ಸ್ಥಾನ ಪತ್ತೆಗೆ ಹೊಸ ನ್ಯಾವ್‌ಸ್ಕೋಪ್
ಸ್ಥಾನ ಪತ್ತೆಗೆ ಹೊಸ ನ್ಯಾವ್‌ಸ್ಕೋಪ್
ಸ್ಥಾನಪತ್ತೆಗೆ ಜಿಪಿಎಸ್ ಎನ್ನುವ ಕೃತಕ ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಬಳಸುವುದು,ಸದ್ಯ ಚಾಲ್ತಿಯಲ್ಲಿದೆ.ಆದರೀಗ ಯುಕೆಯ ಬಿಎಇ ಸಿಸ್ಟಮ್ಸ್ ಎನ್ನುವ ಭದ್ರತಾ ವ್ಯವಸ್ಥೆ ಕಂಪೆನಿಯು ಹೊಸ ನ್ಯಾವಿಸ್ಕೋಪ್ ಎನ್ನುವ ಸ್ಥಾನಪತ್ತೆ ವ್ಯವಸ್ಥೆಯನ್ನು ಸಾಧಿಸಿದೆ.ಇದರಲ್ಲಿ ಕೃತಕ ಉಪಗ್ರಹಗಳ ಬದಲಿಗೆ,ಇಂಟರ್ನೆಟ್,ವೈ-ಫೈ,ಮೊಬೈಲ್ ಸಂಕೇತಗಳು,ಮೀಡಿಯಂ ವೇವ್ ತರಂಗಗಳು ಮುಂತಾದವುಗಳನ್ನು ಅವಲಂಬಿಸಲಾಗಿದೆ.ಹಾಗಾಗಿ,ಜಿಪಿಎಸ್ ವ್ಯವಸ್ಥೆಗಿಂತ ಇದು ಹೆಚ್ಚು ಯಶಸ್ವಿಯಾಗಬಲ್ಲುದು.ಕೃತಕ ಉಪಗ್ರಹದ ಸಂಕೇತಗಳು ಕಟ್ಟಡಗಳ ಒಳಗೆ ತಲುಪದೇ ಇರಬಹುದು.ಜಾಮರ್‌ಗಳನ್ನು ಆಳವಡಿಸಿ,ಜಿಪಿಎಸ್ ವ್ಯವಸ್ಥೆಯನ್ನು ವಿಫಲಗೊಳಿಸುವುದು ಸುಲಭ.ಆದರೆ,ಬಹು ತರಂಗಗಳನ್ನು ಬಳಸಿ ಕೆಲಸ ಮಾಡುವ ನ್ಯಾವಿಸ್ಕೋಪ್ ಅನ್ನು ಹಾಳುಗೆಡಹುವುದು ಸುಲಭವಲ್ಲ ಎನ್ನುವುದು ಇದರ ಧನಾತ್ಮಕ ಅಂಶ ಎಂದು ಬಿಎಇ ಕಂಪೆನಿ ಹೇಳಿಕೊಂದಿದೆ.ಸದ್ಯ ಇದರ ಸಾಧನ ಒಂದು ದೊಡ್ಡ ಪೆಟ್ಟಿಗೆಯಂತೆ ಕಾಣುತ್ತಿದ್ದರೂ,ಮುಂದೆ ಇದರ ಚಿಪ್ ತಯಾರಿಸಿದಾಗ,ಗಾತ್ರ ಅನೇಕ ಪಟ್ಟು ಇಳಿಸಬಹುದು.
