-------------------------------------------
50ಗಿಗಾ ಪಿಕ್ಸೆಲ್ ಕ್ಯಾಮರಾದತ್ತ
ಸದ್ಯಕ್ಕೀಗ ನಾವು ಬಳಸುವ ಕ್ಯಾಮರಾಗಳು ಮೆಗಾಪಿಕ್ಸೆಲ್‌ನಲ್ಲಿ ತಮ್ಮ ಸ್ಪಷ್ಟತೆಯನ್ನು ಹೊಂದಿರುತ್ತವೆ.ಮೆಗಾಪಿಕ್ಸೆಲ್ ಕ್ಯಾಮರಾದಲ್ಲಿ,ಸ್ಪಷ್ಟ ಚಿತ್ರ ಪಡೆಯಲು,ಚಿತ್ರ ತೆಗೆದ ಜಾಗದ ವಿಸ್ತೀರ್ಣ ಕಂಪ್ಯೂಟರ್ ತೆರೆಯಲ್ಲಿ ಪ್ರದರ್ಶಿಸುವ ಪುಟದಲ್ಲಿರುವ ಶಬ್ದವು ಹಿಡಿಸುವ ಜಾಗವೆಂದು ಕೊಂಡರೆ,ಗಿಗಾಪಿಕ್ಸೆಲ್ ಕ್ಯಾಮರಾವನ್ನು ಇಡೀ ಕಂಪ್ಯೂಟರ್ ತೆರೆಯ ಜಾಗದ ಚಿತ್ರ ಹಿಡಿಯಲು ಬಳಸಬಹುದು.ದೊಡ್ಡ ವಿಸ್ತೀರ್ಣದ ಪ್ರದೇಶವನ್ನು ಕ್ಯಾಮರದಲ್ಲಿ ಸೆರೆ ಹಿಡಿಯಬೇಕಾದಾಗ,ಆ ವಿಸ್ತೀರ್ಣದ ಪ್ರದೇಶದ ಸಣ್ಣ ಸಣ್ಣ ಭಾಗಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು,ನಂತರ ಅವನ್ನು ಕಂಪ್ಯೂಟರಿನಲ್ಲಿ ಜೋಡಿಸುವುದೇ ಸದ್ಯ ಲಭ್ಯವಿರುವ ತಂತ್ರ.ಆಸ್ಟ್ರೋ ಮೋಹನ್ ಅಂತಹ ಛಾಯಾಚಿತ್ರಗಾರರು,ರಥಬೀದಿಯ ಪಕ್ಷಿನೋಟ ನೀಡುವ ಚಿತ್ರ,ಬೃಹತ್ ಸಭೆಗಳ ಚಿತ್ರವನ್ನು ಸೆರೆ ಹಿಡಿಯಲು ಬಳಸುವ ತಂತ್ರವನ್ನು ನೆನಪಿಸಿಕೊಳ್ಳಿ.ಸಂಶೋಧಕರೀಗ ಹಲವು ಕ್ಯಾಮರಾಗಳನ್ನು ಬಳಸಿ,ಒಂದೇ ಬಾರಿಗೆ ಇಡೀ ವಿಸ್ತೀರ್ಣವನ್ನು ಸೆರೆಹಿಡಿಯ ಬಾರದೇಕೆ ಎಂದು ಆಲೋಚಿಸುತ್ತಿದ್ದಾರೆ. ಇದನ್ನು ಸಾಧಿಸಲು ಡ್ಯೂಕ್‌ನ ಇಂಜಿನಿಯರಿಂಗ್ ಕಾಲೇಜಿನ ಸಂಶೋಧಕರು ಕೀಟಗಳ ಸಂಯುಕ್ತಾಕ್ಷಿಗಳ ರಚನೆಯನ್ನು ಬಳಸುತ್ತಿದ್ದಾರೆ.ಇದರಲ್ಲಿ ಕೀಟದ ಕಣ್ಣಿಗೆ ಒಂದೇ ಲೆನ್ಸ್ ಮೂಲಕ ಬಂದ ನೋಟ,ಹಲವು ಭಾಗಗಳಾಗಿ ಪ್ರತ್ಯೇಕಗೊಳ್ಳುತ್ತದೆ.ಡ್ಯೂಕ್‌ನ ಸಂಶೋಧಕರ ಅವೇರ್28 ಎನ್ನುವ ವ್ಯವಸ್ಥೆಯಲ್ಲಿ ,ಒಂದು ದೊಡ್ಡ ಲೆನ್ಸ್ ಮೂಲಕ ಬಂದ ದೊಡ್ಡ ವಿಸ್ತೀರ್ಣದ ನೋಟ,ತೊಂಬತ್ತೆಂಟು ಭಾಗಗಳಾಗಿ ವಿಭಜನೆ ಹೊಂದಿ,ತೊಂಬತ್ತೆಂಟು ಬೇರೆ ಬೇರೆ ಸಂವೇದಕಗಳಲ್ಲಿ ದಾಖಲಾಗುವ ಮೂಲಕ ಅವನ್ನು ಕಂಪ್ಯೂಟರಿನಲ್ಲಿ ಸಮಗ್ರ ಚಿತ್ರವಾಗಿ ಮೂಡುತ್ತದೆ.
