ನಂಜುಂಡಿ ನೆಗೆದುಬಿದ್ದ !!!

ನಂಜುಂಡಿ ನೆಗೆದುಬಿದ್ದ !!!

 

ಒಂದು ದಿನಕ್ಕೂ ಒಬ್ಬರಿಗೆ ತೊಂದರೆ ಮಾಡದಂತಹ ನುಂಗುಂಡ ನಂಜುಂಡ ನೆಗೆದುಬಿದ್ದ. 

 

"ನೆಗೆದುಬಿದ್ದ" ಛೇ! ಒಬ್ಬ ಮನುಷ್ಯನ ಸಾವಿನ ಬಗ್ಗೆ ಆಡೋ ಮಾತಾ ಇದು? ಬರೆಯುವಾಗ ಮನಬಂದಂತೆ ಬರೆಯಬಾರದು. 

 

ಹೌದು ಕಣ್ರೀ, ಒಪ್ತೀನಿ. ಇಷ್ಟಕ್ಕೂ ನಾನೇನು ಅನ್ನಬಾರದ್ದು ಅಂದಿದ್ದು? "ನೆಗೆದುಬಿದ್ದ" ಅನ್ನೋದ್ರಲ್ಲಿ ತಪ್ಪೇನಿದೆ? ನಂಜುಂಡನ ಬಗ್ಗೆಯೇ ಹೇಳೋದಾದ್ರೆ ’ಸಾಯೋವರೆಗೂ ಬದುಕಿದ್ದ’ ಅಂತ ಅನ್ನೋದ್ ಬಿಟ್ರೆ ಬೇರೇನೂ ಕ್ವಾಲಿಫಿಕೇಷನ್ಸ್ ಇಲ್ಲ ಅವನಿಗೆ ... 

 

ಹೋಗ್ಲಿ ಬಿಡಿ ... ದಾಸರ ರೀತಿ "ನಾನು ಹೋದರೆ ಹೋದೇನು" ಅನ್ನೋ ಶೈಲಿ ಬಿಟ್ಟು, ಧಾರಾವಾಹಿಗಳ ಸ್ಟೈಲಿನಲಿ ಉದ್ದೂಟಾಗಿ ಹೇಳ್ತೀನಿ ... "ನಂಜುಂಡು ತನ್ನ ಮನೆ ಗೋಡೆಯನ್ನು ನೆಗೆದು ಕೆಳಕ್ಕೆ ಬಿದ್ದನು". 

 

ಸತ್ತ ಅಂತ ಎಲ್ಲಿ ಹೇಳಿದೆ? ಈಗ ಸರಿ ಹೋಯ್ತು ಅನ್ನಿಸುತ್ತೆ.

 

ಈಗ ಮತ್ತೊಮ್ಮೆ ... "ನುಂಗುಂಡ ನಂಜುಂಡ ನೆಗೆದು ಬಿದ್ದ" ...

 

ನಮ್ ನಂಜುಂಡನಿಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಕಣ್ರೀ ... ಮೀಸೆ ಇದ್ರಲ್ವೇ ಮಣ್ಣಾಗೋಕ್ಕೇ?

 

