ಬದುಕು ಬಂಡಿ
ಸ್ವರನ್........ಸ್ವರನ್...
ಮಾ ಕೂಗು ಹಾಕಿದ್ದು ಕೇಳಿಸಿಯೂ ಕೇಳಿಸದವಳಂತೆ ಕೊಟ್ಟಿಗೆಯಲ್ಲಿ ಎಳೆಗರುವಿನ ಚಂದ ನೋಡುವುದರಲ್ಲಿ ಮಗ್ನಳಾಗಿದ್ದಳು ಪುಟ್ಟ ಸ್ವರನ್. ನಸು ಕಂದು ಬಣ್ಣದ ಮೈಯ ಕಡುಕಪ್ಪಿನ ಬಟ್ಟಲುಗಣ್ಣುಗಳ ಪುಟ್ಟ ಕರು ನೆಗೆನೆಗೆದು ತಾಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯುತ್ತಿತ್ತು. 'ರಾಣಿ' ಎಂದು ಹೆಸರಿಟ್ಟಿದ್ದಳು ಆ ಕರುವಿಗೆ. ವಾರದ ಕೆಳಗೆ ಬಂದ ಈ ಪುಟ್ಟ ಅತಿಥಿಯು ಸ್ವರನ್ ನ ಅಚ್ಚರಿಯ ಕೇಂದ್ರವಾಗಿಬಿಟ್ಟಿತ್ತು. ರಾಣಿ ತೂಕಡಿಸುವುದು, ಮಲಗುವುದು, ಹಾಲುಕುಡಿಯುವುದು, ಕಿವಿಗೆ ಗಾಳಿ ಹೊಕ್ಕಿದಂತೆ ಓಡುವುದು ಎಲ್ಲವನ್ನೂ ತನ್ನ ಗೆಳತಿಯರಿಗೆ ವರ್ಣಿಸಿ ಹೇಳುವುದು ಖುಶಿ ಅವಳಿಗೆ. ಕೂಗಿ ಕೂಗಿ ಸುಸ್ತಾದ ಮಾ ಎಲ್ಲ ಕಡೆ ಹುಡುಕಿ ಕೊಟ್ಟಿಗೆಯಲ್ಲಿ ರಾಣಿಯ ಮೈ ಸವರುತ್ತಾ ನಿಂತ ಮಗಳನ್ನು 'ಸ್ವರನ್ ಆಗಲೇ ಗಂಟೆ ಎಂಟು. ಶಾಲೆಗೆ ಹೊತ್ತಾಯಿತು. ಬೇಗ ಜಡೆ ಹಾಕಿ ರೋಟಿ ನಿನ್ನ ಇಷ್ಟದ ಸಾಗ್ ಜತೆ ತಿನ್ನುವಿಯಂತೆ' ಎಂದು ಎತ್ತಿಕೊಂಡೇ ನಡೆದಳು. ಸ್ವರನ್ ಗೆ ಶಾಲೆ ಅಂದರೆ ಬೇಜಾರು. ಪುಸ್ತಕಗಳನ್ನು ನೋಡಿದರೇ ನಿದ್ದೆ ಒತ್ತಿಕೊಂಡು ಬರುತ್ತಿತ್ತು. ಮಾ ಸ್ವರನ್ ನ್ನು ಶಾಲೆಗೆ ಬಿಡಲು ಹೋಗುತ್ತಿದ್ದಳು. ಮರಳಿ ಬರುತ್ತಾ ಹೊಲದಿಂದ ದನಕರುಗಳ ಮೇವಿಗೆ ಬೇಕಾದ ಹುಲ್ಲು ತರಿದುಕೊಂಡು ಬರುತ್ತಿದ್ದಳು. ಕೆಲವೊಂದು ಸಲ ಸ್ವರನ್ ಗೆ ಶಾಲೆ ಎಷ್ಟು ಬೇಜಾರು ಹಿಡಿಸುತ್ತಿತ್ತೆಂದರೆ ಮಾ ತಿರುಗಿ ಮನೆಗೆ ಮುಟ್ಟುವ ಮುಂಚೆಯೇ ಇನ್ನೊಂದು ಗಲ್ಲಿಯಿಂದ ಮನೆ ಸೇರುತ್ತಿದ್ದಳು. ದಾದಿ ಕೊಟ್ಟ ಕಡಾಪ್ರಶಾದ್ ಮೆಲ್ಲುತ್ತಾ ಮಾ ಬರುವವರೆಗೆ ದಾದಿಯ ಹಿಂದೆ ಮುಂದೆ ಓಡಾಡುತ್ತ ಶಾಲೆ ತಪ್ಪಿಸಿದ್ದಕ್ಕೆ ಮಾ ಸಿಟ್ಟಾದರೆ ತನ್ನನ್ನು ಬಚಾವ್ ಮಾಡುವಂತೆ ದಾದಿಯನ್ನು ಪುಸಲಾಯಿಸುತ್ತಿದ್ದಳು. ದಾದಿ ತನ್ನ ಮುದ್ದಿನ ಮೊಮ್ಮಗಳ ಮಾತಿಗೆ ಇಲ್ಲ ಹೇಳುವುದುಂಟೆ? ಮಾ ಕೂಡಾ ಅಷ್ಟೆ ಒಂದೆರಡು ಸಲ ಗದರಿ ಹಣೆಯಲ್ಲಿ ಬರೆದಂತಾಗುತ್ತದೆ ಎಂದು ಸುಮ್ಮನಾಗುತ್ತಿದ್ದಳು. ಹೆಣ್ಣುಹುಡುಗಿ ಏನೋ ಓದಲು ಬರೆಯಲು ಬಂದರಷ್ಟೆ ಸಾಕು ಎಂಬ ಮನೋಭಾವ ಮನೆಯವರದು. ಅದಕ್ಕೆ ತಕ್ಕಂತೆ ಹಾಗೂ ಹೀಗೂ ಐದನೆ ಈಯತ್ತೆವರೆಗೆ ಬಂದು ಓದಿಗೆ ಶರಣು ಹೊಡೆದಳು ಸ್ವರನ್. ಅಮ್ಮ ಅಜ್ಜಿಯರ ಹಿಂದೆ ಮುಂದೆ ಸುತ್ತಾಡುತ್ತ ಎಲ್ಲ ಬಗೆಯ ಮನೆಕೆಲಸಗಳಲ್ಲಿ ಪರಿಣಿತಳಾದಳು.
