ಪ್ರಜಾಪ್ರಭುತ್ವ ಹಾಗೂ ಮತದಾನ
ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ ಈ ಪ್ರಜಾತಂತ್ರದ ಪರಿಕಲ್ಪನೆಯು ಪರಕೀಯರ ಕೊಡುಗೆ ಎಂಬ ತಿಳಿವಳಿಕೆಯು ಮಾತ್ರ ತಪ್ಪೆಂದು ಹೇಳದೆ ವಿಧಿಯಿಲ್ಲ. ಗಣರಾಜ್ಯದ ಪ್ರಾಯೋಗಿಕತೆಯು ಭಾರತದೇಶದಲ್ಲಿ ಇಂದಿಗೆ ೨೨೦೦ ವರ್ಷಗಳ ಹಿಂದೆಯೇ ಅಂದರೆ ಕ್ರಿಸ್ತಪೂರ್ವ ೨೦೦ ವರ್ಷಗಳ ಮೊದಲೇ ಆಗಿಹೋಗಿದೆ ಎಂಬುದು ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿದವರಿಗೆ ತಿಳಿಯದಿರಲಾರದು.
ಕ್ರಿ.ಪೂ. ೨ನೇ ಶತಮಾನದಿಂದ ಕ್ರಿ.ಶ. ೪ನೇ ಶತಮಾನದವರೆಗೆ ಸುಮಾರು ೬೦೦ ವರ್ಷಗಳ ಕಾಲ ನಮ್ಮ ದೇಶದಲ್ಲಿ ಯೌಧೇಯರು ಈ ತತ್ತ್ವದ ಆಚರಣೆ ನಡೆಸಿದ್ದರೆಂಬುದು ಇತಿಹಾಸದ ನೈಜಾಧ್ಯಯನದಿಂದ ತಿಳಿಯುತ್ತದೆ.
ಆದರೆ ಸ್ವಾತಂತ್ರ್ಯಾನಂತರದ ಈ ೫೩ ವರ್ಷಗಳಲ್ಲಿ, ನವನೂತನ ಹಾಗೂ ಅತಿಶ್ರೇಷ್ಠ ವ್ಯವಸ್ಥೆ ಎಂದು ಪರಿಭಾವಿಸಲಾದ ಈ ಪ್ರಜಾಪ್ರಭುತ್ವವು ಕ್ರಮಿಸಿರುವ ಭ್ರಷ್ಟಪಥವನ್ನು ಕಂಡಾಗ ಸ್ವಲ್ಪ ಮಟ್ಟಿಗಿನ ಆಲೋಚನಾಶಕ್ತಿ ಉಳ್ಳವರು ಕೂಡ ಇದರ ಮೂಲತತ್ತ್ವಗಳಲ್ಲಿಯೇ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದು ಸಹಜವೇ ಆಗಿದೆ. ಆದರೆ ಇದು ರಾಷ್ಟ್ರದ ಸಮಗ್ರತೆಯ ದೃಷ್ಟಿಯಿಂದ ಭೀತಿದಾಯಕವಾಗಿದೆ. ಅಸ್ಸಾಮಿನ ಬೋಡೋಗಳು, ಆಂಧ್ರದ ನಕ್ಸಲರು, ತಮಿಳು ಪ್ರತ್ಯೇಕತಾ ವಾದಿಗಳು, ಪಂಜಾಬದ ಉಗ್ರವಾದಿಗಳು, ಕಾಶ್ಮೀರದ ಭಯೋತ್ಪಾದಕರು ಈ ಮಾತಿಗೆ ಜ್ವಲಂತ ಉದಾಹರಣಗಳಾಗಿದ್ದಾರೆ. ಯಾಕೆ ಹೀಗೆ ? ನಾವು ಎಲ್ಲಿ ತಪ್ಪುತ್ತಿದ್ದೇವೆ ?