---------------------------------------------------------
ಇಂಟರ್ನೆಟ್ ಸೈಟ್:ನಿಷೇಧ ಹಿಂತೆಗೆತ
ಪೈರೇಟ್‌ಬೇ ಮೊದಲಾದ ಕಂಪ್ಯೂಟರ್ ಕಡತಗಳ ಹಂಚಿಕೆಯನ್ನು ಸಾಧ್ಯವಾಗಿಸುವ ತಾಣಗಳನ್ನು ಬಳಕೆದಾರರರಿಗೆ ಅಲಭ್ಯವಾಗಿಸಬೇಕು.ಹೀಗೆ ನ್ಯಾಯಾಲಯವು ಭಾರತದ ಐಎಸ್‌ಪಿ(ಇಂಟರ್‌ನೆಟ್ ಸೇವಾದಾತೃ)ಗಳಿಗೆ ವಿಧಿಸಿತ್ತು.ಈಗದನ್ನು ಹಿಂತೆಗೆದಿರುವ ನ್ಯಾಯಾಲಯವು,ತನ್ನ ಮಧ್ಯಂತರ ತೀರ್ಪನ್ನು ಪರಿಷ್ಕರಿಸಿದೆ.ಬಾಲಿವುಡ್ ಚಿತ್ರಗಳ ಅಕ್ರಮ ಪ್ರತಿಗಳನ್ನು ಬಳಕೆದಾರರು ತಮ್ಮತಮ್ಮಲ್ಲಿ ವಿನಿಮಯ ಮಾಡಿಕೊಂಡದ್ದಕಾಗಿ ಈ ನಿಷೇಧ ಹೇರಲಾಗಿತ್ತು.ಇಡೀ ತಾಣಗಳನ್ನು ಅಲಭ್ಯವಾಗಿಸುವುದು ಬೇಡ,ಬದಲಿಗೆ ಚಿತ್ರಗಳು ಸಿಗುವ ವಿಳಾಸಗಳಿಗೆ ಮಾತ್ರಾ ನಿಷೇಧ ಅನ್ವಯಿಸುತ್ತದೆ ಎಂದು ಪರಿಷ್ಕೃತ ತೀರ್ಪು ಸ್ಪಷ್ಟನೆ ನೀಡಿದೆ.ಐಎಸ್‌ಪಿಗಳು ನ್ಯಾಯಾಲಯದಲ್ಲಿ ಅರ್ಜಿ ಹಾಕಿ,ನಿಷೇಧದ ಬಳಿಕ,ಭಾರತೀಯ ತಾಣಗಳ ಮೇಲೆ ದಾಳಿಕೋರರು ಹಗೆ ಸಾಧಿಸುತ್ತಿದ್ದುದನ್ನು ನಿವೇದಿಸಿಕೊಂಡ ಬಳಿಕ ನ್ಯಾಯಾಲಯವು ತನ್ನ ತೀರ್ಪನ್ನು ಪರಿಷ್ಕರಿಸಿದೆ.
