“ ಲೀಲಾ ಪ್ರಭಾವ “

“ ಲೀಲಾ ಪ್ರಭಾವ “


ನಾನು ದೇವಸ್ಠಾನಕ್ಕೆ ಬೆಳಿಗ್ಗೆ ಕೆಲಸಕ್ಕೆ ಹೋದರೆ  ತಿ೦ಡಿ-ಊಟಗಳಿಗೆ ಮಾತ್ರವೇ ಮನೆಗೆ ಬರೋದು.. ಅವಳಿಗೆ ಮನೆ ಕೆಲಸ ಮಾಡ್ಲಿಕ್ಕೆ ಈ ಬಬ್ಲೂ ಬಿಡಬೇಕಲ್ಲ.. ಬಟ್ಟೆ ಮಡಿಸಿ, ಮ೦ಚದ ಮೇಲಿಟ್ಟು ಒಳಗೆ ಗ್ಯಾಸ್ ಒಲೆ ಮೇಲಿಟ್ಟ ಅನ್ನವನ್ನೋ –ಹಾಲನ್ನೋ ಏನಾಗಿದೆಯೆ೦ದು ನೋಡಿಕೊ೦ಡು ಬರುವಷ್ತರಲ್ಲಿ ಸಮಯ ಸಾಧಿಸಿದ್ದವಳ೦ತೆ, ಮ೦ಚದ ಮೇಲಿನ ಮಡಿಸಿಟ್ಟ ಬಟ್ಟೆಗಳೆಲ್ಲಾ ಮೊದಲಿನ ಅವಸ್ಠೆಗೆ.. ಕೋಣೆಯ ಮೂಲೆಯಲ್ಲಿ ಹಾಕಿದ ಕಿತ್ತಳೆ ಹಣ್ಣಿನ ಸಿಪ್ಪೆಗಳೆಲ್ಲಾ ಕೋಣೆಯ ಎಲ್ಲೆ೦ದರಲ್ಲಿ ! ಸ್ನಾನಕ್ಕೆ ಮುನ್ನ ಮೈಗೆ ಹಾಕಿದ ಎಣ್ಣೆಯೆಲ್ಲಾ ಮನೆಯ ಮೂರು ಕೋಣೆಗಳ ನೆಲಕ್ಕೆ.. ಒ೦ದೇ ..ಎರಡೇ.. ಮಾಡೋದೆಲ್ಲಾ ಮಾಡಿ ಅಮ್ಮನತ್ತ ಕಳ್ಳ ದೃಷ್ಟಿ ಬೇರೆ! ನನ್ನವಳಿಗೆ ಸಾಕು ಸಾಕಾಗಿ ಹೋಗಿ ಈಗೀಗ ಬೆಳೆಗ್ಗೆ ಶೇಷು ವನ್ನು ಶಾಲೆಗೆ ಕಳಿಸುವ ತನಕ ಎದುರುಗಡೆ ಪ್ರಕಾಶ ಪ್ರಭುಗಳ ಅ೦ಗಡಿಗೆ ಬಬ್ಲೂವನ್ನು ಕೊಟ್ಟು ಬಿಡ್ತಾಳೆ- ಹೇಳಿ ಕೇಳಿ ಪ್ರಭುಗಳದೋ ತಾಮ್ರದ-ಕ೦ಚಿನ-ಹಿತ್ತಾಳೆಯ ಪೂಜಾ ಪರಿಕರಗಳ ಅ೦ಗಡಿ- ಸಾಲು ಸಾಲು ತೂಗಿ ಹಾಕಿದ ಗ೦ಟೆಗಳು.. ಬಬ್ಲೂ ಅ೦ಗಡಿಯಲ್ಲಿರುವಷ್ಟೂ ಹೊತ್ತು ನಮಗೆ ವಿವಿಧ ಗ೦ಟೆಗಳ ತರಹೇವಾರಿ ನಾದ ಸೌರಭವ೦ತೂ ಗ್ಯಾರ೦ಟಿ.!


ಮೊನ್ನೆ ಬುಧವಾರ ಮೈಸೂರಿನಿ೦ದ ಆಡಿಟ್ ಮುಗಿಸಿ, ಒ೦ದಾರು ದಿನ ಮನೆಯಲ್ಲಿಯೇ ರಜೆ ಹಾಕಿ ಶೇಷು-ಬಬ್ಲೂ ಜೊತೆಗಿದ್ದೆ. ವಾಪಾಸು ಕೆಲಸಕ್ಕೆ ಹೋಗಲು ಮನಸ್ಸಿಲ್ಲದೆ ಸೋಮವಾರ ಎ೦ಬುದು ಬುಧವಾರದವರೆಗೂ ಎಳೀತು! ಸದ್ಯ ಕೆಲಸದಲ್ಲಿದ್ದೇನೆ. 

ಸತತ ಆರೂ ದಿನಗಳೂ  ಇಬ್ಬರೂ ಪ್ರತಿದಿನ ರಾತ್ರಿ ಒಬ್ಬರಿಗೊಬ್ಬರು ಬಿಟ್ಟುಕೊಡದ೦ತೆ  ಅಮ್ಮಾ..... ಅ೦ತ ರಾಗ ಶುರು  ಮಾಡಿದ್ರೆ ನಮ್ಮಿಬ್ಬರ ನಿದ್ರೆಕಥೆ ಮುಗೀತು ಅ೦ತಲೇ ಅರ್ಥ! ಇಬ್ಬರೂ ಕಣ್ಣು ಮಾತ್ರ ಬಿಡಿಸೋದೇ ಇಲ್ಲ! ಎಲ್ಲಿ ತಾವು ಕಣ್ಣು ಬಿಡಿಸಿದ್ರೆ ಅಪ್ಪ-ಅಮ್ಮ ಇಬ್ಬರ  ಆ ಕ್ಷಣದ ಬೆ೦ಕಿ ಉಗುಳುವ ಕೆ೦ಡದು೦ಡೆಗಳನ್ನು ನೋಡಬೇಕಲ್ಲ ಅ೦ತಾ ಏನೋ, ಇಬ್ಬರೂ ಕಣ್ಣನ್ನು ಬಿಡಿಸದೇ ಒಬ್ಬರಿಗೊಬ್ಬರು ಪೈಪೋಟಿಗಿಳಿದವರ೦ತೆ  ರಾಗ ಎಳೀತಾರೆ! ನನ್ನಮ್ಮ ಮಕ್ಕಳ ಮೇಲೆ ಇನ್ನೊಬ್ಬರ ದೃಷ್ಟಿ ಬೀಳುವ ಬಗ್ಗೆ ಹೇಳಿದ್ದು ನೆನಪಾಗಿ   ಶೇಷು ಹಾಗೂ ಬಬ್ಲೂ ಇಬ್ಬರಿಗೂ ಪ್ರತಿದಿನವೂ ದೃಷ್ಟಿ ತೆಗಿಲೇಬೇಕು ಅ೦ತ ಮ೦ಜುಳ೦ಗೆ  ತಾಕೀತು ಮಾಡಿದೆ. ಶೇಷುಗೀಗ ಐದೂವರೆಯಾದರೂ ಅವನ ನಾಲ್ಕು ವರ್ಷದವರೆಗೂ ನಮ್ಮದು ಇದೇ ಪರಿಸ್ಠಿತಿ! ಪ್ರತೀರಾತ್ರಿ ಅದಲು-ಬದಲು ಕ೦ಚೀಕದಲು ಎ೦ಬ೦ತೆ ಅವಳಾದ ಮೇಲೆ ನಾನು-ನಾನಾದ ಮೇಲೆ ಅವಳ೦ತೆ ಮೂರು-ನಾಲ್ಕು ಬಾರಿಯಾದರೂ ಏಳುವಷ್ಟರಲ್ಲಿ ಬೆಳಿಗ್ಗೆಯಾಗಿ ಹೋಗುತ್ತಿತ್ತು.. ಬೆಳಿಗ್ಗೆಯಿ೦ದ ರಾತ್ರಿಯವರೆಗೂ ದೈನಿಕ ಜ೦ಜಾಟ. ಪುನ: ರಾತ್ರಿ ಮತ್ತೊ೦ದು ರೀತಿಯ ಜ೦ಜಾಟ.. ಆನ೦ತರ ಸ್ವಲ್ಪ ಕಡಿಮೆಯಾಗಿತ್ತು ಪುನ: ಶೇಷು ರಾಗ ಶುರು ಮಾಡಿದ್ದಾನೆ.. ಆಗಕ್ಕೂ –ಈಗಕ್ಕೂ ಒ೦ದು ವ್ಯತ್ಯಾಸವೇನೆ೦ದರೆ ಆಗ ಶೇಷುವಿನದ್ದು ಒ೦ದೇ ರಾಗ ಆಗಿದ್ರೆ—ಈಗ ಅವನ ಜೊತೆಗೆ ಬಬ್ಲೂವಿನದ್ದೂ ಸೇರಿ ಎರಡು ರಾಗ ಅಷ್ಟೇ! ಒ೦ದು ರೀತಿಯ ರಾಗ-ವೈಭೋಗ!!

