ಮನುಜ ಮನಸ್ಸು ಮಾಡಿದರೆ…!

ಮನುಜ ಮನಸ್ಸು ಮಾಡಿದರೆ…!

ಅಪ್ಪಯ್ಯ ಹೇಳಿದ್ದ ಕತೆ ೦೩

ಮನುಜ ಮನಸ್ಸು ಮಾಡಿದರೆ…!

ಒಂದು ರಾಜ್ಯದ ರಾಜನಿಗೆ ಸುಂದರಿಯಾದ ಒಬ್ಬಳೇ ಒಬ್ಬಳು ಮಗಳಿದ್ದಳು. ಆಕೆಯ ಮೇಲೆ ರಾಜನಿಗೆ ತುಂಬಾ ಪ್ರೀತಿ. ಆಕೆ ಕೇಳಿದ್ದನ್ನೆಲ್ಲಾ ಆತ ಕೊಡಿಸುತ್ತಿದ್ದ. ಆಕೆ ಧರಿಸುವಂತಹ ಯಾವುದೇ ಒಡವೆ, ಉಡುಗೆ ತೊಡುಗೆಗಳನ್ನು, ತನ್ನ ರಾಜ್ಯದಲ್ಲಿ ಇನ್ನಾರೂ ಧರಿಸಿರಬಾರದು ಎನ್ನುವ ಬಯಕೆ ಆತನದ್ದಾಗಿತ್ತು. ಹಾಗಾಗಿ ಆಕೆಗಾಗಿ ಒಡವೆ ಅಥವಾ ಉಡುಗೆಗಳನ್ನು ಖಾಸಗಿ ಚಿನಿವಾರರ ಹಾಗೂ ದರ್ಜಿಗಳಿಂದಲೇ ತಯಾರಿಗೊಳಿಸುತ್ತಿದ್ದ.

ಆದರೂ ಒಮ್ಮೊಮ್ಮೆ ಆತನ ರಾಜಕುಮಾರಿ ಧರಿಸಿದ ಒಡವೆ ಅಥವಾ ಉಡುಗೆ ತೊಡುಗೆಗಳ ತರಹದ್ದೇ ಒಡವೆ ಅಥವಾ ಉಡುಗೆಗಳನ್ನು ಆ ನಾಡಿನಲ್ಲಿ ಇನ್ನಾರೋ ಧರಿಸಿಕೊಂಡು ಅಡ್ಡಾಡುತ್ತಿರುವುದು ಆತನ ಕಣ್ಣಿಗೆ ಬೀಳುತ್ತಿತ್ತು. ಈ ಬಗ್ಗೆ ಬಹಳಷ್ಟು ಯೋಚಿಸಿದ ರಾಜ, ತನ್ನ ಮಂತ್ರಿಯನ್ನು ಕರೆದು ಇದಕ್ಕೆ ಕಾರಣ ಹಾಗೂ ಪರಿಹಾರವನ್ನು ಸೂಚಿಸುವಂತೆ ಕೇಳುತ್ತಾನೆ. ಆಗ ಮಂತ್ರಿ, “ಮುಂದಿನ ಬಾರಿ ನಮ್ಮ ರಾಜಕುಮಾರಿಗೆ ಉಡುಗೆಯನ್ನು ತಯಾರಿಗೊಳಿಸುವಾಗ, ಆ ಉಡುಗೆ ತಯಾರಾಗುವ ತನಕ ದರ್ಜಿಯನ್ನು ಅರಮನೆಯಲ್ಲಿಯೇ ಉಳಿಸಿಕೊಂಡು, ಆತ ತನ್ನ ಮನೆಗೆ ಹೋಗದಿರುವಂತೆ ಮಾಡೋಣಎಂದು ಸೂಚಿಸುತ್ತಾನೆ. ಅದಕ್ಕೆ ರಾಜ ಒಪ್ಪಿಗೆ ನೀಡುತ್ತಾನೆ.

ಮುಂದೊಂದು ದಿನ ರಾಜಕುಮಾರಿಗಾಗಿ ಹೊಸ ಉಡುಗೆ ತಯಾರಿಸಬೇಕಾದಾಗ, ಖಾಸಗಿ ದರ್ಜಿಯನ್ನು ಅರಮನೆಗೆ ಕರೆಸಿ, ಆತನಿಗೆ ಬಟ್ಟೆ ನೀಡಿ, ರಾಜಕುಮಾರಿಯ ಉಡುಗೆ ತಯಾರಾಗುವ ತನಕ, ಆತ ತನ್ನ ಮನೆಗೆ ಹೋಗಬಾರದೇಂದು ಅಪ್ಪಣೆ ಮಾಡುತ್ತಾರೆ. ಆತನ ಊಟ ಮತ್ತು ವಿಶ್ರಾಮದ ವ್ಯವಸ್ಥೆಯನ್ನು ಅರಮನೆಯ ಆವರಣದಲ್ಲಿ ಬಿಗಿ ಬಂದೋಬಸ್ತಿನೊಂದಿಗೆ ಮಾಡಲಾಗಿರುತ್ತದೆ. ದರ್ಜಿಗೆ ಇದೆಲ್ಲಾ ಏಕೆ ಎನ್ನುವುದು ಅರಿವಾಗಿತ್ತು. ಕಳೆದ ಬಾರಿ ರಾಜಕುಮಾರಿಯ ಉಡುಗೆ ತಯಾರಿಸಿ ಉಳಿದ ಬಟ್ಟೆಯಿಂದ, ಅಂತಹದೇ ಉಡುಗೆಯನ್ನು ತನ್ನ ಚಿಕ್ಕ ಮಗಳಿಗೂ ತಯಾರಿಸಿ ಕೊಟ್ಟಿದ್ದ ಆತ. ಈ ಬಾರಿ ಅದು ಸಾಧ್ಯವಿಲ್ಲ ಎನ್ನುವುದೂ ಅರಿವಾಗಿತ್ತು.

ಐದಾರು ದಿನಗಳು ಕಳೆದ ನಂತರ, ಆ ದರ್ಜಿಯ ಪತ್ನಿ ತನ್ನ ಆ ಕಿರಿಮಗಳನ್ನು ಯಾವುದೋ ಕಾರಣಕ್ಕೆ ಬೈದು ಮನೆಯಿಂದ ಹೊರಗಟ್ಟಿ, ಹೋಗಿ ನಿನ್ನ ಅಪ್ಪನೊಂದಿಗೇ ಇರು ಅನ್ನುತ್ತಾಳೆ. ಅಕೆ ಅಳುತ್ತಾ ಅರಮನೆಯತ್ತ ಹೆಜ್ಜೆ ಹಾಕುತ್ತಾಳೆ. ತನ್ನ ಮಗಳು ಬರುತ್ತಿರುವುದನ್ನು ಕಿಟಕಿಯಿಂದಲೇ ನೋಡಿದ ದರ್ಜಿ, ಇತ್ತ ಕಡೆ ಬರಬೇಡ ಎಂದು ಗದರುತ್ತಾನೆ. ಆತ ಎಷ್ಟು ಗದರಿದರೂ ಆಕೆ ಕೇಳದಿದ್ದಾಗ, ತನ್ನ ಬೂಡ್ಸುಗಳನ್ನು ಒಂದಾದ ಮೇಲೆ ಒಂದರಂತೆ ಆಕೆಯತ್ತ ಎಸೆದು ಮನೆಗೆ ಹೋಗುವಂತೆ ಹೇಳುತ್ತಾನೆ. ತನ್ನ ತಂದೆಯ ಕೋಪವನ್ನು ಮನಗಂಡ ಆ ಬಾಲಕಿ ಮರಳಿ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಾಳೆ.