ಪ್ರಜಾತಂತ್ರದ ಮೂಲಾಧಾರಗಳಲ್ಲಿ ^ಜನಪ್ರತಿನಿಧಿಯ ಆಯ್ಕೆಯು^ ಮುಖ್ಯವಾದುದು ಮತ್ತು ಈ ಪ್ರಕ್ರಿಯೆಯ ಮೂಲಾಂಶವು ^ಮತದಾನ^ ಎಂಬುದನ್ನು ಮರೆಯಲಾಗದು. ಈ ಮತದಾನವನ್ನು ^ಒಂದು ಪವಿತ್ರವಾದ ಕರ್ತವ್ಯ, ಅಮೂಲ್ಯ ಹಕ್ಕು^ ಎಂಬಂತಹ ಮಾತುಗಳಿಂದ ವೈಭವೀಕರಿಸಲಾಗಿದೆ. ಆದರೆ ಅದೀಗ ತೀರ ಹಾಸ್ಯಾಸ್ಪದ ಎನಿಸುವ ಮಟ್ಟಿಗೆ ಹಳಸಿಹೋಗಿದೆ. ನಮ್ಮ ಆರಂಭದ ಆಯ್ಕೆಯ ಪ್ರಕ್ರಿಯೆಯೇ ದೋಷಪೂರಿತವಾಗಿದೆ.
ದೇವರು ಇರುವವರೆಗೂ ದೇವಸ್ಥಾನವು ಪವಿತ್ರವಾಗಿರುತ್ತದೆ. ದೇವರ ಜಾಗದಲ್ಲಿ ಸೈತಾನನು ನಿಂತಾಗ ಅದರ ಪಾವಿತ್ರ್ಯ ಉಳಿದೀತಾದರೂ ಹೇಗೆ ?
ಸ್ವಾತಂತ್ರ್ಯಾನಂತರದ ಆರಂಭದ ದಿನಗಳಲ್ಲಾದರೆ ಬಹುಮಟ್ಟಿಗೆ ದಕ್ಷರಾದ ಜನಪ್ರತಿನಿಧಿಗಳಿದ್ದರು. ಅವರಲ್ಲಿ ಆದರ್ಶಗಳಿದ್ದವು, ಉನ್ನತ ಮೌಲ್ಯಗಳಿದ್ದವು, ಸರ್ವೋದಯದ ಗುರಿಗಳಿದ್ದವು. ನೈತಿಕತೆ ಮತ್ತು ಸಚ್ಚಾರಿತ್ರ್ಯಗಳು ಪ್ರಧಾನವಾಗಿದ್ದವು ಮತ್ತು ಇಂತಹ ಅಂಶಗಳ ಮೇಲಿಂದ ಅವರ ಆಯ್ಕೆ ನಡೆಯುತ್ತಿತ್ತು.
ಆದರೆ ಇಂದಿನ ಚಿತ್ರಣ ಪೂರ್ಣ ಬದಲಾಗಿದೆ. ತದ್ವಿಪರೀತವಾಗಿ ಇಂದಿನ ರಾಜಕಾರಣಿಗಳಲ್ಲಿ ಸ್ವಾರ್ಥಲಾಲಸೆ, ಅಧಿಕಾರದಾಹ, ತಂತಮ್ಮ ಗುಂಪಿನ ಹಿತರಕ್ಷಣೆ ಹಾಗೂ ಅಧಿಕಾರದ ಉಳಿವಿಗಾಗಿ ಎಂತಹ ದುರ್ಮಾರ್ಗವನ್ನಾದರೂ ಅವಲಂಬಿಸುವ ಜಾಡ್ಯ ಹೆಚ್ಚುತ್ತಿದೆ. ಇಂದು ರಾಜಕಾರಣವು ಜನಸೇವೆಯಾಗಿ ಉಳಿದಿಲ್ಲ. ಬದಲಾಗಿ ಅದು ತ್ವರಿತವಾಗಿ ಹಣಗಳಿಸುವ ಒಂದು ದಂಧೆಯಾಗಿದೆ. ಇಲ್ಲದಿದ್ದರೆ ಬರಿದೇ ಜನಸೇವೆ ಮಾಡಲು ಇಂತಹ ನೂಕುನುಗ್ಗಲು ಇರುತ್ತಿದ್ದಿಲ್ಲ! ಮತ್ತು ಮತದಾನವು ಕೂಡ ಪೀತಪತ್ರಿಕೆಗಳಲ್ಲಿ ಮಾತ್ರವೇ ಬಳಕೆಯಾಗುವ ಶಬ್ದಗಳಲ್ಲಿ ತಿಳಿಸಬೇಕಾದಂತಹ ಅಂಶಗಳನ್ನು ಅವಲಂಬಿಸಿ ನಡೆಯುತ್ತಿರುವುದು ಶೋಚನೀಯ.
