ಮಧುರಾ ಈ ಕ್ಯಾಮೆರಾ......
ಮಧುರಾ ಈ ಕ್ಯಾಮೆರಾ......
ಮೊದಲಿನಿಂದಲೂ ಕೆಲವು ವಸ್ತುಗಳ ಬಗ್ಗೆ, ನನಗೆ ವಿಶೇಷ ಪ್ರೀತಿ, ಕಾಳಜಿ ಮತ್ತು ಕುತುಹಲ.ಆ ವಸ್ತುಗಳ ಅನುಪಸ್ಥಿತಿಯಿರುವ ಜೀವನವನ್ನು ಕಲ್ಪಿಸಿಕೊಂಡು ನೋಡಿದ್ದೇನೆ. ಅದು ಈ ಕಂಪ್ಯೂಟರ್ ಯುಗದಲ್ಲಿ ಅಬ್ಬಾ ಕಲ್ಪಿಸುವುದು ಅಸಾಧ್ಯ. ಅವುಗಳಲ್ಲಿ ಕ್ಯಾಮೆರಾ ಮೊದಲಿನದು. ದೃಶ್ಯ ಮಾಧ್ಯಮದ ಬೇರು ಇದು. ಜೀವನದಲ್ಲಿ ನಡೆಯುವ ಮಧುರಾತಿ ಮಧುರ ಸನ್ನಿವೇಶಗಳನ್ನು ಮುಂದೆ ಯಾವುದೊ ಜಂಜಾಟದಲ್ಲಿ ಸಂಪೂರ್ಣವಾಗಿ ಮರೆಯಬಹುದು. ಗೆಳೆಯರ ಜೊತೆ ಹೋದ ಟ್ರಿಪ್ಪು, ಕೂಡಿ ಓಡಾಡಿ ಮಾಡಿದ ಮದುವೆ ಸಮಾರಂಭ, ಆಟದಲ್ಲಿನ ಹುಡುಗಾಟ, ಮಳೆಯಲ್ಲಿ ಮಿಂದ ಸಂತಸ, ಕುಡಿದ ಬೈಟೂ ಕಾಫಿ, ಸಾಯಂಕಾಲದ ವಾಕಿಂಗ್, ಹರಟೆ, ಹಾಸ್ಟೆಲ್ ದಿನಗಳು, ಕಲಿಸಿದ ಗುರುವಿನ ಹಸನ್ಮುಖ, ಗೆಳೆಯಗೆಳತಿಯರ ಪಿಸುಮಾತು, ತುಸುನಗು, ಹುಸಿಕೋಪ, ಮುನಿಸು, ಕನಸು, ಭಾವುಕತೆ, ಬರ್ತ್ ಡೇ ಗಿಫ್ಟುಗಳು, ಬಿಟ್ಟು ಹೋಗುವ ಕ್ಷಣದಲ್ಲಿ ಬರುವ ಕಣ್ಣಬಿಂದು, ಹೀಗೆ ಎಷ್ಟೋ ಗತಕಾಲದ ಮಧುರಾ ನೆನಪುಗಳು ಮರೆಯಾಗಬಹುದು. ಮುಂದೆ ಅಂತಹ ಕ್ಷಣಗಳ ಅನುಭವ ಆಗಬಹುದು ಅಥವಾ ಆಗಲಿಕ್ಕಿಲ್ಲ. ಆದರೆ ಆ ಪ್ರತಿ ಕ್ಷಣದ ಉತ್ಸಾಹ, ಸಂತಸವನ್ನು ಜೀವನದ ಕೊನೆಯವರೆಗೂ ಜೀವಂತ ಇದ್ದ ಹಾಗೆ ಫೀಲ್ ಮಾಡಬಹುದು. ಅದು ಆ ಕ್ಷಣಗಳು ನಮ್ಮ ಕ್ಯಾಮೆರಾದ ಕಣ್ಣಿಗೆ ಸೆರೆಯಾಗಿದ್ದಾಗ ಮಾತ್ರ. ಅದಕ್ಕೆ ಹೇಳುವುದು..
ಕಳೆದ ಕ್ಷಣಗಳು ಕಳೆದು ಹೋಗಬಹುದು.
ಆದರೆ ನೆನಪುಗಳಲ್ಲ.
ನೆನಪುಗಳೂ ಮಾಸಬಹುದು.
ಆದರೆ ಕ್ಯಾಮೆರಾದ ಮನಸ್ಸಿನ ಗ್ಯಾಲರಿಯಲ್ಲಿರುವ ಫೋಟೋಗಳಲ್ಲ.