ಹದಿನೇಳರ ಹರೆಯದಲ್ಲಿ ಪಕ್ಕದ ಮರೂಲೆ ಗ್ರಾಮದ ಜತಿಂದರ್ ಜೊತೆ ಮದುವೆಯೂ ನಡೆದು ಹೋಯಿತು. ಮೈ ಕೈ ತುಂಬಿಕೊಂಡು ಸುಂದರವಾಗಿದ್ದ ಸ್ವರನ್ ಗೆ ಬಿಳಿಚಿಕೊಂಡಿದ್ದ ಕೃಶಕಾಯನಾದ ಜತಿಂದರ್ ಯಾವ ರೀತಿಯಲ್ಲೂ ಅನುರೂಪನಿದ್ದಿರಲಿಲ್ಲ. ಹೇರಳವಾಗಿದ್ದ ಹೊಲಗದ್ದೆಗಳು ಎಲ್ಲ ಕುಂದುಗಳನ್ನು ಮುಚ್ಚಿ ಹಾಕಿತ್ತು. ಹೊಸವಾತಾವರಣಕ್ಕೆ ಬೇಗ ಹೊಂದಿಕೊಂಡಳು ಸ್ವರನ್. ಕೂಡುಕುಟುಂಬ ಅವರದ್ದು. ಜತಿಂದರ್ ಮತ್ತೆ ಸತಿಂದರ್ ಇಬ್ಬರೇ ಗಂಡುಮಕ್ಕಳಾದರೂ ಮನೆ ತುಂಬಾ ಜನರಿದ್ದರು. ತಾಯಾಜಿ ಚಾಚಾಜಿ ಎಲ್ಲರ ಪರಿವಾರಗಳೂ ಜೊತೆಗಿದ್ದವು. ಕೈ ತುಂಬಾ ಕೆಲಸವಿತ್ತು. ಬೆಳಿಗ್ಗೆ ಅಮ್ತತವೇಳೆಗೆ ಎದ್ದು ಜಪ್ ಜಿಸಾಹಿಬ್ ನ ಪಾಠ ಪಠಣ ಮಾಡುತ್ತ ಕಟ್ಟಿದ್ದ ಎಮ್ಮೆಗಳ ಹಾಲು ಕರೆದು ಮೈ ತೊಳೆದು ಕೊಟ್ಟಿಗೆ ಶುಚಿಗೊಳಿಸಿ ಅಡಿಗೆಮನೆಗೆ ಬರುತ್ತಿದ್ದಳು. ಬೆಳಗಿನ ಚಾ ತಿಂಡಿ ಮುಗಿಸಿ ಗಂಡಸರು ಹೊಲಕ್ಕೆ ಹೊರಟರೆ ಹೆಂಗಸರು ಬಿಸಿಲೇರುವಷ್ಟರಲ್ಲಿ ಮಧ್ಯಾಹ್ನದ ಅಡುಗೆ ಮುಗಿಸಿ ತಲೆ ಮೇಲೆ ಹೊರೆ ಹೊತ್ತುಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗಂಡಸರಿಗೆ ತಂದುಕೊಡುತ್ತಿದ್ದರು. ಮಧ್ಯಾಹ್ನ ಕೂಡಾ ಅರೆ ಗಳಿಗೆ ಕಣ್ಣು ಮುಚ್ಚುವಷ್ಟು ಪುರುಸೊತ್ತಿಲ್ಲ ಸ್ವರನ್ ಗೆ. ಮತ್ತೆ ಸಂಜೆ ಚಾ ರಾತ್ರೆ ಅಡುಗೆಯ ತಯಾರಿ. ಬೇಸಗೆಯಲ್ಲಿ ಎಲ್ಲರೂ ಹೊರಗೆ ಅಂಗಳದಲ್ಲಿ ಚಾರ್ ಪಾಯಿ ಹಾಕಿಕೊಂಡು ಮಲಗುವುದು ರೂಢಿ. ದಣಿದಿದ್ದ ಸ್ವರನ್ ಗೆ ಹಾಸಿಗೆಯಲ್ಲಿ ಮೈ ಚೆಲ್ಲಿದ ಕೂಡಲೇ ಸೊಂಪಾದ ನಿದ್ರೆ ಬರುತ್ತಿತ್ತು. ಜತಿಂದರ್ ನ ಆರೋಗ್ಯ ಅಷ್ಟಾಗಿ ಸರಿಯಿರುತ್ತಿರಲಿಲ್ಲ. ಚಳಿಗಾಲ ಬಂದರಂತೂ ಇನ್ನೂ ಬಿಗಡಾಯಿಸುತ್ತಿತ್ತು. ಮದುವೆಯಾಗಿ ಎರಡು ವಸಂತಗಳು ಕಳೆದು ಹೋಗಿರಬೇಕು. ಈ ನಡುವೆ ಜತಿಂದರ್ ನ ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆ ಸೇರಿದ.ಹೃದಯದಲ್ಲಿ ತೂತಿದೆ ಬದುಕುವುದು ಕಷ್ಟ ಎಂದರು ಡಾಕ್ಟರು. ಅಂತೆಯೇ ಒಂದು ರಾತ್ರಿ ಸ್ವರನ್ ಳನ್ನು ವಿಧವೆಯಾಗಿಸಿ ಹೊರಟ ಜತಿಂದರ್.