ಈ ನಿಟ್ಟಿನಲ್ಲಿ ಚಿಂತಿಸಿದಾಗ, ಯೋಚಿಸಿ ಮತ ನೀಡುವುದಕ್ಕಿಂತ; ಅಭ್ಯರ್ಥಿಯ ಜಾತಿ, ಹಣ, ಪ್ರಭಾವೀ ವ್ಯಕ್ತಿಗಳ ಆಮಿಷ... ಇವುಗಳಿಗೆ ಬಲಿಯಾಗಿ ಮತ ಚಲಾಯಿಸುತ್ತಿರುವ ಇಂದಿನ ಮತದಾರರನ್ನು ಋಜುಮಾರ್ಗಕ್ಕೆ ತರಲು ನೈಜಶಿಕ್ಷಣದ ಅವಶ್ಯಕತೆಯಿದೆ. ಅನಕ್ಷರತೆಯೂ ಬಡತನವೂ ಹೆಚ್ಚಿರುವ ಕ್ಷೇತ್ರಗಳಲ್ಲಿ, ಬಹುಕಾಲದಿಂದಲೂ ಬೇರೂರಿರುವ -ಗಾಂಧೀಜಿಯವರು ಸ್ವಾತಂತ್ರ್ಯಾನಂತರ ವಿಸರ್ಜಿಸಿಬಿಡಬೇಕು ಎಂದು ಆಶಿಸಿದ್ದ- ಒಂದು ಪಕ್ಷವು ಮಾತ್ರವೇ ಗೆಲ್ಲುತ್ತಿರುವುದನ್ನು ಕಂಡಾಗ ಈ ಮಾತಿನ ಯಥಾರ್ಥ ತಿಳಿಯುತ್ತದೆ. ರಾಜಕಾರಣಿಗಳೇಕೆ ಋಜು ಶಿಕ್ಷಣದತ್ತ ಒಲವು ಹೊಂದಿಲ್ಲ? ಉತ್ತರ ಸ್ಪಷ್ಟ. ಅವರಿಗೆ ಗೊತ್ತು, ಮತದಾರನು ತಿಳಿವಳಿಕಸ್ಥನಾಗಿಬಿಟ್ಟರೆ ತಮ್ಮೆಲ್ಲ ಆಟಾಟೋಪಗಳಿಗೆ ಕಡಿವಾಣಬೀಳುತ್ತದೆ ಎಂದು!
ಸರಿಯಾದ ಶಿಕ್ಷಣವು ಮತದಾರನಿಗೆ ಹೇಗೋ ಹಾಗೆ ಉಮೇದುವಾರನಿಗೆ ಕೂಡ ಅಗತ್ಯ. ಜನಪ್ರತಿನಿಧಿಗೆ ಕೂಡ ಒಂದು ನಿಗದಿತ ಶಿಕ್ಷಣವನ್ನು ಕಡ್ಡಾಯ ಮಾಡಬೇಕು. ಹಾಗೂ ಆತನ ನಿರಪರಾಧೀ ಹಿನ್ನೆಲೆಯನ್ನು ಅಪೇಕ್ಷಿಸಬೇಕು. ಹಾಗಾದಾಗ ಮಾತ್ರವೇ ಇಂತಹ ಗುರುತರ ಜವಾಬ್ದಾರಿಯುಳ್ಳ ಸ್ಥಾನಕ್ಕೆ ಯೋಗ್ಯರನ್ನು ಆಯ್ಕೆ ಮಾಡುವ ಅವಕಾಶ ಸಿಗುತ್ತದೆ.