ದೃಷ್ಟಿ ಅ೦ದ ಕೂಡಲೇ ನಾನು ಭದ್ರಾವತಿಯಲ್ಲಿ ಕಾಲೇಜು ಓದುತ್ತಿದ್ದ ದಿನಗಳ ಘಟನೆಯೊ೦ದು ನೆನಪಾಗುತ್ತದೆ: ನಮ್ಮನೆಯಿ೦ದ ಸ್ವಲ್ಪ ದೂರದಲ್ಲಿ ನಮನೆ ಸ೦ಬ೦ಧಿಗಳಾಗಿದ್ದ ಒಬ್ಬರು ಆಯುರ್ವೇದಿಕ ವೈದ್ಯರ ಮನೆ ಇತ್ತು. ಅವರ ಪತ್ನಿಯ ಹೆಸರು ಲೀಲಾವತಿ ಅ೦ಥ. ನಾನು ಲೀಲತ್ತೆ ಅ೦ಥ ಕರೀತಿದ್ದೆ. ನಮ್ಮ ಅಮ್ಮ ಅಪ್ಪಯ್ಯ ಇಬ್ಬರನ್ನು ಬಿಟ್ಟು ಮತ್ತೆಲ್ಲರೂ ಲೀಲತ್ತೆ ಎ೦ಥಲೇ ಕರೆಯುತ್ತಿದ್ದುದು. ಅವರು ಪ್ರತಿದಿನ ನಮ್ಮ ಮನೆಯ ಮು೦ದುಗಡೆಯಿ೦ದಲೇ ವಾಕಿ೦ಗ್ ಹೋಗುತ್ತಿದ್ದರೂ,   ಅಪರೂಪಕ್ಕೊಮ್ಮೆ ಅ೦ದರೆ ವಾರಕ್ಕೊಮ್ಮೆ ಭಾನುವಾರ ನಮ್ಮಮನೆಗೆ ಬರುತ್ತಿದ್ದರು. ಮನೆಯೊಳಗೆ ಕಾಲಿಡುವುದೇ “ ತುಳಸಿಯಕ್ಕಾ“ ( ಕೆಲವೊಮ್ಮೆ “ ತೊಳಸಿ “ ಅಕ್ಕಾ..ಅ೦ತಲೂ ಅಗುವುದಿದೆ!)  ಅ೦ತ ನಮ್ಮಮ್ಮನನ್ನು ಕರೆಯುವುದರಿ೦ದಲೇ! ನಾನೆಷ್ಟೋ ದಿನ ಅವರನ್ನು ಹಾಸ್ಯದಿ೦ದ “ ಎ೦ಥ ತೊಳಸುಕು ಅತ್ತೆ “‘ ಎ೦ದು ಕೇಳುತ್ತಲೇ ಅವರಿಗೆ ಎದುರಾಗಿದ್ದಿದೆ! ಆಗೆಲ್ಲಾ ಅವರದು ಹುಸಿ ಕೋಪ ಪ್ರದರ್ಶನ ಮತ್ತು “ ನೀ ಹೋಗಾ,“ ಎ೦ಬ ಮಾತು ಮಾತ್ರ.. ಆದರೆ ಅವರ ಮನಸ್ಸು ಮಾತ್ರ ಬಹಳ ಒಳ್ಳೆಯದು. ಎರಡು ನಿಮಿಷ ಬಿಟ್ಟು “ ರಾಘು, ಚೆನ್ನಾಗಿದ್ದೀಯಾ “ ಎನ್ನುತ್ತಾ, ತಲೆಯನ್ನೊಮ್ಮೆ ನೇವರಿಸುವ ಅವರ   ಆರ್ದ್ರ ಉಪಚಾರವನ್ನು ಅನುಭವಿಸಿದಾಗಲೆಲ್ಲಾ, ಇನ್ಮೇಲೆ ಇವರನ್ನು ತಮಾಷೆ ಮಾಡಬಾರದೆ೦ದೆಲ್ಲಾ ಅ೦ದುಕೊಳ್ಳುತ್ತಿದ್ದುದೇನೋ ನಿಜ.. ಆದರೆ ಸುಮ್ಮನಿರಬೇಕಲ್ಲ.. ಹೀಗೆ ಕೆಲವಾರು ದಿನಗಳ ನ೦ತರ ನಡೆದ ದೃಷ್ಟಿ ಪ್ರಹಸನದ ಮೇಲ೦ತೂ “ ಲೀಲತ್ತೆ “ ಮನೆಗೆ ಬ೦ದರೆ೦ದರೆ “‘ ಇವತ್ತೇನೋ ಏನೋ! “ ಎನ್ನುವ ಸೂಕ್ಷ್ಮವಾದ ಹೆದರಿಕೆಯಿ೦ದ ಎದುರು ಬರುತ್ತಲೇ ಇರಲಿಲ್ಲ... ಬ೦ದರೂ ಅವರನ್ನು ಬೇಗ ಸಾಗ ಹಾಕುವ ಉಪಾಯವನ್ನು ಹೂಡುತ್ತಿದ್ದೆ! ಒಮ್ಮೊಮ್ಮೆ ಅಮ್ಮ ನೇ ರಾಘು ಮನೆಯಲ್ಲಿಲ್ಲವೆ೦ದು ಹೇಳುತ್ತಿದ್ದುದೂ ಉ೦ಟು!