ಸ್ವರನ್ ಳ ಗೋಳು ಕೇಳುವಂತಿರಲಿಲ್ಲ. ಅಂತಿಮಕ್ರಿಯೆಗೆ ಬಂದ ನೆಂಟರಿಷ್ಟರೆಲ್ಲ ಪಾಪ ಒಂದು ಮಗುವಾದರೂ ಇದ್ದಿದ್ದರೆ ಹೇಗೋ ನಡೆಯುತ್ತಿತ್ತು ಎಂದು ಮರುಕ ವ್ಯಕ್ತಪದಿಸುವವರೇ. ಸ್ವರನ್ ಳ ಅತ್ತೆ ಮಾವಂದಿರು ಅಂತಕರಣವುಳ್ಳವರು. ಎಲ್ಲರೊಡನೆ ಹೊಂದಿಕೊಂಡು ಹೋಗುತ್ತಿದ್ದ, ಮನೆಕೆಲಸವನ್ನೆಲ್ಲ ಕೊಂಕಿಲ್ಲದೆ ನಿಭಾಯಿಸುತ್ತಿದ್ದ, ರೋಗಿ ಗಂಡನ ಸೇವೆಯನ್ನೂ ಮಾಡುತ್ತಿದ್ದ ಸೊಸೆಯ ಮೇಲೆ ಅಕ್ಕರೆ ಅವರಿಗೆ.
ತಮ್ಮ ಹರೆಯದ ಮಗನ ಸಾವಿನ ದುಖವನ್ನು ಭರಿಸಿಕೊಂಡು ಸೊಸೆಗೆ ಬೆಂಗಾವಲಾಗಿ ನಿಂತರು. ಸ್ವರನ್ ಳನ್ನು ತವರಿಗೂ ಹೋಗಲು ಬಿಡಲಿಲ್ಲ. ಸ್ವರನ್ ಮತ್ತೆ ತನ್ನ ಕೆಲಸಗಳಲ್ಲಿ ಮುಳುಗಿಹೋದಳು. ಕೆಲವೊಮ್ಮೆ ಕೈ ತಡೆಯುತ್ತಿತ್ತು. ಮನಸ್ಸು ಮಾರು ದೂರ ಓಡುತ್ತಿತ್ತು. ಮುಂದೆ ಏನು ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿತ್ತು. ಅತ್ತೆ ಮಾವ ಆದರಿಸಿದ ಹಾಗೆ ಅವರ ನಂತರ ನನ್ನನ್ನು ಕೇಳುವರಾರು? ಜತಿಂದರ್ ಇದ್ದರೆ.... ಅಲ್ಲಿಗೆ ಯೋಚನೆ ಕಡಿಯುತ್ತಿತ್ತು. ಕಣ್ಣೀರು ಹರಿಯುತ್ತಿತ್ತು.
ಈ ಪ್ರಶ್ನೆ ಸ್ವರನ್ ಳ ಅತ್ತೆ ಮಾವಂದಿರನ್ನು ಕೂಡಾ ಬಹಳವಾಗಿ ಕಾಡುತ್ತಿತ್ತು.ತಮ್ಮ ನಂತರ ಮುಂದೇನು? ಸ್ವರನ್ ಳ ತವರಿನವರೂ ಅಷ್ಟೇನೂ ಸ್ಥಿತಿವಂತರಲ್ಲ. ಅಣ್ಣ ತಮ್ಮಂದಿರು ಎಷ್ಟು ಕಾಲ ಸಾಕಿಯಾರು? ಅದಲ್ಲದೆ ಸ್ವರನ್ ಗಿನ್ನೂ ಇಪ್ಪತ್ತರ ಹರೆಯ. ಇಷ್ಟರಲ್ಲೇ ಆಕೆಯ ಬದುಕು ಮುಗಿದುಹೋಯಿತೇ? ಆಕೆ ಕಂಡ ಹೊಂಗನಸುಗಳೆಲ್ಲಾ ಚದುರಿಹೋದವೇ? ವಿಧವೆಯನ್ನು ಮದುವೆಯಾಗಲು ಯಾರು ಮುಂದೆ ಬರುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಬಂದವ ಸತಿಂದರ್. ಜತಿಂದರ್ ನ ತಮ್ಮ. ತಮಗೆ ಹೊಳೆದ ಪರಿಹಾರವನ್ನು ಅತ್ತೆ ಮಾವನಿಗೆ ಸೂಚಿಸಿದರು. ಸತಿಂದರ್ ನ ಜೊತೆ ಸ್ವರನ್ ಳ ಮರುಮದುವೆಮಾಡಿಸಿದರೆ ಹೇಗೆ? ಸತಿಂದರ್ ಅಣ್ಣನ ಹಾಗೆ ಕೃಶಕಾಯನಲ್ಲ. ಗರಡಿಯಲ್ಲಿ ಪಳಗಿದ ಆರೋಗ್ಯವಂತ ದೇಹ. ಮನಸ್ಸು ಮಗುವಿನ ಹಾಗೆ. ತಮ್ಮ ಮಾತಿಗೆ ಎದುರಾಡುವವನಲ್ಲ. ಈ ಪರಿಹಾರ ಸೂಚ್ಯವಾಗಿ ಕಂಡಿತು ವೃದ್ಧರಿಬ್ಬರಿಗೂ. ಸ್ವರನ್ ಳ ತಂದೆ ತಾಯಂದಿರನ್ನೂ ಕರೆಸಿ ಈ ವಿಷಯ ಅವರ ಮುಂದಿಟ್ಟರು. ಆ ಹಿರಿಯರಿಗೂ ಸಂತಸದಿಂದ ಮಾತೇ ಹೊರಡಲಿಲ್ಲ. 'ಸ್ವರನ್ ನಮ್ಮ ಮಗಳಲ್ಲ. ನಿಮ್ಮ ಮಗಳೇ. ನೀವು ಏನು ನಿಶ್ಚಯಿಸಿದರೂ ಅದು ಸರಿ' ಎಂದು ತಮ್ಮ ಒಪ್ಪಿಗೆ ಸೂಚಿಸಿದರು. ಸ್ವರನ್ ಳಿಗೆ ತಿಳಿದಾಗ ಏನು ಹೇಳಬೇಕೆಂದೇ ತೋಚಲಿಲ್ಲ. ನೀವು ಹೇಗೆ ಹೇಳಿದರೆ ಹಾಗೆ ಅಂತ ತಲೆ ಅಲ್ಲಾಡಿಸಿದಳಷ್ತೆ. ಆದರೆ ಸತಿಂದರ್ ಗೆ ಮಾತ್ರ ಸಿಡಿಲು ಹೊಡೆದಂತಾಗಿತ್ತು. 'ಭಾಭಿ! ತನ್ನ ಪ್ರೀತಿಯ ಭಾಭಿಯ ಜೊತೆ ತನ್ನ ಮದುವೆ? ಮನಸ್ಸು ಸಂಬಂಧಗಳ ಈ ಬದಲಾವಣೆಯನ್ನು ಒಪ್ಪದಾಗಿತ್ತು. ಆದರೆ ಮಾ ಕಣ್ಣೀರುಗರೆದು ಹೇಳಿದ್ದರು ಇದೊಂದೇ ದಾರಿ ಭಾಭಿಯನ್ನು ಈ ಮನೆಯಲ್ಲಿ ಉಳಿಸಲು. ಭಾಭಿಯ ಮೊಗದಲ್ಲಿ ಮತ್ತೆ ನಗೆ ಮೂಡಿಸಲು. ಭಾಭಿ ತನಗೂ ಮೆಚ್ಚುಗೆಯೇ. ಆದರೆ ಭಾಭಿಯಾಗಿ. ತನ್ನ ಪ್ರೀತಿಯ ಅಣ್ಣನಿಗೆ ದ್ರೋಹ ಬಗೆದಂತಾಗುದಿಲ್ಲವೇ ಎಂದು ಹಗಲು ರಾತ್ರಿ ಪರಿತಪಿಸಿದ. ಭಾವನೆಗಳಲ್ಲಿ ಹೊಯ್ದಾಡಿ ಕೊನೆಗೆ ಅರೆಮನಸ್ಸಿನಿಂದಲೆ ವಿವಾಹಕ್ಕೆ ತನ್ನ ಸಮ್ಮತಿ ಸೂಚಿಸಿದ.
ಸ್ವರನ್ ಳ ಎರಡನೆಯ ಮದುವೆ ಹೆಚ್ಚು ಗದ್ದಲವಿಲ್ಲದೆ ನಡೆದುಹೋಯಿತು. ತಂದೆ ತಾಯಿ ಅಣ್ಣ ತಮ್ಮಂದಿರೆಲ್ಲ ಬಂದು ಶುಭ ಹಾರೈಸಿದರು. ಅಲ್ಲಿಗೆ ಶುರುವಾಯಿತು ಸ್ವರನ್ ಳ ಬದುಕಿನಲ್ಲಿ ಎರಡನೆಯ ಅಧ್ಯಾಯ. ಮದುಮಕ್ಕಳ ಹುಡುಗಾಟ, ಹೊಸತನವೆಲ್ಲ ಈ ಸಾವು-ಮದುವೆಗಳ ನಡುವೆ ಎಲ್ಲೋ ಕಳೆದುಹೋಗಿತ್ತು. ಸಮಯ ಕಳೆದಂತೆ ಮೆಲ್ಲಮೆಲ್ಲನೆ ಮತ್ತೆ ಸ್ವರನ್ ಳ ಮುಖದಲ್ಲಿ ಮಂದಹಾಸ ಮೂಡಲಾರಂಭಿಸಿತು. ತಾಯಿಯಾಗುವ ಲಕ್ಷಣಗಳು ಕಾಣಿಸಿದಂತೆ ಮುಖದಲ್ಲಿ ಕೆಂಪು ತುಂಬತೊಡಗಿತು. ಅತ್ತೆ ಮಾವಂದಿರ ಖುಶಿ ಹೇಳತೀರದು. ಅವಳ ತವರಿಗೂ ಕಳಿಸದೆ ತಮ್ಮಲ್ಲಿಯೇ ಇರಿಸಿಕೊಂಡು ಆರೈಕೆ ಮಾಡಿದರು. ನವಮಾಸಗಳು ಕಳೆದು ಆರೋಗ್ಯವಂತ ಸುಂದರ ಶಿಶುವಿಗೆ ಜನ್ಮವಿತ್ತಳು. ವೃದ್ಧರು ತಮ್ಮ ಜತಿಂದರ್ ನೇ ಬಂದ ಎಂದು ಸಂತಸಪಟ್ಟರು. ಅಂತೆಯೇ ಜತಿಂದರ್ ಎಂದೇ ಹೆಸರಿಟ್ಟರು ಆ ಮಗುವಿಗೆ. ಆ ಮನೆಯಲ್ಲಿ ಮತ್ತೆ ಹರ್ಷದ ಹೊನಲು ಹರಿಯಿತು. ಪುಟ್ಟ ಜತಿಂದರ್ ನ ಅಳು, ನಗು, ಕೇಕೆಯಿಂದ ತುಂಬಿಹೋಯಿತು. ಎಲ್ಲರೂ ಸಂತಸದಿಂದಿದ್ದರೆ ಸತಿಂದರ್ ಮಾತ್ರ ಕೆಲಸಮಯ ತುಂಬಾ ಉದ್ವಿಗ್ನನಾಗುತ್ತಿದ್ದ. ಮಲಗಿ ನಿದ್ದೆ ಮಾಡಿದರೆ ಅಣ್ಣ ಕನಸ್ಸಿನಲ್ಲಿ ಬಂದು 'ನೀನು ದ್ರೋಹಿ' ಎಂದು ಜರಿದಂತಾಗುತ್ತಿತ್ತು. ಪುಟ್ಟಜತಿಂದರ್ ನ ಜನನದ ನಂತರವಂತೂ ಅಣ್ಣ ಎಲ್ಲೆಡೆ ಕಾಣಿಸಲಾರಂಭಿಸಿದ್ದ. ತಾನು ಅಣ್ಣನ ಪಾಲಿನ ಖುಷಿಯನ್ನು ಅನುಭವಿಸುತ್ತಿದ್ದೇನೆ. ಸ್ವರನ್, ಮಗು ಎಲ್ಲ ಅಣ್ಣನಿಗೆ ಸೇರಬೇಕಾದದ್ದು. ತಾನು ಹಕ್ಕುದಾರನಲ್ಲ ಎಂದು ಯೋಚಿಸಿ ಭ್ರಮಿಸಿ ಮನೋರೋಗಿಯಾಗಿ ಹೋದ. ಅಪ್ಪಿ ತಪ್ಪಿಯೂ ಮಗುವಿನ ಹತ್ತಿರ ಸುಳಿಯುತ್ತಿರಲಿಲ್ಲ. ಮಗು ಪಾಪಾ ಪಾಪಾ ಎಂದು ಅಂಬೆಗಾಲಿಡುತ್ತಾ ಕಾಲಿಗೆ ತೊಡರಿಕೊಂಡರೆ ಕೈ ಎತ್ತಿಕೊಳ್ಳಲು ಹೋಗಿ ಹಾಗೆ ಹಿಂದೆ ಸರಿಯುತ್ತಿತ್ತು. ನಿರ್ಲಕ್ಶ್ಯದಿಂದ ನಡೆದುಬಿಡುತ್ತಿದ್ದ.
ಹೀಗೆಯೇ ಸಮಯ ಸರಿದು ಪುಟ್ಟ ಜತಿಂದರ್ ಗೆ ಐದು ವರ್ಷ ತುಂಬಿ ಶಾಲೆಗೆ ಸೇರಿಸಿದ್ದರು. ಚುರುಕಾಗಿದ್ದ ಹುಡುಗ ಹೇಳಿಕೊಟ್ಟದನ್ನು ಬೇಗನೆ ಕಲಿಯುತ್ತಿದ್ದ. ದಾದಿ ಕಲಿಸಿದ್ದ ಜಪ್ ಜಿ ಸಾಹಿಬ್ ನ ಮೂಲಮಂತ್ರವನ್ನು ರಾಗವಾಗಿ ಹೇಳುತ್ತಿದ್ದ. ಒಮ್ಮೆ ನೆಂಟರ ಮನೆಗೆ ಮದುವೆಗೆಂದು ಇಡೀ ಪರಿವಾರ ಪಕ್ಕದ ಹಳ್ಳಿಗೆ ಹೋಗಬೇಕಾಗಿ ಬಂತು. ಸತಿಂದರ್ ಒಬ್ಬನೇ ಮನೆಯಲ್ಲುಳಿದಿದ್ದ. ಸ್ವರನ್ ಗೆ ಮದುವೆಗಳೆಂದರೆ ವಿಶೇಷ ಆಸಕ್ತಿ. ಕೈಗೆ ಮೆಹಂದಿ ಹಚ್ಚುವುದು, ರಾತ್ರಿ ಜಾಗೊ ಹೊರಡಿಸುವುದು, ಮಣ್ಣಿನ ಮಡಕೆಗಳ ಮೇಲೆ ದೀಪಗಳನ್ನಿಟ್ಟುಕೊಂಡು ಮಡಕೆಯನ್ನು ತಲೆಯ ಮೇಲೇರಿಸಿಕೊಂಡು ನ್ರತ್ಯ ಮಾಡುವುದರಲ್ಲಿ ಪರಿಣಿತಳಾಗಿದ್ದಳು. ಮದುವೆಯ ಪದಗಳನ್ನು ಹಾಡುವುದರಲ್ಲಂತೂ ಆಕೆಯದು ಎತ್ತಿದ ಕೈ. ಯಾವಾಗಲೂ ಈ ಕಾರ್ಯಕ್ರಮಗಳನ್ನು ಮನದಣಿಯೆ ಆಸ್ವಾದಿಸುತ್ತಿದ್ದ ಸ್ವರನ್ ಇಂದೇಕೋ ಮೌನಿಯಾಗಿದ್ದಳು.ಎದೆಯಲ್ಲೇನೋ ನೋವು. ಸತಿಂದರ್ ಈಗೀಗ ತುಂಬಾ ಕೋಪಗೊಳ್ಳುತ್ತಿದ್ದ. ಒಬ್ಬನಿರಬೇಕಾದರೆ ತನ್ನಲೇ ಎನೋ ಗುಣುಗುಣಿಸುತ್ತಿದ್ದ. ಇಂತಹ ಮನಸ್ಥಿತಿಯಲ್ಲಿ ಆತನನ್ನು ಮನೆಯಲ್ಲಿ ಒಂಟಿಯಾಗಿ ಬಿಡುವ ಮನಸ್ಶಿರಲಿಲ್ಲ. ಮದುವೆ ಹುಡುಗಿ ರಮನ್ ತಾನು ಸ್ವರನ್ ಭಾಭಿಯಿಂದ ಮಾತ್ರ ಮೆಹಂದಿ ಹಚ್ಚಿಸಿಕೊೞುವುದು ಎಂದು ಒತ್ತಾಯ ಮಾಡಿದ್ದರಿಂದ ಬಂದಿದ್ದಳಷ್ಟೆ. ಮೆಹಂದಿ ಕಾರ್ಯಕ್ರಮ ಮುಗಿದ ಕೂಡಲೆ ಪಕ್ಕದ ಮನೆಯ ಸಂತೊಖ್ ನ ಜತೆ ಮಾಡಿ ಮನೆಗೆ ಹೊರಟಳು. ಸರಿರಾತ್ರಿಯಲ್ಲಿ ಮನೆ ಮುಟ್ಟಿ ನೋಡುವುದೇನು? ಸತಿಂದರ್ ಹಜಾರದ ತೊಲೆಗೆ ನೇಣು ಹಾಕಿಕೊಂಡಿದ್ದ. ಗೋಡೆಯ ಮೇಲೆ ಜತಿಂದರ್ ನ ಭಾವಚಿತ್ರ ಹಾರ ಹಾಕಿಸಿಕೊಂಡು ನಗುತ್ತಿತ್ತು. ಪುನಃ ಅವಳ ಬದುಕಿನಲ್ಲಿ ಬಿರುಗಾಳಿ ಬೀಸಿತ್ತು. ವಿಧಿ ಅಟ್ಟಹಾಸದಿಂದ ನಕ್ಕಿತ್ತು. ಬಿಟ್ಟ ಕಣ್ಣು ಬಿಟ್ಟ ಹಾಗೆ ಎಷ್ತು ಹೊತ್ತು ಕೂತಿದ್ದಳೋ. ಸುದ್ದಿ ಮದುವೆ ಮನೆಗೆ ಮುಟ್ಟಿ ಎಲ್ಲರೂ ಇತ್ತ ದೌಡಾಯಿಸಿ ಬಂದರು. ಮಾಡುವುದಕ್ಕೇನೂ ಉಳಿದಿರಲಿಲ್ಲ. ಸತಿಂದರ್ ಅಣ್ಣನ ಹಾದಿ ಹಿಡಿದು ನಡೆದಿದ್ದ. ಸ್ವರನ್ ಮತ್ತೆ ವಿಧವೆಯಾಗಿದ್ದಳು.
ಈ ಸಲ ಅವಳಿಗಾಗಿ ಯಾರೂ ಮರುಗುವವರು ಇರಲಿಲ್ಲ. ಅವಳ ಅತ್ತೆ ಮಾವ ಕೂಡ ಎಲ್ಲ್ರರಂತೆ ಅವಳ ದುರಾದೃಷ್ಟವನ್ನೇ ಹೊಣೆ ಮಾಡಿದರು. ಇಬ್ಬರು ಹರೆಯದ ಗಂಡು ಮಕ್ಕಳನ್ನು ತಮ್ಮ ಕಣ್ಣೆದುರಿಗೆ ಕಳೆದುಕೊಂಡ ದುಖದಲ್ಲಿ ಸರಿ ತಪ್ಪುಗಳ ವಿವೇಕವನ್ನು ಮರೆತುಬಿಟ್ಟಿದ್ದರು. ಕುಟುಂಬದ ಹಿರಿಯರು