ಐದು ವರ್ಷಗಳ ಅವಧಿಗೆ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಬಿಟ್ಟರೆ ಸಾಲದು. ಆತನು ಅಭಿವೃದ್ಧಿಪೂರಕ ಕೆಲಸಗಳಾವುದನ್ನೂ ಮಾಡದೆ ನಿಷ್ಕ್ರಿಯನಾಗಿದ್ದಲ್ಲಿ ಅಥವಾ ಸ್ವಾರ್ಥಪೂರಿತ ದುಷ್ಕಾರ್ಯಗಳಲ್ಲಿ ತೊಡಗಿದಾಗ್ಯೆ ಯಾವುದೇ ಹಂತದಲ್ಲಿ ಕೂಡ ಆತನನ್ನು ಅಧಿಕಾರದಿಂದ ವಾಪಸು ಇಳಿಸುವ ಅವಕಾಶ ಮತದಾರರಿಗೆ ಇರಬೇಕು. ಇದರಿಂದ ಜನಪ್ರತಿನಿಧಿಯ ಸರ್ವಧಿಕಾರೀ ಮನೋಭಾವಕ್ಕೆ ಕಡಿವಾಣ ಬೀಳುವುದಲ್ಲದೆ, ಅಭಿವೃದ್ಧಿ ಕಾರ್ಯಗಳು ಅನಿವಾರ್ಯವಾಗಿಯಾದರೂ ನಡೆಯುವಂತಾಗುತ್ತದೆ.
ಇದಕ್ಕೂ ಮುನ್ನವೇ, ಮತದಾನದ ಹಂತದಲ್ಲೇ ಯಾರಿಗೂ ಮತ ನೀಡದ ಅವಕಾಶವನ್ನು ಮತದಾರರಿಗೆ ನೀಡಿರಬೇಕು. ಇದರಿಂದಾಗಿ, ಇರುವವರಲ್ಲಿ ಕಡಿಮೆ ಅಯೋಗ್ಯರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ನೀಗುವುದು ಮಾತ್ರವಲ್ಲ ಅದು ಪ್ರಜಾಪ್ರಭುತ್ವದ ನೈಜ ಒರೆಗಲ್ಲಾಗುತ್ತದೆ. ಅಷ್ಟೇ ಅಲ್ಲದೆ ಈಗಿರುವಂತೆ ಬಹುಮತವನ್ನು ಗಣಿಸದೆ, ಚಲಾವಣೆಯಾದ ಮತಗಳಲ್ಲಿ ಶೇಕಡಾ ೫೦ಕ್ಕೂ ಹೆಚ್ಚಿನ ಮತ ಗಳಿಸಿದ ಅಭ್ಯರ್ಥಿಯನ್ನು ಮಾತ್ರವೇ ವಿಜಯಿ ಎಂದು ಘೋಷಿಸಬೇಕು. ಒಂದು ವೇಳೆ ^ಯಾರಿಗೂ ಮತವಿಲ್ಲ^ ಎಂಬ ಆಯ್ಕೆಯೇ ಹೆಚ್ಚಾದರೆ, ಆ ಕ್ಷೇತ್ರದ ಎಲ್ಲಾ ಉಮೇದುವಾರರನ್ನೂ ಬದಲಿಸಿ ಮರುಚುನಾವಣೆ ನಡೆಸಬೇಕು. ^ಯಾರಿಗೂ ಮತವಿಲ್ಲ^ ಎಂಬ ಆಯ್ಕೆಯನ್ನು ನೀಡಿದಾಗ ಮತದಾನವನ್ನು ಕಡ್ಡಾಯಗೊಳಿಸಬಹುದಾದ ಉತ್ತಮ ಅವಕಾಶ ಸಿಗುತ್ತದೆ.
