚ್ಚರವಾದದ್ದು. “ಇನ್ನೂ ಸರಿಯಾಗಿ ಬೆಳಕೇ ಹರಿದಿಲ್ವಲ್ಲೇ, ಎಷ್ಟು ಬೇಗ ಎದ್ದು ಎನ್ಮಾಡಲೇ? “ ಎಂದು ಸೋಮ ಮರು ಪ್ರಶ್ನಿಸುತ್ತಿದ್ದಂತೆಯೇ “ಎದ್ದು ಒಮ್ಮೆ ಗಡಿಯಾರ ನೋಡ್ಕೊಳ್ಳಿ, ಆಗಲೇ ಎಂಟು ಗಂಟೆ ಆಯ್ತು” ಎನ್ನುವ ಉತ್ತರ ಪ್ರತಿಧ್ವನಿಸಿತು. ಸೋಮ ಹಾಗೋ ಹೀಗೋ ಇದ್ದು ನೋಡುತ್ತಾನೆ ಆಗಲೇ ಎಂಟು ಗಂಟೆ. ನಿನ್ನೆಯ ವರೆಗೂ ಇಷ್ಟೊತ್ತಿಗಾಗಲೇ ಬೆಳಕು ಹರಿದು, ಬೇಸಿಗೆಯ ತಾಪ ಪ್ರಾರಂಭವಾಗುತ್ತಿತ್ತು. ಆದರೆ ಇವತ್ತು, ಅನಿರೀಕ್ಷಿತವಾಗಿ ಎಲ್ಲೆಲ್ಲೋ ಸುತ್ತುವರಿದ ಕರಿಯ ಮಳೆಯ ಮೋಡಗಳು. “ಅರೇ ಮಳೆ ಬರೋ ಹಾಗಿದ್ಯೇ, ಬೇಗ ತಿಂಡಿ ಕೊಡೆ, ಗದ್ದೆ ತೋಟದ ಕಡೆಗೆ ಹೋಗಿ ಒಂದ್ಸಲ ನೋಡ್ಕೊಂಡು ಬರಬೇಕು” ಎನ್ನುತ್ತ ಸೋಮ ಹಲ್ಲುಜ್ಜಿ, ಮುಖ ತೊಳೆದು ಅಣಿಯಾಗಲು ಹೊರಟ.
ಆಗಲೇ ವಿಶ್ರಾಂತಿಗೆಂದು ಇಲ್ಲಿ ನೆಲೆನಿಂತು ಒಂದು ದಿನವಾಗುತ್ತ ಬಂತಲ್ಲವೇ. ಇಲ್ಲಿನ ಹಿತವಾದ ಗಾಳಿಗೆ ಮಯ್ಯೋಡ್ಡಿ ನಿಂತರೆ ಕಾಲ ಹೋದದ್ದೇ ತಿಳಿಯುವುದಿಲ್ಲ, ಆದರೆ ಎಷ್ಟು ದಿನ ಅಂತ ಇಲ್ಲಿಯೇ ನೆಲೆ ನಿಲ್ಲಲಿಕ್ಕಾಗುತ್ತದೆ? ಅದಲ್ಲದೆ ಈ ಭಾರೀ ಸರಕನ್ನು ಹೊತ್ತು ಈ ಬೆಟ್ಟ ಗುಡ್ಡಗಳನ್ನು ದಾಟುವುದು ತುಂಬಾ ಕಷ್ಟಕರವೇ. ಹಾಗಾಗಿ ಪ್ರತಿ ಸಲದ ಪ್ರಯಾಣದಲ್ಲಿ ಮಾಡುವಂತೆ ಈ ಬೆಟ್ಟ ಗುಡ್ಡಗಳನ್ನು ದಾಟಲು ಎಷ್ಟು ಸಾಧ್ಯವೋ ಅಷ್ಟು ಸರಕನ್ನು ಇಲ್ಲಿಯೇ ಹಂಚಿ, ಮುಂದೆ ಹೋಗುವುದೇ ಸೂಕ್ತ ಎಂದು ಕಪ್ತಾನನು ನಿರ್ಧರಿಸಿ, ತಮ್ಮ ಸಿಬ್ಬಂದಿಯನ್ನು ಕರೆದು “ಸರಿಯಾದ ಸಮಯ ನೋಡಿ, ನಮ್ಮಲ್ಲಿರುವ ಸರಕನ್ನು ಇಲ್ಲಿಯೇ ಒಂದಿಷ್ಟು ಹಂಚಿ, ನಮ್ಮ ಸರಕಿನ ಭಾರವನ್ನ ಮುಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಕಡಿಮೆ ಮಾಡಿ ” ಎಂದು ಆದೇಶಿಸಿದನು.