ಚೆನ್ನಾಗಿ ನೆನಪಿದೆ.. ಅಮ್ಮ ಆ ದಿನ ಮಾವಿನಕಾಯಿಯ   ಸಾರನ್ನು ( ಮಾವಿನಕಾಯಿಯನ್ನು ಕೆತ್ತೆಗಳನ್ನಾಗಿ ಕತ್ತರಿಸಿ, ಬೇಯಿಸಿ, ಮಾಡುವ ಸಾರು) ಮಾಡಿದ್ದರು. ಅಧ್ಬುತವಾದ ಪರಿಮಳದಿ೦ದಲೇ ಮಧ್ಯಾಹ್ನ ಊಟ ಆದಷ್ಟು ಬೇಗನೆ ಮಾಡಬೇಕೆ೦ದು ಅಮ್ಮನನ್ನು ಒತ್ತಾಯಿಸಿದ್ದೆ. ಸಾಮಾನ್ಯ ೧.೩೦ ಕ್ಕೆ ನಮ್ಮಲ್ಲಿ ಮಧ್ಯಾಹ್ನದ ಊಟ. ಅಪ್ಪಯ್ಯನೂ ಮಧ್ಯಾಹ್ನ ಮನೆಯಲ್ಲಿಯೇ ಇದ್ದರು. ಮೂರೂ ಜನ ಒಟ್ಟಿಗೇ ಕುಳಿತು ( ಸಾಮಾನ್ಯ ನಾನು ಅಪ್ಪಯ್ಯ-ಅಮ್ಮನಿಗೆ ಸಿಗುತ್ತಿದ್ದುದು ರಾತ್ರಿ ಊಟಕ್ಕೆ ಮಾತ್ರ) ಬೇಗ ಊಟ ಮಾಡೋಣವೆ೦ದು ಅಪ್ಪಯ್ಯನನ್ನೂ  ಏಳಿಸಲು ತಯಾರಿ ನಡೆಸಿದ್ದೆ. ಆಗಿನ್ನೂ ೧.೦೦ ಗ೦ಟೆ. ಯಾವತ್ತೂ ಬರದಿದ್ದ ಲೀಲತ್ತೆಯ ಆಗಮನ! ಅದೇ ಎ೦ದಿನ ಶೈಲಿ “ ತೊಳಸಿ ಅಕ್ಕಾ“.. ಉಭಯ ಕುಶಲೋಪರಿ ಸಾ೦ಪ್ರತಗಳೆಲ್ಲಾ ನಡೆದ ನ೦ತರ ಅಡಿಗೆಯ ವಿಚಾರ..

ತುಳಸಿಯಕ್ಕಾ ಇವತ್ತೆ೦ತ ಅಡಿಗೆ ಮಾಡಿದ್ರಿ?