--------------------------------------------------
ಕಂಪ್ಯೂಟರ್ ಪ್ರಿಂಟರುಗಳನ್ನು ಕಾಡುವ ವೈರಸ್
ಕಂಪ್ಯೂಟರು ಪ್ರಿಂಟರುಗಳಿಗೆ ಪ್ರಿಂಟ್ ಆದೇಶ ನೀಡಿದಾಗ,ಮುದ್ರಿಸಬೇಕಾದ ಪುಟಗಳ ಬದಲು ಏನನ್ನೋ ಮುದ್ರಿಸುತ್ತಿವೆಯೇ?ಹೀಗಾದರೆ,ಅದಕ್ಕೆ ಕಂಪ್ಯೂಟರ್ ವೈರಸ್ ಕಾರಣವಾಗಿರಲೂ ಬಹುದು.ಭಾರತ,ಅಮೆರಿಕಾ,ಯುರೋಪ್,ದಕ್ಷಿಣ ಅಮೆರಿಕಾಗಳ ಸಾವಿರಾರು ಕಡೆ ಮಿಲಿಸೆನ್ಸೋ ಎಂಬ ಹೆಸರಿನ ವೈರಸ್ ಇಂತಹ ಸಮಸ್ಯೆಯನ್ನು ಹುಟ್ಟುಹಾಕಿದೆ.ಎರಡು ವರ್ಷದ ಹಿಂದೆಯೇ ಈ ವೈರಸ್ ಕಾಡತೊಡಗಿತ್ತು.ಈಗ ಮತ್ತೆ ಅದರ ದಾಂಧಲೆ ಹೆಚ್ಚಿದೆ ಎಂದು ಸೆಮಾಂಟೆಕ್ ಕಂಪೆನಿ ಪ್ರಕಟಿಸಿದೆ.ಮಿಂಚಂಚೆ,ಇಂಟರ್‌ನೆಟ್ ತಾಣಗಳ ಮೂಲಕ ಈ ವೈರಸ್ ನಮ್ಮ ಕಂಪ್ಯೂಟರುಗಳನ್ನು ಕಾಡಬಹುದು.ಈ ವೈರಸ್ ಕಿತ್ತೆಸೆಯುವ ತಂತ್ರಾಂಶವು ಆಂಟಿವೈರಸ್ ತಂತ್ರಾಂಶವನ್ನು ನವೀಕರಿಸಿದಾಗ ಲಭ್ಯವಾಗುವ ಕಾರಣ,ಬಳಕೆದಾರರು ಭಯಭೀತರಾಗಬೇಕಿಲ್ಲ.
-----------------------------------------------------------
ಹಾರುವ ಸೈಕಲ್
ಸೈಕಲ್ ತುಳಿದಾಗ,ನೆಲದ್ದಲ್ಲೇ ಸಾಗದೆ ಹಾರುವುದನ್ನು ಕಲ್ಪಿಸಿಕೊಳ್ಳಿ.ಇಂತಹ ಸೈಕಲ್‌ಗಳ ವಿನ್ಯಾಸವನ್ನು ಜೆಕ್ ಸಂಶೋಧಕರು ಮಾಡಿದ್ದಾರೆ.ಇದರಲ್ಲಿ ಪ್ರೊಪೆಲರ್‌ಗಳಿದ್ದು,ಪೆಡಲ್ ಮಾಡಿದಾಗ,ಈ ಪ್ರೊಪೆಲರುಗಳು ತಿರುಗುತ್ತವೆ.ಪರಿಣಾಮವಾಗಿ,ಸೈಕಲ್ ಹೆಲಿಕಾಪ್ಟರ್‌ನಂತೆ ನೆಲಬಿಟ್ಟು ಮೇಲೇರುತ್ತವೆ.ಹಾಗೆಂದು ಸವಾರ ಬಹಳ ಭಾರವಾಗಿರಬಾರದು.ಸುಮಾರು ಎಪ್ಪತ್ತು ಕೆಜಿ ತೂಗುವ ಸವಾರ ಕುಳಿತಿದ್ದರೆ ಮಾತ್ರಾ,ಈ ಸೈಕಲ್ ಹಾರಬಹುದು.ಇದಕ್ಕೆ ದುಬಾರಿ ಬಿಡಿಭಾಗಗಳನ್ನು ಬಳಸದೆ,ಸದ್ಯ ಲಭ್ಯವಿರುವ ಬಿಡಿಭಾಗಗಳನ್ನು ಬಳಸುವತ್ತ,ಸಂಶೋಧಕರು ಗಮನ ಹರಿಸಿದ್ದಾರೆನ್ನುವುದು ವಿಶೇಷ.ಕಾಲಿಂದ ತುಳಿಯುವ ಬದಲು ಐವತ್ತು ಕಿಲೋವ್ಯಾಟ್ ಸಾಮರ್ಥ್ಯದ ಮೋಟಾರು ಬಳಸಿ,ಇದನ್ನು ಹಾರುವಂತೆ ಮಾಡಲಾಗಿದೆ.ವಿನ್ಯಾಸ,ಪರೀಕ್ಷೆಗಳಿನ್ನೂ ಪೂರ್ಣವಾಗಿಲ್ಲ.ಏನಿದ್ದರೂ ಆಗಷ್ಟ್ ಹೊತ್ತಿಗಷ್ಟೇ ಹಾರುವ ಸೈಕಲ್ ಕನಸು ನನಸಾಗಬಹುದು.