ಆಗ ತಾನೇ ತಂಗಾಳಿಯು ಎಲ್ಲೆಲ್ಲೂ ಆವರಿಸತೊಡಗಿತ್ತು. “ಅಬ್ಬಾ ಕೊನೆಗೂ ಬಂದೆಯಲ್ಲ” ಅನ್ನುತ್ತ ಬೆಟ್ಟದ ಮರಗಿಡಗಳು ಮೆಲ್ಲನೆ ತಮ್ಮ ರೆಂಬೆ ಕೊಂಬೆಯನ್ನ ಬೀಸಿ ಅದನ್ನು ಸ್ವಾಗತಿಸಿದವು. ದೂರದಿಂದಲೇ ತಂಗಾಳಿಯ ಆಗಮನವನ್ನು ಗ್ರಹಿಸಿದ ಸಿಬ್ಬಂದಿ, ಕಪ್ತಾನನ ಆದೇಶದಂತೆ ಇದೇ ಸರಿಯಾದ ಸಮಯ ಎಂದು ನಿರ್ಧರಿಸಿ, ತಮ್ಮಲ್ಲಿರುವ ಸರಕನ್ನು ತಂಗಾಳಿಯಲ್ಲಿ ತೇಲಿಬಿಡಲು ನಿರ್ಧರಿಸಿದವು.
ಹಲವಾರು ತಿಂಗಳುಗಳಿಂದ ಒಂದಕ್ಕೊಂದು ಅಂಟಿಕೊಂಡು, ಬೇಸಿಗೆಯ ಧಗೆಯಲ್ಲಿ ಬೆಂದು, ನಿತ್ರಾಣವಾಗಿ ಕಪ್ಪು ಮೋಡಗಳಲ್ಲಿ ಬಂಧಿತವಾಗಿದ್ದ ಮಳೆಯ ಹನಿಗಳಿಗೆ, ಬಂಧನದ ಬಾಗಿಲುಗಳನ್ನು ತೆರೆಯುತ್ತಿದ್ದಂತೆಯೇ, ನಿಧಾನಕ್ಕೆ ನುಗ್ಗಿಬಂದ ತಂಗಾಳಿಯು ಸೋಕಿದೊಡನೆಯೇ ಒಮ್ಮೆಲೇ ಎಲ್ಲಿಲ್ಲದ ಉತ್ಸಾಹದಿಂದ ಅವು ನಲಿದಾಡಿದವು, ಹೋದ ಜೀವ ಮತ್ತೆ ಬಂದಂಥ ಅನುಭವ ಅವಕ್ಕಾಗಿತ್ತು. ಈ ಮಧ್ಯೆ ಬಾಗಿಲ ಹತ್ತಿರವೇ ಇದ್ದ ಮಳೆಯ ಹನಿಯೊಂದು ತಂಗಾಳಿ ಒಳನುಗ್ಗುತ್ತಿದ್ದಂತೆಯೇ, ಒಮ್ಮೆಲೇ ಉತ್ಸಾಹದಿಂದ ಎಲ್ಲರಿಗಿಂತ ಮೊದಲೇ ಆಗಸದಲ್ಲಿ ಆಗಲೇ ಜಿಗಿದಾಗಿತ್ತು.