ಅದ್ಸರಿ ಆಗ್ಲೇ ಅದೇನೋ ’ನುಂಗುಂಡ’ ಅಂದ್ರಲ್ಲ, ಅದೇನು ಕನ್ನಡ ಪದವೇ? ಹೌದು, ನಂಜುಂಡ ಎಂಥಾ ಮನುಷ್ಯ ಅಂದ್ರೆ, ’ಅನ್ನವ ಅಗೆದರೆ ಅನ್ನವೆಲ್ಲಿ ಅಯ್ಯೋ ಅನ್ನುತ್ತದೆಯೋ’ ಅಂತ ಹೇಳಿ ಅನ್ನವನ್ನು ನುಂಗುತ್ತಿದ್ದ, ಅದಕ್ಕೇ ಅವನನ್ನು ನುಂಗುಂಡ ನಂಜುಂಡ ಅಂತ ಕರೀತೀನಿ. ಹಾಗಂತ ನೀವು ಕರೆಯಲಿಕ್ಕೆ ಹೋಗಬೇಡಿ. ನೀವು ಕರೆದಿದ್ದು ಕೇಳಿದರೆ ಅಥವಾ ಯಾರಾದರೂ ಅವನಿಗೆ "ನೋಡಪ್ಪ, ಅವರು ಕರೀತಾರೆ" ಅಂದಲ್ಲಿ,  ನಿಮ್ಮ ಮನೆಗೆ ಊಟಕ್ಕೆ ಬರ್ತಾನೆ. ಅವನಿಗೆ ಯಾರಾದರೂ ’ಕರೀತಾರೆ’ ಅಂದ್ರೆ "ಊಟಕ್ಕೇ ಕರೀತಾರೆ" ಅಂತ್ಲೇ ಲೆಕ್ಕ !!

 

ಈಗ ಮಗದೊಮ್ಮೆ ... "ನುಂಗುಂಡ ನಂಜುಂಡ ನೆಗೆದು ಬಿದ್ದ" ... ಒಂದು ವಾಕ್ಯದ ಹಿಂದೆ ಎಂಥಾ ಅಗಾಧ ಅರ್ಥ ಇದೆ ಅಂತ ಅರ್ಥವಾದಂತಾಯ್ತು ... ಮುಂದೆ ...

 

ನಂಜುಂಡ ಗೋಡೆ ನೆಗೆದಿದ್ದು ಯಾಕೆ? 

 

ನಂಜುಂಡ ಹಿತ್ತಲಲ್ಲಿ ಕೈಗೆಟುಕದ ಸೀಬೆಹಣ್ಣನ್ನು ಆಕಡೆ ಈಕಡೆ ನೋಡಿ, ಯಾರೂ ನೋಡುತ್ತಿಲ್ಲವೆಂದು ಖಾತ್ರಿಪಡಿಸಿಕೊಂಡು ಎಗರಿ ಎಗರಿ ಕಿತ್ತುಕೊಳ್ಳಲು ಹವಣಿಸುತ್ತಿದ್ದ. ಅಂದರೆ ಮೊದಲು ಪಂಚೆ ಬಿಗಿದುಕೊಳ್ಳುವುದು, ಎಗರುವುದು, ಲೂಸಾದ ಪಂಚೆಯನ್ನು ಒಂದು ಕೈಯಲ್ಲಿ ಪಿಡಿದು ಯಾರೂ ನೊಡಲಿಲ್ಲ ಎಂದು ಖಾತ್ರಿಪಡಿಸಿಕೊಂಡು, ಪಂಚೆ ಕಟ್ಟಿಕೊಂಡು ಮತ್ತೆ ಎಗರುವಿಕೆ ... ಹೀಗೆ

 

ಯಾರು ನೋಡಿದರೋ ಏನೋ, "ಕಳ್ಳ ಕಳ್ಳ ಸೀಬೆಕಾಯಿ ಕಳ್ಳ" ಅಂತ ಕೂಗಿಯೇಬಿಟ್ರು. ಪಂಚೆ ಟೊಂಕಕ್ಕೆ ಬಿಗಿದು ಹಾಗೇ ಕಾಲಿನಿಂದ ಮೇಲೆತ್ತಿಕೊಂಡು ಎತ್ತಿ ಕಟ್ಟಿದವನೇ ಎತ್ತರದ ಗೋಡೆ ಮೇಲೆ ನೆಗೆದು ಕೂತ ... ಬೋಳಾದ ಮಂಡಿ ತರಚಿತು .. ಜೋರಾಗೇ ತರಚಿಸಿಕೊಂಡ ಮಂಡಿಯಿಂದ ಹನಿ ಹನಿಯಾಗಿ ಉದುರುತ್ತಿದ್ದ ರಕ್ತದ ಹನಿಗಳನ್ನು ನೋಡುತ್ತಲೇ ಹಾಗೇ ತಲೆ ಸುತ್ತಿ ಆಚೆ ಬದಿ ಬಿದ್ದ ... ಇದು "ನೆಗೆದು ಬಿದ್ದ" ಕಥೆ.