ರಾಜಕುಮಾರಿಯ ಉಡುಗೆ ತಯಾರಾದ ಮೇಲೆ ಆ ದರ್ಜಿಯನ್ನು ಅರಮನೆಯಿಂದ ತನ್ನ ಮನೆಗೆ ಹೋಗಲು ಅನುಮತಿ ನೀಡುತ್ತಾರೆ. ಮುಂದೊಂದು ದಿನ, ರಾಜಕುಮಾರಿಯ ಸಖಿಯರಲ್ಲಿ ಯಾರೋ ರಾಜಕುಮಾರಿಗೆ ಒಂದು ಸುದ್ದಿ ಮುಟ್ಟಿಸುತ್ತಾರೆ. ಅದೇನೆಂದರೆ, ರಾಜಕುಮಾರಿಯ ಹೊಸ ಉಡುಗೆಯ ತರಹದೇ ಆದ ಉಡುಗೆಯನ್ನು ಆ ದರ್ಜಿಯ ಕಿರಿಯ ಮಗಳು ಧರಿಸಿಕೊಂಡು ಅಡ್ಡಾಡುತ್ತಿದ್ದುದನ್ನು ಆ ಸಖಿಯರು ನೋಡಿರುತ್ತಾರೆ. ರಾಜಕುಮಾರಿ ರಾಜನಿಗೆ ದೂರು ಸಲ್ಲಿಸುತ್ತಾಳೆ.

ರಾಜ ಆ ದರ್ಜಿಯನ್ನು ದರ್ಬಾರಿಗೆ ಕರೆಸಿ ವಿಚಾರಣೆ ನಡೆಸುತ್ತಾನೆ. ಅರಮನೆಯಲ್ಲಿ ಬಂಧನದಲ್ಲಿ ಇದ್ದಾಗಲೂ ನಿನ್ನಿಂದ ಆ ಬಟ್ಟೆಯನ್ನು ಹೊರ ಸಾಗಿಸಲು ಅದು ಹೇಗೆ ಸಾಧ್ಯವಾಯಿತುಎಂದು ಕೇಳುತ್ತಾನೆ. ಆಗ ಆ ದರ್ಜಿ, “ಮಹಾರಾಜರೇ, ಒಂದು ದಿನ ನನ್ನ ಕಿರಿ ಮಗಳು ಅಳುತ್ತಾ ಅರಮನೆಯತ್ತ ಬಂದಿದ್ದಳು, ಆಕೆಯನ್ನು ಗದರಿಸುತ್ತಾ ನಾನು ನನ್ನೆರಡೂ ಬೂಡ್ಸುಗಳನ್ನು ಆಕೆಯತ್ತ ಎಸೆದಿದ್ದೆ. ಆ ಬೂಡ್ಸಿನೊಳಗೆ ನಾನು ಬಟ್ಟೆಯನ್ನೂ ಮನೆಗೆ ರವಾನಿಸಿದ್ದೆಎಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.

ಆಗ ರಾಜ ಮಂತ್ರಿಗಳೇ, ಈತನಿಗೆ ಯಾವ ಶಿಕ್ಷೆಯನ್ನು ನೀಡಬೇಕು?” ಎಂದು ತನ್ನ ಮಂತ್ರಿಯ ಸಲಹೆಯನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಮಂತ್ರಿ ಮಹಾರಾಜರೇ, ಈ ದರ್ಜಿಗೆ ಬಹುಮಾನ ಕೊಟ್ಟು ಕಳಿಸಬೇಕು, ಏಕೆಂದರೆ ಈತ ನಮಗೊಂದು ಪಾಠ ಕಲಿಸಿದ್ದಾನೆ. ಅದೇನೆಂದರೆ, ಮನುಷ್ಯ, ಮನಸ್ಸು ಮಾಡಿದರೆ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ, ತಾನು ಅಂದುಕೊಂಡುದನ್ನು ಸಾಧಿಸಿ ತೋರಿಸಬಲ್ಲ”. ಮಹಾರಾಜನು ಈ ಉತ್ತರದಿಂದ ಸಂತುಷ್ಟಗೊಂಡು, ಆ ದರ್ಜಿಗೆ ಬಹುಮಾನ ನೀಡಿ ಕಳಿಸುತ್ತಾನೆ.

*****

 

Rating
No votes yet

Comments