ಇವುಗಳ ಅನುಕೂಲಕ್ಕಾಗಿ ಗಲ್ಲಿಗೆ ನಾಲ್ಕರಂತಿರುವ ಪ್ರಾದೇಶಿಕ ವ್ಯಾಪ್ತಿಯ ಹುಲುಪಕ್ಷಗಳ ಮಾನ್ಯತೆಯನ್ನು ರದ್ದುಮಾಡಿ ದ್ವಿಪಕ್ಷೀಯ ಮಾದರಿಯನ್ನು ಅನುಷ್ಠಾನಕ್ಕೆ ತರಬೇಕು. ರಾಷ್ಟ್ರೀಯ ಹಿತಾಸಕ್ತಿಯ ಎದುರು ಪ್ರಾದೇಶಿಕ ಸಂಕುಚಿತತೆಗಳನ್ನು ದೂರಮಾಡಲೇಬೇಕಲ್ಲವೇ? ಹೀಗಾದಾಗ ಚುನಾವಣೆಯಲ್ಲಿ ಹಣದ ದುರ್ಬಳಕೆಯನ್ನು ತಡೆಗಟ್ಟಲು, ಅಭ್ಯರ್ಥಿಗಳ ಪ್ರಚಾರವನ್ನು ಸಾರ್ವಜನಿಕ ವೆಚ್ಚದಲ್ಲೇ ಮಾಡಬಹುದು. ಅಲ್ಲದೆ ಯಾವುದೇ ಪಕ್ಷಕ್ಕೂ ಶಾಶ್ವತವಾದ ಚಿಹ್ನೆಗಳನ್ನು ನೀಡಬಾರದು. ಪ್ರತಿ ಬಾರಿ ಹೊಸ ಚಿಹ್ನೆಯ ಮೇಲೆ ಪಕ್ಷಗಳು ಸ್ಪರ್ಧಿಸಬೇಕು.
ಇಷ್ಟೆಲ್ಲ ಸುಧಾರಣೆಗಳನ್ನು ತಂದಾಗ ಮಾತ್ರ ಪ್ರಜಾಪ್ರಭುತ್ವವು ಯಶಸ್ವಿಯಾಗಿ ಉಳಿದು ಬೆಳೆಯಲು ಸಾಧ್ಯ. ಆದರೆ ಇದುವರೆಗೂ ಅಧಿಕಾರದ ಸುಖವನ್ನು ಅನುಭವಿಸುತ್ತಾ ಬಂದಿರುವ ಅಯೋಗ್ಯ ರಾಜಕಾರಣಿಗಳು ಇಂತಹ ಸುಧಾರಣೆಗಳಿಗೆ ಬೆಂಬಲ ನಿಡುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಪ್ರಜ್ಞಾವಂತರು ಒಗ್ಗೂಡಿ, ಮೇಲ್ಕಂಡ ಅಂಶಗಳ ಅಥವಾ ಇನ್ನೂ ಸುಧಾರಿತ ರೂಪಗಳ ಬಗೆಗೆ ಚಿಂತಿಸಿ, ಅನುಷ್ಠಾನಕ್ಕೆ ಯತ್ನಿಸಬೇಕು.
ಇಲ್ಲದಿದ್ದರೆ, ಪ್ರಭುತಂತ್ರದಲ್ಲಿ ತೆರಿಗೆಯ ಹಣದಿಂದ ಒಬ್ಬ ರಾಜ ಮತ್ತು ಅವನ ಪರಿವಾರವನ್ನು ಮಾತ್ರ ಸಾಕುತ್ತಿದ್ದರೆ, ಪ್ರಜಾತಂತ್ರದ ಹೆಸರಿನಲ್ಲಿ ಸಾವಿರಾರು {೫೪೫ ಸಂಸದರು, ೨೪೫ ರಾಜ್ಯಸಭಾ ಸದಸ್ಯರು, ೨೮ ರಾಜ್ಯಪಾಲರು, ೪೨೮೨ ಶಾಸಕರು... ಇನ್ನೂ ಎಷ್ಟೋ ಜಿಲ್ಲಾ ತಾಲ್ಲೂಕು ಹಂತದ ಪುಂಡು ಪುಡಾರಿಗಳ} ಭ್ರಷ್ಟ ರಾಜಕಾರಣಿಗಳ ಪರಿವಾರಗಳನ್ನು ಸಾಕಬೇಕಾದ ಈ ದುಸ್ಸ್ಥಿಗೆ ಕೊನೆಯೇ ಇಲ್ಲವಾಗುತ್ತದೆ.