 

ಎಷ್ಟೋ ಹೊತ್ತಾದ ಮೇಲೆ, (ಅವನು ಅಂದುಕೊಂಡಿದ್ದು) ಕಣ್ಣು ಬಿಟ್ಟ. ಮಡದಿ ಕಂಡಳು. "ನಾನೆಲ್ಲಿದ್ದೀನಿ" ಅಂತ ಲೈಟಾಗಿ ಮಳೆಯಲ್ಲಿ ನೆಂದ ನಾಯಿಮರಿಯಂತೆ ನರಳಿದ. ನುಡಿದಳಾ ನಾರಿ "ತೊಟ್ಟಿಯಲ್ಲಿ" ... "ಅಯ್ಯೋ!  ಮರ್ಯಾದೆ ಇರಲಿ ಕಣೇ" ಅಂದ ... 

 

ಮಡದಿ ಕೆರಳಿ, ಮರಳಿ ನುಡಿದಳು "ಮರ್ಯಾದೆ ನಿಮಗಾ? ತೊಟ್ಟಿಗಾ? ತೊಟ್ಟಿಯಲ್ಲಿ ಬಿದ್ದು ನನ್ನ ಮರ್ಯಾದೆ ಕಳೀತಿದ್ದೀರಾ !!"

 

ಸ್ವಲ್ಪ ಹಿರಿದಾಗಿ ಕಣ್ಣು ತೆರೆದ ಮೇಲೆ ಗೊತ್ತಾಯ್ತು, ನಿಜಕ್ಕೂ ತೊಟ್ಟಿಯಲ್ಲಿದ್ದ !! ಕಾಂಪೌಂಡ್ ಪಕ್ಕದ ತೊಟ್ಟಿ ಒಳಗೆ ಬಿದ್ದಿದ್ದ !! ಆಚೆ ಮನೆ ಅಂಬುಜಮ್ಮ, ಕೊನೇ ಮನೆ ಕಮಲಮ್ಮ, ಈಚೆ ಮನೆ ಇಂದ್ರಮ್ಮ, ಮೇಲಿನ ಮನೆ ಮೀನಾಕ್ಷಮ್ಮ ಇವನತ್ತಲೇ ನೋಡುತ್ತ ನಿಂತಿದ್ದರು. 

 

ನಾನೇ ಭಾಗ್ಯವಂತ, ನಾಲ್ಕು ಜನರಿಗೆ ಬೇಕಿರೋ ಹಾಗೆ ಬದುಕಿರೋ ಪುಣ್ಯಾತ್ಮ ... ಅಂದ್ರೆ ಈ ನಾಲ್ಕು ಜನರಿಗೆ ಅಂತ ಅಲ್ಲ .. ತಪ್ಪು ತಿಳೀಬೇಡಿ ... ಇವರೆಲ್ಲರೂ ನಂಜುಂಡಿ ಅಮ್ಮನ ಓರಗೆಯವರು .. ಪತ್ನಿ ನುಡಿದಳು "ಅವರುಗಳೇನೂ ನಿಮ್ಮನ್ನ ನೋಡೋಕ್ಕೆ ಬಂದಿಲ್ಲ.  ಬೇಗ ಎದ್ದು ಈಚೆ ಬನ್ನಿ. ಅವರು ಕಸ ಎಸೆದು ಹೋಗ್ತಾರೆ" ಅಂದಳು....  