--------------------------------
ಖಾಸಗಿ ಕಂಪೆನಿಗಳಿಗೆ ಪಿಎಸೆಲ್ವಿ ತಯಾರಿಕೆ ನೀಡಲು ಇಸ್ರೋ ರೆಡಿ
ಇಸ್ರೋವು ಪಿಎಸೆಲ್ವಿ ರಾಕೆಟನ್ನು ಸತತ ಇಪ್ಪತ್ತು ಬಾರಿ ಯಶಸ್ವಿಯಾಗಿ ಉಡಾಯಿಸಿದೆ.ರಾಕೆಟ್ ತಯಾರಿಕೆಯ ಶೇಕಡಾ ಎಂಭತ್ತು ಭಾಗ ಬಿಡಿಭಾಗಗಳು ಖಾಸಗಿ ಕಂಪೆನಿಗಳೇ ಇಸ್ರೋಗೆ ತಯಾರಿಸಿಕೊಡುತ್ತಿವೆ.ಪ್ರತಿ ಉಡಾವಣೆಗೆ ಕೋಟಿಗಟ್ಟಲೆ ವೆಚ್ಚ ಬರುತ್ತದೆ.ವರ್ಷಕ್ಕೆ ನಾಲ್ಕು ಉಡಾವಣೆಗಳನ್ನು ನಿಭಾಯಿಸಲಷ್ಟೇ ಇಸ್ರೋಗೆ ಸಾಧ್ಯ.ಇನ್ನು ಮುಂದಿನ ಮೂರು ವರ್ಷದ ಉಡಾವಣೆಗಳು ವಿವಿಧ ಉಪಗ್ರಹಗಳನ್ನು ಕಕ್ಷೆಯಲ್ಲಿಡಲು ಈಗಾಗಲೇ ಬುಕ್ ಆಗಿವೆ.ಖಾಸಗಿ ಕ್ಷೇತ್ರದವರು ಮುಂದೆ ಬಂದರಿನ್ನು ಪಿಎಸೆಲ್ವಿ ತಯಾರಿಕೆಯನ್ನು ಖಾಸಗಿಯವರಿಗೆ ನೀಡಲು ಇಸ್ರೋ ತಯಾರಿದೆ.ಸಂಪರ್ಕ ಉಪಗ್ರಹಗಳ ಟ್ರಾನ್ಸ್‌ಪೊಂಡರುಗಳಿಗೂ ಬಹು ಬೇಡಿಕೆಯಿದ್ದು,ಹೆಚ್ಚು ಸಂಪರ್ಕ ಉಪಗ್ರಹಗಳನ್ನು ತಯಾರಿಸಿದರೂ ಬೇಡಿಕೆ ಪೂರೈಸುವುದು ಕಠಿನವಾಗಲಿದೆ.ಅದನ್ನೂ ಖಾಸಗಿಯವರಿಗೆ ನೀಡಿ,ತಾನು ಮಂಗಳ-ಚಂದ್ರಯಾನದತ್ತ ಹೆಚ್ಚಿನ ಗಮನ ಹರಿಸಲು ಇಸ್ರೋ ಬಯಸಿದೆ.ಶ್ರೀಹರಿಕೋಟಾದ ಇನ್ನೂರೈವತ್ತು ಎಕರೆ ಪ್ರದೇಶದಲ್ಲಿ ಬಾಹ್ಯಾಕಾಶ ಉದ್ದಿಮೆಯನ್ನು ಬೆಳೆಸುವುದು ಇಸ್ರೋ ಯೋಜನೆಯಾಗಿದೆ.
-------------------------------------
ಮನಸ್ಸು ಓದಲು ಸ್ಕ್ಯಾನರ್
ಮಾತನಾಡಲು ಸಾಧ್ಯವಾಗದವರ ಆಲೋಚನೆಗಳನ್ನು ಅರಿಯಲು ಮಿದುಳಿನ ಎಂಆರ್‌ಐ ಸ್ಕ್ಯಾನ್ ತಂತ್ರ ರೂಪಿಸುವುದರಲ್ಲಿ ಸಂಶೋಧಕರಿಗೆ ಆರಂಭಿಕ ಯಶಸ್ಸು ಸಿಕ್ಕಿದೆ.ಇಂಗ್ಲೀಷಿನ ಅಕ್ಷರ ಮಾಲೆಯ ಅಕ್ಷರಗಳು ಮತ್ತು ಶಬ್ದಗಳ ನಡುವಣ ಅವಕಾಶ ಹೀಗೆ ಇಪ್ಪತೇಳು ಅಕ್ಷರಗಳನ್ನು ಯೋಚಿಸಿದಾಗ, ಮಿದುಳಿನ ರಕ್ತಪ್ರವಾಹದಲ್ಲಿ ಉಂಟಾಗುವ ಬದಲಾವಣೆಯನ್ನು ಎಂಆರ್‌ಐ ಮೂಲಕ ಗುರುತಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ಹೀಗಾಗಿ,ವ್ಯಕ್ತಿ ಯಾವುದರ ಬಗ್ಗೆ ಯೋಚಿಸುತ್ತಿದ್ದಾನೆ ಎನ್ನುವುದನ್ನು ಗುರುತಿಸಬಹುದು ಎನ್ನುವುದು ಅವರ ವಾದ.ಬ್ರಿಟಿಶ್ ನ್ಯುರೊಸಯನ್ಸ್ ಅಸೋಸಿಯೇಶನ್ ಈ ತಂತ್ರಜ್ಞಾನದ ಬಗ್ಗೆ ಬಹುವಾಗಿ ಭರವಸೆ ಹೊಂದಿದೆ.
---------------------------------
ಟ್ಯಾಬ್ಲೆಟ್ ಬಳಗಕ್ಕೆ ಗೂಗಲ್ ನಕ್ಸಸ್
ಆಪಲ್ ಕಂಪೆನಿಯ ಟ್ಯಾಬ್ಲೆಟ್ ಸಾಧನ ಬಿಡುಗಡೆಯಾಗಿ ಸಫಲವಾದ ನಂತರ ಹಲವು ಕಂಪೆನಿಗಳು ಟ್ಯಾಬ್ಲೆಟ್ ಸಾಧನವನ್ನು ಬಿಡುಗಡೆ ಮಾಡಿವೆ.ಗೂಗಲ್ ಕಂಪೆನಿಯ ನಕ್ಸಸ್ 7 ಇದಕ್ಕೆ ಹೊಸ ಸೇರ್ಪಡೆಯಾಗಿದೆ.ಕಳೆದವಾರದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ಸರ್ಫೇಸ್ ಟ್ಯಾಬ್ಲೆಟ್ ಬಿಡುಗಡೆಯಾಗಿತ್ತು.ಅಮೆಜಾನ್,ಮೈಕ್ರೋಸಾಫ್ಟ್,ಸ್ಯಾಮ್ಸಂಗ್,ಎಲ್ಜಿ ಹೀಗೆ ಈ ಪಟ್ಟಿ ಉದ್ದವಾಗಿದೆ.ಇನ್ನೂರು ಡಾಲರು ಬೆಲೆಪಟ್ಟಿ ಹೊಂದಿರುವ ನಕ್ಸಸ್,ಐನೂರು ಡಾಲರು ಬೆಲೆಯ ಆಪಲ್ ಐಪ್ಯಾಡ್‌ಗಿಂತ,ಅಮೇಜಾನ್ ಕಿಂಡ್ಲ್‌ಗೇ ಹೆಚ್ಚಿನ ಸ್ಪರ್ಧೆ ನೀಡುವುದು ನಿಶ್ಚಿತವಾಗಿದೆ.ಗೂಗಲ್‌ನ ಟ್ಯಾಬೆಟ್‌ನಲ್ಲಿ ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸಲಾಗಿದೆ ಎನ್ನುವುದು ಪ್ರತ್ಯೇಕವಾಗಿ ಹೇಳಬೇಕಿಲ್ಲ.ಇದರ ಯಂತ್ರಾಂಶವನ್ನು ಅಸುಸ್ ಕಂಪೆನಿ ತಯಾರಿಸಿದೆ.ಕೊಟ್ಟ ಬೆಲೆಗೆ ಪರವಾಗಿಲ್ಲ ಎಂದು,ನಕ್ಸಸ್‌ನ್ನು ಬಳಸಿದ ಆರಂಭಿಕ ಬಳಕೆದಾರರ ಅನಿಸಿಕೆಯಾದರೂ,ವಿರೋಧವಾಗಿ ಹೇಳಿದವರೂ ಇದ್ದಾರೆ.ಅವರ ಪ್ರಕಾರ,ನಕ್ಸಸ್ ಕೆಲವು ಸಮಸ್ಯೆಗಳನ್ನು ಹೊತ್ತೇ ಬಂದಿದೆ.ಅದು ಜಾಲಕ್ಕೆ ಸಂಪರ್ಕ ಹೊಂದದೇ ಕಾಡಿದ್ದೂ ಇದೆ.ಜತೆಗೆ,ಒಂದು ನಕ್ಸಸ್ ಅನ್ನು ಬಳಸಿಕೊಂಡು,ಇನ್ನೊಂದು,ಇನ್ನೊಂದು ನಕ್ಸಸ್ ಟ್ಯಾಬ್ಲೆಟ್‌ನಲ್ಲಿ ಅತಿಥಿಯಾಗಿ ಕಡತಗಳನ್ನು ಬಳಸಲು ಸಾಧ್ಯವಾಗಲಿಲ್ಲ,ಎಂದು ಟೀಕೆಗಳೂ ಇವೆ.ಹೆಚ್ಚಿನ ಸ್ಪಷ್ಟತೆ ಹೊಂದಿದ ತೆರೆ,ವಿಡಿಯೋವನ್ನು ಶರವೇಗದಲ್ಲಿ ತೋರಿಸುವ ಉತ್ತಮ ಗ್ರಾಫಿಕ್ಸ್ ಸಂಸ್ಕಾರಕದ ಬಗ್ಗೆ ಪ್ರಶಂಸೆಗಳು ಬಂದಿವೆ.ಏಳಿಂಚು ತೆರೆಯನ್ನಿದು ಹೊಂದಿದೆ.ಹಗುರವಾದರೂ ದೃಡ,ಉತ್ತಮ ವಿನ್ಯಾಸ,ಶಕ್ತಿಶಾಲಿ,ಉತ್ತಮ ಸಂಸ್ಕಾರಕವಿದರ ಪ್ಲಸ್ ಪಾಯಿಂಟ್.ನೂರರುವತ್ತು ಡಾಲರುಗಳಿಗೂ ಇದರ ಒಂದು ಕಡಿಮೆ ಶಕ್ತಿಯ ಮಾದರಿ ಲಭ್ಯವಾಗಿದೆ.