ಸೇರಿ ಇಂತಾ ದುರಾದೃಷ್ಟದ ಹೆಣ್ಣು ಈ ಮನೆಯಲ್ಲಿ ಇರಬಾರದು. ಸ್ವರನ್ ಳಿಗೆ ಊರ ಹೊರಗಿಬನ ಪುಟ್ಟ ಜಮೀನು ಮತ್ತೆ ಅದರಲ್ಲೇ ಇರುವ ಮನೆ ಕೊಡುವುದೆಂದು ನಿಶ್ಚಯಿಸಿದರು. ಸ್ವರನ್ ಳ ತಾಯಿ ತೀರಿಹೋಗಿದ್ದರಿಂದ ಆ ಮನೆಯಲ್ಲಿ ತನ್ನ ತಂದೆ ಹಾಗೂ ಪುಟ್ಟ ಜತಿಂದರ್ ಇರುವುದೆಂದು ನಿರ್ಧಾರವಾಯಿತು. ಅಲ್ಲಿಗೆ ಅವಳ ಬಾಳಿನ ಮತ್ತೊಂದು ಅಧ್ಯಾಯ ಶುರುವಾಯಿತು. ಮೂರು ಜೀವಗಳ ಹೊಟ್ಟೆ ಹೊರೆಯಲು ತನ್ನ ಹೊಲದ ಕೆಲಸದ ಜೊತೆಗೆ ಪಕ್ಕದವರ ಹೊಲಗಳಿಗೂ ಹೋಗಬೇಕಾಗಿ ಬಂತು. ಸ್ವರನ್ ಎದೆಗುಂದಲಿಲ್ಲ. ಜತಿಂದರ್ ಹಳ್ಳಿಯ ಶಾಲೆಗೆ ಹೋಗುತ್ತಿದ್ದ. ಬಹಳಷ್ಟು ಸಲ ತಾಯಿ ಮಗ ಹಳ್ಳಿಯ ಗುರುದ್ವಾರದಲ್ಲಿ ರೋಟಿ ತಯಾರಿಸುವ ಸೇವೆ ಮಾಡಿ ಅಲ್ಲಿಯೇ 'ಗುರು ಕಾ ಲಂಗರ್' ಸ್ವೀಕರಿಸುತ್ತಿದ್ದರು. ಇತ್ತ ಸೊಸೆ ಮೊಮ್ಮಗನನ್ನು ಮನೆಯಿಂದ ಹೊರಹಾಕಿದ ಮೇಲೆ ಅವಳ ಅತ್ತೆ ಮಾವಂದಿರೂ ಸುಖವಾಗಿರಲಿಲ್ಲ. ತಾಯಾಜಿ, ಚಾಚಾಜಿ ಮತ್ತು ಕೆಲವರು ಇವರ ಪಾಲಿನ ಆಸ್ತಿಯನ್ನು ಕಬಳಿಸಲು ಕುತಂತ್ರ ಹೂಡಿ ಯಶಸ್ವಿಯಾದರು. ಮನೆ ಜಮೀನೆಲ್ಲವನ್ನು ತಮ್ಮ ಹೆಸರಿಗೆ ಬರೆಸಿಕೊಂಡು, ಮಕ್ಕಳ ಅಕಾಲಿಕ ಮರಣದಿಂದ ಮೊದಲೇ ಜರ್ಜರಿತವಾಗಿದ್ದ ಮುದಿದಂಪತಿಗಳನ್ನು ಮನೆಯಿಂದ ಹೊರಗಟ್ಟಿದರು. ಎಲ್ಲೂ ಆಶ್ರಯವಿಲ್ಲದೆ ತಲೆ ಮೇಲೆ ಸೂರಿಲ್ಲದೆ ಅಸಹಾಯಕರಾಗಿ ವೃದ್ಧರು ಹಳ್ಳಿಯ ಗುರುದ್ವಾರದ ಚಾವಡಿಯನ್ನು ಆಶ್ರಯಿಸಿದರು. ಸ್ವರನ್ ಳಿಗೆ ಸುದ್ದಿ ತಿಳಿದಾಗ ಮನನೊಂದು ಅತ್ತೆ ಮಾವನನ್ನು ಮನೆಗೆ ಕರೆದುಕೊಂಡು ಹೋಗಲು ಮಗನನ್ನು ಜತೆ ಮಾಡಿಕೊಂಡು ಬಂದಳು. ಸೊಸೆ ಮತ್ತು ಪ್ರೀತಿಯ ಮೊಮ್ಮಗನನ್ನು ನೋಡುತ್ತಲೇ ವೃದ್ಧರ ಶೋಕವೆಲ್ಲ ಮಡುಗಟ್ಟಿ ಕಣ್ಣೀರಾಗಿ ಹರಿಯಿತು. ಜತಿಂದರ್ ತನ್ನ ಪ್ರೀತಿಯ ದಾದಾ ದಾದಿಯ ಕೈಯೇ ಬಿಡಲೊಲ್ಲ. ಹಾಗೆಯೇ ಕೈ ಹಿಡಿದುಕೊಂಡು ಊರಂಚಿನಲ್ಲಿರುವ ತನ್ನ ಮುರುಕು ಮನೆಗೆ ಕರೆದುತಂದ.