 

ಓಹೋ! ನಂಜುಂಡಿಗೆ "ಅವರುಗಳು ನಿಂತಿರೋದು ನನಗಾಗಿ ಅಲ್ಲ ... ನನಗಾಗಿ" ಎಂದು ಅರಿವಾಯಿತು !! ಜ್ಞ್ನಾನೋದಯವಾಗಿದ್ದೇ ತಡ ’ಯುರೇಕ’ ಎನ್ನುತ್ತ ತೊಟ್ಟಿಯಿಂದ ಹೊರಬರಲು ಯತ್ನಿಸಿದ !!!

 

"ನನಗಾಗಿ ಅಲ್ಲ ... ನನಗಾಗಿ" ಎಂದಾಗ, ತೊಟ್ಟಿಯಲ್ಲಿ ಬಿದ್ದವನಿಗೆ ತಲೆಗೆ ಏಟು ಬಿದ್ದು ತಲೆಕೆಡ್ತು ಅಂದುಕೊಳ್ಳಬೇಡಿ. ’ನನಗಾಗಿ ಅಲ್ಲ’ ಅಂದರೆ "ನನ್ನ ಯೋಗಕ್ಷೇಮ ವಿಚಾರಿಸಿಕೊಳ್ಳಲಿಕ್ಕಾಗಿ ಅಲ್ಲ" ... ’ನನಗಾಗಿ’ ಅಂದ್ರೆ "ನಾನು ಎದ್ದು ಹೊರಗೆ ಬರುವುದಕ್ಕಾಗಿ" ಅಂತ ... 

 

ತಾನು ಹೊರಗೆ ಬರಲು ಸಹಾಯ ಮಾಡು ಎಂಬೋ ಅರ್ಥದಲ್ಲಿ ಕೈ ಎತ್ತಲ್ಲೂ ಆಗುವುದಿಲ್ಲ ನಂಜುಂಡಿಗೆ ... ನಂಜುಂಡನಿಗೆ ಹೆಂಡತಿಯ ಎದುರು ತಲೆ ಎತ್ತೋಲ್ಲ, ಕೈ ಮೊದಲೇ ಎತ್ತೋಲ್ಲ ... ಹಾಗೂ ಹೀಗೂ ಸಾವರಿಸಿಕೊಂಡು ಎದ್ದು ಹೊರಬಂದ ನಂಜುಂಡ. 

 

ಕಷ್ಟಪಟ್ಟು ಒಂದೆರಡು ಹೆಜ್ಜೆ ಈಚೆ ಇಡುತ್ತಿದ್ದಂತೆಯೇ, ಹೆಂಗಸರು ಧಾವಿಸಿ ಬಂದು ಕಸ ಎಸೆದು, ಧಡ ಧಡ ನೆಡೆದರು ... 

 

ಉಳಿದವಳೊಬ್ಬಳೇ ... ತಾಳಿ ಕಟ್ಟಿಸಿಕೊಂಡ ಪತ್ನಿ ... ಈ ಸತ್ಯವನ್ನರಿತೇ ನಂಜುಂಡ ಯಾರನ್ನೂ ತಲೆ ಎತ್ತಿ ನೋಡೋಲ್ಲ ... ಎಲ್ಲರನ್ನೂ ತನ್ನ ಹೆಂಡತಿಯಂತೇ ಕಾಣೋ ಸ್ವಾತಂತ್ರ್ಯ ಹೋರಾಟಗಾರ ....

 

ಅಯ್ಯೋ ಅಯ್ಯೋ ಅಯ್ಯೋ !!! ಏನು ಮಾತು ಇದು ... ಎಲ್ಲರ ಪತ್ನಿಯರನ್ನು ತನ್ನ ಪತ್ನಿಯಂತೆ ಕಾಣುವವ ಅಂದ್ರೆ ... ಛೀ, ಛೀ ....