"ಆಹಾ ಅದೆಂಥ ಅನುಭವ, ಎಲ್ಲೆಲ್ಲೂ ಆವರಿಸಿದ ತಂಗಾಳಿ, ಅಲ್ಲಲ್ಲಿ ಕಪ್ಪು ಮೋಡಗಳ ಮಧ್ಯದಲ್ಲಿ ಒಳ ನುಸುಳುವ ಸೂರ್ಯನ ಕಿರಣಗಳು. ಎಷ್ಟು ನೋಡಿದರೂ ಮುಗಿಯದ ಅನಂತ ಆಕಾಶ. ಅಷ್ಟೊಂದು ದಿನ ಬಂಧಿಯಾಗಿ ನಿರ್ಜೀವವಾಗಿ ಅನುಭವಿಸಿದ ಹಿಂಸೆಯೆಲ್ಲ ಒಂದೇ ಕ್ಷಣದಲ್ಲಿ ಮರೆತು ಹೋಗುವ ಅನುಭವ. ಈ ತಂಗಾಳಿಯಲ್ಲಿ ಇನ್ನು ಎಷ್ಟು ಸಾಧ್ಯವೋ ಅಷ್ಟು ತೇಲಾಡಬೇಕು, ಇಡೀ ಅನಂತ ಆಕಾಶವೇ ಇನ್ನು ನಮಗೆ ಸೇರಿದ್ದು. ನಮ್ಮಿಚ್ಚೆಯಂತೆ ಇಲ್ಲಿ ಸ್ವತಂತ್ರವಾಗಿ ಇರಬಹುದು. ತನ್ನ ಸ್ನೇಹಿತರ ಜೊತೆ ಸೇರಿ ಈ ತಂಗಾಳಿಯಲ್ಲಿ ಹಾರಾಡಿ ಸಂತೋಷಪಡಬೇಕು. ಇನ್ನು ಮುಂದೆ ನಮ್ಮನ್ನು ತಡೆಯಲು ಇಲ್ಲಿ ಯಾರೂ ಇಲ್ಲ" ಎಂದು ಕೊಳ್ಳುತ್ತಾ ಆ ಮಳೆಯ ಹನಿ ಆ ಆಕಾಶದಲ್ಲಿ ತೇಲಿ, ಹಾರಾಡಿ ಸಂತೋಷಪಡಲು ಸಿದ್ದವಾಯಿತು.
image source: internet |
“ಅಯ್ಯೋ ಯಾರದು, ನನ್ನನ್ನು ಕೆಳಗೆ ನೂಕುತ್ತಿರುವುದು? ನನ್ನನ್ನ ಬಿಟ್ಟುಬಿಡಿ, ನಾನು ಇಲ್ಲೇ ಇರುತ್ತೇನೆ” ಎಂದು ಆ ಮಳೆಯ ಹನಿ ಕೂಗಾಡತೊಡಗಿತು. ಆಗಲೇ ಆ ಮಳೆಯ ಹನಿ ತನ್ನನ್ನು ಬಂಧಿಸಿದ್ದ ಕಪ್ಪು ಮೋಡಗಳಿಂದ ಸಾಕಷ್ಟು ವೇಗವಾಗಿ ಕೆಳಗೆ ಬೀಳತೊಡಗಿತ್ತು. “ನಾನು ಇಲ್ಲೆಲ್ಲಾ ಹಾರಾಡಬೇಕು. ನನ್ನನ್ನು ಕೆಳಗೆ ನೂಕಬೇಡಿ” ಎನ್ನುತ್ತ ಮಳೆಯ ಹನಿ ಆ ಅದೃಶ್ಯ ಶಕ್ತಿಯನ್ನ ಎಷ್ಟು ಬೇಡಿಕೊಂಡರೂ ಏನೂ ಪ್ರಯೋಜನವಾಗಲಿಲ್ಲ. ಮಳೆಯ ಹನಿ ವೇಗವಾಗಿ ಕೆಳಗಡೆ ನೂಕಲ್ಪಡುತ್ತಲೇ ಇತ್ತು. ಆ ಮಳೆಯ ಹನಿ ಒಮ್ಮೆ ಹಿಂತಿರುಗಿ ನೋಡಿದರೆ, ಆಗಲೇ ಅದರ ಜೊತೆಗಾರಲ್ಲಿ ಹಲವರು ತಂಗಾಳಿಯಲ್ಲಿ ಜಿಗಿದಾಗಿತ್ತು. “ ಎಲ್ಲಾ ಕೇಳಿ, ಯಾರೂ ಹೊರಗಡೆ ಜಿಗಿಯಬೇಡಿ, ಇಲ್ಲಿ ಯಾರೋ ನಮ್ಮನ್ನೆಲ್ಲ ಕೆಳಗಡೆ ತಳ್ಳುತ್ತಿದ್ದಾರೆ” ಆ ಮಳೆಯ ಹನಿ ಎಷ್ಟು ಕೂಗಿದರೂ ಬಂಧನದ ಬಿಡುಗಡೆಯಿಂದ ಒಮ್ಮೆಲೇ ತಂಗಾಳಿಗೆ ಜಿಗಿದ ಸಂತೋಷದಲ್ಲಿದ್ದ ಅವುಗಳಿಗೆ ಅದು ಕೇಳಿಸಲೇ ಇಲ್ಲ.