--------------------------------------------
ಸ್ಪ್ರೇ ಮಾಡಿ ಬ್ಯಾಟರಿ
ಪೈಂಟ್ ಸ್ಪ್ರೇ ಮಾಡಿದಂತೆ ಬ್ಯಾಟರಿಯನ್ನೂ ಸ್ಟೀಲ್,ಸಿರಾಮಿಕ್,ಗಾಜು ಅಥವಾ ಪ್ಲಾಸ್ಟಿಕ್ ಮೇಲ್ಮೈಗೆ ಸ್ಪ್ರೇ ಮಾಡುವ ಮೂಲಕ ತಯಾರಿಸಬಹುದು ಎಂದೀಗ ಸಾಧಿಸಲಾಗಿದೆ.ಅನೋಡ್,ಕ್ಯಾಥೋಡ್,ವಿದ್ಯುತ್ ಸಂಗ್ರಾಹಕ,ಈ ಮೂರು ಪದರಗಳನ್ನು ಪ್ರತ್ಯೇಕಿಸವಾಗಲು ಇನ್ನೆರಡು ಪದರಗಳು ಹೀಗೆ ಇದರಲ್ಲಿ ಐದು ಪದರಗಳಿರುತ್ತವೆ.ಇದರ ಸಂಶೋಧಕರು ರೈಸ್ ವಿಶ್ವವಿದ್ಯಾಲಯದವರು.ಲಿಥಿಯಮ್ ಅಯಾನು ಬ್ಯಾಟರಿಗಳಲ್ಲಿ ಬಳಸುವ ಸಾಮಗ್ರಿಗಳಲ್ಲದೆ ಇದರಲ್ಲಿ ಇಂಗಾಲದ ನ್ಯಾನೋಟ್ಯೂಬುಗಳನ್ನು ಬಳಸಲಾಗಿದೆ.ಮಡಚಲು ಸಾಧ್ಯವಾಗುವ ತೆಳು ಹಾಳೆಗಳ ಬ್ಯಾಟರಿಗಳೀಗಲೇ ಸಂಶೋಧನೆಯಾಗಿವೆ.
------------------------------------------------------------------------------------------
ಸಂಸ್ಕಾರಕಗಳೂ ಎರವಲಿಗಿವೆ!
ಗೂಗಲ್ ತನ್ನ ದೊಡ್ಡ ಡೇಟಾಸೆಂಟರುಗಳಲ್ಲಿ ಲಭ್ಯವಿರುವರುವ ಸಂಸ್ಕಾರಕಗಳನ್ನು ನೋಂದಾಯಿಸಿದ ಬಳಕೆದಾರರಿಗೆ ಲಭ್ಯವಾಗಿಸಲು ಮುಂದೆ ಬಂದಿದೆ.ಡೇಟಾಸೆಂಟರುಗಳ ಮೂಲಕ ಕ್ಲೌಡ್ ಸೇವೆಗಳನ್ನು ಒದಗಿಸುವವರು,ಅಗಾಧ ಯಂತ್ರಾಂಶಗಳನ್ನು ಹೊಂದಿರಬೇಕಾಗುತ್ತದೆ.ಇವುಗಳನ್ನು ಬೇಡಿಕೆ ಬಂದ ಒಡನೆಯೇ ಬಳಕೆದಾರರಿಗೆ ಲಭ್ಯವಾಗಿಸಿ,ಅವರ ಬೇಡಿಕೆಯನ್ನು ತಣಿಸಬೇಕಾಗುತ್ತದೆ.ಹೀಗೆ ಸಂಸ್ಕಾರಕಗಳೂ ಬಳಕೆಯಾಗದೆ ಇರುವಾಗ,ಅವನ್ನು ಎರವಲು ನೀಡಲೀಗ ಗೂಗಲ್ ಮುಂದೆ ಬಂದಿದೆ.ಅಧಿಕ ಗಣಕ ಶಕ್ತಿ ಬೇಕಾದವರು ಗೂಗಲ್‌ನ ಎರವಲು ಸೇವೆ ಪಡೆಯಬಹುದು.