 

ಸತ್ಯವಾದ ಮಾತು ಕಣ್ರೀ .... ಮತ್ತೊಮ್ಮೆ ಹೇಳ್ತೀನಿ ಕೇಳಿ ... ನಂ ನಂಜುಂಡು ತನ್ನ ಹೆಂಡತಿಯ ಮುಂದೆ ತಲೆ ಎತ್ತೋಲ್ಲ ... ಹಾಗೆಯೇ ಪರರ ಹೆಂಡಿರ ಮುಂದೆಯೂ ತಲೆ ಎತ್ತೋಲ್ಲ. ತನ್ನ ಹೆಂಡತಿಯಂತೆಯೇ ಪರರ ಹೆಂಡಿರನ್ನೂ ನೋಡುತ್ತಾನೆ .. ಅಂದ್ರೆ ತಲೆ ಬಗ್ಗಿಸಿ ಬರೀ ಪಾದಗಳನ್ನೇ ನೋಡುತ್ತಾನೆ ಅಂತ. 

 

ಅವನು ಕಂಡಿರೋ ಅಷ್ಟು ಕಾಲುಂಗುರಗಳನ್ನು ಬೆಳ್ಳಿ ಅಂಗಡಿಯವನೂ ಕಂಡಿರಲಿಕ್ಕಿಲ್ಲ .... 

 

ಸ್ವಾತಂತ್ರ್ಯ ಹೋರಾಟಗಾರ ಎಂದರೆ ನಂಜುಂಡನೇನೂ ೧೯೦೦ ಮಾಡಲ್ ಅಲ್ಲ. ಮನೆಯಲ್ಲಿ ತನ್ನ ಸ್ವಾತಂತ್ರ್ಯಕ್ಕಾಗಿ ತಾಳಿ ಕಟ್ಟಿದಾಗಿನಿಂದ ಹೊರಾಡುತ್ತಿರುವವ ಅಂತ ಅರ್ಥ ... ನಂಜುಂಡ ಸ್ವಲ್ಪ ಹಿರಿಯ ಆದರೆ ಮುದುಕನಲ್ಲ !

 

ಊಗಲಾಡಿಕೊಂಡು ಹೆಜ್ಜೆ ಹಾಕುತ್ತಿದ್ದವನಿಗೆ ಕೇಳಿದಳು ಪತ್ನಿ "ತೊಟ್ಟಿಯಲ್ಲಿ ಬಿದ್ದದ್ದಾದರೂ ಏಕೆ?" ... "ಗೋಡೆ ಹಾರಿದೆ ಕಣೇ" ... "ಗೋಡೆ ಹಾರಿದ್ದಾದರೂ ಯಾಕೆ" ... "ಸೀಬೇಹಣ್ಣು ಮೇಲಿತ್ತು. ಅದಕ್ಕೇ ಎಗರಿ ಕಿತ್ತೋಕ್ಕೆ ಹೊರಟಿದ್ದೆ ... ಯಾರೋ ಕಳ್ಳ ಕಳ್ಳ ಅಂದ್ರು" ... 

 

"ಅಲ್ಲಾ, ಸೀಬೇಹಣ್ಣು ಮೇಲೆ ಬಿಡದೆ ಕೆಳಕ್ಕೆ ಬಿಡೋಕ್ಕೆ ಅದೇನು ಕಲ್ಲಂಗಡಿ ಹಣ್ಣೇ? ಅದ್ಸರೀ, ನೀವು ಸೀಬೆಹಣ್ಣು ಕಿತ್ತುತ್ತಿದ್ದುದು ನಮ್ಮ ಹಿತ್ತಲಲ್ಲಿ ತಾನೇ? ಅವರಾರೋ ಕಳ್ಳ ಅಂದ್ರೆ ನಿಮಗ್ಯಾಕೆ ಮನಸ್ಸು ಹುಳ್ಳಗೆ?"