ಸೋಮ ಆಗ ತಾನೇ ತನ್ನ ಸೈಕಲ್ಲನ್ನೇರಿ ತನ್ನ ಗದ್ದೆಯ ಕಡೆ ಹೊರಟಾಗಿತ್ತು. ಹಲವಾರು ತಿಂಗಳುಗಳಿಂದ ಬೇಸಿಗೆಯ ಬಿಸಿಲಿನಲ್ಲಿ ಒಣಗಿ ಬೆಂಡಾಗಿದ್ದ ಆ ಗದ್ದೆಯ ಒಣಗಿದ ಮಣ್ಣಿನ ಮೇಲೆ ಮೊದಲ ಹನಿ ಬಿದ್ದು, ಆ ಮಣ್ಣಿನ ವಾಸನೆ ಸವಿಯುವುದು ಸೋಮನಿಗೆ ಚಿಕ್ಕಂದಿನಿಂದಲೂ ಬಹಳ ಇಷ್ಟವಾದದ್ದು. ಮೊದಲ ಮಳೆಯ ಹನಿಯ ಆ ಸಂತೋಷವನ್ನ ಅನುಭವಿಸಿ ಬಿತ್ತನೆಗೆ ಮುಂದಿನ ತಯಾರಿ ನಡೆಸಬೇಕೆಂಬುದೇ ಸೋಮ ಹೊರಟ ಉದ್ದೇಶ.
ಆಗಲೇ ಸಾಕಷ್ಟು ಕೆಳಗಡೆ ಬಂದಿದ್ದ ಆ ಮೊದಲ ಮಳೆಯ ಹನಿಗೆ ತನ್ನ ಕೆಳಗೆ ಹಲವಾರು ಕೆಂಪು ಮುಖದ ವಿಚಿತ್ರ ಸಣ್ಣ ಸಣ್ಣ ಜೀವಿಗಳು ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು, ತಮ್ಮ ಬಾಯನ್ನು ತೆರೆದು ನಿಂತಿದ್ದಂತೆ ತೋರಿತು. ಅವರನ್ನು ನೋಡಿದರೆ ಯಾವುದೇ ಕ್ಷಣದಲ್ಲಿ ಬಾಯಾರಿಕೆಯಿಂದ ಸಾಯುವಂತೆ ಆ ಮಳೆಯ ಹನಿಗೆ ಅನಿಸುತ್ತಿತ್ತು. ಅವು ಎಷ್ಟೊಂದು ಕೃಷವಾಗಿದ್ದವೆಂದರೆ ಕೆಲವೊಮ್ಮೆ ಸ್ವಲ್ಪವೇ ಜೋರಾಗಿ ಬೀಸುವ ಗಾಳಿಯೂ ಸಹ ಆ ಜೀವಿಗಳನ್ನು ಅತ್ತಿಂದಿತ್ತ ತಳ್ಳಿ, ಓಡಾಡಿಸಿ ಚೇಷ್ಟೆ ಮಾಡುತ್ತಿತ್ತು. ಅವರಲ್ಲಿ ಕೆಲವರು ಮಾತ್ರ ಎಲ್ಲೋ ಅವಿತುಕೊಂಡು ಹೇಗೋ ಗಾಳಿಯ ಚೇಷ್ಟೆಯಿಂದ ಪಾರಾಗುತ್ತಿದ್ದರು. ಅದನ್ನೆಲ್ಲಾ ನೋಡಿ ಆ ಮಳೆಯ ಹನಿ ತನ್ನ ಕಥೆ ಇಲ್ಲಿಗೇ ಮುಗಿಯಿತು, ಆ ಕೆಂಪು ಜೀವಿಗಳು ನನ್ನನ್ನು ಹೀರಿಬಿಡುತ್ತವೆ ಎನ್ನುತ್ತ ತನ್ನ ಅದೃಷ್ಟವನ್ನ ಶಪಿಸತೊಡಗಿತು.