ನಾಲ್ಕು ಜೀವಗಳ ಉದರಪೋಷಣೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡ ಸ್ವರನ್ ಎದೆಗೆಡಲಿಲ್ಲ. ಹಗಲಲ್ಲಿ ಹೊಲದಲ್ಲಿ ಗಾಣದೆತ್ತಿನಂತೆ ದುಡಿದರೆ, ರಾತ್ರಿ ಹೊತ್ತು ಮನೆಯಲ್ಲಿ ಹೊಲಿಗೆಯಂತ್ರವನ್ನಿಟ್ಟುಕೊಂಡು ಬಟ್ಟೆ ಹೊಲಿಯುತ್ತಿದ್ದಳು. ಜತಿಂದರ್ ಪ್ರತಿ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದ. ಜೀವನಚಕ್ರ ಉರುಳುತ್ತಾ ಜತಿಂದರ್ ಗೆ ಹರೆಯ ತುಂಬುವ ಹೊತ್ತಿಗೆ ಮೂರು ವೃದ್ಧ ಜೀವಗಳು ಪರಲೊಕ ಯಾತ್ರೆ ಮುಗಿಸಿ ಆಗಿತ್ತು. ಬಿಸಿರಕ್ತದ ತರುಣ ಜತಿಂದರ್ ಪದವಿ ಪರೀಕ್ಷೆ ಮುಗಿಸಿ ಭಾರತೀಯ ಸೇನೆ ಸೇರಿದ್ದ. ಸ್ವರನ್ ಆತನ ಇಷ್ಟಕ್ಕೆ ವಿರುದ್ಧವಾಗಿ ಎನೂ ಹೇಳಲು ಆಗದೇ ಎಲ್ಲ ವಾಹೆ ಗುರು ಇಟ್ಟಂತಾಗಲಿ ಎಂದು ಕೈಚೆಲ್ಲಿದ್ದಳು. ಈಗ ಆಕೆಗೆ ಮೊದಲಿನಂತೆ ಕೆಲಸ ಮಾಡುವ ಅಗತ್ಯವಿರಲಿಲ್ಲ. ತಿಂಗಳು ತಿಂಗಳು ಸರಹದ್ದಿನಲ್ಲಿರುವ ಮಗನ ಪತ್ರ ಹಾಗೂ ಮನಿ ಆರ್ಡರ್ ತಲುಪುತ್ತಿತ್ತು. ಬದುಕು ಸುಲಭವಾಗಿತ್ತು. ಆದರೆ ಮಗ ಹತ್ತಿರವಿಲ್ಲದೆ ಕಾಲ ಕಳೆಯುವುದೇ ದುಸ್ತರವಾಗಿಬಿಟ್ಟಿತ್ತು. ತನ್ನೆಲ್ಲ ಸಮಯವನ್ನು ಗುರುದ್ವಾರದಲ್ಲಿನ ಸೇವೆಯಲ್ಲಿ ಕಳೆಯುತ್ತಿದ್ದಳು. ಮಗನ ಮದುವೆ ಮಾಡಿ ಮೊಮ್ಮಕ್ಕಳ ಆಡಿಸುವ ಕನಸು ಕಾಣುತ್ತಿದ್ದಳು. ಅಷ್ಟರಲ್ಲೆ ಬರಸಿಡಿಲಿನಂತೆ ಬಂದೆರಗಿತ್ತು ಆ ಸುದ್ದಿ! ಜತಿಂದರ್ ಸರಹದ್ದಿನಲ್ಲಿ ಉಗ್ರಗಾಮಿಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ವೀರಮರಣವನ್ನಪ್ಪಿದ್ದ. ಮತ್ತೆ ಸ್ವರನ್ ನ ಮಡಿಲು ಬರಿದಾಗಿತ್ತು. ವಿಧಿ ಇನ್ನೊಂದು ಸಲ ಕ್ರೂರ ನಗೆ ನಕ್ಕಿತ್ತು.
ಸರಕಾರ ಜತಿಂದರ್ ನ ಸಾಹಸವನ್ನು ಗುರುತಿಸಿ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಿತ್ತು. ಪ್ರಶಸ್ತಿ ಸ್ವೀಕರಿಸಲು ಎದ್ದು ನಿಂತಾಗ ಹೆಮ್ಮೆಯಿಂದ ಎದೆಯುಬ್ಬಿದ್ದರೂ ಮನಸ್ಸು ವೇದನೆಯಿಂದ ತೊಳಲುತ್ತಿತ್ತು. ಪ್ರಶಸ್ತಿ ಸ್ವೀಕರಿಸಿ ತಿರುಗಿ ತನ್ನ ಕುರ್ಚಿಗೆ ತಲುಪುವಷ್ತರಲ್ಲಿ ಕಣ್ಣುಕತ್ತಲೆ ಬಂದು ಧರಾಶಾಯಿಯಾದಳು. ಮತ್ತೆ ಕಣ್ಣು ಬಿಟ್ಟಾಗ ನಗು ಮುಖದ ಮಹಿಳೆಯೊಬ್ಬಳು ಪ್ರೀತಿಯಿಂದ ಉಪಚರಿಸುತ್ತಿದ್ದಳು. ನೀರು ಕುಡಿದು ಸ್ವಲ್ಪ ಚೇತರಿಸಿಕೊಂಡ ಮೇಲೆ ತಾನು 'ಆಶಾ' ಎಂಬ ಮಹಿಳೆ ಮತ್ತು ಅನಾಥ ಮಕ್ಕಳ ಆಶ್ರಮದಲ್ಲಿರುವುದಾಗಿ ತಿಳಿಯಿತು. ಆಶ್ರಮದ ಸಂಚಾಲಕಿಯಾದ ಸ್ನೇಹಮಯಿಯಾದ ಮಾ ಸ್ವರನ್ ಳಿಗೆ ಆಶ್ರಮದ ವಿವಿಧ ವಿಭಾಗಗಳನ್ನು ಚಟುವಟಿಕೆಗಳನ್ನು ಪರಿಚಯಿಸಿದರು. ಎಳೆ ಮಕ್ಕಳಿಂದ ಹಿಡಿದು ವೃದ್ಧರವರೆಗಿನ ಅನಾಥರ ಆ ದೊಡ್ಡ ಕುಟುಂಬ ಸ್ವರನ್ ಳ ದುಖ ದುಗುಡಗಳನ್ನು ಕಡಿಮೆ ಮಾಡಿತು. ಮುಂದೇನು? ಯಾರಿಗಾಗಿ ಈ ಜೀವನ ಎಂಬ ಬ್ರಹ್ಮಪ್ರಶ್ನೆಗೆ ಉತ್ತರ ಹೊಳೆದಂತೆ ಸ್ವರನ್ ಳ ಮುಖದಲ್ಲಿ ಮೆಲ್ಲನೆ ಮಂದಹಾಸ ಮೂಡತೊಡಗಿತು.