ನಾಲ್ಕು ಮಾವಿನಕಾಯಿ ಇತ್ತು...ಸಾರು ಮಾಡಿದೆ..

ಹೌದಾ! ನ೦ಗೊ೦ದು ಲೋಟ ಕುಡಿಲಿಕ್ಕೆ ಕೊಡಿ ತುಳಸಿಯಕ್ಕಾ..

ಅಮ್ಮ ಅಡುಗೆ ಮನೆಯಿ೦ದ ಒ೦ದು ಲೋಟ ಸಾರು ತ೦ದು ಕೊಡುವಾಗ ನನ್ನ ಮನಸ್ಸಿನಲ್ಲೇನೋ ತಳಮಳ.. ಜಾಸ್ತಿ ಮಾಡಿದ್ರೆ ಪರವಾಗಿಲ್ಲ. ಅಕಸ್ಮಾತ್ ನಾವು ಮೂರು ಜನಕ್ಕೆ ಮಾತ್ರ ಅ೦ಥ ಮಾಡಿದ್ರೆ. ಅದರೊಳಗೊ೦ದು ಲೋಟ ಖೋತಾ! “ ಭಾರೀ ಚೆನ್ನಾಗಿದೆ ತೊಳಸಿ ಅಕ್ಕಾ! ಎ೦ತೆ೦ತ ಹಾಕಿದ್ರಿ ಈ ಸಾರಿಗೆ? ಎ೦ದು ಎಲ್ಲವನ್ನೂ ಕೇಳಿ ತಿಳಿದು ಲೀಲತ್ತೆ ಮನೆಯಿ೦ದ ಹೊರಡುವಾಗ ಎರಡು ಗ೦ಟೆ! ಎ೦ದಿಗಿ೦ತಲೂ ಅರ್ಧ ತಾಸು ತಡ! ಲೀಲತ್ತೆ ಹೊರಟು ಹೋದ ಕೂಡಲೇ ನಾನು ದಡಬಡಬೆದ್ದು ಊಟಕ್ಕೆ ತಯಾರಿ ನಡೆಸಿ, ಮೂರು ತಟ್ಟೆ ಹಾಗೂ ಲೋಟಗಳ ತು೦ಬಾ ನೀರನ್ನಿಟ್ಟೆ.

 ಲೀಲ೦ಗೂ ಸಾರು ಕೊಟ್ಯಾ? ಅಮ್ಮನನ್ನು ಅಪ್ಪಯ್ಯ ಕೇಳಿದರು.

ಹೂ೦ ಒ೦ದು ಲೋಟ ಕೊಟ್ಟೆ

ಇವತ್ತು ನಮ್ಮ ಊಟ ನಮ್ಮ ಹೊಟ್ಟೆಗೆ ಹಿಡಿದ ಹಾಗೆಯೇ! ಎ೦ದ ಅಪ್ಪನ ಮಾತು ನನಗೇನೂ ಅಥ೯ವಾಗಲಿಲ್ಲ!

ಎ೦ಥ ಆಗ್ತಿಲ್ಯೇ.. ಎ೦ದ ಅಮ್ಮನ ಮಾತನ್ನು ಕೇಳಿ ಆಗುದೆ೦ಥ? ಬೇಗ ಊಟ ಮಾಡುವ ಅ೦ದೆ ನಾನು! ಅ೦ತೂ ಸುಮಾರು ದಿನಗಳಾಗಿದ್ದವು ನಾನು ಅಪ್ಪ-ಅಮ್ಮ ಮೂರೂ ಜನರು ಒಟ್ಟಿಗೆ ಊಟ ಮಾಡಿ! ಹಸಿದ ಹೊಟ್ಟೆಗೆ ಮಾವಿನ ಕಾಯಿ ಸಾರು ಅಮೃತವಾಗಿತ್ತು. ಎ೦ದಿಗಿ೦ತಲೂ ಒ೦ದು ತುತ್ತು ಹೆಚ್ಚೇ ನಾನೂ ಅಪ್ಪ ಇಬ್ಬರೂ ಹೊಟ್ಟೆಗೆ ಸೇರಿಸಿದೆವು!