ಎಷ್ಟೋ ವಿಚಿತ್ರ ಸಂಗತಿಗಳು ನಮ್ಮ ಸುತ್ತಲಿನ ಪ್ರಪಂಚದಲ್ಲಿ ನಡೆಯುತ್ತಿರುತ್ತವೆ. ಅವುಗಳಿಗೆಲ್ಲ ಈ ಕ್ಯಾಮೆರಾ ಒಂದು ತರಹದ ಪ್ರತಿಬಿಂಬ ಮತ್ತು ಇಡೀ ಜಗತ್ತಿನ ಮೂರನೇ ವಿಶಿಷ್ಟ, ವಿಶಾಲವಾದ ಕಣ್ಣು. ಯಾವುದೇ ಸನ್ನಿವೆಶವಿರಲಿ ಭೇಧ ತೋರದು. ಯುದ್ಧದ ಭೀಕರತೆಯನ್ನು ಎಷ್ಟು ಗಂಭೀರದಿಂದ ಕ್ಲಿಕ್ಕಿಸುತ್ತದೆಯೋ, ಅಷ್ಟೇ ಗಂಭೀರವಾಗಿ ಒಂದು ಉನ್ನತ ದೇಶದ ಶಾಂತತೆಯನ್ನು ಪ್ರತಿಬಿಂಬಿಸಿ ಆಶ್ಚರ್ಯ ಮೂಡಿಸುತ್ತದೆ. ದರಿದ್ರ ಬಡತನವನ್ನು-ಶ್ರೀಮಂತಿಕೆಯ ಐಶರಾಮಿಯನ್ನು, ಶಾಂತ ಸಮುದ್ರವನ್ನು-ದೈತ್ಯ ಸುನಾಮಿಯನ್ನು, ಗಗನಚುಂಬಿ ಕಟ್ಟಡಗಳು-ನೆಲಕ್ಕೆ ಅಂಟಿಕೊಂಡೇ ಇರುವ ಸ್ಲಮ್ಮು ಏರಿಯವನ್ನು, ವಿಶ್ವಸುಂದರಿಯ ತಳುಕು ಬಳುಕಿನ ಸ್ನಿಗ್ಧ ಸೌಂದರ್ಯವನ್ನು-ಅವಳಲ್ಲೇ ಅಡಗಿರುವ ಮುಪ್ಪು ಮುದುಕಿಯನ್ನು, ಪ್ರಕೃತಿಯ ಮಹೋನ್ನತ ದೃಶ್ಯಗಳನ್ನು-ಅದರ ಹಿಂದಿರುವ ಕ್ರುರತೆಯನ್ನು, ಮನುಷ್ಯನ ಎಲ್ಲ ಭಾವಗಳನ್ನು, ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು, ಆಕಾರ-ವಿಕಾರಗಳನ್ನು ಎಲ್ಲವನ್ನು ತನ್ನ ಕಣ್ಣಿನಲ್ಲಿ ಕ್ಲಿಕ್ಕಿಸಿ ತುಂಟನಗೆ ಬೀರುತ್ತದೆ. ಈಗಂತೂ ಮದುವೆ, ಸಿನಿಮಾ, ಪತ್ರಿಕೋದ್ಯಮ, ಜಾಹೀರಾತು, ವ್ಯಾಪಾರ-ವಹಿವಾಟು, ರಾಜಕೀಯ ಎಲ್ಲವು ಕ್ಯಾಮೆರಾಮಯ. ಅಷ್ಟೇ ಅಲ್ಲ ನಾವು ಹುಟ್ಟುವ ಮುಂಚೆಯೇ ಸ್ವರ್ಗಗ್ರಸ್ತರಾದ ನಮ್ಮ ಹಿರಿತಲೆಗಳ(ತಾತ, ಮುತ್ತಾತ) ಮತ್ತು ದೇಶದ ಮಹಾನ್ ವ್ಯಕ್ತಿಗಳ ಮುಖದರ್ಶನ ಈ ಕ್ಯಾಮೆರಾದ ಮೂಲಕ ಸಾದ್ಯ ಅಲ್ಲವೇ?. ಅದಕ್ಕೆ ಇರಬೇಕು ಕ್ಯಾಮೆರಾ ಒಂದು ಕುತೂಹಲದ ವಸ್ತುವಾಗಿ ನನ್ನಲ್ಲಿ ಅಚ್ಚರಿಮೂಡಿಸಿದೆ.
ಇಷ್ಟೆಲ್ಲಾ ಬರೆಯಬೇಕಾಗಿ ಬಂದದ್ದು, ನಾವೆಲ್ಲಾ ಸಂಶೋಧನ ವಿಧ್ಯಾರ್ಥಿಗಳು ಜೂನ್ ಮೊದಲ ವಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ತಾಣಗಳಿಗೆ(ಮುರುಡೇಶ್ವರ, ಯಾಣ, ಗೋಕರ್ಣ, ಇಡಗುಂಜಿ, ಕರ್ಕಿ ಮತ್ತು ಅಪ್ಸರಕೊಂಡ) ಎರಡು ದಿನದ ಮಟ್ಟಿಗೆ ಟ್ರಿಪ್ ಹೋದಾಗಿನ ಮಧುರಾತಿ ಮಧುರಾ ಕ್ಷಣಗಳನ್ನು ನಮ್ಮ ಕ್ಯಾಮೆರಾದ ಕಣ್ಣು ಸೆರೆಹಿಡಿದ ರೀತಿಗೆ ಮನಸೋತು. ಎಲ್ಲರೂ ಪ್ರವಾಸದ ಮಧುರ ನೆನಪುಗಳ ಕುರುಹುಗಳಾದ ಫೋಟೋಗಳನ್ನು ಆರ್ಕುಟ್, facebook ಗಳಲ್ಲಿ ಅಪ್ಲೋಡ್ ಮಾಡುವ ಸಮಯದಲ್ಲೇ ನನಗ್ಯಾಕೋ ಪುಟ್ಟ ಕ್ಯಾಮೆರಾದ ವಿಶಾಲ ಮನೋಭಾವದ ಬಗ್ಗೆ ಚಿಂತಿಸಿದಾಗಲೇ ಈ ಸಣ್ಣ ಬರಹ ನಿಮ್ಮ ಕಣ್ಮುಂದಿದೆ.
ಲಾಸ್ಟ್ ಕ್ಲಿಕ್ಕು : ಜೀವವಿಲ್ಲದ ಓ ಕ್ಯಾಮೆರಾ,
ಹಿಡಿಯುವೆ ನೀ ಜೀವ-ಭಾವಗಳ ಚಿತ್ತಾರ,
ಅದಕೆ ನೀ ಎನಗೆ ಮಧುರ.....