 

ಹೌದಲ್ವೇ? ನಮ್ಮ ಮನೆ ಮರದಲ್ಲಿ ನಾನು ಹಣ್ಣು ಕಿತ್ತರೆ ಇನ್ನೊಬ್ಬರಿಗೇಕೆ ಅಂಜಬೇಕು? ಸೊಂಟ ಮುರಿದುಕೊಂಡ ಮೇಲೆ, ಹೆಂಡತಿ ಹೇಳಿದ ಮೇಲೆ ಆದ ಜ್ಞ್ನಾನೋದಯ ಇದು !!!

 

ಗೋಡೆ ಹಾರಿ ಬಂದಿದ್ರಿಂದ, ಮನೆಯ ಮುಂದಕ್ಕೆ ಹೋಗಲು ಸ್ವಲ್ಪ ಸುತ್ತಿಕೊಂಡೇ ಹೋಗಬೇಕು ... ನಿಧಾನಕ್ಕೆ ಚಲಿಸಿತ್ತು ರಥ ... ಅದರಂತೆ ಮಾತು ...

 

ನಂಜುಂಡಿ ನುಡಿದ "ನಾನ್ಯಾಕೆ ಹಾರಿದ್ನೋ ಗೊತ್ತಿಲ್ಲ ಕಣೆ" .... 

 

ಮಡದಿ ನುಡಿದಳು "ಹೋಗ್ಲಿ, ಪಂಚೆ ಅಲ್ಲೇ ಒಗೀಬೇಕಿತ್ತು ... ತೊಟ್ಟಿ ಕಸವೆಲ್ಲ ಪಂಚೆ ಮೇಲೇ ಇದೆ, ಅಸಹ್ಯ"

 

ನಂಜುಂಡಿ ನರಳುತ್ತಲೇ "ಅಲ್ವೇ, ಮನೆಯಲ್ಲಿ ಒಗೆಯೋ ಬಂಡೆ ಹತ್ತಿರ ಒಗೆದರೆ ಆಗೋಲ್ವೇ? ಇಲ್ಯಾರು ಬಟ್ಟೆ ಒಗೀತಾರೆ?"

 

ಮಡದಿ ತಲೆ ಚೆಚ್ಚಿಕೊಳ್ಳುತ್ತ ನುಡಿದಳು "ನಿಮ್ ಬುದ್ದಿಗಿಷ್ಟು ... ಅಲ್ಲೇ ಒಗೀರಿ ಅಂದ್ರೆ ಅಲ್ಲೇ ಎಸೀರಿ ಅಂತ"

 

ನಂಜುಂಡಿ "ಓ! ಹಂಗಾ ... ಅಲ್ಲಾ, ದಿನವೂ ಮನೆ ಮುಂದೆ ಬಂದು ಕಸ ತೆಗೆದುಕೊಂಡು ಹೋಗೋ ಜನ ಇದ್ರೂ, ತೊಟ್ಟಿಯಲ್ಲಿ ಯಾಕೆ ಇಷ್ಟು ಕಸ?"

 

ಮಡದಿ "ತೊಟ್ಟಿಯಲ್ಲಿ ಇನ್ನೇನಿದೆ .. ಎಲ್ಲ ನಿಮ್ಮ ಮೇಲೇ ಇದೆಯೆಲ್ಲ ! ಅವರುಗಳದ್ದು ಅದೇನೋ ಗಲಾಟೆ ... ಯೂನಿಯನ್ ಜನ ಬಂದ್ ಕರೆದಿದಾರೆ"

 

ನಂಜುಂಡಿ "ಬೇಕೇ ಬೇಕು ಕಸ ಬೇಕು ಅಂತ ಇರಬೇಕು ... ಗಂಡ ಹೆಂಡತಿ ಇಬ್ರೂ ಕೆಲಸಕ್ಕೆ ಹೋಗಿ, ಮನೆಗೆ ಬರೋ ಮುನ್ನ ಹೊರಗೇ ಮೆಂದುಕೊಂಡು ಬಂದರೆ ತೊಟ್ಟಿಯಲ್ಲಿ ಹಾಕೋಕ್ಕೆ ಕಸ ಎಲ್ಲಿಂದ ಬರಬೇಕು?"