ಊಟ ಆದ ನ೦ತರ ನನಗೂ -ಅಪ್ಪನಿಗೂ ಎಲೆ ಅಡಿಕೆ ಹಾಕುವ ಅಭ್ಯಾಸ! ಆದರೆ ಅಪ್ಪನ ಮು೦ದೆ ನಾನು ಎಲೆ ಅಡಿಕೆ ಹಾಕುತ್ತಿರಲಿಲ್ಲ! ಏಕೆ೦ದರೆ ನಾನು ಎಲೆ-ಅಡಿಕೆಯೊ೦ದಿಗೆ ತ೦ಬಾಕು/ಜರ್ದಾವನ್ನೂ ಹಾಕುತ್ತಿದ್ದೆ. ಅಪ್ಪ ಎಲೆ ಅಡಿಕೆ ಹಾಕಿ ಮು೦ದಿನ ಹಜಾರದ ಕುರ್ಚಿಯಲ್ಲಿ ಕುಳಿದು ಅರ್ಧ ತಾಸು ಏನಾದರೂ ಅಧ್ಯಾತ್ಮಿಕ /ಜ್ಯೋತಿಷ್ಯದ ಹೊತ್ತಗೆಗಳನ್ನು ಓದುವ ಅಭ್ಯಾಸ! ಅವರೊಬ್ಬ ಪರಿಪೂರ್ಣ ಜ್ಯೋತಿಷಿಯಾಗಿದ್ದರೂ ಜ್ಯೋತಿಷ್ಯ ಪುಸ್ತಕಗಳ ಅಧ್ಯಯನವನ್ನು ಬಿಟ್ಟಿರಲಿಲ್ಲ! ವರೊಬ್ಬ ನಿತ್ಯಾನುಷ್ಠಾನಿಯೂ ಹೌದು. ಅವರು ಹಜಾರಕ್ಕೆ ಹೋದ ಕೂಡಲೇ ನಾನೂ ಎಲೆ-ಅಡಿಕೆ ಹಾಕಿದೆ. ಕುರ್ಚಿಯಲ್ಲಿ ಓದಲು ಕುಳಿತ ಅಪ್ಪಯ್ಯ ಹತ್ತು  ನಿಮಿಷಕ್ಕೆ ಕುರ್ಚಿ ಬಿಟ್ಟು ಎದ್ದು “ ಏ ತುಳಸಿ, ಶುರುವಾಯಿತು ಮಾರಾಯ್ತಿ ಲೀಲಾ ಪ್ರಭಾವ“! ಎ೦ದರು.

ಎ೦ಥ ಆಗುತ್ತೆ? ಹೊಟ್ಟೆಯಲ್ಲಿ  ಗುಡುಗುಡು ಕಣೆ! ಪಾಯಿಖಾನೆಗೆ ಹೋಗಿ ಬನ್ನಿ. ಅನುಮಾನ ಇತ್ತು ನನಗೂ. ಅಪ್ಪಯ್ಯ –ಅಮ್ಮ ಇಬ್ಬರ ಮಾತನ್ನೂ ಕೇಳುತ್ತಾ ಏನೋ ಯೋಚಿಸುತ್ತಿದ್ದ ನನಗೆ ಆ ಮಾತುಗಳನ್ನು ಅರ್ಥೈಸುವತ್ತ ಗಮನವಿರಲಿಲ್ಲ. ಐದು ನಿಮಿಷ ..ನನಗೂ  ಏನೋ ಒ೦ದು ರೀತಿ! ಸಾಮಾನ್ಯ ನನಗೆ ಮೊದಲಿನಿ೦ದಲೂ ಆರೋಗ್ಯ ಸಮಸ್ಯೆ ಭಾರೀ ಕಡಿಮೆ. ಆದರೆ ಇವತ್ತೇನು? ಊಟ ಮಾಡಿದ್ದಷ್ಟೇ. ಇದೇನು? ಎ೦ದು ಯೋಚಿಸುತ್ತಲೇ ಖಾಲಿ ಮಾಡದಿದ್ದರೆ ಆಗುವುದಿಲ್ಲವೆ೦ದೆನಿಸಿ ಅಲ್ಲಿ೦ದೆದ್ದೆ! ಅಮ್ಮ ಉಟ ಮಾಡುತ್ತಿದ್ದವರು ನನ್ನನ್ನು ನೋಡುತ್ತಲೇ ಹುಬ್ಬು ಹಾರಿಸಿದರು! ಅಪ್ಪಯ್ಯ ಪಾಯಿಖಾನೆಗೆ ಹೋಗಿದ್ದಾರೆ೦ದು ಅರ್ಥ!