ಆ ಮಳೆಯ ಹನಿ ಹತ್ತಿರವೇ ಇದ್ದ ಒಂದು ಮರದ ರೆಂಬೆಗೆ ಹೇಗೋ ಅಂಟಿಕೊಂಡು ತನ್ನನ್ನು ಆ ಕೆಂಪು ಮುಖದ ಜೀವಿಗಳಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರೂ ಸ್ವಲ್ಪವೇ ಹೊತ್ತಿನಲ್ಲಿ ಜೋರಾಗಿ ಬೀಸಿದ ಗಾಳಿಯು ಯಾವುದೋ ಜನ್ಮದ ವೈರತ್ವವೆಂಬಂತೆ ಇಡೀ ಮರವನ್ನ ಅಲುಗಾಡಿಸಿ ಬಿಟ್ಟಿತು, ಆ ಮರದ ರೆಂಬೆಗಳ ಅಲುಗಾಟಕ್ಕೆ ಆಯ ತಪ್ಪಿ ಮತ್ತೆ ಮಳೆಯ ಹನಿ ಕೆಳಗಡೆ ಬೀಳತೊಡಗಿತು. ಮರದ ಕೆಳಗೆ ಆ ಕೆಂಪು ಮುಖದ ಜೀವಿಗಳು ತಮ್ಮ ಬಾಯನ್ನು ತೆರೆದು, ಜೋರಾಗಿ ಬೀಸುವ ಗಾಳಿಗೆ ಹಾರಿಹೋಗದಂತೆ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ನಿಂತಿದ್ದವು. “ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ನಾನು ನಿಮಗೇನೂ ಮಾಡಿಲ್ಲ” ಎಂದು ಆ ಮಳೆಯ ಹನಿ ಎಷ್ಟು ಬೇಡಿಕೊಂಡರೂ ಅಲ್ಲಿ ಯಾರೂ ಅದರ ಆಕೃಂದನವನ್ನ ಕೇಳುವವರಿರಲಿಲ್ಲ. ಕೆಲವೇ ಕ್ಷಣದಲ್ಲಿ ಆ ಪ್ರದೇಶವೆಲ್ಲ ಕೂಗಾಡುವ, ಸಹಾಯಕ್ಕಾಗಿ ಬೇಡುವ ಚೀರಾಟದಿಂದ ತುಂಬಿ ಹೋಯಿತು. ಆದರೆ ಅವುಗಳ ಆಕೃಂದನಕ್ಕೆ ಅಲ್ಲಿರುವ ಯಾರೂ ತೆಲೆಕೆಡಿಸಿಕೊಳ್ಳಲಿಲ್ಲ. ನಿಜವಾಗಿ ಅಲ್ಲಿರುವವರಿಗೆ ಇದು ಸಂತೋಷದ ಆಕೃಂದನವಾಗಿತ್ತು. ಅದು ಬಹಳ ದಿನದಿಂದ ಕೇಳಲು ಹಾತೊರೆಯುತ್ತಿದ್ದ ನಿನಾದವಾಗಿತ್ತು !
“ ಆಹಾ ! ಮೊದಲ ಮಳೆಯ ಮಣ್ಣಿನ ಸುವಾಸನೆಯೇ ಅಂಥದ್ದು, ಈ ಮಳೆಯ ಸಪ್ಪಳವನ್ನ ಕೇಳಿ ಎಷ್ಟು ದಿನಗಳಾಗಿ ಹೋಗಿತ್ತು ” ಅನ್ನುತ್ತ ಅದೇ ಮರದ ಕೆಳಗಡೆ ನಿಂತಿದ್ದ ಸೋಮ, ಮೊದಲ ಮಳೆಯ ಬರುವಿಕೆಯನ್ನು ಸಂತೋಷದಿಂದ ಸ್ವಾಗತಿಸುತ್ತ ಅದಕ್ಕೆ ತನ್ನ ಮಯ್ಯೋಡ್ಡಿ ನಿಂತ.
Rating
Comments
ಉ: ಮಳೆಯ ಹನಿಯ ಕಥೆ ..
In reply to ಉ: ಮಳೆಯ ಹನಿಯ ಕಥೆ .. by venkatb83
ಉ: ಮಳೆಯ ಹನಿಯ ಕಥೆ ..