----------------------------------------
ಕಾಡ್ಗಿಚ್ಚು ನಂದಿಸಲು ನೆರವಾಗುವ ತಂತ್ರಾಂಶ
ಈಗೀಗ ಸಮುದಾಯಗಳಿಗೆ ನೆರವಾಗಲು ಹೆಚ್ಚೆಚ್ಚು ತಂತ್ರಜ್ಞರು ಸಹಾಯಹಸ್ತ ನೀಡುತ್ತಿದ್ದಾರೆ.ಕೆಲವೊಮ್ಮೆ ಏಕಾಂಗಿಯಾಗಿ,ಹಲವು ಬಾರಿ,ಇತರರ ಜತೆ ಸಹಭಾಗಿತ್ವದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಇದನ್ನು ಸಾಧಿಸಲು ಅವರು ಪ್ರಯತ್ನಿಸುವುದಿದೆ,ಈಗ ಕೊಲೆರಡೋದ ತಂತ್ರಜ್ಞ ತನ್ನ ಪ್ರದೇಶದಲ್ಲಿ ಬಿದ್ದಿರುವ ಕಾಡ್ಗಿಚ್ಚಿನ ಬಗ್ಗೆ ಟ್ವಿಟರ್ ತಾಣದಲ್ಲಿ ಬರುವ ಸಂದೇಶಗಳು,ಅದಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವಿಡಿಯೋಗಳನ್ನು ಒಂದೆಡೆಯೇ ಒದಗಿಸುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಿದ್ದಾನೆ.ಆತನಿಗೆ ಸ್ನೇಹಿತನೋರ್ವನ ಸಹಾಯವೂ ಸಿಕ್ಕಿದೆ.ಹಾಗೆಂದು ಇದು ಮೊಬೈಲ್ ಅಪ್ಲಿಕೇಶನ್ ಅಲ್ಲ,ಬದಲಾಗಿ ಇದು ವೆಬ್ ಅಪ್ಲಿಕೇಶನ್ ಆಗಿದೆ.ರೋಬ್ಬಿ ಟ್ರೆಂಚಿನಿ ಎನ್ನುವ ಇಪ್ಪತ್ತರ ಹರೆಯದ ತಂತ್ರಜ್ಞನಿಗೆ ಇದನ್ನು ಸಾಧಿಸಲು ಒಂದೇ ದಿನ ಸಾಕಾಯಿತು.ಈ ಕಾಡ್ಗಿಚ್ಚಿಗೆ ಹದಿನೈದು ಸಾವಿರ ಎಕರೆ ಕಾಡು ಸುಡುತ್ತಿದೆ.ಈ ಕಾಡ್ಗಿಚ್ಚಿನ ಪ್ರದೇಶದಿಂದ ಈತ ಕೇವಲ ಐದು ಕಿಲೋಮೀಟರ್ ದೂರದಲ್ಲಿ ವಾಸವಾಗಿದ್ದಾನೆ.ಕಾಡ್ಗಿಚ್ಚು ನಿಯಂತ್ರಣದಲ್ಲಿ ನಿರತರಾದವರಿಗೆ ತನ್ನ ಅಪ್ಲಿಕೇಶನ್ ಹೆಚ್ಚಿನ ಮಾಹಿತಿ ದೊರಕಿ,ನಿಯಂತ್ರಣ ಸುಲಭವಾಗಬಹುದು ಎನ್ನುವುದೀತನ ಲೆಕ್ಕಾಚಾರ.
(ಉದಯವಾಣಿಯಲ್ಲಿ ಪ್ರಕಟವಾದ ಈ ಬರಹಗಳು http://ashok567.blogspot.comನಲ್ಲೂ ಲಭ್ಯವಿವೆ.)
UDAYAVANI
*ಅಶೋಕ್‌ಕುಮಾರ್ ಎ