*****
೨೫-೧೨-೨೦೦೦ - ನಾಗರಿಕ, ಮೇಲುಕೋಟೆ. (ಜನಪದ ವಿಚಾರದಲ್ಲಿ ಪ್ರಕಟಿತ)
[ಟಿಪ್ಪಣಿ: ಹತ್ತು ವರ್ಷಗಳ ಹಿಂದಿನ ಲೇಖನದ ಅಭಿಪ್ರಾಯಗಳು ಇಂದಿಗೂ ಪ್ರಸ್ತುತವೆನಿಸಿರುವುದು ವೈಯಕ್ತಿಕವಾಗಿ ಹೆಮ್ಮೆ ಎನಿಸಿದರೂ, ಸಾಮಾಜಿಕವಾಗಿ ಎದೆಗುಂದಿಸುತ್ತಿದೆ. ಇದ್ದುದರಲ್ಲಿ ಸಮಾಧಾನದ ಸಂಗತಿ ಎಂದರೆ ಗುಜರಾತಿನಲ್ಲಿ ನರೇಂದ್ರ ಮೋದಿಯು ಪ್ರಾಯೋಗಿಕವಾಗಿ ^ಯಾರಿಗೂ ಮತ ನೀಡದ^ ಆಯ್ಕೆಯನ್ನು ಮತದಾರರಿಗೆ ಒದಗಿಸಿರುವುದು. ಭ್ರಷ್ಟತೆಯ ಸೋಂಕಿಲ್ಲದ ಓರ್ವನಾದರೂ ನಿಃಸ್ಪೃಹ ರಾಜಕಾರಣಿಯು ಅಲ್ಲಾದರೂ ಇರುವುದು ನಮ್ಮಂತಹವರಿಗೆ ಒಂದು ಅಶಾಕಿರಣ. ಗಾಂಧಿ, ಶಾಸ್ತ್ರಿ, ಪಟೇಲರ ನಂತರ ಸಜ್ಜನರು ಗೌರವಿಸಬಹುದಾದ ಏಕೈಕ ಜನನಾಯಕ/ರಾಜಕಾರಣಿಯಾಗಿ ನರೇಂದ್ರ ಮೋದಿ ಗೋಚರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮೋದಿಯ ಕಾಲ್ಧೂಳಿಗೆ ಸಮವಾದವರು ಕೂಡ ಕಾಣದೇ ಇರುವುದು ದುರದೃಷ್ಟಕರ. ತಂತ್ರಜ್ಞಾನವು ಬೆಳೆದಿರುವ ಈ ಹೊತ್ತಿನಲ್ಲಿ ಮೇಲಿನ ಸುಧಾರಣೆಗಳನ್ನು ತರುವುದು, ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕುವುದು ಕಷ್ಟವೇನಲ್ಲ. ಅಂತಹ ಸುಧಾರಣೆಗಳ ಸಾಕಾರಕ್ಕೆ ಕಂಕಣ ತೊಡುವ ನಿಃಸ್ಪೃಹರು ಬೇಕಾಗಿದ್ದಾರೆ.]
೩೦-೦೧-೨೦೧೧ ಹುತಾತ್ಮರ ದಿನ.
Comments
ಉ: ಪ್ರಜಾಪ್ರಭುತ್ವ ಹಾಗೂ ಮತದಾನ
ಉ: ಪ್ರಜಾಪ್ರಭುತ್ವ ಹಾಗೂ ಮತದಾನ