 

ಮಡದಿ "ತೊಟ್ಟಿಯಲ್ಲಿ ಬಿದ್ದೆದ್ದು ಬಂದ ಮೇಲೆ ತಲೆಯಲ್ಲಿದ್ದ ಮಣ್ಣು ಉದುರಿದ ಹಾಗಿದೆ ... ಅದೇನಾದ್ರೂ ಇರಲಿ, ಅಂದ ಹಾಗೆ, ಬೆಳಿಗ್ಗೆ ವಾಸು ಬಂದ್ ಕರೆದು ಹೋದ"

 

ನಂಜುಂಡಿ "ವಾಸುಗೇನು ಬಂತು ಈ ಬುದ್ದಿ? ಬಂದ್ ಕರೆಯೋಕ್ಕೆ? ಅವನೇನು ಗಲಾಟೆ ಮಾಡ್ತಿದ್ದಾನೆ? ಅವನು ಬಂದ್ ಕರೆದುಹೋದರೆ ಯಾರಿಗೆ ಬಿಡುವಿದೆ ಇಲ್ಲಿ ... ಮೊದಲೇ ಬಿದ್ದಿದ್ದೀನಿ ನಾನು ... ಅಯ್ಯೋ"

 

ಮಡದಿ "ಅಯ್ಯೋ! ನಿಮ್ ಬುದ್ದಿಗಿಷ್ಟು ! ವಾಸು ತನ್ನ ಮಗಳ ಮದುವೆಗೆ ಬನ್ನಿ ಅಂತ ಮನೆಗೆ ಬಂದ್ ಕರೆದು ಹೋದ ಅಂದೆ"

 

ನಂಜುಂಡಿ "ಓ! ಹಂಗೆ!! ನಾನೆಲ್ಲೋ ವರದಕ್ಷಿಣೆಗೆ ದಿಕ್ಕಾರ ಅಂತ ಬಂದ್ ಕರೆದನೇನೋ ಅಂದುಕೊಂಡೆ"

 

ಅಂತೂ ಮನೆ ಸೇರಿದ ನಂಜುಂಡಿ ಮಡದಿಯ ಜೊತೆ ... ಮೆಟ್ಟಿಲ ಮೇಲೆ ಕಾಲಿಟ್ಟೊಡನೆ ಮಡದಿ ಜೋರಾಗಿ "ಹೊಲಸು ಹೊತ್ಕೊಂಡು ಮನೆ ಒಳಗೆ ಹೋಗಬೇಡಿ ... ಸೀದ ಮನೆ ಹಿಂದೆ ಹೋಗಿ ... ಸೀಬೆ ಮರದ ಹತ್ತಿರ ನೀರು ತಂದುಕೊಡ್ತೀನಿ"

 

ನಂಜುಂಡಿ "ಅಯ್ಯೋ! ಮತ್ತೆ ಸೀಬೆ ಮರವೇ" .... ಕುಂಟುತ್ತ ಹೋದವನ ಹಿಂದೆ, ಅವನಂತೇ ನೆಡೆಯುತ್ತ ಬಂದ ಮಗರಾಯ ಕೇಳಿದ "ಅಪ್ಪ .. ಆಗ್ಲೇ ’ಕಳ್ಳ ಕಳ್ಳ ಸೀಬೆಕಾಯಿ ಕಳ್ಳ’ ಅಂತ ಯಾರು ಕೂಗಿದ್ದು?" .... 

 

ನಂಜುಂಡಿ ಉತ್ತರ ಹೇಳಲು ಬಾಯಿ ತೆರೆದವನು .... ಆಗಲೇ ಇದೇ ಕಂಠ ಅಲ್ಲವೇ ನನಗೆ ಕೇಳಿಸಿದ್ದು? ಕೇಳಿಕೊಂಡು ತಾನು ಹಾರಿದ್ದು? 

 

ಅಂದ್ರೇ !!!

 

Comments