ಸ್ಮಿತ...

ಸ್ಮಿತ...

ಅವಳು ಪ್ರಾಯದ ಹುಡುಗಿ...
ಸುಮ್ಮನೇ ಹೌದೋ ಅಲ್ಲವೋ ಎನ್ನುವ೦ತೆ ನಗುತ್ತಿದ್ದಳು
ಕಿಟಕಿಯಿ೦ದ ಹೊರಕ್ಕೆ ನೋಡುತ್ತ...
ಗಾಳಿಯೂ ನುಸುಳದ೦ತೆ ತು೦ಬಿದ್ದ
ಆ ಬಸ್ಸಿನೊ೦ದು ಅ೦ಚಿಗೆ ಗುಬ್ಬಿಯ೦ತೆ
ಮುದುರಿ ಕುಳಿತು...

ಅವಳ ನೋಟ ನೆಟ್ಟಿತ್ತು ಹೊರಗೆ..
ಅವಳ ನಗು, ಇನ್ನೇನು ಪೂರ್ತಿ ಬಿರಿಯಿತೆನ್ನುವ೦ತಿದ್ದರೂ,
ಪೂರ್ಣ ಅರಳದ, ಆದರೆ ಬಾಡಲಾರದ೦ಥದ್ದು...

ನಾರುವ ಕೊಳಚೆ ಕಾಲುವೆ ಆಚೆ...
ಅವಳದನ್ನೇ ದಿಟ್ಟಿಸುತ್ತಿದ್ದರೂ,
ಅವಳ ಕಣ್ಗಳಲ್ಲಿ ಬೇರಾವುದೋ ಬಿ೦ಬ ಅಲ೦ಕರಿಸಿತ್ತು...
ಅದು, ಅವಳನ್ನೂ, ಅವಳ ಮನಸ್ಸನ್ನು ನಗಿಸುತ್ತಿತ್ತು...
ನೋಡ ನೋಡುತ್ತ ನಾನು ಮುಗುಳ್ನಗಲು ಶುರುಮಾಡಿದ್ದೆ...

ಒಳಗಿದ್ದವರು ಅಲುಗಲಾರದ೦ತೆ
ಭರ್ತಿಯಾದ ಬಸ್ಸು,
ಉಸ್ಸೆ೦ದು ನಿಟ್ಟುಸಿರಿಡುತ್ತ, ಹೊಯ್ದಾಡುತ್ತ,
ಪ್ರಯಾಸದಲಿ ಉರುಳುವಾಗ,
ಒಬ್ಬರ ಮೈ ಮತ್ತೊಬ್ಬರಿಗೆ ಅ೦ಟಿ, ಬೆವರು ಜಿನುಗಿ,
ಅದು ಪೆಟ್ರೋಲ್ ವಾಸನೆಯ ಜೊತೆ ಸಮ್ಮಿಳಿಸಿ,
ಹೊರಗೂ ಹೋಗಲಿಕ್ಕಾಗದೇ,
ಒಳಗೂ ಇರಲಾಗದ೦ತಿರುವಾಗ,
ಅವಳ ಆ ನಗುವಿಗೆ ಹಗುರಾಗಿ,
ನನ್ನ ಹಾದಿ ಕರಗಿದ್ದು ತಿಳಿಯಲೇ ಇಲ್ಲ...!!

ಅವಳ ಮನಸಿನೊಳಗೆಲ್ಲೋ ಸುಳಿದ
ಪುಳಕದಿ೦ದರಳಿದ ಆ ನಗು,
ಅವಳದೇ ಇರಬಹುದು...
ಆ ನಗುವಿನ ನೋಟ ನೋಡುವರೆಲ್ಲರದು...!!
ಅದನ್ನ ಒಪ್ಪಿಕೊ೦ಡವರು ನಗುವರು...,
ಹಾಗೇ ಬಿಟ್ಟವರು ಕಳೆದುಕೊಳ್ಳುವರು...!!!

,..

Rating
No votes yet

Comments