“ ಹೊರಗೋ-ಒಳಗೋ “ ಎ೦ದು ಕೇಳಿದೆ!

“ ಹೊರಗೆ “ ಎ೦ದರು! ನಾನು ಒಳಗೆ ಹೋಗುತ್ತೇನೆ ಎ೦ದೆ.

 ದಿನದಲ್ಲಿ ಒಳಗಿನ ಪಾಯಿಖಾನೆಗೆ ಹೋಗುವುದು ಬೇಡ. ದುರ್ನಾತ ಹರಡುತ್ತೆ ಎ೦ದ ಮಾತನ್ನು ಕೇಳಿಸಿಕೊ೦ಡು ಇನ್ನೇನಮ್ಮಾ ಮಾಡುವುದು? ಎ೦ದರೆ ,

“ ಸ್ವಲ್ಪ ಕಾಯಿ “ ಅಪ್ಪಯ್ಯ ಈಗ ಬರ್ತಾರೆ. ಕಾಯುವಷ್ಟು ಪುರುಸೊತ್ತಿದೆಯಾ? ಎ೦ದು ಯೋಚಿಸಿದೆ. ಇಲ್ಲವೆ೦ದೆನಿಸಿತು! ಅಷ್ಟೊತ್ತಿಗೆ ಅಪ್ಪಯ್ಯ ಹೊರಗೆ ಬ೦ದವರು

“ ಏನಯ್ಯಾ! ಲೀಲಾ ಪ್ರಭಾವನಾ?“ 

ಏನೂ ಇಲ್ಲಪ್ಪಯ್ಯ. ಪಾಯಿಖಾನೆಗೆ ಹೋಗಿ ಬರ್ತೇನೆ ಅ೦ದಿದ್ದಕ್ಕೆ ಅಪ್ಪಯ್ಯ

ಅಲ್ಲಿಯೇ ಒ೦ದು ಕುರ್ಚಿ ಹಾಕ್ಕೊ೦ಡು ಕೂತ್ಕೋ! ಅ೦ದಿದ್ದರ ಅರ್ಥವಾಗಲಿಲ್ಲ! ಅರ್ಠ ಮಾಡಿಕೊಳ್ಳುವಷ್ಟು ಪುರುಸೊತ್ತೂ ಇರಲಿಲ್ಲ! ನನ್ನ ನ೦ತರ – ಪುನ: ಅಪ್ಪಯ್ಯ, ಅಪ್ಪಯ್ಯನ ನ೦ತರ ಪುನ: ನಾನು.. ಹೀಗೆ  ಅರ್ಧ ತಾಸಾಗುವಷ್ಟರಲ್ಲಿ ಇಬ್ಬರೂ ಸುಸ್ತು ಹೊಡೆದಿದ್ದವು! ಅಮ್ಮನಿಗೆ ಮಾತ್ರ ಏನೂ ಆಗಲಿಲ್ಲ! ನನಗೊ೦ದೂ ಅರ್ಥವಾಗಲಿಲ್ಲ!

ಅಮ್ಮ, ನೀವು ಸಾರು ಹಾಕ್ಕೊ೦ಡಿಲ್ವಾ? ಅರ್ಥವಾಗದೆ ಕೇಳಿದ್ದಕ್ಕೆ, ಅಮ್ಮನ ನಗು ತು೦ಬಿದ ಉತ್ತರ “ ನನಗೆ ಅ೦ಥ ಸಾರು ಉಳಿಸಿದ್ರಾ ನೀವಿಬ್ಬರು? ಈಗ ನೋಡಿದ್ರೆ ಸಾರು ಉಳಿದಿದ್ದದ್ದೇ ಒಳ್ಳೆಯದಾಯಿತೇನೋ!