-------------------------------------
ಫೇಸ್‌ಬುಕ್ ತೆಕ್ಕೆಗೆ ಫೇಸ್
ಚಿತ್ರದಲ್ಲಿ ವ್ಯಕ್ತಿಗಳನ್ನು ಗುರುತಿಸುವ ತಂತ್ರಾಂಶವನ್ನು ಇಸ್ರೇಲಿ ಇಂಟರ್‌ನೆಟ್ ತಾಣ ಫೇಸ್.ಕಾಮ್ ಅಭಿವೃದ್ಧಿ ಪಡಿಸಿತ್ತು.ಹಾಗಾಗಿ ಜನರು ಚಿತ್ರಗಳಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಲು ಈ ತಾಣವನ್ನು ಬಳಸಹತ್ತಿ,ತಾಣ ಜನಪ್ರಿಯವಾಗಿತ್ತು.ಈಗ ಈ ತಾಣವು ಫೇಸ್‌ಬುಕ್ ತೆಕ್ಕೆಗೆ ಬಂದಿದೆ.ಇದಕ್ಕೆ ಅದು ತೆತ್ತಿರುವ ಬೆಲೆ ಇನ್ನೂ ಬಹಿರಂಗವಾಗಿಲ್ಲ.ಇನ್ಸ್ಟಾಗ್ರಾಮ್ ಎನ್ನುವ ತಾಣವನ್ನೂ ಫೇಸ್‌ಬುಕ್ ಖರೀದಿಸಿರುವುದು ತಮಗೆ ಗೊತ್ತಿರಬಹುದು.
--------------------------------------------------
ಮೈಕ್ರೋಸಾಫ್ಟ್ ಸರ್ಫೇಸ್ ಎನ್ನುವ ಟ್ಯಾಬ್ಲೆಟ್
ಐಪ್ಯಾಡ್ ಅನ್ನು ಎದುರಿಸಲು ಮೈಕ್ರೋಸಾಫ್ಟ್ ಕೂಡಾ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಿಡಲಿದೆ.ಸರ್ಫೇಸ್ ಎನ್ನುವ ಟ್ಯಾಬ್ಲೆಟ್,ವಿಂಡೋಸ್8 ಎನ್ನುವ ಆಪರೇಟಿಂಗ್ ವ್ಯವಸ್ಥೆಯನ್ನಿದರಲ್ಲಿ ಅಳವಡಿಸಲಾಗಿದೆ.ಇದರ ತೆರೆ ಹತ್ತೂವರೆ ಇಂಚಿಗಿಂತ ತುಸು ದೊಡ್ಡದಿರುತ್ತದೆ.ಎರಡು ನಮೂನೆಗಳಲ್ಲಿವು ಲಭ್ಯವಾಗಲಿವೆ.ಸರ್ಫೇಸ್-ಆರ್‌ಟಿ ಮತ್ತು ಸರ್ಫೇಸ್-ಪ್ರೊ ಎನ್ನುವುದು ಈ ಎರಡು ನಮೂನೆಗಳು.ಅವುಗಳ ಸ್ಪಷ್ಟತೆ ಬೇರೆ ಬೇರೆ ಇರುತ್ತದೆ.ಪ್ರೋ ಮಾದರಿ ಅಧಿಕ ಸ್ಪಷ್ಟತೆಯ ತೆರೆಯದ್ದಾಗಿರುತ್ತದೆ.ಸ್ಟೈಲಸ್ ಎನ್ನುವ ಕಡ್ಡಿ ಬಳಸಿ,ತೆರೆಯ ಮೇಲೆ ಬರೆಯಲಿದರಲ್ಲಿಆಸ್ಪದವಿರುತ್ತದೆ.ಒಂಭೈನೂರು ಗ್ರಾಮು ತೂಕ,ಅರುವತ್ತನಾಲ್ಕು ಜಿಬಿ ಮತ್ತು ನೂರೆಂಟು ಜೀಬಿ ಸ್ಮರಣಕೋಶದಲ್ಲಿ ಲಭ್ಯವಾಗಲಿದೆ.
*ಅಶೋಕ್‌ಕುಮಾರ್ ಎ