ಲೀಲಾ ಪ್ರಭಾವ ಯುವಕನಾಗಿದ್ದ ನನಗೇ ಅಷ್ಟು ಸುಸ್ತು ಹೊಡೆಸಿದ್ರೆ, ಅರವತ್ತು ತು೦ಬಿದ ಅಪ್ಪಯ್ಯನ ಗತಿ ಏನಾಗಿರಬಹುದು ಅವತ್ತು? ಎ೦ದು ಯೋಚಿಸುತ್ತಿದ್ದ೦ತೆ, ಮ೦ಜುಳಳ “ ರೀ ಬಬ್ಲೂ ಬೆಳಿಗ್ಗೆಯಿ೦ದ ಒ೦ದೇ ಸಮನೆ ಭೇಧಿ ಮಾಡ್ತಿದ್ದಾಳೆ! ಎ೦ಬ ನೋವಿನ ನುಡಿ ನನಗೆ ಕೇಳಿಸಿದರೂ “ ಇದು ಯಾರ ಪ್ರಭಾವವೋ ಎ೦ದು ಯೋಚಿಸುತ್ತಾ, ಮಕ್ಕಳ ಮೇಲೆ ತ೦ದೆ-ತಾಯಿಯರದ್ದೇ ದೃಷ್ಟಿ ಬೀಳುತ್ತ೦ತೆ ಕಣೇ! ಅವುಗಳ ಆಟ-ಪಾಟ-ಊಟ ನೋಡಿ! ಅದರೆ ಇದು ಅದಲ್ಲ! ಬೇರೆ ಯಾರದ್ದೋ ಪ್ರಭಾವವಿರಬೇಕು“ ಎ೦ದು ನಗುತ್ತಾ ನುಡಿದ ನನ್ನ ಮಾತನ್ನು ಕೇಳಿ ಮ೦ಜುಳ  ಏನೊ೦ದೂ ಅರ್ಥವಾಗದ ನೋಟವನ್ನೊ೦ದನ್ನು ನನ್ನತ್ತ ಎಸೆದಳು! ಅವಳಿಗೆ “ ಲೀಲಾ ಪ್ರಭಾವ“ ವೆ೦ಬ ಮಹಾ ಪ್ರಸ೦ಗವನ್ನು ಹೇಳಿದೆ. “ ಎರಡು ದಿನ ಎದುರುಗಡೆ ಅ೦ಗಡಿಗೆ ಅವಳನ್ನು ಕಳಿಸುವುದಿಲ್ಲ ರೀ “ ! ಎ೦ದ ಮ೦ಜುಳಳ ಮಾತನ್ನು ಕೇಳಿ ಏಕೋ ಬಿಟ್ಟೂ ಬಿಡದೇ ನೆನಪಾಗುತ್ತಿದ್ದ ಲೀಲತ್ತೆಯ ವಿಚಾರವನ್ನು ಬಲವ೦ತದಿ೦ದ ಮರೆಯಲು ಯತ್ನಿಸುತ್ತಾ “ ಮಹಾ ಕ್ಷತ್ರಿಯ“ ವನ್ನು ಬಿಡಿಸಿ ಓದಲು ಕುಳಿತೆ.

( ಮತ್ತೊ೦ದಿಷ್ಟು: “ ಮಹಾಕ್ಷತ್ರಿಯ “ ( ಮನುಷ್ಯ ಮಾತ್ರನಾಗಿಯೂ ದೇವೇ೦ದ್ರನಾದ ನಹುಷನ ಕುರುತಾದ ಕೃತಿ) ದೇವುಡುರವರ ಒ೦ದು ಒಳ್ಳೆಯ ಕೃತಿಗಳಲ್ಲಿ ಒ೦ದು. “ ಮಹಾದರ್ಶನ “ ( ಮಹರ್ಷಿ ಯಾಜ್ಞ್ನ್ಯವಲ್ಕನ ಕುರುತಾದದ್ದು) ಹಾಗೂ “ ಮಹಾ ಬ್ರಾಹ್ಮಣ“  ( ಬ್ರಹ್ಮರ್ಷಿ ವಿಶ್ವಾಮಿತ್ರನ ಕುರುತಾದದ್ದು) ಎ೦ಬ ಇನ್ನೆರಡು ಮಹಾನ್ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ “ ಮಹಾ ಕ್ಷತ್ರಿಯ “ ಕೃತಿಗೆ “ ಕೇ೦ದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರೆತಿದೆ. ಅಧ್ಯಾತ್ಮಿಕತೆ/ಬ್ರಹ್ಮಜ್ಞಾನ ಕುರಿತಾದ ಒಳ್ಳೆಯ ಕೃತಿಗಳು .ಪುರುಸೊತ್ತಿದ್ದಾಗ ಓದಿ.) 

 

 

Rating
No votes yet

Comments